Friday, 13th December 2024

ಮನಸ್ಸಿನ ಮಾತನ್ನು ಕೇಳಬೇಕೇ ?

ಮಧುರಾ ಎಲ್ ಭಟ್ಟ

ಅಲೆಯುತ್ತದೆ ಮನಸು ಎಲ್ಲೆಲ್ಲೊ ಒಮ್ಮೊಮ್ಮೆ. ಆಗ ಎಚ್ಚರಿಸುವುದೇ ಬುದ್ಧಿ ಮಾತು. ಇವರೆಡರಲ್ಲಿ ಒಳ್ಳೆಯದು ಯಾವುದು?

ನಾ ಮಾಡಿದ ತಪ್ಪಿಗೆ ಸಿಗಬಹುದು ಶಿಕ್ಷೆ. ಆದರೆ ಹೃದಯ ಮಾಡಿದ ತಪ್ಪಿಗೆ ಯಾರು ಕೊಡುತ್ತಾರೆ ಶಿಕ್ಷೆ? ಶಿಕ್ಷೆ ಎಂದರೆ ಅದು ಯಾವ ರೀತಿಯಲ್ಲಿಯೂ ಇರಬಹುದು. ಆದರೆ ನಾನು ಅನುಭವಿಸುತ್ತಿರುವ ಶಿಕ್ಷೆಯು ಕನಸನ್ನು ಚೂರು ಮಾಡಿದ, ಆಸೆಗಳನ್ನು
ಭಗ್ನಗೊಳಿಸಿದ ಮನಸ್ಸಿಗೆ ತಡೆಯಲಾರದಷ್ಟು ಮಾತುಗಳ ಪೆಟ್ಟು ನೀಡಿರುವ ಶಿಕ್ಷೆ.

ನಿಜ ಹೇಳಬೇಕೆಂದರೆ ನನಗೆ ಅವನ ಪರಿಚಯವೇ ಇಲ್ಲ. ನಾನು ಅವನನ್ನು ಮೊದಲು ನೋಡಿದ್ದು ಅವನ ವಾಟ್ಸಪ್ ಡಿಪಿಯಲಿ. ತಕ್ಷಣ ವಾವ್ ನೋಡಲು ಎಷ್ಟು ಚಂದ ಇದ್ದಾನೆ ಎಂದು ಒಮ್ಮೆಲೆ ಅನಿಸಿದ್ದು ನಿಜ. ಆದರೆ ಅದಾದ ಮೇಲೆ ನಾನು ಅವನ ಬಗ್ಗೆ
ಚಿಂತಿಸಿದವಳೆ ಅಲ್ಲ. ಆದರೆ ನಾನು ಅವನನ್ನು ನೋಡುವ ಮೊದಲೆ ಅವನ ಹೆಸರು ನನ್ನ ಹೆಸರಿನ ಜೊತೆ ಸೇರಿಹೋಗಿತ್ತು.
ಆದರೆ ನಾನು ಅದರ ಬಗ್ಗೆೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.

ಇದು ಈ ವಯಸ್ಸಿನಲ್ಲಿ ಎಲ್ಲ ಮಾಮೂಲಿ ಎಂಬ ಭಾವನೆ ನನ್ನದು. ಆದರೆ ಅದು ನನ್ನ ಬುದ್ಧಿಗೆ ಗೊತ್ತು, ಮನಸ್ಸಿಗೆ ಗೊತ್ತಿಲ್ಲವೇ?
ಮನಸ್ಸು ಎನ್ನುವುದು ಹೀಗೆ. ಅದು ಒಂದು ಮರ್ಕಟದ ಹಾಗೆ. ಕಂಡಿದ್ದೆಲ್ಲಾ ಬೇಕು ಎಂಬ ಭಾವನೆ ಬಂದು ಬಿಡುತ್ತದೆ. ಹಾಗೆ ಇವನನ್ನು ಮೊದಲ ಬಾರಿ ನೋಡಿದಾಗ ಪರವಾಗಿಲ್ಲ ಹುಡುಗ ಒಂದು ಮಟ್ಟಿಗೆ ಇದ್ದಾನೆ, ನನ್ನ ಮಟ್ಟಿಗೆ ಇವನು ಓಕೆ ಎಂದು
ಯೋಚಿಸಿದ್ದೆ.

