ಲಹರಿ
ಸಂಗೀತಾ ಚಚಡಿ
ಹದಿನೇಳು ವರ್ಷದಿಂದ ವಾಸವಾಗಿದ್ದ ಸ್ವಂತ ಮನೆ ಒಮ್ಮೆಲೇ ಈ ಕರೋನಾ ಸಮಯದಲ್ಲಿ ಚಿಕ್ಕದೆನಿಸತೊಡಗಿತು. ಆನ್ಲೈನ್ ಕ್ಲಾಸು, ಆನ್ ಲೈನ್ ವರ್ಕು ಅನ್ನುತ್ತಾ ಮನೆ ತುಂಬಾ ಲ್ಯಾಪ್ಟಾಪ್ ಮತ್ತು ಎಕ್ಸಟೆನ್ಶನ್ ಬಾಕ್ಸ್ಗಳ ಹಾವಳಿ. ಯಾವಾಗ ಎಲ್ಲಿ ಶಾರ್ಟ್ ಸರ್ಕ್ಯೂಟ್ ಆಗುತ್ತದೋ ಎನ್ನುವ ಜೀವ ಭಯ.
ಎಷ್ಟೇ ಆದರೂ ಸ್ವಂತದ್ದು ಎಂದೆನ್ನುತ್ತಾ, ಇನ್ನೂ ಸ್ವಲ್ಪ ದೊಡ್ಡ ಮನೆ ಬೇಕು ಎನ್ನುವ ಆಸೆಯನ್ನು ಹತ್ತಿಕ್ಕುತ್ತಾ ಬಂದಿದ್ದು ಈಗ ಕರೋನಾ ದೆಸೆಯಿಂದ ಸ್ಫೋಟಗೊಳ್ಳುವ ಸ್ಥಿತಿಗೆ ಬಂದಿತ್ತು. ಅಂತೂ ಇಂತು ಧೈರ್ಯ ಮಾಡಿ ಅರಮನೆಯಂತಿದ್ದ (ಹೆತ್ತವರಿಗೆ ಹೆಗ್ಗಣ ಮುದ್ದು ಆ ಧಾಟಿಯಲ್ಲಿ ಓದಿಕೊಳ್ಳಿ) ಮನೆಯನ್ನು ಬದಲಿಸುವ ನಿರ್ಣಯ ಮಾಡಿದ್ದಾಯಿತು. ಅದೃಷ್ಟ ಎನ್ನುವಂತೆ ಸ್ವಂತ ಮನೆಗೆ ಹತ್ತಿರದಲ್ಲೇ ಅನುಕೂಲ ಹಾಗೂ ಅವಶ್ಯಕತೆಗೆ ತಕ್ಕ ಮನೆ ಸಿಕ್ಕಿತು.
ಅಲ್ಲಿಗೆ ಸ್ಥಳಾಂತರಿಸಿದ ಮೇಲೆ ಶುರುವಾಯಿತು ನಮ್ಮ ಸರ್ಕಸ್. ಅದೇಂದರೆ, ನಮ್ಮ ಸ್ವಂತ ಮನೆಯನ್ನು ಬಾಡಿಗೆ ಕೊಡುವ ಕೆಲಸ. ಇಷ್ಟೊತ್ತಿಗಾಗಲೇ ನಮ್ಮಂತೆ ಎಷ್ಟೋ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕಾದಂತಹ ಮನೆಗಳನ್ನು
ಹಿಡಿದು ಗಟ್ಟಿಯಾಗಿ ತಳ ಊರಿ ವರ್ಕ್ ಫ್ರಮ್ ಹೋಮ್ನ್ನು ಯಶಸ್ವಿಯಾಗಿ ಶುರು ಮಾಡಿದ್ದರು. ಬಹಳಷ್ಟು ಜನ ಆರಾಮಾಗಿ ಹೆಂಡತಿಯ ತವರೂರಿನಲ್ಲಿ ಅಳಿಯತನದ ಸಂಭ್ರಮದ ಜತೆ ಸಂಬಳದ ಗಂಟನ್ನು ಮಾಡಿಕೊಳ್ಳುವ ಯೋಜನೆಯೊಂದಿಗೆ ಅಲ್ಲೇ ಮೊಳೆ ಹೊಡೆದಿದ್ದರು.
