Wednesday, 1st January 2025

Crime News: ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪಾಪಿ ಪತಿ; ವೈರಲ್‌ ವಿಡಿಯೊ ಇಲ್ಲಿದೆ

Crime News

ಮುಂಬೈ: ಮೂರನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಗೆ ಪತಿಯೇ ಬೆಂಕಿ ಹಚ್ಚಿ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆರೋಪಿಯನ್ನು ಪರ್ಭಾನಿಯ 32 ವರ್ಷದ ಕುಂಡ್ಲಿಕ್‌ ಉತ್ತಮ್‌ ಕಾಳೆ ಎಂದು ಗುರುತಿಸಲಾಗಿದೆ. ಮುಂಬೈಯಿಂದ 520 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಗಂಗಾಖೇಡ್ ನಾಕಾದ ಮೈನಾ ಮೃತ ಸಂತ್ರಸ್ತೆ. ಡಿ. 26ರ ರಾತ್ರಿ ಪತ್ನಿಯ ಮೈಮೇಲೆ ಪೆಟ್ರೋಲ್‌ ಸುರಿದು ಕುಂಡ್ಲಿಕ್‌ ಉತ್ತಮ್‌ ಕಾಳೆ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ (Crime News).

ಸಂತ್ರಸ್ತೆಯ ಸಹೋದರಿ ಈ ಬಗ್ಗೆ ಮುಂಬೈ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ʼʼಮೈನಾ ಅವರಿಗೆ 3ನೇ ಬಾರಿ ಹೆಣ್ಣು ಮಗು ಜನಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದಆಕೆಯ ಪತಿ ಕುಂಡ್ಲಿಕ್‌ ಉತ್ತಮ್‌ ಕಾಳೆ ಪ್ರತಿದಿನ ಪತ್ನಿಯನ್ನು ನಿಂದಿಸುತ್ತಿದ್ದ. ಅಲ್ಲದೆ ಈ ವಿಚಾರದಲ್ಲಿ ಪ್ರತಿದಿನ ಜಗಳವಾಡುತ್ತಿದ್ದʼʼ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಜಗಳ ತಾರಕಕ್ಕೇರಿ ಆತ ಮೈನಾ ಅವರ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೈನಾ ಅಸುನೀಗಿದ್ದಾರೆ.

“ಗುರುವಾರ ರಾತ್ರಿ ಜಗಳವಾಡಿದ ನಂತರ ಆತ ಸಂತ್ರಸ್ತೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆಕೆ ಕಿರುಚುತ್ತಾ ಮನೆಯಿಂದ ಹೊರಗೆ ಓಡಿದ್ದಾಳೆ. ಅಲ್ಲಿ ನೆರೆದಿದ್ದವರು ಮೈಗೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಆಕೆಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆʼʼ ಎಂದು ಸಹೋದರಿ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಕಾಳೆಯನ್ನು ಗಂಗಾಖೇಡ್ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೆತ್ತಿಕೊಳ್ಳಲಾಗಿದೆ.

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ

ಕೆಲವು ದಿನಗಳ ಹಿಂದೆ ನಡೆದ ಇನ್ನೊಂದು ಆಘಾತಕಾರಿ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಸಹೋದರಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ. 8 ಮತ್ತು 9 ವರ್ಷ ವಯಸ್ಸಿನ ಬಾಲಕಿಯರು ಮೃತರು. ಆರೋಪಿಯನ್ನು ಪಶ್ಚಿಮ ಬಂಗಾಲ ಮೂಲದ ಅಜಯ್‌ ದಾಸ್‌ ಎಂದು ಗುರುತಿಸಲಾಗಿದೆ. ಆತ ರಾಜ್‌ಗುರುನಗರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದ.

ʼʼದಾಸ್‌ ಸಂತ್ರಸ್ತೆಯರ ಮನೆ ಪಕ್ಕದಲ್ಲಿ ವಾಸವಾಗಿದ್ದ. ಡಿ. 25ರಂದು ಸಹೋದರಿಯರು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ತೀವ್ರ ಹುಡುಕಾಟದ ಬಳಿಕ ಮನೆ ಪಕ್ಕದ ಟ್ಯಾಂಕ್‌ನಲ್ಲಿ ಸಹೋದರಿಯರ ಮೃತದೇಹ ಪತ್ತೆಯಾಗಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ʼʼದಾಸ್‌ ಮೊದಲಿಗೆ ಕಿರಿಯ ಸಹೋದರಿಯ ಮೇಲೆ ದೌರ್ಜನ್ಯ ಎಸಗಿದ್ದ. ಬಳಿಕ ಇದನ್ನು ಗಮನಿಸಿದ ಹಿರಿಯ ಸಹೋದರಿಯನ್ನೂ ಸೇರಿ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ರೈಲು ಹತ್ತಿ ಪರಾರಿಯಾಗಲು ಮುಂದಾಗಿದ್ದ ದಾಸ್‌ನನ್ನು ಪುಣೆಯ ಬಳಿ ಸೆರೆ ಹಿಡಿಯಲಾಗಿದೆ. ಆತನ ವಿರುದ್ಧ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣ ದಾಖಲಿಸಲಾಗಿದೆʼʼ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?