Wednesday, 11th December 2024

ಭೂಮಿಯ ಮೇಲೆ ಕೇವಲ 150 ಮನುಷ್ಯರಿದ್ದಿದ್ದರೆ ?

ಸಂಡೆಸಮಯ

ಸೌರಭರಾವ್‌, ಕವಯಿತ್ರಿ, ಬರಹಗಾರ್ತಿ

ಇದೇ ಅಂಕಣದಲ್ಲಿ ಈ ಮಾತುಗಳನ್ನು ಹೇಳಿದ್ದಿದೆ, ಆದರೂ ಮತ್ತೆ ಮತ್ತೆ ಹೇಳಲೇಬೇಕಿದೆ. ನಾವು ಮನುಷ್ಯರು ನಮ್ಮ ಲೋಕದ ಎಷ್ಟು ಮುಳುಗಿಬಿಟ್ಟಿರುತ್ತೇವೆಂದರೆ, ಭೂಮಿ ಇರುವುದೇ, ಭೂಮಿಯಿಂದ ಏನೇನು ಸಿಗುತ್ತದೋ ಅದೆಲ್ಲವೂ ಕೇವಲ ನಮಗಾಗಿ
ಮಾತ್ರ ಇದೆ ಎಂಬಂತೆ ಬದುಕುತ್ತಿರುತ್ತೇವೆ.

ನಮ್ಮದೇ ರಾಜಕೀಯ, ನಮ್ಮವೇ ಕೆಲಸಕ್ಕೆ ಬಾರದ ಭೇದ, ತಾರತಮ್ಯ, ಮನಸ್ತಾಪಗಳ ಸುಳಿಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಿಲುಕಿ ಏನೋ ಅದ್ಭುತ ಬದುಕು ಬದುಕುತ್ತಿದ್ದೇವೆ ಎಂದುಕೊಂಡಿರುತ್ತೇವೇನೋ. ಒಂದು ಜಾಗತಿಕ ಪಿಡುಗಾಗಿ ನಮ್ಮನ್ನು ಇನ್ನೂ ಕಾಡುತ್ತಿರುವ ಕೋವಿಡ್ ಕೂಡಾ ಕೇವಲ ಮತ್ತೊಂದು ಸಮಸ್ಯೆ, ಅದನ್ನು ಬಗೆಹರಿಸಿಬಿಟ್ಟರೆ ಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳಿಬಿಡುತ್ತದೆ ಎನ್ನುವಂತೆ ನಮ್ಮಲ್ಲಿ ಎಷ್ಟೋ ಜನ ಕಾಯುತ್ತಿದ್ದೇವೆ.

ಅದೆಷ್ಟು ವಿಜ್ಞಾನಿಗಳು, ದಶಕಗಳಿಂದ ಹವಾಮಾನ ವೈಪರೀತ್ಯ ಅಧ್ಯಯನ ನಡೆಸುತ್ತಿರುವ ಪರಿಣತರು, ವನ್ಯಜೀವಿ ಸಂರಕ್ಷಕರ ಮಾತುಗಳನ್ನು ಯಾರೋ, ಎಲ್ಲಾ ಯಾರಿಗೋ ಹೇಳುತ್ತಿರುವಂತೆ ಕೇಳುತ್ತಿರುತ್ತೇವೆ. ಮನುಷ್ಯರ ಆ ಹಕ್ಕು, ಈ ಹಕ್ಕು ಎಂದು ಭಾಷಣ ಬಿಗಿಯುತ್ತೇವೆ, ಆದರೆ ದಿನನಿತ್ಯ ಜೀವನದಲ್ಲಿ ನಾವು ಬದಲಾವಣೆಗಳನ್ನು ತಂದುಕೊಂಡು, ನಾವೂ ಪ್ರಾಣಿಗಳೇ, ನಮ್ಮಂತೆಯೇ ಬೇರೆ ಪ್ರಾಣಿಗಳಿಗೂ ಈ ಭೂಮಿಯ ಮೇಲೆ ಸ್ವಚ್ಛಂದವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕು ಇದೆ ಎಂದು
ಒಂದು ಸಂಭಾಷಣೆಗೆ ತೆರೆದುಕೊಳ್ಳುವ ತಾಳ್ಮೆಯಾದರೂ ಎಷ್ಟು ಜನಕ್ಕಿದೆ? ಇದರ ಆದ್ಯತೆ, ಅಗತ್ಯದ ತುರ್ತು ನಮ್ಮ ಅರಿವಿಗೆ ನಿಲುಕುವುದೆಂದು? ಇನ್ನೆಷ್ಟು, ಮತ್ತೆಷ್ಟು ಬೇರೆ ಪ್ರಾಣಿಗಳು ಅವನತಿ ಕಾಣಬೇಕು? ಹೀಗೆ ಅವನತಿಯ ಅಂಚಿನಲ್ಲಿ ನಿಂತಿರುವ ಅವೆಷ್ಟು ಜೀವಿಗಳಿವೆ.

