ತನ್ನಿಮಿತ್ತ
ಮಂಜುನಾಥ್ ಡಿ.ಎಸ್
ಡಾ.ಸಿದ್ಧಲಿಂಗಯ್ಯನವರು ಕನ್ನಡದ ಅಗ್ರಮಾನ್ಯ ಕವಿ. ಇವರ ಸಮಗ್ರ ಸಾಹಿತ್ಯದ ಎರಡನೆಯ ಸಂಪುಟದ ‘ಅಧ್ಯಕ್ಷರ ನುಡಿ’ ಯಲ್ಲಿ, ‘ಮಾನವೀಯ, ಜೀವಪರ ನೆಲೆಯಲ್ಲಿ ಬದುಕನ್ನು ಕಾಣುವ, ಕಟ್ಟುವ ಲೋಕದೃಷ್ಟಿ ಸಿದ್ಧಲಿಂಗಯ್ಯನವರದು’ ಎಂದಿದ್ದಾರೆ ಡಾ.ವಸುಂಧರಾ ಭೂಪತಿ.
ಮುಂದುವರಿದು, ಹಲವು ಚಳವಳಿಗಳನ್ನು ರೂಪಿಸಿದ, ಮುನ್ನಡೆಸಿದ ಶಕ್ತಿಯೂ ಆಗಿರುವ ಡಾ. ಸಿದ್ಧಲಿಂಗಯ್ಯನವರ ಮತ್ತೊಂದು ಮುಖವನ್ನು ಪರಿಚುಸುತ್ತಾರೆ. ರಾಜಕಾರಣಿಯಾಗಿಯೂ ಅವರಿಗೆ ವಿಶೇಷ ಬಗೆಯ ವ್ಯಕ್ತಿತ್ವವಿದೆ. ‘ಅದು ಸಾಂಸ್ಕೃತಿಕ, ಸಾಹಿತ್ಯಿಕ ಹೃದಯ ಸ್ಪಂದನೆಯನ್ನೊಳಗೊಂಡ ರಾಜಕೀಯ ಎಚ್ಚರದ ವ್ಯಕ್ತಿತ್ವ’ ಎಂದು ಪ್ರಶಂಸಿಸಿದ್ದಾರೆ. ಕವಿಯೆಂದೇ ಪ್ರಸಿದ್ಧರಾಗಿರುವ ಡಾ.ಸಿದ್ಧಲಿಂಗಯ್ಯನವರು ನಾಟಕಗಳು, ಸಂಶೋಧನಾ ಪ್ರಬಂಧಗಳು, ಹಾಗೂ ಆತ್ಮಕಥನ ವನ್ನೂ ಬರೆದಿರುವುದು ಸಾಹಿತ್ಯಾಸಕ್ತರಿಗೆ ತಿಳಿದ ವಿಷಯವೇ ಆಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಹಾಗೂ ಪಂಪ ಪ್ರಶಸ್ತಿ, ಡಾ.ಸಿದ್ಧಲಿಂಗಯ್ಯನವರಿಗೆ ಸಂದಿರುವ ಕೆಲವು
ಪ್ರಮುಖ ಪುರಸ್ಕಾರಗಳು. ಇವುಗಳೊಡನೆ ಶ್ರವಣ ಬೆಳಗೊಳದಲ್ಲಿ ಜರುಗಿದ ೮೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಮೆಯೂ ಇವರದ್ದಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಇವರಿಗಿದೆ.
ಎರಡು ಅವಧಿಗೆ ಮೇಲ್ಮನೆಯ ಸದಸ್ಯರಾಗಿ ಕನ್ನಡದ ಏಳಿಗೆಗಾಗಿ ಶ್ರಮಿಸಿದ್ದಾರೆ. ಇಷ್ಟೆಲ್ಲ ಇದ್ದರೂ ಡಾ.ಸಿದ್ಧಲಿಂಗಯ್ಯನವರು ತಮ್ಮ ಸರಳತೆ, ಸಜ್ಜನಿಕೆಗಳಿಂದ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕಂಗೊಳಿಸುತ್ತಾರೆ. ಕವಿಯ / ಸಾಹಿತಿಯ ಕೃತಿಗಳನ್ನು
ಜನಸಾಮಾನ್ಯರು ಮೆಚ್ಚುವುದಕ್ಕಿಂತ ಅಮೂಲ್ಯ ಪ್ರಶಸ್ತಿ ಬೇರೊಂದಿಲ್ಲ ಎನ್ನುತ್ತಾರವರು. ‘ಸಾಧನೆ ಹಾಗೂ ಬರವಣಿಗೆಗೆ ಗಮನ ಕೊಡಿ, ಪ್ರಶಸ್ತಿಗಳ ಹಿಂದೆ ಬೀಳಬೇಡಿ’ ಎಂದು ಅವರು ಯುವ ಸಾಹಿತಿಗಳಿಗೆ
ಕಿವಿಮಾತು ಹೇಳುತ್ತಾರೆ. ಸಾಹಿತ್ಯೋಪಾಸನೆ ಯೆಡೆಗೆ ಸಾಗಲು ಯುವ ಜನತೆಗೆ ಹಿರಿಯ ಸಾಹಿತಿಗಳು, ಕವಿಗಳು ಮಾರ್ಗದರ್ಶನ ಮಾಡಬೇಕು ಎಂದು ಡಾ.ಸಿದ್ಧಲಿಂಗಯ್ಯನವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಬೆಂಗಳೂರಿನ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾಗುವ ಮೂಲಕ ನುಡಿದುದನ್ನು ನಡೆದು ತೋರಿಸಿ ಮಾದರಿಯಾಗಿದ್ದಾರೆ.
