Wednesday, 11th December 2024

ಪ್ರಾಯೋಜಿತ ಬಂದ್‌ಗಳು ಬಂದ್ ಆಗುವುದು ಯಾವಾಗ ?

ಅವಲೋಕನ

ಚಂದ್ರಶೇಖರ ಬೇರಿಕೆ

ಬಂದ್, ಮುಷ್ಕರ, ಮುತ್ತಿಗೆ, ಹರತಾಳ, ಸತ್ಯಾಗ್ರಹ, ಚಳುವಳಿ, ಆಂದೋಲನ ಇವುಗಳು ಭಾರತದಲ್ಲಿ ಬಹಳ ಚಿರಪರಿಚಿತ ಪದಗಳು.

ಇವುಗಳು ಸರಕಾರದ ತಪ್ಪುಗಳನ್ನು ಅಥವಾ ಜನತೆಯ ಹಿತಾಸಕ್ತಿ, ಇಚ್ಛೆಗೆ ವಿರುದ್ಧವಾದ ನಿರ್ಧಾರಗಳನ್ನು, ಸಮಾಜದ
ಮೇಲೆ ದುಷ್ಪರಿಣಾಮ ಬೀರಬಹುದಾದ ಇನ್ನಿತರ ಬೆಳವಣಿಗೆಗಳನ್ನು ತಡೆಯಲು ಮತ್ತು ವಿರೋಧಿಸಲು ಹಾಗೂ ಸರ್ಕಾರ ಅಥವಾ ಅಽಕಾರ ಕೇಂದ್ರದ ಗಮನ ಸೆಳೆಯಲು ಇರುವ ವಿವಿಧ ರೂಪದ ಪ್ರತಿಭಟನೆಗಳು.

ಇವುಗಳ ಪೈಕಿ ಜನಸಾಮಾನ್ಯರನ್ನು ಅತಿ ಜಿಗುಪ್ಸೆಗೊಳಿಸಿದ ಪದ ಎಂದರೆ ಬಂದ್. ನಮ್ಮ ವ್ಯವಸ್ಥೆಯಲ್ಲಿ ಸ್ವಯಂಪ್ರೇರಿತ ಬಂದ್‌ಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಹಾಗೆಯೇ ಶಾಂತಿಯುತ ಪ್ರತಿಭಟನೆಗೆ ಸಾಂವಿಧಾನಿಕ ರಕ್ಷಣೆಯೂ ಇದೆ. ಜನರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಇತರ ಮಾರ್ಗೋಪಾಯಗಳೂ ಲಭ್ಯವಿದ್ದು, ಬಂದ್‌ನಂತಹ ಪ್ರತಿಭಟನೆಗಳು
ಅಂತಿಮ ಹಂತದ ಹೋರಾಟವಷ್ಟೇ. ಆದರೆ ಜನರು ತಮ್ಮ ಸಮಸ್ಯೆಗಳನ್ನು ಎತ್ತಿ ತೋರಿಸಲು ಕೇವಲ ಬಂದ್‌ಗಳನ್ನು
ಮಾತ್ರ ಒಂದು ಮೂಲ ವಿಧಾನವನ್ನಾಗಿ, ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಈ ಪ್ರತಿಭಟನೆ ಹೆಸರಿನಲ್ಲಿ ಬಲವಂತದ ಮುಚ್ಚುವಿಕೆ, ಗೂಂಡಾಗಿರಿ, ಆಸ್ತಿಪಾಸ್ತಿಗೆ ಬೆಂಕಿಯಿಡುವುದು, ಕಲ್ಲು ತೂರಾಟ, ರಸ್ತೆ ತಡೆ, ರೈಲು ತಡೆ, ವಿಮಾನಯಾನಕ್ಕೆ ತಡೆ ಒಡ್ಡುವುದು, ಪರ ವಿರೋಧ ಘರ್ಷಣೆಗಳು ಜತೆಯಲ್ಲಿ ಕಳ್ಳತನಗಳೂ ನಡೆಯುತ್ತವೆ.
ದೇಶದ ಯಾವುದೇ ಮೂಲೆಯಲ್ಲಿ ಬಂದ್, ಮುಷ್ಕರದಂತಹ ಪ್ರತಿಭಟನೆಗಳು ನಡೆದರೂ ಅವುಗಳ ಪೈಕಿ ಬಹುತೇಕ
ಪ್ರತಿಭಟನೆಗಳು ದೇಶದ ಅಥವಾ ಆಯಾ ರಾಜ್ಯದ ಪ್ರತಿಪಕ್ಷಗಳ ಅಥವಾ ಆಡಳಿತ ಪಕ್ಷಗಳ ವಿರೋಧಿ ಕೂಟಗಳ ಪಿತೂರಿ ಅಥವಾ ಪ್ರಾಯೋಜಿಸಲ್ಪಟ್ಟವುಗಳೇ ಆಗಿರುತ್ತವೆ.