ಅದರಲ್ಲಿ ಒಂದು ನಮ್ಮ ದೇಶ ದಲ್ಲಿಯೇ ಕಾಣಸಿಗುವ ಗ್ರೇಟ್ ಇಂಡಿಯನ್ ಬಸ್ಟರ್ಡ್. ರಾಜಸ್ಥಾನದ ರಾಜ್ಯಪಕ್ಷಿಯಾದರೂ, ಇದರ ಒಟ್ಟು ಸಂಖ್ಯೆ ಎಷ್ಟು ಗೊತ್ತಾ? ಸುಮಾರು 150. ಹೌದು, ನೂರೈವತ್ತು. ಭಾರತದ ಹುಲ್ಲುಗಾವಲುಗಳು ಅಪಾರ ಜೀವ ವೈವಿಧ್ಯತೆ ಯನ್ನು ಪೋಷಿಸುತ್ತವೆ. ಆದರೆ ದಶಕಗಳಿಂದ ಅರಣ್ಯ ಪರಿಸರ ವ್ಯವಸ್ಥೆಗಳ ಸಂರಕ್ಷಣೆಗೆ ಪ್ರಮುಖ ಆದ್ಯತೆ ನೀಡಲಾಗಿರುವು ದರಿಂದ, ಈ ಹುಲ್ಲುಗಾವಲುಗಳ ಮಹತ್ವದ ಪಾತ್ರವನ್ನು ಕಡೆಗಣಿಸಲಾಗಿದೆಯೆಂದೇ ಹೇಳಬಹುದು.

ವಾಸ್ತವವಾಗಿ, ಈ ಪ್ರದೇಶಗಳನ್ನು ಪಾಳುಭೂಮಿ ಎಂದೂ ಕರೆದುಬಿಡುವುದುಂಟು. ಇವುಗಳ ಸಂರಕ್ಷಣೆಗೆ ಬೇಕಾದ ಗಮನ ಸಿಗದೇ ಇರುವುದು, ಭೂಪ್ರದೇಶಗಳ ಬಳಕೆಯಲ್ಲಿ ಆಗಿರುವ ವ್ಯಾಪಕ ಬದಲಾವಣೆಗಳು ಮತ್ತು ಹವಾಮಾನ ವೈಪರೀತ್ಯಗಳ ಕಾರಣ, ಭಾರತದ ಹುಲ್ಲುಗಾವಲು ಪ್ರದೇಶಗಳು ತೀವ್ರಗತಿಯಲ್ಲಿ ಕಣ್ಮರೆಯಾಗುತ್ತಿವೆ. ಸದ್ಯಕ್ಕೆ ಉಳಿದಿರುವ ಕೆಲವು ಹುಲ್ಲು ಗಾವಲುಗಳೂ ಛಿದ್ರಗೊಂಡು ಅವುಗಳಲ್ಲಿ ಅನೇಕ ಪ್ರದೇಶಗಳು ಹೀನಾಯ ಸ್ಥಿತಿಯಲ್ಲಿವೆ.

