ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಪುರಾತನ ಭಾರತೀಯ ಚಿತ್ರರಂಗವೆಂದರೆ ಮೊದಲು ನೆನಪಾಗುವುದು ಬಂಗಾಳಿ ಹಾಗೂ ಮರಾಠಿ ಸಿನಿಮಾಗಳು. ಇಪ್ಪತ್ತನೆಯ ಶತಮಾನದ ಆರಂಭದ ದಿನಗಳಲ್ಲಿಯೇ ಇಡೀ ದೇಶ ಮೆಚ್ಚುವ ಅತ್ಯುತ್ತಮ ಸಿನಿಮಾಗಳನ್ನು ನೀಡಿದ ಕೀರ್ತಿ ಇವರಿಗೆ ಸಲ್ಲಬೇಕು.
ನಿಧಾನವಾಗಿ ಇಲ್ಲಿ ಕೆಲಸ ಮಾಡಿದ ಹಲವು ನಿರ್ದೇಶಕರು, ನಿರ್ಮಾಪಕರು ಬಾಂಬೆಯ ಕದ ತಟ್ಟಲು ಶುರುಮಾಡಿದರು.
ಇದರ ಫಲವಾಗಿ ಹಿಂದಿ ಚಿತ್ರರಂಗವೂ ನೂತನ ಪ್ರಯೋಗ ಗಳನ್ನು ಮಾಡುವ ಮೂಲಕ ಉತ್ತಮ ಚಿತ್ರಗಳನ್ನು ನಿರ್ಮಾಣ
ಮಾಡಲು ಶುರುಮಾಡಿತ್ತು. ಇದಾದ ನಂತರ ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಸಿನಿಮಾ ಮಾಡುವ ಪ್ರಯತ್ನಗಳು ನಡೆದವು.
ಹಳ್ಳಿ ಹಳ್ಳಿಗಳಲ್ಲಿ ನಾಟಕಗಳನ್ನು ಮಾಡುತ್ತಿದಂತಹ ನಟ, ನಟಿಯರು ನಿಧಾನವಾಗಿ ಸಿನಿಮಾ ದೆಡೆಗೆ ಬರತೊಡಗಿದರು.
ಸಿನಿಮಾ ಶೂಟಿಂಗ್ ವೇಳೆ ಒಮ್ಮೆ ತಪ್ಪು ಮಾಡಿದರೆ, ಮತ್ತೆ ಸರಿ ಮಾಡಿಕೊಳ್ಳುವ ಅವಕಾಶ ವಿದ್ದಂತೆ ನಾಟಕಗಳಲ್ಲಿರುವುದಿಲ್ಲ.
ನಾಟಕಕ್ಕಿಂತಲೂ ಸಿನಿಮಾ ಗಳೇ ನಟ, ನಟಿಯರಿಗೆ ಇಷ್ಟವಾಗತೊಡಗಿತ್ತು. ಜನರೂ ಸಹ ಬೆಳ್ಳಿ ಪರದೆಯ ಮೇಲೆ ಸಿನಿಮಾ ನೋಡುವುದರಲ್ಲಿ ಸಿಗುವ ಅನುಭವ ನಾಟಕದಲ್ಲಿ ಸಿಗುವುದಿಲ್ಲವೆಂಬ ಭಾವನೆಗೊಳ ಗಾದರು. ‘ಮದ್ರಾಸ್’ ಪ್ರಾಂತ್ಯವು ದಕ್ಷಿಣ ಭಾರತದ ಸಿನಿಮಾಗಳ ರಾಜಧಾನಿಯಾಗಿತ್ತು.
ಯಾವುದೇ ಸಿನಿಮಾ ಶೂಟಿಂಗ್ ಮಾಡಬೇಕಿದ್ದರೆ, ತಾಂತ್ರಿಕತೆಗೆ ಸಂಬಂಧಿತ ವಿಚಾರಗಳು, ದೊಡ್ಡ ದೊಡ್ಡ ಸ್ಟುಡಿಯೋಗಳು,
ದೊಡ್ಡ ನಿರ್ದೇಶಕರು, ಎಲ್ಲರೂ ಮದ್ರಾಸಿನಲ್ಲಿಯೇ ಇರುತ್ತಿದ್ದರು. ಹಲವು ದೊಡ್ಡ ದೊಡ್ಡ ನಟರು ಮದ್ರಾಸಿನಲ್ಲಿಯೇ ತಮ್ಮ ಮನೆಗಳನ್ನು ಖರೀದಿ ಮಾಡಿದ್ದರು. ನಿಧಾನವಾಗಿ ಚಿತ್ರಣ ಬದಲಾಯಿತು, ಮದ್ರಾಸಿನಿಂದ ಬೆಂಗಳೂರು ಹಾಗೂ ಹೈದರಾಬಾದಿಗೆ ಸ್ಟುಡಿಯೋಗಳು ಬಂದವು. ಚಿತ್ರರಂಗಕ್ಕೆ ಬೇಕಿರುವ ತಂತ್ರಜ್ಞಾನಗಳು ಬೆಂಗಳೂರಿನಲ್ಲಿಯೇ ಸಿಗಲು ಶುರುವಾದ ನಂತರ ಕನ್ನಡ ಚಿತ್ರರಂಗವೂ ತಾನು ಸಹ ತಾನೂ ಯಾರಿಗೆ ಕಡಿಮೆಯಿಲ್ಲದಂತೆ ಬೆಳೆಯಿತು.
