ಪರಿಶ್ರಮ ಮತ್ತು ಶ್ರದ್ಧೆಯಿಂದ ಒಬ್ಬ ವ್ಯಕ್ತಿ ಬೆಳೆಯಬಹುದು ಎಂಬುದಕ್ಕೆ ಸಿಯಾಲ್‌ಕೋಟ್‌ನಿಂದ ಬಂದ ಧರ್ಮಪಾಲ್ ಗುಲಾಟಿ ಒಂದು ನಿದರ್ಶನ. ಒಂದು ಕಾಲದಲ್ಲಿ ನಿರಾಶ್ರಿತರಾಗಿದ್ದ ಇವರು ನಂತರದ ದಿನಗಳಲ್ಲಿ ಬಹು ದೊಡ್ಡ ಉದ್ಯಮ ಕಟ್ಟಿದ ಪರಿಯೇ ಒಂದು ವಿಸ್ಮಯ.
ಶಶಾಂಕ್ ಮುದೂರಿ
ಕಳೆದ ಡಿಸೆಂಬರ್‌ನಲ್ಲಿ ಧರ್ಮಪಾಲ್ ಗುಲಾಟಿ ನಿಧನರಾದಾಗ ಅವರಿಗೆ 98 ವರ್ಷ. 2017ರಲ್ಲಿ ರು.21 ಕೋಟಿ ಸಂಬಳ ಪಡೆಯುವ ಮೂಲಕ, ನಮ್ಮ ದೇಶದ ಅತಿ ಹೆಚ್ಚು ಸಂಬಳ ಗಳಿಸಿದ ಸಿಇಒ ಎಂಬ ದಾಖಲೆ ಬರೆದ ಗುಲಾಟಿ, ಎಂಡಿಎಚ್ ಮಸಾಲೆಗಳಿಂದ
ಪ್ರಸಿದ್ಧರು.
‘ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನ ಗ್ರಾಹಕರಿಗೆ ನೀಡಬೇಕು ಮತ್ತು ಅವನ್ನು ಅತಿ ನ್ಯಾಯಯುತ ಬೆಲೆಗೆ ನೀಡಬೇಕೆಂಬುದೇ ನನ್ನ ತತ್ತ್ವ’ ಎನ್ನುವ ಗುಲಾಟಿ, ಈ ಸಿದ್ಧಾಂತವನ್ನು ಪಾಲಿಸುತ್ತಲೇ ತಮ್ಮ ವ್ಯವಹಾರವನ್ನು ಕಟ್ಟಿ ಬೆಳೆಸಿದರು. ಜತೆಗೆ, ತನ್ನ ವೈಯಕ್ತಿಕ ಸಂಬಳದ ಶೇ.90 ರಷ್ಟನ್ನು ಅವರು ಸೂಕ್ತವಾಗಿ ದಾನ ಮಾಡುತ್ತಿದ್ದರು!
ಅವರು ಬೆಳೆಸಿದ ಮಸಾಲೆ ವಸ್ತುಗಳ ವ್ಯವಹಾರ ಈ ಸ್ಥಿತಿಗೆ ಬರಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹಾಗೆ ನೋಡಿದರೆ ಅವರ ತಂದೆಯೂ ಸಣ್ಣ ಮಟ್ಟದಲ್ಲಿ ಇಂತಹದ್ದೇ ವ್ಯವಹಾರವನ್ನು ಮಾಡುತ್ತಿದ್ದರು. ಆದರೆ ಅದು ಸಿಯಾಲ್ ಕೋಟ್‌ನಲ್ಲಿ. 1947ರಲ್ಲಿ ನಮ್ಮ ದೇಶ ಎರಡು ಹೋಳಾದಾಗ, ಪಾಕಿಸ್ತಾಾನದಲ್ಲಿ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬರಬೇಕಾಯಿತು.
ಮೊದಲು ಅಮೃತಸರದಲ್ಲಿ ನಿರಾಶ್ರಿತರ ಶಿಬಿರದಲ್ಲಿ ಕಾಲ ಕಳೆದು, ನಂತರ ದೆಹಲಿಗೆ ಬಂದು ಹೊಸ ಜೀವನವನ್ನು ನೋಡಿ ಕೊಳ್ಳಬೇಕಾಯಿತು. ಅತಿ ಕಷ್ಟ ಎನಿಸುವ ಅಂತಹ ದಿನಗಳಲ್ಲಿ ಅವರು ಮೊದಲು ಮಾಡಿದ್ದೆೆಂದರೆ, ರು.650 ಪಾವತಿಸಿ ಒಂದು ಸೈಕಲ್ ಟಾಂಗಾ ಖರೀದಿಸಿ, ದೆಹಲಿಯ ರೈಲ್ವೆ ಸ್ಟೇಷನ್‌ನಲ್ಲಿ ಟಾಂಗಾ ಓಡಿಸಿದರು. ಆದರೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ತಮ್ಮ ತಂದೆ ನಡೆಸುತ್ತಿದ್ದ ಮಸಾಲೆ ಪದಾರ್ಥಗಳ ನೆನಪು ಮಾತ್ರ ಇವರನ್ನು ಬಿಡಲಿಲ್ಲ.