ಆದರೆ ಬುದ್ಧಿ ನೀನು ‘‘ಯಾವ ಕಾರಣಕ್ಕಾಗಿ ಇಲ್ಲಿ ಬಂದಿದ್ದೀಯ ಆ ಕೆಲಸ ಮುಗಿಸಿ ಇಲ್ಲಿಂದ ಹೊರಡುತ್ತಿರು’’ ಎಂದು ಹೇಳಿದಾಗ ನನಗೆ ನಿಜವಾದ ಗೊಂದಲ ಸೃಷ್ಟಿಯಾಯಿತು. ನಾನು ನನ್ನ ಮನಸ್ಸಿನ ಮಾತು ಕೇಳಲೆ ಅಥವಾ ಬುದ್ಧಿಯ ಮಾತು ಕೇಳಲೆ ಎಂದು. ಆದರೂ ಆ ಕ್ಷಣಕ್ಕೆ ಕೇಳಿದ್ದು ಮಾತ್ರ ಬುದ್ಧಿಯ ಮಾತು. ಅಲ್ಲಿಂದ ನನ್ನ ಕೆಲಸ ಮುಗಿಸಿ ಹೊರಟು ಬಿಟ್ಟೆ. ಆದರೆ ಅವನ ಮುಖ ಮಾತ್ರ ಕಣ್ಣಿನಲ್ಲಿ ಹಾಗೆ ಅಚ್ಚು ಹಾಕಿದಂತಿತ್ತು. ಆ ಚಿಕ್ಕ ಮೀಸೆ, ಚಿಕ್ಕ ಗಡ್ಡ, ಯಾವಾಗಲೂ ನಗುತ್ತಿರುವ ತುಟಿಗಳು!

ನಾನು ಅವನ ಅದೇ ಮುಖವನ್ನು ಪದೇಪದೇ ನೆನಪಿಸಿಕೊಂಡಿದ್ದರಿಂದಲೋ ಏನೊ, ಅವನು ಮೊದಲ ಬಾರಿಗೆ ನಿನ್ನ ಕನಸಿನಲ್ಲಿ ಬಂದಿದ್ದ. ಅದನ್ನು ನೆನೆದು ನನಗೆ ಒಂದು ಕಡೆಯಿಂದ ಭಯವಾದರೆ ಇನ್ನೊಂದು ಕಡೆಯಿಂದ ನಾಚಿಕೆ, ಸಂಕೋಚ. ಅದಾದ ನಂತರ ನನ್ನ ಬುದ್ಧಿಯು ‘‘ನೀನು ಹೋಗುವ ದಾರಿ ಸರಿಯಿಲ್ಲ. ನೀನು ಮಾಡಲು ಬಂದಿರುವ ಕೆಲಸ ಮರೆತು ಬೇರೆಯ ಕಡೆಗೆ ನಿನ್ನ ಮನಸ್ಸು ಓಡುತ್ತಿದೆ, ಅದು ನಿನ್ನ ದಾರಿ ತಪ್ಪಿಸುತ್ತಿದೆ’’ ಎಂದಲ್ಲ ನೆನಪಿಸುತ್ತಲೇ ಇತ್ತು.

ನನ್ನ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಅವನ ಬಳಿ ಮಾತನಾಡುವುದನ್ನೆ ಕಡಿಮೆ ಮಾಡಿದೆ. ಆದರೆ ಅವನು ಎಲ್ಲಿ ನನ್ನ ಬಿಡುತ್ತಾನೆ. ನಾನು ಅವನನ್ನು ಮಾತನಾಡಿಸದೆ ಇದ್ದರೂ ಅವನೇ ನನ್ನ ಬಳಿ ಬಂದು ಮಾತನಾಡಿಸುತ್ತಿದ್ದ. ನಾನು ‘‘ಇರಲಿ
ಬಿಡು ನನ್ನ ಮನಸ್ಸು ನನ್ನ ಹತೋಟಿಯಲ್ಲಿದ್ದರೆ ಆಯಿತು’’ ಎಂದು ಸುಮ್ಮನಿದ್ದೆ.

ಆದರೆ ಅವನೆ ಒಂದು ದಿನ ನನ್ನ ಹತ್ತಿರ ಪ್ರೇಮ ನಿವೇದನೆ ಮಾಡಿಕೊಂಡ. ಆ ಕ್ಷಣದಲ್ಲಿ ನನಗೆ ಗುಡುಗು ಸಿಡಿಲು ಮಳೆ ಬಿಸಿಲು ಇದೆಲ್ಲಾ ಒಟ್ಟಿಗೆ ಬಂದಂತಹ ಖುಷಿ ನಾಚಿಕೆಯ ಭಯದ ಅನುಭವ. ವೈದ್ಯ ಹೇಳಿದ್ದು ಹಾಲು ಅನ್ನ ರೋಗಿ ಬಯಸಿದ್ದು
ಹಾಲು-ಅನ್ನ ಅನ್ನುವ ಹಾಗಿತ್ತು ನನ್ನ ಪರಿಸ್ಥಿತಿ.