ಡಾಕ್ಟರ್ ರಾಜಕುಮಾರ್‌ರಂಥ ಮೇರು ನಟನ ನೇತೃತ್ವದಲ್ಲಿ ಕನ್ನಡ ಚಿತ್ರರಂಗವು ನೋಡನೋಡುತ್ತಲೇ ಯಾರೂ ಊಹಿಸದ
ರೀತಿಯಲ್ಲಿ ಬೆಳೆಯಿತು. ಕನ್ನಡ ಚಿತ್ರರಂಗ ಎಷ್ಟೇ ಬೆಳೆದರೂ ರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಭಾರತವೆಂದರೆ ಕೇವಲ ತಮಿಳು
ಚಿತ್ರರಂಗದ ಹೆಸರು ಮಾತ್ರ ಹೆಚ್ಚಾಗಿ ಕೇಳಿ ಬರುತ್ತಿತ್ತು. ಮದ್ರಾಸಿನಲ್ಲಿ ಸಿಗುತ್ತಿದ್ದಂಥ ಹಳೆಯ ತಂತ್ರಜ್ಞಾನಕ್ಕೆ ಮೊರೆಹೋಗಿದ್ದ ಭಾರತೀಯ ಚಿತ್ರರಂಗ ಕೇವಲ ತಮಿಳು ಚಿತ್ರರಂಗವಷ್ಟೇ ದಕ್ಷಿಣ ಭಾರತಕ್ಕೆ ಸೀಮಿತ ವೆಂಬ ರೀತಿಯಲ್ಲಿ ನೋಡುತಿತ್ತು.
ನಂತರದ ದಿನಗಳಲ್ಲಿ ತೆಲುಗು ಚಿತ್ರರಂಗವೂ ನಿಧಾನವಾಗಿ ಬೆಳೆಯ ತೊಡಗಿತು. ‘ಅನಿಲ್ ಕಪೂರ್’ನಂಥ ಬಾಲಿವುಡ್‌ನ ನಟ ಕರ್ನಾಟಕ ದಿಂದಲೇ ತನ್ನ ಚಿತ್ರರಂಗದ ಪ್ರಯಾಣ ಶುರುಮಾಡಿದರೂ ಸಹ ಕನ್ನಡ ಚಿತ್ರರಂಗವನ್ನು ಬೇರೆಯದ್ದೇ ಲೋಕಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಲಿಲ್ಲ. ತೀರಾ ಇತ್ತೀಚಿಗೆ ಹೇಳುವುದಾದರೆ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮರಂಥ ಬಾಲಿವುಡ್‌ನ ನಟಿಯರು ಕರ್ನಾಟಕದಿಂದ ಹೋದರೂ ಸಹ ಕನ್ನಡ ಚಿತ್ರರಂಗದ ಬಗ್ಗೆ ಯೋಚಿಸಲಿಲ್ಲ. ಸದಾ ತಮ್ಮ ಹಣ ಸಂಪಾದನೆಯಲ್ಲಿಯೇ ನಿರತರಾಗಿದ್ದಾರೆ.
ಆದರೆ ಇಬ್ಬ ನಾಯಕ ನಟ ಮಾತ್ರ ಕನ್ನಡ ಚಿತ್ರರಂಗವನ್ನು ಇಡೀ ಭಾರತವೇ ನೋಡುವಂತೆ ಮಾಡುತ್ತೇನೆಂದು ಶಪಥ
ಮಾಡಿದ್ದ. ‘ಗಾಡ್ -ದರ್’ ಇಲ್ಲದೆಯೇ ಕಿರಿತೆರೆಯ ಧಾರಾವಾಹಿಗಳ ಮೂಲಕ ತನ್ನ ಜೀವನ ಆರಂಭಿಸಿದ್ದ ಈತ ಇಂದು ಈ ಮಟ್ಟಕ್ಕೆ ಬೆಳೆಯುತ್ತಾನೆಂದು ಯಾರೂ ಸಹ ಊಹಿಸಿರಲಿಲ್ಲ. ಅತೀ ಸಾಮಾನ್ಯ ಕುಟುಂಬದಿಂದ ಬೆಳೆದು ಬಂದ ಈತ, ಇಂದು ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗವನ್ನು ನೋಡುವಂತೆ ಮಾಡಿದ್ದಾನೆ. ‘ಯಶ್’ ಅಪ್ರತಿಮ ನಟ, ಯಾವುದೇ ಪಾತ್ರವನ್ನೂ ನಿಭಾಯಿಸುವ ಪ್ರತಿಭೆಯಿರುವ ಯುವ ನಾಯಕ.
