Saturday, 14th December 2024

ಆಕಾಶವಾಣಿ ನುಡಿದು ಬಂದ ದಾರಿ: ನೆನಪುಗಳ ಫೇರಿ

ತಿಳಿರು ತೋರಣ

ಶ್ರೀವತ್ಸ ಜೋಶಿ

ಅಲೆಗಳ ರೂಪದಲ್ಲಿ ಉಲಿಯನ್ನು, ಪ್ರತಿ ಉಲಿಯಲ್ಲೂ ಸಂಗೀತ – ಸಾಹಿತ್ಯ – ಸಂಸ್ಕೃತಿಯ ಶ್ರೀಮಂತಿಕೆಯನ್ನು, ಮನ ರಂಜಿಸುವ ಮಾಧುರ್ಯವನ್ನು, ಜ್ಞಾನ – ವಿಜ್ಞಾನಗಳ ಕಣಜವನ್ನು ನಮ್ಮ ಉಡಿಯಲ್ಲಿ ತುಂಬುತ್ತಲೇ ಬಂದಿರುವುದು ಬಾನುಲಿ. ಅದೇ, ಆಕಾಶವಾಣಿ.

‘ನಮ್ಮ ದೇಶ ಅನ್ನೋದು ಒಂದು ದೇಹ ಅಂತಾದ್ರೆ, ಆಕಾಶವಾಣಿಯು ಈ ದೇಹದ ಮನಸ್ಸು’ ಎನ್ನುತ್ತಾರೆ ಕವಿ ಜಯಂತ ಕಾಯ್ಕಿಣಿ. ಅದೂ ಸಂಯುಕ್ತ ಮನಸ್ಸು ಅಂತೆ. ಇಷ್ಟು ದೊಡ್ಡ ದೇಹಕ್ಕೆ (ವಿಶಾಲವಾದ ದೇಶಕ್ಕೆ) ಒಂದೇ ಮನಸ್ಸು ಹೇಗೆ ಸಾಧ್ಯ, ವಿವಿಧತೆಯಲ್ಲಿ ಏಕತೆ ಎಂಬ ಕಲ್ಪನೆಯನ್ನೇ ಬಹುಶಃ ಕಾಯ್ಕಿಣಿಯವರು ಸಂಯುಕ್ತ ಮನಸ್ಸು ಎಂದದ್ದಿರಬಹುದು.

ಅವರ ಪ್ರಕಾರ ಆಕಾಶವಾಣಿಯೆಂದರೆ ಒಂದು ಪವಿತ್ರ ಸ್ಥಳ, ಒಂದು ವಿಶ್ವವಿದ್ಯಾನಿಲಯ. ನಮ್ಮಲ್ಲಿ ‘ರೇಡಿಯೊ ಹುಚ್ಚು’
ಇರುವವರೆಲ್ಲ ಈ ಮಾತುಗಳೆಲ್ಲವೂ ಅಕ್ಷರಶಃ ನಿಜ ಎಂದು ಒಪ್ಪುತ್ತೇವೆ. ಅಂದಹಾಗೆ ಅಲೆಗಳ ರೂಪದ ಉಲಿ ಎಂದು ನಾನಂದಿದ್ದು – ತಾಂತ್ರಿಕವಾಗಿ ರೇಡಿಯೊ ಕಾರ್ಯವೆಸಗುವುದು ಮೀಡಿಯಂ ವೇವ್, ಶಾರ್ಟ್ ವೇವ್, ಅಥವಾ ಆಮೇಲೆ ಹೆಚ್ಚು
ಪ್ರಚಲಿತವಾದ ಎಫ್.ಎಂ(ಫ್ರೀಕ್ವೆನ್ಸಿ ಮಾಡ್ಯುಲೇಷನ್) ಧ್ವನಿ ಕಂಪನಾಂಕಗಳ ರೀತಿಯಲ್ಲಿ ಎಂಬ ಕಾರಣಕ್ಕೆ.

ಈಗಂತೂ ಚರ ದೂರವಾಣಿಗೆಂದು ಇರುವ ನಿಸ್ತಂತು ಸಂಪರ್ಕ ಜಾಲದಲ್ಲೂ, ವೈ-ಫೈಯಲ್ಲೂ, ಆಕಾಶವಾಣಿಯ ಅದೇ ಚುಂಬಕ ಶಕ್ತಿಯುಳ್ಳ ಅಲೆಗಳು. ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್ ಗಳ ದೆಸೆಯಿಂದ ಆಕಾಶವಾಣಿಯು ಈಗ ನಮಗೆಲ್ಲ ‘ಅಂಗೈಯಲ್ಲಿ ಅರಮನೆ’; News On Air ಎಂಬ App ಕೃಪೆಯಿಂದ ಆಕಾಶವಾಣಿ ನಮಗೀಗ ಮತ್ತಷ್ಟು ‘ಆಪ್-ತ’!

