ಪ್ರೊ.ಕೃಷ್ಣಾಮನವಳ್ಳಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಯ ಹೊಸ ಕವನಗಳು !
ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಹಿರಿಯ ಕವಿ ಚಂದ್ರಶೇಖರ ಕಂಬಾರರು ಹೊಸ ಕವನಗಳನ್ನು ಬರೆದಿದ್ದಾರೆ! ‘ಕಂಬಾರರ ಈ ಸಂಕಲನ ಅವರ ಬರವಣಿಗೆಯ ಔನ್ನತ್ಯದ ತುದಿಯಲ್ಲಿದ್ದು, ಅವರ ಎಂಭತ್ತೈದು ವರ್ಷಗಳ ಪಕ್ವತೆ ಹಾಗೂ ತುಂಬು ಜೀವನವನ್ನು ಬಿಂಬಿಸುವ ಕೃತಿ.’ ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿರುವ ಕಂಬಾರರು ಇನ್ನಷ್ಟು ಕವನಗಳನ್ನು ಬರೆದಿದ್ದಾರೆ ಎಂಬುದೇ ಒಂದು ಸಂಭ್ರಮದ ಸುದ್ದಿ! ಆ ಕವನಗಳು ‘ಎಂದೆಂದಿಗೂ ಶಿವಾಪುರ’ ಸಂಕಲನದಲ್ಲಿ ಅಡಕಗೊಂಡಿವೆ, ಓದುಗರಿಗೆ ದೊರೆಯು ತ್ತಿವೆ ಎಂಬುದು ಇನ್ನೂ ಸಂತಸದ ವಿಚಾರ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಕವನ ಸಂಕಲನವು ಇಂದು ಬೆಳಿಗ್ಗೆೆ 11.00 ಗಂಟೆಗೆ ಬುಕ್‌ಬ್ರಹ್ಮದ ಮೂಲಕ ಫೇಸ್‌ಬುಕ್ ಲೈವ್‌ನಲ್ಲಿ ಬಿಡುಗಡೆಯಾಗಲಿದೆ.
ಈ ದಿನ ನಾನು ಕೇಳಿದ ಬಹಳ ಸಂತೋಷದ ಸುದ್ದಿ – ಕಂಬಾರರಿಗೆ ಉನ್ನತ ರಾಷ್ಟ್ರಗೌರವವಾದ ‘ಪದ್ಮಭೂಷಣ’ ಪ್ರಶಸ್ತಿ ದೊರೆತಿರುವುದು. ಅವರ ಹೊಸ ಕವನ ಸಂಕಲನ ‘ಎಂದೆಂದಿಗೂ ಶಿವಾಪುರ’ಕ್ಕೆ ನಾನು ಮೊದಲ ಮಾತು ಬರೆಯಲು ಹೊರಟಾಗ
ಈ ಸುದ್ದಿ ಕೇಳಿದೆ. ಇದಕ್ಕಿಂತ ಸುಸಮಯ ಯಾವುದಿದ್ದೀತು? ಎಂದೆಂದಿಗೂ ಶಿವಾಪುರ, ಎಂದೆಂದಿಗೂ ಕಂಬಾರ!
ಈ ಕವನ ಸಂಕಲನ ಕಂಬಾರರ ಇಡೀ ಬರಹ ಸಮಗ್ರಕ್ಕೆ, ಅದರಲ್ಲಡಗಿರುವ ಅದಮ್ಯ ಸೃಷ್ಟಿಚೇತನ, ಅದರ ನವಿರಾದ ಪದರಗಳು, ಮತ್ತದರ ಹಿಂದಿನ ಅಗಾಧ ಚೆಲುವಿನ ರಹಸ್ಯಕ್ಕೆ ಬೆಳಕು ಚೆಲ್ಲುವಂತಹದ್ದು, ಕಂಬಾರರ ಬರವಣಿಗೆಯ ಸತ್ಯ – ಜಾನಪದದ ಲಯ, ಭಾಷೆಯ ಸೊಗಡು ಹಾಗೂ ಒಂದು ಇಡೀ ಸಮುದಾಯದ ಅರಿವನ್ನು ಎತ್ತಿ ಹಿಡಿಯುವ ರೀತಿ ಇವುಗಳಲ್ಲಡಗಿದೆ.
