ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಕನ್ನಡ ಸಾರಸ್ವತ ಲೋಕದ ಬಹುಸೂಕ್ಷ್ಮ ಸಂವೇದನೆಯ ವರ್ತಮಾನದ ಕತೆಗಾರರಲ್ಲಿ ಪ್ರಮುಖರೆನಿಸಿದ ಜಯಂತ ಕಾಯ್ಕಿಣಿ ಯವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಕಥಾಸಂಕಲನವು ದಕ್ಷಿಣ ಏಷಿಯಾ ಸಾಹಿತ್ಯದ ಡಿಎಸ್ ಸಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾದದ್ದು ಎಲ್ಲರಿಗೂ ಗೊತ್ತೇ ಇದೆ.
ಕನ್ನಡಕ್ಕೆ, ಕನ್ನಡಿಗರಿಗೆ, ಸಾಹಿತ್ಯ ಲೋಕಕ್ಕೆ ಇದು ಬಹುದೊಡ್ಡ ಅಭಿಮಾನ ಮತ್ತು ಹೆಮ್ಮೆಯ ಸಂಗತಿಯೆಂಬುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ, ಈವರೆಗೂ ಸಮುದ್ರದಾಚೆಯಿಂದ ಕನ್ನಡಕ್ಕೆ ಬಂದ ಪ್ರಶಸ್ತಿಗಳೇ ಕಡಿಮೆ. ಜಯಂತಣ್ಣನ ವಿವಿಧ ಕಥಾ ಸಂಕಲನಗಳಲ್ಲಿರುವ ಮುಂಬೈ ಕತೆಗಳ ಸಂಕಲನವನ್ನು ತೇಜಸ್ವಿನಿ ನಿರಂಜನ ಅವರು ನೋ ಪ್ರೆಸೆಂಟ್ಸ್ ಪ್ಲೀಸ್ ಎಂದು ಇಂಗ್ಲಿಷಿಗೆ ಅನುವಾದಿಸಿದ್ದರು. ಈ ಆಂಗ್ಲ ಅನುವಾದ ಕೃತಿಗೇ ದೊಡ್ಡ ಪ್ರಶಸ್ತಿಯ ಗರಿ.
ಈ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಜಗತ್ತಿನಲ್ಲಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಳಿಯದ ಮೈಲಿಗಲ್ಲನ್ನೇ ಜಯಂತಣ್ಣ (ನಾನು ಅವರನ್ನು ಕರೆಯುವುದು ಹೀಗೆ) ಸೃಷ್ಟಿಸಿಬಿಟ್ಟರು. ಪ್ರಶಸ್ತಿ ಸಮಿತಿ ತೀರ್ಪುಗಾರರು ಜಯಂತರ ಕಥೆಗಳ
ಬಗ್ಗೆ ಅಭಿಪ್ರಾಯಪಟ್ಟದ್ದು ಹೀಗೆ: ಸುಸ್ಪಷ್ಟವಾಗಿದ್ದೂ ಆಂತರಿಕ ಸಂಘರ್ಷ ಗಳನ್ನುಳ್ಳ, ಚೈತನ್ಯಶಾಲಿಯಾಗಿದ್ದೂ ಏಕಾಂಗಿ ಯಾಗಿರುವ, ನಿತ್ಯದ ಸಮರಕ್ಕೆ ಸನ್ನದ್ಧನಾಗಿzಗಲೂ ಉದಾರ ಹೃದಯಿಯಾಗಿರುವ ಭೂಮಿಕೆ, ನಾವಿನ್ನೂ ನೋಡಿರದಂಥ ಮುಂಬೈ ‘ಇದು’.
ಅಭಿಲಾಷೆ ಮತ್ತು ಭಯ, ಸ್ವಪ್ನ ಮತ್ತು ಭಗ್ನಹೃದಯಗಳಿಂದಲೇ ಜೋಡಿಸಲ್ಪಟ್ಟ ಮುಂಬೈ. ಮಾಧ್ಯಮಗಳಲ್ಲಿ ಝಗಮಗ ಮೆರೆಯುವ, ಹಣದ ಥೈಲಿಗಳಲ್ಲಿ ಬಿರಿಯುವ, ಬಾಂದ್ರ, ಮಲಬಾರ ಹಿಲ್ಗಳ ಮುಂಬೈಯಲ್ಲ. ಅದರ ‘ಅಲ್ಟರ್ ಇಗೋ’ದಂತೆ, ಅದೃಶ್ಯವಾಗಿಯೇ ಇರುವ ಬೊರಿವಿಲಿ, ಮುಲುಂದಗಳ ಮುಂಬೈ ಇದು. ಕಾಯ್ಕಿಣಿ ನಚ್ಚುಗೆಯಿಂದ ರೂಪಿಸುವ ಮುಂಬೈಯ ಈ ಭಾವ ಚಿತ್ರಣಕ್ಕೆ ಸುದೀಪ್ತವಾದ ವಿವರಗಳು ಎಲ್ಲಿಂದ ಬರುತ್ತವೆ? ಹಿಡಿಸಲಾರದಷ್ಟು ಜನರನ್ನು ಒಡಲಲ್ಲಿಟ್ಟು ಸಾಕುವ
ಠಾಣೆಯ ಚಾಳ್ಗಳಿಂದ, ಉಕ್ಕಿ ಹರಿಯುವ ಮಹಿಮ್ನ ಕೊಳಚೆ ಧಾರಾವಿಯ ಧಾರೆಯಿಂದ, ನೀರವ ರಾತ್ರಿಗಳಲ್ಲಿ ಚೆಟ ನಡೆಸುವ
ಬೃಹತ್ ಸಿನೆಮಾ ಪೋಸ್ಟರುಗಳಿಂದ, ಹಠಾತ್ ಮತೀಯ ಗಲಭೆಯ ನಂತರದ ತ್ರಸ್ತ ನಿರ್ಜನ ಬೀದಿಗಳಿಂದ, ಇಡೀ ಶಹರವನ್ನೇ ತಮ್ಮ ಪುಟ್ಟ ಗ್ರೀಸ್ ಮೆತ್ತಿದ ಕೈಗಳಿಂದ ಎತ್ತಿಹಿಡಿದಿರುವ ಪುಟ್ಟ ಪೋರರಿಂದ, ಕೆಂಪು ಕೂಪಗಳಲ್ಲಿ ಉಬ್ಬೆಗೆ ಬಿದ್ದ ಯುವತಿಯಿಂದ!
