ಅಭಿಮತ
ಆದರ್ಶ್ ಶೆಟ್ಟಿ ಉಪ್ಪಿನಂಗಡಿ
ರಾಜಕಾರಣವೆಂಬುವುದೊಂದು ಕಲೆ. ಕೆಲಮಂದಿಗೆ ಹುಟ್ಟಿನಿಂದಲೇ ಪಾರಂಪರ್ಯವಾಗಿ ರಾಜಕಾರಣದ ಕಲೆ ಕರಗತವಾಗಿದ್ದರೆ, ಮತ್ತೆ ಕೆಲವರಿಗೆ ಕಣಕ್ಕಿಳಿದ ಬಳಿಕ ಅರಿವಾಗುತ್ತದೆ.
ಎಲ್ಲರಿಗೂ ರಾಜಕಾರಣ ಮಾಡಲು ಬರುವುದಿಲ್ಲ. ರಾಜಕಾರಣದಲ್ಲಿ ಮಿಂದೆದ್ದು ಮೇಲೆ ಬರುವುದೆಂದರೆ ಬಹುದೊಡ್ಡ ಸಾಹಸವೇ ಸರಿ. ಏಕೆಂದರೆ ಈ ವ್ಯವಸ್ಥೆಯಲ್ಲಿ ಅಷ್ಟರಮಟ್ಟಿಗೆ ಕಾಳೆಲೆಯುವ ಪ್ರವೃತ್ತಿ ತುಸು ಹೆಚ್ಚೇ ಇದೆ. ಸಂಘಟನೆ, ಪರಿಶ್ರಮ,
ಹೋರಾಟ, ತ್ಯಾಗ, ಸೋಲು, ಗೆಲುವುಗಳು ರಾಜಕಾರಣದ ಮೆಟ್ಟಿಲೆಂದರೂ ತಪ್ಪಾಗಲಾರದು. ಐದು ವರ್ಷಗಳ ಅಂತರದಲ್ಲಿ ಹಲವಾರು ಚುನಾವಣೆಗಳು ನಮ್ಮ ಕಣ್ಣೆದುರು ಹಾದು ಹೋಗುತ್ತವೆ. ಅವು ಲೋಕಸಭೆ, ವಿಧಾನಸಭೆ, ಜಿ.ಪಂ, ತಾ.ಪಂ ಅಥವಾ ಸ್ಥಳೀಯ ಸಂಸ್ಥೆ ಚುನಾವಣೆಗಳೇ ಇರಬಹುದು. ಇವುಗಳ ಮಧ್ಯೆ ಪಕ್ಷಾಂತರ, ಬಂಡಾಯ, ತಟಸ್ಥ, ಬಹಿಷ್ಕಾರ, ಆಮಿಷಗಳು, ಜಾತಿ ರಾಜಕಾರಣ, ಆರೋಪ ಪ್ರತ್ಯಾರೋಪ, ಅನುಕಂಪ, ಭಾವನಾತ್ಮಕತೆ ಮುಂತಾದ ವಿಚಾರಗಳು ಮುನ್ನಲೆಗೆ ಬಂದು ಈ ವಿಷಯಗಳು ಸಾಕಷ್ಟು ಕೆಲಸ ಮಾಡುತ್ತದೆ.
ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ರಾಜಕಾರಣದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿ, ಪಾರದರ್ಶಕವಾದ ಆಳ್ವಿಕೆ ನಡೆಸು ತ್ತೇವೆ ಎಂಬ ಆಶ್ವಾಸನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿದೆಯೆಂದರೆ ಶೇ.20 ಅಥವಾ 25ರಷ್ಟು ಮಾತ್ರ ಪರಿಗಣಿಸ ಬಹುದು. ಆ ವ್ಯವಸ್ಥೆಗೆ ಇಳಿದ ಬಳಿಕ ಕಮಿಷನ್, ಹಣದ ಮೋಹಕ್ಕೆ ಸಿಲುಕಿ ತನ್ನಿಂದ ತಾನೇ ಪರಮ ಭ್ರಷ್ಟರಾಗಿ ತನ್ನ ಕ್ಷೇತ್ರದ ಅಭಿವೃದ್ಧಿಯನ್ನು ಮರೆತು ಸ್ವಾಹಕಾರದ ತೊಡಗಿರುತ್ತಾರೆ.
