ಬೇಲೂರು ರಾಮಮೂರ್ತಿ
ಇಂದು ಮಹಾಕವಿ ಮುದ್ದಣನ (ನಂದಳಿಕೆ ಲಕ್ಷ್ಮೀನಾರಾಯಣ) ಜನ್ಮದಿನ. ತನ್ನ ಮುದ್ದಿನ ಮಡದಿಯನ್ನು ಹಲವು ಹೆಸರು ಗಳಿಂದ ಕರೆಯುತ್ತಿದ್ದ ಈ ಕವಿ ಹೊಸಕನ್ನಡದ ಮೊದ ಮೊದಲ ಸಾಹಿತಿಗಳಲ್ಲಿ ಪ್ರಮುಖನು. ತನ್ನ ಜೀವನ ದುದ್ದಕ್ಕೂ ಕಷ್ಟ, ಬಡತನದಲ್ಲೇ ಕಾಲ ಕಳೆದ ಈ ಕವಿಯು ಸಂಕೋಚದ ಮುದ್ದೆ. ತಾನು ರಚಿಸಿದ ಕಾವ್ಯವನ್ನು ತನ್ನ ಹೆಸರಿನಲ್ಲಿ ಪ್ರಕಟಿಸಲು ಸಹ ಈತನಿಗೆ ಹಿಂಜರಿಕೆ. ಆದ್ದರಿಂದ ಇವನ ಕಾವ್ಯವು ಬೇರೊಬ್ಬರ ಹೆಸರಿನಲ್ಲಿ ಮುದ್ರಣ ಗೊಂಡಿತ್ತು! ಹೊಸಗನ್ನಡದ ಆದ್ಯ ಕವಿಗಳಲ್ಲಿ ಪ್ರಮುಖ ಎನಿಸಿರುವ ಮುದ್ದಣನಿಗೆ ತನ್ನ ಜೀವಿತ ಕಾಲದಲ್ಲಿ ಸಿಗಬೇಕಾ ದಷ್ಟು ಗೌರವ ದೊರೆಯಲಿಲ್ಲ. ಶ್ರೀರಾಮಪಟ್ಟಾಭಿಷೇಕ, ಅದ್ಭುತ ರಾಮಾಯಣ, ಶ್ರೀರಾಮೇಶ್ವಮೇಧ ಮೊದಲಾದ ಪ್ರಮುಖ ಕೃತಿಗಳನ್ನು ರಚಿಸಿ, ಅನಾರೋಗ್ಯದಿಂದ ಗತಿಸಿದಾಗ (16.2.1901) ಮುದ್ದಣನಿಗೆ ಕೇವಲ 31 ವರ್ಷ.
ಆರಂಕುಶಮಿಟ್ಟೊಡಂ ನೆನವುದೆನ್ನಮನಂ ಬನವಾಸಿ ದೇಶಮಂ ಅಂದೊಡನೆ ನಮಗೆ ನೆನಪಾಗುವುದು ಆದಿಕವಿ ಪಂಪ. ಹಾಗೇ
ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು, ಕನ್ನಡಂ ಕತ್ತೂರಿಯಲ್ತೆ, ಪದ್ಯಂ ವದ್ಯಂ ಗದ್ಯಂ ಹೃದ್ಯಂ, ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು, ಸಪ್ತಾಕ್ಷರೀ ಮಂತ್ರ ಮುಂತಾದ ಮಾತುಗಳನ್ನು ಕೇಳಿದಾಗ ನಮಗೆ ನೆನಪಾಗುವುದು ಮುದ್ದಣ. ಕನ್ನಡ ಹೊಸ ಸಾಹಿತ್ಯದ ಮುಂಗೋಳಿ ಎಂದೇ ಹೆಸರಾಗಿದ್ದ ಮುದ್ದಣ ನಮ್ಮನ್ನು ಅಗಲಿ 111 ವರ್ಷಗಳು ಕಳೆದರೂ ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸ್ತುತನಾಗಿದ್ದಾನೆ ಅಂದರೆ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಅನ್ನೋ ಹಾಗೆ ಬದುಕಿದರೇ ಮುದ್ದಣನ ಹಾಗೆ ಬದುಕಬೇಕು ಅನಿಸುತ್ತದೆ.
