Friday, 13th December 2024

ಆ ಎರಡು ಅಮರ ಪಾರಿವಾಳಗಳು

ಮಣ್ಣೆ ಮೋಹನ್

ಅಮರನಾಥ ಗುಹೆಯಲ್ಲಿ ಹಿಮದ ಲಿಂಗದಷ್ಟೇ ಪ್ರಸಿದ್ಧಿಯನ್ನು ಪಡೆದಿವೆ. ಆ ಎರಡು ಪಾರಿವಾಳಗಳು. ಪ್ರತಿ ಹುಣ್ಣಿಮೆ ಯ ರಾತ್ರಿ ಆ ಎರಡು ಪಾರಿವಾಳಗಳು ಗುಹೆಗೆ ಭೇಟಿನೀಡುತ್ತವೆಂದು ಪ್ರತೀತಿ. ಚಳಿಗಾಲದಲ್ಲಿ ಗುಹೆಯ ಪ್ರದೇಶವು ಹಿಮ ದಿಂದ ತುಂಬಿ ಹೋದಾಗಲೂ ಆ ಪಾರಿವಾಳಗಳು ಅಲ್ಲೇ ಇರುತ್ತವೆ ಎಂಬ ನಂಬಿಕೆ. ಅಮರತ್ವ ಪಡೆದಿವೆ ಎಂದು ಭಕ್ತರು ನಂಬುವ ಆ ಎರಡು ಪಾರಿವಾಳಗಳ ರಹಸ್ಯವೇನು?

ಪಾರ್ವತಿಗೆ ಅಮರತ್ವದ ರಹಸ್ಯವನ್ನು ಶಿವನು ಅಮರನಾಥದ ಗುಹೆಯಲ್ಲಿ ಬೋಧಿಸಿದ ನೆಂಬ ಪ್ರತೀತಿ ಇದೆ. ಆದ್ದರಿಂದಲೇ ಆ
ಕ್ಷೇತ್ರದ ಮೌಲ್ಯ ಇನ್ನಷ್ಟು ಹೆಚ್ಚಳಗೊಂಡಿದೆ. ಈ ಸಂದರ್ಭದಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆದು, ಪಾರಿವಾಳಗಳೆರಡು
ಅಮರತ್ವ ಪಡೆದ ವಿಚಾರ ಬಹುಕುತೂಹಲಕಾರಿ. ಶಿವನು ಪಾರ್ವತಿ ಯೊಡನೆ ಅಮರನಾಥ ಗುಹೆಗೆ ಬಂದು, ಹೊರಬಾಗಿಲಿನಲ್ಲಿ ನಂದಿ, ಗಣಪ ಮತ್ತು ಇತರ ಗಣಗಳನ್ನು ಕಾವಲಿಗೆ ಬಿಡುತ್ತಾನೆ.

ಅಮರತ್ವದ ರಹಸ್ಯವನ್ನು ಕಾಪಾಡಲು ಶಿವನು ಈ ರೀತಿಯ ವ್ಯವಸ್ಥೆಯನ್ನು ಏರ್ಪಾಡು ಮಾಡುತ್ತಾನೆ. ಶಿವ-ಪಾರ್ವತಿಯರು ಗುಹೆಯಲ್ಲಿ ಆಸೀನರಾಗುತ್ತಾರೆ. ‘ನಾನು ಧ್ಯಾನಸ್ಥನಾಗಿದ್ದು, ಅಮರತ್ವದ ರಹಸ್ಯವನ್ನು ಹೇಳುತ್ತಾ ಹೋಗುತ್ತೇನೆ, ನೀನು ‘ಹೂಂ’ ಎನ್ನುತ್ತಾ ತಲ್ಲೀನತೆಯಿಂದ ಕೇಳುತ್ತಾ ಹೋಗು’ ಎಂದು ಪಾರ್ವತಿಗೆ ತಿಳಿಸಿದ ಶಿವ, ಧ್ಯಾನದಲ್ಲಿ ಲೀನವಾಗುತ್ತಾನೆ.

