ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್
ಒಬ್ಬ ವ್ಯಕ್ತಿಯ ಮೂತ್ರವು ಹಸಿರು ಬಣ್ಣ ವಾಗಿರುವುದು, ಹದಿಹರೆಯದ ಯುವಕನ ಹೃದಯದಲ್ಲಿ ಕಾಣಿಸಿಕೊಂಡ ಹೊಲಿಗೆಯ ಸೂಜಿ – ಹೀಗೆ ಹಲವಾರು ಅಪರೂಪದ ವೈದ್ಯಕೀಯ ವೈಚಿತ್ರ್ಯಗಳು ೨೦೨೦ರಲ್ಲಿ ವರದಿ ಯಾಗಿವೆ. ಇವು ನೇರವಾಗಿ ವೈಜ್ಞಾನಿಕ ಅಥವಾ ವೈದ್ಯಕೀಯ ಅಧ್ಯಯನ
ಗಳಲ್ಲ. ಆದರೆ ಈ ತರಹದ ರೋಗಿಗಳ ಬಗ್ಗೆ ಗೊತ್ತಿದ್ದರೆ ಉಳಿದ ವೈದ್ಯರುಗಳಿಗೆ ಅಪರೂಪದ ಕಾಯಿಲೆ ಅಥವಾ ಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಈ ಹಾದಿಯಲ್ಲಿ ಸಾಮಾನ್ಯವಾದ ಕಾಯಿಲೆಗಳ ಅಪರೂಪದ ಲಕ್ಷಣಗಳು ಇರುವ ಸಾಧ್ಯತೆಯೂ ಇದೆ.
೧. ಹಸಿರು ಮೂತ್ರ: ನಿಮ್ಮ ಮೂತ್ರದ ಬಣ್ಣ ಹಸಿರಿಗೆ ತಿರುಗಿದರೆ ನೀವು ಖಂಡಿತವಾಗಿಯೂ ಗಾಬರಿ ಗೊಳ್ಳುತ್ತೀರಿ. ಆದರೆ ಕೆಲವೊಂದು ಔಷಧಗಳ ಪಾರ್ಶ್ವ ಪರಿಣಾಮವಾಗಿ ಅಮೆರಿಕದ ಚಿಕಾಗೋದ ಒಬ್ಬ ಪುರುಷನಲ್ಲಿ ಕಾಣಿಸಿಕೊಂಡಿತು. ೬೨ ವರ್ಷದ ಈತನ ರಕ್ತದಲ್ಲಿ ವಿಪರೀತ ಮಟ್ಟದ ಕಾರ್ಬನ್ ಡೈಆಕ್ಸೆ ಡ್ (ಇಂಗಾಲಾಮ್ಲ) ಕಾಣಿಸಿಕೊಂಡದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ಇದು ಜೀವಘಾತವಾದ ಒಂದು ಸಂದರ್ಭ ಎಂದು ಹೇಳಬಹುದು. ಆತನನ್ನು ವೆಂಟಿಲೇಟನಲ್ಲಿ ಇರಿಸಿ ಪ್ರೊಪ್ರೊಫೈಲ್ ಎಂಬ ಅರಿವಳಿಕೆಯ (Anaesthesia) ಔಷಧ ಕೊಡಲಾಯಿತು.
೫ ದಿವಸಗಳ ನಂತರ ಆತನ ಮೂತ್ರಚೀಲದಲ್ಲಿ ಶೇಖರಗೊಂಡ ಮೂತ್ರ ಸಂಪೂರ್ಣವಾಗಿ ಹಸಿರು ಬಣ್ಣದ್ದಾಗಿತ್ತು. ಅದು ಪ್ರೊಪ್ರೊಪಾಲ್ ಔಷಧದ
ಪರಿಣಾಮ ಎಂದು ಗೊತ್ತಾಯಿತು. ಈ ಔಷಧವನ್ನು ಜನರಲ್ ಅನಸ್ತೇಷಿಯಾದಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ. ಅಪರೂಪ ವಾಗಿ ಮೂತ್ರ ಈ ರೀತಿ ಹಸಿರು ಬಣ್ಣಕ್ಕೆ ತಿರುಗುತ್ತದೆ. ಈ ಔಷಧ ನಿಲ್ಲಿಸಿದ ನಂತರ ಆತನ ಮೂತ್ರ ಮೊದಲಿನಂತೆಯೇ ಆಯಿತು ಎಂಬುದು ಸಮಾಧಾನಕರ ಅಂಶ. ಇದು ಕಳೆದ ಡಿಸೆಂಬರ್‌ನಲ್ಲಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ವರದಿಯಾಗಿದೆ.
