ವಾಣಿ ಹುಗ್ಗಿ
ಬ್ರಹ್ಮಗಂಟು ಹಾಕಿಸಿಕೊಂಡು, ಏಳು ಹೆಜ್ಜೆ ಇಟ್ಟು, ಅಗ್ನಿಸಾಕ್ಷಿಯಾಗಿ ಮದುವೆಯಾಗಿದ್ದಕ್ಕೆ ಅರ್ಥ ಬರೋದು ಸತಿ-ಪತಿ ಸೊಗಸಾದ ಜೀವನ ನಡೆಸಿದಾಗ. ಅರಿತು, ಬೆರೆತು ಒಬ್ಬರಿಗೊಬ್ಬರು ಆಸರೆಯಾಗಿ ಮುನ್ನಡೆದಾಗ ಬಾಳು ಬಂಗಾರ ವಾಗುತ್ತದೆ.
ಮದುವೆ ಎಂಬುದು ಜೀವನದ ಪ್ರಮುಖ ತಿರುವು. ಒಳ್ಳೆಯ ಸಾಮಾಜಿಕ ವ್ಯವಸ್ಥೆಗಾಗಿ ವಿವಾಹ ಎಂಬ ಪರಿಕಲ್ಪನೆಯನ್ನು ನಮ್ಮ ಹಿರಿಯರು ರೂಪಿಸಿದ್ದಾರೆ. ಈ ವಿವಾಹಗಳು ಕೆಲವರ ಬಾಳಿನಲ್ಲಿ ತುಸು ಏರುಪೇರನ್ನು ಮಾಡಿದರೂ, ಮದುವೆಯ ಉದ್ದೇಶ ಗಂಡು-ಹೆಣ್ಣಿನ ಜೀವನ ಹಸನಾಗಲಿ ಎಂದೇ ತಾನೆ!
ಒಂದು ಯಶಸ್ವಿ ವಿವಾಹವು ಏನೂ ಅರಿಯದ ಬಾಲೆ ಯಶೋಧೆಯನ್ನು ಭಾರತದ ಮೊದಲ ಮಹಿಳಾ ವೈದ್ಯೆ ಆನಂದಿ ಬಾಯಿ ಯನ್ನಾಗಿ ಮಾಡಿತು. ವಿವಾಹ ವೈಫಲ್ಯವು ಚಿಂದಿಯಾಗಿದ್ದ ಮಹಿಳೆಯನ್ನು ಸಿಂಧೂ ತಾಯಿಯನ್ನಾಗಿಸಿತು. ‘‘ಅವನು ದುಡಿಯೋ ದಿಲ್ಲ. ಕುಡಿದು, ತಿಂದು ದುಡ್ಡು ಹಾಳು ಮಾಡುತ್ತಾನೆ.’’ ‘‘ನೀವೆ ಅಲ್ಲವೆ ಮದುವೆ ಮಾಡಿ ಸಿದ್ದು, ನೋಡಿ ನನ್ನ ಜೀವನ ಮೂರಾಬಟ್ಟೆಯಾಯಿತು.’’
‘‘ಒಂದು ಮಾತಾಡಿದ್ರೆ ನಾಕು ಮಾತಾಡ್ತಾಳೆ, ಇಂಥ ಗಯ್ಯಾಳಿ ಜೊತೆಗೆ ನಾನಿರಲಾರೆ.’’ ಹೀಗೆ ತಂದೆ ತಾಯಿ ಮುಂದೆ ನಿಂತು ಮದುವೆ ಮಾಡಿಸಿದ ಬಂಧುಗಳನ್ನು ದೂಷಿಸು ವುದು ಸಾಮಾನ್ಯ. ಹಿರಿಯರು ಮುಂದೆ ನಿಂತು ಮದುವೆ ಮಾಡಿಸಿದ್ದಾರೆಂದರೆ ಜೀವನ ನಿರ್ವಹಣೆ ಹಿರಿಯರದಾಗಿರುತ್ತದೆಯೆ? ಹಿರಿಯರು ಸಂಸಾರ ಮಾಡಿಸಲಾರರು. ಪ್ರೀತಿ ಮಾಡಿ ಆದ ಮದುವೆಯಾಗಿರಲಿ ಅಥವಾ ಮದುವೆಯಾದ ಮೇಲೆ ಪ್ರೀತಿ ಮಾಡೋದಾಗಿರಲಿ, ದಾಂಪತ್ಯ ಸತಿ-ಪತಿಗಳ ಜವಾಬ್ದಾರಿ. ಬಾಂಧವ್ಯವನ್ನು ನಿಭಾಯಿಸುವ ಬದ್ಧತೆ ಇರಲೇಬೇಕು.
