ಮದುವೆಯಾಗುವ ವಯಸ್ಸಿನಲ್ಲಿ ಆ ಒಂದು ಶುಭ ಕಾರ್ಯ ಮುಗಿದರೆ, ಪೋಷಕರಿಗೂ ನೆಮ್ಮದಿ, ಮದುವೆಯಾದವ ರಿಗೂ ಸಂತಸ. ಆದರೆ ಕಾರಣಾಂತರಗಳಿಂದ ಕೆಲವರ ಮದುವೆ ಮುಂದೆ ಹೋಗುತ್ತಲೇ ಇರುತ್ತದೆ. ಇಂತಹ ಸಂದರ್ಭ ಗಳಲ್ಲಿ, ವಧು ವರರ ಸಮಾವೇಶವು ಸಹಕಾರಿ ಎನಿಸಬಲ್ಲದು; ಪರಸ್ಪರ ಪರಿಚಯ ಮಾಡಿಸಿ, ವಿವಾಹ ಸಂಬಂಧಕ್ಕೆೆ ಬುನಾದಿ ಹಾಡಬಲ್ಲದು.
ರಂಗನಾಥ ಎನ್ ವಾಲ್ಮೀಕಿ
ಆತ ನೋಡಲು ಸ್ಪರದ್ರೂಪಿ. ತುಂಬಾ ಓದಿಕೊಂಡಿದ್ದಾನೆ. ಬದುಕಲ್ಲಿ ನೆಲೆ ಯೂ ನಿಂತಿದ್ದಾನೆ. ಆತನ ಪಾಲಕರಿಗೆ ಅವನ ಮದುವೆ ಮಾಡಿದರೆ ಅವರ ಬದುಕಿನ ಬಹು ದೊಡ್ಡ ಜವಾಬ್ದಾರಿ ಮುಗಿದಂತೆ. ಆದರೆ ಆತ ಹಲವಾರು ಕಡೆ ಹುಡುಗಿಯನ್ನು ನೋಡಿಬಂದರೂ ಕೂಡಾ ವಿದ್ಯಾರ್ಹತೆ, ವಯಸ್ಸು, ಮನೆಯ ಪರಿಸ್ಥಿತಿ, ಮನೆಯವರ ಅಭಿಪ್ರಾಯ ಹೀಗೆ ಅನೇಕ ಭಿನ್ನಾಭಿಪ್ರಾಯಗಳಿಂದ ಕಂಕಣ ಬಲ ಕೂಡಿ ಬರುತ್ತಿಲ್ಲ.
ಅವರ ತಂದೆ ತಾಯಿಗೆ ವೃದ್ಯಾಪ್ಯದಲ್ಲಿ ಅದೇ ಚಿಂತೆ…ಎಲ್ಲವೂ ಇದ್ದು ನನಗೇಕೆ ಸೂಕ್ತ ವಧು ಸಿಗುತ್ತಿಲ್ಲ ಎಂಬುದು ವರನ ಚಿಂತೆ. ಈ ಸ್ಥಿತಿ ಹಲವಾರು ಕುಟುಂಬಗಳಲ್ಲಿ ವಧುವಿಗೂ ಅನ್ವಯ. ಎಂತೆಂತವರಿಗೆ ವಿವಾಹ ಭಾಗ್ಯ ಕೂಡಿ ಬರುವುದು..ಇಷ್ಟು ಕೆಲವರಿಗೆ ಅದು ಅಷ್ಟು ಬೇಗ ಒಲಿಯದು. ಇವುಗಳನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ವಧು ವರರ ಅನ್ವೇಷಣೆಗೆ ಸಮ್ಮೇಳನಗಳು ಸಹಕಾರಿ ಅಂತಲೇ ಹೇಳಬಹುದು.
ವಿವಾಹ ಎನ್ನುವುದು ಸ್ವರ್ಗದಲ್ಲಿ ನಿಶ್ಚರ್ಯವಾಗಿರುತ್ತದೆ ಎನ್ನುತ್ತಾರೆ. ಯಾರು ಯಾರನ್ನು ವಿವಾಹವಾಗಬೇಕು ಎನ್ನುವುದು
ಪೂರ್ವ ನಿಯೋಜಿತ. ನಮ್ಮ ಪ್ರಯತ್ನಗಳು ನೆಪ ಮಾತ್ರ ಎಂದು ಒಂದು ವರ್ಗದವರು ಹೇಳುವರು. ಅದು ಸತ್ಯ ಮಿಥ್ಯನೋ ಎಂದು ತಿಳಿಯುವುದಕ್ಕಿಂತ ಅನೇಕ ಕಾರಣಗಳಿಂದ ವಿವಾಹ ಭಾಗ್ಯ ಕೂಡಿ ಬರದಿದ್ದಾಗ ಈ ಮೇಲಿನ ಮಾತು ಹೌದು ಅನಿಸು ವುದು. ಒಂದಂತೂ ಸತ್ಯ. ಸಾಮಾನ್ಯ ವ್ಯಕ್ತಿಗಳ ಬದುಕಿನಲ್ಲಿ ವಿವಾಹಕ್ಕೆ ಅಗ್ರಗಣ್ಯ ಸ್ಥಾನ.
