Wednesday, 1st January 2025

DK Suresh: ತಮಿಳುನಾಡಿನಲ್ಲಿ ಚಾಟಿ ಏಟಿನ ಸಿನಿಮಾ ಬಂದಿದೆ, ಮುನಿರತ್ನ ಸಿನಿಮಾಗೆ ಆ್ಯಸಿಡ್ ಮೊಟ್ಟೆ ಎಂದು ಕರೆಯಬಹುದೇ? ಡಿ.ಕೆ.ಸುರೇಶ್‌ ವ್ಯಂಗ್ಯ

DK Suresh

ಬೆಂಗಳೂರು: ಆಸಿಡ್ ಮೊಟ್ಟೆ ದಾಳಿ ಪ್ರಕರಣ ಪೂರ್ವನಿಯೋಜಿತ. ಶಾಸಕ ಮುನಿರತ್ನ (MLA Muniratna) ಅಭಿನಯದ ‘ಆಸಿಡ್ ಮೊಟ್ಟೆ’ ಸಿನಿಮಾ 100 ದಿನ ಓಡಿಸಿ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ವಾಗ್ದಾಳಿ ನಡೆಸಿದರು. ಸದಾಶಿವನಗರ ನಿವಾಸದಲ್ಲಿ ಸುರೇಶ್ ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಡಿಯೋ ಪ್ರಕರಣ ಹಾಗೂ ಮಾಧ್ಯಮದ ವರದಿಗಳನ್ನು ನೋಡಿದಾಗ ಬಿಜೆಪಿ ಶಾಸಕರು, ನನ್ನ ಮೇಲೆ, ನನ್ನ ಸಹೋದರ ಹಾಗೂ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ ಹಾಗೂ ಅವರ ತಂದೆ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಈ ವಿಡಿಯೋ ಅತ್ಯುತ್ತಮವಾಗಿ ಮೂಡಿಬಂದಿದೆ. ಆಸಿಡ್ ದಾಳಿ ಎಂದ ಮೂರು ಸೆಕೆಂಡ್‌ನಲ್ಲಿ ಮೊಟ್ಟೆ ಎಸೆಯಲಾಗಿದೆ. ಕನ್ನಡ ಚಿತ್ರರಂಗದ ಅಧ್ಯಕ್ಷ, ನಿರ್ಮಾಪಕರು, ಚಿತ್ರಕಥೆ ತಿರುಚುವ ಕೆಲಸ ಮಾಡಿದ್ದ ಮುನಿರತ್ನ, ಈಗ ತಾವೇ ನಟನೆಗೂ ಇಳಿದಿದ್ದಾರೆ ಎಂದು ಈ ವಿಡಿಯೋ ನೋಡಿದ ಮೇಲೆ ನನಗೆ ತಿಳಿಯಿತು. ಅದಕ್ಕಾಗಿ ಒಳ್ಳೆ ಡ್ರಾಮಾ ಮಾಡಿ ಮಾಧ್ಯಮಗಳ ಕೈಗೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಮಾಧ್ಯಮಗಳು ಕೂಡ ಏನೂ ಸುದ್ದಿ ಇಲ್ಲ ಎಂದು ಇದನ್ನು ಚೆನ್ನಾಗಿ ಬಿತ್ತರಿಸಿದ್ದೀರಿ. ಅಭಿನಯ ಮಾಡಿದ ಅವರಿಗೂ ಅಭಿನಂದನೆ, ಅದನ್ನು ತೋರಿಸಿದ ನಿಮಗೂ ಅಭಿನಂದನೆಗಳು ಎಂದರು.

ಈ ಸುದ್ದಿಯನ್ನೂ ಓದಿ | SBI Recruitment 2025: ಪದವೀಧರರಿಗೆ ಗುಡ್‌ನ್ಯೂಸ್‌; SBIಯ 600 ಪ್ರೊಬೆಷನರಿ ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

ಈ ವಿಚಾರವಾಗಿ ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅವರು ಅನೇಕ ಸಿನಿಮಾ ಮಾಡಿದ್ದು, ಕೆಲವು ಡಬ್ಬಾ ಯಶಸ್ವಿಯಾದರೆ, ಮತ್ತೆ ಕೆಲವು ಯಶಸ್ವಿಯಾಗಿಲ್ಲ. ಹೀಗಾಗಿ ಹೊಸ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಮೊದಲು ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆ ಇದ್ದರೆ ನಂತರ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಎಲ್ಲವನ್ನು ಸಿಬಿಐ ತನಿಖೆಗೆ ನೀಡಲಿ