ರೇಡಿಯೊ ಬಗೆಗೆ, ಆಕಾಶವಾಣಿಯ ಬಗೆಗೆ, ‘ಬಾರ್‌ಬಾರ್ ಆತೀ ಹೈ ಮುಝಕೋ ಮಧುರ ಯಾದ್ ಬಚಪನ್ ತೇರಿ’ಯಲ್ಲಿ ರೇಡಿಯೊ ಕೂಡ ನಮ್ಮ ಬಾಲ್ಯದ ಸವಿನೆನಪುಗಳೊಂದಿಗೆ ತಳುಕು ಹಾಕಿಕೊಂಡಿರುವ ಬಗೆಗೆ ಆಗಾಗ ಲೇಖನಗಳು ಲಹರಿಗಳು ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ, ಪ್ರಕಟವಾಗುತ್ತಿರುತ್ತವೆ. ಈ ಹಿಂದೆ ನಾಲ್ಕೈದು ಸಲ ನಾನೂ ಬರೆದಿದ್ದೇನೆ. ಇದು ಅಂಥ ಲೇಖನವಲ್ಲ. ಬದಲಿಗೆ, ಆಕಾಶವಾಣಿಯದೇ ಹುಟ್ಟು, ಬಾಲ್ಯ ಹೇಗಿತ್ತು, ಪ್ರೌಢಾವಸ್ಥೆಗೆ ಹೇಗೆ ತಲುಪಿತು, ‘ನುಡಿಯ ಗುಡಿ’ ನಿರ್ಮಿಸಲಿಕ್ಕೆ ನೆರವಾದ ಕಲಿಗಳು ಯಾರು, ಅವರ ಶ್ರಮ ಸಾಹಸಗಳು ಏನು ಎಂಬಿತ್ಯಾದಿ ಅತ್ಯಂತ ಸ್ವಾರಸ್ಯಕರ ಸಂಗತಿಗಳನ್ನೊಳಗೊಂಡ ಕಾರ್ಯಕ್ರಮ ಸರಣಿ, ಆಕಾಶವಾಣಿಯಿಂದಲೇ ಈಗ ವಾರಕ್ಕೊಂದು ಕಂತಿನಂತೆ ಪ್ರಸಾರವಾಗುತ್ತಿರುವ ವಿಚಾರವನ್ನು ನಿಮಗೆ ತಿಳಿಸುವುದಕ್ಕೆ ಈ ಅಂಕಣಬರಹ.

ಜತೆಗೆ, ನಾನು ಈ ಸರಣಿಯನ್ನು ಅದೆಷ್ಟು ಆಸಕ್ತಿಯಿಂದ ಕೇಳುತ್ತಿದ್ದೇನೆ, ಪ್ರತಿ ವಾರ ಕಾದು ಕುಳಿತು ಹದಿನೈದು ನಿಮಿಷ ಅವಧಿಯ ಕಂತಿನಲ್ಲಿ ನೆನಪುಗಳ ಮೆರವಣಿಗೆಯನ್ನು ಯಾವ ಪರಿಯಲ್ಲಿ ಸವಿಯುತ್ತಿದ್ದೇನೆ ಎಂಬ ಸಂತೋಷವನ್ನು ನಿಮ್ಮೊಡನೆ ಹಂಚಿಕೊಳ್ಳುವುದಕ್ಕೆ. ‘ನುಡಿ ತೇರನೆಳೆದವರು – ಬಾನುಲಿ ಕಲಿಗಳು’ ಎಂದು ಈ ಕಾರ್ಯಕ್ರಮ ಸರಣಿಯ ಹೆಸರು. 20 ನವೆಂಬರ್ 2020ರಂದು ಆರಂಭವಾಗಿದ್ದು, ಒಂದು ವರ್ಷವಿಡೀ, ಅಂದರೆ 52 ಕಂತುಗಳಲ್ಲಿ ಪ್ರಸಾರವಾಗಲಿದೆ.

ಬೆಂಗಳೂರು ಆಕಾಶವಾಣಿ ನಿಲಯದಲ್ಲಿ ನಿರ್ಮಾಣವಾಗಿ ರಾಜ್ಯದ ಎಲ್ಲ ಬಾನುಲಿ ನಿಲಯಗಳಿಂದ ಏಕಕಾಲಕ್ಕೆ ಪ್ರತಿ ಶುಕ್ರವಾರ ಬೆಳಗ್ಗೆ ಏಳೂಕಾಲರಿಂದ ಏಳೂವರೆ ತನಕ ಹದಿನೈದು ನಿಮಿಷಗಳ ಪ್ರಸ್ತುತಿ. ಆ ಸಮಯದಲ್ಲಿ ಕೇಳಲು ಸಾಧ್ಯವಾಗದಿದ್ದವರಿಗೆ
ಅದೇ ಕಂತು, ಮಾರನೆಯ ದಿನ ಶನಿವಾರ ಬೆಳಗ್ಗೆ ಒಂಬತ್ತು ಗಂಟೆಗೆ ಬೆಂಗಳೂರಿನ ಎಫ್.ಎಂ ರೈನ್‌ಬೊ ಕನ್ನಡ ಕಾಮನಬಿಲ್ಲು
ವಾಹಿನಿಯಲ್ಲಿ. ಆಗಲೂ ತಪ್ಪಿಹೋದರೆ ಆಮೇಲೆ ಬೆಂಗಳೂರು ಆಕಾಶವಾಣಿಯ ಯುಟ್ಯೂಬ್ ವಾಹಿನಿಯಲ್ಲಿ ಧ್ವನಿಮುದ್ರಣ
ಲಭ್ಯವಿರುತ್ತದೆ. ಭಾರತದಲ್ಲಿ ಶುಕ್ರವಾರ ಬೆಳಗಿನ ಏಳೂಕಾಲು ಅಂದರೆ ನನಗಿಲ್ಲಿ ಅಮೆರಿಕದ ಪೂರ್ವಕರಾವಳಿ ಸಮಯ
ಗುರುವಾರ ರಾತ್ರಿ ಎಂಟೂಮುಕ್ಕಾಲು.

