Friday, 13th December 2024

ವಿನಾ ದೈನ್ಯೇನ ಜೀವನಂ

ಪ್ರಸ್ತುತ

ಡಾ.ಕೆ.ಪಿ.ಪುತ್ತೂರಾಯ

ಯಾವ ಪ್ರಯೋಜನಕ್ಕೂ ಆಗದವರು ಹೆಚ್ಚು ದಿನ ಬದುಕಿರಬಾರದು ನನ್ನೊಡೆಯಾ ಎಂದ. ಹಾಗೆಲ್ಲಾ ಹೇಳಬೇಡ; ಸಾಯುವವರಿಗೆ ಬದುಕಲೇ ಬೇಕಲ್ಲ ಎಂದೆ. ನಾನು ಹೇಳಲು ಸಾವು ಬರುವವರೆಗೆ ಕಾಯಲೇ ಬೇಕಾಗಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದ ಅವನ ಮಾತಿನ ಅರ್ಥವಾಗಲಿಲ್ಲ ನನಗೆ ಆಗ.

ಧೋ — ಎಂದು ಒಂದೇ ಸಮನೆ ಸುರಿಯುವ ಆಷಾಡದ ಮಳೆ ಇರಲಿ, ಸುಡು ಬಿಸಿಲಿರಲಿ, ತನ್ನ ತಲೆ ಮೇಲೊಂದು ಅಡಿಕೆ ಹಾಳೆಯ ಟೋಪಿಯನ್ನು (ಮುಟಾಳೆ) ಹಾಕಿಕೊಂಡು ಸೊಂಟಕ್ಕೆ ಸುತ್ತಿದ ಒಂದು ತುಂಡು ಮಾಸಿದ ಬಟ್ಟೆಯನ್ನು ಕುಂಡೆಯ ವರೆಗೂ ಎತ್ತಿ ಕಟ್ಟಿಕೊಂಡು ಬೆಳಗ್ಗೆ 8 ಗಂಟೆಗೆ ಸರಿಯಾಗಿ ನಮ್ಮ ಮನೆಯ ಅಂಗಳದ ಅಂಚಿನಲ್ಲಿ ಕೈಕಟ್ಟಿಕೊಂಡು ಆ ದಿನದ ಕೆಲಸವೇನೆಂದು (ಬೇಲೆ) ತಿಳಿದುಕೊಳ್ಳಲು ನಿಂತವ ನೆಂದರೆ ಇನ್ಯಾರೂ ಅಲ್ಲ ನಮ್ಮ ಮನೆಯ ಕೆಲಸದಾಳು ಭೈರ.

ಅವನ ಕರಿಯ ದೇಹ, ಒಣಕಲು ಆಗಿದ್ದರೂ ಮುಖದಲ್ಲೊಂದು ಸಣ್ಣ ನಗೆ ಅವನ ನಿತ್ಯದ ಸಿಂಗಾರವಾಗಿತ್ತು. ಒಂದೆರಡು ಹಸಿ ಅಡಿಕೆಯ ಹೋಳು, ಸುಣ್ಣ ಮತ್ತು ವೀಳ್ಯೆದೆಲೆ (ಪೂಳು ಬಚ್ಚಿರೆ)ಗಳನ್ನು ಬಾಯಿಗೆ ಹಾಕಿ ಕೊಳ್ಳುವುದರಿಂದ ಆರಂಭವಾಗುವ
ಅವನ ಕೆಲಸ ನಿತ್ಯ ನಿರಂತರ. ಏಳೆಂಟು ದಶಕಗಳಿಂದ ನಮ್ಮ ಮನೆಯ ಕೆಲಸ ಮಾಡಿಕೊಂಡು ಬರುತ್ತಿದ್ದ ಇವನಿಗೆ ರಜೆ ಎಂಬುದೇ ಗೊತ್ತಿಲ್ಲವಾಗಿತ್ತು. ಅವನಿಲ್ಲದ ದಿನವನ್ನು ಊಹಿಸಲು ಸಾಧ್ಯವೆನ್ನುವಷ್ಟರ ಮಟ್ಟಿಗೆ ಆತ ಮನೆಯ ಭಾಗವಾಗಿ ಬೆರೆತು
ಹೋಗಿದ್ದ.