ಇಲ್ಲಿ ಎಲ್ಲಿ ನೋಡಿದರೂ ‘ಟು ಲೆಟ್’ ಬೋರ್ಡ್ಗಳು. ನಮ್ಮ ಮನೆಗೂ ಒಂದು ಬೋರ್ಡ್ ಹಾಕಿ ಮನೆಯವರ ನಂಬರ್ ಕೊಟ್ಟಾ ಯಿತು. ಇಷ್ಟೆಲ್ಲ ಆಗುವದರಲ್ಲಿ ನನ್ನ ಕೆಲಸ ಕಚೇರಿಯಿಂದ ಶುರುವಾಯಿತು. ಮನೆಯವರದು ಮಾತ್ರ ಇನ್ನೂ ಮನೆಯಿಂದಲೇ ನಡೆಯುತ್ತಿತ್ತು. ಅವರ ಕಚೇರಿಯ ಕೆಲಸದ ನಡುವೆ ಮನೆ ತೋರಿಸುವ ಕೆಲಸ ಶುರುವಾಯಿತು. ಮನೆ ತೋರಿಸು ವದು ಮತ್ತು ಹೆಣ್ಣು ತೋರಿಸುವದು (ಈಗಿನ ಕಾಲದಲ್ಲಿ ಗಂಡು ತೋರಿಸುವದು ಎನ್ನಿ ಬೇಕಾದರೆ) ಎರಡಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲವೆಂದು ಗೊತ್ತಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.
ಕೂಲಂಕುಷವಾಗಿ ಇಂಚಿಂಚೂ ಮನೆ ನೋಡಿ ನಾಳೆ ಹೇಳುತ್ತೇವೆ ಎಂದು ಹೋದರು ಒಬ್ಬರು ಲಿಫ್ಟ್ ಇಲ್ಲ , ಎರಡನೇ ಮಹಡಿ ಎಂದರೆ ಪಾರ್ಕಿಂಗ್ ಜಾಗ ಇನ್ನೂ ದೊಡ್ಡದಿರಬೇಕಿತ್ತು ಎಂದರು ಇನ್ನೊೊಬ್ಬರು. ದೇವರ ಮನೆ ಚಿಕ್ಕದು ಎಂದು ಒಬ್ಬರು, ಅಡಿಗೆ ಮನೆ ಚಿಕ್ಕದು ಎಂದು ಇನ್ನೊಬ್ಬರು. ಆದರೆ ಸಾರ್ವತ್ರಿಕ ಕಂಪ್ಲೇಂಟ್ ಮಾತ್ರ ಲಿಫ್ಟ್ ಬಗ್ಗೆ!
ಎರಡೇ ಮಹಡಿಯ ಅಪಾರ್ಟ್ಮೆಂಟ್. ಹದಿನೇಳು ವರ್ಷದ ಹಿಂದೆ, ನಮಗಿನ್ನೂ ಆಗಷ್ಟೇ ಥರ್ಟಿ ಪ್ಲಸ್ ಶುರುವಾಗಿತ್ತು. ನಮ್ಮ ಹೀರೊ ಜಿತೇಂದ್ರ ಅವರ ಜಾಹೀರಾತಿನ ಪರಿಣಾಮದಿಂದ ನಾವೂ ಇನ್ನೂ ಜೋಶ್ನಲ್ಲಿದ್ದೆವು. ಮಾವ ಅಂತೂ ಜೀನ್ಸ್ ಧಾರಿ. ಹೀಗಾಗಿ ಈ ಮೆಟ್ಟಿಲುಗಳು ನಮಗೆ ಯಾವತ್ತೂ ಹೆದರಿಸಲೇ ಇಲ್ಲ. ಈಗ ನೋಡಿದರೆ ಧುತ್ತನೇ ಬೃಹದಾಕಾರ ತೆಳೆದು ಸಮಸ್ಯೆೆಗೆ ಮೂಲವಾಗಿ ಕುಳಿತು ಬಿಡಬೇಕೇ? ಒಬ್ಬರದಂತೂ ಗಟ್ಟಿ ಮುಟ್ಟಾದ ಕುಟುಂಬವೇ, ಆದರೆ ಮುಂದೆ ತೊಂದರೆಯಾದರೆ ಎಂಬ ಮುಂದಾಲೋಚನೆ!
