Friday, 13th December 2024

ಐದೇ ನಿಮಿಷದಲ್ಲಿ ಸಂವಿಧಾನ ಓದಿರಿ – ದಾಸ್‌ ಕ್ಯಾಪಿಟಲ್‌ !

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಪುಕ್ಕಟೆಯಾಗಿ ಏನೂ ಸಿಗಲಾರದು, ನಡು ಬಗ್ಗಿಸಿ ದುಡಿದು ತಿನ್ನಬೇಕು ಎಂಬ ತತ್ತ್ವವನ್ನು There are no free lunches ಎಂಬ
ಇಂಗ್ಲಿಷ್‌ನ ನವ ನಾಣ್ಣುಡಿ ತಿಳಿಸುತ್ತದೆ. ಬಿಟ್ಟಿ ಕೂಳೆನ್ನುವುದು ಮಾನವನ ಘನತೆಯನ್ನು ಕುಂದಿಸುವ ಪರಿಕಲ್ಪನೆ.

ಭಗವದ್ಗೀತೆಯಾದಿಯಾಗಿ, ದಾಸವರೇಣ್ಯರೆಲ್ಲರೂ ಎತ್ತಿ ಹಿಡಿದಿರುವುದು ಕಾಯಕದ ಮಹತ್ವವನ್ನೇ. ಬಸವಣ್ಣನವರ ಹೆಸರನ್ನು ಹೇಳಿಕೊಂಡೇ ಉದರಪೋಷಣೆ ಮಾಡಿಕೊಂಡು ಬಂದಿರುವ ನಮ್ಮ ಹಲವಾರು ಪರಾವಲಂಬಿ ಬುದ್ಧಿಜೀವಿಗಳಿಗೆ ಗಂಜೀ ಕೇಂದ್ರಗಳನ್ನು ಬಂದ್ ಮಾಡಿ ಮಾನವಂತರಾಗಿ ಬದುಕಲು ಹೊಸದಾಗಿ ದೀಕ್ಷೆ ನೀಡಿದ್ದು ಮೋದಿ ಸರಕಾರ.

ಲಾಗಾಯ್ತಿನಿಂದಲೂ ತೆರಿಗೆದಾರರ ಹಣದಲ್ಲಿ ಸರಕಾರವನ್ನು ಹೊಗಳಿಕೊಂಡು ಆ ಕೈಂಕರ್ಯದ ಮೂಲಕ ಪ್ರಾಪ್ತವಾದ ಸವಲತ್ತುಗಳನ್ನು ಅನುಭೋಗಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಈ ವರ್ಗಕ್ಕೆ there is no free lunch ಎಂದು ಮನವರಿಕೆ ಮಾಡಿಕೊಟ್ಟಿದ್ದು ನರೇಂದ್ರ ಮೋದಿ. ಹಣಕೊಟ್ಟು ಪ್ರಚಾರ ಪಡೆಯದ ಅವರ ಈ ದಿಟ್ಟ ಕ್ರಮ ಅವರಿಗೆ ಟೀಕಾಕಾರರ ಬೃಹತ್ ಸೈನ್ಯವನ್ನೇ ಸೃಷ್ಟಿಸುತ್ತದೆಂದು ತಿಳಿದೂ ಅದಕ್ಕವರು ಅಂಜದೇ ಪರಾಶ್ರಿತರಿಗೆ ಹಿಂಡು ಹಿಂಡಾಗಿ ಗೇಟ್ ಪಾಸ್ ಕೊಟ್ಟರು.

