Saturday, 14th December 2024

ಅಂದು ಎನ್‌.ಡಿ.ತಿವಾರಿ ಎರಡನೇ ಪತ್ನಿ ಮಾತಾಡುತ್ತಿದ್ದರು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಎರಡು ವರ್ಷಗಳ ಹಿಂದೆ (2019ರ ಜೂನ್‌ನಲ್ಲಿ), ದಿಲ್ಲಿಯಲ್ಲಿ ನನ್ನ ಆತ್ಮೀಯ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಅದೇ ಸಂದರ್ಭದಲ್ಲಿ, ಅವರ ಮನೆಗೆ ಸುಮಾರು ಅರವತ್ತೈದರ ಆಜುಬಾಜಿನಲ್ಲಿರುವ ಮಹಿಳೆಯೊಬ್ಬರು ಬಂದಿದ್ದರು. ಅವರು ನನ್ನ ಸ್ನೇಹಿತನ ಪತ್ನಿ ಜತೆ ಮಾತಾಡುತ್ತಿದ್ದರು.

ನಾವು ಪಕ್ಕದ ಜಗುಲಿಯಲ್ಲಿದ್ದುದರಿಂದ ಅವರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿದ್ದವು, ಆ ಮಹಿಳೆ ಕಾಣಿಸುತ್ತಿರಲಿಲ್ಲ. ಆ ಮಹಿಳೆ
ಬಹಳ ಸೊಗಸಾದ ಹಿಂದಿಯಲ್ಲಿ ಮಾತಾಡುತ್ತಿದ್ದರು. ಅಲ್ಲದೇ ಅವರ ದನಿಯೂ ಇಂಪಾಗಿತ್ತು. ಅವರ ಮಾತುಗಳನ್ನು ಕೇಳಬೇಕು ಎಂದು ಯಾರಿಗಾದರೂ ಅನಿಸುವಂತಿತ್ತು. ಸುಮಾರು ಹದಿನೈದು ನಿಮಿಷಗಳ ನಂತರ, ಇಷ್ಟು ಸೊಗಸಾದ ಹಿಂದಿಯಲ್ಲಿ ಮಾತಾಡುವ ಆ ಮಹಿಳೆ ಯಾರಿದ್ದಿರಬಹುದು ಎಂದು ತಿಳಿಯುವ ಕುತೂಹಲ ತೀವ್ರವಾಗಿ, ಆಕೆ ಯಾರೆಂದು ಕೇಳಿದೆ. ನನ್ನ ಸ್ನೇಹಿತರು ಹೇಳಿದರು. ಆಗ ಅವರನ್ನು ನೋಡಲೇಬೇಕು ಎಂಬ ಬಯಕೆ ಉತ್ಕಟವಾಯಿತು.

ನಾನು ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಆ ತಾಯಿ ನನ್ನ ಸ್ನೇಹಿತನ ಪತ್ನಿಯ ಮುಂದೆ ತನ್ನೆ ಗೋಳುಗಳನ್ನು ತೋಡಿಕೊಳ್ಳು ತ್ತಿದ್ದಳು. ಆಕೆ ನನ್ನ ಸ್ನೇಹಿತನ ಮನೆಯಿಂದ ಮೂರ್ನಾಲ್ಕು ಮನೆಗಳಾಚೆ ಸರಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಳು. ಗಂಡನ ನಿಧನದ ನಂತರ ಆ ಮನೆಯನ್ನು ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿತ್ತು. ಅದರನ್ವಯ ಅವಳು ಮರುದಿನ ಮನೆ
ಖಾಲಿ ಮಾಡುವವಳಿದ್ದಳು. ಅದರ ಮುನ್ನಾ ದಿನ ನನ್ನ ಸ್ನೇಹಿತನ ಪತ್ನಿಯನ್ನು ಭೇಟಿಯಾಗಿ, ಹೋಗಿ ಬರುತ್ತೇನೆ ಎಂದು ಹೇಳಲು ಆಕೆ ಬಂದಿದ್ದಳು.