ಕಂಬಾರರ ಬರವಣಿಗೆಯನ್ನು ಹತ್ತಿರದಿಂದ ಕಂಡು, ಅದರ ಆಳವಾದ ನೋಟಗಳು, ಜನಪರ ಮೌಲ್ಯಗಳನ್ನು ಮೆಚ್ಚುವ
ಓದುಗಳು ನಾನು. ಅವರ ಮೊದಲ ಕೃತಿ ‘ಹೇಳತೇನ ಕೇಳ’ದಿಂದ ಶುರುವಾಗಿ ಈತನಕದ ಬರಹಗಳ ಎಷ್ಟೋ ಮಜಲುಗಳು ಹಾಗೂ ಆಯಾಮಗಳನ್ನು ಒಳಗೂಡಿಕೊಂಡು ಹುಟ್ಟಿರುವ ಸಂಕಲನ ‘ಎಂದೆಂದಿಗೂ ಶಿವಾಪುರ’. ಇಲ್ಲಿ ಮಿಥ್ ಹಾಗೂ ಒಂದು ಸಮಷ್ಟಿ ಅಥವಾ ಜನಾಂಗದ ನೆನಪುಗಳು ಮತ್ತು ಪ್ರಜ್ಞೆಯ ಮೂಲಕ ಬದುಕನ್ನು ರೂಪಿಸುವ ಪಾಠ ಇದೆ.
ಆದರೆ ಕಂಬಾರರ ವೈಶಿಷ್ಟ್ಯಈ ಜಾನಪದ ನೆಲೆಯಿಂದಲೇ ನಮ್ಮ ಈಗಿನ ಸಮಕಾಲೀನ ಪ್ರಪಂಚದ ತಲ್ಲಣಗಳಿಗೆ ಸ್ಪಂದಿಸುವುದು. ಅವರ ಬರಹ ರಾಷ್ಟ್ರೀಯ ಹಾಗೂ ಗ್ಲೋಬಲ್ ಸಂದರ್ಭಗಳನ್ನೂ ಒಳಗೂಡಿಸಿಕೊಳ್ಳುತ್ತದೆ. ನವವಸಾಹತುಶಾಹಿ ದುಃಸ್ವಪ್ನ ಗಳನ್ನು ಕಂಡು, ಅದರಾಚೆಗಿನದೇನನ್ನೋ ಒಡನುಡಿಯುವ ಶಿವಾಪುರ ಒಂದು microcosm ! ಇಲ್ಲಿ ಮನುಷ್ಯರು – ದೇವರುಗಳು ಎಲ್ಲಾ ಬದಿಬದಿಯಲ್ಲಿ ಕಾಣಸಿಗುತ್ತಾರೆ.
ಕಾಲಪ್ರವಾಹ ಹರಿಯುತ್ತಿರುವಂತೆ, ಹೊಸ ತಿರುವುಗಳು, ಹೊರಗಿನ ಬದಲಾವಣೆಗಳು ಎಲ್ಲವನ್ನೂ ಹೊತ್ತು ಸಾಗುವ ಪುಟ್ಟ ಜಗತ್ತು ಈ ಶಿವಾಪುರ. ನಮ್ಮ Thirdworld ನ ‘ಪುಟ್ಟ ಜಗತ್ತು’ (ಆಂಟಿಗ – ಅಮೇರಿಕಾದ ಪ್ರಸಿದ್ಧ ಬರಹಗಾರ್ತಿ ಜಮೈಕಾ ಕಿನಾ ಕೇಡ್ ಬಳಸುವ ಸಾದಾ ‘ಪುಟ್ಟ ಜಾಗ’) ಈ ಶಿವಾಪುರ. ನವವಸಾಹತುಶಾಹಿ, ನಗರೀಕೃತ ಹಾಗೂ ಹೊರದೇಶಗಳಿಂದ ಬಂದ ವಿಧ್ವಂಸಕ ಶಕ್ತಿಗಳ ಆಕ್ರಮಣಕ್ಕೆ ತುತ್ತಾಗುವ ಸನ್ನಿವೇಶ ಕೂಡ ಇಲ್ಲಿ ಕಾಣಬರುತ್ತದೆ.
