Friday, 13th December 2024

ಜಲವರ್ಣ ಇವರ ಪ್ರೀತಿಯ ಮಾಧ್ಯಮ

ಬಳಕೂರು ವಿ ಎಸ್ ನಾಯಕ

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿಯನರ್ ಆಗಿದ್ದರೂ, ಚಿತ್ರರಚನೆಯಲ್ಲಿ ತೊಡಗಿಸಿಕೊಂಡಿರುವ ಈ ಕಲಾವಿದ ಪಡೆದಿ ರುವ ಕೌಶಲ ಬೆರಗು ಹುಟ್ಟಿಸುವಂತಹದ್ದು.

ನಿಸರ್ಗ ಎಲ್ಲರನ್ನೂ ಒಂದು ಕ್ಷಣ ಸೆಳೆದು ಬಿಡುತ್ತದೆ. ಕಲಾವಿದನೊಬ್ಬ ನಿಸರ್ಗದ ಆಟವನ್ನು ನೋಡಿದಾಗ ಮನದಲ್ಲಿ ಮೂಡುವ ಭಾವನೆಗಳನ್ನು ಹಿಡಿದಿಡುವ ತವಕ. ಸುಂದರ ದೃಶ್ಯಗಳು ಕೇವಲ ಸೌಂದರ್ಯದಿಂದ ಮಾತ್ರವಲ್ಲ, ಅದರೊಳಗೆ ಅಂತರ್ಗತ ಅಮೂರ್ತ ಸೆಲೆಯಿಂದ ಕಲಾವಿದರನ್ನು ಆಕರ್ಷಿಸುತ್ತವೆ. ಅಂದಹಾಗೆ ನಿಸರ್ಗದ ರಮ್ಯ ರಮಣೀಯ ದೃಶ್ಯಗಳಿಗೆ ಆಕರ್ಷಿತರಾಗಿ ಭಾವಪರವಶರಾಗಿ ಒಂದಕ್ಕಿಂತ ಒಂದು ಆಕರ್ಷಣೀಯ ಚಿತ್ರಗಳನ್ನು ರಚಿಸಿದವರು ಕಲಾವಿದ ವೆಂಕಟೇಶ
ರಾವ್ ಕಾರಿಂಜ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ವೆಂಕಟೇಶ್ ರಾವ್ ಕಾರಿಂಜ ಅವರಿಗೆ, ಚಿತ್ರ ರಚನೆಯಲ್ಲಿ ಉತ್ಸಾಹ, ಆಸಕ್ತಿ. ಇವರು ಪ್ರವೃತ್ತಿಯಲ್ಲಿ ಕಲಾವಿದ. ಕಡಲ ಕಿನಾರೆಯ ಸುಂದರವಾದ ಪುಟ್ಟದಾದ ಗ್ರಾಮ ಕಾರಿಂಜ ಇವರ ಹುಟ್ಟೂರು. ಅಲ್ಲಿನ ಸುತ್ತಮುತ್ತಲ ಮರ-ಗಿಡ ಬೆಟ್ಟ ಎಲ್ಲವೂ ಕೂಡ ಇವರಿಗೆ ಕಲಾಸ್ಫೂರ್ತಿ.