೨. ಹೃದಯ ಛಿದ್ರವಾಗಿರುವುದು!
೧೭ ವರ್ಷದ ಈ ಯುವಕ ಎದೆಯ ಭಾಗದಲ್ಲಿ ವಿಪರೀತ ನೋವು ಎಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲ್ಪಟ್ಟ. ಆ ನೋವು ಆತನ ಬೆನ್ನಿನ ಭಾಗದಲ್ಲಿಯೂ ಕಾಣಿಸಿಕೊಳ್ಳುತ್ತಿತ್ತು. ಸಿಟಿ ಸ್ಕ್ಯಾನ್ ತೆಗೆಯಲಾಗಿ ಆತನ ಹೃದಯದಲ್ಲಿ ಲೋಹದ ಉದ್ದದ ವಸ್ತು ಇರುವುದಾಗಿ ಕಂಡು ಬಂದಿತು. ಆ ನಂತರ ಅದು ೧.೪ ಇಂಚು (೩.೫ ಸೆ.ಮೀ) ಉದ್ದದ ಹೊಲಿಗೆಯ ಸೂಜಿ ಎಂದು ಗೊತ್ತಾಯಿತು. ವೈದ್ಯರು ಆತನಿಗೆ ತೆರದ ಹೃದಯದ ಶಸಚಿಕಿತ್ಸೆ ಮಾಡಿ ಹೊರತೆಗೆದರು. ತಾನು ಏನನ್ನು ತಿಂದದ್ದಾಗಲೀ ಅಥವಾ ಎದೆಗೆ ಹೊಡೆತ ಬಿದ್ದದ್ದಾಗಲೀ ಇಲ್ಲ ಎಂದು ಆತ ಆರಂಭದಲ್ಲಿ ಹೇಳಿದ್ದ.
ನಂತರ ತನ್ನ ಬಟ್ಟೆಗಳನ್ನು ತಾನೇ ಹೊಲಿದುಕೊಳ್ಳುವುದಾಗಿಯೂ ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಬಾಯಿಯಲ್ಲಿ ಸೂಜಿ ಇಟ್ಟು ಕೊಳ್ಳುವುದಾಗಿಯೂ ತಿಳಿಸಿದ. ಆದರೆ ಸೂಜಿ ನುಂಗಿದ ಬಗ್ಗೆ ತನಗೆ ಗೊತ್ತಿಲ್ಲ ಎಂದು ತಿಳಿಸಿದ. ಹೃದಯದ ಭಾಗದಲ್ಲಿ ಈ ತರಹದ ಲೋಹದ ಹೊರಗಿನ ಪರಕೀಯ ವಸ್ತು ಸಿಕ್ಕಿಕೊಳ್ಳುವುದು ಅದರಲ್ಲಿಯೂ ಮಕ್ಕಳಲ್ಲಿ ಮತ್ತು ಯುವಕರಲ್ಲಿ ತುಂಬಾ ಅಪರೂಪ. ಈ ಶಸಚಿಕಿತ್ಸೆಯ ನಂತರ ಆತ ಸಂಪೂರ್ಣ ಗುಣಹೊಂದಿದ. ಇದು ಜುಲೈ ೨೦೨೦ ರ ಜರ್ನಲ್ ಆಫ್ ಎಮರ್ಜೆನ್ಸಿ ಮೆಡಿಸಿನ್‌ನಲ್ಲಿ ವರದಿಯಾಗಿದೆ.
