ಅಭಿವ್ಯಕ್ತಿ
ಚಂದ್ರಶೇಖರ ಬೇರಿಕೆ
ಕಂಬಳದ ಗದ್ದೆಯಲ್ಲಿ ಕೋಣಗಳು ಎಷ್ಟು ಪ್ರಾಮುಖ್ಯವೋ ಆ ಕೋಣಗಳನ್ನು ಓಡಿಸುವ ಓಟಗಾರನ ಪಾತ್ರವೂ ಅಷ್ಟೇ ಮುಖ್ಯ. ಕಂಬಳದ ಕೋಣಗಳು ಸರಿಯಾದ ದಿಕ್ಕಿನಲ್ಲಿ ಸ್ಪಷ್ಟ ಗುರಿಯೆಡೆಗೆ ಮುನ್ನುಗ್ಗುವಂತೆ ಹಾಗೂ ಎಲ್ಲಿ ಅಗತ್ಯವೋ ಅಲ್ಲಿ ಏಟು
ಕೊಟ್ಟು ವೇಗವನ್ನು ಹೆಚ್ಚಿಸಿಕೊಳ್ಳುವಂತೆ ನೋಡಿಕೊಳ್ಳುವುದು ಓಟಗಾರನ ಆದ್ಯ ಕರ್ತವ್ಯ.
ಸ್ವಾಭಾವಿಕವಾಗಿ ಕಂಬಳದ ಕೋಣ ಗಳಿಕ್ಕಿಂತ ಅವುಗಳನ್ನು ಓಡಿಸುವವನ ಮೇಲೆ ಕಣ್ಣುಗಳು ಕೇಂದ್ರೀಕೃತವಾಗಿರುತ್ತದೆ. ಓಟಗಾರ ಯರ್ರಾಬಿರ್ರಿ ಓಡುವವನಾದರೆ ಫಲಿತಾಂಶಕ್ಕಾಗಿ ಕೋಣ ಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ ಮತ್ತು ಭರವಸೆ ಅವುಗಳ
ಮೇಲೆ ಮಾತ್ರ ಉಳಿದು ಅವುಗಳ ಸಾಮಾನ್ಯ ಓಟದ ವೇಗವೇ ತೃಪ್ತಿದಾಯಕ ಎನಿಸುತ್ತದೆ. ಹಾಗೆಯೇ ಓಟಗಾರ ನಿರಾಸಕ್ತಿ ತೋರುವವನಾದರೆ ಅವನು ಅಲ್ಲಿ ಅಪ್ರಸ್ತುತ ಎನಿಸುತ್ತಾನೆ ಮತ್ತು ಕಂಬಳದ ನಿಯಮಗಳಿಗಷ್ಟೇ ಸೀಮಿತವಾಗುತ್ತಾನೆ.
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಸಕ್ತ ಆಡಳಿತ ಮತ್ತು ಪ್ರತಿಪಕ್ಷಗಳ ಪರಿಸ್ಥಿತಿಯೂ ಹೀಗೆಯೇ ಆಗಿದೆ. ಪ್ರತಿಪಕ್ಷಗಳು ಓಟದಲ್ಲಿ ನಿರಾಸಕ್ತಿ ತೋರಿದ್ದರಿಂದ ಆಡಳಿತ ಪಕ್ಷದ ಓಟದ ವೇಗವೇ ಭಯಂಕರವಾಗಿ ಕಾಣುತ್ತಿದೆ. ಯಾವುದೇ ದೇಶದಲ್ಲಿ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರೆ ಆ ದೇಶದಲ್ಲಿ ವಿರೋಧ ಪಕ್ಷಗಳು ತನ್ನ ಕರ್ತವ್ಯಗಳನ್ನು ಜವಾಬ್ದಾರಿ ಯಿಂದ ನಿಭಾಯಿಸುತ್ತಿದೆ ಎಂದರ್ಥ. ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಕಾವಲು ನಾಯಿಗಳು ಎಂಬ ಹಿರಿಮೆಯೂ ಇದೆ.