ವಾಹ್… ಎಂಥಾ ಅದ್ಭುತ ವಿಮರ್ಶೆ ನೋಡಿ! ಜಯಂತಣ್ಣ ಹೆಣೆಯುವ ಕಥೆಗಳಲ್ಲಿರುವ ಮನುಷ್ಯ ಬದುಕಿನ ಸೂಕ್ಷ್ಮ ಸಂವೇದನೆ ಮತ್ತು ಅವರ ಸೃಷ್ಟಿಶೀಲ ಕೌಶಲವನ್ನು ಇಷ್ಟು ಪ್ರಭಾವಕಾರಿಯಾಗಿ, ಪರಿಣಾಮಕಾರಿಯಾಗಿ ಹೇಳಲು ಸಾಧ್ಯ ವಾಗುತ್ತ ದೆಂದಾದರೆ ಆ ಕಥೆಗಳಲ್ಲಿ ಇರುವ ಅದ್ಭುತವೇ ಸರಿ! ನನಗೆ ವಯಸ್ಸು ಅರವತ್ನಾಲ್ಕು ಈಗ. ಹೀಗಾಗಿ ಈ ಸಂದರ್ಭದಲ್ಲಿ
ಅಂಥದ್ದೇನೂ ರೋಮಾಂಚನ ಅನಿಸಲಿಲ್ಲ. ಆದರೆ, ಈ ಕೃತಿಗೆ ಬಹುಮಾನ ಕೊಡುವ ವಿಷಯದಲ್ಲಿ ಜ್ಯೂರಿಗಳು ಸರ್ವಾನುಮತ
ಹೊಂದಿದ್ದರಂತೆ. ಇದು ವಿಶೇಷವೆನಿಸಿತು.
ಮತ್ತೊಂದು ನನಗೆ ತುಂಬಾ ಹಂಬಲ್ ಅನಿಸಿದ್ದು ಏನೆಂದರೆ ಕೊನೆಗೆ ಬಹುಮಾನ ಪ್ರಕಟಿಸುವಾಗ ನಮ್ಮ ಬದುಕಿನ ದೃಷ್ಟಿಕೋನ ವನ್ನು ಮತ್ತು ಸಾಹಿತ್ಯ ಕೃತಿಗಳ ಕುರಿತಾದ ದೃಷ್ಟಿಕೋನವನ್ನು ಹಿಗ್ಗಿಸಿದ ಈ ಕೃತಿಗೆ ನಾವೆಲ್ಲರೂ ಋಣಿಯಾಗಿದ್ದೇವೆ ಎಂದು ದಕ್ಷಿಣ ಏಷಿಯಾ ಸಾಹಿತ್ಯದ ಡಿಎಸ್ ಸಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ತನ್ನ ಕೃತಿ ಭಾಜನ ವಾದಾಗ ಮೂರು ಸಲ ರಾಜ್ಯ ಪ್ರಶಸ್ತಿ,
ನಾಲ್ಕು ಸಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುಸುಮಾಗ್ರಜ ಪ್ರಶಸ್ತಿ, ಸಣ್ಣ ಕಥೆಗಳ ಸಂಗ್ರಹ ಪ್ರಶಸ್ತಿ, ರಾಷ್ಟ್ರೀಯ ಕಥಾ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ತುಮಕೂರು ವಿವಿಯ ಗೌರವ ಡಾಕ್ಟರೇಟ್, ಕರ್ಕಿ ವೆಂಕಟರಮಣ ಪ್ರಶಸ್ತಿ, ಫಿಲ್ಮಫೇರ್ ಪ್ರಶಸ್ತಿ, ನಾಕು ಸಲ ಅತ್ಯುತ್ತಮ ಪಟ್ಕಥಾ ಲೇಖಕ ಗೌರವವನ್ನು ಹೊಂದಿರುವ ಜಯಂತಣ್ಣ ಆಡಿದ ಸಮಷ್ಟಿ ಭಾವದ ಮಾತುಗಳು.