ದಿನವಿಡೀ ಪೂಜೆ, ವಹಿವಾಟು, ಕೋರ್ಟು ಕಚೇರಿ ಎಂದು ಓಡಾಡುತ್ತಿದ್ದ ನಮ್ಮಪ್ಪನಿಗೂ ಒಬ್ಬ ನಂಬಿಗಸ್ಥ ಆಳು ಬೇಕಾಗಿತ್ತು. ಭೈರ ಕೆಲಸ ಮಾಡುವುದರಲ್ಲಿ ಕಳ್ಳನಾಗಿರಲಿಲ್ಲ. ಯಾರು ನೋಡಲಿ, ನೋಡದಿರಲಿ, ಹೇಳಲಿ ಹೇಳದಿರಲಿ, ಬಂದವನೇ ಮೊದಲು ದನಗಳ ಹಟ್ಟಿ ಗುಡಿಸಿ, ಹಸು ಹೋರಿಗಳಿಗೆ ಅಕ್ಕಚ್ಚು ಕುಡಿಸಿ, ಹುಲ್ಲು ಹಾಕಿ, ಮನೆಯ ಅಂಗಳವನ್ನು ಸ್ವಚ್ಛ ಮಾಡಿ ಗದ್ದೆ ತೋಟದ ಕಡೆ ಹೊರಟನೆಂದರೆ, ಮತ್ತೇ ಬರೋದು ಮದ್ಯಾಹ್ನ ಎರಡು ಗಂಟೆಗೆ. ನಮ್ಮ ಅಮ್ಮ ಅಡಿಕೆ ಹಾಳೆಯ ತಟ್ಟೆಯಲ್ಲಿ (ಕಿಳ್ಳಿ) ನೀಡಿದ ಅನ್ನ ಹುಳಿಯನ್ನು ಉಂಡು ಹೊರ ಚಾವಡಿಯ ಮೂಲೆಯಲ್ಲಿ ಒಂದು ಘಳಿಗೆ ವಿಶ್ರಾಂತಿ ಪಡೆದು ಮತ್ತೆ ಕೆಲಸಕ್ಕೆ ಹೋದವನು ಕೆಲಸ ನಿಲ್ಲಿಸೋದು ಕತ್ತಲಾದ ಮೇಲೆಯೇ.

ಅಷ್ಟು ಹೊತ್ತಿಗೆ ನಮ್ಮ ಮನೆಯಿಂದ ದಿನದ ಕೂಲಿ ರೂಪದಲ್ಲಿ ಕೊಡಲಾಗುತ್ತಿದ್ದ 4 ಸೇರು ಭತ್ತವನ್ನು ತನ್ನ ಹೆಗಲ ಮೇಲಿನ ಶಾಲಿನಲ್ಲಿ ಕಟ್ಟಿಕೊಂಡು ತನ್ನ ಗುಡಿಸಲಿಗೆ ಹೋಗಿ ಆ ಭತ್ತವನ್ನು ಬೇಯಿಸಿ, ಕುಟ್ಟಿ ಅಕ್ಕಿ ಮಾಡಿ ಅದನ್ನು ಬೇಯಿಸಿ ಗಂಜಿ ಮಾಡಿ ಉಣ್ಣುವಷ್ಟರಲ್ಲಿ ದಿನಾ ರಾತ್ರಿ 11 ಗಂಟೆಯ ಮೇಲೆಯೇ ಆಗುತ್ತಿತ್ತು. ಗಂಜಿಯ ಜತೆ ಅದನ್ನು ಹಿತ್ತಿಲಲ್ಲಿ ಬೆಳೆಸಿದ ಒಂದಿಷ್ಟು ತರಕಾರಿ ಪಲ್ಯ, ಅಪರೂಪಕ್ಕೆ  ಮಕ್ಕಳು ಕೆರೆಯಿಂದ ಹಿಡಿದು ತಂದ ಬೇಯಿಸಿದ ಮೀನು ಇದ್ದರೆ ವಿಶೇಷ ಊಟವಾದಂತೆ.

