Saturday, 14th December 2024

‘ಸೀಲ್’ ಕಮಾಂಡೋಗಳಿಂದ ಹೆಲಿಕಾಪ್ಟರ್‌ ದಾಳಿ ನಿರ್ಧಾರ ಸುಲಭದ ಮಾತಾಗಿರಲಿಲ್ಲ !

ಬರಾಕ್‌ ಒಬಾಮಾ ಹೇಳಿದ ಲಾಡೆನ್‌ ಹತ್ಯೆ ಕಥೆ

ಡಾ.ಶ್ರೀಕಾಂತ್‌ ಭಟ್‌, ಜರ್ಮನಿ

(ಭಾಗ – 4)

ಅಮೆರಿಕಾದ ಮಿಲಿಟರಿ ಮತ್ತು ಅದರ ವಿಭಾಗಗಳ ಅಧಿಕಾರಿ ವರ್ಗಗಳ ಜತೆ ಕೆಲಸ ಮಾಡುವ ಅವಕಾಶವಿದೆಯಲ್ಲ, ಅದು ಒಂದು
ವಿನೀತ ಅನುಭವ. ಅವರೆಲ್ಲರ ಕರ್ತವ್ಯ ಪ್ರಜ್ಞೆ ಮತ್ತು ಎಲ್ಲರೂ ಒಟ್ಟಿಗೆ ಒಂದು ಪರಿವಾರದಂತೆ ಕೆಲಸ ಮಾಡುವುದನ್ನು ಪ್ರತ್ಯಕ್ಷ ವಾಗಿ ನೋಡುವುದೇ ಒಂದು ದೊಡ್ಡ ನಮ್ರತೆಯ ಪಾಠವಾಗುತ್ತದೆ.

ಅದರಲ್ಲಿಯೂ ಒಬ್ಬರನ್ನು ಇಂತಹ ಕಾರ್ಯಾಚರಣೆಗೆ ಆರಿಸಬೇಕು ಎಂದರೆ ಮೆಕ್ – ರಾವೆನ್ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ತನ್ನ ಸ್ನಾತಕೋತ್ತರ ಪದವಿಯ ಪ್ರಬಂಧ ಹೊತ್ತಿನಲ್ಲಿಯೇ 20ನೇ ಶತಮಾನದ ಕಮಾಂಡೋ ಆಪರೇಷನ್‌ಗಳನ್ನೂ ಆಳವಾಗಿ ಅಧ್ಯಯನ ನಡೆಸಿದವರು.

ಅದರಲ್ಲಿ ಪ್ರಮುಖವಾದವುಗಳು; ಹಿಟ್ಲರ್ ನಡೆಸಿದ 1943ರ ಮುಸ್ಕೋಲಿನಿ (ಇಟಾಲಿಯನ್ ಸರ್ವಾಧಿಕಾರಿ) ರೆಸ್ಕ್ಯೂ  ಆಪರೇಷನ್! ಮತ್ತು 1976ರಲ್ಲಿ ಇಸ್ರೇಲಿ ಪಡೆಗಳು ನಡೆಸಿದ ಆಪರೇಷನ್ ಎಂಟೆಬೆ! ಮೆಕ್ – ರಾವೆನ್, ಈ ಎರಡು ಕಾರ್ಯಾಚರಣೆ ಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಸಣ್ಣ ಸಂಖ್ಯೆಯ ಮಿಲಿಟರಿ ಕಮಾಂಡೋಗಳನ್ನು ನಿರಂತರ ತಾಲೀಮು ಮತ್ತು ತರಬೇತಿಗೆ ಅನುಗುಣವಾಗಿ ಸಿದ್ಧಗೊಳಿಸಿ, ದೊಡ್ಡ ಮಿಲಿಟರಿಗೆ ಸಡ್ಡು ಹೊಡೆಯುವ ತಾಕತ್ತನ್ನು ಬೆಳೆಸುವ ಬಗ್ಗೆ ವಿಶೇಷ ಪರಿಣತಿ
ಪಡೆದಿದ್ದರು.

ಅಮೆರಿಕದ ಮಿಲಿಟರಿ ನಡೆಸಿದ ಹಲವಾರು ಸ್ಪೆಷಲ್ – ಆಪರೇಷನ್‌ಗಳಲ್ಲಿ ಪ್ರಮುಖರಾಗಿದ್ದರು. ಅದಕ್ಕೆ ನಮ್ಮ ಗುಪ್ತಚರ ವಿಭಾಗದ (CIA) ಪಾರುಪತ್ಯದಲ್ಲಿ ಈ ಕಾರ್ಯಾಚರಣೆ ನಡೆದರೂ, ಕೆಲಸ ನಿರ್ವಹಿಸಲು ಮೇಕ್ – ರಾವೆನ್ ಅವರ ನೇತೃತ್ವದ ನೌಕಾ ವಿಭಾಗದ ಸೀಲ್ (SEAL) ತಂಡವನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದೇ ಕಾರಣಕ್ಕೆ ಮೆಕ್ – ರಾವೆನ್ ಅವರಿಗೇ ಈ ಮಿಷನ್‌ನ ಪೂರ್ಣ ಜವಾಬ್ದಾರಿ ನೀಡಲಾಗಿತ್ತು.