ಊಟ ಮಾಡಿ ಆರಾಮಾಗಿ ಕುಳಿತು ಕೇಳಲಿಕ್ಕೆ ಪ್ರಶಸ್ತ ಸಮಯ. ಈವರೆಗಿನ ಎಂಟು ಕಂತುಗಳನ್ನು ನಿಯತವಾಗಿ ಕೇಳಿದ್ದೇನೆ,
ಮುಂದಿನವನ್ನೂ ಖಂಡಿತ ಕೇಳಲಿದ್ದೇನೆ. ಮಹಾತ್ಮ ಗಾಂಧಿಜಿಯವರ ಅತ್ಯಂತ ನೆಚ್ಚಿನ ‘ವೈಷ್ಣವ ಜನತೋ…’ ಭಜನೆ, ಮತ್ತು 1947ರ ನವೆಂಬರ್ 12ರಂದು ಗಾಂಧಿಜಿಯವರು ಮೊತ್ತಮೊದಲ ಬಾರಿಗೆ ಆಕಾಶವಾಣಿಯ ಮೂಲಕ ಆಡಿದ ಮಾತುಗಳು – ಸರಣಿಯ ಮೊದಲ ಸಂಚಿಕೆಯ ಶುಭಾರಂಭವಾದದ್ದು ಹೀಗೆ.

ಅದು ಗಾಂಧಿಜಿಯವರ ಮೊತ್ತಮೊದಲ ರೇಡಿಯೊ ಭಾಷಣವೇ ಹೊರತು ಆಕಾಶವಾಣಿ ಅದಕ್ಕೂ ಮುಂಚೆ, ಬಹುಶಃ ಒಂದೆರಡು
ದಶಕಗಳಿಗೂ ಮೊದಲೇ, ಕಾರ್ಯರಂಭ ಮಾಡಿತ್ತು. ಮುಂದೆ ಅದೇ ಸಂಚಿಕೆಯಲ್ಲಿ, 1947ರ ಆಗಸ್ಟ್ 15ರಂದು ಭಾರತದ
ಸ್ವಾತಂತ್ರ್ಯವನ್ನು ಘೋಷಿಸುತ್ತ ಪಂಡಿತ್ ಜವಹರಲಾಲ್ ನೆಹರೂ ಮಾಡಿದ್ದ ‘ಎಟ್ ದ ಸ್ಟ್ರೋಕ್ ಆಫ್ ದ ಮಿಡ್‌ನೈಟ್ ಹವರ್,
ವ್ಹೆನ್ ದ ವರ್ಲ್ಡ್ ಸ್ಲೀಪ್ಸ್, ಇಂಡಿಯಾ ವಿಲ್ ಅವೇಕ್ ಟು ಲೈಫ್ ಏಂಡ್ ಫ್ರೀಡಂ…’ ವಿಶ್ವವಿಖ್ಯಾತ ಭಾಷಣದ ತುಣುಕು,
ಆಮೇಲೊಂದು ಕುವೆಂಪು ಅವರ ಸಂದರ್ಶನದ ತುಣುಕು, ‘ನಾಕು ತಂತಿ’ಯ ಬಗ್ಗೆ ಬೇಂದ್ರೆಯವರ ಮಾತಿನ ಝಲಕು, ಕನ್ನಡದ ಕಣ್ಮಣಿ ನಟಸಾರ್ವಭೌಮ ಡಾ.ರಾಜಕುಮಾರ್ ಮಾತುಗಳು ಪಲುಕು… ಎಲ್ಲ ಒಂದೊಂದಾಗಿ ಬರುತ್ತವೆ.

ರೋಮಾಂಚನದಿಂದ ಮೈನವಿರೇಳಲಿಕ್ಕೆ ಅಷ್ಟು ಸಾಕಲ್ಲ? ‘ಇವರೆಲ್ಲರ ಧ್ವನಿಗಳು ಆಕಾಶವಾಣಿಯಲ್ಲಿ ಜೋಪಾನವಾಗಿವೆ…’ ಎನ್ನುವವರು ನಿರೂಪಕಿ ಬಿ.ಕೆ.ಸುಮತಿ. ಆಕಾಶವಾಣಿಯ ಧ್ವನಿಭಂಡಾರದಿಂದ ಆ ಎಲ್ಲ ಧ್ವನಿಗಳನ್ನಾಯ್ದು ಮಾಲೆ ಕಟ್ಟಿ ಸಿಂಗರಿಸಿದವರು ಅವರು. ಇಡೀ ಸರಣಿಯ ಪರಿಕಲ್ಪನೆ, ನಿರೂಪಣಾ ಸಾಹಿತ್ಯ, ಮತ್ತು ನಿರ್ಮಾಣ ಸಾರಥ್ಯ ಅವರದೇ. ಜತೆಯಲ್ಲೊಂದು ಸಮರ್ಥ ತಂಡ ಇರುತ್ತದೆನ್ನಿ.

ಆಕಾಶವಾಣಿಯ ಬೆಂಗಳೂರು ಕೇಂದ್ರದಲ್ಲಿ ಹಿರಿಯ ಉದ್ಘೋಷಕಿಯಾಗಿರುವ ಬಿ.ಕೆ.ಸುಮತಿ, ಕೆಲ ತಿಂಗಳ ಹಿಂದೆ ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದೆಲ್ಲೆಡೆಯ ರೇಡಿಯೊ – ನಿರೂಪಕ ರೊಂದಿಗೆ ಲೈವ್ ಇಂಟರಾಕ್ಷನ್ ನಡೆಸಿದ್ದಾಗ ಕರ್ನಾಟಕವನ್ನು ಪ್ರತಿನಿಧಿಸಿದವರು. ಆಕಾಶವಾಣಿಯಲ್ಲಿ ಸುದೀರ್ಘ ಸೇವೆಯ ಅನುಭವ ಅವರಿಗಿದೆ. ಹಿಡಿದ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ, ಮನಸ್ಸು ಮತ್ತು ಹೃದಯವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮಾಡುವುದು ಅವರ ರಕ್ತಗುಣ ಇರಬೇಕೆನ್ನುವುದು ಸುಲಭದಲ್ಲೇ ಗೊತ್ತಾಗುತ್ತದೆ.

