Wednesday, 11th December 2024

ದೃಶ್ಯ ಮಾಧ್ಯಮಗಳು ವಿವೇಚನೆ ಅಗತ್ಯ

ಅಭಿವ್ಯಕ್ತಿ

ನಳಿನಿ ಟಿ.ಭೀಮಪ್ಪ

ಹುಣ್ಣಿಮೆ, ಅಮಾವಾಸ್ಯೆ ಹತ್ತಿರ ಬರುತ್ತಿದ್ದಂತೆ ನಮ್ಮ ಟಿ.ವಿ ಮಾಧ್ಯಮಗಳು ಗರ ಬಡಿದವರಂತೆ ಆಡುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಅದರಲ್ಲೂ ಆ ದಿನಗಳಲ್ಲಿ ಗ್ರಹಣಗಳು ಸಂಭವಿಸುತ್ತವೆ ಎಂದರೆ, ಜನರಲ್ಲಿ ಒಂದು ರೀತಿಯ ಭಯವನ್ನು ಬಿತ್ತುವುದರಲ್ಲಿ ಈ ಮಾಧ್ಯಮಗಳು ನಾಮುಂದು, ತಾಮುಂದು ಎಂದು ಮುಗಿಬಿದ್ದಿರುತ್ತವೆ.

ರಕ್ತಚಂದಿರ, ದೊಡ್ಡ ಚಂದಿರ, ಕಂಕಣ ಗ್ರಹಣಗಳಂಥ ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಸುಂದರ ವಿದ್ಯಮಾನಗಳನ್ನು ಜನರು ಮುಕ್ತವಾಗಿ ಆಸ್ವಾದಿಸಗೊಡದೆ, ಅವುಗಳ ಬಗ್ಗೆ ವೈಜ್ಞಾನಿಕ ಚಿಂತನೆಗೂ ಅನುವು ಮಾಡಿಕೊಡದೆ, ಕೇವಲ ಭಯಂಕರ ವಿವರಣೆ ನೀಡುತ್ತಾ, ಹೆದರಿದವರ ಮೇಲೆ ಮತ್ತೆ ಹಾವು ಎಸೆದಂತೆ, ದುರ್ಬಲ ಮನಸ್ಸಿನ ವೀಕ್ಷಕರನ್ನು ಮತ್ತಷ್ಟು ಭಯಭೀತ ಗೊಳಿಸಿ ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುವತ್ತಲೇ ಇವರ ದೃಷ್ಟಿ ನೆಟ್ಟಿರುತ್ತದೆ.

ಪ್ರತಿಯೊಂದು ಚಾನೆಲ್ಲಿನವರೂ ಕೆಲವರನ್ನು ಸಾಲಾಗಿ ಕೂಡಿಸಿ, ಅವರ ಅಭಿಪ್ರಾಯ ಕೇಳುತ್ತಾ, ಅದಕ್ಕೆ ನಿರೂಪಕರು ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾ, ಅವರು ಹೇಳುವುದಕ್ಕೆ ಭಯಬಿದ್ದವರಂತೆ ನಟಿಸುತ್ತಾ, ಜನರಲ್ಲಿ ಮತ್ತಷ್ಟು ಆತಂಕ ತುಂಬುವು ದನ್ನು ನೋಡುವಾಗ, ಮಾಧ್ಯಮಗಳು ಜನರನ್ನು ಜಾಗೃತಗೊಳಿಸಲು ಇವೆಯೋ ಅಥವಾ ಮತ್ತಷ್ಟು ಮೂಢನಂಬಿಕೆ ಯನ್ನು ಬಿತ್ತುವುದರಲ್ಲಿ ನಿರತವಾಗಿವೆಯೋ ತಿಳಿಯುವುದಿಲ್ಲ.

