ಸಂಡೆ ಸಮಯ
ಸೌರಭ ರಾವ್
ಸಣ್ಣ ಕ್ರಿಮಿಕೀಟಗಳಿಂದ ಹಿಡಿದು ಇಡೀ ಜೀವಸಂಕುಲದ ಬಗ್ಗೆ ಗೌರವ, ಅಚ್ಚರಿ. ಸಾಹಿತ್ಯ, ಸಂಗೀತ, ಕಲೆಗಳ ರೂಪ- ಅರೂಪಗಳ, ಅವುಗಳ ಅಮೂರ್ತದ ಬಗ್ಗೆ ಬೆರಗು; ವಿಜ್ಞಾನದ ನಿಖರತೆ, ಅಚ್ಚರಿಗಳ ಬಗ್ಗೆ ಗೌರವ. ನಮ್ಮ ಅರಿವಿಗೆ ದಕ್ಕಿರುವ ವಿಶ್ವದಲ್ಲಿ ಇರುವ ಒಂದೇ ಭೂಮಿಯ ಬಗ್ಗೆ, ನಮ್ಮೆಲ್ಲರಿಗೂ (ಮನುಷ್ಯರು ಮಾತ್ರವಲ್ಲ, ಎಲ್ಲಾ ಬೇರೆ ಜೀವಿಗಳಿಗೂ) ಇರುವ ಇದೊಂದೇ ನೆಲೆಯ ಬಗ್ಗೆ ಮುಗಿಯದ ಆದರ, ಹುಚ್ಚು ಪ್ರೀತಿ – ಮನಸ್ಸಿನಲ್ಲೂ, ದಿನನಿತ್ಯದ ಬದುಕಿನಲ್ಲಿ ನಾವು ಮಾಡುವ ಆಯ್ಕೆಗಳಲ್ಲೂ.
ಅಧ್ಯಾತ್ಮದ ಸೆಳೆತವಿದ್ದರೂ ಸುಂದರ ಲೌಕಿಕ ವಿವರಗಳ ಬಗ್ಗೆ ಅನಗತ್ಯ ವಿರಕ್ತಿಯಿರದ ಜೀವನಪ್ರೀತಿ. ಹಕ್ಕಿಯ ಕೂಗನ್ನು ಕೇಳಿಯೇ ಅದನ್ನು ಗುರುತಿಸುವ ಪುಳಕ. ಯಾವುದೋ ಸಂಗೀತಕೃತಿಯನ್ನು ಎರಡು ಘಳಿಗೆ ಕಣ್ಮುಚ್ಚಿ ಕೇಳಿ ಅದರ ರಾಗವ ಗುರುತಿಸುವ ಪುಳಕ.
ನಮ್ರತೆ ಮರೆಯದ ಜ್ಞಾನ. ಮಾನಸಿಕ ಸೆಳೆತ, ಬೌದ್ಧಿಕ ಸೆಳೆತ, ಅವುಗಳ ಮೌನದಲ್ಲೇ, ಮುಗ್ಧತೆಯಿಂದಲೇ ವ್ಯಾಮೋಹವನ್ನು ಮೀರುವ ಸೂಕ್ಷ್ಮ ಮಮತೆ. ತನ್ನ ಬಗೆಗೇ ತಾನು ಚಿಂತಿಸುವ ಸಾಮರ್ಥ್ಯವುಳ್ಳ ನಮ್ಮ ಮಿದುಳಿನ ಬಗ್ಗೆ ವಿಸ್ಮಯ. ಅಸ್ತಿತ್ವದ ಅರ್ಥ, ಸಂಕಲ್ಪ, ಗುರಿಗಳ ಗೊಡವೆಯೇ ಇಲ್ಲದೇ, ನಾಳೆ ಎನ್ನುವ ಜ್ಞಾನ-ಕನಸುಗಳೇ ಇಲ್ಲದೇ ಬದುಕುವ ಇತರ ಪ್ರಾಣಿ-ಪಕ್ಷಿಗಳ ಸಾಮರ್ಥ್ಯದ ಬಗ್ಗೆ ಕುತೂಹಲ. ಮಂಗಳನ ಅಂಗಳಕ್ಕೆ ಹೋಗುವಷ್ಟು ಬೆಳೆದರೂ ಆಂತರ್ಯದಲ್ಲೇ ಇನ್ನೂ ಕೊರೆಯುವ ಬದುಕು-ಸಾವಿನ ಬಗೆಗಿನ ಕೆಲವು ಮೂಲಭೂತ ಪ್ರಶ್ನೆಗಳು ಉಳಿದುಹೋಗುವ ದ್ವಂದ್ವದ ಕುತೂಹಲ.