ಅತಿ ಸಣ್ಣ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿರುವ ನಾಯಕ ನಟ. ಪ್ರತಿಯೊಂದು ಕೆಲಸವನ್ನೂ ಅತ್ಯಂತ ಶ್ರದ್ಧೆಯಿಂದ ಮಾಡುವ ಗುಣವಿರುವ ಯಶ್, ‘ಕೆ.ಜಿ.ಎಫ್’ ಚಿತ್ರಕ್ಕಾಗಿ ಬರೋಬ್ಬರಿ ನಾಲ್ಕು ವರ್ಷಗಳನ್ನು ತ್ಯಾಗ ಮಾಡಿದ್ದಾರೆ. ಕೇವಲ ಕಿರುಚಾಡು ವುದನ್ನೇ ಸಿನಿಮಾ ಅಂದುಕೊಳ್ಳುವ ನೂತನ ಯುವ ನಾಯಕರ ನಡುವೆ ‘ಯಶ್’ ಒಬ್ಬ ‘ವೃತ್ತಿಪರ’ ನಟನಾಗಿ ಕಾಣುತ್ತಾರೆ. ಈ ಕಿರಿಯ ವಯಸ್ಸಿನಯೇ ಯಶ್ ರೂಢಿಸಿಕೊಂಡಿರುವ ಪ್ರೌಢಿಮ್ಯತೆ ಮೆಚ್ಚಲೇಬೇಕು. ತನ್ನ ಒಂದೊಂದು ಮಾತುಗಳನ್ನು ಅಳೆದು ತೂಗಿ ಆಡುವ ಯಶ್ ದೀರ್ಘಕಾಲದ ನಟನಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಉತ್ತಮ ನಟನೊಬ್ಬನಿಗೆ ಉತ್ತಮ ನಿರ್ದೇಶಕನು ಕೈ ಹಿಡಿದರೆ ಅಲ್ಲಿಗೆ ಸಿನಿಮಾದ ಯಶಸ್ಸು ಕಟ್ಟಿಟ್ಟಬುತ್ತಿ. ‘ಪ್ರಶಾಂತ್ ನೀಲ’ ಶ್ರೀ
ಮುರಳಿ ಅಭಿನಯದ ‘ಉಗ್ರಂ’ ಸಿನಿಮಾ ನಿರ್ದೇಶನ ಮಾಡಿದಾಗಲೇ ಒಬ್ಬ ಭರವಸೆಯ ವಿಭಿನ್ನ ನಿರ್ದೇಶಕನು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದನೆಂದು ಗಾಂಧಿನಗರದ ಮಂದಿ ಮಾತನಾಡಿಕೊಂಡಿದ್ದರು. ತನ್ನ ವಿಭಿನ್ನ ನಿರೂಪಣೆ, ಪಾತ್ರ
ಪರಿಚಯ, ಪಾತ್ರದಾರಿಯ ಹೆಸರುಗಳು, ಪರದೆಯ ಹಿನ್ನೆಲೆಯಿಂದ ಹೆಸರು ಮಾಡಿದ್ದಾರೆ ಪ್ರಶಾಂತ್ ನೀಲ.
ಶ್ರೀ ಮುರಳಿಯ ಪತ್ನಿಯ ಅಣ್ಣ ನಾಗಿರುವ ಪ್ರಶಾಂತ್ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳನ್ನೇ ನೋಡಿಕೊಂಡು ಬೆಳೆದವರು,
ಹಾಗಾಗಿ ಅವರ ಚಿತ್ರದಲ್ಲಿ ಹಾಲಿವುಡ್ ಶೈಲಿಯನ್ನು ಅನೇಕ ಕಡೆ ಕಾಣಬಹುದು. ಆದರೆ ಕನ್ನಡ ಚಿತ್ರರಂಗಕ್ಕನುಗುಣವಾಗಿ
ಅದನ್ನು ಅಳವಡಿಸಿಕೊಂಡು ಜನರಿಗೆ ಮುಟ್ಟಿಸುವ ಕಲೆ ಎಲ್ಲರಿಗೂ ಬರುವುದಿಲ್ಲ, ಅಂತಹ ಕಲೆಯನ್ನು ರೂಢಿಸಿ ಕೊಂಡು
ಕನ್ನಡ ಚಿತ್ರರಂಗಕ್ಕೆ ಅಳವಡಿಸಿರುವ ಅಪರೂಪದ ನಿರ್ದೇಶಕ ಪ್ರಶಾಂತ್. ‘ಕೆ.ಜಿ.ಎಫ್’ನಂಥ ಕಥೆಯನ್ನು ಸೃಷ್ಟಿಮಾಡಿ ತೆರೆಯ
ಮೇಲೆ ವಿಭಿನ್ನವಾಗಿ ತರುವ ಕೆಲಸದಲ್ಲಿ ಪ್ರಶಾಂತ್ ಯಶಸ್ಸು ಕಂಡಿದ್ದಾರೆ.
