Friday, 13th December 2024

ಬಾಹ್ಯಾಕಾಶದ ಕುತೂಹಲಕಾರಿ ವಿದ್ಯಮಾನ ’ಮಹಾನ್ ಸಂಯೋಗ’

ಸಾಂದರ್ಭಿಕ

ಎಲ್‌.ಪಿ.ಕುಲಕರ್ಣಿ

ಬಾಹ್ಯಾಕಾಶ ಸಂಶೋಧಕರು ಹಾಗೂ ಹವ್ಯಾಸಿ ಆಕಾಶ ವೀಕ್ಷಕರಿಗೆ ಈ 2020ರ ಡಿಸೆಂಬರ್ ತಿಂಗಳಲ್ಲಿ ಒಂದು ಕುತೂಹಲಕಾರಿ ಸಂಗತಿ ಕಾದಿದೆ. ಅದೇ ಗುರು ಹಾಗೂ ಶನಿಗ್ರಹಗಳು ಹತ್ತಿರ ಬರುವ ಬಲು ಅಪರೂಪದ ವಿದ್ಯಮಾನ.

ಗುರು ಹಾಗೂ ಶನಿಗ್ರಹಗಳು ಇದೇ ಡಿ.16 ರಿಂದ 25ರ ವರೆಗೆ ಹತ್ತಿರ ಬರಲಿವೆ. ಡಿ.21ರಂದು ಅವೆರಡೂ ಅತೀ ಹತ್ತಿರಕ್ಕೆ
ಬಂದು ಒಂದೇ ನಕ್ಷತ್ರದಂತೆ ಪ್ರಕಾಶಮಾನವಾಗಿ ಪ್ರಜ್ವಲಿಸಲಿವೆ. ‘ದಿ ಗ್ರೇಟ್ ಕಂನ್ಜಂಕ್ಷನ್ (ಮಹಾನ್ ಸಂಯೋಗ)’ವೆಂದು ಈ ವಿದ್ಯಮಾನವನ್ನು ಖಗೋಳಶಾಸಜ್ಞರು ಕರೆಯುತ್ತಲಿದ್ದಾರೆ.

ಭೂಮಿಯು ಸೂರ್ಯನಿಗೆ ಹತ್ತಿರವಿರುವುದರಿಂದ ಅದನ್ನು ಒಂದು ಸುತ್ತುಹಾಕಲು 365 ದಿನ , 5 ಗಂಟೆ, 59 ನಿಮಿಷ ತೆಗೆದುಕೊಳ್ಳುತ್ತದೆ ಎಂಬ ಸಂಗತಿ ನಮಗೆಲ್ಲ ಗೊತ್ತು. ಮತ್ತೊಂದೆಡೆ ಗುರು ಹಾಗೂ ಶನಿಗಳು ಸೂರ್ಯನಿಂದ ಬಹುದೂರ  ದಲ್ಲಿರುವ ಗ್ರಹಗಳು. ಶ್ರವಣಾ ನಕ್ಷತ್ರದ ಸಮೀಪ ಫಳಫಳ ಎಂದು ಹೊಳೆಯುತ್ತಿರುವ ಎರಡು ಆಕಾಶ ಕಾಯಗಳನ್ನು ಕಾಣುತ್ತೇವೆ.

ಅವೇ ಈ ಗುರು ಹಾಗೂ ಶನಿ ಗ್ರಹಗಳು. ಸೂರ್ಯನನ್ನು ಒಂದು ಸುತ್ತು ಹಾಕಲು ಗುರು ಗ್ರಹವು 12 ವರ್ಷ ತೆಗೆದುಕೊಳ್ಳುವುದು.
ಅದೇ ರೀತಿ ಶನಿಗೆ 29.4 ವರ್ಷಗಳು ಬೇಕು. ಹೀಗಿರುವಾಗ ಇವೆರಡೂ ಗ್ರಹಗಳು ಒಂದೇ ನೇರಕ್ಕೆ ಕಾಣಬೇಕಾದರೆ ನಮಗೆ ಶತಮಾನಗಳೇ ಹಿಡಿಯುತ್ತದೆ. ಪ್ರಚಲಿತದಲ್ಲಿರುವ ಕೆಲವು ಸುದ್ದಿ ಮಾಧ್ಯಮಗಳು ಈ ವಿಶೇಷ ಘಟನೆ ಸುಮಾರು 800 ವರ್ಷಗಳ
ಹಿಂದೆ ಸಂಭವಿಸಿತ್ತು ಎಂದು ಪ್ರಚಾರ ಮಾಡುತ್ತಿವೆ.