ಇಂತಹ ಪ್ರವೃತ್ತಿಗಳು ದೂರದಿಂದ ನೋಡುವ, ರಾಜಕಾರಣದ ಒಳಸುಳಿಯನ್ನು ಅರಿಯದ, ಚುನಾವಣಾ ಸಂದರ್ಭ ಕೇವಲ ಮತವನ್ನಷ್ಟೇ ಚಲಾಯಿಸುವ ಮತದಾರ ವರ್ಗಕ್ಕೆ ರಾಜಕಾರಣವೆಂದರೆ ಮೂರು ಬಿಟ್ಟ ವ್ಯವಸ್ಥೆಯೆಂದು ಅನೇಕ ಬಾರಿ ಮಾತ ನಾಡಿದ್ದೂ ಇದೆ. ರಾಜಕಾರಣದಲ್ಲಿ ಯಾವುದೇ ಒಂದು ಪಕ್ಷಕ್ಕೆ ಅದರದ್ದೇ ಆದ ಸಿದ್ಧಾಂತ, ವೈಚಾರಿಕತೆ, ತತ್ತ್ವಗಳಿದೆ. ಒಂದು ಕುಟುಂಬದ ಸದಸ್ಯರ ಪೈಕಿ ಒಬ್ಬ ಒಂದು ಪಕ್ಷದಲ್ಲಿ ಜವಾಬ್ದಾರಿ ಹೊಂದಿದ್ದರೆ, ಅಥವಾ ಆ ವ್ಯಕ್ತಿ ಒಂದು ಪಕ್ಷದ ಅಭ್ಯರ್ಥಿ ಯಾಗಿದ್ದರೆ, ಆತನ ಸೋದರ ಸಂಬಂಧಿಯೋ ಅಥವಾ ಇನ್ಯಾರೋ ಮತ್ತೊಂದು ಪಕ್ಷದಲ್ಲಿ ಸಕ್ರೀಯನಾಗಿ ಚುನಾವಣೆಗೆ ಸ್ಪರ್ಧಿಸಿದ್ದರೆ, ಈ ಪಕ್ಷಗಳ ತಿಕ್ಕಾಟದಲ್ಲಿ ಸಂಬಂಧ, ಕುಟುಂಬಗಳು ಒಡೆಯುವಂತಾಗಬಾರದು.
