ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರು ಕವಿಯಾಗಿ, ಸಾಹಿತಿಯಾಗಿ ರೂಪುಗೊಂಡ ಹಾದಿ ಸುಗಮವಾಗಿರಲಿಲ್ಲ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಎನ್.ಎಸ್.ಎಲ್., ಮನೆಪಾಠ ಹೇಳಿ, ವಾರಾನ್ನ ವ್ಯವಸ್ಥೆಯಲ್ಲಿ ಊಟ ಮಾಡುತ್ತಾ ವ್ಯಾಸಂಗ ಮಾಡಿದವರು. ಅವರ ತಾಯಿ ಅನಕ್ಷರಸ್ಥೆ. ಮುತ್ತುಗದ ಎಲೆ ಜೋಡಿಸಿ, ಬೇರೆಯವರ ಮನೆಯಲ್ಲಿ ಅಡುಗೆ ಸಹಾಯಕ ರಾಗಿ ದುಡಿದು, ಮಕ್ಕಳನ್ನು ಸಾಕಿದವರು. ಮೊದಲಿನಿಂದಲೂ ಸಾಹಿತ್ಯದ ಕುರಿತು ಆಸ್ಥೆಯಿದ್ದ ಲಕ್ಷ್ಮೀನಾರಾಯಣ ಭಟ್ಟರು, ಬಿ.ಎ. ಆನರ್ಸ್ ಓದಲೇಬೇಕೆಂಬ ಹಟತೊಟ್ಟು, ಟಿಕೆಟ್ ರಹಿತ ರೈಲು ಪ್ರಯಾಣ ಮಾಡಿ ಮೈಸೂರು ಸೇರಿದರು. ಅವರಿಗೆ ದೊರೆತ ಮೊದಲ ಆಸರೆ ಎಂದರೆ ಪ್ರಾಚಾರ್ಯ ತ.ಸು.ಶಾಮ ರಾಯರ ಪ್ರೀತಿ, ಸಹಾಯ, ಸಹಕಾರ, ವಾತ್ಸಲ್ಯ. ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರು ತಮ್ಮ ಅನುಭವಗಳನ್ನು ‘ನಿಲುವುಗನ್ನಡಿಯ ಮುಂದೆ’ ಎಂಬ ಆತ್ಮಚರಿತ್ರೆಯಲ್ಲಿ ಆತ್ಮೀಯವಾಗಿ ತೋಡಿಕೊಂಡಿದ್ದಾರೆ. 2020ರಲ್ಲಿ ಪ್ರಕಟ ಗೊಂಡ ಈ ಪುಸ್ತಕವನ್ನು ಅಂಕಿತ ಪುಸ್ತಕ ಪ್ರಕಟಿಸಿದ್ದು, ಇದರಲ್ಲಿ ಅಪರೂಪದ ಛಾಯಾಚಿತ್ರಗಳೂ ಇವೆ. ನಿನ್ನೆ ನಮ್ಮನ್ನು ಅಗಲಿದ ಕವಿ ಎನ್.ಎಸ್.ಎಲ್. ಅವರಿಗೆ ನುಡಿನಮನದ ಸ್ವರೂಪದಲ್ಲಿ, ಅವರ ಆತ್ಮಕಥೆಯ ಆಯ್ದಭಾಗ ಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ನಮ್ಮ ಬದುಕನ್ನು ಕುರಿತು ನಾವೇ ಬರೆದುಕೊಂಡದ್ದು ಎಷ್ಟೇ ಪ್ರಾಮಾಣಿಕವಾಗಿದ್ದರೂ ಅದು ಕನ್ನಡಿಯಲ್ಲಿ ನೋಡಿಕೊಂಡ ನಮ್ಮ ಮೈಯಂತೆ. ಎಲ್ಲ ಸರಿಯಾಗಿಯೇ ಕಂಡರೂ ಅದು ನಮ್ಮ ಎಡಬಲಗಳನ್ನು ನಮಗೆ ತಿಳಿಯದಂತೆ ಬದಲಿಸಿಬಿಟ್ಟಿರುತ್ತದೆ!
– ನನ್ನ ಹುಟ್ಟೂರು ಶಿವಮೊಗ್ಗ ತಾಲೂಕು. ತಾಯಿ ಮೂಕಾಂಬಿಕೆ; ತಂದೆ ಶಿವರಾಮ ಭಟ್ಟ. ನನಗೆ ನಾಲ್ಕು ಜನ ಅಕ್ಕಂದಿರು. ನಾನೇ ಕಡೆಯವನು. ನಾನು ಚಿಕ್ಕವನಾಗಿದ್ದಾಗಲೇ ನನ್ನ ತಂದೆಯನ್ನು ಕಳೆದುಕೊಂಡೆ.
ಬಾಲ್ಯದಲ್ಲೇ, ಇನ್ನೂ ಹತ್ತು ವರ್ಷದವರಿದ್ದಾಗಲೇ ತಮ್ಮ ಅಪ್ಪ ಅಮ್ಮರನ್ನು ಕಳೆದು ಕೊಂಡ ನನ್ನ ತಂದೆ ಹುಟ್ಟೂರಾದ ಉಡುಪಿ ತಾಲೂಕಿನ ನೈಲಾಡಿಯಿಂದ ಘಟ್ಟ ಹತ್ತಿ ಬಂದು ಶೃಂಗೇರಿಯ ಸಂಸ್ಕೃತ ಪಾಠಶಾಲೆ ಸೇರಿ ಹನ್ನೆರಡು ವರ್ಷ ವ್ಯಾಸಂಗ ಮಾಡಿ ದರು. ನಂತರ ಹಾಸನದ ಪ್ರೈಮರಿ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿ, ಭದ್ರಾವತಿ ಯ ದೇವಸ್ಥಾನವೊಂದ ರಲ್ಲಿ ಕೆಲಕಾಲ ಅರ್ಚಕರಾಗಿ ಅನಂತರ ಶಿವಮೊಗ್ಗಕ್ಕೆ ಬಂದು ಪುರೋಹಿತ ವೃತ್ತಿಯಲ್ಲಿ ನೆಲೆನಿಂತರು.
ಬಡತನದಲ್ಲಿದ್ದರೂ ವಿದ್ಯಾವಂತರೆಂದೂ ಸಂಸ್ಕೃತ, ವೇದಶಾಸ್ತ್ರಗಳನ್ನು ಬಲ್ಲವರೆಂದೂ ಊರಲ್ಲಿ ಅವರಿಗೆ ಗೌರವವಿತ್ತು. ಅನೇಕ ಜನ ಶಿಷ್ಯರಿಗೆ ಅವರು ವೇದಮಂತ್ರ ಇನ್ನು ಹೇಳಿಕೊಟ್ಟವರು. ಮೈಮೇಲೆ ಹೊದ್ದುಕೊಂಡ ಶಲ್ಯದ ಒಂದು ಕೊನೆಯಲ್ಲಿ ಯಾವಾ ಗಲೂ ಭಗವದ್ಗೀತೆಯ ಪುಟ್ಟ ಪುಸ್ತಕವೊಂದನ್ನು ಗಂಟು ಹಾಕಿಕೊಂಡಿರುತ್ತಿದ್ದರು. ಎಲ್ಲೇ ಇದ್ದರೂ ಬಿಡುವು ಸಿಕ್ಕಾಗಲೆಲ್ಲ ಅದನ್ನು ಓದುತ್ತ ಕೂರುವರು.