ಆದರೆ ನಾಸಾದ ವಿಜ್ಞಾನಿಗಳ ಪ್ರಕಾರ 397 ವರ್ಷಗಳ ಹಿಂದೆ, ಅಂದರೆ 1623 ರಲ್ಲಿ ಗೆಲಿಲಿಯೋ ದೂರದರ್ಶಕದ ಮೂಲಕ ಈ ಮಹಾನ್ ಸಂಯೋಗ ವನ್ನು ವೀಕ್ಷಿಸಿದ್ದನಂತೆ. ಗುರು ಮತ್ತು ಶನಿ ಗ್ರಹಗಳ ಭೂಮಿಯ ಸಮೀಪಕ್ಕೆ ಒಂದರ ಹಿಂದೆ ಒಂದು ಬರುವುದರಿಂದ ದೊಡ್ಡ ನಕ್ಷತ್ರದಂತೆ ಹೊಳೆಯಲಿವೆ. ಡಿ.21ರಂದು ಸಾಯಂಕಾಲದಲ್ಲಿ ಪ್ರಜ್ವಲಿಸಲಿರುವ ಈ ವಿಶೇಷ
ವಿದ್ಯಮಾನವನ್ನು ವೀಕ್ಷಿಸುವುದು ಸುಲಭ. ಈ ವಿದ್ಯಮಾನವನ್ನು ನೋಡಲು ವಿಶೇಷ ಉಪಕರಣಗಳ ಅವಶ್ಯಕತೆ ಏನೂ ಇಲ್ಲ. ಎಚ್.ಡಿ (ಹೈಡೆಫಿನಿಷನ್) ಕ್ಯಾಮೆರಾ ಹೊಂದಿದ ಮೊಬೈಲ್‌ಗಳು ಇಲ್ಲವೇ ಡಿಎಸ್‌ಎಲ್‌ಆರ್ ಕ್ಯಾಮರಾ ಇದ್ದರೆ ಸಾಕು.

ನೋಡಲೂ ಬಹುದು ಜತೆಗೆ ಕ್ಯಾಮೆರಾದಲ್ಲಿ ಸೆರೆಹಿಡಿಯಲೂ ಬಹುದು ಎನ್ನುತ್ತಿದ್ದಾರೆ ನಾಸಾದ ವಿಜ್ಞಾನಿಗಳು. ಅಲ್ಲದೇ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಾಸಾದ ಅಧಿಕೃತ ಜಾಲತಾಣವಾದ https://go.nasa.gov/378b0VU ಗೆ ಒಮ್ಮೆ ಭೇಟಿಕೊಡ ಬಹುದು. ಕೇವಲ ಗುರು, ಶನಿ ಗ್ರಹಗಳ ಸಂಯೋಗದ ವೀಕ್ಷಣೆಯಷ್ಟೇ ಅ ಇನ್ನುಳಿದ ಕೆಲವು ಕುತೂಹಲಕರ ನಕ್ಷತ್ರ ಪುಂಜಗಳು ಹಾಗೂ ಮಂಗಳಗ್ರಹದ ವೀಕ್ಷಣೆಯನ್ನೂ ಸಹ ಈ ಡಿಸೆಂಬರ್ ತಿಂಗಳಿನಲ್ಲಿ ಮಾಡಬಹುದು ಎಂದು ಉಡುಪಿಯ ಖ್ಯಾತ ಖಗೋಳಶಾಸ್ತ್ರಜ್ಞರಾದ ಡಾ.ಎ.ಪಿ.ಭಟ್ ಅವರು ಬಹಳ ಸೊಗಸಾಗಿ ವಿವರಿಸುತ್ತಾ ಸಾಗುತ್ತಾರೆ.

