ಅಜಯ್ ಅಂಚೆಪಾಳ್ಯ
ಕ್ರೊವೇಶಿಯಾ ದೇಶದ ಜಗ್ರೆಬ್ ಪಟ್ಟಣದಲ್ಲೊಂದು ವಿಶಿಷ್ಟ ವಸ್ತು ಸಂಗ್ರಹಾಲಯವಿದೆ. ಉತ್ಕಟವಾಗಿ ಪ್ರೀತಿಸಿ, ನಂತರ ಅನಿವಾರ್ಯವಾಗಿ ದೂರಾದವರಿಗೆ ಮೀಸಲಾಗಿರುವ ಈ ಮ್ಯೂಸಿಯಂನಲ್ಲಿ, ಮಾಜಿ ಪ್ರೇಮಿಗಳು ನೀಡಿದ ಉಡುಗೊರೆಗಳು,
ನೆನಪಿನ ಕಾಣಿಕೆಗಳು ತುಂಬಿ ಹೋಗಿವೆ.
2011ರಲ್ಲಿ ಆರಂಭವಾದ ಈ ಮ್ಯೂಸಿಯಂ ಅದೆಷ್ಟು ಜನಪ್ರಿಯವೆಂದರೆ, 2017ರಲ್ಲಿ ಸುಮಾರು 1,00,000 ಜನ ಇಲ್ಲಿಗೆ ಭೇಟಿ ನೀಡಿದ್ದರು! ಜಗ್ರೆಬ್ ಪಟ್ಟಣದಲ್ಲಿದ್ದ ಒಲಿಂಕಾ ವಿಸ್ಟಿಕಾ ಮತ್ತು ದ್ರೇಜೆನ್ ಗ್ರುಬಿಸಿಕ್ ಎಂಬುವವರು ಈ ವಿಶಿಷ್ಟ ಮ್ಯೂಸಿಯಂನ ರೂವಾರಿಗಳು. ಅವರಿಬ್ಬರೂ ಕಲಾವಿದರು. ನಾಲ್ಕು ವರ್ಷ ಉತ್ಕಟವಾಗಿ ಪ್ರೀತಿಸಿದರು. ಆದರೆ 2003ರಲ್ಲಿ ಆ ಪ್ರೀತಿ ಮುರಿದು ಬಿತ್ತು. ಆಗ ತಮಾಷೆಗಾಗಿ ‘ನಮ್ಮ ಪ್ರೀತಿಯ ನೆನಪಿಗೆ ಒಂದು ಮ್ಯೂಸಿಯಂ ಆರಂಭಿಸಬಹುದಲ್ಲವೆ!’ ಎಂದು ಮಾತನಾಡಿ ಕೊಳ್ಳುತ್ತಾ ದೂರವಾಗಿದ್ದರು.
ಮೂರು ವರ್ಷಗಳ ನಂತರ, ಇದೇ ಒಂದು ಕನಸನ್ನು ಇಬ್ಬರೂ ಸೇರಿ ನನಸು ಮಾಡಿದರು. ತಮ್ಮಲ್ಲಿದ್ದ ಪ್ರೀತಿಯ ಕಾಣಿಕೆಗಳನ್ನು ಸಂಗ್ರಹಿಸುತ್ತಿದ್ದಾಗ ಅವರು ಗೆಳೆಯ ಗೆಳತಿಯರು ಸಹ ಇದೊಂದು ಒಳ್ಳೆಯ ಐಡಿಯಾ ಎಂದರು. ಮಾತ್ರವಲ್ಲ, ತಮ್ಮಲ್ಲಿದ್ದ ಅಂತಹ ಬೆಲೆಬಾಳುವ ಉಡುಗೊರೆಗಳನ್ನು ನೀಡಿದರು. ಏಕೆಂದರೆ, ಅವರೆಲ್ಲರೂ ಒಂದಲ್ಲ ಒಂದು ಬಾರಿ ಪ್ರೀತಿಗೆ ಒಳಗಾಗಿ, ನಂತರ ದೂರಾಗಿದ್ದರು! ಪ್ರೀತಿಸುತ್ತಿದ್ದಾಗ ದೊರೆತ ಕಾಣಿಕೆಗಳನ್ನು ಅತ್ತ ಎಸೆಯಲೂ ಆಗದೆ, ಇತ್ತ ಮನೆಯಲ್ಲಿ ಪ್ರದರ್ಶಿಸಲೂ ಆಗದೆ ಉಭಯಸಂಕಟ ಅನುಭವಿಸುತ್ತಿದ್ದ ಅವರಿಗೆಲ್ಲಾ, ಈ ಮ್ಯೂಸಿಯಂ ಒಂದು ಒಳ್ಳೆಯ ಹೊರದಾರಿ ಎನಿಸಿತು!
ತಮಗೆ ಮಾಜಿ ಪ್ರೇಮಿಗಳು ನೀಡಿದ್ದ ಉಡುಗೊರೆಗಳನ್ನೆಲ್ಲಾ ದಾನವಾಗಿ ನೀಡಿದರು. ಆ ಸಂಗ್ರಹವನ್ನು 2006ರಲ್ಲಿ ಸಾರ್ವಜನಿ
ಕರಿಗೆ ಪ್ರದರ್ಶಿಸಿದಾಗ ಬಂದ ಪ್ರತಿಕ್ರಿಯೆ ಅಭೂತ ಪೂರ್ವ! ಆದ್ದರಿಂದ, ಅಂತಹದೊಂದು ಮ್ಯೂಸಿಯಂನ್ನು ಖಾಯಂ ಆಗಿ ಸ್ಥಾಪಿಸಲು ನಿರ್ಧರಿಸಿ, ಅದರಲ್ಲಿ ಯಶಸ್ವಿಯೂ ಆದರು. ಇಂದು ಈ ಭಗ್ನಪ್ರೇಮಿಗಳ ಮ್ಯೂಸಿಯಂನಲ್ಲಿ ಸಾವಿರಾರು ಸ್ಮರಣಿಕೆ ಗಳಿವೆ. ಕ್ರೊವೇಶಿಯಾದ ಈ ಮ್ಯೂಸಿಯಂ ಕಂಡು ಸ್ಫೂರ್ತಿಗೊಂಡು, ಅಮೆರಿಕದ ಲಾಸ್‌ಏಂಜೆಲ್ಸ್‌ನಲ್ಲೂ ಇಂತಹದ್ದೇ ಮ್ಯೂಸಿಯಂ ಆರಂಭವಾಗಿದೆ. ಇದಕ್ಕೆ ಕೊಡುಗೆ ನೀಡಿದವರು ಯಾರು ಗೊತ್ತಾಯಿತಲ್ಲ? ದಾನ ನೀಡಿದವರೆಲ್ಲರೂ ಭಗ್ನ ಪ್ರೇಮಿಗಳು!