ವಾರಕ್ಕೊಮ್ಮೆ ಈಚಲು ಮರದಿಂದ ಭಟ್ಟಿ ಇಳಿಸಿದ ಸಾರಾಯಿ (ಕಳಿ) ಇದ್ದರಂತೂ ಗೌಜಿಯೋ ಗೌಜಿ. ಡೋಲು ಬಾರಿಸುತ್ತಾ (ತೆಂಬರೆ) ತುಳು ಜಾನಪಾದ ಹಾಡುಗಳೊಂದಿಗೆ ಒಲೆಯ ಸುತ್ತ ಕುಣಿಯುವ ನೃತ್ಯಗಳನ್ನು ಕೂಗಳತೆ ದೂರದಲ್ಲಿರುವ ನಮ್ಮ ಮನೆಯಿಂದಲೂ ನೋಡಲಾಗುತ್ತಿತ್ತು. ರಾತ್ರಿ ಉಂಡು ಉಳಿದ ಗಂಜಿ ತೆಳಿಯನ್ನು ಬೆಳಗ್ಗೆ ಎದ್ದವನೇ ಕುಡಿದು ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದ ನಮ್ಮ ಭೈರ. ವರುಷಕ್ಕೆ ಒಂದು ಜತೆ ಪಂಚೆ, ಚಿಲ್ಲರೆ ಕಾಸು ಬಿಟ್ಟರೆ ಇನ್ಯಾವ ಆದಾಯವೂ ಇವನಿಗೆ ಇಲ್ಲವಾ ಗಿತ್ತು. ತೆಂಗಿನ ಗರಿಗಳಿಂದ (ಮಡಲು) ಮುಚ್ಚಿದ ಹುಲ್ಲು ಹಾಸಿದ ಪುಟ್ಟ ಗುಡಿಸಲನ್ನು ಬಿಟ್ಟರೆ ಇವನದೆಂಬುದು ಏನೂ ಇಲ್ಲ. ಭೈರನಿಗೆ ಮತ್ತಡಿ ಎಂಬ ಹೆಸರಿನ ಹೆಂಡತಿ, ಮುದ್ದ, ಕುರೊವು, ತನಿಯನೆಂಬ 3 ಗಂಡು ಮಕ್ಕಳು ಹಾಗೂ ಚೋಮು ಎಂಬ ಹೆಣ್ಣು ಮಗಳು ಇದ್ದರು.

ಅಪ್ಪನ ಜತೆ ಇವರೆಲ್ಲರೂ ಬೇಸಾಯದ ಇಲ್ಲವೇ ತೋಟದ ಕೆಲಸಕ್ಕೆ ಬರುತ್ತಿದ್ದ ಕಾರಣ, ಮನೆ ಯಲ್ಲಿ ಎರಡು ಹೊತ್ತಿನ ಗಂಜಿ ಊಟಕ್ಕೆ ತೊಂದರೆ ಇಲ್ಲವಾಗಿತ್ತು. ಬರೀ ಲಂಗೋಟಿ (ಕೋಮಣ) ಯಲ್ಲಿರುತ್ತಿದ್ದ ಇವನ ಮಕ್ಕಳ ಜೊತೆ ಆಟವಾಡೋದೆಂ
ದರೆ ನಮಗೆ ಬಲು ಇಷ್ಟ. ಆದರೆ, ಅವರೆಲ್ಲ ಹೊಲೆಯರಾದ ಕಾರಣ, ಇದಕ್ಕೆಲ್ಲಾ ಅವಕಾಶವಿಲ್ಲವಾಗಿತ್ತು. ಅವರ ಮೈ ಮುಟ್ಟಿದರೆ, ಸ್ನಾನ ಮಾಡಿಕೊಂಡೇ ಮನೆಯೊಳಗೆ ಕಾಲಿಡಬೇಕೆಂದು ಹಿರಿಯರ ಆದೇಶವಾಗಿತ್ತು. ಆದರೂ ಕದ್ದು ಕದ್ದು ನಾವು ಆ ಮಕ್ಕಳ ಮತ್ತು ಭೈರನ ಜೊತೆ ಇರಬಯಸುತ್ತಿದ್ದೆವು.

