Friday, 29th November 2024

ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಬದ್ಧ ಎಂದ ಜಯಂತಿ

20ಕ್ಕೂ ಹೆಚ್ಚು ವರ್ಷ ಸಿಆರ್‌ಪಿಎಫ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಯಂತಿ ಪಾಲೇಕರ್

ವಿಶೇಷ ವರದಿ: ವಿನುತಾ ಹೆಗಡೆ

ಶಿರಸಿ: ದೇಶ ಸೇವೆಯ ವಿಷಯದಲ್ಲಿ ಮಹಿಳೆಯರು ಮುಂದೆ ಬರಬೇಕು, ಯಾರೂ ಹಿಂದೆ ಉಳಿಯಬಾರದು. ತನ್ನಂತೆಯೇ ಸೇನೆಯಲ್ಲಿ ಕೆಲಸ ನಿರ್ವಹಿಸಲು ತನ್ನ ಮಗಳನ್ನು ಸೇನೆಯಲ್ಲಿ ಭರ್ತಿ ಮಾಡುವ ಮಹಾದಾಸೆಯನ್ನೂ ಹೊಂದಿರುವ 20ಕ್ಕೂ ಹೆಚ್ಚು ವರ್ಷ ಕೇಂದ್ರ ಮೀಸಲು ಪಡೆಯಲ್ಲಿ ಕೆಲಸ ನಿರ್ವಹಿ ಸುತ್ತಿರುವ ಜಯಂತಿ ಪಾಲೇಕರ್ ಅವರ ಹೆಮ್ಮೆಯ ಮಾತಿದು.

ಧರ್ಮ, ಧರ್ಮದ ಗುಂಪುಗಳ ನಡುವೆ ಗ್ಯಾಂಗ್ ವಾರ್ ಆದರೂ ಆಕೆಯ ಉಪಸ್ಥಿತಿ, ಗಡಿಯಲ್ಲಿ ಕಾಳಗ ನಡೆದರೂ ಆಕೆ ದೇಶ ಸೇವೆಗೆ ಬದ್ಧ, ಸಿದ್ಧ. ಭಾರತಾಂಬೆಯ ಹೆಮ್ಮೆಯ ಪುತ್ರಿಯಾದ ಈಕೆ ಭಾರತಮಾತೆಯ ಮಡಿಲಲ್ಲಿದ್ದು, ದೇಶ ಸೇವೆಗಾಗಿಯೇ
ತನ್ನನ್ನು ತಾನು ಮುಡಿಪಾಗಿಟ್ಟಿರುವ ಕೆಚ್ಚೆದೆಯ ಹೆಣ್ಣು ಜಯಂತಿ. ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇವರು, ತಮ್ಮ ತಂದೆಯಿಂದ ಸ್ಫೂರ್ತಿ ಪಡೆದು ಪೊಲೀಸ್ ಇಲಾಖೆಗೆ ಸೇರಿದರು.

ತಂದೆ ಅಚ್ಚುತ್ ಪಾಲೇಕರ್‌ರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದುಕೊಂಡು ಅನೇಕ ಜನಪರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸಮಾಜಮುಖಿ ಕಾರ್ಯಗಳಿಂದ ಅನೇಕರಿಗೆ ಮಾದರಿಯಾದವರು. ಅಂತೆಯೇ ಇವರ ಮಗಳು ಜಯಂತಿ ಪಾಲೇಕರ್ ದೇಶ ಸೇವೆಯ ಆಸೆ ಹೊತ್ತು ಪೊಲೀಸ್ ಇಲಾಖೆಗೆ ಸೇರಲು, ಪತ್ರಿಕೆಯಲ್ಲಿ ಬಂದ ಮಾಹಿತಿ ನೋಡಿ ಅರ್ಜಿ ಸಲ್ಲಿಸಿ ದವರು. ನಂತರ ತಮಗೆ ಸಿಕ್ಕಿದ್ದು ರಾಜ್ಯ ಪೊಲೀಸ್ ಇಲಾಖೆಯ ನೌಕರಿಯಲ್ಲ, ಕೇಂದ್ರದ್ದು ಎಂದು ತಿಳಿದಾಗ ತಮ್ಮ ಬಗ್ಗೆಯೇ ಗೌರವ ಮೂಡಿಸಿಕೊಂಡು ದೇಶದ ಯಾವ ರಾಜ್ಯ, ಜಿಲ್ಲೆಯಾದರೂ ಸರಿಯೇ ತಾನು ದೇಶಕ್ಕಾಗಿ ಕಾರ್ಯ ನಿರ್ವಹಿಸ ಬೇಕೆಂದು ಕೊಂಡು 1995ರಲ್ಲಿ ಹೊರಟವರು ಹಿಂದೆ ತಿರುಗಿ ನೋಡಿಯೇ ಇಲ್ಲ.