ಭಾರತದ ನಿಧಾನ ಗತಿಯ ಅಭಿವೃದ್ಧಿಗೆ, ರಾಷ್ಟ್ರೀಯ ಗುರಿಗಳನ್ನು ಸಾಧಿಸುವಲ್ಲಿನ ವಿಫಲತೆಗೆ ಪ್ರಮುಖ ಕಾರಣ ಅನಪೇಕ್ಷಿತ ಬಂದ್‌ಗಳು ಎಂಬುದು ಸ್ಪಷ್ಟ. ಬಂದ್‌ಗಳಿಂದ ಬಾಧಕಗಳೇ ಜಾಸ್ತಿಯಾಗಿದ್ದು, ಅವೈಜ್ಞಾನಿಕ ಬಂದ್‌ನಂತಹ ಪ್ರತಿಭಟನೆಗಳು ಜನಸಾಮಾನ್ಯರಿಗೆ ಮತ್ತು ಭಾರತದ ಅರ್ಥವ್ಯವಸ್ಥೆಗೆ ಅಗಾಧ ತೊಂದರೆ ಉಂಟು ಮಾಡುತ್ತಿದೆ. ಭಾರತದಲ್ಲಿ ರಾಷ್ಟ್ರವ್ಯಾಪಿ ಶಾಂತಿಯುತ ಬಂದ್‌ಗಳಿಂದ ಉಂಟಾಗುವ ನಷ್ಟದ ಲೆಕ್ಕ ಸಾವಿರಾರು ಕೋಟಿಗಳು.

ಅಂತಹ ಬಂದ್‌ಗಳು ಹಿಂಸಾತ್ಮಕ ರೂಪ ಪಡೆದುಕೊಂಡರೆ ಅದರ ದುಷ್ಪರಿಣಾಮ ಇನ್ನೂ ಭೀಕರ. ಭಾರತ ಬಂದ್ ಎಂದರೆ
ಇಡೀ ದೇಶವನ್ನು ಉಪವಾಸ ಕೂರಿಸಿದಂತೆ. ದೇಶದ ಆರ್ಥಿಕ ಚಟುವಟಿಕೆಗಳನ್ನು ತಡೆ ಹಿಡಿಯುವುದೆಂದರೆ ದೇಹದಲ್ಲಿನ
ರಕ್ತ ಪರಿಚಲನೆಯನ್ನು ತಡೆದಂತೆ. ಪ್ರತಿಭಟನೆಗಳು ಹೆಚ್ಚಿನವರಿಗೆ ತಮ್ಮ ನಾಯಕತ್ವವನ್ನು ನಿರೂಪಿಸುವ ಒಂದು ವೇದಿಕೆಯಾಗಿ ಮಾರ್ಪಟ್ಟಿದ್ದು, ಇಂತಹ ಬಂದ್‌ಗಳ ಕುರಿತಾಗಿ ಸದ್ಗುರು ಜಗ್ಗಿ ವಾಸುದೇವ್ ಅವರ ವಿಶ್ಲೇಷಣೆ ಹೀಗಿದೆ.

