Friday, 13th December 2024

ಬ್ಯಾಂಕುಗಳ ಖಾಸಗೀಕರಣ: ಮಾಸ್‌ ಬ್ಯಾಂಕಿಂಗ್‌ನಿಂದ ಕ್ಲಾಸ್‌ ಬ್ಯಾಂಕಿಂಗ್‌ಗೆ ?

ಅವಲೋಕನ

ರಮಾನಂದ ಶರ್ಮ

1969ರಲ್ಲಿ 14, 1980ರಲ್ಲಿ 6 ಬ್ಯಾಂಕುಗಳ ರಾಷ್ಟ್ರೀಕರಣ, 2017ರಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಸ್ಟೇಟ್ ಬ್ಯಾಂಕ್‌ನ ಸಹವರ್ತಿ ಬ್ಯಾಂಕುಗಳ ವಿಲೀನ ಮತ್ತು 2019-2020ರಲ್ಲಿ ಹಲವು ಸಾರ್ವಜನಿಕ ರಂಗದ ಬ್ಯಾಂಕು ಗಳನ್ನ ವಿಲೀನಗೊಳಿಸಿ ದೇಶದಲ್ಲಿ ಸಾರ್ವಜನಿಕರಂಗದ ಬ್ಯಾಂಕುಗಳ ಸಂಖ್ಯೆಯನ್ನು 12ಕ್ಕೆ ಇಳಿಸಿದ ನಂತರ, ಮೋದಿ ನೇತೃತ್ವದ ಸರಕಾರವು ಈ ಕ್ಷೇತ್ರದಲ್ಲಿ ಇನ್ನೊಂದು ಕ್ರಾಂತಿಕಾರಕ ಬದಲಾವಣೆಗೆ ಹೆಜ್ಜೆ ಇಟ್ಟಿದೆ.

ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹೊಸ ಬ್ಯಾಂಕ್ ತೆರೆಯಲು ಶೇ.26 ಪ್ರವರ್ತಕರ ಷೇರು ಮಿತಿಯೊಂದಿಗೆ ಅನುಮತಿ ನೀಡಬಹುದು ಎನ್ನುವ ರಿಸರ್ವ್ ಬ್ಯಾಂಕ್‌ನ ಆಂತರಿಕ ಸಮಿತಿಯ ಶಿಫಾರಸ್ಸು ಇನ್ನೂ ಡ್ರಾಯಿಂಗ್ ರೂಂನಲ್ಲಿ ಇರುವಂತೆ ಮತ್ತು ಅದಕ್ಕೆ ಕೆಲವು ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವಂತೆ, ಸರಕಾರವು 20221-22ರ ಬಜೆಟ್ ನಲ್ಲಿ ಎರಡು ದೊಡ್ಡ ಪ್ರಮಾಣದ ಸಾರ್ವಜನಿಕ ರಂಗದ ಬ್ಯಾಂಕುಗಳ ಖಾಸಗೀಕರಣಕ್ಕೆ ಅಡಿ ಇಟ್ಟಿದೆ.

