ಅದೊಂದು ದಿನ ಶಾಲೆಯ ಕೆಲಸ ಮುಗಿಸಿ ಮನೆಗೆ ಬಂದಾಗ ಆಶ್ಚರ್ಯ ಕಾದಿತ್ತು. ಬಾಗಿಲ ಅಕ್ಕಪಕ್ಕ ಒಂದು ಅಡಿ ಅಂತರದಲ್ಲಿ
ಕ್ರಿಸ್‌ಮಸ್ ಗಿಡಗಳಿವೆ. ಒಂದು ಗಿಡದ ಕೊಂಬೆಯ ಬುಡದಲ್ಲಿ ಎರಡು ಪಕ್ಷಿಗಳು ಕುಳಿತು ಕೊಕ್ಕಿನಿಂದ ಗೂಡನ್ನು ನೇಯುತ್ತಿದ್ದವು!
ನಾನು ಬಂದು ನಿಂತರೂ ಹೆದರದೆ ಏಕಾಗ್ರತೆಯಿಂದ ತಲ್ಲೀನವಾಗಿದ್ದವು. ಯಾವ ಪಕ್ಷಿಗಳೆಂದು ಗುರುತಿಸುವುದು ಕಷ್ಟವಾಗಲಿಲ್ಲ. ಬಾಲ್ಯದಿಂದಲೂ ನಾನು ನೋಡುತ್ತಿದ್ದ ಪಿಕಳಾರ ಪಕ್ಷಿಗಳವು. ಗಾತ್ರದಲ್ಲಿ ಗುಬ್ಬಚ್ಚಿಗಿಂತಲೂ ದೊಡ್ಡವು, ಮೈನಾ ಪಕ್ಷಿಗಿಂತಲೂ ಚಿಕ್ಕವು. ಪಿಕಳಾರಗಳಲ್ಲಿ ವಿಭಿನ್ನ ಪ್ರಭೇದಗಳಿವೆ. ನಮ್ಮ ಮನೆಯ ಗಿಡದಲ್ಲಿ ಗೂಡು ಕಟ್ಟುತ್ತಿರುವುದು ಕೆಂಪು ಕಪೋಲದ ಪಿಕಳಾರ.
ಕೊಕ್ಕಿನಷ್ಟೇ ಉದ್ದನೆಯ ಕಪ್ಪು ಬಣ್ಣದ ಜುಟ್ಟು, ಬಿಳಿ ಬಣ್ಣದ ಎದೆ, ಕೆಂಪು ಬಣ್ಣದ ಕೆನ್ನೆೆ, ಕಂದು ಬಣ್ಣದ ಬೆನ್ನಿನ ಭಾಗದಿಂದ ಶೋಭಿಸುತ್ತಿದ್ದವು. ಬಿಸಿಲಿನ ತಾಪ ತಾಗದ, ಮಳೆ ಹನಿ ಸೋಕದ, ಶತ್ರುಗಳ ಕಣ್ಣಿಗೆ ನಿಲುಕದ, ಸುರಕ್ಷಿತವಾದ ಜಾಗವನ್ನೇ
ಗೂಡು ಹೆಣೆಯಲು ಅವು ಆರಿಸಿಕೊಂಡಿದ್ದವು. ಗೂಡು ಹೆಣೆಯಲು ಅವು ತೆಗೆದು ಕೊಂಡ ಸಮಯ ನಾಲ್ಕು ದಿನಗಳು ಮಾತ್ರ. ಒಣಗಿದ ಎಲೆಯ ತೊಟ್ಟುಗಳನ್ನು, ಹುಲ್ಲು ಕಡ್ಡಿಗಳನ್ನು ಆರಿಸಿ ಅವು ಗೂಡನ್ನು ನೇಯುತ್ತಿದ್ದ ಪರಿಯನ್ನು ಕಂಡಾಗ ವಿಸ್ಮಯ ಮೂಡಿತು.