ನಾಳೆ (ಮೇ 1, 2011) ಮೆಕ್ರಾವೆನ್, ಜಲಾಲಾಬಾದ್‌ನಲ್ಲಿ, ಕಾರ್ಯಾಚರಣೆಗೆ ಅಣಿಯಾಗುತ್ತಿದ್ದಾರೆ. ಆದರೆ ಈ ದಾಳಿಗೆ ಸೀಲ್ ಕಮಾಂಡೋಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳುವ ನಿರ್ಧಾರ ಸುಲಭದ ತುತ್ತಾಗಿರಲಿಲ್ಲ. ಪತ್ರಕರ್ತರ ಭೋಜನ
ಕೂಟದಲ್ಲಿ ಭಾಗಿಯಾಗಿ, ಅವರ ಮುಂದೆ ಎಲ್ಲವೂ ಸುರಳೀತವಾಗಿರುವಂತೆ ನಟಿಸಿ, ರಾತ್ರಿ ಮಲಗಿದ ನನಗೆ, ನಿದ್ರೆ ದೂರದ ಮಾತಾಗಿತ್ತು. ಆ ನಿರ್ಧಾರಕ್ಕೆ ನನ್ನನ್ನು ನೂಕಿದ ಕೆಲವು ಹಿಂದಿನ ನಡೆದ ಘಟನೆಗಳ ವಿವರಗಳು ಚಿತ್ತದ ಭಿತ್ತಿಯಲ್ಲಿ ಮೂಡಲಾ
ರಂಭಿಸಿದವು.

ಏರಿಯಲ್ ಫೋಟೋಗ್ರಫಿಯ ಮೂಲಕ ಸಂಗ್ರಹಿಸಿದ ದತ್ತಾಂಶಗಳ ಸಹಾಯದಿಂದ CIA ಅಬ್ಬೊಟ್ಟಾಬಾದ್ ಕಾಂಪೌಂಡಿನ ಚಿಕ್ಕ 3-ಡಿ ಮಾದರಿಯನ್ನೇ ತಯಾರಿಸಿತ್ತು. ಮಾರ್ಚ್ 2ನೇ ವಾರದ ಮೀಟಿಂಗ್‌ನಲ್ಲಿ ಮೇಕ್ – ರಾವೆನ್ ಇದೇ ಮಾದರಿಯನ್ನು ಮುಂದಿಟ್ಟು ತಮ್ಮ ಯೋಜನೆಯನ್ನು ವಿವರಿಸಿದ್ದರು. ಒಂದು ಸೀಲ್ ಕಮಾಂಡೋಗಳ ತಂಡ ಒಂದು ಅಥವಾ ಎರಡು ಹೆಲಿಕಾಪ್ಟರ್‌ನಲ್ಲಿ ಅಫಘಾನಿಸ್ತಾನದ ಜಲಾಲಬಾದ್‌ನಿಂದ (ಅಲ್ಲಿನ ನಮ್ಮ ಮಿಲಿಟರಿ ಜಮಾವಣೆ ಕೇಂದ್ರದಿಂದ) ಹೊರಟು, ಗೌಪ್ಯವಾಗಿ (ಕತ್ತಲಿನಲ್ಲಿ ಮತ್ತು ಪಾಕಿಸ್ತಾನಿ ಮಿಲಿಟರಿ ರೇಡಾರ್‌ಗಳ ಸರಹದ್ದಿಗೆ ಸಿಗದೇ) ಆ ಸ್ಥಳವನ್ನು ತಲುಪುವುದು. ಸರಿ ಸುಮಾರು 90 ನಿಮಿಷದ ಆಕಾಶ ಮಾರ್ಗದಲ್ಲಿ ಸಾಗಿ, ಹೆಲಿಕಾಪ್ಟರ್‌ಗಳನ್ನು ನೇರವಾಗಿ ಕಾಂಪೌಂಡ್ ಒಳಗಡೆ ಲ್ಯಾಂಡ್ ಮಾಡಬೇಕು.

ನಂತರ ಎಲ್ಲ ಬಾಗಿಲು, ಕಿಟಕಿ ಅಥವಾ ಯಾವುದೇ ಒಳ – ಹೊರಹೋಗುವ ದ್ವಾರವನ್ನು ಸುತ್ತುವರಿದು, ಮೂರು ಮಹಡಿಯ ಮನೆಯನ್ನು ಸರ್ಚ್ ಮಾಡುವುದು, ಮತ್ತು ಯಾವುದೇ ಅಡೆತಡೆ ಬಂದಲ್ಲಿ ಅದನ್ನು ನಿಷ್ಕ್ರೀಯಗೊಳಿಸುವುದು. ಬಿನ್
– ಲಾಡೆನ್ ಸೆರೆ ಹಿಡಿಯುವುದು ಆಗದಿದ್ದಲ್ಲಿ ಕೊಲ್ಲುವುದು. ತಕ್ಷಣ ಹಿಂತಿರುಗುವುದು ಎಂದು ಮೆಕ್ – ರಾವೆನ್ ತಮ್ಮ ಮಾತನ್ನು ಮುಗಿಸಿದರು.