ಬಜೆಟ್‌ನಲ್ಲಿ ಬ್ಯಾಡ್ ಬ್ಯಾಂಕ್ ಸ್ಥಾಪನೆ ಮತ್ತು ಬ್ಯಾಂಕುಗಳಿಗೆ 20000 ಕೋಟಿ ಬಂಡವಾಳ ಮರುಪೂರಣೆ ಮತ್ತು ಠೇವಣಿ ದಾರರಿಗೆ 5 ಲಕ್ಷ ಠೇವಣಿವರೆಗೆ ವಿಮಾ ರಕ್ಷಣೆಗೆ ಬದ್ಧತೆ ಘೋಷಿಸಿ ದರೂ, ಬ್ಯಾಂಕುಗಳ ಖಾಸಗೀಕರಣ ಪ್ರಸ್ತಾಪ ಮತ್ತು ಈ ನಿಟ್ಟಿನಲ್ಲಿ ದೃಢ ಹೆಜ್ಜೆಯು ಬ್ಯಾಂಕಿಂಗ್ ಮತ್ತು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಪಿಎಂಸಿ ಬ್ಯಾಂಕ್, ಗುರು ರಾಘವೇಂದ್ರ ಬ್ಯಾಂಕುಗಳ ವೈಫಲ್ಯ ಮತ್ತು ಯೆಸ್ ಬ್ಯಾಂಕ್ ಹಿನ್ನೆಲೆಗೆ ಕಾರಣಗಳು ಕಣ್ಣೆದುರಿಗೆ ಇದ್ದರೂ ಸರಕಾರ ಖಾಸಗೀಕರಣಕ್ಕೆ ಮುಂದಾಗಿರುವುದು ಕೆಲವರ ಚಿಂತನೆಗೆ ಆಹಾರ ಒದಗಿಸಿದೆ. ಬ್ಯಾಂಕುಗಳ ಖಾಸಗೀಕರಣ ಹೊಸ ಚಿಂತನೆ ಏನೂ ಅಲ್ಲ. ಇದು ತೊಂಬತ್ತರ ದಶಕದ ನರಸಿಂಹ ರಾವ್ – ಮನಮೋಹನ ಸಿಂಗ್‌ರ ಆರ್ಥಿಕ ಸುಧಾರಣೆ,
ಉದಾರೀಕರಣ ಮತ್ತು ಜಾಗತೀಕರಣದ ಅಗೋಚರ ಕೂಸು ಎನ್ನಬಹುದು. ಆದರೆ, ಸಾರ್ವಜನಿಕ ರಂಗದ ಬ್ಯಾಂಕುಗಳು ಕಾಂಗ್ರೆಸ್ ಪಕ್ಷದ ಪ್ರಾಡಕ್ಟ್ ಆಗಿದ್ದು, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಕೆಲವರಿಗೆ ಸೀಮಿತ ವಾಗದೇ ಆರ್ಥಿಕವಾಗಿ ದುರ್ಭಲರಾಗಿರುವ ಕೆಳವರ್ಗದವರಿಗೂ ದೊರಕಬೇಕು ಎನ್ನುವ ಉದ್ದೇಶ ದಿಂದ ಇಂದಿರಾ
ಗಾಂಽಯವರು ಕೈಗೊಂಡ ಬ್ಯಾಂಕ್ ರಾಷ್ಟ್ರೀಕರಣದ ಐತಿಹಾಸಿಕ ಕ್ರಮವನ್ನು ರಿವರ್ಸ್ ಮಾಡಲಾಗದೇ, ಖಾಸಗಿ ವಲಯದಲ್ಲಿ ಬ್ಯಾಂಕ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು.

ಇದರ ಫಲವೇ ಐಸಿಐಸಿಐ, ಎಚ್‌ಡಿಎಫ್‌ಸಿ, ಅಕ್ಸಿಸ್, ಇಂಡಸ್ ಇಂಡ್, ಡೆವಲಪ್ ಮೆಂಟ್ ಕ್ರಡಿಟ್, ಸೆಂಚೂರಿಯ, ಗ್ಲೋಬಲ್ ಟ್ರಸ್ಟ್ , ಐಡಿಬಿಐ, ಯುಟಿಐ, ಮಹೀಂದ್ರ – ಮಹೀಂದ್ರ, ಯೆಸ್, ಐಡಿಎಫ್ಸಿ, ಬ್ಯಾಂಕ್ ಆಫ್ ಪಂಜಾಬ್ ಮತ್ತು ಟೈಮ್ಸ್ ಬ್ಯಾಂಕುಗಳಂಥ ಖಾಸಗಿ ಬ್ಯಾಂಕುಗಳು. ಇವುಗಳಲ್ಲಿ ಗ್ಲೋಬಲ್ ಟ್ರಸ್ಟ್, ಸೆಂಚೂರಿಯನ್. ಬ್ಯಾಂಕ್ ಆಫ್ ಪಂಜಾಬ್, ಟೈಮ್ಸ್ ಬ್ಯಾಂಕ್‌ಗಳು ಅಸ್ತಿತ್ವ ಉಳಿಸಿಕೊಳ್ಳಲಾರದೇ ಬೇರೆ ಬ್ಯಾಂಕುಗಳಲ್ಲಿ ವಿಲೀನವಾದವು.

