Saturday, 23rd November 2024

ಮಹಾತ್ಮ 73ನೇ ಪುಣ್ಯತಿಥಿ: ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 73ನೇ ಪುಣ್ಯತಿಥಿ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಸ್ಮರಿಸಿದರು.

ಗಾಂಧಿಯವರ ಶಾಂತಿ, ಅಹಿಂಸೆ, ಸರಳ, ಶುದ್ಧ, ಮಾನವೀಯತೆಯ ಜೀವನ ಮತ್ತು ಸಂದೇಶಗಳು ದಾರಿದೀಪ ಎಂದು ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಬಾಪು ಅವರ ಮಾರ್ಗದರ್ಶನ, ತತ್ವಗಳು ಲಕ್ಷಾಂತರ ಮಂದಿಗೆ ಪ್ರೇರಣೆ. ಇಂದು ಹುತಾತ್ಮ ದಿನದಂದು ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಿಳೆಯರು ಮತ್ತು ಪುರುಷರನ್ನು ಇಂದು ನೆನೆಸಿಕೊಳ್ಳೋಣ ಎಂದು ಪ್ರಧಾನಿ ಹೇಳಿದ್ದಾರೆ.

ಜನವರಿ 30, 1948ರಂದು ದೇಶದ ಪಿತಾಮಹ ಎಂದು ಕರೆಯಲ್ಪಡುವ ಮಹಾತ್ಮಾ ಗಾಂಧಿಯವ ಹತ್ಯೆ ಮಾಡಲಾಗಿತ್ತು. ಅವರ ಹತ್ಯೆಯಾದ ದಿನವನ್ನು ದೇಶದಲ್ಲಿ ಹುತಾತ್ಮ ದಿನ ಅಥವಾ ಶಾಹೀದ್ ದಿವಸ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸುವ ದಿನವನ್ನಾಗಿ ಇಂದಿನ ದಿನವನ್ನು ಮೀಸಲಿಡಲಾಗಿದೆ.

ಗುಜರಾತ್ ನ ಪೋರಬಂದರ್ ನಲ್ಲಿ ಅಕ್ಟೋಬರ್ 2, 1869ರಲ್ಲಿ ಜನಿಸಿದ್ದ ಮೋಹನ್ ದಾಸ್ ಕರಮಚಂದ ಗಾಂಧಿ ಉನ್ನತ ಶಿಕ್ಷಣವನ್ನು ಗಳಿಸಿದ್ದು ಇಂಗ್ಲೆಂಡ್ ನಲ್ಲಿ. ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ, ಬ್ರಿಟಿಷರ ಗುಲಾಮಗಿರಿ ಆಡಳಿತ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವ ಹೋರಾಟದ ಮುಂಚೂಣಿ ವಹಿಸಿದ್ದರು. ಅದಕ್ಕೆ ಅವರು ಅನುಸರಿಸಿದ ಮಾರ್ಗ ಅಹಿಂಸೆ, ಶಾಂತಿಯುತ ಹೋರಾಟ.