ಅಮರತ್ವದ ರಹಸ್ಯ ಹೊರಬರತೊಡಗುತ್ತದೆ. ಶಿವೆಯ ಬಾಯಿಂದ ನಿರಂತರವಾಗಿ ’ಹೂಂ’ ಪದ ಕೇಳಿಬರುತ್ತಿರುತ್ತದೆ. ಅಮರ ಕಥೆಯನ್ನು ಕೇಳುತ್ತಾ, ಕೇಳುತ್ತಾ, ಕೇಳುತ್ತಾ, ಹೂಂ ಎನ್ನುತ್ತಾ, ಎನ್ನುತ್ತಾ, ಅಖಂಡ ಚೇತನದ ಆ ನೀರವ ಗುಹೆಯಲ್ಲಿ ಪಾರ್ವತಿ ನಿದ್ರೆಗೆ ಜಾರುತ್ತಾಳೆ. ‘ಹೂಂ’ ಪದ ಸ್ತಬ್ಧವಾಗುತ್ತದೆ. ಕೂಡಲೇ ಶಿವ-ಶಕ್ತಿಯರ ಸಾನಿಧ್ಯದಿಂದ ಚೈತನ್ಯ ಪಡೆದು, ಆ ಗುಹೆಯಲ್ಲಿ ಆಕಸ್ಮಿಕವಾಗಿ ಉಳಿದುಕೊಂಡಿದ್ದ ಎರಡು ಪಾರಿವಾಳದ ಮೊಟ್ಟೆಗಳು ಜೀವಹೊಂದಿ, ಮರಿಗಳಾಗಿ ಹೊರಬಂದು ‘ಹೂಂ’ ಎಂಬ ಪದವನ್ನು ಮುಂದುವರೆಸತೊಡಗುತ್ತವೆ.

ಬ್ರಹ್ಮಾಂಡದ ಜಂಜಡವನ್ನೆಲ್ಲಾ ತೊರೆದು, ಧ್ಯಾನದಲ್ಲಿ ಲೀನವಾಗಿದ್ದ ಶಿವನು ಇದ್ಯಾವುದರ ಪರಿವೆಯೇ ಇಲ್ಲದೆ, ಅಮರತ್ವದ ಅಮರವಾಣಿಯನ್ನು ಪಠಿಸುವುದರಲ್ಲಿ ನಿರತನಾಗಿರುತ್ತಾನೆ. ಬಹಳ ಸಮಯವಾದರೂ ತನ್ನ ಮಾತಾಪಿತೃಗಳು ಗುಹೆಯಿಂದ ಹೊರಬರಲಿಲ್ಲವಲ್ಲ ಎಂಬ ಆತಂಕದಿಂದ, ಮಹಾಗುಣಸ್ ಪರ್ವತದಲ್ಲಿ ಕಾವಲು ನಿಂತಿದ್ದ ಗಣಪ ಗುಹೆಯ ಬಳಿ ಬರುತ್ತಾನೆ. ಆತ ಕಂಡ ಗುಹೆಯೊಳಗಿನ ದೃಶ್ಯ ಅವನನ್ನು ಸ್ತಂಭೀಭೂತಗೊಳಿಸುತ್ತದೆ. ಶಿವ ಧ್ಯಾನದಲ್ಲಿದ್ದರೆ, ಪಾರ್ವತಿ ನಿದ್ರೆಯಲ್ಲಿದ್ದಾಳೆ. ಪಾರಿವಾಳದ ಮರಿಗಳೆರಡು ಅಮರರಹಸ್ಯವನ್ನು ಆಲಿಸುತ್ತಿವೆ.

ಮುಂದೇನಾಗುವುದೋಬ ಎಂಬ ಕುತೂಹಲದಿಂದ ಗಣಪ ಗುಹೆಯ ಹೊರಭಾಗದ ಮರೆಯೊಂದರಲ್ಲಿ ನಿಲ್ಲುತ್ತಾನೆ. ಬಹಳ ಸಮಯದ ನಂತರ ಅಮರ ಕಥೆಯನ್ನು ಮುಗಿಸುತ್ತಾ ಅಮರನಾಥ ಕಣ್ಣು ತೆರೆಯುತ್ತಾನೆ. ಅದೇ ವೇಳೆಗೆ ನಿದ್ರೆಗೆ ಜಾರಿದ್ದ ಪಾರ್ವತಿದೇವಿಯೂ ನಿದ್ರಾವಸ್ಥೆಯಿಂದ ಜಾಗೃತಾವಸ್ಥೆಗೆ ಹೊರಹೊಮ್ಮುತ್ತಾಳೆ.