ಕಾರಣ ಸಮಯ ಸಿಕ್ಕಾಗಲೆಲ್ಲಾ ಮನೆಯ ಹಟ್ಟಿಯಲ್ಲೋ, ಕೊಟ್ಟಿಗೆಯಲ್ಲೋ ಭೈರ ಹೇಳುತ್ತಿದ್ದ ಭೂತ ದೆವ್ವಗಳ ಕತೆಗಳು ರೋಮಾಂಚನಕಾರಿಯಾಗಿರುತ್ತಿದ್ದವು. ಭಯಾನಕ ರೋಚಕ ಪ್ರಸಂಗಗಳು ಬಂದಾಗ, ಎಲೆ ಅಡಿಕೆ ತಿಂದು ಕೆಂಪು  ಮಾಡಿ ಕೊಂಡಿದ್ದ ಬಾಯಿ ತುಂಬಿದ ವೀಳ್ಯದ ರಸವನ್ನು ಕೆಂಪು ಓಕುಳಿ ತರ ಉಗುಳುತ್ತಾ ಕಣ್ಣರಳಿಸಿಕೊಂಡು ಹೇಳುತ್ತಿದ್ದ ರೀತಿ, ನಮಗೆ ಭಯವನ್ನೂ ಮಜವನ್ನೂ ಕೊಡುತ್ತಿದ್ದವು. ಹೀಗೆ ಬದುಕು ಸಾಗಿಸುತ್ತಿದ್ದ ಬೈರನಿಗೆ ಇಳಿ ವಯಸ್ಸಿನಲ್ಲಿ ಆಘಾತವೊಂದು ಕಾದಿತ್ತು. ಒಂದು ದಿನ ಕೋಣಗಳ ಮೈತೊಳೆಯಲು ಕೆರೆಯ ನೀರಿಗೆ ಇಳಿದ ಭೈರ ಕಾಲು ಕಲ್ಲಿನ ಜಾರಿ ಪಾಡಿ ಮೇಲೆ ಬಿದ್ದು ಸೊಂಟವನ್ನೇ ಮುರಿದುಕೊಂಡ.

ಏಳಲಾಗದ ಎದ್ದು ನಡೆಯಲಾಗದ ಸ್ಥಿತಿಯಲ್ಲಿದ್ದ ಇವನನ್ನು ಅವನ ಮಕ್ಕಳು ಅವರ ಹಟ್ಟಿಗೆ ಕರಕೊಂಡು ಹೋದರು.
ಪೇಟೆಯ ಡಾಕ್ಟರ್ ಬಳಿ ಕೊಂಡೊಯ್ಯಲು ಒಂದೆಡೆ ಹಣದ ಅಡಚಣೆಯಾದರೆ, ಇನ್ನೊಂದೆಡೆ ನಮ್ಮ ಹಳ್ಳಿಯಿಂದ ವಾಹನ ಸೌಕರ್ಯದ ಕೊರತೆ. ಕೆಲವು ದಿನ ಮಕ್ಕಳು ನಾಟಿ ಔಷಧವನ್ನು ಕೊಡಿಸಿದರೂ ಅವೆಲ್ಲಾ ಫಲಕಾರಿಯಾಗದೇ, ಭೈರ ಬಿದ್ದಲ್ಲೇ ಬಿದ್ದಿರ ಬೇಕಾಯಿತು. ಆರಂಭದ ದಿನಗಳಲ್ಲಿ ಮೂರು ಹೊತ್ತು ಗಂಜಿ ಕೊಟ್ಟು ಆರೈಕೆ ಮಾಡುತ್ತಿದ್ದ ಮಡದಿ ಮಕ್ಕಳ ಉಪಚಾರವೂ ಕಡಿಮೆಯಾಗತೊಡಗಿತು.