ನಿಮ್ಮ ಸೀಲ್ ತಂಡ ಯಶಸ್ವಿಯಾಗಿ ಕೆಲಸ ಮುಗಿಸಬಹುದೇ? ಎಂದು ಕೇಳಿದೆ. ಸರ್, ಈಗ ಪರಿಕಲ್ಪನೆ ಅಷ್ಟೇ ಸಿದ್ಧವಾಗಿದೆ. ಸದ್ಯಕ್ಕೆ  ನಾನು ಯೋಚನೆಮಾಡಿದ್ದೇ ಉತ್ತಮ ಮಾರ್ಗವೇ ಎಂಬುದೂ ತಿಳಿದಿಲ್ಲ. ಈಗಲೂ ನಾವು ಹೇಗೆ ತಲುಪುತ್ತೇವೆ, ಮತ್ತು ಅಲ್ಲಿಂದ ಹೊರಡುತ್ತೇವೆ ಎಂಬುದನ್ನು ನಿಖರವಾಗಿ ಹೇಳಲೂ ಸಾಧ್ಯವಾಗುತ್ತಿಲ್ಲ. ಅದಕ್ಕೆ ವಿಶೇಷವಾದ ಏರ್ – ಪ್ಲಾನರ್
ಗಳ ಅವಶ್ಯಕತೆ ಇದೆ. ಅಲ್ಲಿ ಹೋಗಿ ತಲುಪಿದರೆ, ಯಶಸ್ವಿಯಾಗಿ ಕೆಲಸಮುಗಿಸುವ ಧೈರ್ಯ ನಮ್ಮ ತಂಡಕ್ಕೆ ಇದೆ. ಆದರೆ ಈಗಲೇ ರೈಡ್ ಮಾಡುವ ಹಂತದಲ್ಲಿ ನಾವಿಲ್ಲ. ಇನ್ನೂ ಪೂರ್ವಭಾವಿ ತಯಾರಿ ಮತ್ತು ತಾಲೀಮಿನ ಅವಶ್ಯಕತೆ ಇದೆ ಅಂದರು ಮೇಕ್ – ರಾವೆನ್. ಸರಿ ಹಾಗಾದರೆ ! ಪೂರ್ವತಯಾರಿ ನಡೆಸಿ! ಪೂರ್ವತಯಾರಿಗೆ ನನ್ನ ಪೂರ್ಣ ಒಪ್ಪಿಗೆ ಇದೆ ಎಂದೆ.

ಎರಡು ವಾರದ ನಂತರ 29 ಮಾರ್ಚ್ 2011 ಮತ್ತೆ ಸಿಚುಯೇಶನ್ ರೂಮ್ನಲ್ಲಿ ಸಭೆ ಸೇರಿದ್ದೆವು. ಮೆಕ್ – ರಾವೆನ್, ತಾವು ದಾಳಿಗೆ ಸಿದ್ಧ್ದವಿರುವುದಾಗಿ ತಿಳಿಸಿದರು. ಅವರ ಹಿಂದಿನ ಇಂತಹ ದಾಳಿಯ ಅನು ಭವದ ಮೇರೆಗೆ, ಅಲ್ಲಿಗೆ ತಲುಪಿ ಕಾರ್ಯಾಚರಣೆ ಸರಾಗವಾಗಿ ನಡೆಯುತ್ತದೆ. ಹಿಂತಿರುಗುವ ಕೆಲಸವೇ ಸ್ವಲ್ಪ ಜಟಿಲವಾದುದು ಎಂದರು. ನಮ್ಮ ತಾಲೀಮು ಮತ್ತು ಅನುಭವದ
ಪ್ರಕಾರ, ಪಾಕಿಸ್ತಾನಿ ಮಿಲಿಟರಿಗೆ ತಮ್ಮ ಕಾರ್ಯಾಚರಣೆಯ ಸುಳಿವು ಸಿಗುವ ಮುನ್ನವೇ ಹಿಂತಿರುಗುವ ಅವಕಾಶವಿದೆ!