ಯಾರ ಜತೆಗೂ ಅಗತ್ಯಕ್ಕಿಂತ ಹೆಚ್ಚು ಮಾತಿಲ್ಲ. ಹರಟೆಯಂತೂ ಇಲ್ಲವೇ ಇಲ್ಲ. ಶಿಷ್ಯ ರೊಬ್ಬರು ಆ ಬಗ್ಗೆ ಕೇಳಿದ್ದಕ್ಕೆ ‘ಮಾತು ಹೆಚ್ಚಾದರೆ ಅದರಲ್ಲಿ ಸುಳ್ಳು ಹಣಿಕುವ ಸಂಭವವಿರುತ್ತದೆ’ ಎಂದಿದ್ದರಂತೆ! ಇದೆಲ್ಲ ಶಿವಮೊಗ್ಗೆಯಲ್ಲಿ ಹೆಸರಾದ ಪುರೋಹಿತರಾಗಿದ್ದ ನನ್ನ ತಂದೆಯ ಶಿಷ್ಯ ಬಂಡಿಮಠದ ರಾಮಭಟ್ಟರು ನನಗೆ ಹೇಳಿದ ಸಂಗತಿಗಳು. ನನ್ನ ಉಪನಯನದ ದಿನ ಅವರು ನನಗೆ ಹೇಳಿದ ಮಾತು. ‘ನಿಮ್ಮಪ್ಪ ದೊಡ್ಡ ವಿದ್ಯಾವಂತರು ಕಣಪ್ಪ. ಮಲಗುವಾಗಲೂ ಪುಸ್ತಕ ಓದುತ್ತ ಅದನ್ನು ಎದೆಯ ಮೇಲೆ ಇಟ್ಟುಕೊಂಡೇ ನಿದ್ದೆ ಮಾಡಿಬಿಡುತ್ತಿದ್ದರು. ನೀನೂ ಅವರ ಹಾಗೇ ವಿದ್ಯಾವಂತನಾಗಬೇಕು ತಿಳೀತೇ?’
ಮನೆಪಾಠದ ಫೀಸು ಗಳಿಕೆ ನಾಲ್ಕು ರೂಪಾಯಿ
ತಂದೆ ತೀರಿಕೊಂಡಾಗ ನನಗೆ ಒಂದೂವರೆ ವರುಷ, ಮೊದಲೇ ಬಡತನದಲ್ಲಿದ್ದ ಮನೆಯಲ್ಲಿ ಈಗ ಪೂರ್ಣ ಅಮಾವಾಸ್ಯೆ ಕಾಲಿಟ್ಟಿತು.
ನನ್ನ ಅಕ್ಕಂದಿರಲ್ಲಿ ದೊಡ್ಡವಳಿಗೆ ಮಾತ್ರ ಮದುವೆಯಾಗಿತ್ತು. ನಾನೂ ಸೇರಿ ಉಳಿದ ನಾಲ್ಕು ಮಕ್ಕಳನ್ನು ದಡ ಸೇರಿಸುವ ಭಾರ ನನ್ನ ತಾಯ ಹೆಗಲ ಮೇಲೆ ಬಿತ್ತು. ನನ್ನ ತಾಯಿ ಶಾಲೆ ಕಲಿತವಳಲ್ಲ. ಆದರೂ ಧೈರ್ಯಸ್ಥೆ, ವಿವೇಕಿ, ಯಾವ ಹೆಣ್ಣೂ ಕಂಗಾಲಾಗಬಹುದಾದ ಪರಿಸ್ಥಿತಿಯಲ್ಲಿ ಆಕೆ ಮಕ್ಕಳನ್ನು ಹೇಗಾದರೂ ಸಾಕಿ ಮೇಲೆ ತರುವ ಗಟ್ಟಿ ಸಂಕಲ್ಪ ಮಾಡಿದಳು. ನಾವು ವಾಸವಾಗಿದ್ದ ಮನೆ ಸ್ವಂತದ್ದು; ಬಹಳ ಹಳೆಯ ಕಾಲದ್ದು. ಅದನ್ನೇ ಎರಡು ಚಿಕ್ಕ ಭಾಗಗಳಾಗಿ ವಿಂಗಡಿಸಿ ಒಂದನ್ನು ಬಾಡಿಗೆಗೆ ಕೊಟ್ಟಳು. ಹಿಂದೆ ತಾನು ಹರಟೆ ಹೊಡೆಯಲು, ಪಗಡೆಯಾಡಲು ಹೋಗುತ್ತಿದ್ದ ಗೆಳತಿಯರ ಮನೆಯಲ್ಲಿ ಈಗ ಕೈಕೆಲಸ ಮಾಡಿ ಕೊಡಲು ಸಿದ್ಧಳಾದಳು.
ಅವಲಕ್ಕಿ ಬತ್ತ ಕುಟ್ಟಿಕೊಡುವುದು, ಸಾರಿನ ಪುಡಿ ಮಾಡಿಕೊಡುವುದು, ಅಡಿಗೆ ಕೆಲಸದಲ್ಲಿ ಸಹಾಯ ಮಾಡುವುದು; ಅದಕ್ಕೆ
ಸಿಗುವ ಕೊಂಚ ಹಣದಲ್ಲಿ ಹೇಗೋ ಜೀವನ ಸಾಗಿಸುವುದು. ಹೀಗೆ ಕೆಲವು ವರ್ಷ ನಮ್ಮ ಜೀವನ ತೆವಳಿತು. ಕೊಂಚ ದೊಡ್ಡವ ನಾದ ಕೂಡಲೆ ನಾನು ಮೂರು ಮನೆಯ ಮಕ್ಕಳಿಗೆ ಮನೆಪಾಠ ಹೇಳಲು ಹೋಗುತ್ತಿದ್ದೆ. ಅದಕ್ಕೆ ಸಿಗುತ್ತಿದ್ದದ್ದು ತಿಂಗಳಿಗೆ ನಾಲ್ಕು, ಆರು ರೂಪಾಯಿಗಳು. ವಿಠಲ್ ಉಮಾಜಿ ಎಂಬ ಅನುಕೂಲ ಸ್ಥ ಅಕ್ಕಸಾಲಿಯ ಮನೆಯದೇ ದೊಡ್ಡ ಫೀಸು – ಎಂಟು ರೂಪಾಯಿ! ಇದಲ್ಲದೆ ತುಂಗಾನದಿಯ ಆಚೆ ದಂಡೆಯಲ್ಲಿ ಮುತ್ತುಗದ ಮರಗಳಿಂದ ಗೋಣಿಚೀಲದ ತುಂಬ ಎಲೆ ಬಿಡಿಸಿ ತರುತ್ತಿದ್ದೆವು.