ಅವರು ಹೇಳಿದ ಡಿಸೆಂಬರ್ ತಿಂಗಳಿನ ಕೆಲವು ಖಗೋಳ ಕೌತುಗಳನ್ನು ಒಮ್ಮೆ ನೊಡೋಣ: ಈ ಡಿಸೆಂಬರ್ ತಿಂಗಳ ರಾತ್ರಿ ಉತ್ತರ ದಿಕ್ಕಿಗೆ ಮುಖಮಾಡಿ ನಿಂತು ತಲೆ ಎತ್ತಿ ನೋಡಿದಾಗ, ನಾಲ್ಕು ನಕ್ಷತ್ರಗಳು ಸರಿಯಾಗಿ ಚೌಕಾಕಾರದಲ್ಲಿರುವಂತೆ ಕಾಣುತ್ತವೆ. ಇವನ್ನು ‘ನಕುಲ ಚೌಕ’ (ದಿ ಗ್ರೇಟ್ ಸ್ಕ್ವೇರ್ ಆಫ್ ಫೆಗಾಸಸ್) ಎಂದು ಕರೆಯಲಾಗುತ್ತದೆ. ಈ ಆಕೃತಿ ಡಿಸೆಂಬರ್ ತಿಂಗಳ ಸಂಜೆ ಸರಿಸುಮಾರು 7 ಗಂಟೆಗೆ ಪ್ರತಿನಿತ್ಯ ಕಾಣಸಿಗುತ್ತದೆ. ಈ ನಕುಲ ಚೌಕದ ಪಶ್ಚಿಮಕ್ಕೆ ವೀಕ್ಷಿಸಿದರೆ ‘ಸಮ್ಮರ್ ಟ್ರೈಂಗಲ್’ ಎಂಬ 3
ನಕ್ಷತ್ರಗಳ ಗುಂಪು ಕಾಣುತ್ತದೆ. ಆ ಗುಂಪಿನಲ್ಲಿ ಪಶ್ಚಿಮಕ್ಕೆ ಕಾಣುವ ಒಂದು ಪ್ರಖರ ನಕ್ಷತ್ರವೇ ‘ಶ್ರವಣಾ ನಕ್ಷತ್ರ’.

ಇದು ಭೂಮಿಯಿಂದ ಸುಮಾರು 16 ಜ್ಯೋತಿರ್ವರ್ಷದಷ್ಟು ದೂರದಲ್ಲಿದೆ. ಇದರ ಹತ್ತಿರ ಕಾಣುವ ಇನ್ನೊಂದು ನಕ್ಷತ್ರ ಪುಂಜ ವೆಂದರೆ ಅದು ‘ಗರುಡ ನಕ್ಷತ್ರ ಪುಂಜ’. ಇಲ್ಲಿಂದ ಉತ್ತರಕ್ಕೆ ‘ವೇಗಾ ನಕ್ಷತ್ರ’ (ಅಭಿಜಿತ್ ನಕ್ಷತ್ರ) ಕಾಣುತ್ತದೆ. ಇದರ ಸುತ್ತಲಿರುವ ನಕ್ಷತ್ರ ಪುಂಜವೇ ‘ಲೈರಾ ನಕ್ಷತ್ರ ಪುಂಜ’. ರಾತ್ರಿ ಸರಿಯಾಗಿ ಆಕಾಶದ ಸ್ಥಾನವನ್ನು ಗುರುತಿಸಲು ಈ ನಕ್ಷತ್ರ ಪುಂಜಗಳು
ಸಹಾಯಕವಾಗಿವೆ. ‘ವೇಗಾ’ ನಕ್ಷತ್ರ ಪುಂಜದ ಮೇಲೆ ಇನ್ನೊಂದು ನಕ್ಷತ್ರ ಕಾಣುತ್ತದೆ.