‘ಈ ದೇಶದಲ್ಲಿ ಎಲ್ಲರಿಗೂ ಎಲ್ಲವೂ ಬೇಕು, ಆದರೆ ಅದಕ್ಕೆ ತಕ್ಕಂತೆ ಪೂರಕ ಯೋಜನೆಗಳು ಬೇಡ. ನೀರು ಬೇಕು ಆದರೆ ಅಣೆಕಟ್ಟು ಗಳು ಬೇಡ, ವಿದ್ಯುತ್ ಬೇಕು ಆದರೆ ಉಷ್ಣ ವಿದ್ಯುತ್ ಯೋಜನೆಗಳು ಬೇಡ. ಅದೇ ರೀತಿ ಈ ದೇಶದಲ್ಲಿ ಯಾವುದೇ ಬಗೆಯ ನಾಯಕರಾಗಲು ದೊಡ್ಡ ಶ್ರಮದ ಅವಶ್ಯಕತೆಯೂ ಇಲ್ಲ. ಬದಲಾಗಿ ನೂರಾರು ಜನರನ್ನು ಒಟ್ಟುಗೂಡಿಸಿ ಹೆದ್ದಾರಿ ಗಳನ್ನು ತಡೆದು ಸಾರ್ವಜನಿಕರ ಜೀವನವನ್ನು ಶೋಚಣೀಯವಾಗಿಸಿದರೆ ನಾಯಕನಾಗಿ ಹೊರ ಹೊಮ್ಮಬಹುದು.

ಇದು ನಮ್ಮ ದೇಶದ ದೌರ್ಭಾಗ್ಯ’. ಈಗಿನ ಸಂಘಟನೆಗಳ ಪೈಕಿ ಕೆಲವುಗಳು ರಾಜಕೀಯ ಕೃಪಾಪೋಷಿತ ನಾಟಕ ಮಂಡಳಿ ಗಳಾಗಿದ್ದು, ಒಂದೊಂದು ರಾಜಕೀಯ ಪಕ್ಷಗಳ ಅಧೀನದಲ್ಲಿ ಹತ್ತಾರು ಸಂಘಟನೆಗಳು. ಒಂದು ನಿರ್ದಿಷ್ಟ ಸಾರ್ವಜನಿಕ ಉದ್ದೇಶ ವಿಲ್ಲದ ಸಂಘಟನೆಗಳು ವಿಚಾರ ಶೂನ್ಯತೆಯಿಂದ ಬಳಲುತ್ತಿದ್ದು, ಅಂತಹ ಸಂಘಟನೆಗಳು ರಾಜಕೀಯ ಪಕ್ಷದ ನಿರ್ದೇಶನದಂತೆ
ಕುಣಿಯುತ್ತಿವೆ. ಕೆಲವು ವ್ಯಕ್ತಿಗಳು ತಮ್ಮ ವ್ಯಕ್ತಿಗತ ಅಭ್ಯುದಯವನ್ನು ಸಾಧಿಸಲು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವುದು ರಹಸ್ಯವಾಗೇನೂ ಉಳಿದಿಲ್ಲ.

ಸಾರ್ವಜನಿಕ ಹಿತಾಸಕ್ತಿ ಎಂಬ ವಿಷಯಗಳಿಗಿಂತಲೂ ರಹಸ್ಯ ಅಜೆಂಡಾದ ಕಾರ್ಯಸೂಚಿಗಳು ಆದ್ಯತೆಯಾಗಿದ್ದು, ಇಂತಹ ನಕಲಿ ಹೋರಾಟಗಾರರ ಹಾವಳಿಯಿಂದ ನೈಜ ಹೋರಾಟಗಾರರಿಗೆ ಹಿನ್ನಡೆಯಾಗಿರುವುದಂತು ನಿಜ. ರಾಜಕೀಯ ಪಕ್ಷಗಳು
ಇಂತಹ ಸಂಘಟನೆಗಳನ್ನು ತಮ್ಮ ಅನುಕೂಲಕ್ಕೆ, ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದು, ಪ್ರತಿಭಟನೆ ನೆಪದಲ್ಲಿ ಮುಗ್ಧ
ನಾಗರೀಕರನ್ನು ದುರುಪಯೋಗಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಇತಿಹಾಸದಲ್ಲಿ ಅದೆಷ್ಟೋ ಚಳುವಳಿಗಳು, ಮುಷ್ಕರಗಳು, ಬಂದ್‌ಗಳೂ ನಡೆದಿವೆ ಮತ್ತು ಅವುಗಳೆಲ್ಲವೂ ಸದುದ್ದೇಶ, ಸ್ಪಷ್ಟ ನಿಲುವುಗಳು ಮತ್ತು ಗುರಿಗಳನ್ನು ಹೊಂದಿತ್ತು. ಅವುಗಳು ಹೊಂದಿದ್ದ ಮೌಲ್ಯಗಳಿಂದ ಇಂದಿಗೂ ಗೌರವಗಳನ್ನು  ಉಳಿಸಿ ಕೊಂಡು ಸ್ಮರಣೀಯವಾಗಿದೆ. ಈಗಿನ ಕೆಲವು ಪ್ರತಿಭಟನೆಗಳಿಗೆ ಯಾವ ಮೌಲ್ಯವೂ ಇಲ್ಲ, ಸ್ಪಷ್ಟ ಗುರಿಯೂ ಇಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ರೈತರನ್ನು, ಕಾರ್ಮಿಕರನ್ನು ಎತ್ತಿ ಕಟ್ಟುವ ನಿರಂತರ ಪ್ರಯತ್ನ ನಡೆಯುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆಗುವ ನಷ್ಟದ ಬಗ್ಗೆ ಯಾರೂ ಗಂಭೀರವಾಗಿ ಚಿಂತಿಸುತ್ತಿಲ್ಲ.