ಅಕ್ಕಂದಿರು ಅವುಗಳನ್ನು ಊಟದೆಲೆಯಾಗಿ ಪೋಣಿಸಿ ಇಡುತ್ತಿದ್ದರು. ವಾರ ಕ್ಕೊಮ್ಮೆ ಒಂದು ಅಂಗಡಿಯವರು ಬಂದು ಅವುಗಳನ್ನು ಕೊಂಡು ಹೋಗು ತ್ತಿದ್ದರು. ಬಡತನವೆನ್ನುವುದೇ ಒಂದು ಅವಮಾನವಲ್ಲ, ಅದನ್ನು ಎದುರಿಸಲಾಗದ ಹೇಡಿತನ ವಷ್ಟೇ ಅವಮಾನಕರ ಎಂಬ ಪಾಠವನ್ನು ಈ ಜೀವನ ನನಗೆ ಕಲಿಸಿತು. ಹೀಗೆ ಹತ್ತಾರು ವರ್ಷ ನನ್ನ ತಾಯಿಯ ತಾಳ್ಮೆ, ಶ್ರಮ, ದಿಟ್ಟತನದ ಫಲವಾಗಿ ಕಡೆಗೂ ನಮ್ಮ ಕುಟುಂಬ ಒಂದು ದಡ ತಲುಪಿತು. ಅವಳ ಜೀವನ ಕುರಿತು ಚಿಂತಿಸಿದಾಗೆಲ್ಲ ಅದು ತನ್ನ ಮಕ್ಕಳ ಸಲುವಾಗಿ ನಡೆಸಿದ ಒಂದು ಆತ್ಮಯಜ್ಞ ಅಂತಲೇ ನನಗನಿಸುತ್ತದೆ. ವ್ಯಾಕ್ಸಿಂ ಗಾರ್ಕಿಯ ‘ಮದರ್’ ಕಾದಂಬರಿಯ ನೆನಪಾಗುತ್ತದೆ. ಇಂಥ ಅನುಭವದ ಫಲವಾಗಿಯೇ ಅವಳ ನೆನಪು ನನ್ನ ಕವಿತೆಗಳಲ್ಲಿ ಮತ್ತೆ ಮತ್ತೆ ನುಗ್ಗಿ ಬಂದಿದೆ. ಅದು ರೇಷನ್ ಕಾಲ, ಅಕ್ಕಿ, ಗೋಧಿ, ಸಕ್ಕರೆ ಸೀಮೆಎಣ್ಣೆಗಳಿಗೆ ದೊಡ್ಡ ಕ್ಯೂನಲ್ಲಿ ನಿಂತು ಅಲ್ಪ ಪ್ರಮಾಣದಲ್ಲಿ ಅದನ್ನು ಪಡೆಯಬೇಕಾಗಿತ್ತು. ಆ ದಿನಗಳಲ್ಲೇ ನಮ್ಮ ಕೇರಿಯಲ್ಲಿದ್ದ ಪಂಪಾ ಪರ್ಪ್ಯೂಮರಿ ವರ್ಕ್ಸ ಎಂಬ ಪುಟ್ಟ ಊದಿನಬತ್ತಿ ಫ್ಯಾಕ್ಟರಿಯಲ್ಲಿ ಬಿಡುವಿನ ವೇಳೆ ಯಲ್ಲಿ ಕೆಲಸ ಮಾಡಿ ಚಿಕ್ಕ ಪುಟ್ಟ ಸಂಪಾದನೆ ಮಾಡುತ್ತಿದ್ದೆ. ಓದಿಕೊಳ್ಳಲು ನನಗೆ ಬಿಡುವೇ ಇರುತ್ತಿರಲಿಲ್ಲ.
ಸಾಹಿತ್ಯಾಭಿರುಚಿ
ನನ್ನ ತಾಯಿ ಅನಕ್ಷರಸ್ಥೆ ಎಂದು ಹೇಳಿದೆನಷ್ಟೆ. ಆದರೆ ವಿದ್ಯೆೆಯ ಬಗ್ಗೆ ಅವಳು ಬಹಳ ಆದರ ಗೌರವ ಇದ್ದವಳು. ಮಕ್ಕಳಿಂದ ಕನ್ನಡ ವರ್ಣಮಾಲೆ ಬರೆಯಲು ಕಲಿತುಕೊಂಡಿದ್ದಳು. ಸರಾಗವಾಗಿ ಓದಲು ಸಾಧ್ಯವಾಗದಿದ್ದರೂ ಅಕ್ಷರ ಅಕ್ಷರ ಕೂಡಿಸಿಕೊಂಡು ಆಗೀಗ ಕೊಂಚ ಓದಲು ಯತ್ನಿಸುತ್ತಿದ್ದಳು.
ನನ್ನ ಕಡೆಯ ಅಕ್ಕ, ಶಿವಮೊಗ್ಗೆಯಲ್ಲಿ ಹೆಂಚಿನ ಫ್ಯಾಕ್ಟರಿ ಮಾಲೀಕರಾದ ಕಾಳಪ್ಪನವರ ಮಗಳ ಸಹಪಾಠಿ, ಸ್ನೇಹಿತೆ. ಕಾಳಪ್ಪ ಸಾಹಿತಿ ಅ.ನ. ಕೃಷ್ಣ ರಾಯರಿಗೆ ಬಹಳ ಆಪ್ತರು. ಅವರ ಮನೆಯಲ್ಲಿ ಅನಕೃರವರ ಕಾದಂಬರಿಗಳೆಲ್ಲ ಇದ್ದುವು. ನನ್ನ ಅಕ್ಕನ ಮೂಲಕ ನನ್ನ ತಾಯಿ ಆ ಕಾದಂಬರಿಗಳನ್ನು ತರಿಸು ತ್ತಿದ್ದಳು. ವಾರದಲ್ಲಿ ಮೂರು ನಾಲ್ಕು ದಿನವಾದರೂ ರಾತ್ರಿ ನಮ್ಮ ಮನೆಯಲ್ಲಿ ಅದರ ವಾಚನ ನಡೆಯುತ್ತಿತ್ತು. ನನ್ನ ತಾಯಿ, ಇಬ್ಬರು ಅಕ್ಕಂದಿರು ಮತ್ತು ನಾನು ರತ್ರಿ ಒಂದು ಡಬ್ಬದ ಮೇಲೆ ಸೀಮೆಎಣ್ಣೆೆಯ ಬುಡ್ಡಿಯನ್ನಿಟ್ಟುಕೊಂಡು ಸುತ್ತ ಕೂರುವುದು; ಅಕ್ಕಂದಿರು ಮತ್ತು ನಾನು ಸರದಿಯ ಮೇಲೆ ಅನಕೃ ಕಾದಂಬರಿ ಇನ್ನು ಓದುವುದು. ತಾಯಿಯ ಕರುಳು, ಜೀವನಯಾತ್ರೆ, ಸಂಧ್ಯಾರಾಗ, ರುಕ್ಮಿಣಿ, ಗೃಹಲಕ್ಷ್ಮಿ ಮೊದಲಾದ ಹತ್ತಾರು ಹತ್ತಾರು ಪ್ರಸಿದ್ಧ ಜನಪ್ರಿಯ ಕಾದಂಬರಿಗಳನ್ನು ನಾವು ಹೀಗೆ ಓದಿದ್ದೆವು.
ನಡುನಡುವೆ ಕರುಳು ಹಿಂಡುವ ಭಾವಮಯ ಸನ್ನಿವೇಶಗಳು ಬಂದಾಗ ಎಲ್ಲರ ಕಣ್ಣಲ್ಲಿ ನೀರು. ‘ಏನೋ ಇದು, ಗಂಡು ಹುಡುಗನಾಗಿ ಹೀಗೆ ಅಳುತ್ತಾರೇನೊ’ ಅಂತ ನನ್ನ ತಾಯಿ ಕಣ್ಣೊರೆಸಿಕೊಳ್ಳುತ್ತಲೇ ನನಗೆ ಬುದ್ಧಿ ಹೇಳುತ್ತಿದ್ದಳು! ಹೀಗೆ ನನ್ನ ತಾಯಿಯ ವಾಚನಾಭಿರುಚಿಯ ಮೂಲಕ ನಮ್ಮ ಮನೆಯಲ್ಲಿ ಸಾಹಿತ್ಯದ ಬೆಳಕೂ ಕಾಲಿಟ್ಟಿತ್ತು.