ಮಸಾಲೆ ವಾಸನೆ
ದೆಹಲಿಗೆ ಬಂದು ಒಂಬತ್ತು ವರ್ಷಗಳ ನಂತರ, ಕರೋಲ್ ಬಾಗ್‌ನಲ್ಲಿ ಮಸಾಲೆ ಪದಾರ್ಥಗಳ ಒಂದು ಪುಟ್ಟ ಅಂಗಡಿ ಆರಂಭಿಸಿ ದರು. ತಂದೆಯ ವ್ಯವಹಾರದಲ್ಲಿ ಸಹಾಯ ಮಾಡಿದ ಅನುಭವ ಹೇಗೂ ಇತ್ತಲ್ಲ, ಅದನ್ನೇ ಬಂಡವಾಳ ಮಾಡಿ ಕೊಂಡು ಉತ್ತಮ ಗುಣಮಟ್ಟಗಳ ಮಸಾಲೆ ಪದಾರ್ಥಗಳನ್ನು ದೆಹಲಿಯ ಜನರಿಗೆ ಮಾರಲು ಆರಂಭಿಸಿದರು. ಮಹಾಶಿಯನ್ ಡಿ ಮಟ್ಟಿ ಅಥವಾ ಎಂಡಿಎಚ್ ಎಂಬ ಹೆಸರಿನ ಇವರ ಮಸಾಲೆ ಪದಾರ್ಥಗಳು ಸ್ಥಳೀಯರಿಗೆ ಇಷ್ಟವಾಯಿತು.
ಕೆಲವೇ ದಿನಗಳಲ್ಲಿ ಚಾಂದನಿ ಚೌಕದಲ್ಲಿ ಇನ್ನೊಂದು ಅಂಗಡಿ ಆರಂಭಿಸಿ, ಮಸಾಲೆ ಪದಾರ್ಥಗಳ ಮಾರಾಟದ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದರು. ದೆಹಲಿಯಲ್ಲಿ ಮಸಾಲೆ ಪದಾರ್ಥಗಳನ್ನು ಈ ರೀತಿ ತಯಾರಿಸಿ ಮಾರಾಟ ಆರಂಭಿಸಿ ದವರಲ್ಲಿ ಇವರೇ ಮೊದಲಿಗರು. ಏಕೆಂದರೆ, ಅದುವರೆಗೆ ಹೆಚ್ಚಿನವರು ಮನೆಯಲ್ಲೇ ತಮ್ಮ ಅಡುಗೆಗೆ ಬೇಕಾದ ಮಸಾಲೆ ಪದಾರ್ಥ ಗಳನ್ನು ತಯಾರಿಸುವ ಪದ್ಧತಿ. ಎಂಡಿಎಚ್ ಮಸಾಲೆಗಳು ತಮ್ಮ ಗುಣಮಟ್ಟ ಮತ್ತು ಸುವಾಸನೆಯಿಂದಾಗಿ ಹೆಚ್ಚು ಹೆಚ್ಚು ಜನಪ್ರಿಯವಾದವು.
1959ರಲ್ಲಿ ಜಾಗ ಖರೀದಿಸಿ, ದೊಡ್ಡ ಪ್ರಮಾಣದಲ್ಲಿ ಮಸಾಲೆ ಪದಾರ್ಥಗಳನ್ನು ತಯಾರಿಸಿ, ಮಾರಾಟ ಮಾಡಲು ಆರಂಭಿಸಿದರು. 1965ರಲ್ಲಿ ಎಂಡಿಎಚ್ ಎಂಬ ಬ್ರಾಂಡ್‌ನಲ್ಲಿ ನೋಂದಣಿಗೊಂಡ ಇವರ ಸಂಸ್ಥೆ ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಕ್ರಮೇಣ ಎಂಡಿಎಚ್ ಮಸಾಲೆಗಳು ಭಾರತದಾದ್ಯಂತ ಪ್ರಚುರಗೊಂಡಿದ್ದಷ್ಟೇ ಅಲ್ಲ, ವಿದೇಶಗಳಲ್ಲೂ ಅದರ ಘಮಲು ಹರಡಿತು. 2018ರ ಸಮಯದಲ್ಲಿ ಈ ಸಂಸ್ಥೆಯು 18 ತಯಾರಿಕಾ ಘಟಕಗಳನ್ನು ಹೊಂದಿತ್ತು. ಜತೆಗೆ ಅದರ ಒಟ್ಟು ಆದಾಯ ರು.1095 ಕೋಟಿ. ಇದೇ ಸಮಯದಲ್ಲಿ ಧರ್ಮಪಾಲ್ ಗುಲಾಟಿಯವರ ವಾರ್ಷಿಕ ಸಂಬಳ 21 ಕೋಟಿ!