ಅವನು ಬದುಕಿದ್ದು ಕೇವಲ 31 ವರ್ಷಗಳೇ ಆದರೂ ಮಾಡಿದ ಸಾಧನೆ ಮಾತ್ರ ಅಪಾರ. ಇಂತಹ ಮಹಾನ್ ಕವಿ ನಂದಳಿಕೆ ಲಕ್ಷ್ಮೀನಾರಾಯಣ ಹುಟ್ಟಿದ್ದು 24.1.1870 ರಲ್ಲಿ ಉಡುಪಿಯ ಬಳಿಯ ನಂದಳಿಕೆ ಗ್ರಾಮದಲ್ಲಿ. ಕಾಲವಾಗಿದ್ದು ಉಡುಪಿಯಲ್ಲಿ. ಹುಟ್ಟಿದ್ದು 19ನೇ ಶತಮಾನದಲ್ಲಿಯಾದರೆ ಕಾಲವಾಗಿದ್ದು 20ನೇ ಶತಮಾನದ ಪ್ರಾರಂಭದಲ್ಲಿ ಅಂದರೆ 16.2.1901 ರಂದು.
ಶ್ರೀರಾಮಪಟ್ಟಾಭಿಷೇಕ, ಅದ್ಭುತ ರಾಮಾಯಣ, ಶ್ರೀರಾಮೇಶ್ವಮೇಧದ ಕತೃವನ್ನು ಯಾರಾದರೂ ಮರೆಯಲು ಸಾಧ್ಯವೇ? ಅವನು ಬರೆದ ರತ್ನಾವಳಿ ಕಲ್ಯಾಣ, ಕುಮಾರ ವಿಜಯ ಯಕ್ಷಗಾನಗಳ ಕಾವ್ಯ ಪ್ರಸಂಗಗಳನ್ನು ಈಗ ಯಾರಾದರೂ ಆಡುತ್ತಿರುವರೋ ತಿಳಿದಿಲ್ಲ.
ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತು ಬಹುಷಃ ಮುದ್ದಣನಿಂದಲೇ ಪ್ರಾರಂಭವಾಗಿರಬೇಕು. ಏಕೆಂದರೆ ಅಷ್ಟೇನೂ ಸುಖ ಕಾಣದ ಅವನ ದಾಂಪತ್ಯ ಬದುಕಿನಲ್ಲಿ ರಸಿಕತೆ ಎನ್ನುವುದು ದೂರದ ಮಾತೇ. 18ನೇ ಶತಮಾನದಲ್ಲಿ, ಪ್ರಪಂಚಕ್ಕೆ ಸಾಕಷ್ಟು ತೆರೆದುಕೊಂಡಿರದ, ವಿದ್ಯಾಭ್ಯಾಸದಿಂದ ತುಂಬಾ ದೂರವೇ ಉಳಿದಿದ್ದ, ಪ್ರಪಂಚ ಜ್ಞಾನವೇ ಇರದ ಅಥವಾ ಬೇಕಿರದ, ತಂದೆಯ ಮನೆಯಿಂದ ಗಂಡನ ಮನೆಗೆ ಉದ್ಯೋಗಕ್ಕೆ ಬದಲಾಗುವಂತಹ, ಗಂಡ ಹೇಳಿದ್ದನ್ನು ಮಾತ್ರ ಕೇಳಿಕೊಂಡು ಇರುವಂತಹ, ತನ್ನ ಸಲಹೆ, ಸೂಚನೆಗಳನ್ನು ಯಾರೂ ಕೇಳದಂಥ ಹೆಣ್ಣಿನ ದಿನಗಳು ಅವು. ಅಂತಹ ದಿನಗಳಲ್ಲಿ ಸಾಕಷ್ಟು ಕುಗ್ರಾಮದಿಂದ ಬಂದಿದ್ದ ಹೆಣ್ಣೊಬ್ಬಳಿಂದ ಅದೆಂಥಾ ರಸಿಕತೆಯನ್ನು ನಿರೀಕ್ಷಿಸಲಾದೀತು.