ಹಾಗಂತ ಅನ್ನದಾಸೋಹ ಮತ್ತಿತರ ಸೌಲಭ್ಯಗಳ ಫಲಾನುಭವಿಗಳು ಕಾಣೆಯಾದರೆಂದಲ್ಲ. ನಿರ್ನಾಮವಾದರು ಎಂದು ನೀವು ತಿಳಿದಿದ್ದರೆ ನಿಮ್ಮ ನಂಬಿಕೆಯನ್ನು ಅಲುಗಾಡಿಸಲು ಪ್ರಚಲಿತಕ್ಕೆ ಬಂದಿದ್ದಾರೆ ನಾಗಮೋಹನ್ ದಾಸ್.ಸದಾ ಅನ್ನದಾನವ ಬಯಸೋದು ನರಚಿತ್ತ ಎಂಬ ಪುರಂದರದಾಸರ ನುಡಿಯಂತೆ, ಕರ್ನಾಟಕ ಉಚ್ಚ ನ್ಯಾಯಾಲಯದಿಂದ ನ್ಯಾಯಾಽಶರಾಗಿ ನಿವೃತ್ತರಾದ ನಾಗಮೋಹನ ದಾಸರು ಸುಗ್ರಾಸ ಭೋಜನಕ್ಕೇ ವ್ಯವಸ್ಥೆ ಮಾಡಿಕೊಂಡಂತೆ ಕಾಣುತ್ತದೆ. ಅವರು ಮಾಡಿzದರೂ
ಏನು? ಒಂದು ಲಕ್ಷ ಹದಿನೇಳು ಸಾವಿರದ ಮುನ್ನೂರ ಅರವತ್ತೊಂಬತ್ತು ಪದಗಳ ಭಾರತದ ಸಂವಿಧಾನವನ್ನು ಹತ್ತೇ
ಪುಟಗಳಲ್ಲಿ ತಿಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.

ಸಂವಿಧಾನ ಓದು ಎಂಬುದು ಅವರ ಪರಿಶ್ರಮದ ಫಲವಾಗಿ ಹುಟ್ಟು ಪಡೆದಿರುವ ಪುಟ್ಟ ಪುಸ್ತಿಕೆಯ ಹೆಸರು. ಎಪ್ಪತ್ತೆಂಟು ಪುಟಗಳ ಸಣ್ಣ ಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಗೊಂಡ ಸಂವಿಧಾನವನ್ನು ಅಡಕವಾಗಿಸಲು
ಸಾಧ್ಯವೇ? ಷಾರ್ಟ್ ಹ್ಯಾಂಡ್‌ನಲ್ಲಿ ಬರೆದರೂ ಸಾಧ್ಯವಿಲ್ಲ. ಮೇಲಾಗಿ, ಸಂವಿಧಾನವನ್ನು ಯಾವುದೇ ಭಾಷೆಗೆ ಅನುವಾದಿಸಿ ಅದನ್ನು ತಾನೇ ಬರೆದದ್ದು ಎಂದು ಹೇಳಲಾಗುತ್ತದೆಯೇ? ಅದೂ ಇತ್ತೀಚಿನವರೆಗೂ ನ್ಯಾಯಪೀಠದಲ್ಲಿ ಕುಳಿತಿದ್ದ ವ್ಯಕ್ತಿ ಯೊಬ್ಬರು ಹಾಗೆ ಮಾಡಲಾಗುತ್ತದೆಯೇ? ನ್ಯಾಯದೇವತೆಯ ಕಣ್ಣಿಗೆ ಕಪ್ಪುಪಟ್ಟಿಯೇನೊ ಸರಿ, ಆದರೆ ನಿವೃತ್ತ ನ್ಯಾಯಮೂರ್ತಿ ಗಳೇ ಕುರುಡಾಗಿಬಿಟ್ಟರೇ? ಇಲ್ಲ, ನಾಗಮೋಹನ ದಾಸರು ಕುರುಡಾಗಿಲ್ಲ.