ಹೀಗೆ, ಕಂಬಾರರು ವಿವಿಧ ಸ್ತರಗಳ, ವಿಭಿನ್ನ ಸಂದರ್ಭಗಳ ಹಿನ್ನೆಲೆಯಲ್ಲಿ ಶಿವಾಪುರವನ್ನು ರೂಪಿಸುತ್ತಾರೆ. ಬದಲಾವಣೆಯನ್ನೂ ‘ಒಡಲುಗೊಳ್ಳುವ’ ಶಿವಾಪುರ ಕೊನೆಗೆ ಅದೇ ಮೂಲ ನೆಲೆಯಾಗಿ, ಸೃಷ್ಟಿಯ ಸೆಲೆಯಾಗಿ ನಿಲ್ಲುತ್ತದೆ. ಮಿಥ್ ಕಥನದಲ್ಲಿ ಶಿವಾಪುರ ದೇವರಲೋಕದಿಂದ ಹುಟ್ಟಿದ್ದು. ಹಲವಾರು ಬಾರಿ ಕಂಬಾರರು ‘ಇತಿಹಾಸದ ಕಾಲ’ (historical time) ಅನ್ನುವ ಕಲ್ಪನೆ ಬ್ರಿಟಿಷರಿಂದ ನಮಗೆ ಬಂದದ್ದು ಎಂದೂ ಪ್ರಸ್ತಾಪಿಸಿದ್ದಾರೆ. ಇತಿಹಾಸದ ಕಲ್ಪನೆ ಹಾಗೂ ಪ್ರಜ್ಞೆ ಐರೋಪ್ಯ ನೆಲೆಯದು.
ಕ್ರೌರ್ಯ, ಹಿಂಸೆ, ಮನುಷ್ಯ-ಮನುಷ್ಯನ ನಡುವಿನ ಸೆಣೆಸಾಟಗಳು, ದಬ್ಬಾಳಿಕೆ, ನಿಸರ್ಗ ಹಾಗೂ ಹೆಣ್ಣಿನ ಮೇಲಿನ ದೌರ್ಜನ್ಯ
ಗಳು ಇವೆಲ್ಲಾ ಈ patriarchal ಎನ್ನಬಹುದಾದ ಕಾಲಪ್ರಜ್ಞೆ – ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವಂತಹವು.
ಆದರೆ ಕಂಬಾರರು ಪ್ರೀತಿ, ಬಾಂಧವ್ಯ, ಸಾಮಾಜಿಕ ಸಂಬಂಧಗಳು, ಒಂದಾಗಿ ಒಟ್ಟಾಗಿ ಬಾಳುವ ಮನೋಭಾವಗಳನ್ನು ಮಿಥ್ ದರ್ಶನದಲ್ಲಿ ಕಾಣುತ್ತಾರೆ.