ಜತೆಯಲ್ಲಿ ಸಂಸಾರ ಮಾಡಿದ್ದೇ ಕೆಲವೇ ವರ್ಷಗಳು. ಅಲ್ಲಿ ಕಷ್ಟ ಕಾರ್ಪಣ್ಯಗಳೇ ಹೆಚ್ಚು. ಮುದ್ದಣನ ಮನೋರಮೆಗೆ (ನಿಜ ನಾಮಧೇಯ ಕಮಲಮ್ಮ) ಸಾಹಿತ್ಯದಲ್ಲಿ, ಕಾವ್ಯದಲ್ಲಿ ಆಸಕ್ತಿ ಕಡಿಮೆ. ಕಾರಣ ಅವಳು ಓದಿಲ್ಲ. ಅವಳಿಗೆ ದಿನನಿತ್ಯದ ಕೈಂಕರ್ಯ ನಡೆದರೆ ಸಾಕು ಅಂತ. ಇನ್ನು ಅವಳು ಗಂಡನಿಗೆ ಯಾವ ರೀತಿ ಸ್ಪೂರ್ತಿಯಾಗಿದ್ದಾಳು, ಯಾವ ರೀತಿ ಸಹಕರಿಸಿದ್ದಾಳು!
ಮುದ್ದಿನ ಮಡದಿ
ಆದರೆ ಮುದ್ದಣ ತನ್ನ ಹೆಂಡತಿಯಿಂದ ಬಹಳಷ್ಟು ಮುದ್ದಿನ, ಪ್ರೀತಿಯ ನಿರೀಕ್ಷೆ ಇಟ್ಟುಕೊಂಡಿದ್ದಿರಬಹುದು. ಅದು ಫಲಿಸ ದಿದ್ದಾಗ ಅಂಥಾ ನಿರೀಕ್ಷೆಗಳನ್ನು ತಾನೇ ಬರೆದ ‘ಶ್ರೀರಾಮೇಶ್ವಮೇಧ’ ಕೃತಿಯಿಂದ ತೀರಿಸಿಕೊಂಡಿರಬಹುದು. ಅವನು ಹೆಂಡತಿ ಯನ್ನು ಯಾವ ಯಾವ ರೀತಿ ಪ್ರೀತಿಯಿಂದ ಕರೆಯಬೇಕೆಂದುಕೊಂಡಿದ್ದನೋ ಅವುಗಳನ್ನೆಲ್ಲ ತನ್ನ ಕಾವ್ಯ ರಾಮೇಶ್ವ ಮೇಧದಲ್ಲಿ ಮುದ್ದಣನಾಗಿ ಅವನ ಮುದ್ದಿನ ಮನೋರಮೆಯನ್ನು ಕರೆದ. ಹಾಗೇ ಅವನಿಗೂ ತನ್ನ ಹೆಂಡತಿಯಿಂದ ಪ್ರೀತಿಯ ಮಾತುಗಳಿಂದ ಕರೆಸಿಕೊಳ್ಳಬೇಕು ಅನಿಸಿತ್ತಲ್ಲವೇ? ಪಾಪ ಕಮಲಮ್ಮ ಹಾಗೆ ಯಾವ ಹೆಸರಿನಿಂದಲೂ ಗಂಡನನ್ನು ಕರೆದಿರ ಲಾರಳು.
ಅದಕ್ಕೆ ಅಂಥಾ ಮಾತುಗಳನ್ನೂ ಮುದ್ದಣ ತನ್ನ ಕಾವ್ಯದಲ್ಲಿ ಬಳಸಿಕೊಂಡ. ಶ್ರೀ ರಾಮೇಶ್ವಮೇಧವನ್ನು ಓದುವಾಗ ಇಂಥಾ ದೊಂದು ಅನುರೂಪ ಜೋಡಿ ಇತ್ತೇ ಅನಿಸುವಷ್ಟರ ಮಟ್ಟಿಗೆ ಗಂಡ ಹೆಂಡಿರ ಅನುಬಂಧವನ್ನು ಬರೆದಿದ್ದಾನೆ. ಹಾಸ್ಯ ಪ್ರಸಂಗ ಗಳು ಶ್ರೀ ರಾಮಾಶ್ವಮೇಧ ಕೃತಿಯಲ್ಲಿ ನಾವು ಕಾಣಬಹುದಾದ ಪ್ರಮುಖ ಅಂಶವೆಂದರೆ ಮುದ್ದಣನ ಗ್ರಂಥ ರಚನಾ ಕೌಶಲ್ಯ.