ಒಂದು ವೇಳೆ ಕುರುಡಾಗಿದ್ದರೆ, ಅದು ಜಾಣಕುರುಡು. ಅವರ ಪುಸ್ತಕ ಸಂವಿಧಾನ ಓದು ಎಂದು ಹೇಳುತ್ತದೆಯೇ ಹೊರತು, ಇದೇ ಸಂವಿಧಾನ ಎಂದು ಹೇಳಿಲ್ಲ. ಸಂವಿಧಾನವನ್ನು ಹತ್ತೇ ಪುಟಗಳಿಗೆ ಇಳಿಸುವುದೂ ಒಂದು ರೀತಿಯಲ್ಲಿ ಸಂವಿಧಾನವನ್ನು ತಿರುಚಿದಂತೇ ಅಲ್ಲವೇ? ಅಂತಹ ಆರೋಪ ಬಂದರೂ ಅದನ್ನು ನಿವಾರಿಸಿಕೊಳ್ಳಲು ಸಜ್ಜಾಗಿಯೇ ದಾಸರು ನಿವೃತ್ತಿಯ ನಂತರದ ಹೊಸಬದುಕನ್ನು ರೂಪಿಸಿಕೊಂಡಂತಿದೆ. ನಾಲ್ಕು ನೂರಕ್ಕೂ ಹೆಚ್ಚು ವಿಧಿಗಳನ್ನೂ, ನೂರಕ್ಕೂ ಹೆಚ್ಚು ತಿದ್ದುಪಡಿಗಳನ್ನೂ
ಹೊಂದಿರುವ, ವಿಶ್ವದ ಅತಿ ಸುದೀರ್ಘವಾದ ಸಂವಿಧಾನವನ್ನು ಹತ್ತೇ ಪುಟಗಳಿಗೆ ಇಳಿಸಿದ ದಾಸ್ ಸಮಸ್ತ ಬ್ರಹ್ಮಾಂಡವನ್ನೇ ಯಶೋದೆಗೆ ತನ್ನ ಬಾಯಲ್ಲಿ ತೋರಿದ ಶ್ರೀಕೃಷ್ಣನ ದಿವ್ಯ ಪವಾಡವನ್ನು ನೆನಪಿಸುತ್ತಾರೆ.

ಹಾಗಿದ್ದರೆ, ಪುಸ್ತಕದ ಉಳಿದ ಪುಟಗಳಲ್ಲಿರುವುದಾದರೂ ಏನು? ಭಾರತದ ಸುದೀರ್ಘ ನಿಂದನೆ. ಕಳೆದ ವಾರವಷ್ಟೆ, ಭಾರತ ನಿರಂಕುಶಾಧಿಕಾರದತ್ತ ಸಾಗಿದೆ ಎಂದು ಸ್ವೀಡನ್ ದೇಶದ ಸಂಸ್ಥೆಯೊಂದು ತನ್ನ ವರದಿಯಲ್ಲಿ ತಿಳಿಸಿತ್ತು. ಅದಕ್ಕೂ ಮುಂಚೆ ಅಮೆರಿಕದ ಮತ್ತೊಂದು ಸಂಸ್ಥೆ ಅಂಥದೇ ವರದಿಯನ್ನು ಹೊರತಂದಿತ್ತು. ಅಂತಹ ವರದಿಗಳಿಗೆ ಮೂಲ ಗ್ರಾಸ ಒದಗಿಸುವುದೇ ದಾಸರಂಥ ಎಡಪಂಥೀಯರು. ನೂತನ ಕೃಷಿ ನೀತಿಯನ್ನು ವಿರೋಧಿಸಿದ ರೈತ ವೇಷದ ಪ್ರತಿಭಟನಾಕಾರರ ಬೆಂಬಲಕ್ಕೆ
ಹೊರಗಿನ ಯಾವುದೆಲ್ಲ ಶಕ್ತಿಗಳು ನಿಂತವು ಎಂಬುದನ್ನು ನೋಡಿದ್ದೇವೆ.

