ಸೂರಿ ಹಾರ್ದಳ್ಳಿ
ಇಂದು ಹೊಸ ಸ್ಮಾರ್ಟ್‌ಫೋನ್‌ಗಳ ಕಾಲ. ಹಿಂದಿನ ದಿನಗಳಲ್ಲಿ ಮನೆಯವರೆಲ್ಲರ ಪ್ರೀತಿಯ ಲ್ಯಾಂಡ್‌ಲೈನ್ ಇತ್ತು. ಅದು ಮುದಿಯಾಗಿ, ಅಟ್ಟಕ್ಕೇರಿಸುವಾಗ ಎಷ್ಟು ಸಂಕಟ, ನೋವಾಯಿತು ಗೊತ್ತಾ!
ಹಗಲು ರಾತ್ರಿಯೆನ್ನದೆ ಮನೆಯ ಮೂಲೆಯಲ್ಲಿ, ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಸ್ವಸ್ಥವಾಗಿ ಕುಳಿತು, ಸೀದಾ ಸಾದಾ ಗೃಹಿಣಿಯಂತೆ ಇದ್ದ ನಮ್ಮ ಹಳೆಯ ಗೆಳೆಯ ಸ್ಥಿರ ದೂರವಾಣಿಯನ್ನು, ತಿಳಿಯಲಿಲ್ಲವೇ, ಲ್ಯಾಂಡ್ ಫೋನ್ ಪ್ರೇಷಕ (ರಿಸೀವರ್) ಅನ್ನು ಮೊನ್ನೆ ನಿವೃತ್ತಗೊಳಿಸಿ ಅಟ್ಟಕ್ಕೆ ಏರಿಸಲಾಯಿತು, ಅಲ್ಲಲ್ಲ, ಸೇರಿಸಲಾಯಿತು.
ಹಲವಾರು ವರ್ಷಗಳಿಂದ ನಮ್ಮ ಸೇವೆ ಸಲ್ಲಿಸಿ ನಮ್ಮ ಮತ್ತು ಅದರ ನಡುವೆ ಅನೂಹ್ಯ ಬಾಂಧವ್ಯ ಏರ್ಪಟ್ಟಿದ್ದರಿಂದಲೋ ಏನೋ, ಹೊರಗೆ ಎಸೆದುಬಿಡುವುದಕ್ಕೆ ಮನಸ್ಸಾಗಲಿಲ್ಲ. ಅಟ್ಟದಲ್ಲಿ ಅಕ್ಕಳೆಗಳು (ಜಿರಳೆ), ಚವಣೆಗಳು (ತಿಗಣೆಗಳು) ವಾಸ ಮಾಡಿದರೂ ಸರಿ, ಅದು ಮನೆಯೊಳಗೇ ಇರಲಿ. ಕೊನೆಗೆ ಜರ್ಝರಿತವಾಗಿ ಹೋದರೆ ಮಾತ್ರ ಬಿಸಾಡಿಬಿಡುವುದು, ಎಂದು ತೀರ್ಮಾನಿಸಿದ್ದೆ. ಆ ಫೋನು ನಮ್ಮ ಸಂಬಂಧಿಕರು, ಬಂಧುಗಳು, ಗೆಳೆಯರು, ವೈರಿಗಳ ಅಭಿಪ್ರಾಯ, ಮಾತುಕತೆಗಳನ್ನು ನಿರ್ಲಿಪ್ತತೆಯಿಂದ ಸಂವಹಿಸಿ, ಏನೂ ಆಗದವರಂತೆ ಮಾಡದವರಂತೆ ಇತ್ತು.
ದ್ವೇಷಿಗಳ ಬೈಗುಳ, ಸಾಲ ಕೊಟ್ಟವರ ಬೆದರಿಕೆ, ಪ್ರಿಯತಮೆಯ ಒಲವು ನುಡಿಗಳು, ನನ್ನನ್ನು ಕಂಡರಾಗದವರ ದೂಷಣೆಗಳು, ಇವುಗಳನ್ನೆಲ್ಲಾ ತರತಮ ಭಾವಗಳಿಲ್ಲದೇ ಸಂವಹಿಸಿತ್ತು. ಆ ಫೋನು ಮನೆಯವರೆಲ್ಲರ ಹಿತವನ್ನು ಕಾಯುತ್ತಿತ್ತು. ಅಪ್ಪ, ಅಮ್ಮ,
ಅಕ್ಕ, ತಂಗಿ, ಅಜ್ಜ, ಅಜ್ಜಿ, ಹೀಗೆ ಮನೆಯವರೆಲ್ಲರೂ ಅದಕ್ಕೆ ಒಂದೇ. ಕಿವಿಗೆ ಹಿತವಲ್ಲದಿದ್ದರೂ, ಆಗ ಹಾಗೆನಿಸುತ್ತಿರಲಿಲ್ಲ, ಅದು ರಿಂಗಿಣಿಸಿದಾಗ ಮನೆಯವರೆಲ್ಲರೂ ಓಡಿ ಬರುತ್ತಿದ್ದರು. ಅದನ್ನು ಪ್ರೀತಿಯಿಂದಲೇ ಎತ್ತಿಕೊಂಡು, ಹಲೋ, ಎನ್ನುತ್ತಿದ್ದರು.