‘ದೇವಿ, ಅಮರತ್ವದ ಕಥೆ ಕೇಳಿದೆ, ನೀನಿನ್ನು ನನ್ನಂತೆ ಅಮರತ್ವ ಪಡೆದಿರುವೆ’ ಎಂದು ಶಂಕರ ಖುಷಿಯಿಂದ ಹೇಳುತ್ತಾನೆ. ತಕ್ಷಣ ಪಾರ್ವತಿ ವಿಷಾದದ ದನಿಯಲ್ಲಿ ‘ಕ್ಷಮಿಸಿ ಸ್ವಾಮಿ, ಅದೇಕೋ ತಿಳಿಯದು, ನೀವು ಕಥೆ ಆರಂಭಿಸಿದ ಸ್ವಲ್ಪ ಸಮಯದಲ್ಲೇ ನಾನು ನಿದ್ರಾವಸ್ಥೆಗೆ ಜಾರಿಬಿಟ್ಟೆ. ನಾನು ಅಮರಳಲ್ಲ.’ ಪಾರ್ವತಿಯ ವಿಷಾದದ ಮಾತುಗಳನ್ನು ಕೇಳುತ್ತಲೇ ಜಾಗೃತನಾದ ಶಿವ, ‘ಹಾಗಾದರೆ ಕೊನೆಯವರೆಗೂ ‘ಹೂಂ’ಗುಟ್ಟುತ್ತಾ ಕಥೆ ಕೇಳಿದವರು ಯಾರು?’ ಎಂದು ನೋಡಲು, ಪಾರಿವಾಳದ ಮರಿಗಳೆರಡು ಅವರ ದೃಷ್ಟಿಗೆ ಗೋಚರಿಸುತ್ತವೆ.

ಕೆರಳಿದ ಪರಮೇಶ್ವರ ಬೆದರಿದ ಪಾರಿವಾಳ ಕ್ರೋಧಗೊಂಡ ಶಿವ, ಕೂಡಲೇ ಆ ಪಾರಿವಾಳಗಳೆಡೆಗೆ ತನ್ನ ತ್ರಿಶೂಲವನ್ನು ತೂರು ತ್ತಾನೆ. ಶಿವನ ಕ್ರೋಧಾಗ್ನಿಗೆ ಬೆದರಿದ ಪಾರಿವಾಳಗಳೆರಡು ಭಯದಿಂದ ಹಾರುತ್ತಾ, ಹಾರುತ್ತಾ, ದಾರಿಯಲ್ಲಿ ಕಂಡ ಗುಹೆ ಯೊಂದರ ಒಳಹೊಕ್ಕು, ಏನೂ ಮಾಡಲು ತೋಚದೆ, ಅದೇ ಸಮಯಕ್ಕೆ ಅಲ್ಲಿ ಆಕಳಿಸಲೆಂದು ಬಾಯಿತೆರೆದು ಕುಳಿತಿದ್ದ ಮಾತೆಯೊಬ್ಬಳ ಬಾಯಿಂದ ಒಳಹೊಕ್ಕು ಅವಳ ಉದರವನ್ನು ಸೇರಿಬಿಡುತ್ತವೆ.

ಅದು ವ್ಯಾಸಮುನಿಗಳ ಗುಹೆ. ಆ ಮಾತೆ ವ್ಯಾಸಮುನಿಗಳ ಮಡದಿಯಾಗಿರುತ್ತಾರೆ. ಅಲ್ಲಿಗೆ ಬಂದ ವ್ಯಾಸ ಮಹರ್ಷಿಗಳು, ಕ್ಷಣಾರ್ಧ ದಲ್ಲಿ ನಡೆದುದೆಲ್ಲವನ್ನೂ ದಿವ್ಯದೃಷ್ಟಿಯಿಂದ ಗ್ರಹಿಸಿ, ಶಿವನನ್ನು ಧ್ಯಾನಿಸಿ, ಸ್ತುತಿಸಿ, ‘ಏನೂ ಅರಿಯದ ಈ ಮುಗ್ಧ ಪಾರಿವಾಳಗಳ ಮೇಲೆ ಈ ಪರಿಯ ಕೋಪ ಬೇಡವೆಂದು’ ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ವ್ಯಾಸಮುನಿಗಳ ಕೋರಿಕೆಗೆ ಮಣಿದ ಸಾಂಬಶಿವ ಅಲ್ಲೆ ಪ್ರತ್ಯಕ್ಷನಾಗಿ, ತನ್ನ ಕೋಪವನ್ನು ತೊರೆದು ಪ್ರಸನ್ನನಾಗಿ, ತನ್ನ ತ್ರಿಶೂಲವನ್ನು ಹಿಂಪಡೆಯುತ್ತಾನೆ.