ಆದರೆ ಪ್ರಸ್ತುತ ಭಾರತದ ರಾಜಕೀಯ ವಿದ್ಯಮಾನವನ್ನು ಗಮನಿಸಿದಾಗ ಹಾಗೆ ಅನ್ನಿಸುತ್ತಿಲ್ಲ. ವಿರೋಧ ಪಕ್ಷಗಳು ಸೋಂಬೇರಿ ಗಳಾದರೆ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದಕ್ಕೆ ಪ್ರಸ್ತುತ ಸನ್ನಿವೇಶ ಪ್ರತ್ಯಕ್ಷ ನಿದರ್ಶನ. ವಿರೋಧ
ಪಕ್ಷಗಳು ದುರ್ಬಲ ವಾದರೆ ಪ್ರಜಾಪ್ರಭುತ್ವಕ್ಕೆ ಅರ್ಥವಾದರೂ ಎಲ್ಲಿ?. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಇಂದಿನ ದುಸ್ಥಿತಿಗೆ ಭಾರತೀಯ ಜನತಾ ಪಾರ್ಟಿ ಕಾರಣ ಎನ್ನುವುದಕ್ಕಿಂತಲೂ ವಿರೋಧ ಪಕ್ಷಗಳೇ ನೇರ ಹೊಣೆ ಎಂದು ಹೇಳಿದರೆ ತಪ್ಪಾಗಲಾರದು.
ಇಲ್ಲಿ ವಿರೋಧ ಪಕ್ಷ ಎಂದರೆ ಕೇವಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವೊಂದೇ ಅಲ್ಲ. ಪ್ರಸ್ತುತ ಕೇಂದ್ರ ಸರಕಾರವನ್ನು ಟೀಕಿಸುತ್ತಿರುವ, ಅದರ ಕಾರ್ಯವೈಖರಿಯನ್ನು ವಿರೋಧಿಸುತ್ತಿರುವ ಬಹುತೇಕ ಪಕ್ಷಗಳು ದಿನೇ ದಿನೇ ಸೊರಗುತ್ತಿದೆ. ಅದಕ್ಕೆ ಮೂಲ ಕಾರಣ ದೇಶದ ಮನಸ್ಥಿತಿ (ಮೂಡ್ ಆಫ್ ದಿ ನೇಷನ್)ಯನ್ನು ನಿರ್ಧರಿಸುವ ಸಾರ್ವಜನಿಕ ಮನಸ್ಥಿತಿ ಮತ್ತು ಜನತೆಯ
ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರತಿಪಕ್ಷಗಳ ವೈಫಲ್ಯತೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಜವಾಹರ್‌ಲಾಲ್ ನೆಹರುವಿನಿಂದ ಆರಂಭಿಸಿ ಪರಾಮರ್ಶಿಸಿದಾಗ ಆ ಪಕ್ಷದ ಕೆಲವೊಂದು ನೀತಿ, ನಿರ್ಧಾರಗಳು ಭಾರತಕ್ಕೆ ಮತ್ತು ಆ ಪಕ್ಷಕ್ಕೆ ಹೇಗೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬುದನ್ನು ಗಮನಿಸ ಬಹುದು. ಗಾಂಧಿ ನಾಮ ವನ್ನು ಬ್ರಾಂಡ್ ಮಾಡಿಕೊಂಡು ಏಕಪಕ್ಷೀಯ ಪ್ರಾಬಲ್ಯ ಹೊಂದಿದ್ದ ಒಂದು ಕಾಲದಲ್ಲಿ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಒಬ್ಬ ದಾರಿಹೋಕನನ್ನು ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದರೂ ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ
ವಿದ್ದ ಕಾಂಗ್ರೆಸ್ ಪಕ್ಷ ಈಗ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನಕ್ಕೂ ದೈನೇಸಿ ಸ್ಥಿತಿ ಸೃಷ್ಟಿಸಿಕೊಂಡಿರುವುದಕ್ಕೆ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ.
