ಟ್ಯಾಬ್ ಖರೀದಿ, ಮ್ಯಾನ್ ಪವರ್ ಹೆಸರಿನಲ್ಲಿ ಹಣ ಲೂಟಿ
114ಕ್ಕೂ ಹೆಚ್ಚಿನ ನೌಕರರಿಗೆ ನಿರ್ವಹಣೆ ಹೆಸರಿನಲ್ಲಿ 1.50 ಕೋಟಿ ರು. ವೆಚ್ಚ
ಅಧಿಕಾರಿಗಳಿಂದಲೇ 3.50 ಕೋಟಿ ರು. ದುರ್ಬಳಕೆ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯಲ್ಲಿ ಆಸ್ತಿಗಳ ಡಿಜಿಲೀಕರಣ ಹೆಸರಿನಲ್ಲಿ ಅಧಿಕಾರಿಗಳೇ ಸುಮಾರು 5 ಕೋಟಿ ರುಪಾಯಿ ನುಂಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಡಿಜಿಟಿಲೀಕರಣ ಮಾಡುವ ಪ್ರಥಮ ಹಂತದ ಯೋಜನೆಯಲ್ಲಿ ಮಾನವ ಸಂಪನ್ಮೂಲ ಬಳಕೆ ಮತ್ತು ಟ್ಯಾಬ್ ಖರೀದಿ ಹೆಸರಿನಲ್ಲಿ ಸುಮಾರು 3.50 ಕೋಟಿ ರು.ಗಳನ್ನು ಅಧಿಕಾರಿಗಳೇ ದುರ್ಬಳಕೆ ಮಾಡಿ ಕೊಂಡಿರುವುದು ಪತ್ತೆಯಾಗಿದೆ.
ಸುಮಾರು 114ಕ್ಕೂ ಹೆಚ್ಚಿನ ನೌಕರರಿಗೆ ನಿರ್ವಹಣೆ ಹೆಸರಿನಲ್ಲಿ 1.50 ಕೋಟಿ ರು. ಬಳಸಲಾಗಿದ್ದು, ಈ ನೌಕರರು ಇನ್ನೂ ಕೆಲಸ ವನ್ನೇ ಆರಂಭಿಸಿಲ್ಲ. ಆಗಲೇ ಹಣ ಖಾಲಿಯಾಗಿದೆ. ಪಂಚಾಯಿತಿಗಳಲ್ಲಿ ಆಸ್ತಿ ಗುರುತಿಸಲು ಸಮಾರು 20 ಸಾವಿರ ರು. ಮೌಲ್ಯದ 250 ಟ್ಯಾಬ್ ಖರೀದಿಸಲಾಗಿದ್ದು, ಇವು ಕಳಪೆಯಾದ ಕಾರಣ ಕೆಲಸ ನಿರ್ವಹಿಸುತ್ತಿಲ್ಲ. ಆದರೂ ಟ್ಯಾಬ್ ಖರೀದಿ ಮತ್ತು ಮಾನವ ಸಂಪನ್ಮೂಲ ಬಳಕೆ ಹೆಸರಿನಲ್ಲಿ 1.50 ಕೋಟಿ ರು. ಹೆಚ್ಚಿನ ಹಣ ದುರ್ಬಳಕೆ ಮಾಡಲಾಗಿದೆ. ಈ ಅಕ್ರಮದಲ್ಲಿ ಜಿಲ್ಲಾ ಪಂಚಾ ಯಿತಿ ಉಪ ಕಾರ್ಯದರ್ಶಿ ಮತ್ತು ಅಧೀನ ಅಧಿಕಾರಿಗಳು ಹಾಗೂ ಅವರ ಆಪ್ತ ಕಚೇರಿ ಸಿಬ್ಬಂದಿ ಪಾತ್ರವೇ ಪ್ರಧಾನವಾಗಿದ್ದು, ಈ ವಿಚಾರ ಪಂಚಾಯಿತಿ ಅಧ್ಯಕ್ಷರನ್ನೇ ಕತ್ತಲೆಯಲ್ಲಿ ಇರಿಸಲಾಗಿದೆ.
ಅಷ್ಟೇ ಅಲ್ಲ. ಜಿಪಂಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ಅವರಿಗೂ ಮಾಹಿತಿ ಮರೆ ಮಾಚಲಾಗಿದ್ದು, ಇದೀಗ ಶಿವರಾಮೇಗೌಡ ವರ್ಗಾವಣೆ ನಂತರ ಡಿಜಿಲೀಕರಣ ಅಕ್ರಮದ ಎರಡನೇ ಭಾಗ ಮುಂದುವರಿಸುವ ಪ್ರಯತ್ನಗಳು ಆರಂಭವಾಗಿವೆ ಎಂದು ಮೂಲಗಳು ತಿಳಿಸಿವೆ.