ಹಿಂದಿನ ಜನ್ಮದ ನಂಟು
ಋಣಾನುಬಂಧ ರೂಪೇನ ಪಶುಪತ್ನಿಸುತಾಲಯ! ಕಳೆದ ಜನ್ಮದ ಋಣವೇ ಈ ಜನ್ಮದಲ್ಲಿ ಗಂಡ-ಹೆಂಡತಿಗಳಾಗಲು ಕಾರಣ. ಪತಿ-ಪತ್ನಿ ಸಂಬಂಧವನ್ನು ಗಟ್ಟಿಗೊಳಿಸಲು ಇಬ್ಬರೂ ಆಸ್ಥೆ ವಹಿಸಬೇಕು.
ಹಾಗೆಯೇ ಸಣ್ಣ ತಪ್ಪುಗಳೆಡೆಗೆ ಸಣ್ಣ ಮಟ್ಟದ ದಿವ್ಯ ನಿರ್ಲಕ್ಷ್ಯವೂ ಬೇಕು. ಪುಟ್ಟ ಕಡ್ಡಿಯಾದ ಭಿನ್ನಾಭಿಪ್ರಾಯಗಳನ್ನು ವಾದ ಮಾಡಿ ಬೆಳೆಸಿ ಗುಡ್ಡವಾಗಿಸ ಬಾರದು, ಇಲ್ಲಿ ಮೌನವೂ ಅವಶ್ಯ. ಪರಸ್ಪರ ಹೊಂದಾಣಿಕೆ, ನಂಬಿಕೆ ಅಗತ್ಯ. ಅವರವರ ಸ್ವಾತಂತ್ರ್ಯ ಅವರಿಗಿರಬೇಕು, ಆದರೆ ಸ್ವಾತಂತ್ರ್ಯ ಸ್ವೇಚ್ಛೆಯಾಗ ಬಾರದು. ಗೌರವ, ಭಾವನೆಗಳನ್ನು ಹಂಚಿಕೊಂಡು ದಂಪತಿ ಒಳ್ಳೆಯ ಸ್ನೇಹಿತ ರಾದರೆ ಜೀವನ ಅದ್ಭುತವಾಗಿರುತ್ತದೆ.
ಮನಸ್ಸು ಒಂಟಿಯಾಗಬಾರದೆಂದೇ ಮತ್ತೊಂದು ಮನಸ್ಸನ್ನು ಗಂಟು ಹಾಕುವ ಈ ವ್ಯವಸ್ಥೆಯನ್ನು ಹಿರಿಯರು ರೂಪಿಸಿದ್ದಾರೆ. ಏರುಪೇರಿನ ಜೀವನದಲ್ಲಿ ಕಷ್ಟ-ಸುಖ ಎಲ್ಲವನ್ನೂ ಅನುಭವಿಸಲೇಬೇಕು. ಸಮಸ್ಯೆಗಳ ಜಂಜಾಟದಲ್ಲಿ ಬದುಕು ಕಳೆಯದಿರಲಿ. ಬೇಂದ್ರೆ ಅಜ್ಜ ಹೇಳಿದಂತೆ ಸಮರಸವೇ ಜೀವನವಾಗಲಿ. ವಿವಾಹದ ಸಾಫಲ್ಯ ಎಲ್ಲಿದೆ? ಕುಟುಂಬ ಕಟ್ಟಿ, ಕಷ್ಟಪಟ್ಟು ದುಡಿದು
ದುಡ್ಡು ಮಾಡೋದ್ರಲ್ಲಿ, ವಿದೇಶ ಯಾತ್ರೆಗಳಲ್ಲಿ, ಮಕ್ಕಳು ಮಾಡಿಕೊಳ್ಳೊದ್ರಲ್ಲಿ ಇದೆಯೆ? ಇಲ್ಲ..ಇದಕ್ಕೊಂದೇ ಉತ್ತರ ಮನಸ್ಸಿ ನಲ್ಲಿ.