ಅದೇ ‘ಹಂಸಾಕ್ಷಿ (ಡೆನೆಬ್)’. ಈ ನಕ್ಷತ್ರದ ಸುತ್ತಲೂ ಇರುವ ನಕ್ಷತ್ರ ಪುಂಜಕ್ಕೆ ‘ರಾಜ ಹಂಸಾಕ್ಷಿ’ ಎನ್ನಲಾಗುತ್ತದೆ. ವೇಗ ನಕ್ಷತ್ರ ಪುಂಜವು 25 ಜೋತಿರ್ವರ್ಷದಷ್ಟು ದೂರದಲ್ಲಿದೆ. ಅದರಂತೆ ಈ ಹಂಸಾಕ್ಷಿ ಸುಮಾರು 1400 ಜೋ.ವ ದೂರದಲ್ಲಿದೆ. ಇಲ್ಲಿಂದ ಉತ್ತರಕ್ಕೆ 5 ನಕ್ಷತ್ರಗಳು,  ಇಂಗ್ಲೀಷ್ ವರ್ಣಮಾಲೆಯ M ಅಥವಾ W ಆಕಾರದಲ್ಲಿವೆ. ಇದನ್ನು ‘ಕ್ಯಾಸಿಯೋಪಿಯಾ’ ಅಥವಾ ‘ಕುಂತಿ’ ನಕ್ಷತ್ರ ಪುಂಜ ಎಂದು ಕರೆಯಲಾಗುತ್ತದೆ.

ಇಲ್ಲಿಂದ ಕೆಳಗೆ ನೇರವಾಗಿ ನೋಡಿದರೆ ‘ಪೋಲ್ ಸ್ಟಾರ್’ ಧ್ರುವ ನಕ್ಷತ್ರ ಕಾಣುತ್ತದೆ. ಈ ರೀತಿಯಾಗಿ ಕಾಣುವ ಎಲ್ಲ ನಕ್ಷತ್ರ ಪುಂಜಗಳು ಪ್ರತಿ ಗಂಟೆಗೆ ಬದಲಾಗುತ್ತಿರುತ್ತವೆ. ಆದರೆ ‘ಧ್ರುವ  ನಕ್ಷತ್ರ’ ಮಾತ್ರ ತಾನು ಇದ್ದ ಜಾಗದ ಇರುವಂತೆ ಕಾಣುತ್ತದೆ. ಈ ಧ್ರುವ ನಕ್ಷತ್ರ 433 ಜೋತಿರ್ವರ್ಷದಷ್ಟು ದೂರದಲ್ಲಿದೆ. ಅ ಹತ್ತಿರದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಧೂಳಿನಂಥ ಭಾಗ ಕಾಣುತ್ತದೆ. ಇದೇ ‘ಅಂಡ್ರೋಮೆಡಾ ಗೆಲಕ್ಸಿ’. ಇದು 25 ಲಕ್ಷ ಜೋತಿರ್ವರ್ಷದಷ್ಟು ದೂರದಲ್ಲಿದೆ.