ಏನಿದು ಅಕ್ರಮ?: ಬೆಂಗಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 96 ಗ್ರಾಮಪಂಚಾಯಿತಿಗಳಲ್ಲಿ ಸುಮಾರು 22 ಲಕ್ಷ ಆಸ್ತಿಗಳಿದ್ದು, ಸದ್ಯ 6.34 ಲಕ್ಷ ಆಸ್ತಿಗಳು ಮಾತ್ರ ಪಂಚತಂತ್ರ ಜಾಲದಲ್ಲಿದೆ. ಅಂದರೆ ಸುಮಾರು 16 ಲಕ್ಷಕ್ಕೂ ಹೆಚ್ಚು ಆಸ್ತಿಗಳು ತೆರಿಗೆ ಜಾಲದಿಂದ ಹೊರಗೆ ಉಳಿದಿವೆ. ಇಲಾಖೆಯ ಪಂಚತಂತ್ರ ವೆಬ್ಸೈಟ್ ಪ್ರಕಾರ ಸದ್ಯ ಇರುವ 6.34 ಲಕ್ಷ ಆಸ್ತಿಗಳ ಪೈಕಿ ಕೇವಲ ಒಂದು ಲಕ್ಷ ಆಸ್ತಿಗಳಿಂದ ಮಾತ್ರ ತೆರಿಗೆ ವಸೂಲಿ ಮಾಡಲಾಗುತ್ತಿದ್ದು, ಇದರಿಂದ ಲಭಿಸುತ್ತಿರುವ ತೆರಿಗೆ ಮೊತ್ತ ಕೇವಲ 80 ಕೋಟಿ ಮಾತ್ರ.
ತೆರಿಗೆ ಜಾಲದಿಂದ ಹೊರಗಿರುವ 16 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳನ್ನು ಗುರುತಿಸಿದರೆ ಜಿಪಂಗೆ ಸುಮಾರು 400 ಕೋಟಿಗೂ
ಹೆಚ್ಚಿನ ಆಸ್ತಿ ತೆರಿಗೆ ಹರಿದು ಬರಲಿದೆ. ಅದರಲ್ಲೂ ಆಸ್ತಿ ಬಂಡವಾಳದ ಮೌಲ್ಯದ (ಕ್ಯಾಪಿಟಲ್ ವ್ಯಾಲ್ಯೂ ಸಿಸ್ಟಮ್)ದ ಆಧಾರದ ಮೇಲೆ ತೆರಿಗೆ ವಿಧಿಸಿದರೆ ತೆರಿಗೆ ಮೊತ್ತ 1,100 ಕೋಟಿಗೂ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನರಿತ ಇಲಾಖೆ ಹಿರಿಯ ಅಧಿಕಾರಿಗಳು 2019ರಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 32 ಗ್ರಾಮಪಂಚಾಯಿತಿಯ ಆಸ್ತಿಗಳನ್ನು ಸ್ಟಾಟಲೈಟ್ ಮೂಲಕ ಗುರುತಿಸಿ ಮ್ಯಾಪಿಂಗ್ ಮಾಡಿ ನಂತರ ಡಿಜಿಟಲೀಕರಣ ಮಾಡಲು 6 ಕೋಟಿ ರು.ಮೊತ್ತದ ಯೋಜನೆ ರೂಪಿಸಿದ್ದರು. ಪ್ರಥಮ ಹಂತದ ಅನುಷ್ಠಾನಕ್ಕಾಗಿ ಸರಕಾರ 3.50 ಕೋಟಿ ರು. ಬಿಡುಗಡೆ ಮಾಡಿತ್ತು.
ಇದರಲ್ಲಿ ಕೆಎಸ್ಆರ್ಎಸ್ಎಸಿ (ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ) ಸ್ಟಾಟಲೈಟ್ ಮೂಲಕ ಆಸ್ತಿಗಳನ್ನು ಗುರುತಿಸಿ ಮ್ಯಾಪಿಂಗ್ ಮಾಡುವುದು, ನಂತರ ಎನ್ಐಸಿ, ಅವುಗಳನ್ನು ಅನುಮೋದಿಸುವುದು ಬಳಿಕ ಗ್ರಾಮಪಂಚಾಯಿತಿ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಟ್ಯಾಬ್ನಲ್ಲಿ ಆಸ್ತಿಗಳ ವಿವರ ದಾಖಲಿಸಿ ಆಸ್ತಿಗಳನ್ನು ಡಿಜಿಟಿಲೀಕರಣ ಮಾಡಬೇಕಿತ್ತು. ಆದರೆ, ಯೋಜನೆ ಆರಂಭವಾಗಿ 2 ವರ್ಷ ಕಳೆದರೂ ಯೋಜನೆ ಅನುಷ್ಟಾನವಾಗಿಲ್ಲ. ಸರಕಾರ ನೀಡಿದ್ದ ಹಣ ಮಾತ್ರ ಪೂರ್ಣ ಖಾಲಿಯಾಗಿದೆ.