ನೆರೆಯ ಶತ್ರು ರಾಷ್ಟ್ರಗಳು ಗಡಿ ಅಥವಾ ಇನ್ನಾವುದೇ ವಿಚಾರದಲ್ಲಿ ಕ್ಯಾತೆ ತೆಗೆದಾಗ ಅಥವಾ ಭಾರತದ ಆಂತರಿಕ ವಿದ್ಯಮಾನಗಳ ವಿಚಾರ ಗಳು ಚರ್ಚೆಗೆ ಒಳಗಾದಾಗ ಪ್ರತಿ ಬಾರಿಯೂ ಕಂಪಿಸುವ ಮತ್ತು ತಮ್ಮ ಪಕ್ಷದ ನಡೆ ನುಡಿಯಿಂದ ಹಲವು ಬಾರಿ ಅಪಹಾಸ್ಯಕ್ಕೀಡಾದ ರಾಜಕೀಯ ಪಕ್ಷವೊಂದಿದ್ದರೆ ಅದು ಭಾರತವನ್ನು ದೀರ್ಘಾವಧಿಗೆ ಆಳಿದ ಶತಮಾನಗಳ ಹಳೆಯ ಪಕ್ಷವಾದ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದು ಹೇಳಬಹುದು.
ಕಾಂಗ್ರೆಸ್ ಪಕ್ಷದ ನಾಯಕರ ಸ್ವಹಿತಾಸಕ್ತಿಗಾಗಿ ಆದ್ಯತೆ ಮತ್ತು ಪಕ್ಷ ಹಾಗೂ ಅಽಕಾರವನ್ನು ನೇರ ಕುಟುಂಬ ನಿಯಂತ್ರಣಕ್ಕೆ ಒಳಪಡಿಸಿ ಪಕ್ಷದ ನೇತೃತ್ವ ಆ ಕುಟುಂಬದ ಸುತ್ತವೇ ಗಿರಕಿ ಹೊಡೆಯುತ್ತಿರುವುದು ಬಹಳ ದುಬಾರಿಯಾಗಿ ಪರಿಣಮಿಸುತ್ತಿದೆ. ದೇಶಕ್ಕೆ ಸಂಬಂಧಪಟ್ಟ ಯಾವುದೇ ವಿದ್ಯಮಾನದ ವಿಚಾರವಾಗಿ ಈಗಿನ ಆಡಳಿತ ಪಕ್ಷವನ್ನು ಯಾವ ಕೋನದಲ್ಲಿ ಪ್ರಶ್ನೆ ಮಾಡಿದರೂ ಅಂತಿಮವಾಗಿ ತಾನೇ ಇರಿಸುಮುರಿಸುಗೆ ಒಳಗಾಗುವ ಸನ್ನಿವೇಶ ಸೃಷ್ಟಿಸಿಕೊಂಡಿದೆ.
ಅಸಲಿಗೆ ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬದ ಹೊರತಾದ ನಾಯಕತ್ವಕ್ಕೆ ಬರವಿರಲಿಲ್ಲ. ಆದರೆ ಅವರು ಬರಿಯ ಆಜ್ಞಾಪಾಲಕ ರಾಗಿದ್ದರಷ್ಟೇ. ಸ್ವತಂತ್ರ ನಿರ್ಧಾರಕ್ಕೆ ಅವರು ಸಮರ್ಥರಾಗಿದ್ದರೂ ಅದಕ್ಕೆ ಎಂದೂ ಅವಕಾಶರಲಿಲ್ಲ. ಪಕ್ಷ ನಿಷ್ಠೆಯಿಂದ ಎಲ್ಲಾ ಸಂಕಟವನ್ನು ಸಹಿಸಿಕೊಂಡು ಕರ್ತವ್ಯ ನಿರ್ವಹಿಸಿ ತಮ್ಮ ಪೂರ್ಣ ಸಾಮಾರ್ಥ್ಯವನ್ನು ಮತ್ತು ಪ್ರತಿಭೆಯನ್ನು ಪ್ರದರ್ಶಿಸಲಾಗದೇ ಅಸಂತೃಪ್ತಿಯಿಂದ ಹಲವು ನಾಯಕರು ಇತಿಹಾಸದ ಪುಟ ಸೇರಿರುವುದು ದುರದೃಷ್ಟಕರ.