ಖಾಸಗೀಕರಣ ಏಕೆ?: ಕಳೆದ ಒಂದು ದಶಕದಲ್ಲಿ ಸರಕಾರವು ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ 3.15 ಲಕ್ಷ ಕೋಟಿ ಕ್ಯಾಪಿಟಲ್‌ನ್ನು ನೀಡಿದೆ. ಈ ವರ್ಷದ ಬಜೆಟ್‌ನಲ್ಲಿ ಕೂಡಾ 2000 ಕೋಟಿ ಕ್ಯಾಪಿಟಲ್ ನೀಡುತ್ತಿದ್ದು, ಒಂದು ಅಂದಾಜಿನ ಪ್ರಕಾರ ಬ್ಯಾಂಕುಗಳಿಗೆ ಇನ್ನೂ 70000 ಕೋಟಿ ಕ್ಯಾಪಿಟಲ್‌ನ ಅವಶ್ಯಕತೆ ಇದೆ. ಬ್ಯಾಂಕುಗಳಿಗೆ ಕ್ಯಾಪಿಟಲ್ ಪೂರೈಸುವುದು
ಸರಕಾರಕ್ಕೆ ಕಷ್ಟದಾಯಕವಾಗಿದೆ. ಕ್ಯಾಪಿಟಲ್ ಹಿಂತಿರುಗಿ ಪಡೆದು ಅದನ್ನು ಬೇರೆ ಉದ್ದೇಶಗಳಿಗೆ, ಮುಖ್ಯವಾಗಿ ಪ್ರೊಡಕ್ಷನ್ ಮತ್ತು ಉದ್ಯೋಗ ಸೃಷ್ಟಿಗೆ ಬಳಸಿಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ.

ಹಾಗೆಯೇ ನಿರ್ವಹಣೆ, ವ್ಯವಹಾರ, ಲಾಭ ಗಳಿಸುವಿಕೆ, ಗ್ರಾಹಕರ ಸೇವೆಯಲ್ಲಿ ಸರಕಾರಿ ಬ್ಯಾಂಕು ಗಳಿಗಿಂತ ಖಾಸಗಿ ಬ್ಯಾಂಕುಗಳು ಮೇಲು ಎನ್ನುವ ಭಾವನೆಯು ಇದರ ಹಿಂದೆ ಎಂದು ಹೇಳಲಾಗುತ್ತಿದೆ. ಸರಕಾರವು ಸಾಲ ನೀಡುವಿಕೆ, ಬಿಜಿನೆಸ್ ಮಾಡಬಾರದು ಎನ್ನುವ ಕೆಲವು ಆರ್ಥಿಕ ತಜ್ಞರ ಅಭಿಪ್ರಾಯ ಸರಕಾರದ ಈ ಚಿಂತನೆಗೆ ಕಾರಣವಾಗಿರಬಹುದು ಎಂದೂ ಹೇಳಲಾಗುತ್ತದೆ.