ನಾಡು ನುಡಿ ರಕ್ಷಣೆಗಾಗಿ ನಡೆಯುತ್ತಿದ್ದ ಪ್ರತಿಭಟನೆಗಳು, ಚಳುವಳಿಗಳು ಈಗ ಅಂತಹ ಸದುದ್ದೇಶಗಳನ್ನು ಪೂರ್ಣ ಪ್ರಮಾಣ ದಲ್ಲಿ ಮೈಗೂಡಿಸಿಕೊಂಡಿಲ್ಲ. ಒಮ್ಮನಸ್ಸಿನ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳಿಂದ ಒಡೆದು ಹತ್ತಾರು ಸಂಘಟನೆಗಳಾಗಿ ರೂಪುಗೊಂಡಿದ್ದು, ಸಂಘಟನೆಗಳವರೇ ಪರಸ್ಪರರನ್ನು ಟೀಕಿಸಿ ಕಚ್ಚಾಡಿಕೊಳ್ಳುತ್ತಿರುವಷ್ಟರ ಮಟ್ಟಿಗೆ ತನ್ನ ಮೌಲ್ಯಗಳನ್ನು ಕಳೆದುಕೊಂಡಿವೆ.

ಇಂತಹ ಸಂಘಟನೆಗಳ ಪ್ರತಿಭಟನೆಗಳ ಸರಣಿಯಿಂದ ಈಗ ಯಾವುದೇ ಸದುದ್ದೇಶದ ಪ್ರತಿಭಟನೆಗಳನ್ನು ಅನುಮಾನದಿಂದ ನೋಡುವಂತಹ ಸನ್ನಿವೇಶ ಸೃಷ್ಟಿಯಾಗಿರುವುದು ವಿಪರ್ಯಾಸ. ದೇಶದಲ್ಲಿ ಅತಿ ಹೆಚ್ಚು ಪ್ರತಿಭಟನೆಗಳನ್ನು ಕಂಡ ಪ್ರದೇಶ ವಿದ್ದರೆ ಅದು ಕಾಶ್ಮೀರ. ಸದ್ಯ ಅಲ್ಲಿಯ ಜನರಿಗೆ ಇವುಗಳಿಂದ ತಕ್ಕ ಮಟ್ಟಿಗೆ ಮುಕ್ತಿ ಸಿಕ್ಕಿದೆ ಎಂಬುದು  ಗಮನಾರ್ಹ. ಬಂದ್ ಮತ್ತು ಪ್ರತಿಭಟನೆಗಳನ್ನು ಅತಿಯಾಗಿ ದುರ್ಬಳಕೆ ಮಾಡಿಕೊಂಡಿರುವವರು ಎಂದರೆ ಭಾರತದ ಕಮ್ಯುನಿಷ್ಟರು.