ಸುತ್ತ ಇರುವವರಿಗೆ ಅದಾರೆಂಬ ಕುತೂಹಲ, ಏನು ಸುದ್ದಿ ಎಂಬ ಕಾತರ. ‘‘ಯಾರು? ಯಾರು ಮಾತಾಡ್ತಿರೋದು?’’ ಎಂಬ ಪ್ರಶ್ನೆಗೆ ಕೈಲಿ ರಿಸೀವರ್ ಹಿಡಿದಾತ, ಅದರ ಬಾಯನ್ನು ಕೈಯಿಂದ ಮುಚ್ಚಿ, ಕರೆದವರಾರೆಂದು ಹೇಳುತ್ತಿದ್ದ. ಆ ವ್ಯಕ್ತಿ ಮನೆಯವರಿಗೆ ಸಂಬಂಧಿಸಿದವರಾದರೆ ಎಲ್ಲರ ಕುತೂಹಲ ಹೇಳತೀರದು. ತಾನೂ ಮಾತನಾಡುತ್ತೇನೆ, ನಾನೂ ಏನನ್ನೋ ಹೇಳಬೇಕು/
ಕೇಳಬೇಕು ಎಂಬಂತೆ ರಿಸೀವರ್ ಕಿತ್ತುಕೊಳ್ಳುತ್ತಿದ್ದರು. ಏನು ಹೇಳಲಾಗಿದೆ ಎಂದು ಗ್ರಹಿಸಿ, ಅದಕ್ಕೆ ತಮ್ಮದೂ ಇನ್ನಷ್ಟು ವಿಷಯ ಸೇರಿಸುತ್ತಿದ್ದರು.
ಬಿಲ್ ಜಾಸ್ತಿಯಾದೀತೆಂಬ ಕಾಳಜಿ
ದೂರದೂರಿಂದ ಬಂದ ಕರೆಯಾದರೆ ಕರೆದವನ ಬಿಲ್ ಜಾಸ್ತಿಯಾಗಬಾರದೆಂಬ ಎಚ್ಚರಿಕೆಯೂ ಇತ್ತು. ತಾವೇನು ಹೇಳಬೇಕು, ಅದೆಷ್ಟು ಕ್ಷಿಪ್ರವಾಗಿರಬೇಕು ಎಂದು ನಿರ್ಧರಿಸುತ್ತಿದ್ದೆವು, ಹೇಳುತ್ತಿದ್ದೆವು. ಅದಕ್ಕೇನು ಉತ್ತರ ಬಂದಿದೆ ಎಂದು ತಿಳಿಯಲು ರಿಸೀವ ರಿಗೆ ತಮ್ಮದೂ ಕಿವಿ ಸೇರಿಸುತ್ತಿದ್ದರು. ಹಲವಾರು ಬಾರಿ ನಾಲ್ಕಾರು ಜನ ಒಟ್ಟೊಟ್ಟಿಗೇ ತಮ್ಮ ಧ್ವನಿಗಳನ್ನು ಸಂವಹಿಸುತ್ತಿದ್ದೆವು. ಒಬ್ಬೊಬ್ಬರಿಗೆ ಒಂದೊಂದು ಸುದ್ದಿ ಪ್ರಮುಖವಾದುದು. ಆಗ ಫೋನ್ ಮಾಡಿದವರು ತಾವು ಎಲ್ಲಿಂದ ಮಾತನಾಡುತ್ತಿದ್ದೇವೆ ಎಂದೆನ್ನಬೇಕಿತ್ತು. ಆದರೆ ಈಗ ಎಲ್ಲಿದ್ದೀರಿ ಎಂದು ಕೇಳುವಂತಾಗಿದೆ.