ಪ್ರತಿದಿನ ಬೆಳಿಗ್ಗೆೆ ಎದ್ದು ಸುಂದರವಾದ ಪ್ರಕೃತಿಯ ಮಡಿಲನ್ನು ನೋಡಿದ ಅವರು ತಮಗರಿವಿಲ್ಲದೆ ಪ್ರಕೃತಿಯ ಸೊಬಗಿಗೆ ಮರುಳಾದರು. ಶಾಲಾ ದಿನ ಗಳಲ್ಲಿಯೇ ಹಲವಾರು ಪ್ರಕೃತಿಯ ಚಿತ್ರಗಳನ್ನು ಬರೆದು ಎಲ್ಲರ ಮನ ಸೆಳೆದರು. ಅಂದಿನಿಂದ ಆರಂಭವಾದ ಇವರ ಕಲಾಯಾತ್ರೆ ಇಂದಿನವರೆಗೆ ಮುಂದುವರಿ ದಿದೆ. ಸಾಫ್ಟ್‌‌ವೇರ್ ಉದ್ಯೋಗಿಯಾದರೂ ಕೂಡ ರಜಾದಿನ ಗಳಲ್ಲಿ, ಸಮಯ ಸಿಕ್ಕಾಗ ತಾವು ಅಂದುಕೊಂಡ ಕಲಾಕೃತಿಗಳನ್ನು ವಿಶೇಷವಾದ ರೀತಿಯಲ್ಲಿ ಬಿಂಬಿಸುತ್ತಾರೆ. ಇವರ ರಚನೆಯಲ್ಲಿ ಸಾಮಾನ್ಯವಾಗಿ ನಿಸರ್ಗದಲ್ಲಿ ಕಾಣುವ ವಿಭಿನ್ನ ರೀತಿಯ ಸೆಳೆತ ವನ್ನು, ಬಣ್ಣಗಳ ಓಕುಳಿಯನ್ನು ಗಮನಿಸಬಹುದು. ಈ ನಿಸರ್ಗ ವೆಂದರೆ ಬಣ್ಣಗಳ ಮೆರವಣಿಗೆ ಎಂಬ ವಿಚಾರವನ್ನು ಇವರ ಕಲಾಕೃತಿಗಳಲ್ಲಿ ಕಾಣಬಹುದು.

ಸಾಮಾನ್ಯ ಎನಿಸುವ ನಿಸರ್ಗ ದೃಶ್ಯದಲ್ಲಿ ಇವರಿಗೆ ನಾನಾ ರೀತಿಯ ಬಣ್ಣಗಳ ವಿನ್ಯಾಸ, ಒನಪು ಕಾಣಿಸುತ್ತದೆ. ಅವನ್ನು ಗುರುತಿಸಿ, ಆ ದೃಶ್ಯಕ್ಕೊಂಡು ಕಲಾಕೃತಿಯ ಚೌಕಟ್ಟನ್ನು ಕೊಡುವ ಇವರ ಕೌಶಲ ಬೆರಗು ಹುಟ್ಟಿಸುತ್ತದೆ. ಇವರು ರಚಿಸಿದ ಒಂದಕ್ಕಿಂತ ಒಂದು ಆಕರ್ಷಣೀಯವಾದ ಕಲಾಕೃತಿಗಳು ನೋಡಿದವರಿಗೆ ಒಂದು ಕ್ಷಣ ಭಾವಪರವಶರನ್ನಾಗಿಸುತ್ತದೆ. ಇವರ ಕಲಾಕೃತಿಗಳಲ್ಲಿ ಸಾಮಾನ್ಯವಾಗಿ ಮನೆಯ ಮುಂದಿನ ಹೊಲ ಗದ್ದೆಗಳು, ಮಳೆಯ ನೀರು ಹರಿದು ಹೋಗುವ ತೊರೆ, ಮಂಜು ಮುಸುಕಿದ ಬೆಟ್ಟ ಗಳು, ಗದ್ದೆಯಲ್ಲಿ ಹಸಿರಿನ ನರ್ತನ ಹಕ್ಕಿಗಳು, ಆಕಾಶದಲ್ಲಿ ಹಾರಿ ಹೋಗುವ ದೃಶ್ಯ, ಸೂರ್ಯೋದಯ, ಸೂರ್ಯಾಸ್ತ, ಮೋಡ ಮುಸುಕಿದ ವಾತಾವರಣ, ಮಂದವಾದ ಗಾಳಿ ಬೀಸಿದಾಗ ಕಾಣುವ ದೃಶ್ಯ, ತೋಟಗಳಲ್ಲಿ ಕೆಲಸ ಮಾಡುವ ಶ್ರಮಜೀವಿ ಗಳು, ಸೂರ್ಯ ರಶ್ಮಿಯ ಸ್ಪರ್ಶದ ದೃಶ್ಯಕಾವ್ಯ, ವರ್ಣ ವೈವಿಧ್ಯಮಯ ಹೂಗಳು, ಅವುಗಳಮೇಲೆ ಪಾತರಗಿತ್ತಿ ಹಾರಾಟ ಹೀಗೆ
ಪ್ರಕೃತಿಯ ನಾನಾವಿಧದ ಮನಮೋಹಕ ದೃಶ್ಯಗಳು ಇವರ ಕುಂಚದಲ್ಲಿ ಸೆರೆಯಾಗಿದೆ.