ಇದರಿಂದ ಹುಲ್ಲುಗಾವಲುಗಳ ಮೇಲೆ ಪೂರ್ತಿಯಾಗಿ ಅವಲಂಬಿಸಿರುವ ಬೇರೆ ಪ್ರಾಣಿಗಳ ಜತೆಜತೆಗೇ ಮನುಷ್ಯ ಸಮುದಾಯ ಗಳೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಕಣ್ಮರೆಯಾಗುತ್ತಿರುವ ಭಾರತದ ಹುಲ್ಲುಗಾವಲುಗಳ ಜೀವಿಗಳಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಒಂದು ಬೆರಗುಗೊಳಿಸುವ ಹಕ್ಕಿ. ಆದರೆ ಇಂದು ಪ್ರಪಂಚದಲ್ಲಿ ಅವನತಿಯ ಅಂಚಿನಲ್ಲಿರುವ ಹಕ್ಕಿಗಳಲ್ಲಿ ಇದೂ ಒಂದು. ಬೇಟೆ, ಆವಾಸಸ್ಥಾನದ ನಷ್ಟ ಮತ್ತು ಮನುಷ್ಯರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಈ ಹಕ್ಕಿಯ ಉಳಿವಿಗೆ ಮಾರಕವಾಗಿರುವ ಪ್ರಮುಖ ಕಾರಣಗಳು.

ರಾಜಸ್ಥಾನದ ಥಾರ್ ಮರುಭೂಮಿ ಪ್ರದೇಶದಲ್ಲಿ ವೈಲ್ಡ ಲೈಫ್‌ ಕಾನ್ಸರ್ವೇಷನ್ ಸೊಸೈಟಿ – ಇಂಡಿಯಾ (ಡಬ್ಲ್ಯೂಸಿಎಸ್ – ಇಂಡಿಯಾ), ಭಾರತ ಸರಕಾರದ ಸಹಯೋಗದಲ್ಲಿ ಈ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಈ ಹಕ್ಕಿಯಿರುವ ಅತ್ಯಂತ ಪ್ರಮುಖ ಪ್ರದೇಶಗಳಾದ ಜೈಸಲ್ಮೇರ್‌ನಲ್ಲಿರುವ ಡೆಸರ್ಟ್ ನ್ಯಾಷನಲ್ ಪಾರ್ಕ್ ಮತ್ತು ಪೋಖ್ರಾನ್ ಪ್ರದೇಶಗಳಲ್ಲಿ ಬಸ್ಟರ್ಡ್ ಸಂರಕ್ಷಣೆಯ ಕೆಲಸ ನಡೆಯುತ್ತಿದೆ.

ಈ ಸಂರಕ್ಷಣಾ ಕೆಲಸದ ಮುಖ್ಯವಾದ ಅಂಶಗಳಲ್ಲಿ ಒಂದು, ಬಸ್ಟರ್ಡ್ ಮತ್ತು ಅದರ ಆವಾಸಸ್ಥಾನದ ರಕ್ಷಣೆಗೆ ಸ್ಥಳೀಯ ಸಮುದಾಯಗಳಿಂದಲೇ, ಸುತ್ತಮುತ್ತಲ ಹಳ್ಳಿಗಳ ಜನ ಮತ್ತು ನಾಯಕರಿಂದಲೇ ಬೇಕಿರುವ ಮಹತ್ವದ ಬೆಂಬಲ ಪಡೆಯುವುದು. ಈ ಸ್ಥಳೀಯ ಸಮುದಾಯಗಳಲ್ಲದೇ ಡಬ್ಲ್ಯೂಸಿಎಸ್ – ಇಂಡಿಯಾ, ಇತರ ಸ್ಥಳೀಯ ಎನ್‌ಜಿಒಗಳು, ರಾಜಸ್ಥಾನ ಅರಣ್ಯ ಇಲಾಖೆ, ಮತ್ತು ಪಶುಸಂಗೋಪನೆ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳಂಥ ಸರಕಾರಿ ಇಲಾಖೆಗಳ ಜತೆ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣೆಗೆ, ಅದನ್ನು ಅವನತಿಯ ಅಂಚಿನಿಂದ ಉಳಿಸುವತ್ತ ಕೆಲಸ ಮಾಡಲು ಕೈಜೋಡಿಸಿದೆ.