ಆ ಶಕ್ತಿಗಳ ಆವಾಹನೆಗೆ ಸಂವಿಧಾನ ಓದು ತರಹದ ಅಗ್ಗದ ಎಸ್‌ಎಸ್‌ಎಲ್‌ಸಿ ಗೈಡನ್ನು ಹೋಲುವ ಪುಸ್ತಕಗಳು, ಬರಹಗಳು ಸಹಾಯಕ. ಹೆಚ್ಚು ಮೌಲ್ಯದ ಕರೆನ್ಸಿ ನೋಟ್‌ಗಳು ಬೆಲೆ ಕಳೆದುಕೊಂಡ ನಂತರ ಹಲ್ಲುಕಿತ್ತ ಹಾವಿನಂತಾದವರು ಬೊಚ್ಚು ಬಾಯ ಮೋದಿಯನ್ನು ಕಚ್ಚುವುದು ನಿಲ್ಲಿಸಿಲ್ಲ. ಅದಕ್ಕೆ ಗಾಂಧಿ ಕುಟುಂಬ ಮತ್ತು ಅವರ ನೇತೃತ್ವದ ಪಕ್ಷಕ್ಕಿಂತ ಉತ್ತಮ ಉದಾಹರಣೆ ಬೇಡವೇ ಬೇಡ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತೂ ಬೆಣ್ಣೆ ಕದ್ದ ಬಾಲಕೃಷ್ಣನನ್ನು ಅನ್ಯಮತೀಯರು
ಹೀಗಳೆಯುವಂತೆ ಮೋದಿಯನ್ನು ಕಳ್ಳ ಕಳ್ಳ ಎಂದು ಕರೆದೂ, ಕರೆದೂ ಬಾಯಿನೋಯಿಸಿಕೊಂಡಿದ್ದಾರೆ.

ಆ ನೋವು ಹೆಚ್ಚಾಗಿ, ವಿರಮಿಸುವಾಗ ಅವರ ಪರವಾಗಿ ಯಾರಾದರೂ ಮೋದಿಯನ್ನು ಹಳಿಯಬೇಕಲ್ಲ, ಆ ಕೆಲಸವನ್ನು
ನಾಗಮೋಹನ ದಾಸರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವೇ ಮೋದಿಯನ್ನು ದೋಷಮುಕ್ತರನ್ನಾಗಿ ಘೋಷಿಸಿದರೂ, ಅದನ್ನೇ ಪ್ರಶ್ನಿಸುವಂತೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಹಳೆಯ ರಾಗಕ್ಕೆ ಜೋತು ಬಿದ್ದಿದ್ದಾರೆ.

ಸಮಸ್ತ ವಿಶ್ವವೇ ವೀಕ್ಷಿಸಿದ ದೆಹಲಿ ಪೊಲೀಸರ ಮೇಲಾದ ರೈತರ ಹಲ್ಲೆ ಆಗಲಿ, ತಮ್ಮ ಶೌರ್ಯ, ಸಾಹಸ, ನಿಸ್ವಾರ್ಥತೆಗಳಿಂದ ಜನಮಾನಸವನ್ನ ಆಕ್ರಮಿಸಿಕೊಂಡಿರುವ ಭಾರತೀಯ ಸೈನಿಕರೇ ಆಗಲಿ ದಾಸರ ಕಣ್ಣಿಗೆ ಬೀಳುವುದಿಲ್ಲ. ಈ ಪುಸ್ತಿಕೆಯನ್ನೇ ನಾದರೂ ಪಾಕಿಸ್ತಾನದ ಭಾಷೆಗಳಲ್ಲಿ ಹೊರತಂದಿದ್ದರೆ, ದಿವಾಳಿ ಎದ್ದುಹೋಗಿರುವ ಪಾಕಿಸ್ತಾನದ ಜನ ಅದನ್ನು ಕದ್ದಾದರೂ ಓದಲು ಮುಗಿ ಬೀಳುತ್ತಿದ್ದರೇನೊ!