ಸಾಧ್ಯವಾದರೆ ಮೈಸೂರಿಗೆ ಹೋಗಿ ಓದಬೇಕೆಂಬ ನನ್ನ ಆಲೋಚನೆಯನ್ನು ನನ್ನ ತಾಯಿಗೆ ತಿಳಿಸಿದೆ. ‘ವಾರಾನ್ನದ ಮನೆಗಳನ್ನು ಹುಡುಕಿಕೊಳ್ಳುತ್ತೇನೆ. ಅಲ್ಲಿಯೂ ಮನೆಪಾಠ ಹೇಳಲು ಎಲ್ಲ ಪ್ರಯತ್ನ ಮಾಡುತ್ತೇನೆ. ಹೆಚ್ಚು ಪಾಠದ ಮನೆ ಸಿಕ್ಕರೆ ಇಲ್ಲಿಗೂ ಸ್ವಲ್ಪ ಹಣ ಕಳಿಸುತ್ತೇನೆ. ಅಲ್ಲಿಗೆ ಹೋಗಿ ಏನು ಸಾಧ್ಯ ಎಂದು ತಿಳಿಯುತ್ತೇನೆ. ಅನುಕೂಲವಾಗದೆ ಹೋದರೆ ವಾಪಸ್ಸು ಬಂದು ಬಿಡುತ್ತೇನೆ’ ಎಂದೆ. ಎಂದೂ ಕಾಣದ ಮೈಸೂರಿಗೆ ಮಗನನ್ನು ಕಳಿಸಬೇಕು ಎಂಬ ಯೋಚನೆ ಅವಳಿಗೆ ದಿಗ್ಭ್ರಮೆ ಉಂಟು ಮಾಡೀತು ಎಂದು ತಿಳಿದಿದ್ದೆ. ಅವಳು ತಕ್ಷಣ ಏನೂ ನೋಡೋಣ ಎಂದಷ್ಟೇ ಹೇಳಿದಳು.
ಮಾರನೆಯ ದಿನ ನೀನು ‘ಹೇಳುವುದೇನೋ ಸರಿಯೆ. ಓದಿದರೆ ಮಾತ್ರವೇ ನೀನು ಮುಂದೆ ಬರುವುದು ಸಾಧ್ಯ. ಆದರೆ ಮೈಸೂರು ಪರಸ್ಥಳ, ಅಲ್ಲಿ ಏಗುವುದು ಹೇಗೆ? ಆಗಲಿ ಹೋಗು. ಒಂದು ವಾರ ದಿನವೂ ಒಂದು ಕಾರ್ಡು ಬರೆದು ವಿಷಯ ತಿಳಿಸುತ್ತಿರು.
ಪ್ರಯೋಜನವಾಗದೆ ಹೋದರೆ ಕೂಡಲೇ ವಾಪಸ್ಸು ಬಂದುಬಿಡು. ಪ್ರಯತ್ನವನ್ನಂತೂ ಮಾಡು. ಏನಾಗುತ್ತದೋ ಅದು ದೈವೇಚ್ಛೆ’ ಎಂದಳು. ಇಡೀ ದಿನ ಯೋಚಿಸಿದ್ದಳೆಂದು ಕಾಣುತ್ತದೆ. ಅವಳು ಒಪ್ಪಿದ್ದು ನನಗೇ ಆಶ್ಚರ್ಯವಾಯಿತು.
ನನ್ನ ಸ್ನೇಹಿತ ನಂಜುಂಡಸ್ವಾಮಿಯ ತಂದೆ ಗಾರ್ಡ್ ಗುರುಮೂರ್ತಿ ಎನ್ನುವವರ ಹೆಸರನ್ನು ಈ ಮುಂಚೆ ಹೇಳಿದೆನಷ್ಟೆ, ಅವರು ರೈಲ್ವೆೆ ಗಾರ್ಡ್ ಆಗಿದ್ದರು; ಅವರು ಮಗನನ್ನು ಎನ್.ಐ.ಇ. (ಇನ್ಸ್ಟಿಟ್ಯೂಟ್ ಆಫ್ ಇಂಜನಿಯರಿಂಗ್) ಕಾಲೇಜಿಗೆ ಸೇರಿಸಬೇಕಾಗಿತ್ತು. ಅವರ ಜತೆ ಹೋದರೆ ಟಿಕೆಟ್ ಕೊಳ್ಳುವ ಅಗತ್ಯವಿರಲಿಲ್ಲ, ರೈಲ್ವೆೆ ಪಾಸ್ ಇತ್ತು. ಮೈಸೂರಿಗೆ ಹೋಗಿ ನಂಜುಂಡನ ಸೋದರಮಾವನ ಮನೆಯಲ್ಲಿ ಇಳಿದುಕೊಂಡೆವು. ಅಲ್ಲಿ ಇದ್ದುದು ಒಂದೇ ದಿನ. ಹಾಗಾಗಿ ನನ್ನ ಕೆಲಸವೇನನ್ನೂ ಮಾಡಿಕೊಳ್ಳಲು ಆಗಲಿಲ್ಲ. ಬೆಳಿಗ್ಗೆ ಮೈಸೂರಿಗೆ ಹೋದವರು ರಾತ್ರಿ ರೈಲಿಗೆ ಶಿವಮೊಗ್ಗಕ್ಕೆ ವಾಪಸ್ಸು ಹೊರಟೆವು. ಹೋದ ಪುಟ್ಟ ಬಂದ ಪುಟ್ಟ ಎಂಬಂತಾಯಿತು ನನ್ನ ಸ್ಥಿತಿ.
ಬೇಸಿಗೆ ರಜ ಮುಗಿಯುವ ಸಮಯ ಹತ್ತಿರವಾಗುತ್ತಿತ್ತು. ಮತ್ತೆ ಮೈಸೂರಿಗೆ ಹೋಗುವ ನಿರ್ಧಾರ ಮಾಡಿದೆ. ತಾಯಿಯ ಹೊರತು ನನ್ನ ಪ್ರಯತ್ನಕ್ಕೆ ಯಾರ ಬೆಂಬಲವೂ ಇರಲಿಲ್ಲ. ನನ್ನ ಮೂವರು ಭಾವಂದಿರೂ ಶಿವಮೊಗ್ಗೆಯಲ್ಲೇ ಇದ್ದರು. ಅವರು ಯಾರೂ ಹೆಚ್ಚು ಓದಿದವರಲ್ಲ. ಮೂವರಲ್ಲಿ ಇಬ್ಬರು ನಮ್ಮ ಯಾವ ವಿಷಯಕ್ಕೂ ತಲೆ ಹಾಕುವವರೇ ಅಲ್ಲ. ಎರಡನೆಯ ಭಾವ ಗಣೇಶ ಉಡುಪ ನಾನು ಮೈಸೂರಿಗೆ ಹೋಗುವ ವಿಚಾರಕ್ಕೆ ವ್ಯತಿರಿಕ್ತವಾಗಿದ್ದರು. ‘ಕಂಡರಿಯದ ಸ್ಥಳಕ್ಕೆ ಹೋಗಿ ಮುಂಡಾ ಮೋಚಿಕೊಂಡ ಎಂಬಂತೆ ಇದು.
ಇವನು ಹೋದ ಒಂದು ತಿಂಗಳಲ್ಲೇ ವಾಪಸ್ ಬರದಿದ್ದರೆ ಕೇಳಿ’ ಅಂತ ನಮ್ಮ ನಿರ್ಧಾರಕ್ಕೆ ವಿರೋಧವಾಗಿ ಮಾತಾಡಿದರು. ಆದರೆ ನನ್ನ ತಾಯಿ ಧೈರ್ಯವಂತೆ. ಆದರೆ ನನ್ನ ತಾಯಿ ಧೈರ್ಯವಂತೆ. ‘ವಾಪಸ್ಸು ಬಂದರೆ ತಾನೇ ಏನು? ಪ್ರಯತ್ನ ಮಾಡುವುದೇನೂ ತಪ್ಪಲ್ಲವಲ್ಲ’ ಎಂದು ಉತ್ತರ ಕೊಟ್ಟಳು.