ಕೆಲವರಂತೂ ಹದಿನೇಳು ವರ್ಷಗಳಿಂದ ಲಿಫ್ಟ್ ಇಲ್ಲದೇ ಇದ್ದ ನಮ್ಮನ್ನು ಇದ್ಯಾವದೋ ಝು ನಲ್ಲಿಯ ಪ್ರಾಣಿಯಂತೆ ನೋಡಬೇಕೆ? ನಮ್ಮ ಮನೆಯವರಂತೂ ಮನೆ ತೋರಿಸಿ ತೋರಿಸಿ ಈಗಿನ ಕಾಲದ ಗಂಡು ಹೆತ್ತವರಿಗಿಂತ ಹೆಚ್ಚು ಸೋತು
ಹೋಗಿದ್ದರು. ಬಾಡಿಗೆ ಮೊತ್ತವು ಮೊದಲು ಹೇಳಿದ್ದಕ್ಕಿಂತ ಒಂದೊಂದೇ ಸಾವಿರದಂತೆ ಕೆಳಗೆ ಇಳಿಯತೊಡಗಿತ್ತು.
ಮೊದ ಮೊದಲು ಕೇವಲ ಫ್ಯಾಮಿಲಿಗೇ ಕೊಡೋಣ ಎಂದಿದ್ದ ನಿರ್ಧಾರ ಸಡಿಲಗೊಳ್ಳುತ್ತ ಕೊನೆಗೆ ಬ್ರಹ್ಮಚಾರಿಗಳಿಗೂ ಸೈ
ಎಂದಿದ್ದಾಯಿತು. ಇದೀಗ ನಮ್ಮ ಅದೃಷ್ಟ ಖುಲಾಯಿಸಿ ಆಶಾಕಿರಣಗಳು ಮೂಡತೊಡಗಿದವು.
ಬಿಸಿರಕ್ತದ ಹುಡುಗರಿಗೆ ಮೆಟ್ಟಿಲುಗಳು ಕಾಣಿಸಲೇ ಇಲ್ಲ. ಅವರಿಗೆಲ್ಲ ಎರಡನೇ ಮಹಡಿ ಎಂದರೆ ಅದು ಎರಡೇ ನೆಗೆತ.
ಅಂತೂ ಇಂತೂ ಮೆಟ್ಟಿಲುಗಳ ಸಮಸ್ಯೆ ಮರೆಯಾಗಿ ಹತ್ತಿರದ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹುಡುಗರಿಗೆ ಆಧುನಿಕ ದ್ರೌಪದಿಯಂತೆ ನಮ್ಮಾಕೆಯನ್ನು ಕಟ್ಟಿ ಹಾಕಾಯಿತು. ‘ಮನೆ ಕಟ್ಟಿ ನೋಡು’ ಎಂಬ ಗಾದೆ ಹೋಗಿ ‘ಮನೆ ಬಾಡಿಗೆಗೆ ಕೊಟ್ಟು ನೋಡು’ ಎಂಬ ಹೊಸ ಗಾದೆ ನಮಗಾಗಿ ಉದಯವಾಯಿತು.
ಹೊಸ ಹುರುಪಿನಿಂದ ಹುಡುಗರು ತಮ್ಮ ತಮ್ಮ ಕೊಠಡಿಗಳನ್ನು ಹೊಂದಿಸಿಕೊಳ್ಳುತ್ತಿದ್ದನ್ನು ನೋಡಿ ಖುಷಿಯಾಗಿ, ಇನ್ನು ಮೇಲೆ ಬಾಡಿಗೆ ಕೊಡುವದಾದರೆ ಇಂತಹವರಿಗೇ ಎಂಬ ತೀರ್ಮಾನ ಮಾಡುವಲ್ಲಿಗೆ ಈ ಬಾಡಿಗೆ ಪುರಾಣ ಸಮಾಪ್ತಿಯಾಯಿತು. ಅಂದ ಹಾಗೆ ಈ ಬರವಣಿಗೆ ಮಾತ್ರ ನನ್ನದೇ ಪೂರ್ಣ ಸ್ವಂತದ್ದೇ, ಹೊರತು ಬಾಡಿಗೆಯದಲ್ಲ.