ಖಾಸಗೀಕರಣ ಹೇಗೆ?: ಯಾವುದೇ ಬ್ಯಾಂಕಿನಲ್ಲಿ ಸರಕಾರದ ಷೇರು ಬಂಡವಾಳ ಶೇ.51 ಇದ್ದರೆ, ಅದನ್ನು ಸರಕಾರಿ ಸ್ವಾಮ್ಯದ ಬ್ಯಾಂಕ್ ಎನ್ನಲಾಗುತ್ತದೆ. ಸರಕಾರಿ ಸ್ವಾಮ್ಯದ ಕೆಲವು ಬ್ಯಾಂಕುಗಳಲ್ಲಿ ಇದು ಶೇ.95.84 ವರೆಗೂ ಇದೆ. ಖಾಸಗೀಕರಣ ಎಂದರೆ ಶೇ.51ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುವುದು. ಶೇ.50ಕ್ಕಿಂತ ಹೆಚ್ಚು ಷೇರುಗಳು ಕೈತಪ್ಪಿದಾಗ, ಸರಕಾರ ಬ್ಯಾಂಕಿನ ಮೇಲೆ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಿದ್ದು, ಅದು ಖಾಸಗಿ ಯವರ ಪಾಲಾಗುತ್ತದೆ. ಈ ಷೇರುಗಳ ಮಾರಾಟದಿಂದ ಸರಕಾರಕ್ಕೆ ಭಾರೀ ಪ್ರಮಾಣದಲ್ಲಿ ಫ್ರೆಂಡ್ಸ್ ಹರಿದು ಬರುತ್ತದೆ.

ಖಾಸಗೀಕರಣಕ್ಕೆ ವಿರೋಧ ಏಕೆ?: ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ಬಜೆಟ್‌ನಲ್ಲಿ ಎರಡು ಬ್ಯಾಂಕುಗಳ ಖಾಸಗೀ ಕರಣದ ಪ್ರಸ್ತಾಪ ಮಾಡುತ್ತಿರುವಂತೆ ಬ್ಯಾಂಕ್ ಕಾರ್ಮಿಕ ಸಂಘಗಳು ಬೀದಿಗಿಳಿದು ಪ್ರತಿಭಟಿಸಿವೆ. ಮುಂದಿನ ದಿನಗಳಲ್ಲಿ ಈ
ಪ್ರತಿಭಟನೆ ತೀವ್ರಗೊಳ್ಳುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ದೇಶದ ಠೇವಣಿದಾರರು ಮುಂದಿನ ಕಷ್ಟದ ದಿನಗಳಿಗಾಗಿ ಬ್ಯಾಂಕ್‌ ನಲ್ಲಿ ಉಳಿಸಿದ ಠೇವಣಿಯನ್ನು ಖಾಸಗಿಯವರ ಉಸ್ತುವಾರಿಗೆ ನೀಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ಪಿಎಂಸಿ ಬ್ಯಾಂಕ್, ಯೆಸ್ ಬ್ಯಾಂಕ್, ಗುರು ರಾಘವೇಂದ್ರ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ ಬ್ಯಾಂಕುಗಳ ಉದಾಹರಣೆಯ ನಂತರವೂ, ಈ ಕ್ರಮ ಸರಿಯೇ ಎಂದು ಅವರು ಕೇಳುತ್ತಿದ್ದಾರೆ. 1969 ರ ಬ್ಯಾಂಕ್ ರಾಷ್ಟ್ರೀಕರಣದ ಪೂರ್ವದಲ್ಲಿ ಬಾಂಕು ಗಳಲ್ಲಿ ಸೌಲಭ್ಯಗಳು ಮತ್ತು ಬ್ಯಾಂಕ್ ಉದ್ಯೋಗಗಳು ಅರ್ಹರಿಗೆ, ಅವಶ್ಯಕತೆ ಇದ್ದವರಿಗೆ ದೊರಕದೆ ಪ್ರಭಾವಿ ಗಳಿಗೆ ಮತ್ತು ಸರಿಯಾದ ಸಂಪರ್ಕ ಇದ್ದವರಿಗೆ ಮಾತ್ರ ದೊರಕುತಿತ್ತು ಎನ್ನುವ ಆರೋಪ ಕೇಳುತ್ತಿದ್ದು, ಇದು ಖಾಸಗೀಕರಣದಲ್ಲಿ ಪುನರಾ ವರ್ತನೆ ಗೊಳ್ಳಬಹುದು ಎಂದು ಅವರು ಭಯ ವ್ಯಕ್ತಪಡಿಸುತ್ತಿದ್ದಾರೆ.