ಟಿಕೆಟಿಗೆ ದುಡ್ಡಿಲ್ಲ
ನಾನು ಮೈಸೂರಿಗೆ ಹೊರಟದ್ದು 1955ನೇ ಇಸವಿ. ನನ್ನ ಬಳಿ ರೈಲ್ವೆ ಟಿಕೇಟು ಕೊಳಲೂ ದುಡ್ಡಿರಲಿಲ್ಲ. ಟಿಕೆಟ್ಗೆ ಸುಮಾರು ಆರು ರೂಪಾಯಿ. ನನ್ನ ಹತ್ತಿರ ಇದ್ದದ್ದೆಲ್ಲ ಕೇವಲ ಒಂದು ರೂಪಾಯಿ ಹದಿಮೂರು ಆಣೆ ಮಾತ್ರ. ಟಿಕೇಟು ಇಲ್ಲದೆ ರೈಲು ಹತ್ತಿಬಿಟ್ಟೆ. ಟಿಕೆಟ್ ಕಲೆಕ್ಟರ್ ಕೇಳಿದರೆ ನಾನು ಗಾರ್ಡ್ ಗುರುಮೂರ್ತಿಗಳ ಮನೆಯವನು ಎಂದು ಹೇಳುವುದು.
ಹಾಗೆ ಹೇಳಿದರೆ ಅವನು ಸುಮ್ಮನೆ ಬಿಟ್ಟರೂ ಬಿಟ್ಟಾನು ಎಂದು ನನ್ನೆಣಿಕೆ. ಅರಸೀಕೆರೆವರೆಗೆ ತೊಂದರೆ ಇಲ್ಲದೆ ನನ್ನ ಪ್ರಯಾಣ
ಸಾಗಿತ್ತು. ಆ ಹೊತ್ತಿಗೆ ಟಿಕೆಟ್ ಕಲೆಕ್ಟರ್ ಬಂದೇಬಿಟ್ಟ! ನಾನು ಮೇಲಿನ ಬರ್ತ್ನಲ್ಲಿ ಕೈಗಳನ್ನು ಜೋಡಿಸಿಕೊಂಡು ಅದರ ಮೇಲೆ ಮುಖ ಹುದುಗಿಸಿ ಮುಖವಡಿಯಾಗಿ ಮಲಗಿದ್ದೆ. ಪೂರ್ಣ ಎಚ್ಚರವಿದ್ದರೂ ನಿದ್ದೆ ಬಂದಿರುವವನಂತೆ ನಟಿಸಿದೆ. ಬೇರೆ ಎಲ್ಲರ ಟಿಕೆಟ್ ಚೆಕ್ ಮಾಡಿದ ಮೇಲೆ ಕಲೆಕ್ಟರ್ ಮೇಲಿನ ಬರ್ತ್ ಮೇಲೆ ಮಲಗಿದ್ದ ನನ್ನ ಕಡೆ ತಲೆಯೆತ್ತಿ ನೋಡಿದ. ಮಡಿಸಿಕೊಂಡಿದ್ದ ಕೈಗಳ ಸಂದಿನಿಂದ ಅವನ ಮುಖ ನನಗೆ ಕಾಣುತ್ತಿತ್ತು. ಆದರೆ ಅವನಿಗೆ ನನ್ನ ಮುಖ ಕಾಣುವಂತಿರಲಿಲ್ಲ.
ನನಗೆ ಎದೆ ಬಡಿದುಕೊಳ್ಳತೊಡಗಿತು. ನನ್ನನ್ನು ಎಬ್ಬಿಸಿಬಿಡುತ್ತಾನೆ, ನನ್ನ ಯಾವ ವಿವರಣೆಯನ್ನೂ ಒಪ್ಪದೆ ಕೆಳಗೆ ಇಳಿಸಿ ಬಿಡುತ್ತಾನೆ. ಪೋಲೀಸರಿಗೆ ಕೊಟ್ಟರೆ ಏನು ಗತಿ? ನನಗೆ ಮುಂದೆ ಓದುವುದು ಲಭ್ಯವಿಲ್ಲ ಎಂದುಕೊಳ್ಳುತ್ತಿರುವಾಗ ಅರಸೀಕೆರೆ ಸ್ಟೇಷನ್ ಬಂತು, ರೈಲು ನಿಂತಿತು. ಅವನು ನನ್ನನ್ನು ಎಬ್ಬಿಸ ಹೋಗದೆ ಕೆಳಗೆ ಇಳಿದುಬಿಟ್ಟ!
ಅದೃಷ್ಟವಶಾತ್ ನಾನು ಪಾರಾದೆ. ಪಾಪ! ಯಾರೋ ಹುಡುಗ, ಮಲಗಿದ್ದಾನೆ ಅಂತ ಅಂದುಕೊಂಡನೋ ಅಥವಾ ಇಳಿದು ಕಾಫಿ ಏನಾದರೂ ಕುಡಿಯಬೇಕಿತ್ತೋ. ಮಲಗಿದ್ದವರನ್ನು ಎಬ್ಬಿಸಿದರೆ ಮುಂದೆ ತಿಗಣೆಯಾಗಿ ಹುಟ್ಟುತ್ತಾರೆ ಎಂಬ ಮೂಢ
ನಂಬಿಕೆಯವನಾಗಿದ್ದು ಸುಮ್ಮನಾಗಿಬಿಟ್ಟನೋ ಹೇಗೋ, ಅಂತೂ ನಾನು ಬಚಾವಾದೆ!
ಕಾಲೇಜಿನ ಕಾರಿಡಾರಿನಲ್ಲಿ
ನಾನು ಮೈಸೂರು ತಲುಪಿದಾಗ ಬೆಳಗಿನ ಜಾವ. ಸ್ಟೇಷನ್ನಿನಿಂದ ನಡೆದು ಸೀದಾ ಮಹಾರಾಜ ಕಾಲೇಜಿಗೆ ಬಂದೆ. ಕಾಲೇಜಿನ ಹೊರ ಕಾರಿಡಾರಿನಲ್ಲಿ ನನ್ನ ಬಳಿ ಇದ್ದ ಒಂದು ಪಂಚೆ ಹಾಸಿಕೊಂಡು ಮಲಗುವುದರಲ್ಲಿದ್ದೆ. ಅಷ್ಟರಲ್ಲಿ ವಾಚ್ಮನ್ ಬಂದ. ‘ಏಯ್, ಇಲ್ಲಿ ಮಲಗುವ ಹಾಗಿಲ್ಲ, ಎದ್ದೇಳು’ ಎಂದ. ‘ನಾನು ಈ ಕಾಲೇಜಿಗೆ ಸೇರಲು ಬಂದಿದ್ದೇನೆ. ಬೇರೆ ಸ್ಥಳ ಇಲ್ಲ. ಒಂದೆರಡು ಗಂಟೆ ಬಿಟ್ಟು ಎದ್ದು ಹೋಗುತ್ತೇನೆ. ದಯವಿಟ್ಟು ಬಿಡಪ್ಪ, ಮಲಗೊಲ್ಲ, ಬೇಕಾದರೆ ಕೂತುಕೊಳ್ಳುತ್ತೇನೆ’ ಎಂದೆ.