ಅಷ್ಟಾಗಿ ಯೂ ನಾವು ಬಂದೊದಗುವ ಎಲ್ಲ ಆಪತ್ತುಗಳನ್ನೂ ತಿಳಿದಮಟ್ಟಿಗೆ ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಪಾಕಿಸ್ತಾನಿ
ಪಡೆಗಳು, ದಾಳಿ ಮಾಡುವ ಸಂದರ್ಭದಲ್ಲಿ ಅಥವಾ ಮುಗಿಸಿ ಹಿಂದಿರುಗುವ ಹೊತ್ತಿಗೆ ನಮ್ಮ ಹೆಲಿಕಾಪ್ಟರನ್ನು ಗುರುತಿಸಿ (ರೇಡಾರ್ ತೊಡಕಿನಿಂದ) ತಡೆಹಿಡಿದರೆ? ಒಸಾಮಾ ಸ್ಥಳದಲ್ಲಿಯೇ ಇದ್ದರೂ ಸೇಫ್ – ರೂಮ್‌ನಲ್ಲಿ ರಕ್ಷಣೆ ಪಡೆದಿದ್ದು ನಮ್ಮ ಕಾರ್ಯಾಚರಣೆಗೆ ದುಪ್ಪಟ್ಟು ಸಮಯ ಹಿಡಿದರೆ? ಒಮ್ಮೆಲೇ ರೈಡ್ ಮಾಡುವ ಹೊತ್ತಿಗೆ ಅಲ್ಲಿ ಪಾಕಿಸ್ತಾನಿ ಮಿಲಿಟರಿ ಅಥವಾ ಪೊಲೀಸರು ಜಮಾವಣೆ ಗೊಂಡಿದ್ದರೆ? ಏನು ಮಾಡುವುದು ಎಂಬ ಪ್ರಶ್ನೆಗೆ ನಿಖರವಾದ ಉತ್ತರ ಸಿದ್ಧವಿಲ್ಲ. ಆದರೆ ಈ ಮೇಲಿನ
ಯೋಜನೆಗಳೆಲ್ಲವೂ ಪಾಕಿಸ್ತಾನದ ಜತೆ ಯಾವುದೇ ಸಂಘರ್ಷಕ್ಕೆ ಏಣೆ ಮಾಡಿಕೊಡಬಾರದು ಎಂಬ ತಳಹದಿಯಲ್ಲಿಯೇ ರೂಪಿಸಲಾಗಿದೆ.

ಅಪ್ಪಿ – ತಪ್ಪಿ ಯೋಜನೆ ವಿಫಲವಾಗಿ ಸಿಕ್ಕಿಬಿದ್ದರೆ, ನಾವು ಪಾಕಿಸ್ತಾನದ ಮಿಲಿಟರಿ ಜತೆ ಗುಂಡಿನ ಕಾಳಗಕ್ಕೆ ಇಳಿಯುವುದಿಲ್ಲ. ಅಲ್ಲಿಗೇ ಕಾರ್ಯಾಚರಣೆಯನ್ನು ನಿಲ್ಲಿಸಿ ಕಾಯುತ್ತೇವೆ. ಅಮೆರಿಕದ ರಾಜತಾಂತ್ರಿಕ ಪಂಡಿತರು ನಮ್ಮನ್ನು ಸುರಕ್ಷಿತವಾಗಿ ಹಿಂದೆ
ಕರೆಯಿಸಿಕೊಳ್ಳುವರು ಎಂಬ ನಂಬಿಕೆ ಇದೆ! ಅಂದರು ಮೆಕ್ – ರಾವೆನ್.

ಅಮೆರಿಕ, ಪಾಕಿಸ್ತಾನದ ರಾಜತಾಂತ್ರಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು: ಮೆಕ್ – ರಾವೆನ್ ಅವರ ಜಾಣ್ಮೆಯ ಮಾತುಗಳು ಕ್ಷಣಕ್ಕೆ ನನಗೆ ಇಷ್ಟವಾಯಿತು. ಅವರ ಅಭಿಪ್ರಾಯಗಳು ಮತ್ತು ಎಚ್ಚರಿಕೆಯ ಮಾತುಗಳು ಅಮೆರಿಕಾದ ಮಿಲಿಟರಿ ದಕ್ಷತೆಯನ್ನು ಒತ್ತಿ ಹೇಳುವಂತಿತ್ತು. ಆದರೆ ಆಗಿನ ಅಮೆರಿಕ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ನಾನು ಮತ್ತೆ
ಬಾಬ್ – ಗೇಟ್ಸ್‌ (ಡಿಫೆನ್ಸ್‌ ಸೆಕ್ರೆಟರಿ) ಇಬ್ಬರೂ ಈ ಯೋಜನೆಗೆ ನಮ್ಮ ಸಂಶಯ ವ್ಯಕ್ತಪಡಿಸಿದೆವು.

