Wednesday, 11th December 2024

ರಾಜಕಾರಣಿಗಳಲ್ಲಿ ಮರೆಯಾಗುತ್ತಿವೆಯೇ ಜನಪರ ಆಶಯಗಳು ?

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ಟೋಪಿ ಮಾರುವನೊಬ್ಬ ಊರೆಲ್ಲಾ ಸುತ್ತಾಡಿ ದೇಹದ ಆಯಾಸ ಕಳೆಯಲು ಮರವೊಂದರ ಕೆಳಗೆ ಶ್ರಮಿಸಿ ನಿದ್ರೆಗೆ ಜಾರುತ್ತಾನೆ. ನಂತರ ಕಣ್ಣುಬಿಟ್ಟು ನೋಡುತ್ತಾನೆ. ಮರದ ಮೇಲಿನ ಕೋತಿಗಳೆಲ್ಲಾ ಒಂದೊಂದು ಟೋಪಿಯನ್ನು ಎತ್ತೋಯ್ದಿರುತ್ತದೆ.

ತನ್ನ ಟೋಪಿ ಗಳನ್ನು ವಾಪಸ್ಸು ಪಡೆಯಲು ಬುದ್ಧಿವಂತನಾದ ಆತ ಕೋತಿಗಳ ಗಮನಸೆಳೆದು ತನ್ನ ತಲೆಯ ಮೇಲಿದ್ದ ಟೋಪಿ ಯನ್ನು ಕಿತ್ತು ನೆಲಕ್ಕೆ ಬಿಸಾಡುತ್ತಾನೆ. ಇದನ್ನು ಕಂಡ ಕೋತಿಗಳು ಆತನಂತೆಯೇ ತಮ್ಮ ಕೈಲಿದ್ದ ಟೋಪಿಗಳನ್ನೆಲ್ಲಾ ಕೆಳಕ್ಕೆ ಬಿಸಾಡುತ್ತವೆ. ಕೂಡಲೇ ಆತ ಟೋಪಿಗಳನ್ನು ಆಯ್ದುಕೊಂಡು ಜಾಗ ಖಾಲಿ ಮಾಡುತ್ತಾನೆ. ಸುಮಾರು ಎಪ್ಪತ್ತು ವರ್ಷಗಳ ನಂತರ ಆತನ ಮರಿಮೊಮ್ಮಗ ಅದೇ ವ್ಯಾಪಾರ ಮಾಡಿಕೊಂಡು ಅದೇ ಮರದಕೆಳಗೆ ಬಂದು ವಿಶ್ರಮಿಸುತ್ತಾನೆ.

ಮತ್ತೆ ಕೋತಿಗಳು ಆತನ ಟೋಪಿ ಗಳನ್ನೆಲ್ಲಾ ಎತ್ತೊಯ್ದು ಮರವೇರುತ್ತದೆ. ಎಚ್ಚೆತ್ತ ಆ ಯುವಕ ತನ್ನ ಮುತ್ತಾತ ಹೇಳಿದ ಅನುಭವದ ಮಾತನ್ನು ನೆನಪಿಸಿಕೊಂಡು ಅದರಂತೆ ಕೋತಿಗಳ ಗಮನ ಸೆಳೆದು ತನ್ನ ಟೋಪಿಯನ್ನು ಕಿತ್ತು ನೆಲಕ್ಕೆ ಬಡಿಯು ತ್ತಾನೆ. ಆದರೆ ಮತ್ತೊಂದು ಕೋತಿ ಆತನ ಟೋಪಿಯನ್ನೂ ಎತ್ತಿಕೊಂಡು ಮರವೇರಿ ಬಿಡುತ್ತದೆ. ಇದನ್ನು ನಿರೀಕ್ಷಿಸದಿದ್ದ ಆತ ಕಂಗಾಲಾಗಿ ಅಲ್ಲಿಂದ ಓಡಿಹೋಗುತ್ತಾನೆ.