ಅಂತಹ ಅಕ್ಕರೆಯ, ಪ್ರೀತಿಯ ಫೋನಿಗೆ ವಿದಾಯ ಹೇಳುವಾಗ ಅಕ್ಷಿಯಲ್ಲಿ ಕಂಬನಿ ತುಂಬಿದ್ದಂತೂ ಸತ್ಯ. ಛೇಂಜ್ ಈಸ್ ಕಾನ್‌ಸ್ಟಂಟ್ ಎಂದೆನ್ನುತ್ತಾರೆ. ಮನಸ್ಸಿಗೆ ನೋವಾದರೂ ಬದಲಾವಣೆಗೆ ಹೊಂದಿಕೊಳ್ಳಲೇಬೇಕು. ಎಲ್ಲಕ್ಕೂ ಕೊನೆ ಇದೆ, ಇರಲೇಬೇಕು, ಅದನ್ನು ಒಪ್ಪಿಕೊಳ್ಳಬೇಕು ಎಂದು ಒಂಥರಾ ವೇದಾಂತಿಯ ಮನೋಭಾವ ಹೊಂದಿ ನನಗೆ ನಾನೇ ಹೇಳಿ ಕೊಂಡಿದ್ದೆ. ನಮ್ಮ ದಶಕಗಳ ಹೃದಯಾನುಬಂಧವನ್ನು ದೂರವಾಗಿದ್ದು ಥಳಕು ಬಳುಕಿನ ಮೊಬೈಲ್ ಎಂಬ ನವಕನ್ಯೆ ಮನೆಯೊಳಗೆ ಕಾಲಿಟ್ಟಾಗಿನಿಂದ. ಮಕ್ಕಳನ್ನು ಬೇರೆಯವರ ಸುಪರ್ದಿಗೆ ಕೊಟ್ಟೇವು, ಆದರೆ ಈ ಮಿಟಕಲಾಡಿ ತಮ್ಮ ಜೊತೆಗೇ
ಇರಬೇಕು.
ಗೊತ್ತಿದ್ದೂ, ಗೊತ್ತಿಲ್ಲದೆಯೂ ನಾವು ಸ್ಥಿರ ದೂರವಾಣಿಯನ್ನು ಹಳೆಯ ಕಾಲದ ಮುದುಕ ಅಥವಾ ಮುದುಕಿಯನ್ನು ನೋಡು ವಂತೆಯೇ ನೋಡುತ್ತಾ ಬಂದಿದ್ದೇವೆ. ಹಳೆಯ ಕಾಲದ್ದು, ಕೈಲಾಗದ್ದು, ಎಂದೆಲ್ಲಾ ನಾವೇ ಅದಕ್ಕೆ ಹಣೆ ಪಟ್ಟಿ ಅಂಟಿಸಿದ್ದೇವೆ. ಆದರೂ ನನ್ನ ಮಕ್ಕಳಿಗಿಂತ ನನಗೆ ಅದರೊಡನೆ ಬಾಂಧವ್ಯ ಹೆಚ್ಚು. ಮೊಬೈಲ್ ಎಂಬ ವಯ್ಯಾರದ ಮಿಟಕಲಾಡಿಯ ಬಗ್ಗೆ ಮೊದ ಮೊದಲು ನನಗೇನೂ ಅಂತಹ ಆಸಕ್ತಿ ಇರಲಿಲ್ಲ. ಮೊದಲ ಪತ್ನಿ ಇರಲಿ, ಎರಡನೆಯವಳು ಬೇಕಾಗೇನೂ ಇಲ್ಲ, ಎಂದು ಕೊಂಡೇ ನಾನು ಎಲ್ಲರೂ ತಮ್ಮ ಕರಕಮಲಗಳಲ್ಲಿ ಶೋಭಾಯಮಾನವಾಗಿ ಎರಡೆರಡು ಮೊಬೈಲುಗಳು, ನಾಲ್ಕೈದು ಸಿಮ್‌ಗಳು, ಇವನ್ನು ಹೊಂದಿ ಮೆರೆಯುತ್ತಿದ್ದರೂ ನಾನು ಮಾತ್ರ ಹೊಸಬಳನ್ನು ಸಂಶಯದಿಂದಲೇ ನೋಡುತ್ತಾ, ಕೂಡಾವಳಿ ಮಾಡುವ ಕಾರ್ಯವನ್ನು ಮುಂದೂಡುತ್ತಲೇ ಬಂದಿದ್ದೆ.