ಜಯಂತಣ್ಣನನ್ನು ನೋಡಿದಾಗ, ಅವರ ಮಾತುಗಳನ್ನು ಕೇಳುವಾಗ, ಅವರ ಕತೆಗಳನ್ನು ಓದುವಾಗಲೆ ಅವರಲ್ಲಿ ಸಹಜ ಸ್ವಭಾವವಾಗಿಯೇ ಇರುವ ಸೂಕ್ಷ್ಮಸಂವೇದನೆಯ ಮನಸು ಬಹುದೊಡ್ಡದೆನಿಸುತ್ತದೆ. ಇದು ಅವರೊಳಗಿನ ತಾಯೀಭಾವ. ಸ್ಥಾಯೀಭಾವ ಕೂಡ. ಜಯಂತಣ್ಣ ಇರುವುದೇ ಹೀಗೆ. ಇದನ್ನು ಜಯಂತಣ್ಣ ತನ್ನೊಳಗೆ ಅರೋಪಿಸಿ ಕೊಂಡಿದ್ದಲ್ಲ, ಆವಾಹಿಸಿ ಕೊಂಡದ್ದಲ್ಲ. ಸಹಜ ವಾಗಿಯೇ ಅವರೊಳಗೆ ಇರುವ ಇದು ಅವರ ಸೃಷ್ಟಿಶೀಲ ಬರಹದಲ್ಲೂ ಇಳಿಯುತ್ತದೆ. ಅಥವಾ
ಅವರಲ್ಲಿರುವ ಸೃಷ್ಟಿಶೀಲ ಗುಣವೇ ಹಾಗೆ ಸೃಜಿಸುತ್ತದೆಯೇನೋ!
ಅವರಲ್ಲಿರುವ ಸಾಹಿತ್ಯ ಸಂಸ್ಕಾರವೇ ಅಂಥಹುದು. ಹೌದು ಇದೇ ಸತ್ಯ. ಈ ಬಗೆಯ ಸೂಕ್ಷ್ಮ ಸಂವೇದನೆಯೆಂಬುದು ರಕ್ತದ ಬರುವಂಥದ್ದು, ವ್ಯಕ್ತಿಯೊಬ್ಬ ಬೆಳೆದು ಬಂದ ಪರಿಸರ, ವಾತಾವರಣವೂ ಸೂಕ್ಷ್ಮ ಸಂವೇದನೆಯನ್ನು ಬೆಳೆಸುತ್ತದೆ. ಜಯಂತಣ್ಣ ನಿಗೆ ಇವೆರಡೂ ಬದುಕಿನಲ್ಲಿ ಸೌಭಾಗ್ಯವೆಂಬಂತೆ ಒದಗಿ ಬಂದಿದೆಯೆಂದರೆ ಅಚ್ಚರಿ ಪಡಬೇಕಿಲ್ಲ! ಸಾಹಿತ್ಯದಲ್ಲಿ ಪ್ರಖ್ಯಾತ ವಿದ್ವಾಂಸರಾದ, ಕಡಲ ತೀರದ ಜ್ಞಾನಜ್ಯೋತಿಯೆನಿಸಿದ, ಪ್ರಮುಖ ಚಿಂತಕ, ವಿಚಾರವಾದಿಯಾದ ಇವರ ತಂದೆ ಗೌರೀಶ ಕಾಯ್ಕಿಣಿ ಯವರು ಮೃದುಮನಸ್ಸಿನ ಸಾತ್ವಿಕ ಕ್ರಾಂತಿಕಾರರು. ಶಂಭಾ, ಕಾರಂತ, ಬೇಂದ್ರೆ, ಮಾಸ್ತಿ, ಶ್ರೀರಂಗರೇ ಮೊದಲಾದವ ರಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಅವರು.
ಅವರದು ಹದಮಾಡಿಟ್ಟ ಕವಿಹೃದಯ. ಮಾನವೀಯ ಸಂವೇದನೆಗಳು ಸದಾ ಚೈತನ್ಯವಾಗೇ ಇರುವ ಆರ್ದ್ರ ಮನಸ್ಸು. ಆದ್ದರಿಂದ, ಕವಿಯೊಬ್ಬನಲ್ಲಿ ಇರಬೇಕಾದ, ಇರಬಹುದಾದ ಬದುಕಿನ ಕುರಿತಾದ ತಲ್ಲಣಗಳು ತಂದೆ ಯಿಂದಲೇ ಬಂದು ಜಯಂತಣ್ಣನಲ್ಲಿ ಮನೆಮಾಡಿವೆ. ಕವಿಯ ಹೃದಯ ಹದ ಮಾಡಿಟ್ಟ ಶ್ರುತಿಯಂತೆ ಎಂದವರು ಡಾ.ಪ್ರಭುಶಂಕರ. ತಾನು
ನೋಡುವ, ಗ್ರಹಿಸುವ, ಕಲ್ಪಿಸುವ, ಘ್ರಾಣಿಸುವ, ಅನುಭವಕ್ಕೆ ತಂದುಕೊಳ್ಳುವ ಯಾವುದನ್ನೂ ಕವಿಯಾಗಿ ನೋಡುವುದಕ್ಕಿಂತ ಹೆಚ್ಚಾಗಿ ಮನುಷ್ಯ ಸಂವೇದನೆಯ ನೆಲೆಯಲ್ಲಿ ನೋಡುವುದು ಜಯಂತಣ್ಣನ ಸ್ವಭಾವ.