ಕೊಕ್ಕಿನಿಂದ ಹೆಣೆದು, ಅದಕ್ಕೆ ಬುಟ್ಟಿಯಾಕಾರದ ರೂಪ ನೀಡುತ್ತಿದ್ದ ಅವುಗಳ ಕಲಾ ನೈಪುಣ್ಯ ನಿಜವಾಗಿಯೂ ಅದ್ಭುತ. ಐದನೆಯ ದಿನದಂದು ಮತ್ತು ಆರನೆ ದಿನದಂದು ಗೂಡಿನಲ್ಲಿ ನಸುಗೆಂಪು ಮತ್ತು ಬಿಳಿಬಣ್ಣ ಮಿಶ್ರಿತವಾದ ಗೋಲಿ ಗಾತ್ರದ ಎರಡು ಮೊಟ್ಟೆಗಳು ಕಂಡು ಬಂದವು.
ಕಾವು ಕೊಡುವ ಕಾತುರ
ಅಂದಿನಿಂದ ಹೆಣ್ಣು ಪಕ್ಷಿ ಮೊಟ್ಟೆಗಳ ಮೇಲೆ ಹಗಲುರಾತ್ರಿ ಕುಳಿತು ಕಾವು ಕೊಡಲು ಪ್ರಾರಂಭಿಸಿತು. ನಾವು ಓಡಾಡುವಾಗ ಮೊದಮೊದಲು ಭಯದಿಂದ ಕೂಡಿದ ಕಣ್ಣಿನಿಂದ ನಮ್ಮನ್ನು ನೋಡುತ್ತಿತ್ತು. ನಂತರದ ದಿನಗಳಲ್ಲಿ ಸ್ವಲ್ಪವೂ ಹೆದರದೆ ಗೂಡಿನಲ್ಲಿ ಕುಳಿತಿರುತ್ತಿತ್ತು. ನಮ್ಮ ಮೇಲೆ ಅದಕ್ಕೆ ಬಹಳ ವಿಶ್ವಾಸ!
ದಿನದಲ್ಲಿ ಅರ್ಧ ಗಂಟೆ ಮಾತ್ರ ಗೂಡು ಬಿಟ್ಟು ಹೊರಹೋಗುತ್ತಿತ್ತು. ಹದಿಮೂರು ದಿನಗಳ ಅನಂತರ ಮೊಟ್ಟೆಯಿಂದ ಮರಿಗಳು
ಹೊರಬಂದವು. ಆಗ ಪಕ್ಷಿದಂಪತಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಒಡೆದ ಮೊಟ್ಟೆಯ ಚೂರುಗಳನ್ನು ತಾಯಿ ಪಕ್ಷಿ ಕೊಕ್ಕಿನಿಂದ ಗೂಡಿನ ಹೊರ ಹಾಕುತ್ತಿತ್ತು. ಮರಿಗಳನ್ನು ಬೆಳೆಸುವ ಕಾಯಕದಲ್ಲಿ ತೊಡಗಿದ ಅವು ನಿರಂತರವಾಗಿ ಮರಿಗಳಿಗೆ ಗುಟುಕು ನೀಡಲು ಪ್ರಾರಂಭಿಸಿದವು. ಹುಳು ಹುಪ್ಪಡೆಗಳನ್ನು, ಹಣ್ಣಿನ ಚೂರುಗಳನ್ನು ತಂದು ಮರಿಗಳ ಅಗಲವಾದ ಬಾಯಿಗೆ
ಇಡುತ್ತಿದ್ದವು. ಮರಿಗಳು ಕಣ್ಣು ತೆರೆದಿರಲಿಲ್ಲ, ಬಾಯಿ ಮಾತ್ರ ತೆರೆಯುತ್ತಿದ್ದವು.