ಅದಾಗಲೇ ಅಲ್- ಖೈದಾ ವಿರುದ್ಧದ ಅಫಘಾನಿಸ್ತಾನ ಮತ್ತು ಪಾಕಿಸ್ತಾನಿ ಗಡಿಪ್ರದೇಶದಲ್ಲಿ ನಡೆಯುತ್ತಿದ್ದ ಡ್ರೋನ್ ಕಾರ್ಯಾ ಚರಣೆಗೆ, ಸಾಕಷ್ಟು ಪ್ರತಿರೋಧ ಏರ್ಪಟ್ಟಿತ್ತು. ನಮ್ಮ ಗುಪ್ತಚರ ಅಧಿಕಾರಿಗಳು ಡ್ರೋನ್ ಕಾರ್ಯಾಚರಣೆಯ ವೇಳೆಯಲ್ಲಿ ಪ್ರಮಾದದಿಂದ ಎರಡು ಪಾಕಿಸ್ತಾನಿ ಸೈನಿಕರ ಹತ್ಯೆ ಮಾಡಿದ್ದು, ಅಮೆರಿಕಾ ವಿರುದ್ಧದ ಮನೋಭಾವವನ್ನು ಹುಟ್ಟುಹಾಕಿತ್ತು. ಈ ಸದ್ಯದ ಪರಿಸ್ಥಿತಿಯಲ್ಲಿ ಸೀಲ್ ಕಮಾಂಡೋಗಳ ಹಣೆಬರಹವನ್ನು ಪಾಕಿಸ್ತಾನದ ಸರಕಾರದ ಕೈಯಲ್ಲಿ ಕೊಡುವ ಅಪಾಯವನ್ನು ತಂದುಕೊಳ್ಳುವ ಹಾಗಿಲ್ಲ.

ಪಾಕಿಸ್ತಾನ ಸಾರ್ವಜನಿಕ ಅಭಿಪ್ರಾಯಕ್ಕೆ ಹೆದರಿ ಜೈಲೋ – ಬೆಲೋ ಎಂಬ ಪರಿಸ್ಥಿತಿ ನಿರ್ಮಾಣವಾದರೂ ಆಗಬಹುದು. ಅದರ ಲ್ಲಿಯೂ ಬಿನ್ – ಲಾಡೆನ್ ಆ ಜಾಗದಲ್ಲಿ ಇಲ್ಲವಾದಲ್ಲಿ ನಮಗೆ ಗಂಭೀರ ಹಿನ್ನಡೆಯಾಗುವುದು ಖಚಿತ ಎಂದು ಮೆಕ್ –
ರಾವೆನ್ ಗೆ ಹೇಳಿದೆ. ಅಗತ್ಯವಿದ್ದಲ್ಲಿ ಇನ್ನೂ ಎರಡು ಜಾಸ್ತಿ ಹೆಲಿಕಾಪ್ಟರ್ ಬಳಸಿ, ಸೀಲ್ ಕಮಾಂಡೋಗಳಿಗೆ ಬ್ಯಾಕ್ – ಅಪ್ ಕೊಡಿ ಅಂದೆ.

ಯಾವುದೇ ಸಂದರ್ಭದಲ್ಲಿ ಅಮೆರಿಕಾದ ಸೈನಿಕರು ಪಾಕಿಸ್ತಾನದಲ್ಲಿ ಸಿಕ್ಕಿ ಹಾಕಿಕೊಳ್ಳಕೂಡದು. ನಿಮ್ಮ ಯೋಜನೆಯನ್ನು ಆ ದೃಷ್ಟಿಯಿಂದಲೇ ಬದಲಿಸಿಕೊಂಡು ಪುನಃ ಪ್ರಸ್ತುತಪಡಿಸಿ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದೆ. ಅದೇ ಮೀಟಿಂಗ್
ನಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಅಧಿಕಾರಿ ಕಾರ್ಟ್ – ರೈಟ್, ಏರ್ – ಸ್ಟ್ರಕ್ ಮತ್ತು ಸೀಲ್ ಕಮಾಂಡೋ ದಾಳಿಗೆ ಹೊರತಾದ ಮೂರನೇ ಸರ್ಜಿಕಲ್ ಏರ್ – ಸ್ಟ್ರೆಕ್ ಯೋಜನೆಯನ್ನು ಮುಂದಿಟ್ಟರು. ಅವರ ಯೋಜನೆಯ ಪ್ರಕಾರ ಆ ಪೇಸರ್ ಹೊರಗಡೆ ಬಂದ ಸಮಯದಲ್ಲಿ ಒಂದು ಮಾನವ ರಹಿತ ಡ್ರೋನ್‌ನನ್ನು ಕಾಂಪೌಂಡ್ ಆಕಾಶ ವಲಯದಲ್ಲಿ ಹಾರಿ ಬಿಡುವುದು.