ಸ್ವಂತ ಮನೆ, ನಾಲ್ಕು ಚಕ್ರದ ವಾಹನ, ದುಬಾರಿ ಶಾಲೆಯಲ್ಲಿ ಮಕ್ಕಳ ಓದು, ಬ್ರ್ಯಾಂಡೆಡ್ ಬಟ್ಟೆಗಳು, ವಿದೇಶ ಯಾತ್ರೆಗಳ ಕನಸನ್ನು ನನಸಾಗಿಸುವ ಕಡೆ ಪ್ರಯತ್ನಿಸುತ್ತಲೇ ಇರಬೇಕೆ ಹೊರತು ಮತ್ತೊಬ್ಬರ ವೈಭವದ ಜೀವನ ನೋಡಿ ಕರುಬಬಾರದು. ಅವರ ಐಶಾರಾಮಿ ಬದುಕಲ್ಲಿ ನೆಮ್ಮದಿಯೆ ಇಲ್ಲದಿರಬಹುದು, ಏಕೆಂದರೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆನೇ ಕಾಣೋದು.
ಎಷ್ಟೋ ಬಾರಿ ತಳ್ಳುಗಾಡಿಯಲ್ಲಿ ತರಕಾರಿ ಮಾರುವ ಗಂಡ-ಹೆಂಡತಿ ಹೆಚ್ಚು ಅನ್ಯೋನ್ಯತೆಯಿಂದಿರುತ್ತಾರೆ. ಮೈ ಮುರಿಯುವ ತನಕ ದುಡಿತ, ಸರಳವಾದ ನಊಟ, ಹಾಯಾದ ನಿದ್ದೆ. ಅವರಿಗೆ ಬೇರೋಬ್ಬರ ಕುರಿತು ಯೋಚಿಸಲು, ಇನ್ನೊಬ್ಬರ ಸಿರಿವಂತಿಕೆ ಕಂಡು ಹೊಟ್ಟೆ ಉರಿಸಿಕೊಳ್ಳುವಂತಹ ಉಸಾಬರಿ ಮಾಡಲು ಸಮಯವೇ ಇರುವುದಿಲ್ಲ.
ಹೆಣ್ಣಿಗೆ ಹೆಚ್ಚು ಕಷ್ಟ
ವಿವಾಹದ ನಂತರ ಸ್ತ್ರೀಯರು ಜಾಸ್ತಿ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಪುರುಷರಿಗೆ ಹೋಲಿಸಿದೆ, ಸ್ತ್ರೀಯರು ಮಾಡುವ ತ್ಯಾಗ, ಮಾಡಿಕೊಳ್ಳುವ ರಾಜಿ ಜಾಸ್ತಿ. ಹೆಚ್ಚಿನ ಎಲ್ಲ ನೀತಿ-ನಿಯಮಗಳು ಸ್ತ್ರೀ ಕೇಂದ್ರಿತವಾಗಿವೆ. ಇದಕ್ಕೆ ರಾವಣನನ್ನು ಸಹಿಸಿಕೊಂಡ ಧರ್ಮಪತ್ನಿ ಮಂಡೋದರಿ ಯಾಗಲಿ ಅಥವಾ ಮರ್ಯಾದಾ ಪುರುಷೋತ್ತಮ, ಏಕಪತ್ನಿ ವೃತಸ್ಥ ಶ್ರೀರಾಮನ ಅರ್ಧಾಂಗಿ ಸೀತೆಯಾಗಲಿ ಸಾಕ್ಷಿಯಾಗಿ ನಿಲ್ಲುತ್ತಾರೆ. ಆದರೆ ಯಾವ ವಿಶ್ವವಿದ್ಯಾನಿಲಯಗಳಲ್ಲೂ ಗಂಡ ಹೆಂಡಿರ ನಡುವೆ ಬೆಳೆಸಿಕೊಳ್ಳಬೇಕಾದ ಈ ಸಾಮರಸ್ಯವನ್ನು ಬೋಧಿಸುವುದಿಲ್ಲ. ಹೊಂದಾಣಿಕೆಯೆಂಬ ಕಷ್ಟದ ನೀತಿ ಸಾಧ್ಯವಾಗೋದು ಪ್ರತಿಯೊಬ್ಬರ ನಾನು ಎಂಬ ಅಹಂಕಾರವನ್ನು ಬದಿಗಿಟ್ಟಾಗಲೇ.