ಮಿಥ್ ಇನ್ನೂ ಪ್ರಸ್ತುತ
ಈ ಮಿಥ್ ದೃಷ್ಟಿಯಲ್ಲಿ ಕಾಣುವ ಶಿವಾಪುರಕ್ಕೆ ಹೊರಪ್ರಪಂಚದ ಅರಿವೂ, ಶಕ್ತಿಗಳನ್ನು ಮೀರಿ ತಾನೇ ಪುನಃಶ್ಚೇತನ
ಪಡೆದುಕೊಳ್ಳುವಂತಹ ಸಾಮರ್ಥ್ಯವೂ ಇದೆ. ಹೀಗಾಗಿ ಕಂಬಾರರಿಗೆ ಬದುಕು ಪ್ರಪಂಚದ ದರ್ಶನ ಮಾಡಿಸುವ ಚೇತನದ ತಾಣ ವಾಗುತ್ತದೆ. ಪಂಡಿತ ರಾಜೀವ ತಾರಾನಾಥರು ಹೇಳುವಂತೆ ‘ಈ ದೇಶದಲ್ಲಿ ಮಿಥ್ ಇನ್ನೂ ಪ್ರಸ್ರುತ, ಸಹಜ ಹಾಗೂ ವಾಸ್ತವ, ಇದರಿಂದಲೇ ಕಂಬಾರರು ಭಾರತೀಯ ಸಾಹಿತ್ಯದಲ್ಲಿ ಇಂದಿಗೂ ಪ್ರಮುಖವಾಗುತ್ತಾರೆ.’
ನನ್ನ ಜೊತೆ ಕಂಬಾರರು ನಡೆಸಿದ ಸಂದರ್ಶನದಲ್ಲಿ ಹೀಗೆನ್ನುತ್ತಾರೆ : ‘ನಾನು ಬೆಳೆದು ಬಂದ ಜಾನಪದ ಸಮುದಾಯಗಳಲ್ಲಿನ ಮಿಥ್‌ಗಳು, ಕಥನಗಳು, ಕತೆಗಳು, ಜನ ಮತ್ತು ಬದುಕಿನ ಶೈಲಿ – ಇವೆಲ್ಲಾ ನನಗೆ ಆ ಜಾಗ, ಆ ನೆಲ, ಆ ನೆಲೆಗಳೊಡನೆ ಹತ್ತಿರತನ ತಂದುಕೊಟ್ಟಿವೆ. ಹಾಗೆಂದ ಮಾತ್ರಕ್ಕೆ ನನ್ನ ಬರವಣಿಗೆಯಲ್ಲಿನ ಶಿವಾಪುರ ಹೊರ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಬೆಳವಣಿಗೆಗಳಿಂದ ಹೊರತಾಗಿದೆ ಎಂದಲ್ಲ. ನನ್ನ ಶಿವಾಪುರಕ್ಕೆ ಈ ಎಲ್ಲಾ ವಿದ್ಯಮಾನಗಳ ಅರಿವಿದೆ. ಅವುಗಳನ್ನು ಒಳಗೊಂಡು, ತನ್ನದೇ ಆದ, ನಿರಂತರವಾದ ಬದುಕು-ಬಾಂಧವ್ಯಗಳನ್ನು ಉಳಿಸಿಕೊಳ್ಳುವಂಥದ್ದು ಶಿವಾಪುರ. ಈ ಶಿವಾಪುರ ಇಡೀ ಪ್ರಪಂಚವನ್ನು ನನಗೆ ತೋರುವ ಕನ್ನಡಿ.’ ಕಂಬಾರರ ಈ ಸಂಕಲನ ಅವರ ಬರವಣಿಗೆಯ ಔನ್ನತ್ಯದ ತುದಿಯಲ್ಲಿದ್ದು,
ಅವರ ಎಂಭತ್ತೈದು ವರ್ಷಗಳ ಪಕ್ವತೆ ಹಾಗೂ ತುಂಬು ಜೀವನವನ್ನು ಬಿಂಬಿಸುವ ಕೃತಿ.