ಅವಳ ದನಿ ಮತ್ತು ಶುದ್ಧ, ಸಾಹಿತ್ಯಿಕ ಹಿಂದಿಗೆ ಮಾರು ಹೋದ ನಾನು, ಆಕೆ ಮುಂದಿದ್ದ ಸೋ-ದ ಮೇಲೆ ಕುಳಿತು ಆಕೆಯ ಮಾತುಗಳಿಗೆ ಕಿವಿಯಾದೆ. ಆಕೆ ಯೌವನದಲ್ಲಿ ಸುಂದರಿಯಾಗಿದ್ದಳು ಎಂದು ಎಂಥವರಿಗಾದರೂ ಅನಿಸುತ್ತಿತ್ತು. ಆಕೆಯ ಗಂಡ ನಿಧನರಾಗಿ ಒಂದು ವರ್ಷವಾಗಿತ್ತು ಮತ್ತು ಆಕೆಯ ಒಬ್ಬನೇ ಮಗ ಮರ್ಡರ್ ಆಗಿ ಎರಡು ತಿಂಗಳುಗಳಾಗಿದ್ದವು. ಸೊಸೆಯೇ ಮಗನನ್ನು ಮರ್ಡರ್ ಮಾಡಿದ್ದಳು. ಆಕೆಯ ಪ್ರತಿ ಮಾತು ನನ್ನ ಮನಸ್ಸಿನೊಳಗೆ ತೆವಳಿಕೊಂಡು ಇಳಿಯುತ್ತಿದ್ದವು.

ಹೇಗಿರಬೇಕಾದವಳು ಹೇಗಿzಳಲ್ಲ, ಅದೆಂಥ ದೊಡ್ಡ ನಾಯಕನ ಪತ್ನಿಗೆ ಈ ಗತಿಯಾ ಎಂದು ಸಂಕಟವಾಗುತ್ತಿತ್ತು. ಅವಳ ಮಾತುಗಳನ್ನು ಕೇಳುತ್ತಿದ್ದಂತೆ ನನ್ನ ಮುಂದೆ ದೊಡ್ಡ ಕಥೆ ಗಾಲಿಯೇ ಬಿಚ್ಚಿಕೊಂಡಿತು. ಅಂದ ಹಾಗೆ, ಅಂದು ನಾನು ಕಾಂಗ್ರೆಸ್ಸಿನ ಹಿರಿಯ ನಾಯಕ ದಿವಂಗತ ನಾರಾಯಣ ದತ್ತ ತಿವಾರಿ (ಎನ್.ಡಿ.ತಿವಾರಿ) ಅವರ ಎರಡನೇ ಪತ್ನಿ ಉಜ್ವಲಾ ತಿವಾರಿ ಮುಂದೆ
ಕುಳಿತಿದ್ದೆ!

ನಿಮಗೆ ಗೊತ್ತಿರಬಹುದು, ಎನ್.ಡಿ.ತಿವಾರಿ ಹದಿನೈದನೇ ವಯಸ್ಸಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿ (1952) ಮೊದಲ ಬಾರಿಗೆ ಪ್ರಜಾ ಸಮಾಜವಾದಿ ಪಕ್ಷದಿಂದ ಉತ್ತರ ಪ್ರದೇಶದ ನೈನಿತಾಲ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದರು. ಎರಡನೇ ಬಾರಿಗೆ ಅಲ್ಲಿಂದಲೇ ಗೆದ್ದು, ಉತ್ತರ ಪ್ರದೇಶ ವಿಧಾನ ಸಭೆಯಲ್ಲಿ ಪ್ರತಿಪಕ್ಷ ನಾಯಕರಾದರು. ತಿವಾರಿ ಹಿಂದಿ ಮತ್ತು ಇಂಗ್ಲಿಷ್ ಸೊಗಸಾಗಿ ಮಾತಾಡುತ್ತಿದ್ದರು. ಅವರ ಮನೆಮಾತು ಸಂಸ್ಕೃತ. 1963ರಲ್ಲಿ ಪ್ರಧಾನಿ ನೆಹರು ಅವರ ಒತ್ತಾಯದ ಮೇರೆಗೆ ತಿವಾರಿ ಕಾಂಗ್ರೆಸ್ ಸೇರಿದರು. ಅದಾಗಿ ಎರಡು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಆರಿಸಿ
ಬಂದು ಮಂತ್ರಿಯಾದರು. ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