ವೆಂಕಟೇಶ ರಾವ್‌ರವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಹವ್ಯಾಸಿ ಕಲಾವಿದರಾಗಿ ಚಿತ್ರ ರಚಿಸಲು ಆರಂಭಿಸಿದ ಇವರು ಇಂದು ನುರಿತ ಕಲಾವಿದರಾಗಿ ಬೆಳೆದಿರುವುದಕ್ಕೆ ಅವರ ಅಪಾರವಾದ ಆಸಕ್ತಿ, ಪರಿಶ್ರಮವೇ ಕಾರಣ. ಮತ್ತೊಂದು ವಿಶೇಷ ವೆಂದರೆ ವಾರಾಂತ್ಯದ ಬಿಡುವಿನ ಸಮಯದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಚಿತ್ರಕಲಾ ಪರಿಷತ್, ವೆಂಕಟಪ್ಪ ಕಲಾ ಗ್ಯಾಲರಿ ಹೀಗೆ ವಿವಿಧ ಪ್ರದೇಶಗಳಿಗೆಲ್ಲಿ ಭೇಟಿ ನೀಡಿ, ಅಲ್ಲಿಯ ಹತ್ತು ಹಲವಾರು ವಿಷಯಗಳನ್ನು ತಮ್ಮ ಚಿತ್ರಗಳಲ್ಲಿ ತರುತ್ತಾರೆ.

ಬೆಂಗಳೂರು, ಮಂಗಳೂರು ಮುಂತಾದೆಡೆ ಹಲವು ಬಾರಿ ಏಕವ್ಯಕ್ತಿ ಹಾಗೂ ಇತರ ಕಲಾಪ್ರದರ್ಶನಗಳನ್ನು ನಡೆಸಿದ್ದಾರೆ. ಮಡಿಕೇರಿಯಲ್ಲಿ ಸಾಂಸ್ಕೃತಿಕ ಕಲಾ ಶಿಬಿರ, ಬೆಂಗಳೂರಿನ ರೋರಿಚ್ ಎಸ್ಟೇಟ್ ಲ್ಯಾಂಡ್ಸ್ಕೇಪ್ ಆರ್ಟ್ ಕ್ಯಾಂಪ್ ಹಾಗೂ
ಲಲಿತಕಲಾ ಅಕಾಡೆಮಿಯ ತಿಂಗಳ ಚಿತ್ರ ಪ್ರದರ್ಶನ ಮತ್ತು ಇನ್ನಿತರ ಚಿತ್ರ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.

ಜಲವರ್ಣ, ಅಕ್ರಲಿಕ್, ತೈಲವರ್ಣ ಬಳಕೆಯಲ್ಲಿ ಪರಿಣಿತಿ ಪಡೆದಿರುವ ಇವರಿಗೆ ಜಲವರ್ಣದಲ್ಲಿ ಪ್ರಕೃತಿ ಚಿತ್ರವನ್ನು ರಚಿಸು ವುದು ಎಂದರೆ ಬಹಳ ಇಷ್ಟ. ಇವರು ಕೆಎಸ್ ಒಯು ಮೂಲಕ ಎಂ ಎಫ್‌ಎ ಕಲಾ ಪದವಿಯನ್ನು ಪಡೆದಿದ್ದಾರೆ. ತಮ್ಮ ವೃತ್ತಿಯ ನಡುವೆಯೂ ಇವರು ಕಲಾರಚನೆಗೆ ತೊಡಗಿಕೊಂಡಿರುವುದನ್ನು, ಸುಂದರ ಕಲಾಕೃತಿಗಳನ್ನು ರಚಿಸುವುದನ್ನು ಕಂಡು
ಬೆರಗು ಮೂಡುತ್ತದೆ.