ಸುಮಾರು 6 ಕೆಜಿಯಷ್ಟು ಚಿಕ್ಕ ಮಿಸೈಲ್‌ನಿಂದ ಪೇಸರ್‌ನನ್ನು ಟಾರ್ಗೆಟ್ ಮಾಡುವುದು. ಅವರ ಪ್ರಕಾರ ಮನೆಯ ಉಳಿದ ಜನರನ್ನೂ ಟಾರ್ಗೆಟ್ ಮಾಡುವ ಅಥವಾ ಅಪಾಯಕ್ಕೆ ಈಡು ಮಾಡುವ ಸಂದರ್ಭ ಈ ಕಾರ್ಯಾಚರಣೆಯಿಂದ ಬರುವುದಿಲ್ಲ. ಮತ್ತು ನಮ್ಮ ಮಿಲಿಟರಿಯ ಜನ ಹೋಗಿ ಸಿಕ್ಕಿ ಹಾಕಿಕೊಳ್ಳುವ ಸಂದರ್ಭವೂ ಇಲ್ಲ ಎಂದು ವಿವರಿಸಿದರು.

ಗೌಪ್ಯತೆ ಕಾಪಾಡುವುದ ಕಷ್ಟಕರವಾಗಿತ್ತು: ಅದೇ ಮೀಟಿಂಗ್‌ನಲ್ಲಿ ಮುಂದಿನ ಕಾರ್ಯಯೋಜನೆ ಮತ್ತು ವಿಧಾನದ ಬಗೆಗಿನ ಚರ್ಚೆಯನ್ನೂ ಮಾಡಲಾಯಿತು. ಅದಾಗಲೇ ಪಕ್ವವಾದ ಸಿದ್ಧತೆಗೆ ಮೆಕ್ – ರಾವೆನ್ ಅಬ್ಬೊಟ್ಟಾಬಾದ್‌ನ ಕಾಂಪೌಂಡ್ ಹಾಗೂ
ಮನೆಯ ಮೂಲ ಅಳತೆಗೆ ಸರಿಯಾದ ಹೊಸ ಮಾದರಿಯನ್ನು ನಾರ್ಥ್ – ಕೆರೊಲಿನಾದ ಫೋರ್ಟ್ – ಬ್ರಾಗ್ ಎಂಬ ಪ್ರದೇಶದಲ್ಲಿ ನಿರ್ಮಾಣ ಮಾಡಲು ಅನುಮತಿ ನೀಡಲಾಯಿತು.

ಅಲ್ಲಿಯೇ ಸೀಲ್ ಕಮಾಂಡೋಗಳು ಕ್ರಮವಾದ ಡ್ರೆಸ್ ರಿಹರ್ಸಲ್ನ್ನು ನಡೆಸಿ, ನಿರಂತರ ತಾಲೀಮಿನಲ್ಲಿ ಇರಲು ಸೂಚಿಸ ಲಾಯಿತು. ಕೆಲವು ತಾಂತ್ರಿಕ ಕಾರಣಗಳಿಂದ ಕೊನೆಯ ನಿರ್ಧಾರ ಮೇ ತಿಂಗಳಿನ ಆಸುಪಾಸಿನಲ್ಲಿ ಆದರೆ ಒಳಿತು ಎಂದು ಮೆಕ್ – ರಾವೆನ್ ಒತ್ತಿ ಹೇಳಿದರು. ಈ ಎಲ್ಲ ರಹಸ್ಯ ಕಾರ್ಯಾಚರಣೆಯ ತಯಾರಿ ಮತ್ತು ಸೂಕ್ಷ್ಮ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡುವುದು ದಿನ ದಿಂದ ದಿನಕ್ಕೆ ಕಷ್ಟಕರ ಎನಿಸತೊಡಗಿತ್ತು. ಅಂತಿಮ ನಿರ್ಧಾರದ ಬಗೆಗೆ ಮೇಕ್ – ರಾವೆನ್ ಮತ್ತು ಮತ್ತೊಬ್ಬ ಅಧಿಕಾರಿ ಕಾರ್ಟ್ – ರೈಟ್ ಇಬ್ಬರಿಗೂ ನನ್ನ ಉತ್ತರ ಒಂದೇ ಆಗಿತ್ತು. ನಾನು ಯಾವುದೇ ನಿರ್ಧಾರ ಕೈಗೊಳ್ಳಲು ಇನ್ನೂ ಸಿದ್ಧವಾಗಿಲ್ಲ. ಆಯ್ದುಕೊಂಡರೆ ಯಾವ ಕಾರ್ಯಾ ಚರಣೆ ವಿಧಾನವನ್ನು ಆಯ್ದು ಕೊಳ್ಳುತ್ತೇನೆ ಎಂಬ ನಿಶ್ಚಿತತೆಯೂ ಇಲ್ಲ. ಈ ಎರಡೂ ಯೋಜನೆಯ ಪೂರ್ವ ಸಿದ್ಧತೆಯ ಹಿತ ದೃಷ್ಟಿಯಿಂದ ನನ್ನ ಪೂರ್ಣ ಒಪ್ಪಿಗೆ ಇದ್ದಂತೆಯೇ ನಿಮ್ಮ ಕಾರ್ಯದಲ್ಲಿ
ಮುಂದುವರಿಯಿರಿ ಎಂದೆ.

