Saturday, 14th December 2024

ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದರೆ ಎತ್ತಂಗಡಿ ಭಾಗ್ಯ !

ಅವಲೋಕನ

ಚಂದ್ರಶೇಖರ ಬೇರಿಕೆ

‘ನಾ ಖಾವೂಂಗಾ, ನಾ ಖಾನೆ ದುಂಗಾ’ ಇದು ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ಘೋಷವಾಕ್ಯ.

ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ, ಅರ್ಥಾತ್ ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗುವುದಿಲ್ಲ, ಬೇರೆಯವರೂ ಭಾಗಿಯಾಗಲು ಅವಕಾಶ ನೀಡುವುದಿಲ್ಲ. ಈ ಘೋಷವಾಕ್ಯಕ್ಕೆ ಪೂರಕವಾಗಿ ಅವರು ತಮ್ಮನ್ನು ನಿರೂಪಿಸಿಕೊಂಡಿದ್ದಾರೆ. ಇಷ್ಟು ಸುದೀರ್ಘ ವರ್ಷಗಳ ರಾಜಕೀಯ ಜೀವನದಲ್ಲಿ ನರೇಂದ್ರ ಮೋದಿಯವರು ಭ್ರಷ್ಟಾಚಾರದ ಹತ್ತಿರ ಸುಳಿದ ಉದಾಹರಣೆಯೂ ಇಲ್ಲ.

ರಾಜಕೀಯವಾಗಿ ಪ್ರತಿಪಕ್ಷಗಳು ಅವರ ವಿರುದ್ಧ ಏನೇ ಆರೋಪ ಮಾಡಿದರೂ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯ ವಾಗುತ್ತಿಲ್ಲ ಮತ್ತು ಅಂತಹ ಪ್ರಯತ್ನಕ್ಕೆ ಕೈ ಹಾಕಿದವರು ಸುಪ್ರೀಂ ಕೋಟ್ ನಿಂದ ಛೀಮಾರಿ ಹಾಕಿಸಿಕೊಂಡು ಕೈ ಸುಟ್ಟುಕೊಂಡಿ ದ್ದಾರೆ ಎಂಬುದು ಗಮನಾರ್ಹ.

ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಹೊರತಾಗಿಯೂ ಭಾರತದಲ್ಲಿ ಭ್ರಷ್ಟಾಚಾರದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರಕಾರಗಳು ಈ ಬಗ್ಗೆ ಗಂಭೀರ ಕಾಳಜಿ ವಹಿಸದೇ ಇರುವುದು. ಭ್ರಷ್ಟಾಚಾರದ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರಕಾರವೂ ಮೃದು ಧೋರಣೆ
ತಳೆಯುತ್ತಿದ್ದೇಯೇ ಎಂಬ ಅನುಮಾನವೂ ಮೂಡುತ್ತಿದೆ. ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆಯಲ್ಲಿ ರೂಪಿಸಲಾದ ಸುರಕ್ಷಿತ ನಗರ ಕಾರ್ಯಕ್ರಮ ಮಹಿಳೆಯರಿಗೆ ಮತ್ತು ಮಕ್ಕಳ ಸುರಕ್ಷತೆಗಾಗಿನ ಯೋಜನೆಯಾಗಿದೆ.

ಈ ಯೋಜನೆಯಲ್ಲಿನ ಒಟ್ಟು 1067 ಕೋಟಿ ರು. ಮೊತ್ತದ ಯೋಜನೆಯ ಪೈಕಿ ಮೊದಲ ಹಂತದ 627 ಕೋಟಿ ರು. ಮೌಲ್ಯದ ಯೋಜನೆಯಲ್ಲಿ ಬೆಂಗಳೂರು ನಗರದಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆಗಾಗಿನ ಟೆಂಡರ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬುದು ಟೆಂಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಮತ್ತು ಬೆಂಗಳೂರು ನಗರ ಹೆಚ್ಚುವರಿ ಕಮಿಷನರ್ (ಆಡಳಿತ) ಆಗಿದ್ದ ಹೇಮಂತ್ ನಿಂಬಾಳ್ಕರ್ ವಿರುದ್ಧ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಡಿ. ರೂಪಾ ಮೌದ್ಗಿಲ್ ಅವರು ಮಾಡಿರುವ ಆರೋಪ.

ಈ ಟೆಂಡರ್ ಹಂಚಿಕೆ ಪ್ರಕ್ರಿಯೆಯಲ್ಲಿ ಸರಕಾರಿ ಸ್ವಾಮ್ಯದ ಬಿಇಎಲ್ ಸೇರಿದಂತೆ ವಿವಿಧ ಕಂಪನಿಗಳು ಭಾಗವಹಿಸಿದ್ದು, ಟೆಂಡರ್ ಹಂಚಿಕೆಯಲ್ಲಿನ ಅಕ್ರಮದ ಬಗ್ಗೆ ಬಹಳ ಹಿಂದೆಯೇ ಅನೇಕ ದೂರುಗಳು ದಾಖಲಾಗಿದ್ದವು ಎಂಬ ವರದಿಯಿದೆ. ಡಿ.ರೂಪ ಮೌದ್ಗಿಲ್ ಅವರು ಇಲ್ಲಿವರೆಗಿನ ಸೇವಾವಧಿಯಲ್ಲಿ ಸುಮಾರು 40 ಕ್ಕೂ ಹೆಚ್ಚು ಬಾರಿ ವರ್ಗಾವಣೆಗೊಂಡಿದ್ದು, ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿರುವವರು. ಆದರೆ ಅವನ್ನು ಏಕಾಏಕಿ ವರ್ಗಾವಣೆ ಮಾಡಿರುವ ರಾಜ್ಯ ಸರಕಾರದ ನಡೆ ನಿಜಕ್ಕೂ ಆಶ್ಚರ್ಯ ತರಿಸಿದೆ.

ಪ್ರಧಾನಿಯವರು ಪ್ರತಿನಿಧಿಸುವ ರಾಜಕೀಯ ಪಕ್ಷವೇ ರಾಜ್ಯದಲ್ಲೂ ಆಡಳಿತ ನಡೆಸುತ್ತಿದೆಯಾದರೂ ಅವರಂತೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ರಾಜ್ಯ ಸರಕಾರ ಮುಂದಾಗುತ್ತಿಲ್ಲ. ಇಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಅಧಿಕಾರಿ ಗಳು ನಿಸ್ವಾರ್ಥ ಸೇವಾಮನೋಭಾವನೆ, ವೃತ್ತಿ ನೈತಿಕತೆಯಿಂದ ಕೆಲಸ ಮಾಡಬೇಕು. ಸರಕಾರಗಳು ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಹೊಂದಬೇಕು ಮತ್ತು ಇಡೀ ದೇಶದ ಆಡಳಿತ ವ್ಯವಸ್ಥೆ ಹಾಗೂ ನಾಗರಿಕರು ಭ್ರಷ್ಟಾಚಾರದ ವಿರುದ್ಧ ಪಣ ತೊಟ್ಟರೆ ಮಾತ್ರ ಭ್ರಷ್ಟಾಚಾರದ ವಿರುದ್ಧ ಸಫಲತೆಯನ್ನು ಕಾಣಬಹುದಾಗಿದೆ.