ಚಾಪ್ಟರ್ – ೧ ಮೂಲಕವೇ ಇಡೀ ಚಿತ್ರರಂಗದ ಕಣ್ಮನ ಸೆಳೆದಿದ್ದ ಪ್ರಶಾಂತ್ ನೀಲ್ ಇದೀಗ ಚಾಪ್ಟರ್ – 2ನ ‘ಟೀಸರ್’ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ಕನ್ನಡ ಚಿತ್ರರಂಗದೆಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ದಕ್ಷಿಣ ಭಾರತವೆಂದರೆ ‘ರಾಜ ಮೌಳಿ’ಯ ಹೆಸರು ಹೇಳುತ್ತಿದಂಥ ಭಾರತೀಯ ಚಿತ್ರರಂಗ ಈಗ ‘ಪ್ರಶಾಂತ್ ನೀಲ’ ಹೆಸರು ಹೇಳಲು ಶುರುಮಾಡಿದೆ. ಬಿಡುಗಡೆ ಯಾದ ಕೆಲವೇ ದಿನಗಳಲ್ಲಿ ಹದಿನಾರು ಕೋಟಿಯಷ್ಟು ಯುಟ್ಯೂಬ್ ವೀಕ್ಷಣೆ ಪಡೆದ ಕೆ.ಜಿ.ಎಫ್ –2 ಚಿತ್ರದ ಟೀಸರ್, ಭಾರತೀಯ ಚಿತ್ರರಂಗದ ಇತರ ಸಿನಿಮಾಗಳ ದಾಖಲೆಯನ್ನು ಧೂಳಿಪಟ ಮಾಡಿದೆ.
ಬಾಲಿವುಡ್ ಚಿತ್ರಗಳಿಗೆ ಬರದಂಥ ಹೆಚ್ಚಿನ ವೀಕ್ಷಕರು ಕನ್ನಡ ಚಿತ್ರವೊಂದಕ್ಕೆ ಬಂದಿದ್ದಾರೆ. ಕನ್ನಡ, ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಯ ಮೇಲೆ ತರಲು ಮುಂದಾಗಿರುವ ಚಿತ್ರ ತಂಡ, ಕನ್ನಡಿಗರೂ ಸಹ ಯಾರಿಗೂ ಕಡಿಮೆಯಿಲ್ಲ ವೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಚಾಪ್ಟರ್ –2 ಚಿತ್ರದ ಟೀಸರ್ ನೋಡಿದಂಥ ಬಾಲಿವುಡ್‌ನ ಖ್ಯಾತ ನಟ ‘ಹೃತಿಕ್ ರೋಷನ್’ ಟ್ವೀಟ್ ಮೂಲಕ ನಿಬ್ಬೆರಗಾಗಿರುವುದಾಗಿ ಹೇಳಿದ್ದಾರೆ.
ಕೇವಲ ಎರಡು ನಿಮಿಷದ ಟೀಸರ್ ಈ ಮಟ್ಟಕ್ಕೆ ಜನರನ್ನು ತಲುಪಿದೆ ಯೆಂದರೆ ಇನ್ನು ಇಡೀ ಸಿನಿಮಾ ಯಾವ ಮಟ್ಟಕ್ಕೆ ತಲುಪಬಹುದೆಂದು ಊಹಿಸಬಹುದು. ಒಂದು ಕಾಲದಲ್ಲಿ ದಕ್ಷಿಣ ಭಾರತ ರಾಜ್ಯಗಳ ಪ್ರಶಸ್ತಿ ವಿತರಣಾ ಸಮಾರಂಭ ಗಳಲ್ಲಿ ನಿರೂಪಕರು ಕನ್ನಡ ಮಾತನಾಡಲೂ ಹಿಂಜರಿಯು ತ್ತಿದರು. ಅಂತಹ ಸಮಾರಂಭವೊಂದದಲ್ಲಿ ಕನ್ನಡ ಚಿತ್ರರಂಗ ವನ್ನು ಬೇರೆಯದ್ದೇ ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವೆನೆಂದು ಹೇಳಿ ಬಂದಿದ್ದರು ಯಶ್. ಈಗ ತಮ್ಮ ಚಾಪ್ಟರ್ –2 ಚಿತ್ರದ ಟೀಸರ್ ಮೂಲಕ ಹೇಳಿದ್ದನ್ನು ಮಾಡಿದ್ದಾರೆ.