ಅಂಡ್ರೊಮೆಡಾ ಗೆಲಾಕ್ಸಿಯಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಬರೊಬ್ಬರಿ 25 ಲಕ್ಷ ವರ್ಷಗಳು ಬೇಕು!
ಮೇಷರಾಶಿಯಲ್ಲಿ ‘ಹಮಲ್ ನಕ್ಷತ್ರ’ ಅಥವಾ ಅಶ್ವಿನಿ ನಕ್ಷತ್ರ ಕಾಣುತ್ತದೆ. ಅದೇ ರೀತಿ ಮೀನ ರಾಶಿಯಲ್ಲಿ ‘ರೇವತಿ ನಕ್ಷತ್ರ’ ಗೋಚರಿಸುತ್ತದೆ. ನಂತರ ‘ಅಲ್ಗೊಲ್ ನಕ್ಷತ್ರ’ ಇಲ್ಲವೆ ಚಂಚಲ ನಕ್ಷತ್ರ ದೊರೆಯುತ್ತದೆ. ಅದು ಪ್ರತಿ ಗಂಟೆಗೆ ಗ್ರಹಣ ಹಿಡಿದ ಹಾಗೆ ಮಸುಕಾಗಿ ಗೋಚರಿಸುವುದರಿಂದ ಅದನ್ನು ಚಂಚಲ ನಕ್ಷತ್ರ ಎಂದು ಕರೆಯಲಾಗುತ್ತದೆ. ಸಮೀಪದ ಮತ್ತೊಂದು ನಕ್ಷತ್ರ ಸಿಗುತ್ತದೆ. ಅದೇ ‘ಡೆಮನ್ ಸ್ಟಾರ್’ ಅಥವಾ ಸೈಂಧವ ನಕ್ಷತ್ರ. ಇದು ಸುಮಾರು 190 ಜೋತಿರ್ವರ್ಷದಷ್ಟು ದೂರದಲ್ಲಿದೆ.
ನಂತರ ಪೂರ್ವಕ್ಕೆ, ವೃಷಭ ರಾಶಿಯಲ್ಲಿ ಹಳದಿ ಛಾಯೆಯ ನಕ್ಷತ್ರ ಕಾಣುತ್ತದೆ.

ಅದೇ ‘ರೋಹಿಣಿ ನಕ್ಷತ್ರ’. ರೋಹಿಣಿ ನಕ್ಷತ್ರ 60 ಜೋತಿರ್ವರ್ಷದಷ್ಟು ದೂರದಲ್ಲಿದೆ. ಇನ್ನು ರಾತ್ರಿ ಆ ಕಪ್ಪು ಆಕಾಶದ
ದಕ್ಷಿಣದಲ್ಲಿ ಹಲವಾರು ನಕ್ಷತ್ರ ಪುಂಜಗಳು ಕಂಡು ಬಂದರೂ ಕೂಡ ಅವುಗಳಲ್ಲಿ ಅಷ್ಟೊಂದು ಹೊಳಪುಳ್ಳ ನಕ್ಷತ್ರಗಳು ಗೋಚರಿಸವು. ದಿಗಂತದಲ್ಲಿ 60 ಡಿಗ್ರಿ ಎತ್ತರದಲ್ಲಿ ‘ವೈತರಣಿ ಮುಖ’ (Achernar) ಎಂಬ ನಕ್ಷತ್ರ ಕಾಣುತ್ತದೆ. ಇದು ಸುಮಾರು 160 ಜೋತಿರ್ವರ್ಷ ದೂರದಲ್ಲಿದೆ.

ದಕ್ಷಿಣ – ಪಶ್ಚಿಮದ ಮಧ್ಯ ಆ ಕಪ್ಪು ಆಕಾಶದಲ್ಲಿ ‘ಮೀರ್ ನಕ್ಷತ್ರ’ (ಮೀರಾ ನಕ್ಷತ್ರ) ಕಾಣುತ್ತದೆ. ಈ ಮೀರಾ ನಕ್ಷತ್ರದ ಇಂಟೆನ್ಸಿಟಿ, ತೀವ್ರತೆ ನಿಖರವಾಗಿಲ್ಲ. ಇದು ರೆಡ್ ಜೈಂಟ್ (ಕೆಂಪು ದೈತ್ಯ) ಹಾಗೂ ವೈಟ್ ಡ್ವಾರ್ಫ್‌ನ ಸಮೂಹವಾಗಿದೆ. ಅಂದಹಾಗೆ ಈ ಮೀರಾ ನಕ್ಷತ್ರ ‘ತಿಮಿಂಗಲ ರಾಶಿ’ಯಲ್ಲಿದೆ. ಒಟ್ಟಾರೆ ದಕ್ಷಿಣದಲ್ಲಿ ಪ್ರಮುಖವಾಗಿ ಎರಡೇ ಎರಡು ನಕ್ಷತ್ರಗಳು ಸ್ಪಷ್ಟವಾಗಿ ಕಾಣುತ್ತವೆ.
ಒಂದು ‘ ವೈತರಣಿ ಮುಖ’ ಇನ್ನೊಂದು ‘ಮೀನಾಕ್ಷಿ ನಕ್ಷತ್ರ (Formalhaut). ಅಲ್ಲದೇ ಮೀನರಾಶಿಯಲ್ಲಿರುವ ‘ಮಂಗಳ ಗ್ರಹ’ವೂ ಸಹ ಇದೇ ಡಿಸೆಂಬರ್‌ನಲ್ಲಿ ಗೋಚರಿಸಲಿದೆ.