ಎಲ್ಲರೊಳಗೂ ಇರುವ ಬೈರಾಗಿ ಹಾಗೂ ಭೋಗವಾದಿ ಮುಖಗಳ ಬಗ್ಗೆ ಬೂಟಾಟಿಕೆಯಿಲ್ಲದ ಪರಿಚಯ. ದೃಷ್ಟಿ ಹಿಡಿದು
ಮಾತನಾಡುವಾಗಲೂ ಒಬ್ಬರು ಅಂತರ್ಮುಖಿಯಾಗಿದ್ದರೆ ಮತ್ತೊಬ್ಬರು ತಾಳ್ಮೆ-ತಾದಾತ್ಮ್ಯದಿಂದ ಕೇಳುವ, ಉತ್ತರಿಸಲು ಅಥವಾ ಪ್ರತಿವಾದ ಮಾಡಲು ತವಕಿಸದ ಸಾಧ್ಯತೆ.
ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ, ಮನಸ್ಸನ್ನು ಮುಕ್ತವಾಗಿ ತೆರೆದುಕೊಳ್ಳುವ ವೈಯಕ್ತಿಕ ವಿವರಗಳ ವಿನಿಮಯ. ಯಾವುದೋ ಆಪ್ತ ವಿಷಯದ ಬಗ್ಗೆ ಒಬ್ಬರು ತಲ್ಲೀನರಾಗಿ ಮಾತನಾಡುವಾಗ ಮತ್ತೊಬ್ಬರ ಕಣ್ಣುಗಳಲ್ಲೂ ತನ್ಮಯತೆ. ನುಡಿಯ ಹಂಗೇ ಇಲ್ಲದೇ ವ್ಯಕ್ತವಾಗುವ ಸಂವಹನವೂ ಅಂತರಂಗ ಹೊಕ್ಕಿಬಿಡುವ ಸಾಧ್ಯತೆಯ ಮುದ್ದು ಸೊಕ್ಕು. ಲೌಕಿಕ ಲೆಕ್ಕಾಚಾರಗಳ ಬಗೆಗೆ ಒಂದಷ್ಟು ಅಜ್ಞರಾದರೂ, ಮನಸ್ಸಿನ ಲಹರಿಗಳು ಹೇಗೋ ಅರಿವಿನ ಪರಿಧಿಗೆ ದಕ್ಕಿಬಿಡುವ ಸಂವೇದನೆ, ಮನೋಧರ್ಮ.
ಜಿಜ್ಞಾಸಾತ್ಮಕ, ಮುಕ್ತ, ಸ್ವಚ್ಛಂದ, ಸ್ವತಂತ್ರ ಮನಸ್ಸುಗಳ ಸಂಭ್ರಮ. ಸೂಕ್ಷ್ಮಸ್ವರಗಳಂತೆ, ವಿಜೃಂಭಣೆ ಇಲ್ಲದ ಜೀವನೋತ್ಸಾಹ; ಅದಕ್ಕೆ ಆಗಾಗ ಮೌನಮಂದಹಾಸದ ರೂಪ. ಯಾವ ನಿರೀಕ್ಷೆಯೂ ಇರದೇ ಅಕ್ಕರೆಗರೆವ ಸಂಚಾರಿಭಾವಗಳು, ಅವುಗಳ ಆಳದಲ್ಲಿ ಮೌನದ ಸ್ಥಾಯಿಗುಣ. ಶಾಂತರಸ ಒಸರುವ ಒಡನಾಟಗಳ ಸುಖಶ್ರುತಿ, ಮಂದ್ರನಾದದಂತೆ.