ಮಾನವ ಸಂಪನ್ಮೂಲಗಳ exploitation ಮತ್ತು ಕಾರ್ಮಿಕ ಕಾನೂನುಗಳ ಉಲ್ಲಂಘನೆ ನಿರಾಳವಾಗಿ ನಡೆಯುವುದಲ್ಲದೇ ಈವರೆಗೆ ಕಾರ್ಮಿಕ ಸಂಬಂಧಗಳ ನಿಟ್ಟಿನಲ್ಲಿ ಬ್ಯಾಂಕುಗಳಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಮಾತುಕತೆ ಗಳು ಹಳ್ಳಹಿಡಿಯ ಬಹುದೆಂದು ಅವರು ವಿಚಲಿತರಾಗಿದ್ದಾರೆ. ಹೊಸ ಸೌಲಭ್ಯಗಳು ಹೋಗಲಿ, ಪ್ರಸ್ತುತ ಲಭ್ಯವಿರುವ ಸೌಲಭ್ಯ ಗಳು ಉಳಿಯಬಹುದೇ ಎನ್ನುವ ಭಯ ಅವರನ್ನು ಕಾಡುತ್ತಿದೆ. ಎಷ್ಟೇ ನಿಬಂಧಗಳು, ಮೂಗುದಾರಗಳು ಮತ್ತು ನಿಯಂತ್ರಣಗಳು ಇದ್ದರೂ ಕಮರ್ಷಿಯಲ್ ಆಸಕ್ತಿಗೆ ಹೆಚ್ಚಿನ ಮಹತ್ವ ಮತ್ತು ತೂಕ ನೀಡುವ ಖಾಸಗಿ ಬ್ಯಾಂಕುಗಳು ಸಾಮಾಜಿಕ
ಬ್ಯಾಂಕಿಂಗ್‌ಗೆ ಒತ್ತು ನೀಡುವ ಸಾರ್ವಜನಿಕ ರಂಗದ ಬ್ಯಾಂಕುಗಳಂತೆ ಕಾರ್ಯ ನಿರ್ವಹಿಸುವುದು ಕಷ್ಟ.

ಒಮ್ಮೆ ಖಾಸಗಿಯಾದ ನಂತರ ಅವು ಉತ್ತಮ ಸೇವೆಯ ಹೆಸರಿನಲ್ಲಿ ಅತ್ಯಾಧುನಿಕ ಡಿಜಿಟಲ್ ಆವಿಷ್ಕಾರಗಳನ್ನು ಬಳಸಿ, ಬ್ಯಾಂಕು ಗಳಲ್ಲಿ ಮಾನವ ಸಂಪನ್ಮೂಲದ ಬಳಕೆಯನ್ನು ಕಡಿಮೆ ಮಾಡಬಹುದು. ಇದು ಅವರ ಸೇವಾಶುಲ್ಕವನ್ನು ಹೆಚ್ಚಿಸಿ ಜನಸಾಮಾನ್ಯ ಗ್ರಾಹಕನಿಗೆ ಕೈಗೆಟುಕದಂತೆ ಮಾಡಬಹುದು. ಅವರ ಗ್ರಾಹಕ ಬೇಸ್ ಸಮಾಜದ ಉಚ್ಚ ಸ್ತರದವರಿಗೆ ಸೀಮಿತವಾಗ ಬಹುದು ಎನ್ನುವ ಭೀತಿ ಇದೆ. ಖಾಸಗೀಕರಣದ ನಂತರ ಹೆಚ್ಚು ಆದಾಯ ತರದ ಗ್ರಾಮಾಂತರ ಶಾಖೆಗಳನ್ನು ಮುಚ್ಚಬಹುದು.