ಮೂರು ಹೊತ್ತಿನ ಗಂಜಿ ಊಟ ಎರಡು ಹೊತ್ತಿಗೆ ಇಳಿಯಿತು. ಬರ‍್ತಾ ಬರ‍್ತಾ ಒಂದು ಹೊತ್ತಿಗೆ ಮಾತ್ರ ಸೀಮಿತವಾಯಿತು. ಭೈರನಿಗೆ ನಮ್ಮ ಅಪ್ಪ ಮೊದಲಿಗೆ ಒಂದಿಷ್ಟು ಭತ್ತವನ್ನು ತಿಂಗಳಿಗೆ ಉದಾರವಾಗಿ ನೀಡಿದರೂ ಏನೂ ಕೆಲಸ ಮಾಡಲಾಗದ ಇವನಿಗೆ
ಕ್ರಮೇಣ ಅದನ್ನೂ ನಿಲ್ಲಿಸಿದರು. ಕೆಲಸ ಮಾಡದೆ ಪುಕ್ಕಟೆಯಾಗಿ ಭತ್ತ ತೆಗೆದುಕೊಳ್ಳೋದು ಸ್ವಾಭಿಮಾನಿ ಭೈರನಿಗೂ ಅಸಹ್ಯ ವೆನಿಸಿತು. ದಿನವಿಡೀ ಮನೆ ಯವರಿಗೂ ಭಾರವಾದೆನೇ ಎಂಬ ಭಾವನೆ ಇವನಲ್ಲಿ ಬಲವಾಗತೊಡಗಿತು.

ಮಕ್ಕಳಾದರೇನಂತೆ ಇನ್ನೊಬ್ಬರ ಹಂಗಿನ ಕೆಸರು ನೀರಿನೊಳಗೆ ಎಷ್ಟೇ ಪ್ರಯತ್ನಪಟ್ಟರೂ ಭೈರನಿಗೆ ತನ್ನ ಮುಖವನ್ನು ನೋಡಿ ಕೊಳ್ಳಲು ಸಾಧ್ಯವಾಗಲೇ ಇಲ್ಲ. ತನ್ನ ವಿಧಿಯನ್ನು ಶಪಿಸುತ್ತಾ ಬಡಕಲಾಗುತ್ತಿದ್ದ. ಬಹಳ ದಿನಗಳಿಂದ ಕಾಣದ ಭೈರನನ್ನು ನೋಡಿ ಮಾತನಾಡಿಸಬೇಕೆಂದು ನಾನು ಅವನ ಹಟ್ಟಿಯ ಬಳಿಹೋದೆ. ಹೊರಗೆ ಕಲ್ಲ ಬೆಂಚಿನ ಮೇಲೆ ಮಲಗಿದ್ದ ಭೈರನನ್ನು ಕಂಡು ನನಗೆ ಅತ್ಯಂತ ದುಃಖವಾಯಿತು. ಕರಿಯ ಚರ್ಮದಿಂದ ಮುಚ್ಚಿದ್ದ ಬರಿಯ ಎಲುಬು ಮೂಳೆಗಳ ಅವನ ದೇಹ ಗುರುತು ಹಿಡಿಯದಷ್ಟು ಕೃಶವಾಗಿತ್ತು.

ತಿಂಗಳುಗಳಿಂದ ಕತ್ತರಿಸದ ಬಿಳೀ ತಲೆಕೂದಲು, ಅವನ ತಲೆಗಿಂತ ಹೆಚ್ಚಿನ ಗಾತ್ರದಲ್ಲಿ ಕಾಣುತ್ತಿತ್ತು. ಕಣ್ಣುಗಳು ನಿಸ್ತೇಜ ವಾಗಿದ್ದವು. ಮೈಮೇಲೊಂದು ಹರುಕು ಬಟ್ಟೆ ಬಿಟ್ಟರೆ ಇನ್ನೇನು ಇರಲಿಲ್ಲ. ನನ್ನನ್ನು ನೋಡಿದ ಕೂಡಲೇ ಏಳಲು ಪ್ರಯತ್ನಿಸಿದ
ಭೈರ “ಅಯ್ಯಾ (ಬಾಣಾರೇ) ನೀವೇಕೆ ಇಲ್ಲಿಗೆ ಬಂದಿರಿ? ನಾವು ಅಸ್ಪಶ್ಯರು” ಎಂದು ಹೇಳಿಲ್ಲ. ಅವನ ಅವಸ್ಥೆಯನ್ನು ನೋಡಿ ಕಣ್ಣು ತುಂಬಿ ಕೊಂಡ ನಾನು ಹೇಗಿದ್ದೀಯಪ್ಪಾ ಎಂದು ಕೇಳಲು ಯಾರಿಗೂ ಬೇಡವಾದವರು, ಯಾವ ಪ್ರಯೋಜನಕ್ಕೂ ಆಗದವರು ಹೆಚ್ಚು ದಿನ ಬದುಕಿರಬಾರದು ನನ್ನೊಡೆಯಾ” ನೆಂದ.