ಪಕ್ಷದೊಳಗಿನ ಏಕಪಕ್ಷೀಯ ನಿರ್ಧಾರದ ವಿರುದ್ಧ ಧ್ವನಿಯೆತ್ತುವ ಯಾವುದೇ ನಾಯಕರು ಏಕಾಂಗಿ ಯಾಗುವ ಮತ್ತು ಪಕ್ಷದಿಂದ ಶಿಸ್ತು ಕ್ರಮಕ್ಕೆ ಒಳಪಡುವ ಭಯದಿಂದ ಯಾರೂ ಚಕಾರವೆತ್ತುತ್ತಿರಲಿಲ್ಲ. ಆ ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಮನ್ನಣೆಯೂ ಸಿಕ್ಕಿರಲಿಲ್ಲ. ೨೦೦೪ರಲ್ಲಿ ನಡೆದ ಅನಿರೀಕ್ಷಿತ ರಾಜಕೀಯ ವಿಪ್ಲವಗಳಿಂದ ಪ್ರಧಾನಿ ಪಟ್ಟ ತಪ್ಪಿಸಿಕೊಂಡ ಸೋನಿಯಾ ಗಾಂಧಿ ಯವರು ಯುಪಿಎ ಸರಕಾರದ ಎರಡನೇ ಅವಧಿಗಾದರೂ ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿದ್ದರೆ
ಕಾಂಗ್ರೆಸ್‌ಗೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
೨೦೧೪ರಿಂದ ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಸಾರ್ವಜನಿಕರ ವಿಶ್ವಾಸವನ್ನು ಗಳಿಸುವ ಯಾವ ಪ್ರಯತ್ನವೂ ಕಾಂಗ್ರೆಸ್
ಪಕ್ಷದ ನಾಯಕರಿಂದ ಆಗಲಿಲ್ಲ. ಪ್ರಸ್ತುತ ಆ ಪಕ್ಷಕ್ಕೆ ಪ್ರೌಢಿಮೆಯ ನಾಯಕತ್ವವೇ ಇಲ್ಲದಂತಾಗಿದ್ದು, ಅನಿವಾರ್ಯವಾಗಿ ಸೋನಿಯಾ ಗಾಂಧಿಯವರೇ ಆ ಪಕ್ಷದ ನೇತೃತ್ವ ವಹಿಸಬೇಕಾಗಿ ಬಂದಿರುವುದು ಎಂತಹ ದುಸ್ಥಿತಿ. ಕಾಂಗ್ರೆಸ್ ಪಕ್ಷವು ಮರದ ಕಾಂಡವನ್ನು ರಕ್ಷಿಸಿಕೊಂಡು ಚಿಗುರುತ್ತಿದ್ದ ರೆಂಬೆಕೊಂಬೆಗಳನ್ನು ಮನ ಬಂದಂತೆ ಕತ್ತರಿಸಿ ಕ್ರಮೇಣ ಸೊರಗಿ ಧರೆಗುರುಳಿದೆ.
ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸದ್ಯ ರಾಹುಲ್ ಗಾಂಧಿಯವರನ್ನೇ ಪಕ್ಷದ ನಾಯಕರು ನೆಚ್ಚಿಕೊಂಡಿದ್ದಾರೆ.
ಆದರೆ ಪಕ್ಷದ ನಾಯಕರು ನಿರೀಕ್ಷಿಸಿದಂತೆ ರಾಹುಲ್ ಗಾಂಧಿಯವರಿಂದ ಯಾವುದೇ ದೊಡ್ಡ ಮಟ್ಟದ ಸಾಧನೆಗಳು ಕಂಡು ಬರುತ್ತಿಲ್ಲ. ೨೦೧೪ರಿಂದ ಇಲ್ಲಿವರೆಗೆ ಕಾಂಗ್ರೆಸ್‌ನ ಸಾಲು ಸಾಲು ಸೋಲುಗಳು ಇವರ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ. ಅವರು ವಿಷಯಾಧಾರಿತವಾಗಿ ಸಂಸತ್‌ನ ಒಳಗೆ ಪರಿಣಾಮಕಾರಿಯಾಗಿ ಸರಕಾರದ ವೈಫಲ್ಯಗಳನ್ನು ಮತ್ತು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟು ಜನರ ವಿಶ್ವಾಸ ಗಳಿಸುವುದನ್ನು ಬಿಟ್ಟು ಸಾರ್ವಜನಿಕವಾಗಿ ಟೀಕೆ, ಟಿಪ್ಪಣಿಗಳಲ್ಲಿ ತೊಡಗಿಸಿಕೊಂಡು ಹಾಸ್ಯಗಾರರಂತೆ ವರ್ತಿಸಿದರೆ ಏನು ಪ್ರಯೋಜನ? ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಇತರ ನಾಯಕರ ಅಸಂಬದ್ಧ ಮತ್ತು
ವಿವೇಚನಾರಹಿತ ಹೇಳಿಕೆಗಳೇ ಬಿಜೆಪಿಗೆ ವರದಾನವಾಗಿ ಮತಗಳನ್ನು ತಂದುಕೊಡುತ್ತಿದೆ.