ತಿಳಿದಿರುವ ಕಥೆಯನ್ನೇ ರುಚಿಕರವಾಗಿ ಮರುಪ್ರಸ್ತುತ ಪಡಿಸಿರುವುದು ಅವನ ಹೆಗ್ಗಳಿಗೆ. ಇಲ್ಲಿ ಅವನು ಕನ್ನಡದ ಅನೇಕ
ನುಡಿಗಟ್ಟುಗಳನ್ನೂ, ಪದಚಮತ್ಕಾರವನ್ನೂ ಬಳಸಿಕೊಂಡಿದ್ದಾನೆ. ಕತೆಯನ್ನು ಇದ್ದಂತೇ ಹೇಳಿದರೆ ಸ್ವಾರಸ್ಯವಿರುವುದಿಲ್ಲ ವೆಂದು ಅವನು ತನ್ನ ಮಡದಿಯನ್ನೂ ಸೇರಿಸಿಕೊಂಡು ಮುದ್ದಣ ಮನೋರಮೆಯರ ಸಲ್ಲಾಪದೊಂದಿಗೆ ಕತೆಯನ್ನು ಮುಂದು ವರಿಸಿದ್ದಾನೆ.
ಎಲ್ಲ ಗೊತ್ತಿರುವ ಮುದ್ದಣ ಏನೂ ತಿಳಿಯದ ಮನೋರಮೆ ಇವರಿಬ್ಬರ ಮಾತುಕತೆಯಲ್ಲಿ ಬರುವ ಹಾಸ್ಯಪ್ರಸಂಗಗಳು ಓದುಗ ರಿಗೆ ಮುದ ನೀಡುತ್ತವೆ. ತನ್ನ ಮನೋಭಾವವನ್ನು ಹೆಂಡತಿಯ ಬಾಯಿಂದ ಹೇಳಿಸಿರುವುದು ಅವನ ಇನ್ನೊಂದು ಹೆಗ್ಗಳಿಕೆ. ಪದ್ಯಂ ವದ್ಯಂ ಗದ್ಯಂ ಹೃದ್ಯಂ – ಹೃದ್ಯಪಮ ಗದ್ಯದೊಳೆ ಪೇಳ್ವುದು ಅಂತ ಮನೋರಮೆ ರಾಮಾಶ್ವಮೇಧದ ಕತೆಯನ್ನು ಗದ್ಯದಲ್ಲೇ ಹೇಳು ಅನ್ನುತ್ತಾಳೆ. ಇನ್ನು ಮುದ್ದಣ ಸಂಸ್ಕೃತದಲ್ಲಿ ಕತೆ ಹೇಳಲು ತೊಡಗಿದಾಗ ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು ಕನ್ನಡವನ್ನೇ ಅರಿಯದವಳಿಗೆ ಸಂಸ್ಕೃತದಲ್ಲಿ ಕತೆ ಹೇಳಿದರೆ ಏನು ಸೊಗಸು ಎನ್ನುತ್ತಾಳೆ.
ಶ್ರೀ ರಾಮಾಶ್ವಮೇಧ ಕೃತಿಯ ಇನ್ನೊಂದು ಹೆಗ್ಗಳಿಕೆ ಎಂದರೆ ಇಡೀ ಕಾವ್ಯದಲ್ಲಿ ಬರುವ ಪತಿ ಪತ್ನಿಯರ ಸಂಭಾಷಣೆ. ಇಂಥಾ ಸಂದರ್ಭದಲ್ಲಿ ಗಂಡ ಹೆಂಡತಿಯನ್ನೂ ಏನೆಂದು ಕರೆಯುತ್ತಾನೆ, ಹೆಂಡತಿ ಗಂಡನನ್ನು ಏನೆಂದು ಕರೆಯುತ್ತಾಳೆ ಎನ್ನುವುದೂ ಕೂಡಾ ಈ ಪುಸ್ತಕದಲ್ಲಿ ಸೊಗಸಾಗಿ ಬಂದಿದೆ. ತನ್ನ ಮನಸ್ಸಿನಲ್ಲಿ ಮುದ್ದಣ ಹೆಂಡತಿಯನ್ನು ಎಷ್ಟೆಲ್ಲ ಹೆಸರುಗಳಿಂದ ಕರೆಯಬೇಕು ಅಂದುಕೊಂಡಿದ್ದನೋ ಅವುಗಳನ್ನೆಲ್ಲ ಕಾವ್ಯದಲ್ಲಿ ಮನೋರಮೆಯ ಬಾಯಿಂದ ಕರೆಸಿಕೊಂಡಿದ್ದಾನೆ.