ಅವನು ಸುಮ್ಮನಾದ. ಆಗಲೇ ಮೈಸೂರಿಗೆ ಹೋಗಿದ್ದ ಶ್ರೀಕಂಠಭಟ್ಟರ ವಿಳಾಸ ನನಗೆ ಅರೆಬರೆಯಾಗಿ ಗೊತ್ತಿತ್ತು. ಆದರೆ ಆ ಕತ್ತಲಲ್ಲಿ ಹೇಗೆ ಅವರ ರೂಮು ಹುಡುಕುವುದು? ಅವರು ಕೃಷ್ಣಮೂರ್ತಿಪುರ ಎಂಬ ಬಡಾವಣೆಯಲ್ಲಿ ಇದ್ದಾರೆ ಎಂದಷ್ಟೇ ನನಗೆ ಗೊತ್ತಿತ್ತು. ಕೂತೇ ತೂಕಡಿಸಿದ ನಾನು ಬೆಳಗಾದ ಸ್ವಲ್ಪ ಹೊತ್ತಿನ ಮೇಲೆ ಶಾಮರಾಯರ ಮನೆ ಹುಡುಕಿಕೊಂಡು ಹೊರಟೆ. ಅವರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರು ಎಂದಷ್ಟೇ ನನಗೆ ಗೊತ್ತು. ಕೇಳಿದರೆ ಒಬ್ಬರಲ್ಲ ಒಬ್ಬರು ಹೇಳುತ್ತಾರೆ ಎಂಬ
ಕುರುಡು ನಂಬಿಕೆ ನನ್ನದು.ಸೀದಾ ಚಾಮುಂಡಿಪುರಕ್ಕೆ ಹೋಗಿ ನಾಲ್ಕಾರು ಜನರನ್ನು ‘ಮಹಾರಾಜಾ ಕಾಲೇಜಿನ ಲೆಕ್ಚರರ್
ಶಾಮರಾಯರ ಮನೆ ಎಲ್ಲಿ’ ಎಂದು ಕೇಳಿದೆ.
ಒಬ್ಬರು ‘ಅವರು ಇರುವುದು ಈ ಬಡಾವಣೆಯಲ್ಲಿ ಅಲ್ಲ, ಕೃಷ್ಣಮೂರ್ತಿಪುರದ ಐದನೇ ಕ್ರಾಸಿನಲ್ಲಿ, ಮನೆ ಮುಂದೆ
ಅವರ ಹೆಸರಿನ ಬೋರ್ಡು ಇದೆ’ ಎಂದರು. ಅವರು ಶಾಮರಾಯರ ಮನೆ ನೋಡಿದವರಿರಬೇಕು. ಅಲ್ಲಿಂದ ಸೀದಾ ಕೃಷ್ಣಮೂರ್ತಿ ಪುರದ ಕಡೆ ಹೊರಟೆ. ಅಲ್ಲಿ ಐದನೇ ಕ್ರಾಸಿನ ತುದಿಯಲ್ಲಿ ಅವರ ಮನೆ ಸಿಕ್ಕಿತು. ಮನೆ ಮುಂದೆ ಅವರ ಹೆಸರಿನದಲ್ಲದೆ, ‘ಟಿ.ಎಸ್. ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ ಎಂಬ ಇನ್ನೊಂದು ಬೋರ್ಡೂ ಇತ್ತು. ಮನೆ ಮುಂದೆ ನಿಂತಿದ್ದ ಅವರ ಮಗ ಶಾಮರಾಯರು ಮಹಡಿದು ಮೇಲೆ ಇದ್ದಾರೆ ಎಂದು ತಿಳಿಸಿದ.
ಮನೆಯ ಪಕ್ಕಕ್ಕೆೆ ಸೇರಿಕೊಂಡಿದ್ದ ಮಹಡಿ ಮೆಟ್ಟಿಲು ಹತ್ತಿಹೋದೆ. ಮೊದಲು ಒಂದು ವಿಶಾಲವಾದ ಹಾಲು, ಅದರೊಳಗೆ ಬಲಬದಿಗೆ ಇನ್ನೊಂದು ಕೊಠಡಿ. ಕೊಠಡಿಯ ಬಾಗಿಲ ಮೇಲೆ ‘ಧ್ಯಾನಮಂದಿರ’ ಎಂಬ ಚಿಕ್ಕ ಫಲಕ. ಶಾಮರಾಯರು ಆ ಕೊಠಡಿ ಯಲ್ಲಿ ಇರಬೇಕು ಎಂದುಕೊಂಡೆ. ಹಾಲಿನಲ್ಲಿ ಬೆತ್ತದ ಒಂದು ಹಳೆಯ ಸೋಫಾ ಇತ್ತು. ಅದರ ಒಂದೆರಡು ಬೆತ್ತದ ಕಡ್ಡಿ
ಗಳು ಮುರಿದಿದ್ದವು. ಅದರ ಮೇಲೆ ಸ್ವಲ್ಪ ಕಪ್ಪಗಿರುವ ನಡುವಯಸ್ಸಿನ ವ್ಯಕ್ತಿಯೊಬ್ಬರು ಕೂತಿದ್ದರು. ಸಾದಾ ಪಂಚೆ. ಹೆಗಲ
ಭಾಗದಲ್ಲಿ ಕೊಂಚ ಹೊಲಿಗೆ ಬಿಚ್ಚಿಕೊಂಡ ಬನಿಯನ್. ಶಾಮರಾಯರ ಯಾರೋ ಬಂಧುಗಳಿರಬೇಕು ಎನಿಸಿತು.
ಅವರನ್ನು ಕೇಳಿದೆ ‘ಸರ್, ಶಾಮರಾಯರಿದ್ದಾರಾ?’ ‘ಇದ್ದಾರೆ, ಏನಾಗಬೇಕಾಗಿತ್ತು?’ ‘ಸ್ವಲ್ಪ ಮಾತನಾಡಬೇಕಿತ್ತು?’ ಕಾಲಿಗೆ ಚಪ್ಪಲಿ ಕೂಡ ಇಲ್ಲದ ಹುಡುಗ ದೊಡ್ಡವರ ಧಾಟಿಯಲ್ಲಿ ಮಾತನಾಡುತ್ತಿರುವುದು ನೋಡಿ ಅವರಿಗೆ ಮೋಜೆನಿಸಿರಬೇಕು.
‘ಏನು ಮಾತೋ ’ ‘ಅವರ ಹತ್ತಿರವೇ ಹೇಳುವಂಥದ್ದು’ ‘ನನ್ನ ಹತ್ತಿರವೇ ಹೇಳು ಚಿಂತೆಯಿಲ್ಲ’ ನನಗೆ ಅಸಮಾಧಾನವಾಯಿತು. ನಾನು ಬಂದಿರುವುದು ವಾರಾನ್ನ ಯಾಚಿಸುವುದಕ್ಕೆ. ಅನ್ನ ಹಾಕಬೇಕಾದ ಶಾಮರಾಯರ ಬಳಿ ಅದನ್ನು ಕೇಳುವುದಕ್ಕೇ ನನಗೆ ಸಂಕೋಚ. ಹಾಗಿರುವಾಗ ನಡುವೆ ಈತ ಯಾರೋ ತಲೆಹಾಕಿ ಕಾಟ ಕೊಡುತ್ತಿದ್ದಾನಲ್ಲ ಎನ್ನಿಸಿತು. ಸ್ವಲ್ಪ ದೃಢವಾಗಿ ಹೇಳಿದೆ.
‘ಇಲ್ಲ. ನಾನು ಶಾಮರಾಯರ ಹತ್ತಿರವೇ ಮಾತಾಡಬೇಕು.’ ಅವರು ಜೋರಾಗಿ ನಕ್ಕರು. ನಾನೇ ಶಾಮರಾಯ, ಅದೇನು ಹೇಳು
‘ಅಯ್ಯಾಾ, ದೊರೆ, ಆ ಶಾಮರಾಯ ಎಂಬ ಮಹಾಶಯ ನಾನೇ. ಬಾ ಕೂತುಕೋ. ಅದೇನು ರಹಸ್ಯ ತಂದಿದೀಯೋ ಹೇಳು!’