ಕನ್ನಡಕ್ಕೆ ಇದು ಅಪರೂಪದ ಕೊಡುಗೆ. ಇಲ್ಲಿನ ಪದ್ಯಗಳು ವೈಯಕ್ತಿಕ, ಸಾಮಾಜಿಕ ಹಾಗೂ ರಾಜಕೀಯ ಸ್ತರಗಳನ್ನು
ಪ್ರತಿಬಿಂಬಿಸುತ್ತವೆ. ಇವುಗಳಲ್ಲಿ ಕಾಣುವ ಮೌಲ್ಯಗಳು, ಅನುಭವ, ಜಾನಪದದ ಸಮೃದ್ಧ ಜೀವನದರ್ಶನ ಅದ್ಭುತವಾದದ್ದು, ಈ ಭಾಷೆ, ಈ ಮಿಥ್ ದರ್ಶನ ಅನುವಾದಕರಿಗೆ ಸವಾಲಾಗುವಂತಹವು. ನಾನೀಗ ಈ ಸಂಕಲನವನ್ನು ಅನುವಾದಿಸಲು ಎದುರು ನೋಡುತ್ತಿದ್ದೇನೆ.
ಲೊಳಲೊಟ್ಟೆ
(1)
ಪರಾರಿಯಾದ ದೇವರುಗಳ ಹಿಡಿದು ಕೊಟ್ಟವರಿಗೆ
ಕೈತುಂಬ ಬಹುಮಾನವೆಂಬ ಪ್ರಚಾರಿಕೆಯ ಓದಿ
ಯಾರೋ ಪುಣ್ಯಾತ್ಮರು
ಕಳೆದ ಯುದ್ಧದಲ್ಲಿ ತಪ್ಪಿಸಿಕೊಂಡಿದ್ದ,
ಎಲ್ಲಿ ಅಡಗುವದೆಂದು ತಿಳಿಯದೆ ಮಣ್ಣುಪಾಲಾದ,
ಕಲ್ಲುಬಂಡೆಗಳಿಗೆ ತಾಗಿ
ಅಂಗಾಂಗ ಮುರಿದು ಚದುರಿಬಿದ್ದ
ವಿಕಲಾಂಗ ದೇವರುಗಳನ್ನು
ಪತ್ತೆ ಮಾಡಿ ತಂದು ತುಂಬಿದ್ದಾರೆ
ಹಂಪಿಯ ಮ್ಯೂಜಿಯಮ್ಮಿನಲ್ಲಿ.
ಸಿಕ್ಕ ಅಂಗಾಂಗಗಳ ಯಾರ್ಯಾರದೋ ದೇಹಕ್ಕೆ ಸೇರಿಸಿ
ನಿಲ್ಲಿಸಿದ್ದಾರೆ ಅಂತೂ ಒಂದಾಕಾರ ಮಾಡಿ,
ಇದ್ದೊಂದೆ ಹಾಲಿನ ಇಕ್ಕಟ್ಟಿನಲ್ಲಿ,
ಯುದ್ಧ ವಿಕಲಾಂಗರ ಶಿಬಿರದಲ್ಲಿ.
(2)
ಸಾಮಾನ್ಯರೇ ಇವರು?
ಅವತಾರಗಳ ಕುಣಿದು ರಾಕ್ಷಸರ ಸಂಹರಿಸಿ
ಶಿಷ್ಟರ ರಕ್ಷಿಸಿದವರು.
ರಾಜಮಹಾರಾಜರಿಗೆ ಬಂಗಾರದ ಹೊಗೆಯ,
ಪುರಾಣೇತಿಹಾಸ ನೀಡಿದವರು,
ನೆನಪಿನಿಂದ ಹೊರಗಾದರೂ
ನಂಬಿಕೆಯಿಂದ ಹೊರಬೀಳಲಾರದವರು.
ಈಗ ಯುದ್ಧಪೀಡಿತರ ಶಿಬಿರದಲ್ಲಿರುವವರು!
(3)
ಸದರಿ ದೇವರುಗಳಿಗೆ ದೇಗುಲಗಳಿಲ್ಲ.
ಇರುವ ದೇಗುಲಗಳಲ್ಲಿ ಭಿನ್ನರಿಗೆ ಪ್ರವೇಶವಿಲ್ಲ.