ಆದರೆ ನಾನು ಅವನ ಬಳಿ ‘‘ನನಗೆ ಈ ಪ್ರೀತಿ ಪ್ರೇಮದಲ್ಲಿ ನಂಬಿಕೆ ಕಡಿಮೆ. ಈ ವಯಸ್ಸಿನಲ್ಲಿ ನಮಗೆ ಇದು ಬೇಡ’’ ಎಂದು ಹೇಳಿ ಅಲ್ಲಿಂದ ಹೊರಟುಬಿಟ್ಟೆ. ಆದರೂ ನಾನು ಸುಮ್ಮನಿರಲಾರದೆ ನನ್ನ ಬಗ್ಗೆೆ ನನ್ನ ಪರಿವಾರದ ಬಗ್ಗೆ ಎಲ್ಲವನ್ನೂ ಹೇಳಿ ‘‘ಸ್ವಲ್ಪ ಸಮಯ ಕೊಡು’’ ಎಂದು ಹೇಳಿದೆ. ಅದಕ್ಕೆ ‘‘ನನಗೂ ಹಾಗೆಯೇ ಅನಿಸುತ್ತಿದೆ ನನಗೆ ಪ್ರೀತಿಯಲ್ಲಿ ನಂಬಿಕೆಯಿಲ್ಲ ಎನ್ನುವುದು ನನ್ನ ಭಾವನೆ’’ ಎಂದು ಹೇಳಿಬಿಟ್ಟ.

ಹಾಗೆ ನಾನು ಸುಮ್ಮನೆ ಅದರ ಬಗ್ಗೆ ಯೋಚಿಸಲು ಹೋಗಲಿಲ್ಲ. ಆದರೆ ನನ್ನ ಮನಸ್ಸು ಮಾತ್ರ ಅದನ್ನು ಮರೆಯಲು ಸಿದ್ಧವೇ ಇರಲಿಲ್ಲ. ಅವನು ನನ್ನ ಬಳಿ ಮಾತನಾಡುವಾಗ ಸ್ವಲ್ಪ ಧ್ವನಿ ಏರಿಸಿ ಮಾತನಾಡಿದರೆ ಸಾಕು ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಅಳುವ ಶಬ್ದ ಕೇಳಿತಿತ್ತು. ಅವನು ನನಗೆ ಬೈಯುತ್ತಾನೋ ಬುದ್ದಿವಾದ ಹೇಳುತ್ತಾನೋ ತಿಳಿದಿಲ್ಲ. ಆದರೆ ಅವನು ಧ್ವನಿ ಏರಿಸಿ ಮಾತನಾಡುವುದನ್ನು ಮಾತ್ರ ನನ್ನ ಮನಸ್ಸು ಸಹಿಸಿಕೊಳ್ಳುತ್ತಿರಲಿಲ್ಲ.

ಅವನಲ್ಲಿ ಪದೇಪದೇ ಬೈಸಿ ಕೊಳ್ಳುವುದಕ್ಕಿಂತ ಇಗೊ ಹರ್ಟ್ ಮಾಡಿಸಿಕೊಳ್ಳುವುದಕ್ಕಿಂತ ಬುದ್ಧಿಯ ಮಾತು ಕೇಳುವುದು ಒಳ್ಳೆಯ ದಲ್ಲವೆಂದು ನಾನು ಸುಮ್ಮನಾದೆ. ಇದು ಬರಿ ಪ್ರೀತಿಯ ವಿಚಾರದಲ್ಲಿ ಆಗುವ ಗೊಂದಲವಲ್ಲ. ನಮ್ಮ ಎಲ್ಲಾ ಆಲೋಚನೆ ಯಲ್ಲಿಯೂ ಆಗುವ ಗೊಂದಲವಿದು. ಇಲ್ಲಿ ಪ್ರೀತಿಯ ಉದಾಹರಣೆಯ ಮೂಲಕ ಹೇಳಿದ್ದೇನೆ ಅಷ್ಟೇ. ನಾವು ನಮ್ಮ ಬುದ್ಧಿಗಿಂತ ಮನಸ್ಸಿಗೆ ಪ್ರಾಶಸ್ತ್ಯ ಕೊಡುವುದು ಹೆಚ್ಚು. ನಾವು ಭಾವಜೀವಿಗಳಾದ್ದರಿಂದ ಬುದ್ಧಿ ಸರಿಯಾದ ದಾರಿ ತೋರಿಸಲಿ ಎಚ್ಚರಿಕೆ
ನೀಡಲಿ. ಆದರೆ ನಾವು ನಮ್ಮ ಹೃದಯದ ಮನಸ್ಸು ಮಾತು ಕೇಳುವುದೇ ಹೆಚ್ಚು.