ಡಿಸೆಂಬರ್ – 22ರಂದು, ಗಂಟೆಗೆ ಸರಾಸರಿ 10 ಉಲ್ಕೆಗಳಂತೆ ಉಲ್ಕಾ ವೃಷ್ಟಿ ಅಥವಾ ಉಲ್ಕಾಪಾತ ಜರುಗಲಿದೆ. ವರ್ಷದ ಕಟ್ಟಕಡೆಯ ಈ ‘ಅರ್ಸಿಡ್ ಉಲ್ಕಾಪಾತ’ ವನ್ನು ವೀಕ್ಷಿಸಬಹುದು. ಗುರು, ಶನಿ ಗ್ರಹಗಳ ಸಂಯೋಗ, ವರ್ಷದ ಕಟ್ಟಕಡೆಯ ಉಲ್ಕಾಪಾತ ಈ ಎರಡೂ ವಿದ್ಯಮಾನ ಗಳು ಭಾರತದ ಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ರ ಹುಟ್ಟು ಹಬ್ಬವಾದ ಡಿ.22ರಂದೇ ಈ ವರ್ಷ ಸಂಭವಿಸುತ್ತಿರುವುದು ಒಂದು ವಿಶೇಷ.

ಗುರು ಮತ್ತು ಶನಿ ಗ್ರಹಗಳ ಭೂಮಿಯ ಸಮೀಪಕ್ಕೆ ಒಂದರ ಹಿಂದೆ ಒಂದು ಬರುವುದರಿಂದ ದೊಡ್ಡ ನಕ್ಷತ್ರದಂತೆ ಹೊಳೆಯ ಲಿವೆ. ಡಿ.21ರಂದು ಸಾಯಂಕಾಲದಲ್ಲಿ ಪ್ರಜ್ವಲಿಸಲಿರುವ ಈ ವಿಶೇಷ ವಿದ್ಯಮಾನವನ್ನು ವೀಕ್ಷಿಸುವುದು ಸುಲಭ. ಈ ವಿದ್ಯಮಾನವನ್ನು ನೋಡಲು ವಿಶೇಷ ಉಪಕರಣಗಳ ಅವಶ್ಯಕತೆ ಏನೂ ಇಲ್ಲ. ಎಚ್.ಡಿ (ಹೈಡೆಫಿನಿಷನ್) ಕ್ಯಾಮೆರಾ ಹೊಂದಿದ ಮೊಬೈಲ್‌ಗಳು ಇಲ್ಲವೇ ಡಿಎಸ್‌ಎಲ್‌ಆರ್ ಕ್ಯಾಮರಾ ಇದ್ದರೆ ಸಾಕು. ನೋಡಲೂ ಬಹುದು ಜತೆಗೆ ಕ್ಯಾಮೆರಾದಲ್ಲಿ ಸೆರೆಹಿಡಿಯ ಲೂಬಹುದು ಎನ್ನುತ್ತಿದ್ದಾರೆ ನಾಸಾದ ವಿಜ್ಞಾನಿಗಳು.