ಅತ್ಯಂತ ಸ್ಪುರದ್ರೂಪಿಯಾಗಿದ್ದ ತಿವಾರಿ ಅವರ ಕ್ರಿಯಾಶೀಲತೆ ಮತ್ತು ನಾಯಕತ್ವ ಗುಣ ನೋಡಿದ ಇಂದಿರಾ ಗಾಂಧಿ, ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ನ ಮೊದಲ ಅಧ್ಯಕ್ಷರನ್ನಾಗಿ ನೇಮಿಸಿದರು. ಅಷ್ಟೊತ್ತಿಗೆ ತಿವಾರಿ ದಿಲ್ಲಿ ರಾಜಕಾರಣದ ಪಟ್ಟು ಗಳನ್ನು ಕಲಿತಿದ್ದರು. 1976ರಲ್ಲಿ ಇಂದಿರಾ ಗಾಂಧಿಯವರು ತಿವಾರಿಯವರನ್ನು ಭಾರತ  ಷಜಕಾರಣದ ಅತ್ಯಂತ ಪ್ರಮುಖ ಮತ್ತು ಮಹತ್ವದ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಿದರು. ಆಗ ತಿವಾರಿಯವರಿಗೆ ಐವತ್ತೊಂದು ವರ್ಷ. ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರಕಾರ  ಪತನವಾಗಿ, ಚರಣ್ ಸಿಂಗ್ ಅಲ್ಪ ಕಾಲ ಪ್ರಧಾನಿಯಾದಾಗ, ತಿವಾರಿ ಅಲ್ಲಿ ಹಣಕಾಸು ಮತ್ತು ಸಂಸದೀಯ ಖಾತೆ ಮಂತ್ರಿಯಾಗಿದ್ದರು.

1984ರಲ್ಲಿ ಇಂದಿರಾ ಗಾಂಧೀಯವರು ಪುನಃ ಪ್ರಧಾನಿಯಾದಾಗ, ಕಾಂಗ್ರೆಸ್ ಸೇರಿದ ತಿವಾರಿ, ಎರಡನೇ ಬಾರಿಗೆ ಉತ್ತರ ಪ್ರದೇಶ
ಮುಖ್ಯಮಂತ್ರಿಯಾದರು. ಅದಾಗಿ ನಾಲ್ಕು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಪಕ್ಷ ಗೆದ್ದಾಗ, ಮೂರನೇ ಬಾರಿಗೂ ಮುಖ್ಯಮಂತ್ರಿಯಾದರು. ತಿವಾರಿಯವರು ರಾಷ್ಟ್ರ ರಾಜಕಾರಣದಲ್ಲಿ ಅದೆಷ್ಟು ಪ್ರಭಾವಿಯಾಗಿದ್ದರೆಂದರೆ, ಅವರನ್ನು ಪ್ರಧಾನಿ ಹುದ್ದೆಯ  ಆಕಾಂಕ್ಷಿ ಎಂದು ಹೇಳುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿ ಅವರು ಎಂಟು ನೂರು ಮತಗಳಿಂದ
ಸೋಲದಿದ್ದರೆ, ಪಿ.ವಿ.ನರಸಿಂಹ ರಾವ್ ಬದಲು ಅವರೇ ಪ್ರಧಾನಿಯಾಗುತ್ತಿದ್ದರು.