ಕೆ.ಜಿ.ಎಫ್ –1 ಚಿತ್ರ 300 ಕೋಟಿಯಷ್ಟು ವ್ಯವಹಾರ ವನ್ನು ಮಾಡಿತ್ತು. ಕನ್ನಡದಲ್ಲಿಯೇ ಸುಮಾರು 140 ಕೋಟಿಯಷ್ಟು
ವ್ಯವಹಾರವನ್ನು ಮಾಡಿತ್ತು. ಈಗ ಚಾಪ್ಟರ್ -2 ಟೀಸರ್ ನೋಡಿದರೆ ಕನಿಷ್ಠವೆಂದರೂ ಇದರ ದುಪ್ಪಟ್ಟು ವ್ಯವಹಾರವನ್ನು
ಮಾಡುತ್ತದೆಯೆಂದು ಹಲವು ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗ ಇಷ್ಟೊಂದು ದೊಡ್ಡಮಟ್ಟದ ವ್ಯವಹಾರ ಮಾಡುತ್ತದೆಯೆಂದು ಯಾರೂ ಸಹ ಊಹಿಸಿರಲಿಲ್ಲ. ಕಥೆಗೆ ತಕ್ಕಂತೆ, ಬಿಡುಗಡೆಯಾಗುವ ಭಾಷೆಗೆ ತಕ್ಕಂತೆ ಪಾತ್ರಧಾರಿಗಳನ್ನು ಹುಡುಕಿ ತರುವ ಕಲೆ ‘ಪ್ರಶಾಂತ್ ನೀಲ’ಗೆ ಅದೆಲ್ಲಿಂದ ಬಂದಿದೆಯೋ ದೇವರಿಗೇ ಗೊತ್ತು.
ಜನರನ್ನು ಮೆಚ್ಚಿಸುವ ಸಲುವಾಗಿ ಇತರ ಭಾಷೆಯ ದೊಡ್ಡ ದೊಡ್ಡ ನಟರನ್ನು ಕರೆತಂದು ಹಣ ವ್ಯಯ ಮಾಡುವ ನಿರ್ದೇಶಕರ ಮಧ್ಯೆ, ಇತರ ಭಾಷೆಯ ಸಾಮಾನ್ಯ ನಟರನ್ನು ಸಿನಿಮಾಕ್ಕೆ ಕರೆತಂದು ಉತ್ತಮ ಸಿನಿಮಾ ಮಾಡುತ್ತಾರೆ ಪ್ರಶಾಂತ್ ನೀಲ. ಸುದೀಪ್ ಅಭಿನಯದ ‘ರನ್ನ’ ಚಿತ್ರದಲ್ಲಿ ತೆಲುಗಿನ ನಟಿ ‘ಮಧೂ’ರನ್ನು ಕರೆತಂದು ಇಡೀ ಸಿನಿಮಾಕ್ಕೆ ಕಪ್ಪು ಚುಕ್ಕೆಯಂತೆ ಮಾಡಿದ್ದರು. ಮತ್ಯಾವುದೋ ಸಿನಿಮಾ ದಲ್ಲಿ ತೆಲುಗಿನ ಹಾಸ್ಯನಟ ‘ಬ್ರಹ್ಮಾನಂದಂ’ನನ್ನು ಕರೆತಂದು ಸರಿಯಾಗಿ ಕನ್ನಡದ ಡಬ್ಬಿಂಗ್ ಮಾಡದೇ ನಗೆಪಾಟಲಿಗೆ ಗುರಿಯಾಗಿದ್ದರು.
ಖ್ಯಾತ ನಟರನ್ನು ಕರೆತಂದು ನಟನೆ ಮಾಡಿಸಿ ಮಾರ್ಕೇಟಿಂಗ್ ಮಾಡುವುದು ದೊಡ್ಡದಲ್ಲ, ಅವರಿಂದ ಚಿತ್ರಕ್ಕಾಗುವ ಫಲಾಪೇಕ್ಷೆ ಗಳನ್ನೂ ಅಳೆದುತೂಗಿ ತಾಳೆಹಾಕಿ ನೋಡಬೇಕು. ಬಹುಬಾಷಾ ನಟ ಪ್ರಕಾಶ್ ರಾಜ್ ನನ್ನು ಚಾಪ್ಟರ್ – 2 ಚಿತ್ರಕ್ಕೆ ಕರೆತಂದಿರು ವುದಕ್ಕಾಗಿ ಎಲ್ಲಾ ಒಂದು ಕಡೆ ನಿರಾಶೆಯ ಕೂಗು ಹಿಂದೂ ಸಂಘಟನೆ ಗಳಿಂದ ಕೇಳಿ ಬಂದಿದೆ. ‘ಪ್ರಕಾಶ್ ರಾಜ್’ ಹಿಂದೂ ಧರ್ಮ ಹಾಗೂ ದೇಶದ ವಿಚಾರದಲ್ಲಿ ಕೆಟ್ಟದಾಗಿ ಮಾತನಾಡಿರುವುದರ ಬಗ್ಗೆ ನನಗೂ ಕೋಪವಿದೆ, ನಾನು ಸಹ ನನ್ನ ಅಂಕಣಗಳ ಮೂಲಕ ನಿರಂತರವಾಗಿ ಖಂಡಿಸಿದ್ದೇನೆ.