ಆದರೆ ಪ್ರತಿಭೆ ಮತ್ತು ಅದಮ್ಯ ಉತ್ಸಾಹಗಳಷ್ಟೇ ಸಾಲದು. ಆಕಾಶವಾಣಿಯಂಥ ಸರಕಾರಿ ಸಂಸ್ಥೆಯ ವಾತಾವರಣದಲ್ಲಿ ಈ
ರೀತಿಯ ಸೃಜನಾತ್ಮಕ ಕಾರ್ಯಕ್ರಮ ನಿರ್ಮಾಣಕ್ಕೆ ಬೇಕಾಗುವ ತಾಳ್ಮೆ ಛಲಗಳ ಪ್ರಮಾಣವೂ ಹಿರಿದು. ‘ನಮಸ್ಕಾರ. ನಾನು ರಮೇಶ್ ಅರವಿಂದ್ ಮಾತಾಡ್ತಾ ಇದ್ದೀನಿ. ಮಾಧ್ಯಮಗಳಲ್ಲಿ ವಿಶಿಷ್ಟ ಸ್ಥಾನ ಆಕಾಶವಾಣಿಯದು. ಕನ್ನಡ ಭಾಷೆಗೆ, ಸಂಸ್ಕೃತಿಗೆ, ಕಲೆಗೆ ಆಕಾಶವಾಣಿಯ ಕೊಡುಗೆ ದೊಡ್ಡದು. ಅನೇಕ ಕಲಾವಿದರನ್ನು ಆಕಾಶವಾಣಿ ರೂಪಿಸಿದೆ, ಬೆಳೆಸಿದೆ, ನನ್ನನ್ನು ಕೂಡ. ನನ್ನನ್ನು ಪ್ರಪಂಚಕ್ಕೆ ಪರಿಚಯ ಮಾಡಿದ್ದೇ ಆಕಾಶವಾಣಿ. ಈ ಹಿನ್ನೆಲೆಯಲ್ಲಿ ಪ್ರಸಾರಕರ ಪಾತ್ರ ದೊಡ್ಡದು.

ಇದುವರೆಗೂ ಸರಿಯಾದ ವ್ಯವಸ್ಥಿತ ರೀತಿಯಲ್ಲಿ ಆಕಾಶವಾಣಿಯ ಪ್ರಸಾರಕರ ಕೊಡುಗೆ ದಾಖಲಾಗಿಲ್ಲ. ಅಂತಹ ಕೆಲಸ ಈ ‘ನುಡಿತೇರನೆಳೆದವರು ಬಾನುಲಿ ಕಲಿಗಳು’ ಸರಣಿಯಲ್ಲಿ ಆಗುತ್ತಿದೆ. ಇದಕ್ಕೆ ಶುಭವಾಗಲಿ’ ಎಂದು ಕನ್ನಡ ಚಿತ್ರರಂಗದ ಸದಭಿರುಚಿಯ ನಟ, ನಿರ್ದೇಶಕ ರಮೇಶ್ ಅರವಿಂದ್ ಮಾತುಗಳನ್ನು ಕೇಳುವಾಗ ತುಂಬ ಖುಷಿ ಯಾಗುತ್ತದೆ. ಆಮೇಲೆ ಸರಣಿಯ ಉದ್ದೇಶ – ಆಶಯಗಳ ನಿಖರವಾದ ಪರಿಚಯ ನೀಡುತ್ತ ಆಕಾಶವಾಣಿ ಬೆಂಗಳೂರು ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಡಾ. ನಿರ್ಮಲಾ ಎಲಿಗಾರ್ ಮಾತನಾಡುತ್ತಾರೆ: ‘ಬಾನುಲಿ ಪ್ರಸಾರದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಸಮಾಜಕ್ಕೆ ಹೆಣೆದು ಪೋಣಿಸುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ.

ನಿರ್ದೇಶಕರಾಗಿ, ನಿರೂಪಕರಾಗಿ, ನಿರ್ಮಾಪಕರಾಗಿ, ಉದ್ಘೋಷಕರಾಗಿ, ವರದಿಗಾರರಾಗಿ ಹೀಗೆ ಹಲವು ವಲಯಗಳಲ್ಲಿ ಸುದೀರ್ಘ ಸಾರ್ಥಕ ಸೇವೆ ಸಲ್ಲಿಸಿದ ಬಾನುಲಿ ಕಲಿಗಳನ್ನು ಇಲ್ಲಿ ನಾಯಕರಾಗಿ ಮೂಡಿಸಲಾಗುತ್ತದೆ. ಅನೇಕ ಸ್ವಾರಸ್ಯಕರ ದಾಖಲಾರ್ಹ ವಿಚಾರಗಳು ಇಲ್ಲಿ ಬರಲಿವೆ.’ ತದನಂತರ ಸರಣಿಯ ಪ್ರಾಯೋಜಕರಾಗಿ ಆಕಾಶವಾಣಿಯೊಡನೆ ಕೈಜೋಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ ಅವರಿಂದ ಶುಭಾಶಂಸನೆಯ ಮಾತುಗಳು ಕೇಳಿಬರುತ್ತವೆ.