ಗೆಳೆಯರೊಡನೆ, ಬಂಧುಗಳೊಡನೆ ನನ್ನ ಈ ನಿರ್ಧಾರಕ್ಕೆ ಕಾರಣ ಕೊಡುತ್ತಲೇ ಬಂದಿದ್ದೆನಾದರೂ ನಂತರಾನಂತರ ನಾನೊಬ್ಬ
ಹಳ್ಳಿಯ ಗಮಾರನೆಂಬಂತೆ ಅವರೆಲ್ಲಾ ನೋಡಿದ್ದು, ಇಂಟರ್‌ನೆಟ್, ವ್ಯಾಟ್ಸಾಪ್, ಫೇಸ್ಬುಕ್, ಇತ್ಯಾದಿ ಸಕಲಕಲಾ ವಲ್ಲಭೆಯಾದ ಮೊಬೈಲ್ ಮಾಯಾಂಗಿನಿಯನ್ನು ನೋಡತೊಡಗಿದಾಗ ಫೋನಿನ ಕೆಲಸ ಧ್ವನಿಯನ್ನು ಸಂವಹಿಸುವುದು ಮಾತ್ರವಲ್ಲ, ಇನ್ನೂ ಏನೇನೇನೋ ಇದೆ ಎಂಬ ಅರಿವಾಗಿ ನನ್ನ ನಿರ್ಧಾರ ನಿಧಾನವಾಗಿ ಸಡಿಲಾಗುತ್ತಾ ಬಂತು.
ರೇಡಿಯೇಷನ್ ಭಯ
ಸುಮ್ಮನೆ ಕಣ್ಣು ಹಾಳು, ನೋಡಿ ನೋಡಿ ಬೆನ್ನು ನೋವು ಬರುತ್ತೆ, ಕಿವಿಗೂ ಆ ಧ್ವನಿ ಒಳ್ಳೆಯದಲ್ಲವಂತೆ, ರೇಡಿಯೇಶನ್ ಇಂದಾಗಿ ಮಿದುಳಿನ ಮೇಲೂ ಪರಿಣಾಮವಂತೆ, ಫೋನ್ ಒಂದು ಚಟವಾಗುತ್ತದಂತೆ, ಎಂಬೆಲ್ಲಾ ಎಚ್ಚರಿಕೆಗಳ ನಡುವೆಯೂ ನಾನು ಒಂದು ಮೊಬೈಲ್ ದೂರವಾಣಿಯ ಗ್ರಾಹಕನಾದೆ.
ಇದಾಗುವುದು ಎಲ್ಲಾ ಹಿರಿಯರಂತೆ, ಮಕ್ಕಳು ತಮ್ಮ ಅಪ್‌ಡೇಟೆಡ್ ಫೋನ್ ಅನ್ನು ಖರೀದಿಸಿ, ತಮ್ಮ ಹಳೆಯದನ್ನು ಎಸೆಯ ಲಾಗದೇ ತಮ್ಮ ಅಪ್ಪ ಅಥವಾ ಅಮ್ಮಂದಿರಿಗೆ ಅದನ್ನು ಕೊಡುವಂತೆ, ಒಂದಿಷ್ಟು ಹೊಗಳಿಕೆಯೊಂದಿಗೆ. ಮೊದ ಮೊದಲು ಅದು ಮನೆಗೆ ಬಂದಿದ್ದರೂ ಎಲ್ಲೆಲ್ಲಿಯೋ ಇಡುತ್ತಿದ್ದೆ, ಮರೆಯುತ್ತಿದ್ದೆ.
ಹೊರಗೆ ಹೋಗುವಾಗ ಅದನ್ನು ಜೊತೆಗೇ ತೆಗೆದುಕೊಂಡು ಹೋಗಲು ಸೋಮಾರಿತನ ಮಾತ್ರವಲ್ಲ, ಭಾರವೂ ಎನಿಸುತ್ತಿತ್ತು. ಹೆಚ್ಚಿನ ಬಾರಿ ಬೆಲ್ಟ್‌ಗೆ ಪೋಚ್ ಸಿಕ್ಕಿಸಿಕೊಂಡು, ಅದರೊಳಗೆ ಫೋನ್ ಹಾಕಲು ಮರೆತು ಹೋಗುತ್ತಿದ್ದೆ, ಮನೆಯವರಿಂದ ಬೈಸಿಕೊಳ್ಳುತ್ತಿದ್ದೆ. ನಾನೇನು ವಿ.ಐ.ಪಿ.ಯೇ, ಸದಾ ಸಂಪರ್ಕದಲ್ಲಿರಲು, ಎಂದು ನನಗೆ, ಕೆಲವೊಮ್ಮೆ ಇತರರಿಗೆ ಹೇಳುತ್ತಿದ್ದೆ.