ಶಾಲೆಗಳ ಸರಪಣಿ
ವ್ಯವಹಾರದಲ್ಲಿ ಬಂದ ಲಾಭವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಬೇಕೆಂಬ ಗುಲಾಟಿಯವರ ಮಾತುಗಳು ಕೇವಲ ಘೋಷಣೆಗಳ ಮಟ್ಟದಲ್ಲಿ ನಿಂತುಹೋಗಲಿಲ್ಲ. ಅವರೇ ವೈಯಕ್ತಿಕವಾಗಿ ಸುಮಾರು 20 ಶಾಲೆಗಳನ್ನು ಆರಂಭಿಸಿದರು. ಇವುಗಳ ಪೈಕಿ ಎಂಡಿಎಚ್ ಇಂಟರ್ನ್ಯಾಷನಲ್ ಶಾಲೆ, ಮಾತಾ ಲೀಲಾವತಿ ಕನ್ಯಾ ವಿದ್ಯಾಲಯ ಶಾಲೆಗಳು ಹೆಸರುವಾಸಿ. ದೆಹಲಿಯ
ಜನಸಾಮಾನ್ಯರಿಗಾಗಿ 200 ಹಾಸಿಗೆಗಳ ಆಸ್ಪತ್ರೆಯನ್ನು ಕಟ್ಟಿ, ಬಹುಮಟ್ಟಿಗೆ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದರು.
ತಮ್ಮ ತಂದೆಯ ಹೆಸರಿನಲ್ಲಿ ಒಂದು ಟ್ರಸ್ಟ್ ಆರಂಭಿಸಿ, ಬಡವರಿಗೆ ಉಚಿತ ಚಿಕಿತ್ಸೆ ಮತ್ತು ಇತರ ಅಗತ್ಯ ದಾನಗಳನ್ನು ನೀಡು ವಲ್ಲಿ ಮುಂದಾದರು.
2019ರ ಕೋವಿಡ್ ಸಮಯದಲ್ಲೂ ಸಾಕಷ್ಟು ಸಹಾಯ ಮಾಡಿದ್ದರ ಜತೆಯಲ್ಲೇ, ತುರ್ತು ಅಗತ್ಯ ಇದ್ದ ಆರಂಭದ ದಿನಗಳಲ್ಲಿ 7500 ಪಿಪಿಇ ಕಿಟ್‌ಗಳನ್ನು ದೆಹಲಿಯ ಆರೋಗ್ಯ ಕಾರ್ಯಕರ್ತರಿಗೆ ಕೊಡುಗೆಯಾಗಿ ನೀಡಿದರು. ಇವರ ಕೊಡುಗೆಯನ್ನು ಗುರುತಿಸಿ, 2019ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ 98ನೆಯ ವಯಸ್ಸಿನಲ್ಲಿ ನವೆಂಬರ್ 2019ರಲ್ಲಿ ಸ್ವರ್ಗಸ್ಥರಾದಾಗ, ಪರೋಪಕಾರಿಯೊಬ್ಬರನ್ನು ಭಾರತ ಕಳೆದುಕೊಂಡಿತು. ಜತೆಗೆ, ಏನೂ ಇಲ್ಲದಂತಹ ನಿರಾಶ್ರಿತರ ಸ್ಥಿತಿಯಿಂದ, ಬಹು ದೊಡ್ಡ ಉದ್ಯಮವನ್ನು ಕಟ್ಟಿ ಬೆಳೆಸಿದ ಗುಲಾಟಿಯವರ ಶ್ರಮ ಮತ್ತು ಶ್ರದ್ಧೆೆ ನಮ್ಮ ದೇಶದ ಯುವಜನರಿಗೆ ಒಂದು ಮಾದರಿ ಎನಿಸಿದೆ.
ಸಂಚಾರಿ ಆಸ್ಪತ್ರೆ
ಮಹಾನಗರಗಳು ಎಂದರೆ ಕೊಳೆಗೇರಿಗಳು ಇದ್ದೇ ಇರುತ್ತವೆ. ಸ್ವತಃ ನಿರಾಶ್ರಿತರಾಗಿ ಕಾಲ ಕಳೆದಿದ್ದ ಗುಲಾಟಿ ಅವರಿಗೆ ಅಂತಹ
ಜನರ ಕಷ್ಟ ಗೊತ್ತಿತ್ತು. ಅದಕ್ಕೆಂದೇ ದೆಹಲಿಯಲ್ಲಿ ಅವರು ಒಂದು ಸಂಚಾರಿ ಆಸ್ಪತ್ರೆ ಆರಂಭಿಸಿ, ಸ್ಲಂ ನಿವಾಸಿಗಳಿಗೆ ಉಚಿತ ಚಿಕಿತ್ಸೆ ನೀಡುವ ಅಭಿಯಾನ ಆರಂಭಿಸಿದರು. ಇವರ ಈ ಕಾರ್ಯವು ಬಹಳಷ್ಟು ಪ್ರಚಾರ ಪಡೆದದ್ದು ಮಾತ್ರವಲ್ಲ, ಇವರ ಸೇವಾ ಭಾವನೆಯನ್ನು ಎಲ್ಲರಿಗೆ ಪರಿಚಯಿಸಿತು.