ಇದು ಅವರೊಳಗಿನ ಸಹಜವಾದ ಚಿಂತನೆಯ ಪ್ರಕ್ರಿಯೆ. ಅವರಿರುವುದೇ ಹಾಗೆ. ಅಂತೆಯೇ ಅವರು ಬಾಹ್ಯ ಜಗತ್ತಿನಲ್ಲೂ
ತೆರೆದುಕೊಂಡವರು. ತಮ್ಮನ್ನು ಅಭಿವ್ಯಕ್ತಿಸಿ ಕೊಂಡವರು. ಜಯಂತಣ್ಣ ನಂಥವರ ನಿತ್ಯಬದುಕಿನ ಅಸ್ಮಿತೆಗೂ, ಅಸ್ತಿತ್ವಕ್ಕೂ, ಅವರ ಭಾವನೆಗೂ, ದುಡಿಮೆಗೂ, ನೋವು – ನಲಿವುಗಳಿಗೂ, ಅಂತರಂಗ ಮತ್ತು ಬಹಿರಂಗದ ಅಭಿವ್ಯಕ್ತಿಗೂ, ದುಃಖಕ್ಕೂ ಸುಖಕ್ಕೂ…ಹೀಗೆ ಯಾವುದರಲ್ಲೂ ಅನನ್ಯವಾದ ತಾದಾತ್ಮ್ಯವೆಂಬುದು ಸರಿಯಾಗಿ ಇರುವುದಲ್ಲ, ಸಹಜವಾಗಿಯೇ ಇರುವಂಥದ್ದು. ಉತ್ತರ ಕನ್ನಡದ ಆಡುಭಾಷೆಯನ್ನೇ ಮಾತಾಡು ಮಾರಾಯ ಎಂದು ಅವರು ನನಗೆ ಹೇಳುವಲ್ಲಿಯೂ
ಕನ್ನಡದ ವೈವಿಧ್ಯ ದಲ್ಲಿರುವ ದೇಸೀ ಗುಣವನ್ನು ಉಳಿಸಿ ಬಾಳಿಸಿಕೊಳ್ಳುವ ಯಾವುದೂ ಕೃತಕವಲ್ಲದೆ ಅವರಲ್ಲಿರುವ ನೈಜ ಅಭಿವ್ಯಕ್ತಿಯಾಗಿ ನನಗೆ ಕಂಡಿದೆ.
ತಾವಿರುವುದನ್ನೇ ಅಥವಾ ಹೀಗೆಯೇ ಇರಬೇಕೆಂದೂ ಬೀಸಾದ ಹರಹಿನ ಬಿಚ್ಚು ಮನಸ್ಸಿನ ದೊಡ್ಡ ಭಾವದಲ್ಲಿ ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತಾ ಬಾಳುವವರು ಇಂಥವರು. ಅದಕ್ಕಾಗಿ ಅವರು ಹೀಗೆ ಇದ್ದಾರೆ, ಹೀಗೆಯೇ ಇರುತ್ತಾರೆ. ಜಯಂತಣ್ಣ ಉತ್ತರ ಕನ್ನಡ ಜಿಯವರು. ಭಾವನಾತ್ಮಕ ವಾಗಿ ಈ ಜಿಲ್ಲೆಯ ಜನರು ಬಹುವಿಶಿಷ್ಟ ಮತ್ತು ವಿಭಿನ್ನ ಸ್ವಭಾವದವರು. ಮಾತ್ರವಲ್ಲ, ಇದು ಕರಾವಳಿಯ ವೈಶಿಷ್ಟ್ಯವೂ ವಿಭಿನ್ನವೂ ಅಹುದು.
ಈ ವೈಶಿಷ್ಟ್ಯವು ವಿಭಿನ್ನತೆಯು ಮಣ್ಣಿನ, ನೀರಿನ, ವಂಶವಾಹಿನಿಯಿಂದ ಬಂದದ್ದಿರಬೇಕು. ದಕ್ಷಿಣೋತ್ತರ ಕನ್ನಡ ಜಿಯ ಜನರು ಸಾಮಾನ್ಯರಲ್ಲಿ ಸಾಮಾನ್ಯರು; ಹಾಗೆ ಅಸಾಮಾನ್ಯರೂ ಕೂಡ. ಆಡುವ ಮಾತುಗಳಿಗೆ ಜೀವ ತುಂಬುವುದು ಅಥವಾ ಜೀವ ಬರುವುದು ಆಡುವವನ ಸೂಕ್ಷ್ಮ ಸಂವೇದನೆಯಿಂದ. ಈ ಪ್ರದೇಶದಿಂದ ಪ್ರವರ್ಧಮಾನಕ್ಕೆ ಬಂದು ಜನಪ್ರೀತಿ ಮತ್ತು ಜನಪ್ರಸಿದ್ಧಿ ಯನ್ನು ಪಡೆದ ಯಾರನ್ನೇ ಸೂಕ್ಷ್ಮವಾಗಿ ಅವಲೋಕಿಸಿದರೆ ಇಂಥ ಗಾಢ ಸಹಜ ಗುಣವೇ ಎದ್ದು ಕಾಣುತ್ತದೆ.
ನಾನಿರುವುದೇ ಹೀಗೆ, ನನ್ನನ್ನು ನಾನಿರು ವಂತೆಯೇ ಸ್ವೀಕರಿಸಬೇಕು, ಅಷ್ಟೇ ಅಲ್ಲ ಅನ್ಯವಾದದ್ದು ಅಂತ ಏನೇ ಇದ್ದರೂ ಹೇಗೇ ಇದ್ದರೂ ಅದನ್ನು ನಾನು ಸ್ವೀಕರಿಸುತ್ತೇನೆಂದು ಬಹುವೈಶಾಲ್ಯದ, ಔದಾರ್ಯದ ವ್ಯಾಪ್ತಿಯಲ್ಲಿ ಜೀವಿಸುವವರು ಇಲ್ಲಿಯ ಜನರು. ಇದು ಉತ್ಪ್ರೇಕ್ಷೆಯ ಮಾತಲ್ಲ. ಕನ್ನಡದ ಮಣ್ಣಿನ ಗುಣವೇ ಹಾಗೆ. ಈ ವಿಭಿನ್ನವಾದ ವಿಶಿಷ್ಟವಾದ ಗುಣಸ್ವಭಾವ ಅನ್ಯ ಸಂಸ್ಕೃತಿ ಮತ್ತು ಪರಂಪರೆಯಿಂದ ಪ್ರತ್ಯೇಕವಾಗಿರಿಸಿದೆ. ಕನ್ನಡ ನೆಲದ ಜೀವಂತಿಕೆಯೆಂದರೆ, ನೆಲದ ಸತ್ತ್ವ ವನ್ನು ಹೀರಿ, ಅದನ್ನೇ ಪ್ರೀತಿಸುತ್ತಾ ಆಕಾಶಕ್ಕೆ ಮುಖಮಾಡುವ ವೈಶಾಲ್ಯದ ಮನಸಲ್ಲೂ ದೇಸೀಯತೆಯೆಂಬುದು ಸದಾ ಚೈತನ್ಯದಾಯಿಯಾಗಿರುವುದು. ಕನ್ನಡದ ಕವಿ, ಲೇಖಕರನ್ನು ನೀವು ಸೂಕ್ಷ್ಮವಾಗಿ ಗಮನಿಸಿ ನೋಡಿ, ಈ ಮಾತುಗಳು ಹೆಚ್ಚು ಸ್ಪಷ್ಟವಾಗುತ್ತದೆ.