ಕೊನೆಯಲ್ಲಿ 52 ಕಂತುಗಳಲ್ಲಿ ಮೂಡಿಬರುವ ಈ ಮಾಲಿಕೆಯಲ್ಲಿ ಕನ್ನಡ ಪ್ರಸಾರಕರ ನುಡಿ ಚಿತ್ರಾವಳಿ ಮನದಂಗಳದಲ್ಲಿ ಮೂಡಲಿದೆ. ಧ್ವನಿ ಭಂಡಾರದ ಅಮೂಲ್ಯ ಕಾರ್ಯಕ್ರಮಗಳು, ಪ್ರಸಾರದ ರಸಘಳಿಗೆಗಳು, ಪ್ರಸಾರಕರ ಮಾತು, ಕಲಾವಿದರ ಮಾತು ಸೇರಿ ಹೃದಯದ ಹಾಡಾಗಲಿದೆ’  ಎಂಬ ನಿರೂಪಣೆಯೊಂದಿಗೆ ಮೊದಲ ಸಂಚಿಕೆ ಮುಕ್ತಾಯವಾಗುತ್ತದೆ. ಅದೊಂಥರ ಕರ್ಟೇನ್ ರೈಸರ್ ಅಥವಾ ಇಡೀ ಸರಣಿಯ ಪಕ್ಷಿನೋಟ ಇದ್ದಹಾಗೆ.

ಆ ದೃಷ್ಟಿಯಿಂದ, ಸರಣಿಯ ನಿಜವಾದ ಆರಂಭ ಆಗುವುದು ಎರಡನೆಯ ಸಂಚಿಕೆಯಲ್ಲಿ. ‘1934-35ರ ಸಮಯ. ಹತ್ತು
ವರ್ಷದ ಬಾಲಕ ಶಿಶುಗೀತೆಯೊಂದನ್ನು ಧ್ವನಿವರ್ಧಕದಲ್ಲಿ ಹಾಡಿದ, ತೊದಲುತ್ತ ಹೆದರುತ್ತ. ಅವನು ಮನೆಯಲ್ಲಿ ಹಾಡಿದ್ದು
ಸುತ್ತಮುತ್ತ ಎರಡು – ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಟ್ರಾನ್ಸ್‌ಮೀಟರ್ ಮೂಲಕ ಪ್ರಸಾರವಾಯಿತು. ಆಗ ಸಕ್ಸೆಸ್!
ಯುರೇಕಾ!! ಅಂತ ಹರ್ಷದಿಂದ ಉದ್ಗಾರ ಮಾಡಿದ್ದು ಪ್ರೊಫೆಸರ್ ಎಂ.ವಿ. ಗೋಪಾಲಸ್ವಾಮಿ ಅವರು. ಲಂಡನ್‌ನಲ್ಲಿ
ಪಿಎಚ್‌ಡಿ ಮಾಡಿ ಮೈಸೂರಿಗೆ ಹಿಂದಿರುಗಿದಾಗ ಅಲ್ಲಿಂದ ಅವರು ತಂದಿದ್ದು ಸಣ್ಣದೊಂದು ಟ್ರಾನ್ಸ್‌ಮಿಟರ್.

ಜಗದೀಶ ಎಂಬ ಎಂಜಿನಿಯರ್ ಸ್ನೇಹಿತನ ಸಹಾಯದಿಂದ ಒಂದು ಕಂಬ ನೆಡಿಸಿ, ಆಂಟೆನಾ ಹಾಕಿಸಿ, ಮಗನಿಂದಲೇ ಪದ್ಯ ಹಾಡಿಸಿ ಪ್ರಯೋಗ ಮಾಡೇಬಿಟ್ಟರು…’ – ಮೈಸೂರಿನಲ್ಲಿ ಎಂ.ವಿ.ಗೋಪಾಲಸ್ವಾಮಿಯವರು ಖಾಸಗಿಯಾಗಿ ಮೊತ್ತಮೊದಲ
ಬಾರಿಗೆ ರೇಡಿಯೊ ಪ್ರಸಾರ ಆರಂಭಿಸಿದ, ಆಮೇಲೆ ಅದಕ್ಕೆ ‘ಆಕಾಶವಾಣಿ’ ಎಂಬ ಹೆಸರನ್ನಿಟ್ಟ ಜನಜನಿತ ಕಥೆ ಅದು. ಆಗ
ರೇಡಿಯೊ ರಿಸೀವರ್‌ಗಳು ಮನೆಮನೆಗಳಲ್ಲೇನೂ ಇರುತ್ತಿರಲಿಲ್ಲ.

ಪಾರ್ಕ್‌ನಲ್ಲಿ ಒಂದು ಸೆಟ್ ಇಟ್ಟು ಅಲ್ಲೇ ಜನರು ಸೇರಿ ಕಾರ್ಯಕ್ರಮ ಆಲಿಸುವುದು. ಅಂತೂ ಭಾರತದಲ್ಲಿ ರೇಡಿಯೊ
ಪ್ರಸಾರದ ಪಿತಾಮಹನೆಂಬ ಖ್ಯಾತಿ ಗೋಪಾಲಸ್ವಾಮಿ ಯವರದು. ಅವರ ಮೊಮ್ಮಗಳು, ಪತ್ರಕರ್ತೆ ಭಾರತಿ ಘನಶ್ಯಾಮ್ ತನ್ನ ತಾತನ ಸಾಹಸಗಳನ್ನು ವಿವರಿಸುತ್ತಾರೆ: ‘ರೇಡಿಯೊ ಕಾರ್ಯಕ್ರಮ ನಡೆಸಲು ಕಲಾವಿದರಿಗೆ ಕುದುರೆಗಾಡಿ ಕಳುಹಿಸಿ ಕರೆಸು ತ್ತಿದ್ದರು. ಸಂಭಾವನೆ ಕೊಡಲಿಕ್ಕೆ ದುಡ್ಡಿಲ್ಲ. ಅಜ್ಜಿ ಮಾಡುತ್ತಿದ್ದ ಉಪ್ಪಿಟ್ಟು ಮತ್ತು ಕಾಫಿಯೇ ಸಂಭಾವನೆ. ಹೆಂಗಸರಿಗಾದರೆ ತಾಂಬೂಲ ಸಹ ಕೊಟ್ಟು, ಟಾಂಗಾದಲ್ಲೇ ಕಳುಹಿಸಿಕೊಡುತ್ತಿದ್ದರು. ತಾತನಿಗೆ ಆ ರೇಡಿಯೊ ಪ್ರಸಾರ ಒಂದು ಹವ್ಯಾಸವಷ್ಟೇ ಆಗಿದ್ದರೂ ತಾದಾತ್ಮ್ಯದಿಂದ ಮಾಡುತ್ತಿದ್ದರು.’