“ಹಾಗೆಲ್ಲಾ ಹೇಳಬೇಡ; ಸಾಯುವವರಿಗೆ ಬದುಕಲೇ ಬೇಕಲ್ಲ” ಎಂದು ನಾನು ಹೇಳಲು “ಸಾವು ಬರುವವರೆಗೆ ಕಾಯಲೇ ಬೇಕಾಗಿಲ್ಲ”ಎಂದು ಮಾರ್ಮಿಕವಾಗಿ ಉತ್ತರಿಸಿದ ಅವನ ಮಾತಿನ ಅರ್ಥವಾಗಲಿಲ್ಲ ನನಗೆ ಆಗ. ಭೈರನಿಗೆ ಒಂದು ಬೀಡಿ ಕಟ್ಟನ್ನು ಅವನ ಕೈಗೆ ಇತ್ತೆ. ಅತ್ಯಂತ ಸಂತೋಷದಿಂದ ಸ್ವೀಕರಿಸಿದ ಬೀಡಿ ಕಟ್ಟನ್ನು ತನ್ನ ಬಳಿ ಇಟ್ಟುಕೊಂಡು “ದ್ಯಾವ್ರು ನಿಮಗೆ ಒಳ್ಳೆಯದು ಮಾಡಲಿ” ಎಂದ.

ಇದಾದ ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಎಂದಿನಂತೆ ನಮ್ಮ ಅಮ್ಮ ಕೆಲಸ ದಾಳುಗಳಿಗೆಲ್ಲಾ ಊಟ ಬಡಿಸಿ, ಕೊನೆಯದಾಗಿ ತನ್ನ ಊಟವನ್ನು ಮಾಡಲು ಕುಳಿತಿದ್ದಳಷ್ಟೆ. ಅಷ್ಟರಲ್ಲಿ “ದೆತ್ತೀ ದೆತ್ತೀ (ಅಮ್ಮಾ) ಎಂಬ ಸಣ್ಣ ದನಿಯ
ಕೂಗೊಂದು ಮನೆಯ ಹಿಂಭಾಗದಿಂದ ಕೇಳಿಸಿತು. ಕದವನ್ನು ತೆಗೆದು ನೋಡಲಾಗಿ, ಕಾಲಿನಿಂದ ನಡೆಯಲಾಗದ ಭೈರ ಪುಟ್ಟ ಹಸುಳೆಯಂತೆ ತನ್ನ ಎರಡೂ ಕೈ ಕಾಲುಗಳನ್ನು ಅಂಬೆಗಾಲು ಮಾಡಿಕೊಂಡು ಇಕ್ಕುತ್ತಾ ಇಕ್ಕುತ್ತಾ ನಮ್ಮ ಮನೆ ಸೇರಿದ್ದ.

“ಹೋ ಭೈರನೇ ಏಕೆ ಬಂದೆ, ಹೇಗೆ ಬಂದೆ? ಪಾಪ ತುಂಬಾ ನೋಯುತ್ತಿರಬೇಕಲ್ಲಾ, ಇರು ಕುಡಿಯಲು ನೀರು ಕೊಡುತ್ತೇನೆ”
ಎಂದು ನಮ್ಮ ಅಮ್ಮ ಹೇಳಲು ಮಗುವಿನಂತೆ ಅಳಲು ಶುರು ಮಾಡಿದ. ಆ ಮುದಿ ಭೈರನಲ್ಲಿ ಸುರಿಸಲು ಕಣ್ಣೀರೇ ಇಲ್ಲವಾಗಿತ್ತು. ಅವನು ವೃದ್ಧಾಪ್ಯದಲ್ಲಿ ತನ್ನನ್ನು ನೋಡಿಕೊಳ್ಳದ ಮಡದಿ ಮಕ್ಕಳ ಬಗ್ಗೆಯಾಗಲೀ, ಇಷ್ಟು ವರುಷಗಳ ಕಾಲ ದುಡಿಸಿ ಕೊನೆಗಾಲ
ದಲ್ಲಿ ಕೈ ಬಿಟ್ಟ ನಮ್ಮ ಅಪ್ಪನ ಬಗ್ಗೆಯಾಗಲೀ ಒಂದು ಮಾತು ಹೇಳಲಿಲ್ಲ. ಆದರೂ ಹೇಳಿದ. “ನನ್ನಂಥವರು ಭೂಮಿಗೆ ಭಾರ, ಮನೆಯವರಿಗೆ ಹೊರೆ ದೆತ್ತೀ.

ಕೆಲಸ ಮಾಡಿದವರಿಗೆ ಮಾತ್ರ ಉಣ್ಣುವ ಹಕ್ಕಲ್ಲವೇ? ಕೆಲಸ ಮಾಸಲಾಗದ ನನ್ನಂಥವರು ಇದ್ದರೆಷ್ಟು, ಇರದಿದ್ದರೆಷ್ಟು?” ಹಾಗೆಲ್ಲಾ ಹೇಳಬೇಡಪ್ಪಾ ಎಂದು ನಮ್ಮ ಅಮ್ಮ ಸಂತೈಸಿದಳು. ಮಾತು ಮುಂದುವರಿಸಿದ ಭೈರ ಮತ್ತೇ ಹೇಳಿದ “ತಾಯಿ ಎಷ್ಟೋ
ವರುಷಗಳಿಂದ ನೀವು ನನಗೆ ಅನ್ನ ಕೊಟ್ಟು ಸಾಕಿದಿರಿ. ಇಂದು ನಿಮ್ಮ ಕೈಯಿಂದಲೇ, ಕೊನೆಯ ಬಾರಿಗೆ ಗಂಜಿ ಕುಡಿಯುವ ಆಸೆಯಾಯಿತು. ಅದಕ್ಕೇ ಬಂದೆ.” “ಹೋ ಹಾಗೋ ಇರಪ್ಪಾ” ಎಂದವಳೇ ನಮ್ಮ ಅಮ್ಮ ಬೇರೆ ಅನ್ನ ಉಳಿದಿಲ್ಲವಾಗಿದ್ದ ಕಾರಣ
ತಾನು ಊಟ ಮಾಡಲೆಂದು ಇಟ್ಟುಕೊಂಡಿದ್ದ ಅನ್ನವನ್ನು ಹುಳಿಯೊಂದಿಗೆ ಬೆರೆಸಿ ಭೈರನಿಗೆ ಇತ್ತಳು.

ಅದು ತನ್ನ ಕೊನೆಯ ಊಟವೋ ಎಂಬಂತೆ, ಅತ್ಯಂತ ಸಂತೋಷದಿಂದ ಊಟ ಮಾಡಿದ ಭೈರ” ನಾನಿನ್ನು ಹೊರಟೆ ತಾಯಿ” ಎಂದ. “ಬಿಡ್ತು ಅನ್ನು ಹೊರಟೆ ಅನ್ನದಿರು, ಹೋಗಿ ಬರುತ್ತೇನೆ ಎನ್ನಬೇಕಪ್ಪಾ” ಎಂದು ಹೇಳಿದ ಅಮ್ಮ ಬೇಸರದಿಂದ ಭೈರ
ಹೋಗುವುದನ್ನೇ ನೋಡುತ್ತಾ ನಿಂತಳು. ಮರುದಿನ ಬೆಳಗ್ಗೆ ನಾವೆಲ್ಲಾ ಬಯಲು ಶೌಚಕ್ಕೆಂದು ಗುಡ್ಡೆಗೆ ಹೋದಾಗ, ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಭೈರನ ಶವ ನೇತಾಡುತ್ತಿತ್ತು.

ಸ್ವಾಭಿಮಾನದಿಂದ ದುಡಿದು ಬದುಕುತ್ತಿದ್ದ ಈ ಅಂತ್ಯಜನಿಗೆ, ಹಂಗಿನ ಬದುಕು ಹೊರಲಾರದ ಭಾರವಾಗಿತ್ತು. ಕಾಡಿ ಬೇಡಿ ಬದುಕದ ಜೀವನ (ವಿನಾ ದೈನ್ಯೇನ ಜೀವನಂ) ಅವನ ಪಾಲಿಗೆ ಒದಗಲಿಲ್ಲ.