ಕೋವಿಡ್ ನಂತರದ ದಿನಗಳಲ್ಲಿ, ಭಾರತ ಆರ್ಥಿಕ ಮುಗ್ಗಟ್ಟನ್ನೆದುರಿಸುತ್ತಿದ್ದರೂ ಮೋದಿಯ ಜನಪ್ರಿಯತೆ ತಗ್ಗಿಲ್ಲವೆಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಹಾಗಾದರೆ, ಮೋದಿ ವಿರುದ್ಧ ಬರೆಯಲಾದ ದಾಸರ ಪುಸ್ತಿಕೆಯನ್ನು ಕೊಂಡು ಓದುವರಾದರೂ ಯಾರು? ಬಂಡವಾಳಶಾಹಿಯನ್ನು ಹೊರನೋಟಕ್ಕೆ ಉಗ್ರವಾಗಿ ವಿರೋಧಿಸುವ ಕಮ್ಯುನಿಷ್ಟರಿಗೂ ಹಣಕಾಸನ್ನು ಒದಗಿಸಿಕೊಳ್ಳುವ ಚಾತುರ್ಯವಿದ್ದೇ ಇರುತ್ತದೆ ಎಂಬುದನ್ನು ಸಂವಿಧಾನ ಓದು ಮತ್ತೊಮ್ಮೆ ನಿರೂಪಿಸಿದೆ. ಸಂಸದರಿಗೆ ಕೇಂದ್ರ ಸರಕಾರದಿಂದ ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು (MP’s Local Area
Development Fund) ಓದಿನ ಪ್ರಸರಣಕ್ಕೆ ಬಳಸಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ, ಕಮ್ಯುನಿಷ್ಟ್ – ನಿಷ್ಠ ದಾಸರಿಗೆ ಒಂದು ವಿಚಾರವನ್ನು ನೆನಪಿಸಬೇಕು. ತಮ್ಮ ಸರಕಾರವನ್ನು ಸ್ಥಿರವಾಗಿ ನಿಲ್ಲಿಸುವುದಕ್ಕೆ ಹೆಣಗಾಡುತ್ತಿದ್ದ ಕಾಂಗ್ರೆಸ್ ಪ್ರಧಾನಿ ಪಿ.ವಿ. ನರಸಿಂಹ ರಾಯರು ಸಂಸದರನ್ನು ಓಲೈಸಲು ರೂಪಿಸಿದ ತಂತ್ರವೇ MPLAD Fund ಎಂದು ಕರೆಯಲ್ಪಡುವ ನಿಧಿಯ ಸ್ಥಾಪನೆಗೆ ಕಾರಣವಾಯಿತು. ಅಂದು ಅದನ್ನು ವಿರೋಧಿಸಿದವರು ಸಿಪಿಎಂನ ನಿರ್ಮಲ್ ಚಟರ್ಜಿ ಮತ್ತು ಸೋಮನಾಥ್ ಚಟರ್ಜಿ. ಅದೇ ನಿಧಿಯಿಂದ ಹದಿನೈದು ಲಕ್ಷಗಳನ್ನು ದಾಸ್ ತಮ್ಮ ಖಾತೆಗೆ ಹರಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ದಾಸರ ಅಪೂರ್ವ ಯಶಸ್ಸು ಸಾರ್ವಜನಿಕ ಹಿತಕ್ಕೆ ವಿನಿಯೋಗವಾಗಬೇಕಿದ್ದ ಹಣವನ್ನು ತಮ್ಮ ಸಾಹಿತ್ಯ ಕೃಷಿಗೆ ಹರಿಸಿ ಕೊಳ್ಳುವುದರಲ್ಲಿ ಸಫಲರಾದದ್ದಕ್ಕೆ ಸೀಮಿತವಾಗಿಲ್ಲ. ತತ್ತ್ವ ಪರಿಪಾಲನೆ ಎಂಬುದು ಅವರ ನೈತಿಕತೆಯ ವ್ಯಾಪ್ತಿಯೊಳಗೆ ಬರುವಂತೆ ಕಂಡಿಲ್ಲ. ಯಾವ ಸರಕಾರದ ವಿರುದ್ಧ ಒಂದಾದ ಮೇಲೊಂದರಂತೆ ಬಾಣ ಪ್ರಯೋಗ ಮಾಡಿದ್ದಾರೋ, ಅದೇ ಸರಕಾರದ ಒಂದು ಭಾಗವೇ ಆದ ಸಂಸದರ ನಿಧಿಯೇ ಅವರ ಕೃಷಿಯ ಉತ್ಪನ್ನಕ್ಕೆ ಗರಿಷ್ಠ ಬೆಂಬಲ ಬೆಲೆ ನೀಡಿದೆ.