ಈ ಮೊಬೈಲ್ ಫೋನೆಂಬ ಭವಬಂಧನದಲ್ಲಿ ಸಿಲುಕಲಿಲ್ಲ ಎಂದು ನನಗೇ ಹೆಮ್ಮೆಯಾಗುತ್ತಿತ್ತು. ಆದರೆ ಬೇಸಿಕ್ ಫೋನ್ ಕಾಲದಿಂದ ಸ್ಮಾರ್ಟ್‌ಫೋನ್ ಕಾಲಕ್ಕೆ ಬದಲಾದಾಗ ಈಗ ನನಗೇ ಅನಿಸುತ್ತದೆ, ಲ್ಯಾಂಡ್ ಫೋನ್ ಕೂಡಾ ಇರದ ಕಾಲದಲ್ಲಿ ನಾವು ಹೇಗೆ ಬದುಕಿದ್ದೆವು, ಎಂದು. ಯಾವುದೇ ಕಾರಣದಿಂದ ಜಗತ್ತಿನಲ್ಲಿ ಮೊಬೈಲ್ ದೂರವಾಣಿಯು ಸ್ಥಗಿತವಾದರೆ ಏನಾದೀತು ಎಂಬುದನ್ನು ನೆನಪಿಸಕೊಂಡರೇ ದಿಗಿಲಾಗುತ್ತದೆ.
ಸತ್ಯ ಹೇಳಬೇಕೆಂದರೆ ಹಾಗಾಗುವುದನ್ನು ನೋಡಬೇಕು, ಜಗತ್ತಿನಲ್ಲಿ ಅಲ್ಲೋಲ-ಕಲ್ಲೋಲವಾಗುವದನ್ನು ನೊಡಬೇಕೆಂದ ಒಂದು ಕೆಟ್ಟ ಆಸೆ ಹೃದಯದೊಳಗಿದೆ. ಆದರಿದನ್ನು ಬಹಿರಂಗವಾಗಿ ಹೇಳುವಂತಿಲ್ಲ. ನಮ್ಮ ಕಾಲದಲ್ಲಿ ಮನೆಗೇ ಪ್ರತಿಷ್ಠೆ ಎನಿಸುವ ಲ್ಯಾಂಡ್ ಫೋನ್‌ಗಳಿರುವ ಮನೆಗಳು ಊರಿನಲ್ಲಿ ಒಂದೋ ಎರಡೋ. ತಮಾಷೆಯೆಂದರೆ ಅದು ಅವರ ಸ್ವಂತಕ್ಕಿಂತ ಊರಿನವರಿಗೆ ಉಪಯೋಗವಾದುದೇ ಹೆಚ್ಚು. ‘ನಿಮ್ಮ ಮಗ ಫೋನ್ ಮಾಡಿದ್ದ, ಮುಂದಿನ ವಾರ ಊರಿಗೆ ಬತ್ತ ಅಂಬ್ರು,’ ‘ಹೆಣ್ಣಿಗೆ ಮದಿ ಮಾಡ್ಕು ಅಂದ್ಕಂಡಿದ್ರಂಬ್ರು, ಎಲ್ಲಾದ್ರೂ ಗಂಡಿದ್ದರೆ ಹೇಳ್ಕಂಬ್ರು’ ಎಂಬಂತಹ ಸುದ್ದಿಗಳು ವಿಲೇವಾರಿಯಾಗುತ್ತಿದ್ದವು, ಉಚಿತವಾಗಿ!