ಬದುಕು ಪೂರ್ಣವಾಗಬೇಕಾದರೆ ವಿವಾಹ ಆಗಿಬೇಕು. ಮದುವೆ, ಸಂಸಾರ, ಮಕ್ಕಳು, ಜವಾಬ್ದಾರಿ, ಕನಸು ಇವೆಲ್ಲವೂ ಸಹಜ ವಾದವುಗಳೆ. ಬದುಕು ಪರಿಪೂರ್ಣ ಆಗಬೇಕೆನಿಸಿದರೆ ವಿವಾಹ ಭಾಗ್ಯ ಪ್ರಾಪ್ತಿಯಾಗಲೇಬೇಕು ಎಂಬ ವಿಚಾರ ಹಲವರದು.
ಕೆಲವೇ ಕೇಲವರ ಬದುಕಿನಲ್ಲಿ ಮದುವೆ ಮುಖ್ಯವಲ್ಲ ಅದಕ್ಕಿಂತ ಮಿಗಿಲಾದುದು ಸಾಧನೆ ಮಾಡುವುದು ಎನ್ನುವರು…ಇನ್ನು
ಹಲವರು ಸಂಸಾರ ಬಂಡಿ ಎಳೆಯುತ್ತಾ ಸಾಧನಾ ಪಥದಲ್ಲಿ ಸಾಗಬೇಕೆನ್ನುವರು.
ಇಲ್ಲಿ ಮುಖ್ಯವಾಗಿ ಮಧ್ಯಮ ವರ್ಗ, ಸಾಮಾನ್ಯರನ್ನು ಗಮನಿಸಿದಾಗ ವಿವಾಹಕ್ಕೆ ಅಗ್ರಗಣ್ಯ ಸ್ಥಾನ. ವೈಯಕ್ತಿಕ ಬದುಕಿನ ಅತಿ ಸಂತಸದ ಕ್ಷಣ ಅದೇ. ಆದರೆ ವಿವಾಹ ಭಾಗ್ಯ ಎನ್ನುವುದು ಕೇಲವರಿಗೆ ಲಾಟರಿ ಹೊಡೆದಂತೆ. ನೋಡಿದ ಒಂದೆರಡು ಹುಡುಗ- ಹುಡುಗಿಯರಲ್ಲಿ ಪರಸ್ಪರ ಇಷ್ಟ ಆಗಿ ಹಿರಿಯರು ಒಪ್ಪಿ ಮದುವೆಯಾಗಿ ಬಿಡುವರು. ಆದರೆ ಇನ್ನು ಕೆಲವರಿಗೆ ಸಾಕಷ್ಟು ಪ್ರಸ್ತಾಪ ಗಳು ಬಂದರೂ ನಾನಾ ಕಾರಣಗಳಿಂದ ಬಹುದಿನದ ತನಕ ಕೆಲಸ ಆಗುವುದೇ ಇಲ್ಲ. ಪುರುಷರು ಸ್ವಲ್ಪ ವಯಸ್ಸಾದರೂ ನಡೆಯುತ್ತೆ ಎನ್ನುವ ಭಾವ.
ಮಹಿಳೆಯರಿಗೆ ನಿಗದಿತ ವಯಸ್ಸಿನಲ್ಲಿ ಮದುವೆ ಆದರೆ ಅವರಿಗೂ ಮನೆ ಮಂದಿಗೆ ಸಂತಸ. ಮನೆ ಮಂದಿ ಎಲ್ಲರೂ ಸೇರಿ ಸಾಕಷ್ಟು ಕಡೆ ವಧು ವರರನ್ನು ನೋಡಿದರೂ ಹೊಂದಾಣಿಕೆ ಆಗದೇ ಇದ್ದರೆ ಅವರ ಬೇಸರ ಅಷ್ಟಿಷ್ಟಲ್ಲ. ಮನೆಯ ಯಜಮಾನಿಕೆ ಹೊರುವವರಿಗೆ ಮತ್ತಷ್ಟು ಚಿಂತೆ.
ಹದಿನೆಂಟಕ್ಕೇ ಮದುವೆ
ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಧುವಿನ ವಯಸ್ಸು 18 ತುಂಬುವುದೇ ತಡ, ಸೂಕ್ತ ವರನ ಅನ್ವೇಷಣೆಗೆ ತೊಡಗುವರು. ಓದು, ನೌಕರಿ, ವಿವಾಹ, ಮಕ್ಕಳು, ಮನೆ ಇತ್ಯಾದಿ ಆಯಾ ಹಂತದಲ್ಲಿ ಆದರೆ ಬಲು ಚೆನ್ನ. ಇದು ಕೂಡಿ ಬರದೇ, ದಿನಗಳು ಮುಂದೆ ಹೋಗುತ್ತಲೇ ಇದ್ದರೆ, ಅದರಿಂದ ತುಸು ಬೇಸರ.