ಮೋದಿ ಸರಕಾರವನ್ನೇ ಆಗಲಿ, ಸ್ವಯಂ ಮೋದಿಯವರನ್ನೇ ಆಗಲಿ ಟೀಕಿಸಬಾರದೆಂದು ಯಾರೂ ಹೇಳಿಲ್ಲ, ಹೇಳಲಾಗುವುದಿಲ್ಲ. ಮಾಡುವ ಆರೋಪಗಳಲ್ಲಿ ಹುರುಳಿಲ್ಲದಿದ್ದರೂ ನಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷ ಪದೇ ಪದೆ ರುಜುವಾತು ಪಡಿಸುತ್ತಲೇ ಬಂದಿದೆ. ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೇ ದುರ್ಬಳಕೆ ಮಾಡಿ ಆನಂದಿಸುವುದಾದರೆ, ಆ ಆನಂದವನ್ನು
ತಡೆಯದಿರೋಣ. ವಿಷಯ ಅದಲ್ಲ. ಸರಕಾರದ ಮೇಲೆ ಭೀಕರವಾಗಿ ದಾಳಿ ಮಾಡಲೆಂದೇ ಬರೆಯಲಾದ ಪುಸ್ತಕಕ್ಕೆ ಸಂವಿಧಾನ ಓದು ಎಂಬ ಪಾರದರ್ಶಕ ಹೊದಿಕೆಯನ್ನು ಹೊದಿಸಿ ಅದರ ಮಾರಾಟಕ್ಕೆ ಅದೇ ಸರಕಾರ ದಯಪಾಲಿಸಿದ ಸಂಪನ್ಮೂಲವನ್ನು ಎಗ್ಗಿಲ್ಲದೆ ಬಳಸಿದ ವ್ಯಕ್ತಿ ಇತ್ತೀಚಿನವರೆಗೂ ನ್ಯಾಯಾಧೀಶರಾಗಿದ್ದರೆಂಬುದು ಸೋಜಿಗ ಮತ್ತು ದುರಂತ.

ಇಂತಹ ಅನಧಿಕೃತ, ಅನುಪಯುಕ್ತ ಉದ್ದೇಶಗಳಿಗೆ ಬಳಕೆಯಾದ ಹಣದ ಬಗ್ಗೆ ಕೇಂದ್ರ ಆಡಿಟರ್ ಜನರಲ್ ಅನೇಕ ಬಾರಿ ಆಕ್ಷೇಪವೆತ್ತಿದ್ದಾರೆ. ಹಾಗಿದ್ದೂ, ದಾಸ್ ತಮ್ಮ ಅಜೆಂಡಾ – ಪ್ರೇರಿತ ಪುಸ್ತಕಕ್ಕೆ ಸಂಸದರ ಹಣವನ್ನು ಬಳಸಿದ್ದಾರೆಂಬುದು ಖಂಡನೀಯ. ಸಂವಿಧಾನ ಓದು ಸಣ್ಣ ಪುಸ್ತಿಕೆ. ಅದಕ್ಕೆ ಬೆನ್ನುಹುರಿ ಇಲ್ಲ. ಷೆಲನಲ್ಲಿ ನಿಲ್ಲಿಸುವುದು ಕಷ್ಟಸಾಧ್ಯ. ಬಿಜೆಪಿ ನೇತೃತ್ವದಲ್ಲಿ ಭಾರತದ ಪ್ರಜಾಸತ್ತೆ ಸತ್ತೇ ಹೋಯಿತೆಂದು ಅಖಂಡ ಭಜನೆ ಮಾಡುವ ಬರಗೂರು ರಾಮಚಂದ್ರಪ್ಪ ಮತ್ತು
ಪುರುಷೋತ್ತಮ ಬಿಳಿಮಲೆ ಈ ಪುಸ್ತಿಕೆಯ ಬೆನ್ನು ಹುರಿಯಾಗಿ ನಿಂತಿದ್ದಾರೆ.