ಗಂಟೆ ಜಾಗಟೆ ಪೂಜೆ ಉತ್ಸವಗಳಿಲ್ಲ,
ಒಡ್ಡೋಲಗದ ಶೃಂಗಾರ ಸಡಗರವಿಲ್ಲ,
ಭಕ್ತರಿಲ್ಲ, ನಿಜ ಹೇಳಬೇಕೆಂದರೆ-
ಯಾರಿಗೂ ಇವರ ಹೆಸರು ಗೊತ್ತಿಲ್ಲ!
ಇವರಿಗೆ ಜೀವವಿಲ್ಲ, ಆದರೆ ಶವಗಳಲ್ಲ!
ಭೂತ ಪ್ರೇತಾದಿಗಳಲ್ಲ, ಹುತಾತ್ಮರಲ್ಲ.
ಮಾನವರಂತೂ ಮೊದಲೇ ಅಲ್ಲ.
ಇವರನ್ನು ಹೂಳುವಂತಿಲ್ಲ, ಸುಡುವಂತೆಯೂ ಇಲ್ಲ!
ಈಗ ಇಲ್ಲಿದ್ದಾರೆ ಸಂಶೋಧಕರು ಕೊಟ್ಟ
ಪರಿಚಯ ಪತ್ರ ಎದೆಗಂಟಿಸಿಕೊಂಡು!
ಗುರುತು ಸಿಕ್ಕಿತೆ?
(4)
ದೊಡ್ಡ ಸಾಮ್ರಾಟರೇ
ತಾವು ಮಾಡಿದ ಇತಿಹಾಸ ಹುಳು ತಿಂದು
ದೂಳು ಹಿಡಿದೀತೆಂದು ಸೀಡಿ ಮಾಡಿ
ಸೆರಗಿನಲ್ಲಿ ಕಟ್ಟಿಕೊಂಡು ಮಣ್ಣಾದರು!
ನಾವು ಆ ಮಣ್ಣು ಮಾರಿ ದೂಳಿನಲ್ಲಿ
ಕಣ್ಣು ಕಳೆದುಕೊಂಡವರು.
ಗಿರಾಕಿಗಳಂತೆಯೇ ವೇಷ, ವಿಳಾಸ ಬದಲಿಸಿ
ಕಾಳಸಂತೆಯಲಿ ಆ ಮಣ್ಣು ಮಾರುವವರು,
ಮ್ಯಾಲಿನ ಸೂರ್ಯನೂ ಖೋಟಾ ನಾಣ್ಯವಾಗಿ
ಕಾಂಬವರಿಗೆ ಆತ್ಮಸಾಕ್ಷೀ ಭೂತದ ಮಾತು
ಕೇಳಿಸೀತೆ?
ಕೇಳಿರಯ್ಯಾ ದೇವರುಗಳೇ:
ನಿಮಗಾಗಿ ನಾವು ಸುರಿಸುವ ಕಣ್ಣೀರಿಗೆ
ಮಾರ್ಕೆಟ್ಟಿನಲ್ಲಿ ಭಾರಿ ಬೆಲೆ ಬಂದು ಮಾರಿಕೊಂಡಿದ್ದೇವೆ.
ಕೈ ಬಾಯಲುಗಿ ನಿಮ್ಮ ತೋರುಬೆರಳು
ನಮ್ಮ ಕಡೆ ತೋರಿದರೂ ನಮಗೆ ಭಯವಿಲ್ಲ.
ಒರಟಾಗಿ ನೋಡಿದರೂ ನಿಮ್ಮ ನೋಟ
ನಮ್ಮೆದೆಗೆ ನಾಟುವುದಿಲ್ಲ,
ಯಾಕಂತೀರೊ?
ನೀವು ನಮ್ಮವರಲ್ಲ, ನಾವು ನಿಮ್ಮವರಲ್ಲ,
ವಿದಾಯ ಹೇಳದೇ ಹೊರಟಿದ್ದೇವೆಂದು
ಬೇಸರಿಸದಿರಿ,
ನಾವಿನ್ನೂ ನಮ್ಮಲ್ಲಿಯ ಅನೇಕರ ಕನಸುಗಳನ್ನ
ತೊಳೆಯಬೇಕಾಗಿದೆ.