ಆರೇಳು ವರ್ಷ ಕಾಲ ಸ್ವಂತ ಖರ್ಚಿನಿಂದ ಆಕಾಶವಾಣಿ ನಿಲಯವನ್ನು ನಡೆಸಿದ ಗೋಪಾಲಸ್ವಾಮಿಯವರು ಆಮೇಲೆ ಅದನ್ನು ಮೈಸೂರು ನಗರಪಾಲಿಕೆಗೆ ವಹಿಸಿಕೊಟ್ಟರು. ಅದರ ಬಳಿಕ ಮೈಸೂರು ಮಹಾರಾಜರ ಸರ್ಕಾರದ ನಿರ್ವಹಣೆಗೆ ಸೇರಿತು. ಆಮೇಲೆ ಭಾರತ ಸರಕಾರದ ಸ್ವಾಮ್ಯಕ್ಕೆ ಪ್ರಸಾರವ್ಯವಸ್ಥೆ ಒಳಪಟ್ಟಿತು. ‘ಮೈಸೂರಿನ ಯಾದವಗಿರಿಯಿಂದ ಹೊರಟ ಗೋಪಾಲನ ಗಗನಗಾನ ರೇಡಿಯೊ ಯಾನವಾಯಿತು. ಆಕಾಶವಾಣಿಯಾಗಿ ಇಡೀ ಭಾರತವನ್ನು ಆವರಿಸಿತು…’ ಎಂಬ ವಾಕ್ಯವನ್ನು ಕೇಳಿದಾಗ ಕನ್ನಡಿಗರಿಗೆಲ್ಲ ಹೆಮ್ಮೆ ಅನಿಸಬೇಕಾದ್ದೇ.

ಗೋಪಾಲಸ್ವಾಮಿಯವರೊಂದಿಗೆ ನಾ.ಕಸ್ತೂರಿ ಮತ್ತು ಎ.ಎನ್.ಮೂರ್ತಿ ರಾಯರೂ ನುಡಿತೇರನೆಳೆದವರು. ಅವರೊಂದಿಗೆ ಇನ್ನೂ ಅನೇಕರು ಮೈಸೂರು ಆಕಾಶವಾಣಿಯ ಮಹಾಕಲಿಗಳು. ಆಮೇಲೆ 1955 ನವೆಂಬರ್ 2ರಂದು ಬೆಂಗಳೂರು ಆಕಾಶ ವಾಣಿಯ ಆರಂಭ. ಅದಕ್ಕೆ ಮೊದಲೇ 1950ರ ಜನವರಿ 8ರಂದು ಧಾರವಾಡ ನಿಲಯದ ಆರಂಭ. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು…’ ಹಾಡನ್ನು ಆ ದಿನ ವೇದಿಕೆಯಲ್ಲಿ ಪಂಡಿತ್ ಭೀಮಸೇನ ಜೋಶಿ, ಕೃಷ್ಣಾ ಹಾನಗಲ್ ಮತ್ತು ಶಾರದಾ ಹಾನಗಲ್ ಸೇರಿ ಪ್ರಸ್ತುತಪಡಿಸಿದ್ದರಂತೆ.

ಆಮೇಲೆ ವರಕವಿ ಡಾ.ದ.ರಾ.ಬೇಂದ್ರೆಯವರಿಂದ ಕವನ ವಾಚನ. ಮೊದಲ ಉದ್ಘೋಷಣೆ ಎಚ್.ಕೆ.ರಂಗನಾಥ್ ಅವರಿಂದ. 1965 ಜನವರಿಯಲ್ಲಿ ಭದ್ರಾವತಿ ಕೇಂದ್ರದ ಆರಂಭ. ಮರುವರ್ಷವೇ ಕಲ್ಬುರ್ಗಿ ಕೇಂದ್ರದ ಸ್ಥಾಪನೆ. 1976 ಡಿಸೆಂಬರ್‌ನಲ್ಲಿ ಮಂಗಳೂರು ಆಕಾಶವಾಣಿ ಆರಂಭಗೊಂಡಿತು. ಶಿವರಾಮ ಕಾರಂತರ ಧ್ವನಿವೈವಿಧ್ಯ, ಕದ್ರಿ ಗೋಪಾಲನಾಥರ ಸ್ಯಾಕ್ಸೊಫೋನ್ ಮಾಧುರ್ಯ ಸೇರಿದಂತೆ, ತುಳು ಮತ್ತು ಕೊಂಕಣಿ ಭಾಷೆಗಳೂ ರೇಡಿಯೊದಲ್ಲಿ ಮೊಳಗಲಾರಂಭಿಸಿದವು.