ಅಂದ ಮೇಲೆ, ಅಲ್ಪ ಸಂಖ್ಯಾತರಿಗೆ ಉಳಿಗಾಲವಿಲ್ಲ, (ಸರ್ವೋಚ್ಚ ನ್ಯಾಯಾಲಯ ಏನೇ ಹೇಳಿರಲಿ) ಹಿಂದುತ್ವ ದೇಶದ ಹಿತಕ್ಕೆ ಮಾರಕ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ, ಎಂಬಂಥ ಸುಪರಿಚಿತ ರಾಗಗಳನ್ನೂ ದಾಸರು ಹಾಡಿರುವುದು ಸಹಜ! ಶಾಸಕಾಂಗವು ನ್ಯಾಯಾಂಗವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವಂಥ ಗಂಭೀರ ಆರೋಪವನ್ನು ಪುಸ್ತಿಕೆಯಲ್ಲಿ ಮಾಡಿರುವ ಮಾಜಿ ನ್ಯಾಯಮೂರ್ತಿ ದಾಸ್ ನಿವೃತ್ತಿಯ ನಂತರವೂ ಸಂಸದ ರೊಬ್ಬರ ಮೇಲೆ ಪ್ರಭಾವ ಬೀರಿ ತಮ್ಮ ಕಿರುಪುಸ್ತಕಕ್ಕೆ ಹದಿನೈದು ಲಕ್ಷ ಪ್ರೋತ್ಸಾಹ ಧನ ಪಡೆಯುವುದು ತಮ್ಮನ್ನೇ ವ್ಯಂಗ್ಯಮಾಡಿಕೊಂಡತ್ತಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಆರೋಪಿಸುವ ದಾಸರ ಅಭಿವ್ಯಕ್ತಿಯ ಪ್ರಾಯೋಜಕರು ಅದೇ ಹಿಂದುತ್ವ ಪಕ್ಷದ ಸಂಸದರಾದ ವಿ. ಶ್ರೀನಿವಾಸ್ ಪ್ರಸಾದ್ ಎಂಬುದು ಮತ್ತೊಂದು ವಿರೋಧಾಭಾಸ.

ಇದು ಯುವಜನಾಂಗದ ಕಣ್ತೆರೆಸಬೇಕೆಂಬ ಪುಸ್ತಕದ ಆಶಯದ ಹೀನಾಯ ಸೋಲು. ಹದಿನೈದು ಲಕ್ಷ ರುಪಾಯಿ ಬೃಹತ್ ಮೊತ್ತದ ಪೋಲು. ಪುಸ್ತಕದ 30000 ಪ್ರತಿಗಳನ್ನು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ವಿತರಿಸಲಾಗಿದೆ. ಇಂಥ ದ್ವಂದ್ವಮಯ ಹಿನ್ನೆಲೆಯನ್ನು ಅರಿತ ವಿದ್ಯಾರ್ಥಿಗಳು ದಾಸರನ್ನಾಗಲೀ, ಅವರ ಪುಸ್ತಕವನ್ನಾಗಲೀ ಗಂಭೀರವಾಗಿ ಪರಿಗಣಿಸುವುದಾದರೂ ಹೇಗೆ? ಮೇಲಾಗಿ, ಈ ಪುಸ್ತಕವನ್ನು ಮುದ್ರಿಸಿ, ಪ್ರಕಟಿಸಿರುವುದು ರಾಜಕೀಯವಾಗಿ ಬೃಹದಾಸೆಗಳನ್ನು ಹೊತ್ತಿರುವ ಶ್ರೀನಿವಾಸ್ ಪ್ರಸಾದರ ತಮ್ಮನ ಪುತ್ರ.