ಅದಕ್ಕಾಗಿಯೇ ಯಾವುದೇ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಗೆ ಮತ್ತೊಬ್ಬರ ಹೆಸರು ಸಾಮಾಜಿಕ
ಮಾಧ್ಯಮದಲ್ಲಿ ಹರಿದಾಡುತ್ತದೆ. ಅವರು ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಎಂದು ಬೇರೆ ಹೇಳಬೇಕಾಗಿಲ್ಲ! ಅಪ್ರಬುದ್ಧ ಮತ್ತು ನಗೆಪಾಟಲೀಗೀಡಾಗುವಂತಹ ನಡವಳಿಕೆಗಳು ಮತ್ತು ಹೇಳಿಕೆಗಳನ್ನು ನೀಡುತ್ತಾ ಬರೀ ಅಂಬಾನಿ, ಅದಾನಿಗಳ ಕಥೆ ಮಾತಾಡಿಕೊಂಡು ದೇಶ ಸುತ್ತಿದರೆ ಪಕ್ಷ ಕಟ್ಟಲು ಸಾಧ್ಯವೇ? ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಪಕ್ಷದ ಹಿತದೃಷ್ಟಿಯನ್ನು ಬದಿಗಿಟ್ಟು ಸ್ವಹಿತಾಸಕ್ತಿಗಾಗಿನ ಹೋರಾಟದ ಕಥೆ ಒಂದೆಡೆಯಾದರೆ ಇನ್ನು ಕರ್ನಾಟಕದ ರಾಜ್ಯ ನಾಯಕರದ್ದು ಬೇರೆಯೇ ಕಥೆ.
ಅದರಲ್ಲೂ ಕಾಂಗ್ರೆಸ್ ಆಡಳಿತದಲ್ಲಿ ಪೂರ್ಣಾವಽ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಹಿರಿಮೆ ಹೊಂದಿರುವ ಮತ್ತು ಸುಮಾರು ೧೩ ಬಾರಿ ರಾಜ್ಯ ಆಯವ್ಯಯ ಮಂಡಿಸಿ ಅಪಾರ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ‘ನಾನು ಗೋಮಾಂಸ ತಿನ್ನುತ್ತೇನೆ, ನೀನು ಯಾವನಯ್ಯ ಕೇಳೋಕೆ? ನನ್ನ ಆಹಾರ ನನ್ನ ಇಷ್ಟ, ನನ್ನ ಹಕ್ಕು’ ಎನ್ನುತ್ತಾ ಓಲೈಕೆ ರಾಜಕಾರಣ ಮಾಡಿಕೊಂಡು ಮತ್ತು ‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯೋದು ಖಚಿತ’ ಎಂದು ಭವಿಷ್ಯ ಹೇಳಿಕೊಂಡು ತಿರುಗಾಡಿದರೆ ಪಕ್ಷ ಸಂಘಟನೆ ಯಾಗುತ್ತದೆಯೇ? ಪ್ರತಿಪಕ್ಷಗಳ ಒಕ್ಕೂಟದ ಅಂಗ ಪಕ್ಷಗಳನ್ನು ವಿಶ್ಲೇಷಿಸುವುದಾದರೆ, ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ಚುನಾವಣೆ ಸಂದರ್ಭ ದಲ್ಲಿನ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುವುದೇ ತ್ರಾಸವಾಗಿದೆ.
ಆ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯಾವುದಾದರೊಂದು ರಾಜಕೀಯ ಮಾಡುತ್ತಲೇ ಇದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ರಾಷ್ಟ್ರೀಯ ಜನತಾ ದಳದ ಲಾಲೂ ಪ್ರಸಾದ್ ಯಾದವ್ ಪುತ್ರ ಬಿಹಾರದ ತೇಜ್ ಪ್ರತಾಪ್ ಯಾದವ್ ಅವರುಗಳು ಯುವನಾಯಕರು ಎನ್ನುವು ದಕ್ಕಿಂತಲೂ ಕರೋನಾ ಲಸಿಕೆ ವಿಚಾರದಲ್ಲೂ ರಾಜಕೀಯ ಬೆರೆಸುವಂತಹ ಚಿಲ್ಲರೆ ನಾಯಕರು ಎನ್ನುವುದೇ ಸೂಕ್ತ.
ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಮಾಯಾವತಿಯವರದ್ದು ಕಣ್ಣಾಮುಚ್ಚಾಳೆ ಆಟ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅನ್ಯ ಗ್ರಹದಿಂದ ಬಂದವರಂತೆ ವರ್ತಿಸುತ್ತಿದ್ದು, ಕಾಂಗ್ರೆಸ್ ಜತೆ ಗುರುತಿಸಿಕೊಳ್ಳು ವುದು ಅವರಿಗೆ ಅಪಥ್ಯ. ಡಿಎಂಕೆ ನಾಯಕರು ತಮಿಳುನಾಡಿನ ರಾಜಕೀಯಕ್ಕಷ್ಟೇ ಸೀಮಿತಗೊಂಡಿದ್ದಾರೆ.
ನ್ಯಾಷನಲ್ ಕಾನೆರೆನ್ಸ್ ಮತ್ತು ಪಿಡಿಪಿ ಪಕ್ಷಗಳು ಅವರೊಳಗಿನ ವೈರತ್ವವನ್ನು ಮರೆತು ಒಂದಾಗಿ ಜಮ್ಮು ಕಾಶ್ಮೀರದಲ್ಲಿನ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಇನ್ನು ಎನ್‌ಸಿಪಿಯ ಶರದ್ ಪವಾರ್ ಅವರದ್ದು ತೆರೆಮರೆಯ ಆಟವಾಗಿದ್ದು, ತೆರೆಯ ಮುಂದೆ
ಕಾಂಗ್ರೆಸ್ ಜತೆ ಗುರುತಿಸಿಕೊಂಡರೆ ತೆರೆಯ ಹಿಂದೆ ಬಿಜೆಪಿಯವರ ಸಖ್ಯವನ್ನು ಹೊಂದಿದ್ದಾರೆ.
ಕರ್ನಾಟಕದಲ್ಲಿ ಜೆಡಿಎಸ್‌ನ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿಯವರಿಗೆ ಹೇಗಾದರೂ ಮಾಡಿ ೨೦ – ೩೦ ಸೀಟು ಪಡೆದುಕೊಂಡು ಕಿಂಗ್‌ಮೇಕರ್ ಆಗುವುದಕ್ಕಷ್ಟೇ ಅವರ ಲೆಕ್ಕಾಚಾರ. ಕೇರಳದ ಮುಖ್ಯಮಂತ್ರಿ, ಸಿಪಿಐ(ಎಂ) ನ ಪಿಣರಾಯಿ ವಿಜಯನ್ ಅವರು ಸ್ವತಃ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಪಟ್ಟದ ಜತೆಗೆ ಪಾಲುದಾರ ಪಕ್ಷಗಳನ್ನು
ನಿಭಾಯಿಸುವು ದರಲ್ಲೇ ಸುಸ್ತಾಗಿ ಬಿಟ್ಟಿದ್ದಾರೆ.
ಸಿದ್ಧಾಂತ ಮರೆತು ಸಾಂಪ್ರದಾಯಿಕ ವಿರೋಧಿ ಪಕ್ಷಗಳೊಂದಿಗೆ ಕೈಜೋಡಿಸಿದ್ದರಿಂದ ಮುಂದಿನ ಚುನಾವಣೆಯಲ್ಲಿ
ಕೈಸುಟ್ಟು ಕೊಳ್ಳುವ ಭಯ ಅವರನ್ನು ಆವರಿಸಿದೆ. ಒಟ್ಟಾರೆಯಾಗಿ ಪ್ರತಿಪಕ್ಷ ಗಳು ಎಂಬ ದೋಣಿಗೆ ಅಂಬಿಗನೇ ಇಲ್ಲದಂತಾಗಿದೆ. ಕೇಂದ್ರ ಸರಕಾರವನ್ನು ಹಣಿಯಲು ಪ್ರಯತ್ನಿಸಿದ ಪ್ರತಿಪಕ್ಷ ಗಳೇ ಏಟು ತಿನ್ನುತ್ತಿರುವುದಕ್ಕೆ ತಾಜಾ ಉದಾಹರಣೆ ಯೆಂದರೆ ೩ ಕೃಷಿ
ಕಾಯಿದೆಗಳ ವಿರುದ್ಧದ ರೈತ ಹೋರಾಟದ ಹಿನ್ನೆಲೆಯಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಘಟನೆ.
ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿ ದೆಹಲಿ ರೈತ ರ‍್ಯಾಲಿಗೆ ಬೆಂಬಲ ಘೋಷಿಸಿದ್ದ ಪ್ರತಿಪಕ್ಷಗಳು ಬಲವಾದ ಏಟನ್ನೇ ತಿನ್ನುವಂತಾಗಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಜನವರಿ ೨೬ ರಂದು ನಡೆದ ಘಟನೆಯ ವಿಚಾರದಲ್ಲೂ ಪ್ರತಿಪಕ್ಷಗಳು ಮುಗ್ಗರಿಸಿದ್ದು, ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಈ ಘಟನೆಯನ್ನು ಯುದ್ಧಾಸ್ತ್ರವನ್ನಾಗಿ ಬಳಸಿ ಲಾಭ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಪ್ರಜಾಪ್ರಭುತ್ವ ಸರಕಾರ ಪದ್ಧತಿಯಲ್ಲಿ ರಚನಾತ್ಮಕ ಮತ್ತು ಕ್ರಿಯಾಶೀಲ ಪ್ರತಿಪಕ್ಷ ಅತೀ ಅಗತ್ಯವಾಗಿದ್ದು, ಪ್ರತಿಪಕ್ಷದ ನಿಷ್ಕ್ರೀಯತೆ ದೇಶದ ನೈಜ ಸಮಸ್ಯೆಗಳನ್ನು ಜೀವಂತವಾಗಿಡುತ್ತದೆ ಮತ್ತು ಪ್ರಜಾಪ್ರಭುತ್ವದಲ್ಲಿ ಧ್ವನಿಯನ್ನು ಕಳೆದು ಕೊಂಡಂತಾಗುತ್ತದೆ. ಅಧಿಕೃತ ಪ್ರತಿಪಕ್ಷ ಎಂದು ಸಾಬೀತು ಮಾಡಲು ಸಂವಿಧಾನಾತ್ಮಕ ವಾಗಿ ಬೇಕಾದ ಸಂಖ್ಯೆಯ ಸೀಟುಗಳನ್ನು ಗಳಿಸಿದರೆ ಸಾಲದು. ಇದಕ್ಕಿಂತಲೂ ಮುಖ್ಯವಾಗಿ ಪ್ರತಿಪಕ್ಷದಲ್ಲಿ ಪ್ರಬಲ ಮತ್ತು ಸಮರ್ಥ ನಾಯಕತ್ವ ಬೇಕು.
ಕೇವಲ ೨ ಸೀಟುಗಳನ್ನು ಹೊಂದಿದ್ದ ಬಿಜೆಪಿ ಈಗ ಹೆಮ್ಮರವಾಗಿ ಬೆಳೆಯಲು ಆ ಪಕ್ಷದ ಪ್ರಬಲ ನಾಯಕತ್ವವೇ ಕಾರಣ. ಆದರೆ ಪ್ರಸಕ್ತ ಪ್ರತಿಪಕ್ಷದಲ್ಲಿ ಅಂತಹ ನಾಯಕತ್ವವೇ ಇಲ್ಲದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿಡಂಬನೆ. ದುರ್ಬಲ ನಾಯಕತ್ವ ಮತ್ತು ಕಾಂಗ್ರೆಸ್‌ನ ವಿವೇಚನಾ ರಹಿತ, ಮೊನಚಿಲ್ಲದ ಮತ್ತು ಸತ್ವರಹಿತ ಟೀಕೆಗಳನ್ನು ಗಮನಿಸಿದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಇನ್ನೂ ಬಹುಕಾಲ ಅಧಿಕಾರದಿಂದ ದೂರ ಉಳಿದರೂ ಆಶ್ಚರ್ಯವಿಲ್ಲ