ಇತ್ತೀಚೆಗೆ ನಡೆದ ಖಗೋಳ ವಿದ್ಯಮಾನದಲ್ಲಿ ಶನಿ – ಗುರು ಗ್ರಹಗಳ ಅಪೂರ್ವ ಮಿಲನದ ನೋಟವನ್ನು ಬಹುತೇಕರು ಕಣ್ತುಂಬಿ ಕೊಂಡರು. ಮೇಲ್ಮನೆಯಲ್ಲಿ ರಾಜಕೀಯ ಧುರೀಣರ ಹೊಡೆದಾಟಕ್ಕೂ ಸಹ ಗ್ರಹಗತಿಗಳೇ ಕಾರಣ ಎಂದು ಹೇಳುವಾಗ, ಜನ ಮರುಳೋ, ಜಾತ್ರೆ ಮರುಳೋ ಎನುವಂತಾಗಿತ್ತು. ಶನಿ ಈ ರಾಶಿಯಲ್ಲಿ ಪ್ರವೇಶ ಮಾಡುತ್ತಿದ್ದಾನೆ. ಗುರು ಮತ್ತೊಂದು ರಾಶಿಗೆ
ಕಾಲಿಡುತ್ತಿದ್ದಾನೆ.

ರಾಹು, ಕೇತುಗಳ ಆರ್ಭಟ, ಅದರ ಪರಿಣಾಮಗಳೇನು? ಎನ್ನುವುದನ್ನೇ ಗಂಟೆಗಟ್ಟಲೇ ರಬ್ಬರಿನ ಹಾಗೆ ಎಳೆಯುತ್ತ ದೊಡ್ಡ ಬ್ರೆಕಿಂಗ್ ನ್ಯೂಸ್ ಮಾಡಿ, ಯಾವುದೋ, ಎಂದೋ ಆದ ಜಲಪ್ರಳಯ, ಸುನಾಮಿ, ಬರ, ನೆರೆ, ಅಗ್ನಿ ಅವಗಢ, ಭೂಕಂಪಗಳನ್ನು ಭಯಂಕರವಾಗಿ ತೋರಿಸುತ್ತಾ, ಎಲ್ಲದಕ್ಕೂ ಸೂರ್ಯ, ಚಂದ್ರ, ನಕ್ಷತ್ರ ನವಗ್ರಹಗಳನ್ನೇ ಹೊಣೆ ಮಾಡಿ, ಅವುಗಳಿಗೆ ಹೋಮ, ಹವನ, ಪೂಜೆ ಪರಿಹಾರ ಎನ್ನುತ್ತಾ ಅಮಾಯಕರನ್ನು ಸುಲಿಯುವುದಕ್ಕೆ ಪರೋಕ್ಷವಾಗಿ ಮಾಧ್ಯಮಗಳೇ ಸಹಾಯ ಮಾಡು ತ್ತಿರುವುದು ವಿಪರ್ಯಾಸ.

ಮತ್ತೊಬ್ಬರಿಗೆ ಇವರು ಸಲಹೆ ಕೊಡುತ್ತಿದ್ದ ರೀತಿ ಹೀಗಿತ್ತು. ನಿಮ್ಮ ಮಗ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಬೇಕೂ ಎಂದರೆ ಅವನ ಓದುವ ದಿಕ್ಕನ್ನು ಬದಲಾಯಿಸಿ, ಮಲಗುವಾಗ ಪೂರ್ವಕ್ಕೆ ತಲೆ ಮಾಡಿ ಮಲಗಲು ಹೇಳಿ, ಕಾಲು ಪಶ್ಚಿಮಕ್ಕೆ ಇರಲಿ ಎಂದು ಹೇಳಿದಾಗ ಪೂರ್ವಕ್ಕೆ ತಲೆಯಿದ್ದ ಮೇಲೆ, ಕಾಲು ಏನು ಉತ್ತರ ದಿಕ್ಕಿಗೆ ಇಡೋಕಾಗುತ್ತಾ ಎನ್ನುವ ಪ್ರಶ್ನೆ ಮೂಡಿ ನಗು ಬಂತು. ದಿಕ್ಕು, ದೆಸೆ ನೋಡುತ್ತಾ ಕುಳಿತುಕೊಂಡರೆ ಜೀವನ ಸಾಗುವುದಿಲ್ಲ. ವಿಶ್ವೇಶ್ವರಯ್ಯ, ಅಂಬೇಡ್ಕರ್, ಅಬ್ದುಲ್ ಕಲಾಂನಂಥ ಮಹಾನ್ ನಾಯಕರ ಜೀವನ ಚರಿತ್ರೆಯೇ ಸಾಕು, ನಮ್ಮ ಜೀವನದ ದಿಕ್ಕನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗುತ್ತದೆ.