೩. ಶೀತಕ್ಕೆ ವಿಪರೀತ ಅಲರ್ಜಿ: ಬೇರೆ ಬೇರೆ ಜನರು ವಿವಿಧ ವಸ್ತುಗಳಿಗೆ ಅಲರ್ಜಿ ಹೊಂದಿರುವ ಸಾಧ್ಯತೆ ಇದೆ. ಹಾಗೆಯೇ ತುಂಬಾ ಶೀತದ ಗಾಳಿಯೂ ಕೆಲವರಲ್ಲಿ ಅಲರ್ಜಿ ಉಂಟುಮಾಡ ಬಹುದು. ಕೊಲೊರಾಡೋದ ಈತನ ಅಲರ್ಜಿ ಎಷ್ಟು ತೀವ್ರವಾಗಿತ್ತೆಂದರೆ ಆತ ಮರಣ
ಹೊಂದುವ ಸಾಧ್ಯತೆ ತುಂಬಾ ಇತ್ತು. ೩೪ ವರ್ಷದ ಈತ ಬಿಸಿ ಬಿಸಿ ಷವರ್ ಸ್ನಾನ ಮಾಡುತ್ತಿದ್ದವ ಬಿಸಿ ನೀರಿನಿಂದ ಹೊರಗೆ ಬಂದು ತಂಪಾದ ವಾತಾವರಣಕ್ಕೆ ಬಂದ ಕೂಡಲೇ ಎಚ್ಚರ ತಪ್ಪಿ ಬಿದ್ದ. ಆತನಿಗೆ ಉಸಿರಾಡಲೇ ಕಷ್ಟವಾಯಿತು. ಮೈ ತುಂಬಾ ಗುಳ್ಳೆಗಳು ಕಾಣಿಸಿಕೊಂಡವು. ಇದನ್ನು ಜೀವಕ್ಕೇ ಮಾರಕವಾಗುವ ಅನಾಫಿಲಿಕ್ಸ್ ಎಂದು ಕರೆಯುತ್ತೇವೆ. ಕೂಡಲೇ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಮಾಡಲಾಯಿತು.
ವೈದ್ಯರು ಶೀತ ಅರ್ಟಿಕೇರಿಯಾ ಎಂದು ರೋಗ ನಿರ್ಣಯ ಮಾಡಿದರು. ಸಾಮಾನ್ಯವಾಗಿ ಶೀತಕ್ಕೆ ಅಲರ್ಜಿ ಇದ್ದವರಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಶೀತ ತಾಪಮಾನ, ಶೀತ ಗಾಳಿ, ತಣ್ಣನೆಯ ನೀರು – ಹೀಗೆ ಯಾವುದಿಂದಲಾದರೂ ಇದು ಉಂಟಾಗಬಹುದು. ಕಡಿಮೆ ಹಂತದ ಅಲರ್ಜಿ ಎಂದರೆ ಚರ್ಮದ ಭಾಗದಲ್ಲಿ ಹಲವಾರು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ತೀವ್ರ ರೀತಿಯ ಹಂತ ಎಂದರೆ ಮೇಲೆ ತಿಳಿಸಿದಂತೆ ಅನಫಿಲಾಕ್ಸಿಸ್ ರಿಯಾಕ್ಷನ್. ಆಗ ವ್ಯಕ್ತಿಯ ರಕ್ತದೊತ್ತಡ ಏರು ಪೇರಾಗುತ್ತದೆ, ವಾಯು ನಾಳಗಳು ಕಿರಿದಾಗಿ ವ್ಯಕ್ತಿಗೆ ಉಸಿರಾಡಲೇ ಕಷ್ಟ ವಾಗುತ್ತದೆ. ಮೇಲಿನ ವ್ಯಕ್ತಿಯನ್ನು ಆಂಟಿಹಿಸ್ಟಮೀನ್ ಮತ್ತು ಸ್ಟೀರಾಯ್ಡ ಕೊಟ್ಟು ಚಿಕಿತ್ಸೆ ಮಾಡಲಾಯಿತು.
೪. ಜೀವಕ್ಕೇ ಮುಳುವಾದ ಲೈಕೋರೈಸ್: ಯಾವುದೂ ಅತಿಯಾದರೆ ಅದು ವಿಷ ಎಂದು ಒಂದು ಸಾಮಾನ್ಯ ತಿಳಿವಳಿಕೆ. ಕ್ಯಾಂಡಿಯಂತಹಾ ಲೈಕೋರೈಸ್ ಎಂಬ ತಿನ್ನುವ ಪದಾರ್ಥ ಜೀವಕ್ಕೆ ಎರವಾಗಬಲ್ಲದು. ೫೪ ವರ್ಷದ ಮೆಸಾಚುಸೆಟ್ಸ್‌ನ ಈತನಿಗೆ ಒಮ್ಮೆಲೇ ಪ್ರಜ್ಞೆ ತಪ್ಪಿತು. ಆಗ ಇವನ ಹೃದಯದ ಬಡಿತದಲ್ಲಿ ತೀವ್ರ ರೀತಿಯ ಏರುಪೇರು ಕಂಡು ಬಂದಿತು. ಆತನ ಕುಟುಂಬದ ಸದಸ್ಯರು ಒದಗಿಸಿದ ವಿವರಗಳ ಪ್ರಕಾರ ಆತ ಸರಿಯಾಗಿ ಊಟ ಮಾಡುತ್ತಿರಲಿಲ್ಲ, ಪ್ರತಿದಿನ ಬಹಳಷ್ಟು ಪ್ರಮಾಣದ ಕಪ್ಪು ಬಣ್ಣದ ಲೈಕೋರೈಸ್ ಸೇವಿಸುತ್ತಿದ್ದ. ಆತನಿಗೆ ತೀವ್ರ ಚಿಕಿತ್ಸಾ ಘಟಕದಲ್ಲಿ ೩೨
ಗಂಟೆಗಳ ಕಾಲ ತೀವ್ರ ಚಿಕಿತ್ಸೆ ಕೊಟ್ಟರೂ ಆತ ಮರಣ ಹೊಂದಿದ. ಈ ಕಪ್ಪು ಲೈಕೋರೈಸ್‌ನಲ್ಲಿ ಗ್ಲೆಸಿರೈಸಿನ್ ಎಂಬ ಪದಾರ್ಥ ವಿರುತ್ತದೆ. ಇದು ಕಪ್ಪು ಬೇರಿನಿಂದ ತೆಗೆದ ಪದಾರ್ಥ.
