Friday, 13th December 2024

ದೊರೆಸ್ವಾಮಿ ಹೆಸರಿನಲ್ಲಿ ಅಧ್ಯಯನ ಪೀಠ ಬೇಡ

ಅಭಿವ್ಯಕ್ತಿ

ಮಂಜುನಾಥ ಅಜ್ಜಂಪುರ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಚ್.ಎಸ್.ದೊರೆಸ್ವಾಮಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಯ ಬಗೆಗಿನ ಪತ್ರಿಕಾ ಸುದ್ದಿಯು ಆತಂಕಕಾರಿಯಾಗಿದೆ. ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂಥ ಯೋಗ್ಯತೆ, ಅರ್ಹತೆ ಎಚ್.ಎಸ್.ದೊರೆಸ್ವಾಮಿ ಅವರಿಗಿಲ್ಲ.

ದೊರೆಸ್ವಾಮಿಯವರು ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳುವುದುಂಟು. ಅವರನ್ನು ಗಾಂಧಿವಾದಿ ಎಂದು ಸಹ ಉಖಿಸುವುದಿದೆ. ಆದರೆ, ಅವರೇ ಹೇಳಿಕೊಂಡಿರುವ ಹಾಗೆ ಬಾಂಬ್ ತಯಾರಿಕೆಯಲ್ಲಿ ಮತ್ತು ಸರಕಾರಿ (ಅಂಚೆ ಕಚೇರಿ) ದಾಖಲೆಗಳನ್ನು ನಾಶ ಮಾಡುವ ಉದ್ದೇಶದಿಂದ ಬಾಂಬ್ ಸ್ಫೋಟಿಸುವುದರಲ್ಲಿ ನಿರತರಾಗಿದ್ದರಂತೆ. ಹೀಗಿರುವಾಗ ಅಹಿಂಸೆಯ ಪ್ರತಿಪಾದಕರಾದ ಗಾಂಧೀಜಿಯವರ ಹೆಸರನ್ನು ಇವರೊಂದಿಗೆ ಜೋಡಿಸುವುದೂ ತಪ್ಪಾಗುತ್ತದೆ.

ಗಾಂಧೀಜಿಯವರು ಗೋಹತ್ಯಾ ನಿಷೇಧದ ಪ್ರತಿಪಾದಕರಾಗಿದ್ದರು. ಗೋಹತ್ಯಾ ನಿಷೇಧವು ಗಾಂಧೀಜಿಯವರು ಪ್ರತಿಪಾದಿಸಿದ ಅನೇಕ ಪ್ರಮುಖ ತತ್ತ್ವಗಳಂದು. ಆದರೆ, ಈ ದೊರೆಸ್ವಾಮಿಯವರು ಬೆಂಗಳೂರಿನಲ್ಲಿ (ಟೌನ್ ಹಾಲ್ ಬಳಿ) ಗೋಮಾಂಸ ಭಕ್ಷಕರೊಂದಿಗೆ ಕೈಜೋಡಿಸಿದ್ದರು. ಗೋಮಾಂಸ ಭಕ್ಷಣೆಯನ್ನು ಪ್ರತಿಪಾದಿಸುವುದು ಗಾಂಧೀವಾದದ ವಿರುದ್ಧವಾಗಿದೆ. ಅವರನ್ನು ಗಾಂಧೀವಾದಿ ಎನ್ನುವುದು ಸಹ ಗಾಂಧೀಜಿಯವರಿಗೆ ಅವಮಾನ ಮಾಡಿದಂತೆ ಆಗುತ್ತದೆ.

೧೯೮೦ರ ದಶಕದಲ್ಲಿ ನನ್ನ ಕಮ್ಯುನಿಸ್ಟ್ ಗೆಳೆಯರ ಮಾತು ಕೇಳಿ, ದೊರೆಸ್ವಾಮಿಯವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಭಾವಿಸಿ, ಒಂದು ಸಂಸ್ಥೆಯ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನವನ್ನು ಆಯೋಜಿಸಿದ್ದೆ. ಸನ್ಮಾನಕ್ಕೆ ಕರೆದೊಯ್ಯುವಾಗ ಅವರೊಂದಿಗೆ ಮಾತನಾಡಿದಾಗ ಅವರಿಗೆ ಸ್ವಾತಂತ್ರ್ಯ ಹೋರಾಟದ ಸರಿಯಾದ ಪರಿಚಯವೂ ಇಲ್ಲ ಎಂಬುದು ವೇದ್ಯ ವಾಯಿತು.

೧೯೪೨ರ ಕ್ವಿಟ್ ಇಂಡಿಯಾ ಚಳವಳಿ ಮತ್ತು ವಿದುರಾಶ್ವತ್ಥ ಪ್ರಕರಣದ ಬಗೆಗೆ ಏನೂ ಗೊತ್ತಿಲ್ಲವೆಂಬುದೂ ತಿಳಿಯಿತು. ನಮ್ಮ ಸಂಸ್ಥೆಯ ರಾಜ್ಯೋತ್ಸವ ಸನ್ಮಾನ ಮತ್ತು ನಿಽ ಅರ್ಪಣೆಗೆ ಉತ್ತರವಾಗಿ ಮಾತನಾಡಿದ ದೊರೆಸ್ವಾಮಿಯವರ ಭಾಷಣದಲ್ಲಿ, ಅವರು ಸ್ವಾತಂತ್ರ್ಯ ಹೋರಾಟಗಾರ ಎಂಬುದಕ್ಕೆ ಯಾವ ಕುರುಹೂ ಇರಲಿಲ್ಲ. ಸರಿಯಾಗಿ ತಿಳಿಯದೆ ರಾಜ್ಯೋತ್ಸವ ಸನ್ಮಾನ ಮತ್ತು ನಿಧಿ ಅರ್ಪಣೆಗೆ ಅವರನ್ನು ಆಯ್ಕೆ ಮಾಡಿದುದಕ್ಕಾಗಿ ನಮ್ಮ ಸಂಸ್ಥೆಯ ಮೇಲಽಕಾರಿಗಳು ನನ್ನನ್ನು ಆಕ್ಷೇಪಿಸಿದರು.