ಸಾರ್ವಜನಿಕರಂಗದ ಬ್ಯಾಂಕುಗಳಂತೆ ಇವು ಕನಿಷ್ಠ ನಾಗರಿಕ ಸೌಲಭ್ಯ ಇಲ್ಲದ ಹಳ್ಳಿಗಳಿಗೆ ಹೋಗಬಹುದೇ? ಗೂಡಂಗಡಿ ಯವನಿಗೆ, ರಸ್ತೆಬದಿ ಅಂಗಡಿಯವನಿಗೆ ಮತ್ತು ದಿನಗೂಲಿಯವನಿಗೆ ಈ ಬ್ಯಾಂಕುಗಳಲ್ಲಿ ಸೌಲಭ್ಯ ಸಿಗಬಹುದೇ ಎಂದು ಅವರು
ಕೇಳುತ್ತಾರೆ. ದೇಶ ಕಟ್ಟುವ ಈ ಸಂಸ್ಥೆಗಳನ್ನು ಖಾಸಗಿ ಯವರ ಕೈಗೆ ನೀಡಬಾರದು ಎಂದು ಆಗ್ರಹಿಸುತ್ತಾರೆ. ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಈಗ ಸಿಬ್ಬಂದಿ ಅನುಭವಿಸುತ್ತಿರುವ ಸೌಲಭ್ಯಗಳಿಗೆ ಕತ್ತರಿ ಬೀಳುವುದನ್ನು ಅಲ್ಲಗಳೆಯಲಾಗದು.

ಭಾರತೀಯ ರೇಲ್ವೆ ನಂತರ ಅತಿ ದೊಡ್ಡ ಮತ್ತು ಭಾರೀ ವೈಬ್ರಂಟ್ ಕಾರ್ಮಿಕ ಸಂಘ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ
ಬ್ಯಾಂಕ್ ಕಾರ್ಮಿಕ ಸಂಘಗಳು ಮುಂದಿನ ದಿನಗಳಲ್ಲಿ ಏದುಸಿರು ಬಿಡಬೇಕಾಗಬಹುದೇನೋ? ಬ್ಯಾಂಕಿಂಗ್ ನಲ್ಲಿ ಗಣನೀಯ ವಾಗಿ ಸಿಬ್ಬಂದಿ ಸಂಖ್ಯೆಯಲ್ಲಿ ಇಳಿತ ಕಾಣಬಹುದು. ಬ್ಯಾಂಕಿಂಗ್ ಸಲಹೆಗಾರರೊಬ್ಬರ ಪ್ರಕಾರ ಮುಂದಿನ ದಿನಗಳಲ್ಲಿ ಸಾರ್ವ ಜನಿಕ ರಂಗದ ಬ್ಯಾಂಕುಗಳ ಸಂಖ್ಯೆ 12 ರಿಂದ 4ಕ್ಕೆ ಇಳಿಯಬಹುದು.

ಆರಂಭದ ಮಾಹಿತಿ ಪ್ರಕಾರ ಎರಡು ದೊಡ್ಡ ಬ್ಯಾಂಕುಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ರೋಡಾ
ಬ್ಯಾಂಕುಗಳನ್ನು ಖಾಸಗೀಕರಣ ಗೊಳಿಸುವ ಮಾತು ಕೇಳಿ ಬರುತ್ತಿತ್ತು. ಈ ಎರಡು ಬ್ಯಾಂಕುಗಳು ಸದೃಢವಾಗಿದ್ದು ಮತ್ತು ಬೃಹತ್ ಬ್ಯಾಂಕುಗಳಾಗಿದ್ದು , ಖಾಸಗೀಕರಣ ದಿಂದ ಬಹುದೊಡ್ಡ ಮೊತ್ತ ಸರಕಾರಕ್ಕೆ ದೊರಕುವ ಸಾಧ್ಯತೆ ಇರುವುದರಿಂದ, ಈ ಬ್ಯಾಂಕು ಗಳನ್ನು ಅಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು.

ಸಣ್ಣ ಮತ್ತು ರೋಗಗ್ರಸ್ತ ಬ್ಯಾಂಕುಗಳಿಗೆ ಹೂಡಿಕೆದಾರರನ್ನು ಆಕರ್ಷಿಸುವುದು ಕಷ್ಟ ಎನ್ನಲಾಗುತ್ತದೆ. ಆದರೆ, ಇತ್ತೀಚಿನ ವರದಿ ಗಳ ಪ್ರಕಾರ ಮಧ್ಯಮ ಮತ್ತು ಸಣ್ಣ ಪ್ರಮಾಣದ ಬ್ಯಾಂಕುಗಳಾದ ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗಳು ಖಾಸಗೀಕರಣ ಗೊಳ್ಳುವ ಬ್ಯಾಂಕುಗಳ
ಪಟ್ಟಿಯಲ್ಲಿವೆ.