ಹೊರ ಊರಿನವರು ಏನಾದರೂ ಅರ್ಜೆಂಟ್ ಸುದ್ದಿ ತಿಳಿಸುವುದಾದಲ್ಲಿ ತಮ್ಮ ಮನೆಯ ಹತ್ತಿರದಲ್ಲಿ ವಾಸವಿದ್ದವರ ಮನೆಯ ಫೋನ್ ಸಂಖ್ಯೆಗೆ ಕರೆ ಮಾಡಿ ವಿಷಯವನ್ನು ತಿಳಿಸಲು ಹೇಳುತ್ತಿದ್ದರು ಅಥವಾ ಕೆಲವರು ವಾರದ ಒಂದು ದಿನ ಇಂತಹ ಹೊತ್ತಿಗೆ ಫೋನ್ ಮಾಡುತ್ತೇವೆಂಬ ಸಮಯ ನಿರ್ಧರಿಸಿಕೊಂಡು, ತನ್ನ ಕಡೆಯವರು ಆ ದಿನದ ಆ ಹೊತ್ತಿನಲ್ಲಿ ಕಿವಿಗೆ ಇಂಪಾದ ದನಿ ಹೊರಡಿಸುವ ಫೋನ್ ಯಾವಾಗ ನಿದ್ರೆಯಿಂದ ಎಚ್ಚೆತ್ತು ತಮ್ಮ ಸುದ್ದಿಯನ್ನು ಕೇಳಲು ಮತ್ತು ಹೇಳಲು ಶುರುಮಾಡುವುದೋ ಎಂದು ಕಾಯುತ್ತಲೇ ಕುಳಿತಿರುತ್ತಿದ್ದರು.
ಎಷ್ಟೋ ಬಾರಿ ತಾವೆನ್ನಬೇಕಾದ, ಅರುಹಬೇಕಾದ ವಿಷಯಗಳನ್ನು ಮೊದಲೇ ಪಟ್ಟಿ ಮಾಡಿ ತಂದಿರುತ್ತಿದ್ದರು. ಹೀಗೆ ಬಂದವರಿಗೆ ಪಾನಕವನ್ನೋ, ಮಜ್ಜಿಗೆಯನ್ನೋ ನೀಡಿ ಸತ್ಕರಿಸುವ ಸಂಪ್ರದಾಯವೂ ಇತ್ತು. ಫೋನ್ ಕರೆ ಸ್ವೀಕರಿಸಿದವರು ನಂತರ ಫೋನ್ ಅನ್ನು ಅದೇ ಸ್ವಾನದಲ್ಲಿ, ಅದೇ ಗೌರವದಲ್ಲಿ, ಇಟ್ಟು, ಅಂತೆಯೇ ಶುಚಿಗೊಳಿಸಿ, ತಮ್ಮ ಕರ್ತವ್ಯವನ್ನು ನೆರವೇರಿಸುತ್ತಿದ್ದರು.
ಬುಕ್ ಮಾಡಿ ಮೂರು ವರ್ಷ
ನಾನು ಲ್ಯಾಂಡ್ ಫೋನನ್ನು ಪಡೆಯಲು ಪಟ್ಟ ಕಷ್ಟವನ್ನು ನಿಮಗೆ ಹೇಳಲೇಬೇಕು. ಭಾರತದಲ್ಲಿ ಜಾಗತೀಕರಣ ಕಾಲಿಟ್ಟದ್ದು ಕಳೆದ ಶತಮಾನದ ತೊಂಭತ್ತನೆಯ ದಶಕದಲ್ಲಿ. ಆಮೇಲೆ ಕೈಗಾರಿಕಾ ರಂಗದಲ್ಲಿ ಕ್ರಾಂತಿಯೇ ಏರ್ಪಟ್ಟಿತು. ಅದಕ್ಕೂ ಮೊದಲು ಸ್ಥಿರ ದೂರವಾಣಿ ಬೇಕಾದರೆ ಬುಕ್ ಮಾಡಿ ಮೂರು ವರ್ಷ ಕಾಯಬೇಕಿತ್ತು.
ಹಾರ್ದಳ್ಳಿಯ ನಮ್ಮ ಮನೆಯಲ್ಲಿ ನನ್ನ ಹೆತ್ತವರನ್ನು ಮಾತನಾಡಿಸಲು, ಸಂಪರ್ಕಿಸಲು ದೂರವಾಣಿಯ ಅವಶ್ಯಕತೆ ಇತ್ತು. ಯಾರ್ಯಾರನ್ನೋ ಸಂಪರ್ಕಿಸಿ, ಇನ್‌ಫ್ಲುಯೆನ್ಸ್ ಮಾಡಿಸಿ, ಅಂತೂ ಇಂತೂ ಡಯಲ್ ರಿಂಗ್ ಇರುವ ಕರಿ ಬಣ್ಣದ ಫೋನ್ ಒಂದನ್ನು ಪಡೆದೆ. ಅಂತೂ ಹಾರ್ದಳ್ಳಿಯೆಂಬ ಹಳ್ಳಿಯ ನಮ್ಮ ಮನೆಗೆ ಫೋನ್ ಬಂತು.