ಹಾಗೇ ತಾನು ಹೆಂಡತಿಯನ್ನು ಏನೇನೆಲ್ಲ ಹೆಸರುಗಳಿಂದ ಕರೆಯುಬೇಕು ಅಂದುಕೊಂಡಿದ್ದನೋ ಅವುಗಳನ್ನೆಲ್ಲ ಮುದ್ದಣನ ಬಾಯಿಂದ ಬರುವ ಹಾಗೆ ಮಾಡಿದ್ದಾನೆ. ಇದು ಪತಿ ಪತ್ನಿಯರ ದಾಂಪತ್ಯ ರಸೋಲ್ಲಾಸದ ಒಂದು ದ್ಯೋತಕ.
ಸತಿ ಪತಿಯರ ಸರಸ ಸಲ್ಲಾಪ
ಮುದ್ದಣನು ಹೆಂಡತಿಯನ್ನು ಕರೆಯುವ ಕೆಲವು ಹೆಸರುಗಳನ್ನು ನೆನಪು ಮಾಡಿಕೊಂಡರೆ ಅಚ್ಚರಿಯಾಗುತ್ತದೆ. ರಮಣಿ, ಪ್ರಾಣೇಶ್ವರಿ, ಬಾಲೆ, ಗಡಸುಗಾರ್ತಿ, ಮನೋರಮೆ, ಎನ್ನರಸಿ, ಪೆಣ್ಣೆ, ಕಾಂತೆ, ಸುಂದರಿ, ಬಾಲೇಂದುಬಾಲೆ, ಚನ್ನರಸಿ, ಹೊನ್ನರಸಿ, ಮೋಹನಾಂಗಿ, ಎನ್ನ ಕೊಂಡಾಟದ ಬಾಳ್ವಣಮೆ, ಎನ್ನ ಕೈಗಳಸಮೆ, ನಿಚ್ಚನಿಡುಗುಂಕುಮದ ಬಿಂಕದ ಮೆಚ್ಚಗಾರ್ತಿ, ಇಚ್ಚೆಗಾರನ ಬೆಚ್ಚ ಪಚ್ಚೆಯ ಕೈಗನ್ನಡಿ, ಎನ್ನಮೀಂಮಚ್ಚಲಚ್ಚಣದ ಸಿರಿಗೈಯೆ, ಮೂಗೊಂಕು ಮೂಗೆರೆಯ ಗುಜ್ಜುಗೊರಲ ತರಳೆ, ಒಚ್ಚೇರಗಣ್ಣ ಹೆಣ್ಣೆೆ. ಮೆಚ್ಚುಗಾರ್ತಿ, ಎನ್ನ ನಿಚ್ದ ಪೂಜೆಯ ಕಟ್ಟಿಚ್ಚಿನ ಪ್ರಾಣಲಿಂಗಮೆ, ಕೈಮರ್ಚಿನ ಗೆಡೆಯಾಟದ ಮುತ್ತಿನ ಸೆಂಡೆ, ಎನ್ನ ಚನ್ನ ಪೊನ್ನರಸಿ, ರಮಣೀಮಣಿ, ಸಿಂಗರದ ಸಿರಿಯೆ, ಕಾಮಕಲ್ಪವಲ್ಲರಿ, ನಸೆಗಾರ್ತಿ, ದೇವಿ, ರತೀದೇವಿ,
ಅಸಿದೊಡಲ ಪೂಗಣ್ಣ ಪೆಣ್, ಸಸಿಮೊಗದ ಕಿಸುವಾಯ ಪುಸಿನಡುವಿನರಸಿ, ಮಿಡೊಮೊಲೆಯ ಪಿಡಿನಡೆಯ ಬಿಡುಜಡೆಯ ನೀರೆ, ಕುಲದೇವಿ, ಸಕಲಗುಣ ಸಂಪನ್ನೆ, ಏಕಗುಣ ಹೀನೆ, ಜೀವಿತೇಶ್ವರಿ, ಎನ್ನತ್ತೆಯ ಮಗಳೆ, ಎನ್ನ ಬಿತ್ತರದ ಚಿತ್ತರದ ಬೊಂಬೆ, ರಂಬೆ, ಮೋಹದ ಗಿಳಿಯೆ, ಎನ್ನರೆವೊಡಲ ಮುದ್ದುಮೊಗದ ಸಿಂಗಾರಿ, ಎನ್ನ ಪೊನ್ನ ಪದಗದ ರನ್ನದಾರದ ಬಚ್ಚಳೆ, ನೀರೆ, ಚಪಳೆ, ಬೆಳತಿಗೆಗಣ್ಣ ಪೆಣ್ಣೆೆ, ನನೆಯಂಬಿನ ಕೊಂಬಿನ ನಾಡೆ ನಾಡೆನಿಕ್ಕುಳಿಸಿದ ಕೈಯ್ಯಮೆಯ್ಯ ನರುಗುಂಪಿನ ಚಲ್ಲಗಾರ್ತಿ, ಸುಭಗೆ, ಕುಲನೇತ್ರೆ, ಕಮನೀಯಗಾತ್ರೆ, ಎಲೆಸೊಬಗೆ, ಕಾಮಿನಿ, ಕಾಮಕಳಾ ನಿಧಾನೆ, ಕಾಮಮದಾಂಧಗಂಧ ಸಿಂಧುರ
ಬಂಧುರಯಾನೆ, ಕಾಮಕಾಳೋರಗೆ ಕಣ್ಮಣಿಯೆ, ಪೆಣ್ಮಣಿಯೆ, ರಾಮಾಭಿರಾಮೆ, ಸುಗ್ರೀವೆ, ನೀಲಕುಂತಳೆ, ಕುಮುದನಯನೆ, ಪದ್ಮಗಂಧಿ, ಕೇಸರಿ ಮಧ್ಯೆ, ಅಂಗದ ವಿರಾಜಿತೆ, ಎರತಿ ಎನ್ನ ಕಣ್ಣೆೆ, ಪಟ್ಟದ ರಾಣಿ, ಶೋಭನಾಂಗಿ, ರನ್ನೆ, ಬಲ್ ಸೆಡಸುಗಾರ್ತಿ, ಗರತಿ, ಮಡದಿರನ್ನೆ.
ಸಾಕೇ, ಒಬ್ಬಳು ಹೆಂಡತಿಯನ್ನು ಕರೆಯಲು ಇಷ್ಟೊಂದು ವಿಶೇಷಣಗಳು! ಕೇವಲ ಮುದ್ದಣನಂಥವನಿಗೆ ಮಾತ್ರ ಹೊಳೆಯೋದು ಸಾಧ್ಯವೇನೋ. ಇಡೀ ರಾಮೇಶ್ವಮೇಧ ಕಾವ್ಯ ಪ್ರಸಂಗದಲ್ಲಿ ಕಥೆಯ ಮೊದಲಿನಿಂದ ಅಂತ್ಯದವರೆಗೆ ಆಗಾಗ ಅಲ್ಲಲ್ಲಿ ಮುದ್ದಣ ತನ್ನ ಮುದ್ದಿನ ಮನೋರಮೆಯನ್ನು ಸಂಬೋಧಿಸುವ ರೀತಿ ಇದು.
ಇಷ್ಟಾದರೆ ತನ್ನಾತ್ಮದ ಒಂದು ಭಾಗ ಮಾತ್ರ ತೃಪ್ತಿ ಕಂಡಂತಾಯಿತು. ತಾನು ಹೆಂಡತಿಯನ್ನು ಹೀಗೆಲ್ಲ ವರ್ಣಿಸಿದರೆ ಇನ್ನು ಹೆಂಡತಿಯಿಂದ ತಾನು ಹೇಗ್ಹೇಗೆ ವರ್ಣಿಸಿಕೊಳ್ಳಬೇಕು ಅಂತ ಅವನಿಗೂ ಆಸೆ ಇರುತ್ತದಲ್ಲ. ನಿಜ ಜೀವನದಲ್ಲಿ ಕಮಲಮ್ಮ ಲಕ್ಷ್ಮೀನಾರಾಯಣನನ್ನು ಏನೆಂದು ಕರೆಯುತ್ತಿದ್ದಳೋ ಗೊತ್ತಿಲ್ಲ. ಆಗಿನ ಕಾಲದಲ್ಲಿ ಒಳಬಾಗಿಲ ಹಿಂದೆ ನಿಂತು ಮೆಲುದನಿ ಯಲ್ಲಿ ಏನೂಂದ್ರೆ, ಕೇಳ್ತೆ, ಇವೇ ಮುಂತಾದ ವಿಶೇಷಣಗಳು ಮಾತ್ರ ಇರುತ್ತಿದ್ದವು.