ಇದು ದೇಹದ ಪೊಟ್ಯಾಸಿಯಂ ಅಂಶವನ್ನು ತೀವ್ರ ವಾಗಿ ಕಡಿಮೆ ಮಾಡಿ ರಕ್ತದೊತ್ತಡ ತೀವ್ರವಾಗಿ ಹೆಚ್ಚಿಸಿ, ಹೃದಯದ ಬಡಿತದಲ್ಲಿ ತೀವ್ರ ರೀತಿಯ
ಏರುಪೇರು ಉಂಟುಮಾಡುತ್ತದೆ. ದಿವಸದಲ್ಲಿ ೨ ಔನ್ ನಷ್ಟು ಈ ಕಪ್ಪು ಲೈಕೋರೈಸ್‌ನ್ನು ೧೫ ದಿವಸ ಸೇವಿಸಿದರೆ ೪೦ ವರ್ಷ ಮತ್ತು ಅದರ ನಂತರದ ವಯಸ್ಸಿನವರಲ್ಲಿ ಹೃದಯದ ಗತಿಯಲ್ಲಿ ತೀವ್ರವಾದ ಏರುಪೇರು ಉಂಟಾಗುತ್ತದೆ.
೫.ಸಾರಾಯಿ ಕಾರ್ಖಾನೆಯಾದ ಮೂತ್ರ ಚೀಲ : ಈ ಮಹಿಳೆಯ ಮೂತ್ರದ ಚೀಲವು ಸಕ್ಕರೆಯನ್ನು ಸಾರಾಯಿಯಾಗಿ ಪರಿವರ್ತನೆಗೊಳಿಸುತ್ತಾ ಸಾರಾಯಿ ಕಾರ್ಖಾನೆಯಾಯಿತು. ೬೧ ವರ್ಷದ ಈ ಮಹಿಳೆಗೆ ಯಕೃತ್ತಿನ ಸಿರೋಸಿಸ್ ಕಾಯಿಲೆಗೆ ಲಿವರ್ ಕಸಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆ ನಂತರ ಆಕೆಯ ವೈದ್ಯರಿಗೆ ಆಕೆಯ ಮೂತ್ರದಲ್ಲಿ ಪದೇ ಪದೆ ಆಲ್ಕೊಹಾಲ್ ಅಥವಾ ಸಾರಾಯಿಯ ಅಂಶ ಕಾಣಿಸಿಕೊಂಡಾಗ ಬಹಳ ಆಶ್ಚರ್ಯ ವಾಯಿತು. ಆಕೆ ಸಾರಾಯಿ ಕುಡಿಯುವ ಮಹಿಳೆ ಆಗಿರಲಿಲ್ಲ. ಆಗ ವೈದ್ಯರು ಇದರ ಮೂಲವನ್ನು ಸೂಕ್ಷ್ಮವಾಗಿ ಹುಡುಕಿದಾಗ ಆಕೆಯ ಮೂತ್ರ
ಚೀಲದಲ್ಲಿನ ಸೂಕ್ಷ್ಮ ಜೀವಿಗಳು ಅಲ್ಲಿನ ಸಕ್ಕರೆಯ ಅಂಶವನ್ನು ಆಲ್ಕೊಹಾಲ್ ಆಗಿ ಪರಿವರ್ತಿಸುವುದು ಗೊತ್ತಾಯಿತು.