ಈ ಪ್ರದೇಶದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯ ಅತ್ಯಂತ ಪ್ರಮುಖ ಆವಾಸಸ್ಥಾನಗಳಲ್ಲಿ ಹೈ – ಟೆನ್ಷನ್ ವಿದ್ಯುತ್ ಪ್ರಸರಣ ತಂತಿಗಳಿಂದ ಈ ಹಕ್ಕಿಗೆ ಉಂಟಾಗುತ್ತಿರುವ ಬಹುದೊಡ್ಡ ತೊಂದರೆಯನ್ನು ತಡೆಗಟ್ಟುವುದು ಸದ್ಯಕ್ಕೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ (PFFR) ಬಳಿಯ ವಿದ್ಯುತ್ ಪ್ರಸರಣ ತಂತಿಗಳಿರುವ ಅತ್ಯಂತ ಆಯಕಟ್ಟಿನ ವಿಸ್ತಾರಗಳಲ್ಲಿ ಬಸ್ಟರ್ಡ್ ಸಂರಕ್ಷಣೆಗೆ ‘ಫೈರ್ ಫ್ಲೈ ಬರ್ಡ್ ಡೈವರ್ಟರ್’ಗಳನ್ನು ಅಳವಡಿಸುವ ಯೋಜನೆಗೆ ರಾಜಸ್ಥಾನ ರಾಜ್ಯಸರಕಾರಕ್ಕೆ ಡಬ್ಲ್ಯೂಸಿಎಸ್ – ಇಂಡಿಯಾ ಬೆಂಬಲ ನೀಡುತ್ತಿದೆ.

ಜತೆಗೇ, ಡೆಸರ್ಟ್ ನ್ಯಾಷನಲ್ ಪಾರ್ಕ್ ಮತ್ತು ಪೋಖ್ರಾನ್ ಸಂರಕ್ಷಿತ ಪ್ರದೇಶಗಳ ಒಳಗೆ ಈ ಹಕ್ಕಿಗಳ ಸಂರಕ್ಷಣೆ ಮತ್ತಷ್ಟು ಪರಿಣಾಮಕಾರಿಯಾಗಿ, ಅವುಗಳ ಮೇಲ್ವಿಚಾರಣೆ ನಡೆಸಲು ಕೂಡಾ ಈ ಸಂರಕ್ಷಣಾ ಸಂಸ್ಥೆ ರಾಜಸ್ಥಾನ ಅರಣ್ಯ ಇಲಾಖೆಯ ಜತೆ
ಕೈಜೋಡಿಸಿದೆ. ಹೈ – ಟೆನ್ಷನ್ ವಿದ್ಯುತ್ ಪ್ರಸರಣ ತಂತಿಗಳಿಂದಲೇ ಬಸ್ಟರ್ಡ್ ಸಂಖ್ಯೆಯ ಸುಮಾರು ಶೇ.15ರಷ್ಟು ಹಕ್ಕಿಗಳು ಅಕಾಲಿಕ ಮರಣವನ್ನಪ್ಪುತ್ತಿದ್ದುದರ ಬಗ್ಗೆ 2019ರಲ್ಲಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲನಲ್ಲಿ ಪ್ರಕಟವಾದ ವರದಿಯೊಂದರಲ್ಲಿ (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಮಂತ್ರಾಲಯ) MoEFCC ವರದಿ ಮಾಡಿತ್ತು.