ಎಲ್ಲಿಗೆ ಹೋಯ್ತು ಕೋಟಿ ಕೋಟಿ ಹಣ?
ತೆರಿಗೆ ಜಾಲದಿಂದ ಹೊರಗಿರುವ 16ಲಕ್ಷಕ್ಕೂ ಹೆಚ್ಚಿನ ಆಸ್ತಿಗಳನ್ನು ಗುರುತಿಸಿದರೆ ಜಿಲ್ಲಾ ಪಂಚಾಯಿತಿಗೆ ಸುಮಾರು 400 ಕೋಟಿಗೂ ಹೆಚ್ಚಿನ ಆಸ್ತಿ ತೆರಿಗೆ ಹರಿದು ಬರಲಿದೆ. ಆದರೆ ಈ ನಿಟ್ಟಿನಲ್ಲಿ ಪ್ರಯತ್ನವೇ ಆಗಿಲ್ಲ. ಏಕೆಂದರೆ ಇಲ್ಲಿ ಎಸ್ಆರ್ಎಸ್ಎಸಿ ಆಸ್ತಿಗಳ ಮ್ಯಾಪಿಂಗ್ ಮಾಡಿಕೊಟ್ಟಿದ್ದು, ಅದನ್ನಾಧರಿಸಿ ಆಸ್ತಿಗಳನ್ನು ಗುರುತಿಸಲು ಆಗುತ್ತಿಲ್ಲ. ಇನ್ನು ಗುರುತಿಸಿರುವ ಆಸ್ತಿಗಳನ್ನು ಟ್ಯಾಬ್ ನಲ್ಲಿ ತುಂಬಲು ಖರೀದಿಸಿದ ಟ್ಯಾಬ್ಗಳು ಕಳಪೆಯಾಗಿದ್ದು, ಮಾಹಿತಿ ದಾಖಲಾಗುತ್ತಿಲ್ಲ. ಇದರಿಂದ ಆಸ್ತಿ ಗಳನ್ನು ದಾಖಲಿಸುವ ಮ್ಯಾನ್ ಪವರ್ ಗುತ್ತಿಗೆ ಅನುಪಯುಕ್ತವಾಗಿದೆ.
ಇಲ್ಲಿ ಎನ್ಐಸಿ ಸಂಸ್ಥೆಗೆ ಕೆಲಸವೇ ಇಲ್ಲದಂತಾಗಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಈ ಎಲ್ಲಾ ಕೆಲಸಗಳು ಮುಗಿದಿವೆ ಎನ್ನುವ ಮಾಹಿತಿ ನೀಡಿ ಸುಮಾರು 5 ಕೋಟಿ ರು. ಗಳನ್ನು ನುಂಗಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಆಸ್ತಿಗಳ ಡಿಜಿಟೀಕರಣ ಯೋಜನೆ ವಿಫಲವಾಗಿದ್ದು, ಈ ವೈಫಲ್ಯದ ಮುಂದುವರಿದ ಭಾಗದ ಕಾರ್ಯಕ್ಕೆ ಮತ್ತೆ 5 ಕೋಟಿ ರು. ನೀಡುವಂತೆ ಜಿ.ಪಂ. ಪಂಚಾಯಿತಿ ಕಾರ್ಯದರ್ಶಿ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದು, ಇದಕ್ಕೆ ಅಲ್ಲಿನ ಅಧಿಕಾರಿಗಳೇ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಕಮ ಸಂಸ್ಥೆಗೆ ಏಕೆ ಗುತ್ತಿಗೆ?
ಪಂಚಾಯಿತಿ ಅಧಿಕಾರಿಗಳು ಡಿಜಿಟಲ್ ಇನ್ಫೋ ಎನ್ನುವ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿ ಅಕ್ರಮ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಇದೇ ಸಂಸ್ಥೆಗೆ ಇನ್ನಷ್ಟು ಹೊಸ ಯೋಜನೆ ಗುತ್ತಿಗೆ ನೀಡುವ ಪ್ರಯತ್ನಗಳೂ ನಡೆದಿವೆ. ಇದಕ್ಕೂ ಮುನ್ನ ಪಂಚಾಯಿತಿಗೆ ಕಂಪ್ಯೂಟರ್ಗಳ ಪೂರೈಕೆ, ಲ್ಯಾಪ್ಟಾಪ್ ಪೂರೈಕೆಯಲ್ಲೂ ಅಕ್ರಮ ನಡೆದಿದ್ದು, ಇದರಲ್ಲಿ ಡಿಜಿಟಲ್ ಇನ್ಫೋ ಸಂಸ್ಥೆ ಜಿಲ್ಲಾ ಪಂಚಾಯಿತಿಗೆ ಸುಮಾರು 2 ಕೋಟಿ ರು. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.