ಕನ್ನಡದ ಶ್ರೇಷ್ಠ ಕವಿಗಳ ರಚನೆಗಳಿಗೆ ಸ್ವರ ಜೋಡಿಸಿ ಅಕ್ಷರಗಳನ್ನು ಸಂಗೀತವನ್ನಾಗಿಸಿದ ಮಾಂತ್ರಿಕ, ಆಕಾಶವಾಣಿಯ ಹಿರಿಯ ಸಂಗೀತ ಪ್ರಸಾರಕ, ಕಲಾವಿದ ಪದ್ಮಚರಣ್ ಅವರಿಗೇ ಒಂದು ಇಡೀ ಸಂಚಿಕೆ. ಅವರ ಜನ್ಮಶತಮಾನೋತ್ಸವಕ್ಕೊಂದು ಮೆರುಗು. ಆಕಾಶವಾಣಿಯಲ್ಲಿ ಅವರದು 30 ವರ್ಷಗಳ ಸುದೀರ್ಘ ಸೇವೆ. ಅವರು ನಿರ್ಮಿಸಿದ ಸಂಗೀತರೂಪಕಗಳು ಅನೇಕ. ಹಾಗೆಯೇ ಇನ್ನೊಂದು ಸಂಚಿಕೆ, ಬಾನುಲಿ ನಾಟಕ ರಂಗಭೂಮಿ ಸಾಹಿತ್ಯ ಸಂಗೀತ ಎಲ್ಲ ಪ್ರಕಾರಗಳಲ್ಲಿ ಪ್ರಭುತ್ವವಿದ್ದ ಘನತೆವೆತ್ತ ವಿದ್ವಾಂಸ, ಆಕಾಶವಾಣಿಯಲ್ಲಿ ನೂರಾರು ನಾಟಕ – ರೂಪಕಗಳನ್ನು ನಿರ್ಮಿಸಿ ನಿರ್ದೇಶಿಸಿದ, ಸಾವಿರಾರು ಕಲಾವಿದರನ್ನು ತಿದ್ದಿ ರೂಪಿಸಿದ ಡಾ.ವಸಂತ ಕವಲಿ ಅವರ ಬಗ್ಗೆ.

ಕವಲಿಯವರ ಶಿಸ್ತು ಮತ್ತು ವೃತ್ತಿಪರತೆ ಹೇಗಿದ್ದವೆಂದು ಅವರ ಜತೆ ದುಡಿದಿದ್ದ ಇತರ ಕಲಾವಿದರಿಂದ ಸ್ಮರಣೆ. ಘನಾನಂದ
ನಾಟಕದಲ್ಲಿ ಕವಲಿಯವರದೇ ನಾಯಕನ ಪಾತ್ರ. ನಾಯಕಿಯ ಪಾತ್ರಧಾರಿಯು ನಾಯಕನನ್ನು ‘ಘನಾನಂದ ಜೀ’ ಎಂದು
ಸಂಬೋಧಿಸಬೇಕು. ಅವರು ನಾಲಗೆ ತಡವರಿಸಿ ‘ಗನಾನಂದಜೀ’  ಎಂದುಬಿಟ್ಟರಂತೆ.

ಆಗ ‘ಹೇಳು ಪ್ರಾಣೇಶ್ವರೀ…’ ಎಂದುತ್ತರಿಸಬೇಕಿದ್ದ ನಾಯಕ ‘ಹೇಳು ಅಲ್ಪಪ್ರಾಣೇಶ್ವರೀ…’ ಎಂದು ಆ ಪಾತ್ರಧಾರಿಯನ್ನು ಮಾತಲ್ಲೇ ತಿವಿದ ಪ್ರಸಂಗ. ಅಷ್ಟೂ ಕಟ್ಟುನಿಟ್ಟು. ಮತ್ತೊಂದು ಸಲ ಎರಡು ಗಂಟೆಗೆ ನಾಟಕ ರಿಹರ್ಸಲ್ ಶುರು ಎಂದು ನಿಗದಿ ಪಡಿಸಿದ್ದಾಗ ಐದು ನಿಮಿಷ  ತಡವಾಗಿ ಬಂದ ಹಿರಿಯ ಕಲಾವಿದೆಯೊಬ್ಬರಿಗೆ ‘ನಿಮಗೆ ಈ ನಾಟಕದಲ್ಲಿ ಪಾತ್ರವಿಲ್ಲ. ಹೊರಡಿ’ ಎಂದು ಖಡಾಖಂಡಿತ ಹೇಳಿದ್ದರಂತೆ. ಆ ಶಿಸ್ತು, ಕಾಠಿಣ್ಯ ಎಲ್ಲವೂ ಕೆಲಸದಲ್ಲಿ ಪರಿಪೂರ್ಣತೆಗಾಗಿ ಮಾತ್ರ.

ವ್ಯಕ್ತಿಗತವಾಗಿ ಬಲು ಮೃದು ಸ್ವಭಾವ. ವಿಪುಲವಾದ ವಿನೋದಪ್ರಜ್ಞೆ. ಒಂದು ಕಿಡ್ನಿಯನ್ನು ತೆಗೆಸಬೇಕಾಗಿ ಬಂದಮೇಲೆ ಕವಲಿಯವರು ‘ಶ್ರೀರಾಮ ಏಕಪತ್ನೀವ್ರತಸ್ಥ, ನಾನು ಏಕಕಿಡ್ನೀವ್ರತಸ್ಥ’ ಎಂದು ಹಾಸ್ಯಚಟಾಕಿ ಹಾರಿಸುತ್ತಿದ್ದರಂತೆ. ಮತ್ತೊಂದು ಸಂಚಿಕೆ ಎಚ್.ಕೆ.ರಂಗನಾಥ್ ಅವರ ಬಗ್ಗೆ. ‘ರಂಗಭೂಮಿಗೆ ಭೂಷಣ, ಸಂಶೋಧನೆಗೆ ಭೂಷಣ, ನುಡಿನೈಪುಣ್ಯ ಕಲೆಗಾರಿಕೆಗೆ ಭೂಷಣ, ಭೂಷಣಕೆ ಭೂಷಣ ಭಾಷಣಕೆ ಭಾಷಣ ಡಾ.ಎಚ್.ಕೆ.ರಂಗನಾಥ್’ ಎಂದು ಪರಿಚಯದ ನಿರೂಪಣೆ. ಎಚ್.ಕೆ ರಂಗನಾಥ್ ನೋಡಲಿಕ್ಕೆ ಸುಂದರ, ಹಾಸ್ಯಪ್ರಿಯ.