ಬೆಳಕು ಬರಲು ಎಣ್ಣೆ ಬತ್ತಿ
ಎಣ್ಣೆೆ-ಬತ್ತಿ ಸೇರಿ ಕಾರ್ಯ ನಿರ್ವಹಿಸಿದಾಗಲೇ ಹಣತೆ ಬೆಳಕು ನೀಡೊದು. ಹಾಗೆಯೇ ಪತಿ-ಪತ್ನಿ ಇಬ್ಬರೂ ಬಾಂಧವ್ಯವನ್ನು
ಗಟ್ಟಿಗೊಳಿಸಿಕೊಂಡಾಗಲೆ ಬದುಕೆಂಬ ಪಣತಿ ಬೆಳಗೋದು. ಜೀವನ ನಿಂತ ನೀರಾಗದೆ ಹರಿಯುವ ನದಿಯಾಗಬೇಕೆಂದರೆ, ಪ್ರೀತಿ ಬತ್ತದ ಒರತೆಯಾಗಿರಬೇಕು. ಬ್ರಹ್ಮಗಂಟು ಹಾಕಿಸಿಕೊಂಡು, ಏಳು ಹೆಜ್ಜೆ ಇಟ್ಟು, ಅಗ್ನಿಸಾಕ್ಷಿಯಾಗಿ ಮದುವೆಯಾಗಿದ್ದಕ್ಕೆ ಅರ್ಥ ಬರೋದು ಸತಿ-ಪತಿ ಸೊಗಸಾದ ಜೀವನ ನಡೆಸಿದಾಗ.
ಅರಿತು, ಬೆರೆತು ಒಬ್ಬರಿಗೊಬ್ಬರು ಆಸರೆಯಾಗಿ ಮುನ್ನಡೆದಾಗ ಬಾಳು ಬಂಗಾರವಾಗುತ್ತದೆ. ರಸಋಷಿ ಕುವೆಂಪುರವರ ಕವನ ಸಂಕಲನ ‘‘ಚಂದ್ರಮಂಚಕೆ ಬಾ ಚಕೋರಿ’’ಯನ್ನು ನವದಂಪತಿಗಳಿಗೆ ಉಡುಗೊರೆಯಾಗಿ ಕೊಟ್ಟರೆ ಶೃಂಗಾರ, ಸಾಮರಸ್ಯವನ್ನು ಅಳವಡಿಸಿಕೊಳ್ಳಲು ಸಹಾಯಕವೆನಿಸುತ್ತೆ. ಹಾಗೆಯೇ, ಅಕಸ್ಮಾತ್ ಗಂಡ ಹೆಂಡಿರ ನಡುವೆ ಬೇಸರ ಮೂಡಿದಾಗ, ಆಪ್ತ ಸಮಾಲೋಚನೆಯಲ್ಲಿ ಅವರ ಮನಸ್ಸಿಗೆ ತುಸು ಶಿಕ್ಷಣ ನೀಡಿದರೆ, ವಿವಾಹ ವಿಚ್ಛೇದನಗಳು ಕಡಿಮೆಯಾಗಬಹುದು.
ನಾನು ಕಣಕ, ನೀನು ಹೂರ್ಣ
ನಿನ್ನನಪ್ಪೆ ನಾನು ಪೂರ್ಣ!
ನಾನಿಲ್ಲದೆ ನೀನು ಚೂರ್ಣ;
ನೀನಿಲ್ಲದೆ ನಾನು ಶೀರ್ಣ!
ಎರಡು ಹೆಸರು, ಒಂದೆ ಉಸಿರು
ನಾನು ಪತಿ, ನೀನು ಸತಿ,
ಒಂದೆ ದಂಪತಿ!