ಕಮ್ಯುನಿಷ್ಟರ ಚಿಂತನೆಗಳು, ವಿಚಾರಧಾರೆಗಳು ಏನಿದ್ದರೂ ಚೀನಾ ರೂಪಿತವಾಗಿದ್ದು, ಕಮ್ಯುನಿಷ್ಟರ ನಿಷ್ಠೆ ಯಾವತ್ತೂ ಭಾರತಕ್ಕಿಂತಲೂ ಚೀನಾ ಪರ ಎಂಬುದು ಇತಿಹಾಸ ನಿರೂಪಿತ. ಆ ರಾಷ್ಟ್ರದ ನಿರ್ದೇಶನದಂತೆ ಇಲ್ಲಿನ ಕಮ್ಯುನಿಷ್ಟರು ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಭಾರತದ ಒಳಗಿನ ವ್ಯವಸ್ಥೆಯನ್ನು ಹಾಳು ಮಾಡಲು ಚೀನಾ ಎಲ್ಲಾ ರೀತಿಯಲ್ಲೂ ಪ್ರಯತ್ನಿಸು ತ್ತಿದೆ.

ಅದಕ್ಕಾಗಿ ತನ್ನ ಗುಪ್ತಚರರನ್ನು ಭಾರತದೊಳಗೆ ಕಳುಹಿಸಿರುವ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ನಡೆದ ತೈವಾನ್
ಮೂಲದ ವಿಸ್ಟ್ರಾನ್ ಕಾರ್ಖಾನೆಯಲ್ಲಿನ ದಾಂಧಲೆ ಪ್ರಕರಣದಲ್ಲೂ ಕಮ್ಯುನಿಷ್ಟರ ಪಾತ್ರ ತಳುಕು ಹಾಕಿಕೊಂಡಿದೆ. ವಿಸ್ಟ್ರಾನ್ ವಿರುದ್ಧದ ದಾಂಧಲೆ ಪ್ರಕರಣದಲ್ಲಿ ಬಂಧಿತರೆಲ್ಲರನ್ನೂ ಬಿಡುಗಡೆಗೊಳಿಸಬೇಕು ಎಂಬುದು ಕಮ್ಯುನಿಷ್ಟ್ ಕಾರ್ಮಿಕ ಸಂಘದ ಒತ್ತಾಯ. ಚೀನಾದೊಂದಿಗೆ ತೈವಾನ್ ತನ್ನ ಗಡಿಯನ್ನು ಹಂಚಿಕೊಂಡಿದ್ದು, ತೈವಾನ್ ಮತ್ತು ಚೀನಾದ ಮಧ್ಯೆ ಘರ್ಷಣೆ ನಡೆಯುತ್ತಲೇ ಇದೆ.

ತೈವಾನ್ ಅನ್ನು ತನ್ನ ಸ್ವಾಯತ್ತೆಗೆ ತೆಗೆದುಕೊಳ್ಳಬೇಕು ಮತ್ತು ತೈವಾನ್ ತನ್ನ ದೇಶದ ಭಾಗವಾಗಿರಬೇಕು ಎಂಬುದು ಚೀನಾದ
ಬಯಕೆ. ಹೀಗಾಗಿ ತೈವಾನ್ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವುದು ಚೀನಾಕ್ಕೆ ಅಪಥ್ಯ. ಇದರಿಂದ ವಿಸ್ಟ್ರಾನ್ ಘಟನೆಗೂ ಚೀನಾಕ್ಕೂ ನೇರ ಸಂಬಂಧ ಇದೆ ಎನ್ನುವುದು ಖಾತ್ರಿಯಾಗುತ್ತಿದ್ದು, ಇಂತಹ ಕೃತ್ಯಕ್ಕಾಗಿ ಚೀನಾ ಭಾರತದಲ್ಲಿ ಕೆಲವರನ್ನು ಬಳಸಿಕೊಳ್ಳುತ್ತಿದೆ ಮತ್ತು ಇದರಲ್ಲಿ ಕಮ್ಯುನಿಷ್ಟರ ಪಾತ್ರ ದೊಡ್ಡದು.