ಡೊನಾಲ್ಡ್ ಟ್ರಂಪ್ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ: ಕೆಲವೇ ನಿರ್ಧಿಷ್ಟ ಜನರಿಗೆ ಹೊರತಾಗಿ ನಮ್ಮ ಉದ್ದೇಶಿತ ಯೋಜನೆಯ ಬಗ್ಗೆೆ, ಬೇರೆ ಯಾರಿಗೂ ಸ್ವಲ್ಪವೂ ಸುಳಿವು ಇರಲಿಲ್ಲ. ವೈಟ್ – ಹೌಸ್‌ನಲ್ಲಿ ಬೇರೆ ಎಲ್ಲ ಕೆಲಸ ಕಾರ್ಯಗಳು ಮಾಮೂ ಲಿಯಂ
ತೆಯೇ ಜರುಗುತ್ತಿದ್ದವು. ನಾನು ಆ ದಿನ ಗಳಲ್ಲಿನ ಪ್ರಮುಖ ಬೆಳವಣಿಗೆಯಾದ, ಲಿಬಿಯಾದ ಪರಿಸ್ಥಿತಿ, ಅಫಘಾನಿಸ್ತಾನದ ಯುದ್ಧ, ಗ್ರೀಕ್‌ನಲ್ಲಿಯ ಹಣ ಕಾಸು ತುರ್ತು ಪರಿಸ್ಥಿತಿ ಈ ಎಲ್ಲದರ ಬಗ್ಗೆ ನಿಗಾವಹಿಸಿದ್ದೆ. ಈ ಮಧ್ಯೆ ಒಂದು ದಿನ ಭೇಟಿಯಾದ ಪ್ರೆಸ್ ಸೆಕ್ರೆಟರಿ ಜೇ ಕಾರ್ನಿ, ಆ ದಿನದ ಬಹುತೇಕ ಪತ್ರಿಕಾಗೋಷ್ಠಿಯ ಪ್ರಶ್ನೆಗಳೆಲ್ಲವೂ ನನ್ನ ಬರ್ಥ್ – ಸರ್ಟಿಫಿಕೇಟ್ ಮಾನ್ಯವೇ ಅಲ್ಲವೇ ಎಂಬುದರ ಬಗ್ಗೆ ಇತ್ತಾಗಿ ಹೇಳಿದರು.

ಅದಾಗ ತಾನೇ ಡೊನಾಲ್ಡ್ ಟ್ರಂಪ್ ರಾಷ್ಟ್ರ ರಾಜಕಾರಣದ ಮಂಚಕ್ಕೆ ಧುಮುಕಿದ್ದರು. ನಾವು ಸ್ವಲ್ಪ ದಿನಗಳಲ್ಲಿ ಈ ಸುದ್ದಿ
ಹಳತಾಗಿ ನನ್ನ ಜನನದ ಊಹಾಪೋಹಗಳು ದೂರವಾಗುವುದೆಂದು ಭಾವಿಸಿದ್ದೆವು. ಕೇಬಲ್ ನೆಟ್ವರ್ಕ್ ಮತ್ತು ಟ್ರಂಪ್ ಪೊಳ್ಳುವಾದದ ಬಲವಾಗಿ ಈ ಸುದ್ದಿ ದಿನೇ – ದಿನೇ ಹೊಸ ಆಯಾಮವನ್ನು ಪಡೆಯುತ್ತಿತ್ತು.

ಇಂಟರ್‌ನೆಟ್‌ನಲ್ಲಿ ಸಿಕ್ಕ ಸಣ್ಣ – ಮಾದರಿಯ ಜನನ ಪ್ರಮಾಣ ಪತ್ರವನ್ನು ಇಟ್ಟುಕೊಂಡು ದೊಡ್ಡ ಬೊಬ್ಬೆ ಹಾಕಲಾಯಿತು. ನಾನು ಮುಸ್ಲಿಂ ಧರ್ಮಕ್ಕೆ ಸೇರಿದವನೇ? ನನ್ನ ಜನನ ಪ್ರಮಾಣ ಪತ್ರವನ್ನು ತಿದ್ದುಪಡಿ ಮಾಡಲಾಗಿದೆಯೇ, ಒಬಾಮ ಏನನ್ನು ಮುಚ್ಚಿಡುತ್ತಿದ್ದಾರೆ? ಎಂಬೆಲ್ಲ ಪ್ರಶ್ನೆಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು.

ಮಾಧ್ಯಮಗಳಲ್ಲಿ ನೇರ ಪ್ರಸಾರ: ಏಪ್ರಿಲ್ 27 ರಂದು, ಮೂನ್ಸೂಚನೆಯಿಲ್ಲದೆ ನಾನೇ ವೈಟ್ – ಹೌಸ್‌ನ ಪತ್ರಿಕಾಗೋಷ್ಠಿಯ ಕಚೇರಿಗೆ ಬಂದು, ಮಾಧ್ಯಮ ಮಿತ್ರರನ್ನು ಭೇಟಿಯಾದೆ. ಎಲ್ಲಾ ರಾಷ್ಟ್ರೀಯ ಮಾಧ್ಯಮಗಳು ನಿಗದಿತ ಕಾರ್ಯಕ್ರಮವನ್ನು ಬದಿಗೊತ್ತಿ, ನನ್ನ ಪತ್ರಿಕಾಗೋಷ್ಠಿಯನ್ನು ನೇರ ಪ್ರಸಾರ ಮಾಡಿದವು. ಅಮೆರಿಕ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ.