22 ವರ್ಷಗಳ ಬಳಿಕ ಭದ್ರಾವತಿಯಲ್ಲಿ ಕೆಲಸ ನಿರ್ವಹಿಸುವ ಸುಯೋಗ ಅವರದ್ದಾಗಿತ್ತು. ಸಿಆರ್‌ಪಿಎಫ್ ಆಗಿ ಕಾರ್ಯ ನಿರ್ವಹಿಸುವ ಇವರು, ಕಲಿತದ್ದು ಶಿರಸಿಯ ಎಂಈಎಸ್ ಕಾಲೇಜಿನಲ್ಲಿ. ಕಳೆದ ವಾರ ಉತ್ತರಕನ್ನಡ ಜಿಲ್ಲೆೆಯಲ್ಲಿ ಶಾಂತಿ
ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರೀಯ ಮೀಸಲು ಪಡೆಯಿಂದ ಜಾಗೃತಿ ಜಾಥಾ ಆಯೋಜನೆಗೊಂಡಿತ್ತು. ಕೇಂದ್ರೀಯ ಮೀಸಲು ಪಡೆಯ ತುಕಡಿಯಲ್ಲಿ ಜಯಂತಿ ಪಾಲೇಕರ್ ಕೂಡಾ ಇದ್ದಿದ್ದು ಶಿರಸಿಗೊಂದೇ ಅಲ್ಲದೇ ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯ.

ದೈಹಿಕವಾಗಿ, ಮಾನಸಿಕವಾಗಿ ತನ್ನವರೆಲ್ಲರನ್ನೂ ತೊರೆದು ಇಡೀ ದೇಶವೇ ತನ್ನದು, ಇಲ್ಲಿರುವವರೆಲ್ಲ ತನ್ನವರೆಂದು ಕಾರ್ಯ ನಿರ್ವಹಿಸುವ ಸ್ಥಿತಿ ಎಲ್ಲ ಮೀಸಲು ಪಡೆಯಲ್ಲಿ ಕಾರ್ಯನಿರ್ವಹಿಸುವವರದು. ಇಲ್ಲಿ ಕೆಲಸ ನಿರ್ವಹಿಸುವ ವೇಳೆ ಮಹಿಳಾ ಮೀಸಲು ಇಲ್ಲ. ಮಹಿಳೆ ಎಂಬ ಕಾರಣಕ್ಕೆ ಯಾವ ಕೆಲಸದಲ್ಲೂ ರಿಯಾಯಿತಿ ಇಲ್ಲ. ಶಕ್ತಿ, ಸಾಮರ್ಥ್ಯವೇ ಇಲ್ಲಿ ಕಾರ್ಯ ನಿರ್ವಹಿಸಲು ಬೇಕಾಗುವ ಮಾನದಂಡ. ಈ ತರಹದ ಅನೇಕ ಕೆಲಸ ಕಾರ್ಯಗಳಲ್ಲಿ ಇಂದು ಅನೇಕ ಮಹಿಳೆಯರು ಇದ್ದಾರೆ.

***

ನಾನು ರಾಷ್ಟ್ರರಕ್ಷಣೆಗೆ ಬದ್ಧನಾಗಿದ್ದೇನೆ. ನನಗೊಬ್ಬಳೇ ಮಗಳಿದ್ದಾಳೆ, ಅವಳೂ ಸಹ ಸೇನೆಗೆ ಸೇರುವುದಾದರೆ ಭರ್ತಿಗೆ ಅನುಮತಿ ನೀಡುತ್ತೇನೆ. ದೇಶ ಸೇವೆಯಲ್ಲಿ ನನ್ನ ಪ್ರಾಣ ಅರ್ಪಿಸುವ ಸಂದರ್ಭ ಬಂದರೂ ಅದಕ್ಕೂ ಸಿದ್ಧವಾಗಿಯೇ ಕಾರ್ಯ ನಿರ್ವಹಿಸು ತ್ತಿದ್ದೇನೆ. ದೇಶ ರಕ್ಷಣೆ, ಸೇವೆಯ ವಿಷಯದಲ್ಲಿ ಯಾವ ಭಾರತೀಯನೂ ಹಿಂದೆ ಸರಿಯಬಾರದು.

– ಜಯಂತಿ ಪಾಲೇಕರ್ ಸಿಆರ್‌ಪಿಎಫ್