ಚೀನಾ ತನ್ನ ಕಮ್ಯುನಿಷ್ಟ್ ಸಿದ್ಧಾಂತಗಳನ್ನು ಮಾರ್ಪಾಡು ಮಾಡಿಕೊಂಡು ಮೂಲ ಸಿದ್ಧಾಂತಗಳನ್ನು ಬದಿಗೆ ಸರಿಸಿ ಆರ್ಥಿಕತೆ ಯಲ್ಲಿ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುತ್ತಿದೆ. ಅದೇ ಚೀನಾ ದೇಶ ಭಾರತ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸುವುದನ್ನು ತಡೆಯಲು ಇಲ್ಲಿನ ಕಮ್ಯುನಿಷ್ಟರು ಮೂಲ ಸಿದ್ಧಾಂತದಲ್ಲೇ ಉಳಿದುಕೊಳ್ಳಲು ಪ್ರೇರೇಪಿಸುತ್ತದೆ. ಇದು ಚೀನಾ ತನ್ನ ರಹಸ್ಯ ಕಾರ್ಯಸೂಚಿಯನ್ನು ನಮ್ಮ ದೇಶದ ಕಮ್ಯುನಿಷ್ಟರ ಮೂಲಕ ಹೇರುವ ವ್ಯವಸ್ಥಿತ ಯೋಜನೆಯಾಗಿದ್ದು, ಭಾರತದ ಕಮ್ಯುನಿಷ್ಟರು ಇನ್ನೂ ಹಳೆಯ ಸಿದ್ಧಾಂತಗಳಿಗೆ ಜೋತು ಬಿದ್ದಿದ್ದಾರೆ.

ಹೀಗಾಗಿ ಕಮ್ಯುನಿಷ್ಟರ ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ನಾವು ಹಿಂದಕ್ಕೆ ಹೋಗಬೇಕಾಗುವುದು ಸ್ಪಷ್ಟ. ಕೇಂದ್ರ ಸರಕಾರ
ಇತ್ತೀಚೆಗೆ ಜಾರಿ ಮಾಡಿರುವ ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಕೆಲವು ಕಮ್ಯುನಿಷ್ಟ್ ರಾಜಕಾರಣಿಗಳು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಭಾರತ್ ತೇರೇ ತುಕ್ಡೆ ಹೋಂಗೆ ಎಂಬ ತುಕ್ಡೆ ಗ್ಯಾಂಗ್‌ನ ಸೃಷ್ಟಿಕರ್ತರೂ, ಪೋಷಕರೂ ಇವರೇ ಆಗಿದ್ದಾರೆ. ಭಾರತದ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳು ನಡೆಯುತ್ತಲೇ ಇದೆ.

ಕೇಂದ್ರ ಸರಕಾರ ಮತ್ತು ರೈತ ಸಂಘಟನೆಗಳ ಮಧ್ಯೆ ನಡೆದ ಇಲ್ಲಿವರೆಗಿನ ಎಲ್ಲಾ ಮಾತುಕತೆಗಳು ವಿಫಲವಾಗಿದ್ದು, ಕೇಂದ್ರ ಸರಕಾರ ಸದರಿ ಕಾನೂನುಗಳಲ್ಲಿ ಮಾರ್ಪಾಡಿಗೆ ಒಪ್ಪಿದರೂ ರೈತ ಸಂಘಟನೆಗಳು ಅದಕ್ಕೆ ಒಪ್ಪುತ್ತಿಲ್ಲ. ಬೇಡಿಕೆ ಒಂದೇ ಅದು ಸದರಿ ಕಾಯಿದೆಯನ್ನು ವಾಪಸ್ ಪಡೆದುಕೊಳ್ಳಬೇಕೆಂಬುದೇ ಆಗಿದೆ. ರೈತ ಪ್ರತಿಭಟನೆಯಲ್ಲಿ ತೊಡಗಿಕೊಂಡವರ ಬೇಡಿಕೆಗಳ ಪೈಕಿ ಯಾವುದೋ ಅಪರಾಧ ಪ್ರಕರಣಗಳಿಗಾಗಿ ಕಾನೂನಿನಲ್ಲಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವವರನ್ನು ಬಿಡುಗಡೆ ಮಾಡ ಬೇಕೆನ್ನುವುದೂ ಸೇರಿದೆ.

ಕರ್ನಾಟಕ ರಾಜ್ಯ ಸರಕಾರದ ಮರಾಠ ಅಭಿವೃದ್ಧಿ ನಿಗಮದ ಸ್ಥಾಪನೆ ನಿರ್ಧಾರದ ವಿರುದ್ಧ ಕನ್ನಡ ಮತ್ತು ಇತರೆ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಸಂದರ್ಭ ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ವಿವಿಧ ಕನ್ನಡ ಪರ ಸಂಘಟನೆಗಳಿಗೆ ಅನುದಾನದ ಬಗ್ಗೆ ಪ್ರಸ್ತಾಪಿಸುತ್ತಾ, ರಾಜ್ಯ ಸರಕಾರ ಕನ್ನಡ ಸಂಘಟನೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿಲ್ಲ.