ಅನಂತರದ ವಿದ್ಯಮಾನಗಳಿಂದ ಬೇಸತ್ತು, 1995ರಲ್ಲಿ ಅರ್ಜುನ್ ಸಿಂಗ್ ಅವರೊಂದಿಗೆ  ಪಕ್ಷದಿಂದ ಹೊರಬಂದು ಅಖಿಲ ಭಾರತ ಇಂದಿರಾ ಕಾಂಗ್ರೆಸ್ (ತಿವಾರಿ) ಸ್ಥಾಪಿಸಿದರು. ಅದಾಗಿ ಎರಡು ವರ್ಷಗಳ ನಂತರ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾ ದಾಗ, ತಿವಾರಿ ಮರಳಿ ಕಾಂಗ್ರೆಸ್ಸಿಗೆ ಬಂದರು. 2002ರಲ್ಲಿ ಉತ್ತರಾಕಾಂಡ ಮುಖ್ಯಮಂತ್ರಿಯಾದರು. 20007ರಲ್ಲಿ ಆಂಧ್ರದ  ರಾಜ್ಯಪಾಲರೂ ಆದರು.

ಇಷ್ಟಲ್ಲದೇ ಅವರು ಯೋಜನಾ ಆಯೋಗದ ಉಪಾಧ್ಯಕ್ಷ, ವಿದೇಶಾಂಗ ವ್ಯವಹಾರ, ಪೆಟ್ರೋಲಿಯಂ, ಕೈಗಾರಿಕೆ, ಹಣಕಾಸು, ವಾಣಿಜ್ಯ ಖಾತೆಗಳ ಸಚಿವರೂ ಆಗಿದ್ದರು. ಬಹುತೇಕ ಎಲ್ಲಾ ಪ್ರಮುಖ ಸಂಸದೀಯ ಸ್ಥಾಯಿ ಸಮಿತಿಗಳ ಅಧ್ಯಕ್ಷರಾಗಿದ್ದ ತಿವಾರಿ,
ಏನಿಲ್ಲವೆಂದರೂ ಸುಮಾರು ಅರವತ್ತು ವರ್ಷಗಳ ಕಾಲ ಒಂದಿಂದು ಅಧಿಕಾರದಲ್ಲಿದ್ದರು. ತಿವಾರಿ ದೆಸೆ ಮಗುಚಿಕೊಂಡಿದ್ದು ಅವರು ಆಂಧ್ರದ ರಾಜ್ಯಪಾಲರಾಗಿದ್ದಾಗ. ರೋಹಿತ್ ಶೇಖರ್ ಎಂಬ ಯುವಕ ರಾಜಭವನಕ್ಕೆ ಹೋಗಿ ತಾನು ರಾಜ್ಯಪಾಲರ ಮಗ ಎಂದು ಹೇಳಿಕೊಂಡಾಗ ಅಲ್ಲಿನ ಭದ್ರತಾ ಸಿಬ್ಬಂದಿ ಅವನನ್ನು ಹೊರ ಹಾಕಿದರು.

ತಾನು ರಾಜ್ಯಪಾಲರ ಮಗ ಎಂದು ಹೇಳಿಕೊಂಡರೂ, ಯಾರೂ ಕೇಳಲಿಲ್ಲ. ಸ್ವತಃ ತಿವಾರಿ ಅವರೂ ಅವನನ್ನು ನಿರಾಕರಿಸಿದರು. ಅದರಿಂದ ಕ್ರುದ್ಧನಾದ ಆತ ಕೋರ್ಟ್ ಮೆಟ್ಟಿಲೇರಿದ. ಈ ಮಧ್ಯೆ ರಾಜಭವನದಲ್ಲಿ ತಿವಾರಿಯವರು ಮೂವರು ಮಹಿಳೆಯ ರೊಂದಿಗೆ ನಡೆಸಿದ ರಾಸಲೀಲೆ ಬಹಿರಂಗವಾದಾಗ, ತಿವಾರಿ ಕ್ಷಮೆಯಾಚಿಸಿ ರಾಜೀನಾಮೆ ನೀಡಿ ಹೊರಬಿದ್ದರು.
ತಮ್ಮ ಜೀವಿತ ಕಾಲದ ಅಂತಿಮ ಹಂತದಲ್ಲಿ ತೀವ್ರ ಮುಖಭಂಗ, ಅಪಮಾನ, ಹಿಂಸೆ ಅನುಭವಿಸಿದ ತಿವಾರಿ ಅವರಿಗೆ ದಿಲ್ಲಿ ಹೈಕೋರ್ಟ್ ಮತ್ತೊಂದು ಬರೆ ನೀಡಿತು.