ತನ್ನ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುವ ‘ಪ್ರಕಾಶ್ ರಾಜ್’ನನ್ನು ಬಿಟ್ಟು ಸಿನಿಮಾ ತಂಡ ಸಿನಿಮಾ ಮಾಡಬಹುದಿತ್ತು. ಕೇವಲ ಈತನೊಬ್ಬನೇ ಇಡೀ ಚಿತ್ರದಲ್ಲಿ ಅಭಿನಯಿಸಿದ್ದರೆ ಚಿತ್ರವನ್ನು ಬಹಿಷ್ಕರಿಸ ಬಹುದಿತ್ತು. ಆದರೆ ಈತನದ್ದು ಹೀಗೆ ಬಂದು ಹಾಗೆ ಹೋಗುವ ಪಾತ್ರವಾಗಿರುವುದರಿಂದ ಕನ್ನಡ ಚಿತ್ರರಂಗದ ಹಿತಾಸಕ್ತಿಯ ದೃಷ್ಟಿಯಿಂದ ಈತನನ್ನು ಮೂಲೆಗುಂಪು ಮಾಡುವುದು ಉತ್ತಮವೆಂಬುದು ನನ್ನ ಅನಿಸಿಕೆ. ದೀಪಿಕಾ ಪಡುಕೋಣೆ ಅಭಿನಯದ ‘ಚಪಾಕ್’ ಸಿನಿಮಾವನ್ನು ಬಹಿಷ್ಕರಿಸಲು ಕಾರಣವಿತ್ತು. ಆಕೆ ಆ ಸಿನಿಮಾದಲ್ಲಿ ‘ನಾಯಕಿ’ಯಾಗಿ ಅಭಿನಯಿಸಿದ್ದಳು.
ಇಡೀ ಚಿತ್ರವೇ ಅವಳ ಮೇಲೆ ನಿಂತಿತ್ತು. ಚಾಪ್ಟರ್ – 2 ಹಾಗಲ್ಲ ಸಣ್ಣದೊಂದು ಪಾತ್ರದಲ್ಲಿ ಪ್ರಕಾಶ್ ರಾಜ್ ಬಂದು ಹೋಗುತ್ತಾನೆ, ಪ್ರೇಕ್ಷಕರು ಇದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿ ಕೊಂಡಿಲ್ಲವೆಂಬುದಕ್ಕೆ ಹದಿನಾರು ಕೋಟಿಯಷ್ಟು ‘ಯು ಟ್ಯೂಬ’ ವೀಕ್ಷಣೆಯೇ ಸಾಕ್ಷಿ.
ವಿಭಿನ್ನ ಶೈಲಿಯ ನಿರೂಪಣೆಯ ಮೂಲಕ ಕೆ.ಜಿ.ಎಫ್ –1 ಚಿತ್ರವನ್ನು ನಿರ್ದೇಶಿಸಿದ್ದ ‘ಪ್ರಶಾಂತ್ ನೀಲ’ ಚಾಪ್ಟರ್ – 2 ಚಿತ್ರವನ್ನು ಮತ್ತಷ್ಟು ವಿಭಿನ್ನ ಶೈಲಿಯ ಮೂಲಕ ನಿರ್ದೇಶಿಸಿರುವುದು ಟೀಸರ್ ಮೂಲಕ ಎದ್ದು ಕಾಣುತ್ತದೆ.
ಚಾಪ್ಟರ್-2ನಲ್ಲಿ ಇಡೀ ಕೆ.ಜಿ.ಎಫ್ ಸಾಮ್ರಾಜ್ಯವನ್ನು ರಾಕಿ ಭಾಯ್ ಹೇಗೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ, ನಂತರ ಏನಾಗುತ್ತದೆ ಯೆಂಬ ಕಥೆಯನ್ನು ಕಾಣಬಹುದು. ಚಿತ್ರದ ಮೊದಲ ದೃಶ್ಯದಿಂದಲೂ ಯಶ್ ಶ್ರೀಮಂತನಾಗಿ ಕಾಣುತ್ತಾರೆ. ಒಂದು ಮೂಲಗಳ ಪ್ರಕಾರ ಯಶ್ ಚಾಪ್ಟರ್ –2ನಲ್ಲಿ ಹೆಚ್ಚಾಗಿ ‘ಸೂಟ್’ನಲ್ಲಿಯೇ ಕಾಣಿಸಿಕೊಳ್ಳುತ್ತಾರಂತೆ, ಇದರಿಂದ ಇಡೀ ಚಿತ್ರಕ್ಕೆ ಒಂದು ಶ್ರೀಮಂತ ಕಳೆ ಬರುತ್ತದೆಯೆಂದು ಹೇಳಲಾಗುತ್ತಿದೆ.