ಸ್ಪರ್ಧೆ, ಹಣಾಹಣಿಗಳು ಏನಿದ್ದರೂ ಚುನಾವಣೆಗೆ ಸೀಮಿತವಾಗಿ ಆಯಾಯ ಪಕ್ಷಕ್ಕೆ ಬದ್ಧರಾಗಿರಬೇಕೇ ಹೊರತು ರಾಜಕಾರಣ ವೆಂಬುವುದು ವೈಯಕ್ತಿಕ ತಿಕ್ಕಾಟಕ್ಕೆ ವೇದಿಕೆಯಾಗಬಾರದು. ಚುನಾವಣೆಗಳು ಮುಗಿದಾಕ್ಷಣ ಇತ್ತಂಡಗಳ ಮಧ್ಯೆ ಮಾರಾಮಾರಿ, ಕಲ್ಲು ತೂರಾಟ, ಘರ್ಷಣೆ, ಆಸ್ಪತ್ರೆಗೆ ದಾಖಲು ಎಂಬಿತ್ಯಾದಿ ವಾರ್ತೆಗಳು ಮಾಮೂಲೆನಿಸಿದೆ. ಇವಲ್ಲದೆ ಅಪಪ್ರಚಾರ, ಟೀಕೆಗಳು ಕೂಡ ಸಂಬಂಧಗಳನ್ನು ಹಳಸಿಬಿಡುತ್ತವೆ. ಮತ್ತೆ ಕೆಲ ಬಾರಿ ಚುನಾವಣೆ ಸ್ಪರ್ಧಿಸಿದ ಅಭ್ಯರ್ಥಿಗಳ ನಾಮಪತ್ರ ಹಿಂತೆಗೆಯಲು ಬಾಹ್ಯ ಮೂಲಗಳ ಮೂಲಕ ಒತ್ತಡ, ಪಕ್ಷಗಳ ಒತ್ತಡದ ಮೂಲಕ ಆತನಿಗೆ ಸರಕಾರದಿಂದ ದೊರಕುವ ಸೌಲಭ್ಯಗಳಿಗೆ ಕತ್ತರಿ ಪ್ರಯೋಗಿಸಿ ದ್ವೇಷ ರಾಜಕಾರಣ ನಡೆಸುವ ಮೂಲಕ, ಅಭಿವೃದ್ಧಿಯಲ್ಲಿ ರಾಜಕಾರಣ ತರುವ, ಪತಿ – ಪತ್ನಿಯರ ಮಧ್ಯೆ ಕಂದಕ ಸೃಷ್ಟಿಸುವ ಹೀನ ಮನಸ್ಥಿತಿ ರಾಜಕಾರಣದಲ್ಲಿ ತಾಂಡವವಾಡಿದ್ದಿದೆ.
ಇವು ಧಾರ್ಮಿಕ ಕ್ಷೇತ್ರ, ಕಾರ್ಯಗಳಿಗೂ ತೊಡಕುಂಟು ಮಾಡುತ್ತಿದೆ. ಇಂದು ರಾಜಕಾರಣ ಪ್ರವೇಶಿಸದ ಸ್ಥಳಗಳೇ ವಿರಳ. ಅಭಿವೃದ್ಧಿ, ಸಮಾಜಕ್ಕೆ ಪೂರಕವಾಗುವ, ಸಮಾಜದ ಸ್ವಾಸ್ಥ್ಯಕ್ಕೆ ಅನುಗುಣವಾಗಿರುವ ವಿಚಾರಗಳಲ್ಲಿ ರಾಜಕಾರಣ ಮಧ್ಯ ಪ್ರವೇಶಿಸಬಾರದು. ರಾಜಕಾರಣ ಏನಿದ್ದರೂ ಅದರ ಮೌಲ್ಯಗಳನ್ನು ಉಳಿಸಿಕೊಂಡು ಹೆಜ್ಜೆಯಿಡಬೇಕಾದುದು ಅವಶ್ಯಕ.
ಸುಳ್ಳು ಆಪಾದನೆ, ಕೀಳು ಮಟ್ಟದ ಪದಗಳ ಬಳಕೆಗಳು ರಾಜಕಾರಣ ಮತ್ತು ಜನಪ್ರತಿನಿಧಿಗಳಿಗೆ ಶೋಭೆ ತರುವ ವಿಚಾರವಲ್ಲ. ರಾಜಕಾರಣವೆಂದರೆ ಜನಪ್ರತಿನಿಧಿಗೆ ಬದುಕುವ ದಾರಿಯಾಗಬಾರದು. ಬದುಕಲು ರಾಜಕಾರಣಕ್ಕೆ ಬರುವವರು ನಿಜವಾಗಿಯೂ
ಒಂದರ್ಥದಲ್ಲಿ ವ್ಯಾಪಾರಸ್ಥ ಮನೋಸ್ಥಿತಿಯವರೆಂದರೂ ಅತಿಶಯೋಕ್ತಿಯಾಗಲಾರದು.