ತಾಯಿ ಪಕ್ಷಿ ಮರಿಗಳನ್ನು ತನ್ನ ರೆಕ್ಕೆಯಿಂದ ಮುಚ್ಚಿ ಹಗಲು ರಾತ್ರಿ ರಕ್ಷಿಸುತ್ತಿತ್ತು. ಗಂಡು ಪಕ್ಷಿ ಇನ್ನೊಂದು ಗಿಡದಲ್ಲಿ ಕಾವಲುಗಾರನಂತೆ ಕುಳಿತಿರುತ್ತಿತ್ತು. ಮರಿಗಳು ವಿಸರ್ಜಿಸಿದ ಮಲವನ್ನು ಪಕ್ಷಿಗಳೇ ತಿನ್ನುತ್ತಿದ್ದವು. ನಾಲ್ಕು ದಿನಗಳ ಅನಂತರ
ಮರಿಗಳ ದೇಹದಲ್ಲಿ ಗರಿಗಳು ಮೂಡತೊಡಗಿದವು. ಅವಕ್ಕೆ ಸಾಮಾನ್ಯವಾಗಿ ನಿದ್ದೆ. ಆಹಾರ ತಂದ ಪಕ್ಷಿಗಳು ಅವನ್ನು ಕೂಗಿ ಎಚ್ಚರಿಸಿ, ಗುಟುಕು ನೀಡುತ್ತಿದ್ದವು. ಈ ಸಮಯದಲ್ಲಿ ಮನುಷ್ಯರು, ಬೆಕ್ಕು, ಕಾಗೆಗಳ ಸುಳಿವು ಹತ್ತಿರದಲ್ಲಿ ಕಂಡರೆ ಪಕ್ಷಿಗಳು ಜೋರಾಗಿ ಕೂಗುತ್ತಾ ಸ್ವಲ್ಪ ದೂರದಲ್ಲಿ ಕುಳಿತು ವೀಕ್ಷಿಸುತ್ತಿದ್ದವು.
ತಿನಿಸು ನೀಡುವಲ್ಲಿ ಸ್ಪರ್ಧೆ
ದಿನ ಕಳೆದಂತೆ, ಗಿಡ ಗಾಳಿಗೆ ಅಲ್ಲಾಡಿದರೂ ಮರಿಗಳು ಬಾಯಿ ತೆರೆದು ಕೂಗುತ್ತಿದ್ದವು. ಮರಿಗಳಿಗೆ ಆಹಾರ ನೀಡುವ ವಿಷಯದಲ್ಲಿ ಪಕ್ಷಿ ಜೋಡಿಯಲ್ಲಿ ಸ್ಪರ್ಧೆ! ಎರಡೇ ಮರಿಗಳಾದ್ದರಿಂದ ಬೆಳವಣಿಗೆಯಲ್ಲಿ ಅಂತರವೇನೂ ಗೋಚರಿಸುತ್ತಿರಲಿಲ್ಲ. ಒಂದು ವಾರದ ಅನಂತರ, ಮರಿಗಳು ಕಣ್ಣು ತೆರೆದವು. ಬಾಯಿ ಕೂಡಿ ಕೊಂಡಿತ್ತು. ದೇಹದ ತುಂಬೆಲ್ಲಾ ಗರಿಗಳು, ರೆಕ್ಕೆೆ-ಪುಕ್ಕಗಳು ಕಂಡು ಬಂದವು. ಅವು ರೂಪವನ್ನು ಶಬ್ದವನ್ನು ಗುರುತಿಸತೊಡಗಿದವು.