ಆದರೆ ರಾಮೇಶ್ವಮೇಧ ಕಾವ್ಯದಲ್ಲಿ ಮುದ್ದಣ ತನ್ನ ಹೆಂಡತಿಯಿಂದ ತಾನು ಕರೆಸಿಕೊಂಡ ವಿಶೇಷಣಗಳು ನೋಡಿ ಹೇಗಿವೆ. ರಮಣ, ಎನ್ನೊಡೆಯ ಜಾಣ, ಪ್ರಿಯ ನಲ್ಲ, ಅಣ್ಮ, ಎನ್ನರಸ, ಕಾಮದೇವ, ಮುದ್ದುಮೊಗದ ಮದನ ಮೋಹನರಾಜ, ಗಡಸುಗಾರ, ಚೆನ್ನಿಗ, ಎನ್ನ ರನ್ನ, ಗತಕಿ, ಎನ್ನೆರೆಯ, ಮುದ್ದಿನರಸ, ಬಲ್ ಮೈಮೆಗಾರ, ಚೆನ್ನಿಗರಾಯ, ಮಾಣೆಲೆರಮಣ, ತಾನು ಹೆಂಡತಿ ಯನ್ನು ಸಂಬೋಧಿಸುವಷ್ಟು ಪದಪುಂಜಗಳನ್ನು ಉಪಯೋಗಿಸಿ ಹೆಂಡತಿ ತನ್ನನ್ನು ಸಂಭೋಧಿಸುವಲ್ಲಿಲ್ಲ ಎನ್ನುವುದು ಮುದ್ದಣನಿಗೆ ಗೊತ್ತು.
ಅಂದರೆ ಅವನಲ್ಲಿ ಇರುವಷ್ಟು ರಸಿಕತೆ ಅವಳಲ್ಲಿರಲಿಲ್ಲ ಎಂದು ಇದರ ಸೂಕ್ಷ್ಮಾರ್ಥವೇ. ಆದರೆ ಇಡೀ ಕಾವ್ಯದುದ್ದಕ್ಕೂ
ಮುದ್ದಣ ಮನೋರಮೆಯರು ಒಬ್ಬರನ್ನೊೊಬ್ಬರು ಕಿಚಾಯಿಸುವ ಧ್ವನಿಯಂತೂ ಇದ್ದೇ ಇದೆ. ಮನೋರಮೆ ಸೂಕ್ಷ್ಮಮತಿ, ಗಂಡನ ಕೊಂಕನ್ನು ಅರಿತು ಕೂಡಲೇ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವವಳು. ತಾನು ಕೇಳಿದುದನ್ನು ಗಂಡನಿಂದ ಪಡೆದುಕೊಳ್ಳುವ ಧೀರೆ. ( ಪಾಪ ಕಮಲಮ್ಮನಿಗೆ ಈ ಅದೃಷ್ಟ ಇರಲಿಲ್ಲ ಕಾರಣ ಲಕ್ಷ್ಮೀನಾರಾಯಣದ ಅಷ್ಟೇನೂ
ಉತ್ತಮವಾಗಿರಿದ ಆರ್ಥಿಕ ಪರಿಸ್ಥಿತಿ).