ಈ ಪ್ರಕರಣವನ್ನು ಸಿಬಿಐಗೆ ನೀಡಲಿ. ಅವರು ಗೃಹಮಂತ್ರಿಗೆ ಪತ್ರ ಬರೆದು ಎಸ್‌ಪಿಜಿ ಭದ್ರತೆಯನ್ನೇ ಪಡೆಯಲಿ. ಕಾರಣ ಅವರ ಬಳಿ ರಘು ಎಂಬ ಚಾಲಕ ಇದ್ದ. ಅವನು ಏನಾದ ಎಂದು ತಿಳಿಯಬೇಕಲ್ಲವೇ. ಉಳಿದ ವಿಚಾರಗಳನ್ನು ಮಾಧ್ಯಮಗಳೇ ತನಿಖೆ ಮಾಡಿ ಪ್ರಸಾರ ಮಾಡಿ. ಮತ್ತೊಬ್ಬ ಮಳ್ಳತಹಳ್ಳಿ ರಂಜಿತ್ ಎಂಬ ಹುಡುಗನ ಕೈ ಕಾಲು ಮುರಿದಿದ್ದಾರೆ. ಇಷ್ಟು ದಿನ ಅವರ ಖಾಸಗಿ ವಿಚಾರ ಮಾತನಾಡಬಾರದು ಎಂದು ಸುಮ್ಮನೆ ಇದ್ದೆ. ಈ ಪ್ರಕರಣಗಳನ್ನು ಸಿಬಿಐ ತನಿಖೆಯಾಗಲಿ ಎಂದು ಪತ್ರ ಬರೆಯಲಿ. ಅವರ ಹೈಕಮಾಂಡ್‌ಗೆ ಕೊಟ್ಟಿರುವ ವರದಿಯಲ್ಲಿ ಇದನ್ನು ಸೇರಿಸಲಿ ಎಂದರು.

ನಮ್ಮ ಹೆಸರು ಹೇಳಿದರೆ ಮಾತ್ರ ಅವರ ಸಿನಿಮಾ ನಡೆಯುವುದು

ನನ್ನನ್ನು ಸೋಲಿಸಿದರು ಎಂದು ಹೇಳುತ್ತಾರೆ. ನನ್ನನ್ನು ಸೋಲಿಸಿದವರು ಜನರೇ ಹೊರತು ಬಿಜೆಪಿ ನಾಯಕರಲ್ಲ ಎಂದು ಫಲಿತಾಂಶ ಬಂದ ದಿನವೇ ಹೇಳಿದ್ದೇನೆ. ಇವರ ಯೋಗ್ಯತೆಗೆ ನನ್ನ ಸೋಲಿಸಲು ಆಗುವುದಿಲ್ಲ. ಜನ ತೀರ್ಮಾನಿಸಿ ನನ್ನನ್ನು ಸೋಲಿಸಿದ್ದಾರೆ. ಅದನ್ನು ನಾನು ಒಪ್ಪಿದ್ದೇನೆ. ಇವರು ದೊಡ್ಡ ಸಾಧನೆ ಮಾಡಿರುವವರಂತೆ ನನ್ನ ಹೆಸರು ಹೇಳಿಕೊಂಡು ಇವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ನನ್ನ ಹಾಗೂ ನನ್ನ ಅಣ್ಣನ ಹೆಸರು ಹೇಳಿದರಷ್ಟೇ ಇವರ ಸಿನಿಮಾ ನಡೆಯುತ್ತದೆ ಎಂದು ಟೀಕಿಸಿದರು.