ಒಂದು ಸಣ್ಣ ಕುಟುಂಬದಲ್ಲಿ ಜನಿಸಿ ಬಸ್ ಡ್ರೈವರ್ ಮಗನಾಗಿ ಬೆಳೆದ ಯಶ್ ಕೆ.ಜಿ.ಎಫ್ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದೆಡೆಗೆ ನೋಡುವಂತೆ ಮಾಡಿದ್ಧಾರೆ. ಸಾಧಿಸಲು ವಯಸ್ಸಿನ ಇತಿಮಿತಿಯಿಲ್ಲ ವೆಂಬುದನ್ನು ಯಶ್ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ತೋರಿಸಿಕೊಟ್ಟಿದ್ಧಾರೆ. ದಕ್ಷಿಣ ಭಾರತವೆಂದರೆ ಕೇವಲ ಕಾಲಿವುಡ್, ಟಾಲಿವುಡ್, ಮಾಲಿ ವುಡ್ ಎನ್ನುತ್ತಿದ್ದವರೆಲ್ಲರೂ ಇಂದು ‘ಸ್ಯಾಂಡಲ್ ವುಡ್’ ಬಗ್ಗೆ ಮಾತನಾಡುತ್ತಿದ್ಧಾರೆ. ಈಗಾಗಲೇ ಪ್ರಶಾಂತ್ ನೀಲ್ ತೆಲುಗಿನ ಪ್ರಭಾಸ್ ಜತೆ ‘ಸಲಾರ್’ ಎಂಬ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ತಯಾರಾಗಿದ್ಧಾರೆ.
ತೆಲುಗು, ತಮಿಳಿನ ನಿರ್ದೇಶಕರನ್ನು ಕರೆದು ತಂದು ಕನ್ನಡದಲ್ಲಿ ಸಿನಿಮಾ ಮಾಡುತ್ತಿದಂಥ ನಿರ್ಮಾಪಕರಿಗೆ, ಪ್ರಶಾಂತ್ ನೀಲ್ ಹಾಗೂ ಯಶ್ ನಾವೂ ಸಹ ಯಾರಿಗೆ ಕಮ್ಮಿಯಿಲ್ಲವೆಂದು ತೋರಿಸಿಕೊಟ್ಟಿದ್ಧಾರೆ. ಕನ್ನಡ ಚಿತ್ರರಂಗದಲ್ಲಿಯೂ ಅಷ್ಟೇ ಹಲವಾರು ನೂತನ ನಿರ್ದೇಶಕರು ಹೊಸ ಪ್ರಯೋಗಗಳನ್ನು ಮಾಡಿದರು, ಆದರೆ ಇವರ‍್ಯಾರೂ ಸಹ ಮೊದಲ ಸಿನಿಮಾ ಯಶಸ್ಸು ಕಂಡ ನಂತರ ಎರಡನೇ ಸಿನಿಮಾದಲ್ಲಿ ಯಶಸ್ಸು ಕಾಣಲು ಸಾಧ್ಯ ವಾಗಲಿಲ್ಲ.
‘ರಂಗಿತರಂಗ’ ನಿರ್ದೇಶಕರಂತೂ ತಮ್ಮ ಎರಡನೇ ಚಿತ್ರವನ್ನು ಎಷ್ಟು ಕೆಟ್ಟದಾಗಿ ಮಾಡಬಹುದೆಂಬು ದನ್ನು ತೋರಿಸಿಕೊಟ್ಟರು.
ಇವರ ಸಾಲಿಗೆ ಹತ್ತಾರು ನಿರ್ದೇಶಕರು ಬಂದರು, ಅವರೆಲ್ಲರೂ ಸಹ ತಮ್ಮ ಮೊದಲ ಚಿತ್ರವನ್ನಷ್ಟೇ ಚೆನ್ನಾಗಿ ಮಾಡಲು ಸಾಧ್ಯ ವಾಯಿತು, ಅದಾದ ನಂತರ ಹಲವರ ಸುಳಿವು ಇಂದಿಗೂ ಸಿಗುತ್ತಿಲ್ಲ. ‘ಪ್ರಶಾಂತ್ ನೀಲ’ ಹಾಗಲ್ಲ ಕೈಹಾಕಿದ ಮೂರು ಸಿನಿಮಾ ಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ಧಾರೆ.
ಒಬ್ಬ ಕನ್ನಡಿಗನಾಗಿ ಚಾಪ್ಟರ್ –2 ಚಿತ್ರ ಈ ಮಟ್ಟಿನ ಯಶಸ್ಸು ಕಾಣುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಇದರಿಂದ
ಹಲವಾರು ಬದಲಾವಣೆಗಳು ಕನ್ನಡ ಚಿತ್ರರಂಗ ದಗಲಿದೆ. ‘ಯಶ್’ನಂಥ ನಟನನ್ನು ಬಳಸಿಕೊಂಡು ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಪಕರು ಕನ್ನಡಕ್ಕೆ ಬರುತ್ತಾರೆ. ‘ಪ್ರಶಾಂತ್ ನೀಲ’ನಂಥ ಪ್ರತಿಭಾವಂತ ನಿರ್ದೇಶಕನ ಬಳಿ ಭಾರತದ ಇತರ
ರಾಜ್ಯಗಳ ದೊಡ್ಡ ನಾಯಕರು ಹಾಗೂ ನಿರ್ಮಾಪಕರು ಸಿನಿಮಾ ಮಾಡಿಸಲು ಬರುತ್ತಾರೆ. ಕನ್ನಡದ ಸಿನಿಮಾಗಳಿಗೆ ‘ಕಾಲ್ ಶೀಟ್’
ಕೊಡಲು ಹಿಂಜರೆಯುತ್ತಿದ್ದಂಥ ಇತರ ಭಾಷೆಗಳ ಕಲಾವಿದರು ಅಭಿನಯಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಕೆ.ಜಿ.ಎಫ್
ಸಿನಿಮಾವನ್ನು ನೋಡಿದರೆ ‘ಯಶ್’ನ ಮಹತ್ವಾಕಾಂಕ್ಷೆ ಎಷ್ಟು ದೊಡ್ಡದೆಂದು ಕಾಣುತ್ತದೆ.