ಪ್ರತಿವರ್ಷ ಅನುದಾನ ಬಿಡುಗಡೆಯಾಗುತ್ತಿತ್ತು ಎಂದು ರಾಜ್ಯ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು, ಅಸಮಧಾನವನ್ನು ಹೊರಹಾಕಿದರು. ಜತೆಗೆ ಮುಖ್ಯಮಂತ್ರಿಯವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯವನ್ನೂ ಮಾಡಿದರು. ಈ ಹೇಳಿಕೆಯಿಂದ ಮರಾಠ ಅಭಿವೃದ್ಧಿ ನಿಗಮದ ವಿರುದ್ಧದ ಹೋರಾಟದ ನೆಪದಲ್ಲಿ ಅವರ ಒಳ ಇಂಗಿತ ಬಯಲಾಯಿತು ಮತ್ತು ಪ್ರತಿಭಟನೆಯ ಹಿಂದಿನ ಉದ್ದೇಶವೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.

ಈಗಿನ ಸಂಘಟನೆಯ ಮುಖ್ಯಸ್ಥರು ಬಹುಕೌಶಲ್ಯ ಹೊಂದಿರುವವರಾಗಿದ್ದು, ರೈತ ಮುಖಂಡರಾಗಿದ್ದವರು ರಾತ್ರಿ ಬೆಳಗಾಗು ವಷ್ಟರಲ್ಲಿ ಕಾರ್ಮಿಕ ಮುಖಂಡರಾಗಿ ಅವತಾರ ಪಡೆಯುತ್ತಾರೆ!. ಜಾತಿ ಧರ್ಮದ ಎಲ್ಲೆ ಮೀರಿದ್ದ ಸಂಘಟನೆಗಳು ಈಗ ಒಂದು ವರ್ಗದ ಮುಂದಾಳತ್ವ ವಹಿಸಿಕೊಂಡು ಜಾತಿ ನಾಯಕರ ರಕ್ಷಣೆಗೆ ಧಾವಿಸುತ್ತಿದ್ದು, ಜಾತಿ ಹೆಸರಿನಲ್ಲೂ ಹತ್ತಾರು ಸಂಘಟನೆಗಳು ಹುಟ್ಟಿಕೊಂಡು ತಮ್ಮ ಬೇಡಿಕೆಗಳು ಈಡೇರಿಸಿಕೊಳ್ಳಲು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುವುದು ಸಾಮಾನ್ಯವಾಗಿದೆ.

ಹೋರಾಟಗಾರರ ಕೀಳು ಮಟ್ಟದ ಪದ ಬಳಕೆಯೂ ಎಲ್ಲೆಯನ್ನು ಮೀರಿದೆ. ಹಳಿ ತಪ್ಪಿದ ಹೋರಾಟದಿಂದಲೇ ಹೋರಾಟಗಾರರು ರೋಲ್‌ಕಾಲ್ ಹೋರಾಟಗಾರರೆಂಬ ಹಣೆ ಪಟ್ಟಿಯನ್ನು ಹೊತ್ತುಕೊಳ್ಳುವಂತಾಗಿದೆ. ಭಾರತದ ಒಳಗಿನ ಪ್ರಾಯೋಜಿತ ಚಟುವಟಿಕೆಗಳಿಗೆ ಒತ್ತಾಸೆಯಾಗಿ ನಿಂತವರು ರಾಜ್‌ದೀಪ್ ಸರ್ದೇಸಾಯಿಯಂತಹ ಎಡಪಂಥೀಯ ಪತ್ರಕರ್ತರು. ಬಲಪಂಥೀಯ ರಿಗೆ ಯಾವುದರಲ್ಲಾದರೂ ಹಿನ್ನಡೆಯಾದರೆ ಅಂತಹ ಯಾವುದೇ ಕ್ಷಣವನ್ನು ವರದಿ ಪ್ರಸ್ತುತಿ ನೆಪದಲ್ಲಿ ಟಿವಿ ಸ್ಟುಡಿಯೋದಲ್ಲೇ
ಸಂಭ್ರಮಿಸುವಂತಹ ವಿಕೃತ ಮನಸ್ಥಿತಿಯ ವ್ಯಕ್ತಿ ಆತ.