(5)
ಅಗೊ ಪುರಂದರ ಮಂಟಪದಿಂದ
ತಂಬೂರಿ ಮಿಡಿಯುತಿದೆ:
ಉತ್ತಮ ಪ್ರಭುತ್ವ ಲೊಳಲೊಟ್ಟೆ!
ಪ್ರೊ.ಕೃಷ್ಣಾ ಮನವಳ್ಳಿ
ನೀನು-ನಾನು
ನಿನ್ನೆಗಳ ಅಗಿಯುತ್ತ ಹೋದರೆ
ಪಾಯದ ಕಲ್ಲು ಮಣ್ಣು
ಒದ್ದೆನೆಲದೊಡಲ ನೀರು
ನೀರು ಕುಡಿವ ಬೇರು
ಬೇರು ಬಿರಿದು ಎರಡೆಲೆ ಮೂಡಿದಾಗ
ಸುರುವಾದ ಕತೆಯಿದು!
ಎರಡೆಲೆ ರೆಕ್ಕೆಯ ಬೀಸಿ ಹಾರಿದರೆ ಹಕ್ಕಿ
ಈ ಮರದ ಬೇರು ಬಿಳಲು ಬಾನಿನಲ್ಲಿ,
ಹೂಚಿಗುರು ನೆಲದಲ್ಲಿ!
ಇನ್ನೂ ನೆನಪಿದೆ – ಇದಕ್ಕಿನ್ನೂ ಬಾಯಿ ಬಂದಿರಲಿಲ್ಲ
ದನಿ ಒಡೆದಿರಲಿಲ್ಲ! . . . .
ಚಿಲಿಪಿಲಿ ಉಲಿದುದು ನಿಜ,
ಭಾಷೆ ಬಲಿತಿರಲಿಲ್ಲ . . . ಸಿದ್ಧವಾಗಿ ವ್ಯಾಾಕರಣ
ತುಂಬಿತು ನೋಡು ಹಸಿರು ಜೀವನ,-
ಒಂದಿದ್ದದ್ದು ಎರಡಾಗಿ. . . . . . . .
ಈಗ ನೋಡಿದರೆ ನಮ್ಮವೇ ಎರಡು ಭೂತಗಳು!
ಇವೆರಡೂ ನಮ್ಮ ಮಾತುಗಳನ್ನಾಡಿದರೂ ಅವು ನಮ್ಮವಲ್ಲ!
ಕ್ರಿಯೆ ನಮ್ಮದಲ್ಲ!
ಒಂದಾನೊಂದು ಕಾಲದ ಕತೆ ಬದುಕಲ್ಲ.
ನಮ್ಮವೇ ಭೂತಗಳು, ನಾವಲ್ಲ!
ವೈರಿಗಳಂತೆ ಇರಿದಾಡಿ
ಪ್ರೇಮಿಗಳಂತೆ ಲಲ್ಲೆಯಾಡಿ
ಪರಸ್ಪರ ವಾದ್ಯಗಳಾಗಿ ಮಿಡಿದು ನುಡಿಸಿ
ಹಾಡಿ ಪಾಡಿ ಮಾತಾಡಿ ಮೊಗೆದು
ಎಲ್ಲ ಎಲ್ಲಾ ಮುಗಿದು
ಎಲ್ಲ ಎಲ್ಲವ ಕಳಚಿ
ಈಗ ಬಿದ್ದಿದ್ದೇವೆ
ದಣಿದ ಮಕ್ಕಳು ಮೈಮರೆತು ಬಿಟ್ಟ
ಆಟಿಕೆಗಳಂತೆ,
ಶಬ್ದಗಳ ಸಿಪ್ಪೆಯಲ್ಲಿ