ಸಮೂಹವೊಂದು ಸ್ವೀಕರಿಸಬಹುದಾದ ಸಹನೀಯ ವೆನಿಸುವ ಗುಣೌದಾರ್ಯಗಳು ಜಯಂತಣ್ಣನಲ್ಲಿ ಯಥೇಚ್ಛ ವಾಗಿ ಹುಲುಸಾಗಿವೆ. ಯಾವುದನ್ನೂ ಮುಟ್ಟಿ ಮಿಡಿಸಬಲ್ಲ ಜಯಂತರ ಬರಹಗಳ ಕೇಂದ್ರ ಶಕ್ತಿ ಇರುವುದು – ಯಾರಿಗೂ ಕಾಣದ ವಿವರಗಳನ್ನು ಗ್ರಹಿಸುವಲ್ಲಿ. ಅವರ ಹಾಗೆ ಎಂಥ ಸಾಮಾನ್ಯದ ಸಂಗತಿಯನ್ನೂ ಸೂಕ್ಷ್ಮವಾದ ವಿನೋದದಲ್ಲಿ, ವಿಶಿಷ್ಟವಾದ ವಿವರಗಳಲ್ಲಿ, ಮಾಂತ್ರಿಕ ಸ್ಪರ್ಶ ಕೊಟ್ಟು ಹೇಳಬಲ್ಲ ಲೇಖಕರು ಕನ್ನಡದಲ್ಲಿಲ್ಲ.
ಹಂಚಿಕೊಳ್ಳುವ ಖುಷಿಯನ್ನು ಉಳಿಸಿ ಕೊಂಡಿದ್ದರಿಂದಲೇ, ಲೇಖಕನೆಂಬ ಅಹಂಕಾರ ಅವರನ್ನು ಬಾಧಿಸದೆ, ತಮ್ಮ ಬೆರಗನ್ನು, ಕಾಣ್ಕೆ ಯನ್ನು ಮತ್ತೆಮತ್ತೆ ನಿರಾಯಾಸವಾಗಿ ಹೇಳಬಲ್ಲ ಸಾಮರ್ಥ್ಯ ಅವರಿಗೆ ಒದಗಿ ಬಂದಿದೆ – ಇದು ಕನ್ನಡದ ಇನ್ನೋರ್ವ
ಕಥೆಗಾರ ವಿವೇಕ ಶಾನಭಾಗರು ಜಯಂತಣ್ಣನ ಬಗ್ಗೆ ಹೇಳಿದ್ದು. ತನ್ನ ಕಣ್ಣಿಗೆ ಕಂಡುದ್ದನ್ನು, ಬಿದ್ದುದ್ದನ್ನು ಗ್ರಹಿಸದೆ, ದಕ್ಕಿಸಿ ಕೊಳ್ಳದೆ, ಹಾಗೆ ದಕ್ಕಿಸಿಕೊಂಡಿದ್ದನ್ನು ಅನುಭವಿಸದೆ, ತನ್ನ ಬದುಕಿಗೂ ಬರೆಹಕ್ಕೂ ಒದಗುವಂತೆ ಮಾಡಿಕೊಳ್ಳದೆ ಜಯಂತಣ್ಣ ಸುಮ್ಮನಿರಲಾರ.
ಜಯಂತಣ್ಣನ ಕತೆಗಳನ್ನು, ಮಾತುಗಳನ್ನು, ಸಿನೆಮಾ ಪದ್ಯಾವಲಿಗಳನ್ನು ಗ್ರಹಿಸಿದರೆ ಅವರ ಈ ಬಗೆಯ ಸೂಕ್ಷ್ಮತೆಯ ತಾಕತ್ತಿನ ಅರಿವಾಗುತ್ತದೆ. ಜಯಂತಣ್ಣ ನಂಥ ಕವಿಗೆ ಕವಿಹೃದಯದ ಮನುಷ್ಯನಿಗೆ ತನ್ನ ಸುತ್ತಮುತ್ತಲ ಯಾವುದನ್ನೂ ಹೊರತಾಗಿ ಬದುಕಲು ಸಾಧ್ಯವಿಲ್ಲವೇನೋ! Of course ಹೊಲಸು ರಾಜಕೀಯ ವನ್ನು ಬಿಟ್ಟು. ತಾನು ಅನುಭವಿಸಿದ್ದನ್ನೇ ಜಯಂತಣ್ಣ ಬರೆಯುತ್ತಾರೆಯೇ ವಿನಾ ಕಾಲ್ಪನಿಕ ವಾಗಿ ಅಲ್ಲವೆಂಬುದು ಎಂಥ ವನಿಗೂ ಅನಿಸುವುದು. ಹಾಗೆ ಬರೆಯುವಾಗಲೂ ಆ ಅನುಭವಗಳು ಅವರಲ್ಲಿ ಗಾಢವಾಗಿರಲೇಬೇಕು.