ನನಗೆ ಆಶ್ಚರ್ಯವಾಯಿತು. ಶಾಮರಾಯರೆಂದರೆ ಬೆಳ್ಳಗೆ ಸೌಮ್ಯವಾಗಿ ತೇಜಸ್ವಿಯಾಗಿ ಇರುತ್ತಾರೆಂದು ಕಲ್ಪಿಸಿಕೊಂಡಿದ್ದ.
ಇವರೋ ನಾನು ಕಲ್ಪಿಸಿಕೊಂಡದ್ದಕ್ಕೆ ಭಿನ್ನವಾಗಿದ್ದಾರೆ. ಶಾಮರಾಯರು ನಕ್ಕರು. ‘ಯಾಕೋ ಮರಿ, ಸುಮ್ಮನೆ ನಿಂತುಬಿಟ್ಟೆ. ನೀನು ಯಾರು ಅಂತ ಹೇಳಲೇ ಇಲ್ಲವಲ್ಲ. ಬಾ ಕೂತುಕೋ’ ಎಂದರು. ಕೊಂಚ ಧೈರ್ಯ ಬಂತು. ನನ್ನ ಪ್ರವರವನ್ನೆಲ್ಲ ಹೇಳಿಕೊಂಡೆ. ಓದುವುದಕ್ಕೆಂದು ಶಿವಮೊಗ್ಗದಿಂದ ಬಂದಿರುವುದಾಗಿ ಹೇಳಿದೆ.
‘ನಿನ್ನ ತಂದೆಗೆ ಏನು ಕೆಲಸ? ನನಗೆ ತಂದೆ ಇಲ್ಲ. ನಾನು ಮಗುವಾಗಿದ್ದಾಗಲೇ ತೀರಿಕೊಂಡರು.’ ‘ನಿನ್ನ ಅಣ್ಣ? ಅಣ್ಣಂದಿರಿಲ್ಲ, ತಾಯಿ, ಮೂರು ಜನ ಅಕ್ಕಂದಿರು ಅಷ್ಟೆ.’ ‘ಮತ್ತೆ ಜೀವನ ಹೇಗೆ ನಡೆಸುತ್ತಿದ್ದೀರಪ್ಪಾ?’ ‘ನಮ್ಮ ತಾಯಿ ಸಂಬಂಧಿಕರ ಮನೆಯಲ್ಲಿ ಸಾರಿನಪುಡಿ ಮಾಡಿ, ಅವಲಕ್ಕಿ ಬತ್ತ ಕುಟ್ಟಿ ಕೊಂಚ ದುಡ್ಡು ತರಾರೆ. ನಾನು ಚಿಕ್ಕ ಹುಡುಗರಿಗೆ ಮನೆ ಪಾಠ ಹೇಳಿ ಸ್ವಲ್ಪ ದುಡ್ಡು
ಸಂಪಾದಿಸ್ತೇನೆ.’
‘ಅಯ್ಯೋ ದೇವರೆ! ಈ ವಯಸ್ಸಿನಲ್ಲೇ ಎಂಥ ಕಷ್ಟವಲ್ಲಪ್ಪ ನಿನ್ನದು! ಮೈಸೂರಿಗೆ ಯಾಕೆ ಬಂದೆ?’ ‘ಬಿ.ಎ. ಆನರ್ಸ್ ಓದಬೇಕು ಅಂತ.’ ‘ಎಲಾ ಇವನ! ಇಷ್ಟು ಕಷ್ಟ ಇದೆ ನಿನಗೆ. ಆದರೂ ಓದ್ದೀನಿ ಅಂತೀಯ ಪರವಾಗಿಲ್ಲ, ಗಟ್ಟಿಪಿಂಡ, ಇರಲಿ, ನಾನೇನು
ಮಾಡಬೇಕು?’ ‘ನಿಮ್ಮ ಮನೆಗೆ ವಾರದಲ್ಲಿ ಒಂದು ದಿನ ಊಟಕ್ಕೆ ಬರಲಾ?’ ‘ಅಯ್ಯೋ ಮುಂಡೇದೇ! ಅದಕ್ಕೆ ಕೇಳಬೇಕೇನೋ?
ಒಂದಲ್ಲದಿದ್ದರೆ ನಾಲ್ಕು ದಿನ ಬಾ. ಬೇರೆ ಮನೇಲೂ ಕೆಲವು ವಾರ ಸಿಕ್ಕರೆ ನೋಡು. ನಮ್ಮ ಮನೆಗೆ ಈಗಾಗಲೇ ನಾಲ್ಕೈದು
ಹುಡುಗರು ಬರ್ತಾ ಇರೋದ್ರಿಂದ ಹಾಗೆ ಹೇಳ್ತಿದೀನಿ ಅಷ್ಟೆ.’
‘ಆಗಲಿ ಸಾರ್, ಬರ್ತೀನಿ.’ ‘ಸ್ವಲ್ಪ ನಿಲ್ಲು, ನಿನ್ನ ಊಟ ಆಗಿದೆಯಾ?’ ಆಗ ಮಧ್ಯಾಹ್ನ ಎರಡು ಗಂಟೆ. ನನ್ನ ಊಟ ಆಗಿರಲಿಲ್ಲ.
ಆದರೆ ಹೇಳಲು ಹಿಂಜರಿಕೆ. ’ಪರವಾಗಿಲ್ಲ ಸಾರ್’ ಅಂದೆ. ‘ಛೇ, ನಿನ್ನ ಮುಂಡಾ ಮೋಚ್ತು! ಪರವಾಗಿಲ್ಲವಂತೆ. ಏನು ಪರವಾಗಿಲ್ಲ? ವಾರಾನ್ನಕ್ಕೆೆ ಬರ್ತೀನಿ ಅಂತೀಯ. ಆದರೂ ಊಟ ಆಗಿಲ್ಲ ಅಂತ ಹೇಳೋಕೆ ನಾಚಿಕೆ. ಹುಚ್ಚುಮುಂಡೇದೇ! ಈಗೇನೂ ನಿನಗೋಸ್ಕರ ಅಡಿಗೆ ಮಾಡಿಸಲ್ಲ. ಎಲ್ಲರ ಊಟ ಆಗಿದೆ.
ಏನಾದರೂ ಇದ್ದರೆ ತಿನ್ನುವಿಯಂತೆ’ ಎಂದು ಹೇಳಿ ಶಾಮ ರಾಯರು ಅಲ್ಲೇ ಕುಳಿತಿದ್ದ ಒಬ್ಬ ಹುಡುಗನಿಗೆ ಹೇಳಿದರು. ‘ಏ ಸುಬ್ಬಣ್ಣ, ಕೆಳಗೆ ಹೋಗಿ ನೋಡು, ತಿನ್ನಲು ಏನಾದರೂ ಇದ್ದರೆ ಸ್ವಲ್ಪ ತೊಗೊಂಡು ಬಾ’ ಸುಬ್ಬಣ್ಣ (ಅವರ ಅಣ್ಣ ದಿವಂಗತ ಪ್ರೊ. ವೆಂಕಣ್ಣಯ್ಯನವರ ಮಗ) ಒಳಗೆ ಹೋದ. ಬರುವಾಗ ಒಂದು ಪ್ಲೇಟಿನಲ್ಲಿ ಎಲೆಕೋಸಿನ ಹುಳಿ ಕಲಸಿದ ಅನ್ನ ತಂದುಕೊಟ್ಟ.