ವೃತ್ತಾಕಾರದಲ್ಲಿ ಸೊನ್ನೆಯಿಂದ ಒಂಭತ್ತರ ವರೆಗೆ ಅಂಕಿಗಳನ್ನು ತೋರಿಸುವ ಫೋನ್, ಈಗ ಕಿವಿಗೆ ಕರ್ಕಶವೆನಿಸಿದರೂ ಆಗ ಅದೇ ಮೃದು-ಮಧುರವಾಗಿ ರಿಂಗಿಸುವ ಫೋನ್. ಅದು ಸುಲಭವಾಗಿ ಸಂಪರ್ಕಕ್ಕೆ ಸಿಗುವುದೇ? ಹಲವಾರು ಟೆಲೆಫೋನ್ ಕಂಬ ಗಳನ್ನು ಹಾಕಿಸಿಕೊಳ್ಳಲಾಯಿತು. ಜೋರಾಗಿ ಮಳೆ ಬಂದರೆ ಸತ್ತು ಹೋಗುತ್ತಿತ್ತು.
ಜೊತೆಗೆ ಮಳೆಗಾಲದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಆಗುತ್ತೆ, ಎಂದು ಯಾರೋ ಹೆದರಿಸಿದ್ದರಿಂದ ಮಿಂಚು ಬಂದರೆ ಸಂಪರ್ಕ ಕಡಿಯುವ ಅವಶ್ಯಕತೆ. ಟೆಲೆಫೋನ್ ತಂತಿಯ ಮೇಲೆ ಮರದ ರೆಂಬೆಗಳು ಬೀಳುತ್ತಿದ್ದವು. ಹಾಗಾದಾಗಲೆಲ್ಲಾ ಟೆಲೆಫೋನ್ ಕಂಪ ನಿಗೆ ದೂರು ಕೊಟ್ಟು, ಅವರ ಮರ್ಜಿಗಾಗಿ ಕಾಯಬೇಕಿತ್ತು. ಅಂತೂ ಇಂತೂ ಸಂಪರ್ಕ ಸಿಕ್ಕಾಗ ಅನೇಕರಿಂದ ದೂರು, ಯಾಕೆ ಫೋನ್‌ನಲ್ಲಿ ನೀವು ಸಿಗುತ್ತಿಲ್ಲ, ಎಂದು.
ದೇವರ ವಿಗ್ರಹಕ್ಕೆ ನೀರು ಹಾಕುವುದನ್ನು ಮರೆತರೂ ಲ್ಯಾಂಡ್ ಫೋನ್ ಅನ್ನು ದಿನಾಲೂ ಸ್ವಚ್ಛಗೊಳಿಸುವುದನ್ನು ಮರೆಯು ವಂತಿಲ್ಲ. ಪ್ರೀತಿಯಿಂದ ಒರೆಸಿ, ಅರ್ಧ ಅಡಿ ದಪ್ಪದ ಟೆಲೆಫೋನ್ ಡೈರೆಕ್ಟರಿಯನ್ನು ಪೀಠವನ್ನಾಗಿಸಿ, ಇಟ್ಟು, ಅದನ್ನು ತೆಳುವಾ ದೊಂದು ಬಟ್ಟೆಯಿಂದ ಮುಚ್ಚಿ, ಯಾರದ್ದಾದರೂ ಫೋನ್ ಬರಬಾರದೇ, ಕರೆ ಮಾಡಿದವನ ಧ್ವನಿ ಕೇಳಬಾರದೇ ಎಂದು ಹಂಬಲಿಸುವ ಕಾಲ ಅದಾಗಿತ್ತು.