ಈ ಸಂದರ್ಭದಲ್ಲಿ ನಾವು ಆಟೋಬ್ರೀವರಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯನ್ನು ನೆನಪಿಸಿಕೊಳ್ಳಬಹುದು. ಇದರಲ್ಲಿ ಜೀರ್ಣಾಂಗ ವ್ಯೂಹದ ಅಂದರೆ ಸಣ್ಣ ಕರುಳಿನ ಭಾಗದಲ್ಲಿನ ಕಾರ್ಬೋಹೈಡ್ರೇಟ್‌ಗಳು ಆಲ್ಕೊಹಾಲ್‌ಗೆ ಪರಿವರ್ತಿತವಾಗುತ್ತವೆ. ಈ ತರಹದ ಕಾಯಿಲೆ
ಇರುವವರಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರ ಸೇವಿಸಿದರೆ ಆಲ್ಕೊಹಾಲ್ ಸೇವಿಸಿದಂತೆ ತೀವ್ರ ಮತ್ತಿಗೆ ಒಳಗಾಗುತ್ತಾರೆ. ಆದರೆ ಮೇಲಿನ ಈ ಮಹಿಳೆಯ ಉದಾಹರಣೆಯಲ್ಲಿ ಆಲ್ಕೊಹಾಲ್‌ನ ಪರಿವರ್ತನೆ ಮೂತ್ರದ ಚೀಲದಲ್ಲಿ ಆಗುತ್ತಾ ಇತ್ತು. ಈ ಆಲ್ಕೊಹಾಲ್ ಆಕೆಯ ರಕ್ತಕ್ಕೆ ಸೇರುತ್ತಿರಲಿಲ್ಲ. ಹಾಗಾಗಿ ಮದ್ಯ ಸೇವಿಸಿದವರಂತೆ ಆಕೆ ಇರುತ್ತಿರಲಿಲ್ಲ. ಈಕೆಯ ಈ ಲಕ್ಷಣ ಅತೀ ವಿರಳವಾಗಿದ್ದರಿಂದ ಅದಕ್ಕೆ ಈವರೆಗೆ ಹೆಸರೇ
ಇರಲಿಲ್ಲ. ಈಕೆಯ ವೈದ್ಯರು ಈಗ ಯುರಿನರಿ ಆಟೋ ಬ್ರೀವರಿ ಸಿಂಡ್ರೋಮ್ ಅಥವಾ ಬ್ಲಾಡರ್ ಫೇರ್ಮೆಂಟೇಶನ್ ಸಿಂಡ್ರೋಮ ಎಂದು
ಹೆಸರಿಸ ಬಹುದೆಂಬ ಅಭಿಪ್ರಾಯ ಹೊಂದಿದ್ದಾರೆ.
೬. ಮೂರು ಕಿಡ್ನಿಗಳು: ಒಬ್ಬ ವ್ಯಕ್ತಿಯ ಸ್ಕ್ಯಾನ್‌ನಲ್ಲಿ ೩ ಕಿಡ್ನಿಗಳು ಗೋಚರವಾದಾಗ ವೈದ್ಯರು ಆಶ್ಚರ್ಯ ಪಟ್ಟರು. ೩೮ ವರ್ಷದ ಬ್ರೆಜಿಲ್‌ನ ಈತ ಆರಂಭದಲ್ಲಿ ತನಗೆ ಬೆನ್ನು ನೋವು ಎಂದು ವೈದ್ಯರಲ್ಲಿಗೆ ಬಂದ. ಆತನ ಸಿಟಿ ಸ್ಕ್ಯಾನ್‌ನಲ್ಲಿ ಆತನ ಬೆನ್ನಿನ ಭಾಗದಲ್ಲಿ ಹರ್ನಿಯೇಟೆಡ್ ಅಥವಾ ಸ್ಲಿಪ್ ಡಿಸ್ಕ್ ಇರುವುದು ಕಂಡು ಬಂದಿತು. ಇದರಲ್ಲಿ ಬೆನ್ನಿನ ಭಾಗದ ಮೂಳೆಯ ಮಧ್ಯೆ ಸ್ಪೆ ನಲ್ ಕಾರ್ಡ್‌ನ ಭಾಗ ಹೊರಗೆ ಕಾಣಿಸಿ ಕೊಳ್ಳುತ್ತದೆ. ಇದು
ಹೆಚ್ಚಿನ ಜನರಲ್ಲಿ ಬೆನ್ನಿನ ನೋವಿಗೆ ಕಾರಣವಾಗುವ ಕಾಯಿಲೆ. ಆಗ ಆಕಸ್ಮಿಕವಾಗಿ ಈತನಿಗೆ ೩ ಕಿಡ್ನಿಯಿರುವುದು ಗೊತ್ತಾಯಿತು.