ಇನ್ನು ಅವರಿಬ್ಬರ ನಡುವಿನ ಸಂಭಾಷಣೆಯಲ್ಲಿ ಪರಸ್ವರರು ಹೊಗಳುವ, ಸಣ್ಣದಾಗಿ ತೆಗಳುವ, ಕಿಚಾಯಿಸುವ ವಿಶೇಷಣಗಳ ಪರಿಯಂತೂ ಇದ್ದೇ ಇದೆ. ಕೆಲವು ಉದಾಹರಣೆಗಳನ್ನು ನೋಡೋಣ. ಹೆಂಡತಿಯನ್ನು ಹೊಗಳಿದ ಗಂಡ ಮುದ್ದಣ ತನ್ನ ಮುದ್ದಿನ ಮನೋರಮೆಯನ್ನು ಈ ಕೆಲವು ವಿಶೇಷಣಗಳಿಂದ ಸಂಬೋಧಿಸುತ್ತಾನೆ – ನಾನು ಕೊಂಡಾಡುವ ಜೀವಂತ ನಿಧಿಯೇ – ನನ್ನ ಕೈಯ ಕಳಶವೇ – ಓ ನಿತ್ಯವೂ ಅಡ್ಡ ಕುಂಕುಮವನಿಡುವ ನನ್ನ ಪ್ರಿಯೆ – ಓ ಕಾಮನ ಪಚ್ಚೆಯ ಕೈಗನ್ನಡಿ – ಓ ಕಾಡಿಗೆ ಯನ್ನು ಹೆಚ್ಚಿರುವ ಕಣ್ಣುಗಳುಳ್ಳ ನನ್ನ ಹೆಣ್ಣೆ – ಓ ನನ್ನ ಕಾಮಲಕ್ಷಣದ ಕಾಂತಿಭೂಮಿಯೇ – ಓ ನನ್ನ ತ್ರಿಭಂಗದ ಮೂರು ಅಡ್ಡ
ಗೆರೆಗಳುಳ್ಳ ಗುಜ್ಜಕೊರಳಿನ ತರುಣಿ – ನನ್ನ ಶೃಂಗಾರ ಸಿರಿಯೇ – ನನ್ನ ಮನದ ದೇವತೆಯೇ – ಎಲ್ಲ ಗುಣಗಳ ಸಂಪತ್ತನ್ನೂ
ಹೊಂದಿರುವವಳೇ – ಹೊಳೆಯುವ ಕಣ್ಣಿನ ಹೆಣ್ಣೆ – ಎಲೆ ಸುಂದರಿಯರಿಗೆಲ್ಲ ಸುಂದರಳಾದವಳೇ – ಸೊಗಸಾದ ಕೊರಳುಳ್ಳವಳೇ – ಕಪ್ಪಾದ ಕೂದಲಿನವಳೇ – ಕನ್ನೈದಿಲೆಯಂಥ ಕಣ್ಣುಳವಳೇ – ಕಮಲದಂತೆ ಪರಿಮಳವುಳ್ಳವಳೇ – ಸಿಂಹದಂತೆ ತೆಳುವಾದ ನಡುವುಳ್ಳವಳೇ – ನೀನೊಳ್ಳೆ ಜಂಬಗಾತಿಯಾದೆಯಲ್ಲ – ಇತ್ಯಾದಿ ಅದಕ್ಕೆ ಪ್ರತಿಯಾಗಿ ಮನೋರಮೆಯೂ ಮುದ್ದಣನನ್ನು
ಈ ಕೆಲವು ವಿಶೇಷಣಗಳಿಂದ ಸಂಬೋಧಿಸುತ್ತಾಳೆ – ನೀನೊಬ್ಬ ಅಪೂರ್ವವಾದ ವರ್ಣಕಕವಿಗಳ ರಾಜ – ಎಲೆ ಮದನಮೋಹನ ರಾಜನೇ – ನೀನು ಗಟ್ಟಿಗ – ನೀನು ಜಾಣ – ನೀನು ತುಂಬಾ ಮಹಿಮಾವಂತ – ನನ್ನ ಸುಂದರನಾದ ಒಡೆಯನೇ – ಮುದ್ದು ಮುಖದ ಸುಂದರನೇ – ಇನ್ನೇನು ಜಾಣನೋ ನೀನು – ಇತ್ಯಾದಿ.
ಕನ್ನಡದ ಪ್ರಮುಖ ಕವಿ, ಸಾಹಿತಿ ಮುದ್ದಣನ ಜನ್ಮದಿನದಂದು ಇಷ್ಟೆಲ್ಲಾ ನೆನಪಿಸಿಕೊಳ್ಳಲು ಸಂತಸ ಎನಿಸುತ್ತದೆ.