ಶಾಮರಾಯರು ಹೇಳಿದರು. ‘ಅದನ್ನು ತಗೊ. ಆ ಕುರ್ಚಿ ಮೇಲೆ ಕುಳಿತುಕೊಂಡು ನಿಧಾನವಾಗಿ ತಿನ್ನು’ ತಿಂದಾದ ಮೇಲೆ ಶಾಮರಾಯರು ಕೇಳಿದರು. ‘ಊಟಕ್ಕೆ ಯಾವಾಗಿನಿಂದ ಬರ್ತೀಯ?’ ‘ನಾಳೆಯಿಂದ.’ ‘ಇವತ್ತು ರಾತ್ರಿ ಬರೀ ನೀರು ಕುಡಿದು ಮಲಗ್ತಿಯಾ? ಹುಚ್ಚಪ್ಪ. ರಾತ್ರೀನೂ ಬಂದುಬಿಡು. ಊಟಕ್ಕೆ ನಿನಗಾಗೇ ಕಾಯ್ತಿರ್ತೀನಿ.’
ನನ್ನ ಕಂಠ ಕಟ್ಟಿ ಬಂತು. ಕಣ್ಣಲ್ಲಿ ನೀರು ತುಂಬಿಕೊಂಡಿತು. ಅವರು ಮಹಾರಾಜ ಕಾಲೇಜಿನಲ್ಲಿ ಪ್ರಸಿದ್ಧ ಅಧ್ಯಾಪಕರು,
ನಾನೋ ಊಟಕ್ಕೂ ದಿಕ್ಕಿಲ್ಲದ ಒಬ್ಬ ಬೀದಿ ಹುಡುಗ. ಅವರು ಊಟಕ್ಕೆ ನನಗಾಗಿ ಕಾಯಾರಂತೆ! ನಾನು ಎಲ್ಲಿ ಊಟವಿಲ್ಲದೆ
ಉಪವಾಸ ಬೀಳ್ತೀನೋ ಅಂತ ಇದೆಲ್ಲ.
‘ಖಂಡಿತ ಬರ್ತೀನಿ ಸಾರ್’ ಅಂದೆ. ‘ಅದು ಸರಿ ಎಲ್ಲಿ ಇಳಕೊಂಡಿದೀಯ?’ ‘ನನ್ನ ಸ್ನೇಹಿತರೊಬ್ಬರು ರೂಮು ಮಾಡ್ಕೊಂಡಿದ್ದಾರೆ. ಅವರ ವಿಳಾಸ ಇದೆ. ಅಲ್ಲಿಗೆ ಹೋಗ್ತೀನಿ’ ಅಂತ ನಮಸ್ಕಾರ ಹೇಳಿ ಹೊರಬಂದೆ. ಮನಸ್ಸು ಆಗಲೇ ಹುರುಪುಗೊಂಡಿತ್ತು.
ನಾನು ಮೈಸೂರಿನಲ್ಲಿ ಓದುವುದು ಮನಸ್ಸಿನಲ್ಲಿ ನಿಶ್ಚಿತವಾಗಿತ್ತು.
ಕುವೆಂಪು ಅವರು ಬರೆದ ಕಾರ್ಡ್!
ಈವರೆಗಿನ ನನ್ನ ಓದು ನಡೆದದ್ದು ನಾನಿದ್ದ ಊರಿನಲ್ಲಿ. ಮುಂದೆ ಓದಬೇಕೆಂದರೆ ಬೇರೆ ನಗರಕ್ಕೆ ಹೋಗಬೇಕಾಗಿತ್ತು. ನನ್ನ ಪರಿಸ್ಥಿತಿಯಲ್ಲಿ ಅದು ಬಹುಮಟ್ಟಿಗೆ ಅಸಾಧ್ಯವೇ ಆಗಿತ್ತು. ಆದರೆ ಡಿಗ್ರಿ ಪಡೆಯದೆ ಹೋದರೆ ಕೇವಲ ಇಂಟರ್ ಮೀಡಿಯೆಟ್ ಓದಿ ಏನೂ ಪ್ರಯೋಜನ ಆಗುವಂತಿರಲಿಲ್ಲ. ಓದಬೇಕೆಂದರೆ ಮೈಸೂರಿಗೆ ಹೋಗಿ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಓದುವುದು ನನ್ನ ಕನಸಾಗಿತ್ತು.
ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಿಗೆ ನನ್ನ ಅಂಕಪಟ್ಟಿಯ ಜೊತೆ ಒಂದು ಪತ್ರ ಬರೆದು ‘ನನಗೆ ಕನ್ನಡ, ಇಂಗ್ಲಿಷ್, ಸೋಷಿಯಾಲಜಿ, ಸೈಕಾಲಜಿ ಆನರ್ಸ್ ಗಳಲ್ಲಿ ಯಾವುದಾದರೊಂದಕ್ಕೆ ಪ್ರವೇಶ ದೊರೆಯುವ ಸಾಧ್ಯತೆ ಇದೆಯೇ? ದಯವಿಟ್ಟು ತಿಳಿಸಿ’ ಎಂದು ಕೇಳಿದ್ದೆ.
ಜೊತೆಗೆ ಸ್ವವಿಳಾಸದ ಒಂದು ರಿಪ್ಲೈಕಾರ್ಡ್ ಇಟ್ಟಿದ್ದೆ. ಇದನ್ನು ನನ್ನ ತಾಯಿಗೆ ತಿಳಿಸಿರಲಿಲ್ಲ. ಉತ್ತರ ಬಂದೀತು ಎಂಬ ನಿರೀಕ್ಷೆ ಇರಲಿಲ್ಲ. ಏಕೆಂದರೆ ನಾನು ಅರ್ಜಿಯನ್ನೇ ಹಾಕಿರಲಿಲ್ಲ. ಏಳೆಂಟು ದಿನಗಳ ನಂತರ ನನಗೆ ಅಲ್ಲಿಂದ ನಾನು – ಕಳಿಸಿದ್ದ ಪೋಸ್ಟ್ ಕಾರ್ಡ್ ಬಂತು. ‘ಅರ್ಜಿ ಕಳಿಸಿದರೆ ಮುಂದೆ ಸೀಟು ಪಡೆದವರ ಹೆಸರನ್ನು ಕಾಲೇಜಿನ ನೋಟೀಸ್ ಬೋರ್ಸ್ನಲ್ಲಿ ಹಾಕಲಾಗುತ್ತದೆ’ ಎಂದು ಬರೆದಿತ್ತು. ಕಾರ್ಡಿನ ಕೊನೆಯಲ್ಲಿ ಕುವೆಂಪು ಎಂಬ ಸೀಲಿನ ಸಹಿಯ ಮುದ್ರೆ ಇತ್ತು. ನೋಡಿ ನನಗೆ ಮೈಜುಮ್ಮೆಂದಿತು.
ಕುವೆಂಪು ಅವರೇ ಕಾಲೇಜಿನ ಪ್ರಿನ್ಸಿಪಾಲರೆಂದು ನನಗೆ ತಿಳಿದಿರಲಿಲ್ಲ. ಕಾಲೇಜಿಗೆ ಸೇರಿದರೆ ಕುವೆಂಪು ಅವರನ್ನು ನೋಡಬಹುದು. ಅವರು ತೆಗೆದುಕೊಳ್ಳುವ ತರಗತಿ ಯೊಂದರಲ್ಲಿ ಕೂತು ಅವರ ಪಾಠವನ್ನೂ ಕೇಳಬಹುದು! ಈ ಆಲೋಚನೆ ಮಾತ್ರದಿಂದಲೇ ನಾನು ರೋಮಾಂಚಿತನಾದೆ.