ಇವರ ಸಲಹೆ, ಮಾರ್ಗದರ್ಶನ ಹಾಗೂ ಸಕ್ರಿಯ ಭಾಗವಹಿಸುವಿಕೆ ಯಿಂದ ಈ ಪ್ರತಿಷ್ಠಾನ ಅನೇಕ ಉತ್ತಮ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲು ನೆರವಾಗಿದ್ದಾರೆ. ಡಾ.ಸಿದ್ಧಲಿಂಗಯ್ಯನವರ ಮಾತುಗಳಲ್ಲಿ ನವಿರಾದ ಹಾಸ್ಯ ಹಾಸುಹೊಕ್ಕಾಗಿರುವುದು ವಿಶೇಷ. ಅವರ ಮಾತುಗಳನ್ನು ಕೇಳುತ್ತಿದ್ದರೆ ಸಮಯದ ಪರಿವೆಯೇ ಇರುವುದಿಲ್ಲ. ಅವರ ಅಮೋಘ ಕಥನ ಶೈಲಿಯಿಂದಾಗಿ ಒಂದು ಘಳಿಗೆಯೂ ನೀರಸ ಎನಿಸುವುದಿಲ್ಲ.
ನಕ್ಕರೆ ತೆರಿಗೆ ಕಟ್ಟಬೇಕೇನೋ ಎಂಬಂತಿರುವವರನ್ನೂ ಸಹ ನಗಿಸುವ ಕಲೆ ಡಾ.ಸಿದ್ಧಲಿಂಗಯ್ಯನವರಿಗೆ ಕರಗತವಾಗಿದೆ. ಡಾ.ಸಿದ್ಧಲಿಂಗಯ್ಯನವರ ಸ್ಮರಣಶಕ್ತಿಗೆ ಶರಣೆನ್ನಲೇಬೇಕು. ಮಾತಿನ ಮಧ್ಯೆ ತಮ್ಮ ಜೀವನದ ಅನೇಕ ಸ್ವಾರಸ್ಯಕರ ಘಟನೆಗಳನ್ನು ಅವರು ರಂಜನೀಯವಾಗಿ ವಿವರಿಸುವುದನ್ನು ಕೇಳುವುದೇ ಖುಷಿ ಎನಿಸುತ್ತದೆ. ನೆನಪಿನ ಕಣಜದಿಂದ ಹೊರತೆಗೆದ ಹಲವಾರು ಹಳೆಯ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅವರ ಕೌಶಲ್ಯ ಬೆರಗುಗೊಳಿಸುತ್ತದೆ.
ಸಮಾರಂಭಗಳಲ್ಲಿ ಉಪಸ್ಥಿತರಿದ್ದ ಸಭಿಕರನ್ನೂ ಗುರುತಿಸಿ, ಹೆಸರಿಸಿ, ಸ್ಮರಿಸುವ ಅವರ ಸೌಜನ್ಯಕ್ಕೆ ತಲೆಬಾಗಬೇಕೆನಿಸುತ್ತದೆ. ನಿರಂತರ ಸಾಗಿ ಬಂದಿರುವ ಹಸಿವು, ಅಸಮಾನತೆ, ಶೋಷಣೆಗಳ ಕುರಿತಂತೆ ಕಾವ್ಯ ರಚಿಸಿ ನೋವುಂಡವರ ಧ್ವನಿಯಾಗಿರುವು ದರೊಡನೆ ಮಾನವತಾವಾದಿಯೂ ಆಗಿರುವ ಡಾ.ಸಿದ್ಧಲಿಂಗಯ್ಯನವರಿಗೆ ಜನುಮ ದಿನದ (3 ಫೆಬ್ರವರಿ 1954) ಈ ಸಂದರ್ಭ ದಲ್ಲಿ ಗೌರವಪೂರ್ವಕ ಶುಭಾಶಯಗಳನ್ನು ಸಲ್ಲಿಸಲು ಸಂತಸವೆನಿಸಿದೆ.