ಸಾಕಷ್ಟು ದೊಡ್ಡ ನಿರ್ಣಯ ತೆಗೆದುಕೊಳ್ಳಬೇಕಾದ ಅವಶ್ಯಕತೆ ಕೂಡ ಇದೆ. ಗಹನವಾದ ಮತ್ತು ವ್ಯವಸ್ಥಿತ ಚರ್ಚೆಯ
ಅವಶ್ಯಕತೆಯೂ ಇದೆ. ಒಪ್ಪಿಗೆ ಮತ್ತು ಭಿನ್ನತೆಗಳ ಆಳದ ಅಳತೆಯನ್ನು ತಿಳಿದುಕೊಳ್ಳಲು ಮಾಧ್ಯಮಗಳು ಸಹಕಾರಿಯಾಗಬೇಕು. ಪ್ರಜಾಪ್ರಭುತ್ವಇಂತಹ ಚರ್ಚೆಯ ಮೇಲೆಯೇ ಅವಲಂಬಿತವಾಗಿದೆ. ಒಳ್ಳೆಯ ಭವಿಷ್ಯವನ್ನು ರೂಪಿಸಲು ಎಲ್ಲರೂ
ಸಹಕರಿಸಬೇಕು. ಅದನ್ನು ಬಿಟ್ಟು ಮಾಧ್ಯಮಗಳು ನನ್ನ ಜನನ ಪ್ರಮಾಣ ಪತ್ರದ ಚರ್ಚೆಯಲ್ಲಿ ತೊಡಗಿರುವುದು ಹಾಸ್ಯಾಸ್ಪದ. ನಾವು ಇದೇ ರೀತಿ ಗೊಂದಲದಲ್ಲಿದ್ದರೆ, ಒಬ್ಬರನ್ನೊಬ್ಬರು ಹಳಿಯುತ್ತಿದ್ದರೆ, ನಿಜಾಂಶಗಳನ್ನು ಸುಳ್ಳೆಂದು ಬಿಂಬಿಸುತ್ತಿದ್ದರೆ, ನಮ್ಮಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕೆಲವರನ್ನು ಏನೇ ಮಾಡಿದರೂ ಅಥವಾ ಯಾವುದೇ ಸರಿಯಾದ ಪ್ರಮಾಣ ಪತ್ರ ಒದಗಿಸಿದರೂ ಒಪ್ಪಿಸಲು ಸಾಧ್ಯವಿಲ್ಲ.

ಇಂತಹ ತಿಕ್ಕಲುತನಕ್ಕೆ ಸಮಯವಿಲ್ಲ. ನಮಗೆ ಮಾಡಲು ಬೇಕಾದಷ್ಟು ಒಳ್ಳೆಯ ಕೆಲಸಗಳಿವೆ ಮತ್ತು ಬಗೆಹರಿಸಲೇ ಬೇಕಾದ ದೊಡ್ಡ ಸಮಸ್ಯೆಗಳು ನಮ್ಮ ಮುಂದೆ ಇವೆ. ನಮ್ಮ ದೃಷ್ಟಿ ಅಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಇರಬೇಕೆ ಹೊರತು ಈ ಟೊಳ್ಳು ವಿಷಯದ ಬಗ್ಗೆ ಅಲ್ಲ ಎಂದೆ. ಕೊಠಡಿಯಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ನಾವೆಲ್ಲರೂ ಇದಕ್ಕಿಂತ ಉತ್ತಮರು, ನೆನಪಿನಲ್ಲಿರಲಿ ಎಂದು ಮಾತು ಮುಗಿಸಿದೆ. ಅದಾಗಲೇ ಬೆಳಗಾಗಿತ್ತು.

ರಾತ್ರಿ ತಡವಾದರೂ, ಮೇ 1ರ ಬೆಳಗು ಮೊದಲೇ ಆದ ಅನುಭವ. ಮನಸಿನಲ್ಲಿ ಮೂಡಿದ ಹಿನ್ನೋಟ, ನಿರ್ಧಾರದ ಕ್ಲಿಷ್ಟತೆಯನ್ನು ಎತ್ತಿ ತೋರುವಂತೆ ಇತ್ತು. ಒಮ್ಮೆ ಚಿಂತೆಗೆ ಒಡ್ಡಿತಾದರೂ, ಮತ್ತೊಮ್ಮೆ ನಿರ್ಧಾರಕ್ಕಾ ಆಗಿತ್ತು!

(ಮುಂದುವರಿಯುವುದು…)