ಕೆಲವು ಬ್ಯಾಂಕು ಗಳಿಗೆ ಹೂಡಿಕೆದಾರರ ಆಸಕ್ತಿ ಕಡಿಮೆ ಇರುವುದರಿಂದ ನಂತರದ ದಿನಗಳಲ್ಲಿ ಖಾಸಗೀಕರಣವನ್ನು ಕೈಗೆತ್ತಿ ಕೊಳ್ಳಬಹುದು ಎನ್ನಲಾಗುತ್ತದೆ. ಯಾವ ಬ್ಯಾಂಕುಗಳು ಮೊದಲು ಖಾಸಗೀಕರಣಗೊಳ್ಳ ಬಹುದು ಎನ್ನುವುದರ ಬಗೆಗೆ
ಅಂತಿಮ ನಿರ್ಧಾರ ಇನ್ನೂ ಆಗಬೇಕಿದೆ. ಎರಡು ಬ್ಯಾಂಕುಗಳ ಖಾಸಗೀಕರಣದ ನಂತರದ ಬೆಳವಣಿಗೆಯನ್ನು ನೋಡಿಕೊಂಡು, ಉಳಿದ ಬ್ಯಾಂಕುಗಳ ಬಗೆಗೆ ನಿರ್ಣಯಿಸಬಹುದು.

ಹಾಗೆಯೇ ಕಳೆದ ಬಾರಿ ವಿಲೀನದ ಪ್ರಕ್ರಿಯೆಯನ್ನು ತಪ್ಪಿಸಿಕೊಂಡ ಬ್ಯಾಂಕು ಗಳನ್ನು ವಿಲೀನಗೊಳಿಸುವ ಸಾಧ್ಯತೆಗಳೂ ಇವೆ
ಎಂದು ಹೇಳಲಾಗುತ್ತಿದೆ. ಬ್ಯಾಂಕುಗಳ ಖಾಸಗೀಕರಣ ಸುಗಮವಾಗಿಸಲು ಬ್ಯಾಂಕಿಂಗ್ ಕಂಪನೀಸ್ ಎಕ್ವಿಜಿಷನ್ ಮತ್ತು ಟ್ರಾನ್ಸ್ ಫರ್ ಆಕ್ಟ್ 1970 ಮತ್ತು 1980ನ್ನು ತಿದ್ದುಪಡಿ ಮಾಡಲು ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಬ್ಯಾಂಕಿಂಗ್ ಸುಧಾರಣೆ ಬಗೆಗೆ ನರಸಿಂಹನ್ ಮತ್ತು ಪಿ.ಜೆ. ನಾಯಕ್ ಸಮಿತಿ ವರದಿಗಳು ದಶಕಗಳ ನಂತರ ಅನುಷ್ಠಾನಗೊಳ್ಳುತ್ತಿದ್ದು, ಬ್ಯಾಂಕಿಂಗ್ ಉದ್ಯಮ ದಲ್ಲಿ ಬದಲಾವಣೆಯ ಬಿರುಗಾಳಿ ತೀವ್ರವಾಗಿ ಬೀಸಲು ಆರಂಭಿಸಿದೆ. ಈ ವರೆಗೆ ಮಾಡಿದ ಬದಲಾವಣೆಗಳು ಬ್ಯಾಂಕ್ ನಿರ್ವಹಣೆ, ನಷ್ಟ ನಿಯಂತ್ರಿಸುವ ಮತ್ತು ಅನುತ್ಪಾದಕ ಮತ್ತು ಸುಸ್ತಿ ಸಾಲದ ವಸೂಲಿಯತ್ತ ಕೇಂದ್ರಿಕರಿಸಿದ್ದು, ರಾಜಕೀಯ ಪಕ್ಷಗಳು ಇವು ಗಳತ್ತ ಗಮನಹರಿಸಿಲ್ಲ.