ಎಡಭಾಗದಲ್ಲಿ ಸಹಜವಾದ ಕಿಡ್ನಿ, ಬಲಭಾಗದಲ್ಲಿ ೨ ಕಿಡ್ನಿಗಳು ಸೇರಿರುವುದು ಕಂಡು ಬಂದವು. ಇಲ್ಲಿಯವರೆಗಿನ ವೈದ್ಯಕೀಯ ಇತಿಹಾಸದಲ್ಲಿ ೩
ಕಿಡ್ನಿಗಳು ವರದಿ ಯಾಗಿರುವುದು ೧೦೦ಕ್ಕಿಂತ ಕಡಿಮೆ ಬಾರಿ. ಇದು ಭ್ರೂಣವು ಬೆಳೆಯುವ ಕಾಲದಲ್ಲಿ ಒಂದು ಕಿಡ್ನಿಯಾಗಿ ಮಾರ್ಪಾಡುವ ಆಕೃತಿ ೨ ಸೇರಿಕೊಂಡ ಕಿಡ್ನಿಯಾಗಿ ಬೆಳೆಯುತ್ತವೆ. ಆತನಿಗೆ ಈ ಕಾರಣದಿಂದ ಯಾವ ಚಿಕಿತ್ಸೆ ಅಗತ್ಯವಿಲ್ಲದ್ದರಿಂದ ಚಿಕಿತ್ಸೆ ಮಾಡಲಿಲ್ಲ.
೭. ಚಲಿಸುವ ಸ್ಪ್ಲೀನ್ ಅಥವಾ ಯುಗ್ಮ: ಪ್ರತಿಯೊಬ್ಬರ ಮನಸ್ಸೂ ತೀವ್ರ ರೀತಿಯಲ್ಲಿ ಚಲಿಸುವುದು ಎಲ್ಲರಿಗೂ ಗೊತ್ತು. ಆದರೆ ಸಾಮಾನ್ಯ ವಾಗಿ ದೇಹದೊಳಗಿನ ಅಂಗಗಳು ಚಲಿಸುವುದಿಲ್ಲ. ಆದರೆ ಮಿಚಿಗನ್‌ನ ಈ ಮಹಿಳೆಯ ದೇಹದೊಳಗಿನ ಯುಗ್ಮವು ೪೮ ಗಂಟೆಗಳ ಒಳಗಡೆ ಒಂದು ಅಡಿಯಷ್ಟು ಚಲನೆ ತೋರಿಸಿತು. ಹೌದು ಈಕೆಗೆ ಅಪರೂಪದ ಚಲಿಸುವ ಯುಗ್ಮ ವಿತ್ತು. ಯುಗ್ಮವನ್ನು ಬಂಧಿಸಿಡುವ ಲಿಗಮೆಂಟ್‌ಗಳು ಶಿಥಿಲಗೊಂಡು ಯುಗ್ಮವು ಆಚೀಚೆ ತಿರುಗಾಡತೊಡಗಿತು.