ಅನುಭವವೇ ಇಲ್ಲದೆ ಎಲ್ಲರದಲ್ಲೂ ಕಲ್ಪನೆ ಅಸಾಧ್ಯದ ಮಾತು. ಸಾಧ್ಯವಾಗದು ಕೂಡ. ಮರಳಿನ ಕಣದಲ್ಲೂ ವಿಶ್ವವನ್ನೇ ಕಾಣುವ ಕಾವ್ಯದ ಶಕ್ತಿಯಿರುವುದು ಈ ಬಗೆಯ ದಕ್ಕಿಸಿಕೊಂಡ ಅನುಭವಗಳಲ್ಲಿ. ಕನ್ನಡದ ಸಾರಸ್ವತ ಲೋಕದಲ್ಲಿ ಹೀಗೆ ತಾನು ದಕ್ಕಿಸಿಕೊಂಡ ಅನುಭವ ಗಳನ್ನು ಓದುಗರ ಅನುಭವಗಳನ್ನಾಗಿಸಿದ ಅನೇಕ ಕವಿಗಳಲ್ಲಿ ಜಯಂತಣ್ಣನೂ ಒಬ್ಬರು ಎಂಬುದು ನಮ್ಮ ಕಾಲದ ಹೆಮ್ಮೆ. ನವ್ಯ- ನವೋತ್ತರದ ಸಮ್ಮಿಲನ ನಮ್ಮ ಜಯಂತಣ್ಣ.
ಜಯಂತಣ್ಣನ ಕಥೆಗಳೂ ಈ ಬಗೆಯ ರಚಿತಗೊಂಡವು ಎಂಬುದನ್ನು ವಿವರಿಸಿ ಹೇಳುವ ಅಗತ್ಯವಿಲ್ಲ. ಮಹಾನಗರದ ಸರಳಜೀವಿಗಳಲ್ಲಿ ಉಸಿರಾಡುತ್ತಿರುವ ‘ಸೈಲೆಂಟ್ ಹಿರೋಯಿಸಂ’ ಅನ್ನು ಜಯಂತರ ಕತೆ ಉತ್ಸಾಹದಿಂದ ಆಚರಿಸುತ್ತದೆ ಎಂದು ಹಿರಿಯರಾದ ಎಚ್.ವೈ. ಶಾರದಾ ಪ್ರಸಾದರು ಬರೆಯುತ್ತಾರೆ.
ಕನ್ನಡ ಸಾಹಿತ್ಯದಲ್ಲಿ ನರಸಿಂಹ ಸ್ವಾಮಿಯವರನ್ನು ಪ್ರೇಮಕವಿ ಯೆಂದೇ ಅಭಿದಾನಿಸಲಾಗಿದೆ. ಜಯಂತಣ್ಣನ ಪ್ರೀತಿಯ ಹಾಡುಗಳನ್ನು ಕೇಳಿದವರಿಗೆ ಇವರೂ ಪ್ರೇಮಕವಿ ಯೆಂದು ಅನಿಸದಿರದು. ಯಾಕೆಂದರೆ ಕೆಎಸ್ಎನ್ ಅವರ ಕಾವ್ಯಸ್ವಾರಸ್ಯಕ್ಕೆ ಮನಸೋಲದ ಕನ್ನಡಿಗರಿಲ್ಲ. ಜಯಂತಣ್ಣನ ಸಿನೆಮಾ ಹಾಡುಗಳಿಗೆ ಮರುಳಾಗದ ಕನ್ನಡಿಗರು ಕಡಿಮೆ. ಜಯಂತಣ್ಣ ಬರೆದ ಸಿನೆಮಾ ಹಾಡುಗಳು ಕೂಡ ಸಾಹಿತ್ಯದ ಛಂದದ ಬಂಧವಿಲ್ಲದೆ ರಚನೆಯಾಗಿಲ್ಲ.
ಗಮನಾರ್ಹ ವೆಂದರೆ, ಜಯಂತಣ್ಣ ಈ ತಲೆಮಾರಿನ ಕನ್ನಡಿಗರ ಮನವನ್ನು ಗೆದ್ದದ್ದು ಮುಖ್ಯವಾಗಿ ಸಿನೆಮಾ ಹಾಡುಗಳಿಂದ. ಅನಂತರದಲ್ಲಿ ತಮ್ಮ ಕತೆಗಳಿಂದ. ಜಯಂತಣ್ಣ ಬಲುದೊಡ್ಡ ಭಾವಜೀವಿ. ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ
ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಹೇಳಬಲ್ಲ ಸೂಕ್ಷ್ಮ ಕಲೆಗಾರ – ಎಂಬ ರವಿ ಬೆಳಗೆರೆಯವರ ಮಾತು ಜಯಂತಣ್ಣನ ಅದ್ಭುತ ಸೂಕ್ಷ್ಮ ಸಂವೇದನೆಯನ್ನು ಹೇಳುತ್ತದೆ.