ಡಿಎನ್‌ಎ ಪರೀಕ್ಷೆ ವರದಿ ತರಿಸಿಕೊಂಡ ಕೋರ್ಟ್ ಅದರ ಅನ್ವೇಷಣೆ ಪ್ರಕಾರ, ತಿವಾರಿಯವರೇ ರೋಹಿತ್ ಶೇಖರ್ ತಂದೆ ಎಂದು ಹೇಳಿತು. ಇಷ್ಟೆ ಆದ ನಂತರ ಅದೇ ವರ್ಷ, ಅಂದರೆ 2014ರಲ್ಲಿ, ರೋಹಿತ್ ಶೇಖರ್ ತಾಯಿ ಉಜ್ವಲಾ ಅವರನ್ನು ತಮ್ಮ 89ನೇ ವಯಸ್ಸಿನಲ್ಲಿ ಮದುವೆಯಾದರು. ಆಗ ಉಜ್ವಲ ಅವರಿಗೆ ಅರವತ್ತೆರಡು ವರ್ಷ. ಹಾಗೆಂದು ತಿವಾರಿಯವರಿಗೆ ಉಜ್ವಲಾ ಹಳೆಯ ಪರಿಚಯ. ಅರವತ್ತರ ದಶಕದ ಕೊನೆಯಲ್ಲಿ, ತಿವಾರಿಯವರು ಉಜ್ವಲಾ ಅವರನ್ನು ಭೇಟಿ ಮಾಡಿದ್ದು ಅವರ ತಂದೆಯವರ ಮನೆಯಲ್ಲಿ.

ಉಜ್ವಲಾ ತಂದೆ ಪ್ರೊ.ಶೇರ್ ಸಿಂಗ್ ಹರಿಯಾಣದಿಂದ ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ತಮ್ಮ ಹದಿನೇಳನೇ ವಯಸ್ಸಿನಲ್ಲಿ ಬಿಪಿನ್ ಶರ್ಮ ಅವರನ್ನು ಮದುವೆಯಾದ ಉಜ್ವಲಾ, ಮಹಿಳಾ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತೆಯಾಗಿದ್ದರು. ಇದು ಅವರ ಗಂಡನಿಗೆ ಇಷ್ಟವಿರಲಿಲ್ಲ. ಈ ಸಂಬಂಧ ಗಂಡ-ಹೆಂಡತಿ ಮಧ್ಯೆ ಪದೇ ಪದೆ ಜಗಳಕ್ಕೆ ಕಾರಣವಾಗುತ್ತಿತ್ತು. ಈ ಮಧ್ಯೆ
ತಿವಾರಿ -ಉಜ್ವಲಾ ಸುತ್ತಾಟ ರಹಸ್ಯವಾಗೇನೂ ಇರಲಿಲ್ಲ. ಉಜ್ವಲಾ ಮೂರು ಸಲ ಗರ್ಭವತಿಯಾದರೂ, ತಿವಾರಿ ಕೋರಿಕೆ ಮೇರೆಗೆ ಗರ್ಭವನ್ನು ತೆಗೆಸಿದಳು. ಆಗ ತಿವಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದರು.

ಆದರೂ ಉಜ್ವಲಾ ಜತೆಗಿನ ಸಂಬಂಧ ಮುಂದುವರಿದಿತ್ತು. ನಾಲ್ಕನೇ ಸಲ ಬಸುರಿಯಾದಾಗ, ತಿವಾರಿಯವರಿಂದಲೇ ತನಗೆ ಮಗು ಬೇಕು ಎಂದು ಹಠ ಹಿಡಿದು ಹೆತ್ತಳು. ಅವನೇ ರೋಹಿತ್ ಶೇಖರ್. ಆ ಮಗು ತನ್ನದಲ್ಲ, ಅದು ತಿವಾರಿಯವರದು ಎಂದು (ಉಜ್ವಲಾ) ಪತಿ ಬಿಪಿನ್ ಶರ್ಮ ಆರೋಪಿಸಿದ. ಅವರಿಬ್ಬರ ಜಗಳ ವಿಚ್ಛೇದನದಲ್ಲಿ ಕೊನೆಗೊಂಡಿತು. 1993ರಲ್ಲಿಯೇ ಪತ್ನಿ (ಸುಶೀಲಾ ತಿವಾರಿ) ಯನ್ನು ಕಳೆದುಕೊಂಡರೂ, ಸುಮಾರು ಮೂವತ್ತು ವರ್ಷಗಳ ಕಾಲ, ಸತಿ-ಪತಿಯಂತೆ ಜೀವನ ಸಾಗಿಸಿದರೂ, ತಿವಾರಿಯವರು ಉಜ್ವಲಾರನ್ನು ಪತ್ನಿ ಎಂದು ಸ್ವೀಕರಿಸಿರಲಿಲ್ಲ.