ಯುವಜನಾಂಗಕ್ಕೆ ಮಾರ್ಗದರ್ಶನ ನೀಡುವ ಆಶಯ ಹೊತ್ತ ಪುಸ್ತಕವನ್ನು ಹೊರತರುವಾಗ ನೀತಿಯನ್ನು ಅನುಸರಿಸ ಬೇಕಲ್ಲವೇ?  ಕೋವಿಡ್ ಹೆಮ್ಮಾರಿ ತಂದೊಡ್ಡಿದ ಸಂಕಷ್ಟವನ್ನು ಎದುರಿಸುವ ಸಲುವಾಗಿ ಕೇಂದ್ರ ಸರಕಾರ ಸಂಸದರ ನಿಧಿಯನ್ನು ಎರಡು ವರ್ಷಗಳ ಕಾಲ ರದ್ದು ಪಡಿಸಿತು. ಹಾಗಿದ್ದಲ್ಲಿ ಈ ಪುಸ್ತಕಕ್ಕೆ ಹಣ ಒದಗಿಸಿದ್ದಾದರೂ ಎಲ್ಲಿಂದ. ಕೇಂದ್ರ ಸರಕಾರದ ವಿರುದ್ಧ ಬರೆದ ಪುಸ್ತಕವನ್ನು ಪ್ರಕಟಿಸಲು ಕೇಂದ್ರ ಸರಕಾರದ ಅಧಿನಿಯಮವನ್ನೇ ಗಾಳಿಗೆ ತೂರಲಾಯಿತೇ? ಇಡೀ ಪ್ರಕರಣದಲ್ಲಿ, ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಹೊತ್ತ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್‌ರ ಪಾತ್ರವೂ ಪ್ರಶ್ನಾರ್ಹವೇ.

ಕೇಂದ್ರ ಸರಕಾರದ ವಿರುದ್ಧ ಕೆಂಡ ಕಾರುವ, ತಮ್ಮದೇ ಪಕ್ಷದ ಸಿದ್ಧಾಂತವನ್ನು ಖಂಡಿಸುವ ಪುಸ್ತಕಕ್ಕೆ ತಮ್ಮ ತುಂಬು ಹೃದಯದ ಬೆಂಬಲ ನೀಡಿದ್ದಾರೆ. ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಪಾಲ್ಗೊಳ್ಳುವುದಷ್ಟೇ ಅಲ್ಲದೆ, ಸಮಾರಂಭದ ಜಾಹೀರಾತಿಗೂ ಇಲಾಖೆಯ ಹಣ ನೀಡಿ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಂಸದರ ನಿಧಿಯನ್ನು ರದ್ದುಗೊಳಿಸುತ್ತಿದ್ದಂತೆ ಉತ್ತರ
ಪ್ರದೇಶದ ಮುಖ್ಯಮಂತ್ರಿ ಅದೇ ಭಾರತೀಯ ಜನತಾ ಪಕ್ಷದ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದ ಶಾಸಕರುಗಳಿಗೆ ನೀಡುವ ಶಾಸಕ ನಿಧಿಯನ್ನೂ ರದ್ದುಗೊಳಿಸಿ ಆ ಹಣವನ್ನು ಕೋವಿಡ್ ನಿರ್ವಹಣೆಗೆ ವಿನಿಯೋಗಿಸುವ ನಿರ್ಧಾರ ತೆಗೆದುಕೊಂಡರು.

ಸರಳರೆಂದೇ ಗುರುತಿಸಿಕೊಂಡಿರುವ ಸುರೇಶ್ ಕುಮಾರರಿಗೂ ಸಂಸದರ ನಿಧಿಯನ್ನು ಫಲಪ್ರದವಾಗಿ ಬಳಸಿಕೊಳ್ಳಲು ಸೂಚಿಸುವುದಕ್ಕೆ ನಾಲಿಗೆ ಏಕೆ ನಿಂತಿತು. ಹೇಳಿಕೇಳಿ ಚಾಮರಾಜನಗರ ಜಿ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಂದು.
ಶ್ರೀನಿವಾಸ್ ಪ್ರಸಾದ್ ಆಗಲೀ, ಸುರೇಶ ಕುಮಾರ್ ಆಗಲಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೇರಾವುದೇ ಪಕ್ಷ ಪ್ರಮುಖರೇ ಆಗಲಿ, ತಮ್ಮಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹಕ್ಕನ್ನು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಚಲಾಯಿಸಿದ್ದರೆ, ಪುಸ್ತಕ ಬಿಡುಗಡೆಗೆ ಮುನ್ನವೇ ಮನೆ ಸೇರಿರುತ್ತಿದ್ದರು.