ಉತ್ತರ ಕನ್ನಡದ ಗೋಕರ್ಣದಲ್ಲಿ ಹುಟ್ಟಿ ಬೆಳೆದು, ಆರಂಭದ ಶಿಕ್ಷಣ ವನ್ನು ಗೋಕರ್ಣದಲ್ಲಿಯೂ, ಕುಮಟಾದ ಡಾ. ಬಾಳಿಗಾ ಕಾಲೇಜಿಂದ ಬಿಎಸ್ಸಿ, ಧಾರವಾಡದಲ್ಲಿ ಬಯೋಕೆಮೆಸ್ಟ್ರಿಯಲ್ಲಿ ಎಂಎಸ್ಸಿ ಪದವಿ ಗಳಿಸಿ, ಉದ್ಯೋಗಕ್ಕಾಗಿ ೨೩ ವರ್ಷ ಮುಂಬಯಿಯ ಪ್ರಸಿದ್ಧ ಕಂಪನಿಗಳಲ್ಲಿ ಬಯೋ ಕೆಮಿಸ್ಟ್ ಆಗಿ ದುಡಿದು ಮತ್ತೆ ಈ ನೆಲಕ್ಕೇ ಬಂದು ಸದ್ಯ ಬೆಂಗಳೂರಲ್ಲಿ ವಾಸವಾಗಿರುವ ಜಯಂತಣ್ಣ ಅಂದರೆ ಸಿನೆಮಾ ಹಾಡುಗಳನ್ನು ಬರೆವ ಚಿತ್ರಗೀತೆ ರಚನಾಕಾರ ಎಂದೇ ಬಹುಜನರಿಗೆ
ಗೊತ್ತಿರುವಂಥದ್ದು.
ಯಾಕೆಂದರೆ, ಅವರನ್ನು ಸೃಜನಶೀಲ ಕವಿಯಾಗಿ ನೋಡುವುದು ಒಂದು ಮುಖವಾದರೆ, ಸಿನೆಮಾಕ್ಕೆ ಅವರು ಬರೆದ ಹಾಡುಗಳ ಮೂಲಕ ನೋಡುವುದು ಇನ್ನೊಂದು ಮುಖ. ಸೃಜನಶೀಲ ಮನಸ್ಸು ಅಥವಾ ಸೃಷ್ಟಿಶೀಲ ಮನಸ್ಸೊಂದು ಚಿಂತಿಸುವ, ಧೇನಿಸುವ ಬಗೆಯಲ್ಲಿ ವ್ಯತ್ಯಯಗಳೇನೇ ಇದ್ದರೂ ಅವು ತಾಯೀಭಾವ ಆಗಿರುತ್ತದೆ.
Basically you are thought ಎನ್ನುತ್ತಾರೆ ಓಶೋ ರಜನೀಶ್. ಜಯಂತಣ್ಣನ ನೋಡಿದಾಗ ಈ ಮಾತು ಸತ್ಯವೆನಿಸುತ್ತದೆ. ‘ನಿಮ್ಮನ್ನು ನೀವು ಬರೆದ, ಜನರ ಬಾಯಲ್ಲಿ ಸದಾ ಗುನುಗುತ್ತಿರುವ ಸಿನೆಮಾ ಹಾಡುಗಳ ಮೂಲಕ ಜನ ಗುರುತಿಸುವಂತಾಗಿದೆ. ಆದ್ದರಿಂದ ನಿಮ್ಮನ್ನು ಹಾಗೆ ಪರಿಚಯಿಸುವುದೇ ಒಳ್ಳೆಯದಲ್ವಾ’ ಅಂತ ನಾನೊಮ್ಮೆ ಕೇಳಿದ್ದೆ. ‘ಬೇಡ…ಬೇಡ. ಮೂಲತ ನಾನೊಬ್ಬ ಕವಿ. ನನ್ನನ್ನು ಆ ಮೂಲಕವೇ ಜನ ಕಾಣಬೇಕು.
ಇಲ್ಲವಾದಲ್ಲಿ ಇಷ್ಟು ವರ್ಷಗಳ ಸಾಹಿತ್ಯಸೇವೆಯಲ್ಲಿ ನಾನು ಮಣ್ಣುಹೊತ್ತಿದ್ದು ವ್ಯರ್ಥವಾಗಿ ಬಿಡುತ್ತದೆ’ ಅಂತ ಅವರು ಹೇಳಿದ ಮಾತು ನನಗಿನ್ನೂ ನೆನಪಿದೆ. ಸಿನೆಮಾಕ್ಕೆ ಬರೆದ ಹಾಡುಗಳು ಸಿನೆಮಾಕ್ಕೆ ಮಾತ್ರ. ಆದರೆ, ಸಾಹಿತ್ಯದಲ್ಲಿ ಬರೆದ ಹಾಡುಗಳು ಚಿರಂತನ. ಸಿನೆಮಾ ಹಾಡು ಯಾವತ್ತೂ ಒಂದು ಸಂಯುಕ್ತ ಕಲಾಪ. ಹೀಗಾಗಿ ಈ ಹಾಡುಗಳ ಶ್ರೇಯಸ್ಸು, ಆವರಣ ಕಲ್ಪಿಸಿದ
ಚಿತ್ರನಿರ್ದೇಶಕರಿಗೆ, ನುಡಿಸಿದ ವಾದ್ಯವೃಂದದವರಿಗೆ, ಧ್ವನಿಮುದ್ರಿಸಿದ ಮತ್ತು ಚಿತ್ರೀಕರಿಸಿದ ತಂತ್ರಜ್ಞರಿಗೆ ಸಲ್ಲುತ್ತದೆಂಬ ಅವರ ಈ ಮಾತು ಕೂಡ ತಾನೊಬ್ಬ ಸಾಹಿತಿಯಾಗಿ ಇರುವುದಕ್ಕೇ ಹಂಬಲಿಸಿದಂತೆ ಕಾಣುತ್ತದೆ. ಮತ್ತು ತನ್ನ ಯಶಸ್ಸಿನಲ್ಲಿ ಎಲ್ಲರ ಶ್ರಮವನ್ನೂ ಗುರುತಿಸುವ ಗುಣೌದಾರ್ಯ, ಗುಣಗ್ರಾಹಿತ್ವವನ್ನು ತೋರುತ್ತದೆ.