ನಾಲ್ಕರಿಂದ ಐದು ವರ್ಷಗಳ ಕಾಲ ಯಾವುದೇ ಸಿನಿಮಾ ಮಾಡದೇ ಕೇವಲ ಎರಡು ಸಿನಿಮಾಗಳ ಮೇಲೆ ತನ್ನ ಸಮಯವನ್ನು ಕಳೆದಿರುವ ‘ಯಶ್’ ಕನ್ನಡ ಚಿತ್ರರಂಗವನ್ನೂ ಮೀರಿ ಬೆಳೆದು, ‘ಬಾಲಿವುಡ್’ನಲ್ಲಿ ಅಭಿನಯಿಸಿದರೂ ಅಚ್ಚರಿ ಪಡಬೇಕಿಲ್ಲ. ‘ಸಂಜಯ್ ದತ್ತ್’ನನ್ನು ಕರೆತಂದು ಚಾಪ್ಟರ್ –2ರಲ್ಲಿ ಅಭಿನಯಿಸುವ ಮೂಲಕ ಹಿಂದಿ ಚಿತ್ರರಂಗದಲ್ಲಿ ಪಾತಾಳಕ್ಕೆ ಬಿದ್ದಿದ್ದ ನಟನನ್ನು ಚಾಪ್ಟರ್ –2 ಮೂಲಕ ಮೇಲೆತ್ತಿದೆ ಈ ಚಿತ್ರ. ಈ ಚಿತ್ರ ಸಂಜಯ್ ದತ್ತ್‌ಗೆ ಮರುಜನ್ಮವೆಂದರೆ ತಪ್ಪಿಲ್ಲ.
ಹಿಂದಿ ಚಿತ್ರರಂಗದ ದಿಗ್ಗಜನನ್ನು ಬಳಸಿಕೊಂಡು ಕನ್ನಡ ಚಿತ್ರವೊಂದನ್ನು ನಿರ್ದೇಶಿಸುವುದು ಸುಲಭದ ಮಾತಲ್ಲ. 1992ರ ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಸಂಜಯ್ ದತ್ತ್, ಎಲ್ಲರ ಕಣ್ಣಲ್ಲಿಯೂ ಖಳನಾಯಕ ನಾಗಿದ್ದ. ರಿಯಲ್ ಜೀವನದ ಖಳನಾಯಕನನ್ನು ತೆರೆಯ ಮೇಲಿನ ‘ಖಳ ನಾಯಕ’ನಾಗಿ ತೋರಿಸುವ ಮೂಲಕ ‘ಪ್ರಶಾಂತ್ ನೀಲ್’ ಚಿತ್ರಕ್ಕೆ ಟ್ವಿಸ್ಟ್ ನೀಡಿದ್ಧಾರೆ.
ಕೆ.ಜಿ.ಎಫ್ ಚಿತ್ರದ ಬಗ್ಗೆ ಎಷ್ಟು ಹಳಿದರೂ ಮುಗಿಯದು, ಕೆಲವರಿಗೆ ಈ ಚಿತ್ರ ಕೇವಲ ‘ಕ್ರೈಂ’ ವೈಭವೀಕರಿಸುವಂತೆ ಕಾಣಬ ಹುದು. ಆದರೆ ಇದೇ ಮೊದಲ ಬಾರಿಗೆ ‘ಕ್ರೈಂ’ ವೈಭವೀಕರಿಸಿ ತೆರೆಕಂಡಿರುವಂಥ ಚಿತ್ರವಲ್ಲ ‘ಕೆ.ಜಿ.ಎಫ್’, ಈ ಹಿಂದೆ ನೂರಾರು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿಯೇ ಬಂದಿವೆ. ಆ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿರುವಾಗ ಕೆ.ಜಿ.ಎಫ್. ಚಿತ್ರ ಹೊಸತಲ್ಲ. ಏನೇ ಹೇಳಿದರೂ ಕನ್ನಡ ಚಿತ್ರರಂಗವನ್ನು ಹೇಳಿದಂತೆಯೇ ಬೇರೆಯದ್ದೇ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಕೀರ್ತಿ
ನಟ ‘ಯಶ್’ ಹಾಗೂ ‘ಪ್ರಶಾಂತ್ ನೀಲ’ಗೆ ಸಲ್ಲಬೇಕು.