ಆದರೆ, ಖಾಸಗೀಕರಣ ಕೆಲವು ರಾಜಕೀಯ ಪಕ್ಷಗಳು, ಮುಖ್ಯವಾಗಿ ಎಡಪಕ್ಷಗಳು ಲಾಗಾಯ್ತನಿಂದ ವಿರೋಧಿಸುತ್ತಿರುವ ನಿಲುವು ಮಾಜಿ ಡೆಪ್ಯುಟಿ ಗವರ್ನರ್ ಎಸ್.ಎಸ್. ಮುಂದ್ರಾ ಪ್ರಕಾರ ಬ್ಯಾಂಕಿಂಗ್ ಉದ್ಯಮದ ಸಂಕಷ್ಟಕ್ಕೆ ಖಾಸಗೀಕರಣ ಮದ್ದಲ್ಲ. ಬ್ಯಾಂಕಿಂಗ್ ಉದ್ಯಮವನ್ನು ದೃಢೀಕರಿಸಲು ಸಾರ್ವಜನಿಕ ರಂಗದ ಕ್ಯಾರೆಕ್ಟರ್ ಉಳಿಸಿಕೊಳ್ಳಬೇಕು, ಮಾಲಿಕತ್ವವನ್ನು ಪ್ರತ್ಯೇಕಿಸಿ ಬ್ಯಾಂಕುಗಳಿಗೆ ನಿರ್ವಹಣಾ ಸ್ವಾತಂತ್ರ್ಯವನ್ನು ನೀಡಬೇಕು.

ಅವರು ಮಾಲಿಕತ್ವ ಬದಲಾವಣೆ ಒಂದು ENTITY ಯ BEHAVIOUR ನ್ನು ಬದಲಿಸುತ್ತದೆ ಎನ್ನುವುದು ಒಂದು ಭ್ರಮೆ
ಎನ್ನುತ್ತಾರೆ. ಹಾಗೆಯೇ ಸುಸ್ತಿ ಸಾಲದಲ್ಲಿ ಸುಸ್ತು ಹೊಡೆಯುತ್ತಿರುವ ಮತ್ತು ರೋಗಗ್ರಸ್ಥ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಾರೆ ಎನ್ನುವ ಪ್ರಶ್ನೆಯೂ ಮೇಲ್ಮೆಗೆ ಬಂದಿದೆ. ಕೆಲವು ಸಾರ್ವಜನಿಕ ರಂಗದ ಬ್ಯಾಂಕುಗಳು ಕೊಳೆತ
ಹಣ್ಣುಗಳಾಗಿದ್ದು, ಹೊರಗೆ ಒಗೆಯುವ ಕಾಲ ಸನ್ನಿಹಿತವಾಗಿದೆ ಎಂದು, ವಿಚಾರ ಗೋಷ್ಠಿ ಒಂದರಲ್ಲಿ ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ ಥಾಕೂರ್ ವ್ಯಕ್ತಪಡಿಸಿದ ಮಾತು ಹೂಡಿಕೆದಾರರು ಹಿಂದೇಟು ಹಾಕುವಂತೆ ಮಾಡಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಖಾಸಗೀಕರಣ ಎಲ್ಲಿ, ಹೇಗೆ ಮತ್ತು ಯಾವಾಗ ಎನ್ನುವ ಭವಿಷ್ಯದ ಬೆಳವಣಿಗೆ ಏನೇಇರಲಿ, ಮರಳಿ ಮನೆಗೆ ಎನ್ನುವಂತೆ ಬ್ಯಾಂಕಿಂಗ್ ಉದ್ಯಮ ಪಡೆಯುತ್ತಿರುವ ಯು ಟರ್ನ್ ಕುತೂಹಲಕರವಾಗಿದೆ.