೨ ದಿವಸಗಳ ಅಂತರದಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಮೇಲಿನ ಮತ್ತು ಎಡಭಾಗದ ಹೊಟ್ಟೆಯ ಭಾಗದಿಂದ ಕೆಳಗಿನ ಬಲಭಾಗಕ್ಕೆ ಚಲಿಸಿರುವುದು ಸ್ಪಷ್ಟವಾಗಿ ಗೊತ್ತಾಯಿತು. ಈಕೆಗೆ ಸ್ವಲ್ಪ ಲಿವರ್‌ನ ಕಾಯಿಲೆ ಇತ್ತು. ಹಾಗಾಗಿ ಆಕೆಯ ಯುಗ್ಮವು ವಿಪರೀತ ದೊಡ್ಡದಾಗಿತ್ತು. ಹಾಗೆಂದು ದೊಡ್ಡದಾ ದಾಗ ಅದನ್ನು ಬಂಽಸಿಡುವ ಲಿಗಮೆಂಟ್‌ಗಳು ಶಿಥಿಲ ಗೊಂಡು ಯುಗ್ಮವು ಆಚೀಚೆ ಚಲಿಸತೊಡಗಿತ್ತು. ಇದಕ್ಕೆ ಸರಿಯಾದ ಚಿಕಿತ್ಸೆ ಎಂದರೆ ಯುಗ್ಮವನ್ನು ಶಸಕ್ರಿಯೆ ಮಾಡಿ ಹೊರ ತೆಗೆಯುವುದು.(ಇದನ್ನು ತೆಗೆದರೂ ದೇಹದ ಮುಖ್ಯ ಯಾವ ಕ್ರಿಯೆಗೂ ವ್ಯತ್ಯಯ ಬರುವುದಿಲ್ಲ.) ಆಕೆಗೆ
ಲಿವರ್ ಕಸಿ ಅಗತ್ಯವಿದ್ದದ್ದರಿಂದ ಆ ಶಸಕ್ರಿಯೆಯ ಜತೆಗೆ ಯುಗ್ಮ ಹೊರ ತೆಗೆಯುವ ಚಿಕಿತ್ಸೆ ಮಾಡಬೇಕೆಂದು ವೈದ್ಯರು ಯುಗ್ಮ ತೆಗೆಯುವ ಚಿಕಿತ್ಸೆ ಮಾಡದೆ ಕಾಯಲು ನಿರ್ಧರಿಸಿದರು.
೮. ಕರೋನಾ ವೈರಸ್ ಹೊರ ಹೋಗದಿದ್ದಾಗ: ಕರೋನಾ ಸೋಂಕಿನ ನಂತರ ೮ ದಿನಗಳ ಕಾಲ ವೈರಸ್ ಇರುತ್ತದೆ. ಆದರೆ ಅಮೆರಿಕದ ವಾಷಿಂಗ್ಟನ್‌ನ ಈ ಮಹಿಳೆ ಸತತವಾಗಿ ೭೦ ದಿನಗಳ ಕಾಲ ವೈರಸ್ ಹೊರಹಾಕುತ್ತಲೇ ಇದ್ದಳು. ಅದರರ್ಥ ಈ ಎಲ್ಲಾ ೭೦ ದಿನಗಳೂ ಆಕೆ
ಬೇರೆಯವರಿಗೆ ವೈರಸ್ ಸೋಂಕು ಹರಡಬಲ್ಲವಳಾಗಿದ್ದಳು. ೭೧ ವರ್ಷದ ಈಕೆಗೆ ರಕ್ತದ ಕ್ಯಾನ್ಸರ್ ಲ್ಯುಕೀಮಿಯಾ ಆಗಿತ್ತು. ಹಾಗಾಗಿ ಆಕೆಯ ದೇಹದ ಪ್ರತಿರೋಧ ವ್ಯವಸ್ಥೆ ಶಿಥಿಲವಾಗುತ್ತಾ ಬಂದಿತು.
ಹಾಗಾಗಿ ಆಕೆಯ ದೇಹವು ಕರೋನಾ ವೈರಸನ್ನು ಹೊರ ಹಾಕಲಾಗಲಿಲ್ಲ. ಕಳೆದ ಫೆಬ್ರವರಿ ಯಲ್ಲಿಯೇ ಆಕೆ ಸೋಂಕಿಗೆ ಒಳಗಾಗಿದ್ದಳು. ಆ
ದೇಶದ ಮೊದಲ ಬ್ಯಾಚ್‌ನ ಸೋಂಕಿತರಲ್ಲಿಯೇ ಆಕೆ ಇದ್ದಳು. ೧೫ ವಾರಗಳ ಕಾಲ ಆಕೆಯನ್ನು ಒಂದು ಡಜನ್ ಗಿಂತಲೂ ಹೆಚ್ಚು ವೈದ್ಯರು ಪರೀಕ್ಷೆ ಮಾಡಿದರು. ಆಕೆಯ ಉಸಿರಾಟದ ವ್ಯವಸ್ಥೆಯ ಮೇಲ್ಭಾಗದಲ್ಲಿ ೧೦೫ ದಿನಗಳ ಕಾಲ ವೈರಸ್ ಇದ್ದರೆ, ಸೋಂಕು ಹರಡ ಬಹುದಾದ ವೈರಸ್ ತುಣುಕುಗಳು ೭೦ ದಿನಗಳ ಕಾಲ ಇದ್ದವು. ಆ ನಂತರ ಹೇಗೋ ಆಕೆಯ ದೇಹದಿಂದ ವೈರಸ್‌ಗಳು ಹೊರ ಬಂದವು. ಹಾಗಾಗಿ ಪ್ರತಿರೋಧ ವ್ಯವಸ್ಥೆ ಶಿಥಿಲಗೊಂಡಾಗ ವೈರಸನ್ನು ಹೊರಹಾಕಲು ಅಂತಹ ವ್ಯಕ್ತಿ ಹೆಚ್ಚು ದಿನ ಅಥವಾ ಸಮಯ ತೆಗೆದುಕೊಳ್ಳುತ್ತಾನೆ.