ನಾನು ಬೆಂಗಳೂರಿನ ಚಾಮರಾಜಪೇಟೆಯಲ್ಲಿದ್ದ ಮಲಬಾರ್ ಲಾಡ್ಜ್ ಹೋಟೆಲಿನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲೊಂದು ಫೋನ್ ಇತ್ತು. ಹಾಗಂತ ಬರುವ ಹೋಗುವವರಿಗೆಲ್ಲಾ ಅದರ ಸೇವೆ ಸಿಗುತ್ತಿದ್ದಿಲ್ಲ. ಕರೆ ಮಾಡಿದವರು ಅದರ ಶುಲ್ಕ ಕೊಡಬೇಕಿತ್ತು. ಆಗ ಈಗಿನಂತೆ ಎಸ್.ಟಿ.ಡಿ., ಐ.ಎಸ್.ಡಿ.ಗಳು ಇರಲಿಲ್ಲ. ಬೇರೆ ಊರಿಗೆ ಕರೆ ಮಾಡಬೇಕಾದರೆ ಟೆಲೆಫೋನ್ ಎಕ್ಸ್‌ಚೇಂಜ್‌ಗೆ ಫೋನ್ ಮಾಡಿ, ನಂಬರು ಕೊಟ್ಟು, ಅವರಿಂದ ಸಂಪರ್ಕ ಸಿಕ್ಕಮೇಲೆ ಬರುವ ಕರೆಗಾಗಿ ಕಾಯಬೇಕಿತ್ತು. ಅದನ್ನು ಟ್ರಂಕ್ ಕಾಲ್ ಎಂದು ಕರೆಯುತ್ತಿದ್ದರು.
ಕರೆ ಮುಗಿದ ಮೇಲೆ ಎಷ್ಟು ಶುಲ್ಕ ಎಂದು ಫೋನ್ ಮೂಲಕ ಕೇಳಿ, ಗ್ರಾಹಕನಿಂದ ಪಡೆಯಬೇಕಿತ್ತು. ಹಳ್ಳಿಗಳಲ್ಲಿ ಸ್ಥಳೀಯ ಕರೆಗಳು ಉಚಿತವಾಗಿರುತ್ತಿದ್ದವು. ಹೋಟೆಲಿಗೆ ಮಂಗಳವಾರ ರಜೆ. ಬೇರೆಯವರು ಅಂದು ಫೋನ್ ಬಳಸಬಾರದೆಂದು ಡಯಲ್ ಬೋರ್ಡಿಗೆ ಬೀಗಹಾಕಿ ಇಡುತ್ತಿದ್ದರು. ಅಂದರೆ ಸಂಖ್ಯೆಯನ್ನು ತಿರುಗಿಸುವಂತಿಲ್ಲ. ಆದೂ ನಾವು ಫೋನ್ ಮಾಡುತ್ತಿದ್ದೆವು,
ಹೇಗೆನ್ನುವಿರಾ? ಟೆಲೆಫೋನ್ ಪ್ರೇಷಕವನ್ನು ಕೈಲಿ ಹಿಡಿದುಕೊಂಡು, ಒಂದೇ ಪ್ರಮಾಣದಲ್ಲಿ ಪ್ರೇಷಕ ಇಡಬೇಕಾಗಿದ್ದ ಜಾಗದ ಬಟನ್ ಅನ್ನು ಒತ್ತುತ್ತಿದ್ದೆವು.
ಅಂದರೆ ಬೇಕಾದ ಅಂಕೆ ನಾಲ್ಕಾದರೆ ನಾಲ್ಕು ಬಾರಿ, ನಂತರ ತುಸು ಹೆಚ್ಚು ವಿರಾಮ, ಮತ್ತೆ ಮೂರಾದರೆ ಮೂರು ಬಾರಿ, ಮತ್ತು ಹೆಚ್ಚು ವಿರಾಮ, ಹೀಗೆ ಮಾಡಿ ಕರೆ ಮಾಡಬಹುದಾಗಿತ್ತು. ಈ ತಂತ್ರಜ್ಞಾನವನ್ನು ನಾವು ಹೇಗೋ ತಿಳಿದುಕೊಂಡಿದ್ದೆವು. ಬೀಗ ಹಾಕಿದ್ದರೂ, ಈ ರೀತಿ ಮಾಡಿ ಫೋನ್ ಮಾಡಬಹುದಿತ್ತು. ಆದರೆ ಈಗ ಆ ಪಾಂಡಿತ್ಯಕ್ಕೆ ಬೆಲೆ ಇಲ್ಲ. ಮುಂದೆ ಬಟನ್ ಫೋನ್‌ಗಳು ಬಂದವು. ಮತ್ತೆ ಅದೆಲ್ಲೋ ಮಾಯವಾಗಿ ಹಸ್ತಭೂಷಣವಾದ ಮೊಬೈಲ್ ಬಂತು.
ನಮ್ಮ ಸ್ಮತಿಯಲ್ಲಿ ಹಳೆಯ ನೆನಪುಗಳು ಮಾತ್ರ ಉಳಿದವು ಮತ್ತು ಆ ಕಾಲ ಇನ್ನೆಂದೂ ಬರದು ಎಂಬ ಸತ್ಯವೂ ಗೋಚರ ವಾಯಿತು.