ಶತ್ರುಗಳ ಸುಳಿವು ಕಂಡಾಗ ತಾಯಿಯು ವಿಶಿಷ್ಟ ಕೂಗಿನ ಮೂಲಕ ಎಚ್ಚರಿಕೆ ನೀಡಿದಾಗ ಮರಿಗಳು ಗೂಡಿನಲ್ಲಿ ಅವಿತು ಮಲಗುತ್ತಿದ್ದವು. ಯಾರ ಸುಳಿವೂ ಇಲ್ಲದಿದ್ದಾಗ ಗೂಡಿನಲ್ಲಿ ತಲೆಯೆತ್ತಿ ರೆಕ್ಕೆ ಬಡಿಯುತ್ತಿದ್ದವು. ಗೂಡು ಬಿಟ್ಟು ಹಾರಲು ಪೂರ್ವ ತಯಾರಿ ಮಾಡುತ್ತಿದ್ದವು. ಇದಕ್ಕೆ ಪ್ರೋತ್ಸಾಹವೋ ಎಂಬಂತೆ ಪಕ್ಷಿಗಳು ಕೂಗಿನ ಮೂಲಕ ಬೆಂಬಲ ಸೂಚಿಸುತ್ತಿದ್ದವು. ಆ ದಿನ ನಾನು ಮನೆಯ ಕಿಟಕಿಯಿಂದ ಮರಿಗಳನ್ನು ಗಮನಿಸುತ್ತಿದ್ದೆ. ಅವು ಗೂಡಿನಿಂದ ಹಾರಿ ಗಿಡದ ಕೊಂಬೆಯ ಮೇಲೆ ಕುಳಿತವು. ಈ ಮರಿಗಳಿಗೆ ಹಾರಲು ಕಲಿಸಿದ್ದು ಯಾರು? ಇದೇ ವಿಸ್ಮಯ! ಪಕ್ಷಿಗಳು ಸರದಿಯ ಪ್ರಕಾರ ಆಹಾರವನ್ನು ತಂದುಕೊಡುತ್ತಿದ್ದವು.
ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಮರಿಗಳು ಹಾರುವ ಅಭ್ಯಾಸ ಮಾಡುತ್ತಿದ್ದವು. ಸಂಜೆಯ ವೇಳೆಗೆ ಅವು ಗೂಡಿನ ಗಿಡದಿಂದ ಇಪ್ಪತ್ತು ಅಡಿ ದೂರದಲ್ಲಿರುವ ಇನ್ನೊಂದು ಗಿಡದ ಕೊಂಬೆಗೆ ಹಾರಿ ಕುಳಿತವು. ರಾತ್ರಿಯಾಗುತ್ತಲೇ ತಾಯಿ ಪಕ್ಷಿಯು
ಅವುಗಳ ಬಳಿ ಬಂದು ಕುಳಿತಿತ್ತು. ಮಾತೃವಾತ್ಸಲ್ಯದ ತುಡಿತ, ಸೆಳೆತ. ಕೊಕ್ಕು ಮತ್ತು ಕೊರಳನ್ನು ದೇಹದಲ್ಲಿನ ಪುಕ್ಕಗಳ ನಡುವೆ ಹುದುಗಿಸಿಕೊಂಡು ಮುದುಡಿ ಕುಳಿತುಅವು ರಾತ್ರಿಯನ್ನು ಕಳೆಯುವುದನ್ನು ಗಮನಿಸಿದೆ. ನಂತರದ ಎರಡು ದಿನ ಮರಿಗಳು ಅದೇ ಗಿಡದಲ್ಲಿ ಅತ್ತಿತ್ತ ಹಾರುತ್ತಾ ಕಾಲ ಕಳೆದವು. ರೆಕ್ಕೆ ಪುಕ್ಕಗಳು ಬಲಿತಿದ್ದವು.
ಒಂದು ಮುಂಜಾನೆ ತಾಯಿ, ತಂದೆಯ ಜತೆ ನಭಕ್ಕೆ ನೆಗೆದ ಆ ಎರಡು ಮರಿಗಳು, ಈ ವಿಶಾಲ ಜಗತ್ತಿನ ಪ್ರಕೃತಿಯ ವ್ಯಾಪಾರದಲ್ಲಿ ಬೆರೆತು ಹೋದವು. ಈ ಪೂರ್ತಿ ಪ್ರಕ್ರಿಯೆಯನ್ನು ಎಡೆಬಿಡದೆ ನೋಡಿದ ನನಗೆ ವಿಸ್ಮಯ, ಸಂಭ್ರಮ ಜತೆ ಪರಿಸರದ ಪಾಠವೂ
ದೊರೆತಿದ್ದು ಸುಳ್ಳಲ್ಲ.