ಆದರೆ ಕೆಲಸದ ವಿಚಾರಕ್ಕೆ ಬಂದಾಗ ಶಿಸ್ತಿನ ಸಿಪಾಯಿ. ತಾಲೀಮುಗಳಿಗೆ ತಡವಾಗಿ ಬಂದವರ ಕಾಂಟ್ರಾಕ್ಟ್‌ಅನ್ನೇ ಹರಿದು ಬಿಸಾಡು ತ್ತಿದ್ದರಂತೆ. ಕಾರ್ಯಕ್ರಮದ ಗುಣಮಟ್ಟಕ್ಕೆ, ಉತ್ಕೃಷ್ಟತೆಗೆ ಅವರು ಎಷ್ಟು ಮಹತ್ವ ಕೊಡುತ್ತಿದ್ದ ರೆಂಬುದಕ್ಕೆ ಸಾಕ್ಷಿ ಯದು. ಸಹೋದ್ಯೋಗಿ ಮತ್ತು ಪತ್ನಿ ಶಾಂತಿಯವರ ಮಾತುಗಳಲ್ಲಿ ಅವರ ವ್ಯಕ್ತಿಚಿತ್ರಣ ಸೊಗಸಾಗಿ ಬಂದಿದೆ. ಇನ್ನೊಂದು ಸಂಚಿಕೆಯಲ್ಲಿ ಡಾ. ವಿ. ದೊರೆಸ್ವಾಮಿ ಐಯಂಗಾರರು ಆಕಾಶವಾಣಿಯಲ್ಲಿ ಸಂಗೀತ ಕಲಾವಿದರಾಗಿ ಸಲ್ಲಿಸಿದ ಸೇವೆಯ ಸ್ಮರಣೆ. ಅವರ ಸರಳ ಜೀವನ, ವಯಸ್ಸಿನಲ್ಲಿ ತೀರ ಚಿಕ್ಕವರನ್ನೂ ಬಹುವಚನದಿಂದ ಕರೆಯುವ ಸೌಜನ್ಯ, ಕಾರ್ಯಕ್ರಮಕ್ಕೆ ಒದಗಿಸಿದ ಸಂಗೀತ ನಿರೀಕ್ಷಿತ ಮಟ್ಟದಲ್ಲಿಲ್ಲ ವೆಂದೆನಿಸಿದರೆ ಮತ್ತೆ ಮನೆಗೆ ಹೋಗಿ ಹೊಸದಾಗಿ ರೆಕಾರ್ಡ್ ಮಾಡಿ ಕಳಿಸುವಷ್ಟರ ಮಟ್ಟಿಗೂ ಇದ್ದ ವೃತ್ತಿನಿಷ್ಠೆ.

ಕಳೆದ ವಾರ ಪ್ರಸಾರವಾದ ಸಂಚಿಕೆಯಲ್ಲಿ ಯಮುನಾ ಮೂರ್ತಿಯವರ ಪ್ರತಿಭೆಯ, ಅವರು ನಿರ್ಮಿಸಿದ ರೇಡಿಯೊ  ನಾಟಕ ಗಳಲ್ಲಿನ ವಿಶಿಷ್ಟ ವಿನೂತನ ಪ್ರಯೋಗಗಳ ಗುಣಗಾನ. ‘ಯಾರ ಬಗ್ಗೆನೂ ನಾನು ಅವರ ಹಿನ್ನೆಲೆ, ಜಾತಿ ಮುಂತಾದವುಗಳ ವಿಚಾರವಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅಕಸ್ಮಾತ್ ಏನೋ ಒಂದು ಕೆಟ್ಟದನ್ನು ಮಾಡಿದ್ದಾರಂತಿದ್ದರೂ ಅದನ್ನೆಲ್ಲ ನನ್ನ ಮನಸ್ಸಿನಿಂದ ಅಳಿಸಿಬಿಡುತ್ತೇನೆ.

ಆ ರೀತಿಯ ಜೀವನ ನಡೆಸಿದ್ದರಿಂದಲೇ 86 ವರ್ಷಗಳಾದರೂ ಇಷ್ಟು ಆರೋಗ್ಯವಾಗಿ ಖುಷಿಯಿಂದಿದ್ದೇನೆ’ ಎಂಬ ಅವರ ಮಾತು ಗಳು! ನಿಜವಾಗಿಯೂ ಎಂಥೆಂಥ ಮೇರು ವ್ಯಕ್ತಿತ್ವಗಳು ಆಕಾಶವಾಣಿಯನ್ನು ಸಮೃದ್ಧಗೊಳಿಸಿವೆ ಎಂದು ಎಲ್ಲ ಬಾನುಲಿ ಕಲಿಗಳ ಬಗ್ಗೆ ಗೌರವಾದರ ಮೂಡಿಸುತ್ತದೆ ಈ ಸರಣಿ. ನೀವೂ ತಪ್ಪದೆ ಕೇಳಿ ಆನಂದಿಸಿ. ವಾರಕ್ಕೊಮ್ಮೆ ಹದಿನೈದು ನಿಮಿಷ ಸಮಯದ ಅರ್ಥಪೂರ್ಣ ಸದುಪಯೋಗ. ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲ ವಿನಿಯೋಗ.