ಡಬ್ಲ್ಯೂಸಿಎಸ್ – ಇಂಡಿಯಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣಾ ತಂಡದವರಾದ ಅನಿಲ್ ಕುಮಾರ್ ಅವರು ಹೇಳುತ್ತಾರೆ: ಫೈರ್ ಫ್ಲೈ ಡೈವರ್ಟರ್‌ಗಳನ್ನು ವಿದ್ಯುತ್ ಪ್ರಸರಣ ತಂತಿಗಳ ಮೇಲೆ ಪಟ್ಟಿಗಳಂತೆ ಅಳವಡಿಸಲಾಗುತ್ತದೆ. ಬಸ್ಟರ್ಡ್ ಸೇರಿದಂತೆ ಅನೇಕ ಹಕ್ಕಿಗಳಿಗೆ ಇವು ಕನ್ನಡಿಯಂತೆ ಹೊಳೆಯುತ್ತದೆ. ಹಕ್ಕಿಗಳು ಸುಮಾರು 50 ಮೀಟರ್ ದೂರದಿಂದಲೇ ಇವು ಗಳನ್ನು ನೋಡಿ ಈ ಹೈಫೈ ಟೆನ್ಷನ್ ತಂತಿಗಳ ಸಂಪರ್ಕಕ್ಕೆ ಬರದಂತೆ ತಮ್ಮ ಹಾರುವ ದಿಕ್ಕನ್ನು ಬದಲಾಯಿಸಿಕೊಳ್ಳುತ್ತವೆ.
ಸಣ್ಣ ಹಕ್ಕಿಗಳೇನೋ ಈ ತಂತಿಗಳ ಹತ್ತಿರ ಬಂದ ನಂತರವೂ ತಮ್ಮ ಹಾರುವ ದಿಕ್ಕನ್ನು ಬದಲಿಸಿಕೊಳ್ಳಬಹುದು.

ಆದರೆ ಬಸ್ಟರ್ಡ್‌ನಂಥಾ ದೊಡ್ಡ ಹಕ್ಕಿಗಳು ತಮ್ಮ ದೇಹದ ಭಾರ ಮತ್ತು ಇತರ ಕಾರಣಗಳಿಂದ ಅಷ್ಟು ಸುಲಭವಾಗಿ ಹಾರುವ ದಿಕ್ಕು ಬದಲಿಸಲು ಸಾಧ್ಯವಿಲ್ಲ. ಹಾಗಾಗಿ ಈ ಡೈವರ್ಟರ್‌ಗಳು ಬಹಳ ಸರಳವಾಗಿ, ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಬಸ್ಟರ್ಡ್ ಆವಾಸಸ್ಥಾನಗಳಲ್ಲಿ ವಿದ್ಯುತ್ ಪ್ರಸರಣ ತಂತಿಗಳನ್ನು ನೆಲದಡಿ ಹಾಕಬೇಕೆಂದು ಇತ್ತೀಚಿಗೆ ಭಾರತದ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿತ್ತು. ಪರಿಣತರ ಪ್ರಕಾರ ಅಲ್ಲಿಯವರೆಗೆ ಈ ಫೈರ್ ಫ್ಲೈ ಡೈವರ್ಟರ್‌ಗಳು ಬಸ್ಟರ್ಡ್ ಸಂರಕ್ಷಣೆಗೆ ಒಳ್ಳೆಯ ಪರ್ಯಾಯ ಮಾರ್ಗವಾಗಿದೆ.

ಬಸ್ಟರ್ಡ್ ಸಂರಕ್ಷಣೆಗೆ ಸ್ಥಳೀಯ ಸಮುದಾಯಗಳೂ ಬೆಂಬಲ ನೀಡುತ್ತಿರುವುದನ್ನು ಡಬ್ಲ್ಯೂಸಿಎಸ್ – ಇಂಡಿಯಾ ತನ್ನ ಲೇಖನ ಗಳ ಮೂಲಕ ಈಗಾಗಲೇ ತೋರಿಸಿಕೊಟ್ಟಿದೆ. ಕೇವಲ 150ರಷ್ಟಿರುವ ಈ ಸುಂದರ ಹಕ್ಕಿಯ ಸಂಖ್ಯೆ ಇನ್ನು ಮುಂದೆ ಹೆಚ್ಚಲಿ ಮತ್ತು ಅವನತಿಯ ಅಂಚಿನಿಂದ ದೂರವಿರಲಿ ಎಂದು ಆಶಿಸೋಣ. ನಾವೂ ಯಾವುದಾದರೂ ಸಂರಕ್ಷಣಾ ಸಂಸ್ಥೆಗಳ ಜತೆ ಯಾವ ರೀತಿಯದರೂ ಕೈಜೋಡಿಸಬಹುದಾ ನೋಡೋಣ. ಏಕೆಂದರೆ ಅವಕಾಶ ಗಳಿಗೇನೂ ಕಮ್ಮಿ ಇಲ್ಲ.