ಪಾರ್ವತಿಗೆ ದಕ್ಕದ್ದು ಪಾರಿವಾಳಕ್ಕೆ ದಕ್ಕಿದ್ದು ‘ನಾನೇನು ಮಾಡೆನು, ಉದರದಿಂದ ಹೊರಬನ್ನಿ’ ಎಂದು ಪಾರಿವಾಳಗಳನ್ನು ಪರಮೇಶ್ವರ ಹೊರ ಆಹ್ವಾನಿಸುತ್ತಾನೆ. ಶಿವನ ಮೃದುಮಾತುಗಳಿಂದ ಭಯಮುಕ್ತಗೊಂಡ ಪಾರಿವಾಳಗಳೆರಡು ವ್ಯಾಸ ಮಡ ದಿಯ ಉದರದಿಂದ ಹೊರಬರುತ್ತವೆ. ಆ ಮರಿಗಳೆರಡು, ದೈನ್ಯತೆಯಿಂದ ಶಂಕರನೆದುರು ನಿಂತು ಅವನನ್ನು ಸ್ತುತಿಸುತ್ತಾ, ಶಿವನಾವುವನ್ನು ಜಪಿಸತೊಡಗುತ್ತವೆ. ಪ್ರಸನ್ನಗೊಂಡ ಶಿವ ‘ಇಂದಿನಿಂದ ನೀವು ನನ್ನ ಈ ಅಮರನಾಥ ಗುಹೆಯಲ್ಲಿಯೇ ಇದ್ದು,
ಸದಾ ನನ್ನ ನಾಮ ಜಪಿಸುತ್ತಾ, ನನ್ನನ್ನು ಕಾಣಲು ಬರುವ ಭಕ್ತರ ಕೋರಿಕೆಗಳನ್ನು ತಿಳಿದು, ಅವುಗಳನ್ನು ನನಗೆ ತಲುಪಿಸಿ, ಅವು ನೆರವೇರುವಂತಾಗಲು ಸಹಕರಿಸಿ’ ಎನ್ನುತ್ತಾನೆ.

ಅಂದಿನಿಂದ ಆರಂಭಗೊಂಡ ಆ ಅಮರ ಪಾರಿವಾಳಗಳ ಅಮರನಾಥ ಗುಹಾವಾಸ ಇಂದಿನವರೆಗೂ ಮುಂದುವರೆದಿದೆ. ಅಗಾಧ ಶೀತ ತುಂಬಿದ, ತಿನ್ನಲು ದವಸ-ಧಾನ್ಯಗಳೇ ಇಲ್ಲದ, ಹಣ್ಣು-ಹಂಪಲುಗಳೇನೂ ಸಿಗದ ಆ ಗುಹೆಯಲ್ಲಿ ಅವು ಬದುಕುಳಿದಿರುವ ಪವಾಡವೇ ಭಕ್ತರ ಮನಸೆಳೆಯುತ್ತವೆ. ಪಾರ್ವತಿಗೂ ದಕ್ಕದ ಅಮರತ್ವ ದಕ್ಕಿಸಿಕೊಂಡು, ಎಲ್ಲೆಡೆ ದೇವಾಲಯಗಳ ಗೋಪುರಗಳ ಮೇಲೆ, ಮನೆಗಳ ತಾರಸಿಗಳ ಮೇಲೆ ಕುಳಿತು, ಹಗಲು-ರಾತ್ರಿಯೆನ್ನದೆ ಅವುಗಳ ಕೊರಳೊಳಗಿಂದ ಹೊರಬರುವ ನಿರಂತರ ‘ಗುರು
ಗುರು’ ಶಬ್ದವೇ ಅವು ಇಂದಿಗೂ ಜಪಿಸುತ್ತಿರುವ ಶಿವನಾಮ ಎಂದು ಭಾವುಕರ ಭಾವನೆ.