ಮನಸ್ತಾಪಗಳನ್ನು ಮೆಟ್ಟಿ ನಿಲ್ಲುವ ಘನತೆ, ಮಾನವೀಯತೆ. ಹೆಚ್ಚುಕಡಿಮೆ ಅನುದಿನವೂ ಜ್ಞಾನ ಹಂಚಿಕೊಳ್ಳುವ ಆಕಾಶ ದಂತಹ ಅವಕಾಶ. ಒಂದು ತುಂಬುಕಂಠ, ಧ್ವನಿಸೌಷ್ಠವದಲ್ಲಿ ವಿಚಾರಗಳನ್ನಾಲಿಸುತ್ತಾ ಅವುಗಳ ಬಗ್ಗೆ ಇನ್ನೊಂದು ಜೀವ ದೊಳಗೆ ರಕ್ತಿ ಇಮ್ಮಡಿಯಾಗುವ ಮಾಯೆ.
ಕಲಿಕೆಯಿರುವ, ಹೊಸದನ್ನು ತಿಳಿಯುವ ಬಗ್ಗೆ ಮನಸ್ಸು ಕೆರಳುವ ಸುಯೋಗ – ಒಂದೊಂದು ನರ, ಒಂದೊಂದು ನಾಡಿಯನ್ನೂ ಪ್ರಚೋದಿಸಿ ವೀಣೆಸ್ವರಗಳ ಝೇಂಕೃತಿಯಂತೆ. ಹೀಗೆ ಆತ್ಮಸಂತೋಷ, ಆತ್ಮತೃಪ್ತಿ. ಮನೆಯ ಮೇಲ್ಮಾಳಿಗೆಯಲ್ಲಿ ಮಾತೇ ಆಡದೇ ಚಂದ್ರನನ್ನು, ತಾರೆಗಳನ್ನು, ಆಗಾಗ ಉರಿದುರಿದು ತೂರಿಬಂದು ಬೀಳುವ ಉಲ್ಕೆಗಳನ್ನು ದಿಟ್ಟಿಸುತ್ತಾ ಮಾತಿರದೆಯೂ ತಾಸುಗಟ್ಟಲೆ ಕಳೆಯಬಹುದಾದ ಸಾಹಚರ್ಯ.
ಮನಸ್ಸಿಗೆ ಈವರೆಗೂ ತಿಳಿದಿದ್ದ ನೋವು ಬಂದರೂ, ಅದಕ್ಕೆ ಜೀವವ ಹಿಂಡುವ ನಿಕೃಷ್ಟ ಶಕ್ತಿಯಿದ್ದರೂ ಅದರ ಮೂಲವನ್ನು ನಮ್ಮ ಹೊರಗೆಲ್ಲೋ ಹುಡುಕದೇ, ಹೊರಗಿದ್ದರೂ ಕ್ಷಮಿಸಿ ನಮ್ಮನ್ನು ನಾವೇ ಸಲ್ಲದ ಆಲೋಚನೆಗಳಿಂದ ಕ್ಷಮಿಸಿಕೊಂಡು ಬಿಡುವ ಗ್ರಹಿಕೆ, ಆಳ. ಬದಲಿಗೆ, ಸಿಕ್ಕ ಒಂದೊಂದು ಸಂತಸಕ್ಕೂ ಜೀವನದ ಮೇಲೆ ಭಕ್ತಿಯ ಎತ್ತರಕ್ಕೆ ಏರಿಬಿಡುವ ಸಮುದ್ರದಂಥಾ ಆರ್ದ, ಆರ್ತ ಕೃತಜ್ಞತೆ. ಕೊಟ್ಟಷ್ಟೂ ಮತ್ತೂ ಹೆಚ್ಚಾಗಿ, ಹುಚ್ಚು ಹೊಳೆಯಾಗಿ ಹರಿವ ಪ್ರೀತಿ.
ಎಲ್ಲರೂ ಅವರವರ ಅರ್ಥಕ್ಕೆ ನಿಲುಕುವ, ಬೇರೆ ಯಾವ ಜೀವಿಗೂ ತೊಂದರೆಯಾಗದಂತೆ ಬದುಕುವ ಪ್ರಯತ್ನವನ್ನಾದರೂ ಮಾಡೋಣ ಎಂಬ ದುರಾಸೆ ಒಟ್ಟಿನಲ್ಲಿ ಇಡೀ ಜಗತ್ತೇ ನಮ್ಮ ಸಾಧನಾಸ್ಥಳವಾಗಲಿ ಎಂಬ ಪ್ರಾರ್ಥನೆ.