ಇತ್ತೀಚಿಗೆ ಹಲವು ಕಡೆ ಜನರು ಸೇರಿ, ವಧು ವರರ ಸಮ್ಮೇಳನ ಆಯೋಜಿಸುವುದು ಆಶಾದಾಯಕ ಬೆಳವಣಿಗೆ. ಮುಂಚಿತವಾಗಿ ಇಂತಹ ದಿನ ಸಮ್ಮೇಳನ ಎಂದು ಘೋಷಿಸಿ, ಪೋಷಕರು ಮತ್ತು ವಧು ವರರನ್ನು ಬರಲು ಹೇಳುವರು. ಪರಸ್ಪರ ನೋಡಿ, ಇತರ
ವಿವಿರಗಳನ್ನು ಪರಿಶೀಲಿಸಿ, ವಧು ವರರನ್ನು ಆಯ್ಕೆ ಮಾಡಿಕೊಳ್ಳುವ ಈ ಪ್ರಕ್ರಿಯೆ ಬಹುಪಾಲು ಅರ್ಥಪೂರ್ಣ.
ಆದರೆ ಇದು ಸ್ವಾರ್ಥರಹಿತವಾಗಿ ಸಮಾಜಕ್ಕೆ, ಸಮಾಜದ ವಧು ವರರಿಗೆ ಅನುಕೂಲವಾಗಲಿ ಎಂಬ ಸದ್ದುದ್ದೇಶ ಮಾತ್ರ
ಹೊಂದಿರಬೇಕು. ವಧು ವರರನ್ನು ಪರಸ್ಪರ ಪರಿಚಯಿಸುವ ವೃತ್ತಿಯನ್ನು ಮಾಡಿಕೊಂಡಿರುವವರನ್ನು ಇಂತಹ ಸಮಾವೇಶ ಗಳಿಂದ ದೂರ ಇಟ್ಟರೆ ಉತ್ತಮ. ವಧು ವರರ ಸಮ್ಮೇಳನದಲ್ಲಿ ಮೊದಲೇ ಆಸಕ್ತ ವಧು ವರರಿಂದ ಭಾವಚಿತ್ರ, ಬಯೋಡಾಟಾ ಸಂಗ್ರಹಿಸಿ ನಿಗದಿತ ದಿನದಂದು ಎಲ್ಲರನ್ನು ಕರೆಸಿ ಒಂದು ಸಮ್ಮೇಳನ ಮಾಡಿ.
ಸಂಗ್ರಹಿಸಿದ ಪ್ರೋಫೈಲ್, ಭಾವಚಿತ್ರ ತೋರಿಸುವರು. ವಧು ವರರು ಬಂದಿದ್ದರೆ ನೇರವಾಗಿ ತಮ್ಮನ್ನು ತಾವೇ ಪರಿಚಯಿಸಿ ಕೊಳ್ಳುವರು. ಪರಸ್ಪರ ದೂರವಾಣಿ ಮೂಲಕ ತಾವೇ ಕುಟುಂಬದವರು ಮಾತಾಡಿಕೊಂಡು ಮುಂದುವರೆಯುವರು. ವಧು ವರರ ಸಮ್ಮೇಳನದಿಂದ ಎಲ್ಲರಿಗೂ ಮದುವೆ ಭಾಗ್ಯ ಕೂಡಿ ಬಂದೇ ಬಿಡುತ್ತದೆ ಅಂತಲ್ಲಾ. ಭಾಗವಹಿಸಿದ ಕೆಲವರಿಗೆ ಆ ಭಾಗ್ಯ ಸಿಗುವುದು ಎಂಬುದು ಸಂಘಟಕರ ಅಶಯ. ಜತೆಗೆ, ಅಕಸ್ಮಾತ್ ಅಲ್ಲಿ ಮದುವೆ ಭಾಗ್ಯ ಕೂಡಿ ಬಾರದೇ ಇದ್ದರೂ, ಆ ಪರಿಚಯವು ಮುಂದೊಂದು ದಿನ ಮತ್ತೊಂದು ಉತ್ತಮ ಬಾಂಧವ್ಯಕ್ಕೆ ನಾಂದಿ ಹಾಡಬಲ್ಲದು.
ಹೀಗಾಗಿ ಇತ್ತೀಚಿಗೆ ನಡೆಯುತ್ತಿರುವ ವಧು ವರರ ಸಮ್ಮೇಳನಗಳು ಒಂದು ಮಟ್ಟದಲ್ಲಿ ಸಾಕಷ್ಟು ಸಹಕಾರಿ ಎಂದೆನ್ನಬಹುದು. ಈ ಮೂಲಕ ಇದನ್ನು ನಡೆಸುವುದು ಒಂದು ಪುಣ್ಯದ ಕಾರ್ಯವೇ ಸರಿ.