೯. ಹಾಟ್ ಟಬ್ ಶ್ವಾಸಕೋಶ: ಇದೊಂದು ಅಪರೂಪದ ಕಾಯಿಲೆ. ಇದು ಬಿಸಿ ನೀರಿನ ತಾಪಮಾನದಲ್ಲಿಯೂ ಜೀವಂತ ಇರುವ ಬ್ಯಾಕ್ಟೀರಿಯಾ ಗಳಿಂದ ಬರುತ್ತದೆ. ಹಾಗಂತ ಬಿಸಿ ನೀರಿನ ಟಬ್‌ನಲ್ಲಿಯೇ ಆಗಬೇಕು ಅಂತೇನಿಲ್ಲ. ಆಸ್ಟ್ರೇಲಿಯಾದ ಹದಿಹರೆಯದ ಯುವಕ ಉಸಿರಾಟದ ತೊಂದರೆ ಎಂದು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾದ. ಇದರ ಮೊದಲು ಈತನಿಗೆ ಮೊಳಕಾಲಿನ ಭಾಗದ ಶಸಕ್ರಿಯೆಯಾಗಿ, ಅದರಿಂದ ಚೇತರಿಕೊಳ್ಳುತ್ತಿದ್ದ. ಈತ ಹೆಚ್ಚಿನ ಸಮಯವನ್ನು ಮನೆಯ ವಿಶ್ರಾಂತಿ ಕೊಠಡಿಯಲ್ಲಿ ಕಳೆಯುತ್ತಿದ್ದ. ಆ ಕೊಠಡಿ ಅವರ ಮನೆಯ ಈಜು ಕೊಳದ ಪಕ್ಕವೇ ಇತ್ತು. ಈತನ
ಕಾಯಿಲೆಯನ್ನು ಹಾಟ್ ಟಬ್ ಶ್ವಾಸಕೋಶ ಎಂದು ರೋಗ ನಿರ್ಣಯ ಮಾಡಲಾಯಿತು. ಮೈಕೋಬ್ಯಾಕ್ಟೀರಿಯಾ ರೀತಿಯ ಬ್ಯಾಕ್ಟೀರಿಯಾವು ಗಾಳಿಯಲ್ಲಿ ಬಂದು ಈತನ ಶ್ವಾಸಕೋಶ ಸೇರಿರುವ ಸಾಧ್ಯತೆ ಇದೆ. ಅವರ ಮನೆಯ ಈಜು ಕೊಳದ ನೀರನ್ನು ಪರೀಕ್ಷಿಸಿದಾಗ ಈ ಬ್ಯಾಕ್ಟೀರಿಯಾಗಳು ಬಹಳಷ್ಟು ಪ್ರಮಾಣದಲ್ಲಿ ಕಂಡು ಬಂದವು.
ಮನೆಯವರ ಪ್ರಕಾರ ಅವರು ಈಜು ಕೊಳವನ್ನು ಸ್ವಚ್ಛ ಮಾಡುವ ಸ್ಯಾನಿಟೈಸರ್ ಇತ್ತೀಚಿಗೆ ಮೊದಲ ಕ್ಲೋರಿನ್ ಯುಕ್ತ ಸ್ಯಾನಿಟೈಸರ್ ನಿಂದ ಕ್ಲೋರಿನ್ ಇಲ್ಲದ ಸ್ಯಾನಿಟೈಸರ್‌ಗೆ ಬದಲಾಯಿಸಿದ್ದಾಗಿಯೂ ತಿಳಿಸಿದರು. ಹಾಗಾಗಿ ಈ ಬ್ಯಾಕ್ಟೀರಿಯಾಗಳು ಬಹಳಷ್ಟು ಪ್ರಮಾಣದಲ್ಲಿ ಈ ನೀರಿನಲ್ಲಿ ಕಂಡು ಬಂದವು. ಅವರ ಕುಟುಂಬದ ಹಲವರಿಗೆ ನಂತರ ಶ್ವಾಸಕೋಶದ ತೊಂದರೆ ಕಂಡು ಬಂದವು.