ಪತ್ನಿ ನಿಧನದ ನಂತರ ತನ್ನನ್ನು ವರಿಸುವಂತೆ ಪರಿಪರಿಯಾಗಿ ಬೇಡಿದರೂ, ಅವರನ್ನು ದೈಹಿಕ ವಾಂಛೆ ತೀರಿಸಿಕೊಳ್ಳಲಷ್ಟೇ
ಬಳಸಿಕೊಂಡರು. ರೋಹಿತ್ ಶೇಖರ್ ಕೋರ್ಟಿಗೆ ಹೋಗದಿದ್ದರೆ, ತಿವಾರಿ ಜಗ್ಗುತ್ತಿರಲಿಲ್ಲ. ಹಾಗೆಂದು ತಿವಾರಿ ಉಜ್ವಲಾರನ್ನು ಎಂದೂ ಕೀಳಾಗಿ ನಡೆಸಿಕೊಳ್ಳಲಿಲ್ಲ. ಉಜ್ವಲಾಗೆ ಸ್ವಂತ ನೌಕರಿಯಿತ್ತು. ಅವರು ದೌಲತ್ ರಾಮ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ತಮ್ಮ ಜೀವನ ನಿರ್ವಹಣೆಗೆ ತಿವಾರಿ ಅವರ ಮುಂದೆ ಸೆರಗೊಡ್ಡುತ್ತಿರಲಿಲ್ಲ.

ಆಂಧ್ರ ರಾಜ್ಯಪಾಲರಾಗಿ ಲೋಕ ನಿಂದಿತರಾಗಿ ರಾಜೀನಾಮೆ ನೀಡಿ ದಿಲ್ಲಿ ಸೇರಿದಾಗ, ತಿವಾರಿಯವರು ಯಾರಿಗೂ ಬೇಡದವರಾಗಿ ದ್ದರು. ಯಾವ ಪಕ್ಷವೂ ಅವರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅವರು ಬೆಳೆಸಿದ ಶಿಷ್ಯರೇ ಅವರನ್ನು ಕಜ್ಜಿ ನಾಯಿಯಂತೆ ದೂರ ಅಟ್ಟುತ್ತಿದ್ದರು. ಅವರನ್ನು ನೋಡಲು ಯಾರೂ ಬರುತ್ತಿರಲಿಲ್ಲ. ತಾವಾಗಿಯೇ ಅಪೇಕ್ಷೆ ಪಟ್ಟು ಹೋದರೂ, ಯಾ ರೂ
ಅವರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ತಿವಾರಿಯವರಿಗೆ ಉಳಿದುಕೊಳ್ಳಲು ಒಂದು ಪೈಟಾದ ಮನೆಯೂ ಇರಲಿಲ್ಲ.