ಸಾಹಿತ್ಯದಿಂದಲೇ ಹುಟ್ಟುವ ಸಾಹಿತ್ಯ ಗಟ್ಟಿಯಾಗುವುದಿಲ್ಲ. ಬದುಕಿನಿಂದ, ಬದುಕಿನ ಕರುಣೆಯಿಂದ ಹುಟ್ಟುವ ಸಾಹಿತ್ಯ ಹೆಚ್ಚು
ಸ್ಪಂದನಶೀಲವಾಗಿರುತ್ತದೆ. ಇದು ಜಯಂತಣ್ಣನದೇ ಮಾತು. ಅಂದಹಾಗೆ ಯಾವ ರೂಪಕಗಳೂ ಇಲ್ಲದೆ ಜಯಂತಣ್ಣನ ಕತೆಗಳು
ಇರುವುದಿಲ್ಲ. ಮಹಾನಗರದ ಸರಳಜೀವಿಗಳಲ್ಲಿ ಉಸಿರಾಡುತ್ತಿರುವ ಸೈಲೆಂಟ್ ಹಿರೋಯಿಸಂ’ ಅನ್ನು ಜಯಂತರ ಕತೆ ಉತ್ಸಾಹ ದಿಂದ ಆಚರಿಸುತ್ತದೆ ಎಂದು ಹೇಳಿದವರು ಎಚ್.ವೈ. ಶಾರದಾಪ್ರಸಾದರು.
ಎಲ್ಲೂ ಏರುದನಿಯಿಲ್ಲದ, ಬದುಕಿನ ಎಲ್ಲ ಕ್ಷುದ್ರತೆಗಳ ಅರಿವಿರುವ ಮತ್ತು ಹಾಗಿದ್ದೂ ಅಂತಹ ಬದುಕನ್ನು ತುಸುವಾದರೂ ಹಸನು ಗೊಳಿಸಲು ಪ್ರಯತ್ನಿಸುವ ಪ್ರೇಮಲ ಮನಸ್ಸು ಜಯಂತರ ಆಳದಲ್ಲಿ ಕ್ರಿಯಾಶೀಲವಾಗಿದೆ ಎಂದು ಅವರ ಕತೆಗಳ ಬಗ್ಗೆ ವಿಮರ್ಶಿಸಿದವರು ಡಾ.ಸಿ.ಎನ್.ರಾಮಚಂದ್ರ.
ಕೊನೆಯ ಮಾತು: ಸಾಹಿತಿಯಾಗಿ ಜಯಂತಣ್ಣನಿಗೂ, ಚಿತ್ರಸಾಹಿತಿಯಾಗಿ ಜಯಂತಣ್ಣನಿಗೂ ಹಾಡುಹೊಸೆವ ರೀತಿಯಲ್ಲಿ
ವಸ್ತುನಿಷ್ಠತೆಯನ್ನು ಬಿಟ್ಟರೆ ಸಂವೇದನೆಗಳ ಅಭಿವ್ಯಕ್ತಿಯಲ್ಲಿ ಅಂಥಾ ವ್ಯತ್ಯಾಸವೇನೂ ಕಾಣುವುದಿಲ್ಲ. ಸಾಹಿತಿಯಾಗಿ ಬರೆದುದಕ್ಕೆ ಅಥವಾ ಬರೆಯುವುದಕ್ಕೆ ಸ್ವೇಚ್ಛೆಯೂ ಕವಿಗೆ ಸ್ವಾತಂತ್ರ್ಯವಾಗಿ ಒದಗುತ್ತದೆ. ಚಿತ್ರಸಾಹಿತಿಯಾಗಿ ಬರೆಯುವಾಗ ಚಿತ್ರಕಥೆಯ ಓಘಕ್ಕೆ ಬದ್ಧವಾಗಿದ್ದೇ ಬರೆಯಬೇಕಾದ ಬಂಧವಿರುತ್ತದೆ. ಈ ಬಂಧವೆಂಬುದು ಕವಿಯ ಮಾನಸಿಕ ಮತ್ತು ಭಾವನಾತ್ಮಕ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಎಂಬುದು ನನ್ನ ಭಾವನೆ.
ನಾನು ಬರೆಯಬೇಕು ಎಂದರೆ, ನಾನು ನಾನಾಗಿಯೇ ಬರೆಯಬೇಕು, ಬೇರೆಯವರು ನನ್ನ ಬರೆಯುವ ಸ್ವಾತಂತ್ರ್ಯದ ಮೇಲೆ ಸ್ವಾಮ್ಯವನ್ನು ಹೊಂದುವುದು ಕವಿಗಳಿಗೆ ಒಗ್ಗದ್ದು. ಆದ್ದರಿಂದ ಜಯಂತಣ್ಣನನ್ನು ಶ್ರೀಮಂತ ಭಾಷೆಯಾದ ಕನ್ನಡ ಸಾರಸ್ವತ
ಲೋಕದ ಕವಿ, ಕತೆಗಾರರೆಂದೇ ಗುರುತಿಸಬೇಕು. ಅದೇ ಸರಿಯೂ, ಸೂಕ್ತವೂ, ಸಮರ್ಪಕವೂ ಅಹುದು.