ಎರಡು ದಶಕಗಳ ಹಿಂದೆ ಅವರು ನೆನಪಿನ ಸುರುಳಿ ತೆರೆದಾಗ ಎಂಬ ಕಳಪೆ ದರ್ಜೆಯ ಒಂದು ಪುಸ್ತಕ ಬರೆದು ಅದರಲ್ಲಿ ಸತ್ಯದೂರವಾದ ಸಂಗತಿಗಳನ್ನು ಬರೆದಿದ್ದರು. ಜನವರಿ ೧೯೪೮ರಲ್ಲಿ ಆರೆಸ್ಸೆಸ್ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ನಾಥುರಾಮ್ ಗೋಡ್ಸೆ ಬಂದಿದ್ದ, ಕಾರಸ್ಥಾನದಲ್ಲಿ ಭಾಗವಹಿಸಿದ್ದ, ಇತ್ಯಾದಿ ಬರೆದಿದ್ದರು. ಈ ಕುರಿತಂತೆ, ಆರೆಸ್ಸೆಸ್ ಸಂಸ್ಥೆಯ ಹಿರಿಯರು (ಮೈ.ಚ.ಜಯದೇವ-ಜೀ ಅವರು) ದೊರೆಸ್ವಾಮಿಯವರನ್ನು ಭೇಟಿ ಮಾಡಿ, ಸತ್ಯದೂರವಾದ ಈ ಮಾತುಗಳಿಗೆ ದಾಖಲೆ ಒದಗಿಸಿ – ರುಜುವಾತು ಪಡಿಸಿ, ಇಲ್ಲವೇ ಪುಸ್ತಕವನ್ನು ಹಿಂದಕ್ಕೆ ತೆಗೆದುಕೊಳ್ಳಿ, ಸ್ಪಷ್ಟೀಕರಣ ನೀಡಿ, ಎಂದು ಆಗ್ರಹಿಸಿದರು.

ದೊರೆಸ್ವಾಮಿಯವರು ನಂಬುವಂಥ ಯಾವ ದಾಖಲೆ ಯನ್ನೂ ನೀಡಲಿಲ್ಲ, ಒಪ್ಪುವಂಥ ಯಾವ ಸಾಕ್ಷ್ಯಾಧಾರವನ್ನೂ ಒದಗಿಸ ಲಿಲ್ಲ. ದೊರೆಸ್ವಾಮಿ ಯವರು ಸರಿಯಾದ ಸ್ಪಷ್ಟೀಕರಣವನ್ನೂ ನೀಡಲಿಲ್ಲ. ಫೆಬ್ರವರಿ ೨೦೨೦ರಲ್ಲಿ ಅಮೂಲ್ಯ ಲಿಯೋನಾ ಎಂಬ ಹೆಣ್ಣುಮಗಳು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಳು. ಗಾಂಽವಾದಿ ಎಂದು ಹೇಳಿಕೊಳ್ಳುವ ಮತ್ತು ಸ್ವಾತಂತ್ಯ ಹೋರಾಟಗಾರರೆಂದು ಪ್ರತಿಪಾದಿಸಿಕೊಳ್ಳುವ ದೊರೆಸ್ವಾಮಿಯವರು ಈ ಹೆಣ್ಣುಮಗಳನ್ನು ಖಂಡಿಸುವ ಬದಲು, ಬೆಂಬಲಿಸಿ ಹೇಳಿಕೆ ನೀಡಿ, ಜತೆಯಲ್ಲಿ ಫೋಟೋ ಸಹ ತೆಗೆಸಿಕೊಂಡರು.

ಸ್ವಾತಂತ್ಯ ಹೋರಾಟಗಾರ ಎಂಬ ಪರಿಕಲ್ಪನೆಗೇ ದೊರೆಸ್ವಾಮಿಯವರು ಒಂದು ಅಪವಾದ. ಕರ್ನಾಟಕ ಸರಕಾರಕ್ಕೆ ಮತ್ತು ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ವಿನಂತಿ ಏನೆಂದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯಾವ ಕಾರಣಕ್ಕೂ ಎಚ್.ಎಸ್. ದೊರೆಸ್ವಾಮಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಬೇಡ. ಅಷ್ಟೇಕೆ ಯಾವ ವಿಶ್ವವಿದ್ಯಾಲಯದಲ್ಲಿಯೂ ಬೇಡ. ಅದು ಸ್ವಾತಂತ್ರ್ಯ ಹೋರಾಟಕ್ಕೆ, ಗಾಂಧೀವಾದಕ್ಕೆ ಮಾಡುವ ಅವಮಾನವಾಗುತ್ತದೆ.