ಆಗ ಅವರನ್ನು ಕೈ ಹಿಡಿದವಳು ಉಜ್ವಲಾ! ತಿವಾರಿ ಪಾಡು ಅದೆಷ್ಟು ದಯನೀಯವಾಗಿತ್ತೆಂದರೆ, ಅಷ್ಟೂ ಇಷ್ಟೂ ಕೂಡಿಟ್ಟ ಹಣವನ್ನು ಅವರ ಆಪ್ತರೇ ಲಪಟಾಯಿಸಿದ್ದರು. ಅವರಿಗೆ ದೈನಂದಿನ ಖರ್ಚಿಗೂ ಹಣವಿರಲಿಲ್ಲ. ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆ, ಔಷಧ,ಮಾತ್ರೆಗಳಿಗೆ ಬೇಕಾದ ಹಣವನ್ನು ಉಜ್ವಲಾ ಅವರೇ ತಮ್ಮ ನಿವೃತ್ತಿ ವೇತನದಿಂದ ನೀಡುತ್ತಿದ್ದರು. ತಿವಾರಿ ಅವರ
ಗೋಳನ್ನು ನೋಡಲಾಗದೇ, ಪ್ರಧಾನಿ ಮೋದಿಯವರು, ನಾಮಕೇ ವಾಸ್ತೆ ಹುzಯನ್ನು ಕೊಟ್ಟು, ಅವರಿಗೆ ಸರಕಾರಿ ಬಂಗಲೆ ನೀಡಿದ್ದರು.

ಕೊನೆಯ ತನಕವೂ ತಿವಾರಿಯವರು ಆ ಮನೆಯಲ್ಲಿ ಉಜ್ವಲಾ ಮತ್ತು ಮಗ ರೋಹಿತ್ ಶೇಖರ್ ಜತೆ ವಾಸವಾಗಿದ್ದರು. ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ, ಕೇಂದ್ರದಲ್ಲಿ ಎಂಟು ಖಾತೆಗಳ ಸಚಿವರಾಗಿದ್ದ, ಪ್ರಧಾನಿ ಹುದ್ದೆಆಕಾಂಕ್ಷಿ ಎಂದು ಬಿಂಬಿತರಾಗಿದ್ದ ಆ ಮಹಾ ಮುತ್ಸದ್ದಿ ಒಬ್ಬ ಯಕಃಶ್ಚಿತನಂತೆ, ಅನಾಮಧೇಯನಂತೆ ಜೀವಿಸುತ್ತಿದ್ದರು. ಉಜ್ವಲಾ
ಆಸರೆಯಾಗದಿದ್ದರೆ, ಅವರದು ಬೇವಾರ್ಸಿ ಬದುಕಾಗುತ್ತಿತ್ತು. ಅರವತ್ತು ವರ್ಷಗಳ ಕಾಲ ಅಧಿಕಾರ ದಲ್ಲಿದ್ದ ವ್ಯಕ್ತಿಯ ಬಳಿ ಏನೂ ಇರಲಿಲ್ಲ. ಎಲ್ಲರೂ ಅವರನ್ನು ದೋಚಿದ್ದರು. ಹೆಣ್ಣುಬಾಕ ಎಂಬುದೊಂದೇ ಅವರ ಬಲಹೀನತೆಯಾಗಿತ್ತು.

ಅವರ ಎಲ್ಲಾ ಸ್ವಭಾವ, ಗುಣದೋಷಗಳನ್ನು ಗೊತ್ತಿದ್ದೂ, ಸಾಮಾಜಿಕವಾಗಿ ತನಗೊಂದು ಸ್ಥಾನಮಾನ ಕೊಡದಿದ್ದರೂ, ಅವರನ್ನು ಸಹಿಸಿ, ಸಲಹಿದವರು ಉಜ್ವಲಾ. ನಾನು ಅಂದು ಭೇಟಿ ಮಾಡುವ ಎರಡು ತಿಂಗಳ ಮೊದಲು, ಗಂಡನ ನಿಧನದ ದುಃಖ ಆರುವ ಮುನ್ನವೇ, ಸೊಸೆಯೇ ಅವರ ಒಬ್ಬನೇ ಮಗನನ್ನು ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದಳು. ಉಜ್ವಲಾ ಅವರಲ್ಲಿ
ಬದುಕುವ ಆಸೆಯೆ ಉರಿದುಹೋಗಿತ್ತು. ಮೊನ್ನೆ ನನ್ನ ಆಲ್ಬಮ್ ನೋಡುವಾಗ, ಅಂದು ತೆಗೆದ ಉಜ್ವಲಾ ಫೋಟೋಗಳನ್ನು ನೋಡುವಾಗ ಇವೆ ನೆನಪಾದವು.