ಕಠಿಣ ಪರಿಶ್ರಮ, ಆಸಕ್ತಿ ಇದ್ದರೆ ವಿದ್ಯೆ, ಉದ್ಯೋಗ ಎಲ್ಲದರಲ್ಲೂ ಯಶಸ್ಸು ಸಾಧಿಸಬಹುದು. ಜ್ಯೋತಿಷ್ಯ ಶಾಸಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದಕ್ಕೆ ವೈಜ್ಞಾನಿಕ ಬುನಾದಿಯೂ ಇದೆ. ಅದನ್ನು ತಮ್ಮ ತಮ್ಮ ಇಚ್ಛೆಯಂತೆ ಸ್ವಾರ್ಥಕ್ಕೆ ಬಳಸಿಕೊಂಡು ಜನರನ್ನು ಯಾಮಾರಿಸುವ ಢೋಂಗಿಗಳ ಆರ್ಭಟ ಕಡಿಮೆಯಾಗಬೇಕು. ಅದಕ್ಕೆ ಚಿತ್ರ ವಿಚಿತ್ರ ವೇಷ, ಭೂಷಣ, ಅಲಂಕಾರಗಳ ಅಗತ್ಯವಿಲ್ಲ. ಅದರ ಜ್ಞಾನ ಪಡೆದವರಿಗೆ ಮಾತ್ರ ಗೊತ್ತಿರುತ್ತದೆ.

ಅದನ್ನು ಹೇಳುವುದೂ ಸಹ ಒಂದು ಕಲೆ. ಹುಟ್ಟು ಸಾವು ಯಾರ ಕೈಯ್ಯಲ್ಲೂ ಇಲ್ಲ. ಭೂತವನ್ನು ನೋಡಿ ಭವಿಷ್ಯದ ಕಲ್ಪನೆ ಮಾಡಬಹುದೇ ವಿನಾ ಭವಿಷ್ಯವನ್ನು ಹೀಗೇ ಎಂದು ನಿಖರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಮೊದಲು ವರ್ತಮಾನ ವನ್ನು ಜೀವಿಸಲು ಕಲಿಯಬೇಕು. ಚಂದಾಗಿ ಬದುಕುತ್ತಿರುವುದಕ್ಕೆ ನಾವು ಬದುಕಿದ್ದೇವೆ ಎನ್ನುವ ಕಾರಣವೇ ಸಾಕು ಎನ್ನುವ ಮಾತನ್ನು ನೆನಪಿಸಿಕೊಂಡರೆ ಒಳ್ಳೆಯದು. ಜ್ಯೋತಿಷ್ಯಶಾಸ್ತ್ರ ಎನ್ನುವುದು ನಂಬಿಕೆ, ಶ್ರದ್ಧೆ, ಆಶಾಭಾವ, ಮುನ್ನಡೆಯಲು ಆತ್ಮವಿಶ್ವಾಸ ತೋರಿಸುವ ಮಾರ್ಗವಾಗಬೇಕೇ ಹೊರತು ತೊಡಕಾಗಬಾರದು.

ಇಂತಹ ವಿಷಯಗಳಿಗೆ ವೇದಿಕೆ ಕಲ್ಪಿಸಿಕೊಡುವ ಮುನ್ನ ಮಾಧ್ಯಮಗಳು ಸ್ವಲ್ಪ ಆಲೋಚಿಸಿದರೆ ಒಳ್ಳೆಯದು.