ಸುಟ್ಟು ಹೋಗಿದ್ದ ಮುನಿರತ್ನ ಕೂದಲು ವಾಪಸ್ ಬಂದಿದೆ

ಅವರನ್ನು ಪರೀಕ್ಷೆ ಮಾಡಿರುವ ದೊಡ್ಡ ಡಾಕ್ಟರ್, ಕೂದಲು ಸುಟ್ಟಿದೆ ಸಿ.ಟಿ ಸ್ಕ್ಯಾನ್ ಮಾಡಬೇಕು ಎಂದಿದ್ದಾರೆ. ಆದರೆ ನಿನ್ನೆ ಸಂಜೆ ಮತ್ತೊಂದು ವಿಡಿಯೋ ನೋಡಿದ್ದು, ಅದರಲ್ಲಿ ಮುನಿರತ್ನ ಅವರು ಸಿ.ಟಿ. ರವಿ ಅವರನ್ನು ಭೇಟಿ ಮಾಡಿ ಅವರ ಮನೆಯಿಂದ ಹೊರಗೆ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಮುನಿರತ್ನ ಅವರಿಗೆ ಸುಟ್ಟು ಹೋಗಿದ್ದ ಕೂದಲು ಮತ್ತೆ ವಾಪಸ್ ಬಂದಿವೆ. ಮುನಿರತ್ನ ತಲೆಗೆ ಟೋಪನ್ ಹಾಕಿದ್ದಾರೋ ಅಥವಾ ನಿಜವಾದ ಕೂದಲು ಇಟ್ಟುಕೊಂಡಿದ್ದಾರೋ ಎಂದು ಮಾಧ್ಯಮಗಳೇ ಪರೀಕ್ಷೆ ಮಾಡಬೇಕು. ದೊಡ್ಡ ಡಾಕ್ಟರ್ ಕೂದಲು ಸುಟ್ಟಿದೆ ಎಂದು ಹೇಳಿದ ಮೇಲೆ ನಾವು ನಂಬಲೇ ಬೇಕಲ್ಲವೇ ಎಂದರು.

ಸಿ.ಟಿ. ರವಿಗೆ ತಮ್ಮ ತಾಯಿ ನೆನಪಾಗಲಿಲ್ಲವೇ

ಮುನಿರತ್ನ ಒಕ್ಕಲಿಗರ ಹೆಣ್ಣು ಮಕ್ಕಳ ವಿಚಾರದಲ್ಲಿ ಹೇಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಒಕ್ಕಲಿಗ ಹಾಗೂ ದಲಿತ ಮಹಿಳೆಯರನ್ನು ಮಂಚಕ್ಕೆ ಕರೆದು ಅಪಮಾನ ಮಾಡಿದ್ದಾರೆ. ಆತನ ಅಸಭ್ಯ ವರ್ತನೆಯ ಆಡಿಯೋ ನಿಜ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ಸಾಬೀತಾಗಿದೆ. ಹೀಗಾಗಿ ಎಸ್‌ಐಟಿಯು ಎಫ್ಐಆರ್ ದಾಖಲಿಸಿದೆ. ಆತ ಹೇಗೆ ನೀಚವಾಗಿ ನಡೆದುಕೊಂಡಿದ್ದಾನೆ ಎಂಬುದನ್ನು ಮಾಧ್ಯಮಗಳು ಸರಿಯಾಗಿ ಜನರಿಗೆ ತೋರಿಸಬೇಕು. ಇಷ್ಟೆಲ್ಲಾ ಆದರೂ ರವಿ ಅವರು ಆತನ ಮನೆಗೆ ಹೋಗಿದ್ದಾರೆ. ಅವರು ತಮ್ಮ ತಾಯಿಯನ್ನು ಮರೆತು ಅವರ ಮನೆಗೆ ಹೋಗಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು.

ಪಾಪ, ಬಿಜೆಪಿಯವರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ

ಒಬ್ಬ ವಿಧಾನ ಪರಿಷತ್ತಿನಲ್ಲಿ ಮಹಿಳೆಗೆ ವೇ* ಎಂದು ಕರೆಯುತ್ತಾರೆ. ಮತ್ತೊಬ್ಬ ಸರ್ಕಾರದ ಆಡಳಿತ ನಡೆಸುವ ದೇವಾಲಯದಲ್ಲಿ ಮಹಿಳೆಯರ ಅತ್ಯಾಚಾರ ಮಾಡುತ್ತಾನೆ. ಬಿಜೆಪಿಯವರು ಇಂತಹವರನ್ನು ಒಪ್ಪಿಕೊಂಡು ಕೂತಿದ್ದಾರೆ. ಇಷ್ಟಾದರೂ ಪಾಪ, ಬಿಜೆಪಿಯವರು ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿದರು.

ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಬಾರದು ಎಂದು ನಿರ್ಧರಿಸಿದ್ದೆ. ಆದರೆ ಬಿಜೆಪಿ ಶಾಸಕರೆ ಈ ವಿಚಾರವಾಗಿ ನಾನು ಮಾತನಾಡುವಂತೆ ಉತ್ತೇಜನ ನೀಡಿದ್ದಾರೆ. ನಮ್ಮ ಬಗ್ಗೆ ನಿರ್ಧಾರ ಮಾಡಬೇಕಿರುವುದು ಜನರು. ನಿಮ್ಮ ವಿರುದ್ಧ ಏನೆಲ್ಲಾ ಹಗರಣಗಳಿವೆ ಎಂದು ಲೋಕಾಯುಕ್ತ ಸಂಸ್ಥೆ ತನಿಖೆಯಲ್ಲಿದೆ. ಮಾತೆತ್ತಿದರೆ ಡಿ.ಕೆ. ಶಿವಕುಮಾರ್, ಡಿ.ಕೆ ಸುರೇಶ್. ನಾನು ಎಂದೂ ಮುನಿರತ್ನ, ಕೊರಂಗು ಎಂದು ಹೇಳಿಲ್ಲ. ಕೊರಂಗು ನಿಮ್ಮ ಸಹೋದರ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ. ಕೊರಂಗು ಯಾರು? ಮಾಧ್ಯಮದ ಸ್ನೇಹಿತರು ಹೇಳಬೇಕಲ್ಲವೇ? ಕೊರಂಗು ಬಳಸಿಕೊಂಡು ಮುನಿರತ್ನ ಏನೆಲ್ಲಾ ಮಾಡಿದ್ದಾರೆ ಎಂದು ಮಾಧ್ಯಮಗಳು ಹೇಳಬೇಕಲ್ಲವೇ? ಎಂದರು.

ತಮಿಳುನಾಡಿನಲ್ಲಿ ಚಾಟಿ ಏಟಿನ ಸಿನಿಮಾ ಬಂದಿದೆ. ಮುನಿರತ್ನ ಸಿನಿಮಾಗೆ ಏನೆಂದು ಕರೆಯಬಹುದು? ಆ್ಯಸಿಡ್ ಮೊಟ್ಟೆ ಎಂದು ಕರೆಯಬಹುದೇ? ಮುನಿರತ್ನಗೆ ಒಳ್ಳೆಯ ಹೆಸರು ಸಲಹೆ ನೀಡಿ. ಅವರು ನಮ್ಮ ಜತೆ ಇದ್ದರೂ ನಾಲ್ಕೈದು ವರ್ಷಗಳಿಂದ ಬಿಜೆಪಿ ಸೇರಿದ್ದಾರೆ. ಅಲ್ಲಿಗೆ ಹೋಗಿ ಹೊಸ ಹೊಸ ಐಡಿಯಾ ಮಾಡುತ್ತಿದ್ದಾರೆ. ಮೊಟ್ಟೆಯೊಳಗೆ ಆಸಿಡ್ ಹೇಗೆ ಹಾಕಬಹುದು, ಕೂದಲು ಸುಟ್ಟಿದೆ ಎಂದು ಸಿ.ಟಿ ಸ್ಕ್ಯಾನ್ ಮಾಡೋದು, ಮರುದಿನ ಕೂದಲು ವಾಪಸ್ ಬರೋ ಐಡಿಯಾ ಬರುವುದು ಯಾರಿಗೆ? ಸಿನಿಮಾದವರಿಗೆ ಅಲ್ಲವೇ. ಗ್ರಾಫಿಕ್ಸ್ ಮಾಡೋದು ಅವರೇ ಅಲ್ಲವೇ? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Reliance Foundation: ಕರ್ನಾಟಕದ 590 ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನ

ಶೀಘ್ರದಲ್ಲೇ ಪೊಲೀಸ್ ಆಯುಕ್ತರಿಗೆ ದೂರು

ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರು ಬಳಸಿಕೊಂಡಿದ್ದಾರೆ ಎಂದು ಕೇಳಿದಾಗ, ʼನಾನು ಕೂಡ ನಾಲ್ಕೈದು ದಿನಗಳ ಹಿಂದೆ ಇದನ್ನು ಗಮನಿಸಿದೆ. ಯಾರೇ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೂ ತನಿಖೆ ಮಾಡಲಿ. ನಾನು ಇದನ್ನು ಪರಿಶೀಲಿಸಿ, ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಎರಡು ಮೂರು ದಿನಗಳಲ್ಲಿ ಪೊಲೀಸ್ ಆಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತೇನೆ. ಯಾರೇ ಈ ತಪ್ಪು ಮಾಡಿದ್ದರೂ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಅನ್ಯಾಯ ಆಗಿರುವವರಿಗೆ ನ್ಯಾಯ ಸಿಗಬೇಕುʼ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.