ಇನ್ನು ಕಾಯಿದೆಗಳ ಬಗ್ಗೆ ಸ್ಪಷ್ಟತೆ, ಅರಿವು ಇಲ್ಲದವರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದಕ್ಕೆ ಆರ್ಟಿಕಲ್ 370 ರದ್ದು, ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿಚಾರದಲ್ಲಿನಡೆದ ಪ್ರತಿಭಟನೆ ಹಾಗೂ ರಫೆಲ್ ಯುದ್ಧ ವಿಮಾನ ಖರೀದಿ ಸಮಯ ದಲ್ಲಾದ ವಿರೋಧದ ಸಂದರ್ಭದಲ್ಲಿ ಪ್ರತಿಭಟನಾನಿರತರನ್ನು ಸಂದರ್ಶಿಸಿದಾಗ ಅವರು ಕೊಟ್ಟ ಉತ್ತರಗಳೇ ಸಾಕ್ಷಿ. ಹೀಗಾಗಿ ಸಾರ್ವಜನಿಕರು ಸಂಘಟನೆಗಳ ಮುಖಂಡರ ತಾಳಕ್ಕೆ ತಕ್ಕಂತೆ ಕುಣಿಯುವ ಬದಲು ವಿಚಾರಗಳನ್ನು ಬಹಳ ಸ್ಪಷ್ಟವಾಗಿ ತಿಳಿದು ಕೊಂಡು ಬಲು ವಿವೇಚನೆಯಿಂದ ವರ್ತಿಸಬೇಕು.

ಪ್ರತಿಭಟನೆಯ ಉದ್ದೇಶ ಸಮಾಜಕ್ಕೋ ಅಥವಾ ಸ್ವಹಿತಕ್ಕೋ ಎಂಬುದನ್ನು ಪ್ರತಿಯೊಬ್ಬ ನಾಗರೀಕನೂ ವಿಮರ್ಶೆ ಮಾಡ ಬೇಕಾದ ಗಂಭೀರ ವಿಚಾರ. ಯಾವುದೇ ಬಂದ್ ಕರೆಗೆ ತಕ್ಷಣ ಬೆಂಬಲ ವ್ಯಕ್ತಪಡಿಸುವ ಮೊದಲು ಪ್ರಮುಖವಾಗಿ ಅದರ ರಹಸ್ಯ ಅಜೆಂಡಾಗಳನ್ನು ತಿಳಿದುಕೊಂಡು ಮುಂದಡಿ ಇಡಬೇಕು. ಸರ್ವೋಚ್ಛ ನ್ಯಾಯಾಲಯ ಹಾಗೂ ಕೆಲವು ಉಚ್ಛ ನ್ಯಾಯಾಲಯ ಗಳು ಹಲವು ಪ್ರಕರಣಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಬಲತ್ಕಾರದ ಬಂದ್‌ಗಳು ಮತ್ತು ಪ್ರತಿಭಟನೆಗಳ ಮೂಲಕ ಸಾರ್ವ ಜನಿಕ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡುವುದರ ವಿರುದ್ಧ ಹಲವು ತೀರ್ಪುಗಳನ್ನು ನೀಡಿವೆ.

ಇಂತಹ ಪ್ರತಿಭಟನೆಗೆ ಬ್ರೇಕ್ ಹಾಕಲು ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸಮರ್ಪಕ ಮತ್ತು ಸ್ವಾಗತಾರ್ಹ. ಬಂದ್‌ಗಳಿಂದ ಜನಸಾಮಾನ್ಯರಿಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾಗುವ ನಷ್ಟದ ವಿರುದ್ಧ ಒಂದು ಕಟ್ಟುನಿಟ್ಟಿನ ರಾಷ್ಟೀಯ ನಿಯಮಾವಳಿ ರೂಪಿಸಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯ ಕಡೆಗೆ ಸಾಗುವುದನ್ನು ನಿರೀಕ್ಷಿಸಬಹುದು.