ಈ ಕಥೆ ಇಂದಿನ ರಾಜಕೀಯ ಪಕ್ಷಗಳಿಗೂ ಹೊಂದಿಕೆಯಾಗುತ್ತದೆ. ದೇಶದ ಪ್ರಜೆಗಳನ್ನು ಈ ಕಥೆಯಲ್ಲಿನ ಮರಿಮೊಮ್ಮಗನಂತೆ ತಾತನ ಕಾಲದ ಕೋತಿಗಳೆಂದೇ ಭಾವಿಸಿಕೊಂಡು ಬರಲಾಗುತ್ತಿದೆ. ರಾಜಕೀಯ ಪಕ್ಷಗಳು ಇನ್ನೂ ಹಳೇಕಾಲದ ಬಯಲು
ನಾಟಕ ಪ್ರದರ್ಶನದಿಂದ ಹೊರಬಂದೇ ಇಲ್ಲ. ಇನ್ನೂ ಅತಿಯಾಗಿ ಬಣ್ಣಗಳನ್ನು ಹಚ್ಚಿಕೊಂಡು ಕೃತಕವಾಗಿ ಅಸಮಯೋಜಿತ ವಾಗಿ ನಡೆದುಕೊಳ್ಳುತ್ತಿವೆ. ಆದರೆ ಮಹಾಪ್ರಜೆಗಳು ಮಾತ್ರ ಬದಲಾಗಿಹೋಗಿದ್ದಾರೆ. ಆತ ಸಿನಿಮಾಗಳಲ್ಲಿ ಕೃತಕ ಡೈನಾಸರಸ್ ‌ಗಳನ್ನ ಕೃತಕ ಮೇಕಪ್ ಗಳನ್ನ ಕೃತಕ ದೃಶ್ಯವೈಭವಗಳ ಸೃಷ್ಟಿಗಳನ್ನು ನೋಡಿ, ಅದರ ನಿಜವಾದ ಮೇಕಿಂಗ್ ವಿಡಿಯೋಗಳನ್ನೂ ನೋಡಿ ಖುಷಿಪಡುತ್ತಿದ್ದಾರೆ.

ಆದರೆ ರಾಜಕಾರಣಿಗಳು ಮಾತ್ರ ತಮ್ಮನ್ನು ತಾವು ಇನ್ನೂ ‘ಕಣ್ತೆರೆದು ನೋಡು’ ಚಿತ್ರದ ನಟ ಬಾಲಕೃಷ್ಣ ಅವರ ಪಾತ್ರದಲ್ಲಿದ್ದೇವೆ ಎಂದೇ ಭಾವಿಸಿಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ಸಮಾಜದಲ್ಲಿ ಅಸ್ತಿತ್ವಗಳಿಸಿಕೊಳ್ಳಬೇಕಾದರೆ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧವಾಗಿರಲೇಬೇಕು. ಅಂದರೆ ಸಮಾನತೆ, ಸಾಮಾಜಿಕ ಬದ್ಧತೆ, ಸರ್ವಜನಾಂಗಗಳ ಆದ್ಯತೆ, ಗೌರವ, ಸರ್ವಜನ ಸ್ನೇಹಿಯಾಗಿರಲೇ ಬೇಕು.

ಅತಿ ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕನನ್ನೂ ಪ್ರಜೆಯನ್ನಾಗಿ ಕಾಣಬೇಕೇ ಹೊರತು ಕೇವಲ ‘ಮತದಾರನನ್ನಾಗಿ’ ನೋಡ ಬಾರದು. ಮೊದಲು ಪ್ರಜೆ ಆನಂತರವೇ ಮತದಾರ. ದೌರ್ಭಾಗ್ಯವೇನೆಂದರೆ ಇಂದಿನ ರಾಜಕಾರಣಿಗಳಿಗೆ ರಾಜಕೀಯ ಪಕ್ಷಗಳಿಗೆ
ಪ್ರಜೆ – ಪ್ರಜಾಪ್ರಭುತ್ವವೆಂಬ ಪದಗಳೇ ಮರೆತುಹೋಗಿವೆ. ಇಂದಿನ ರಾಜಕಾರಣದಲ್ಲಂತೂ ಪ್ರತಿಯೊಬ್ಬನೂ ಮತದಾರ ಮತ್ತು ಆತನ ಜಾತಿ ಆತನ ಧರ್ಮವೇ ಮೊದಲ ಮಂತ್ರ ಮತ್ತು ಕುತಂತ್ರದ ಕವಡೆಗಳಾಗಿವೆ.

ಇತ್ತೀಚೆಗೆ ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ ಅಂತ್ಯದಲ್ಲಿ ತಂಡದಲ್ಲಿದ್ದ ಕಾರ್ಯಕರ್ತರು ‘ಜೈ ಶ್ರೀರಾಮ್ ಜೈ ಭಾರತಮಾತೆ’ ಎಂದು ಕೂಗಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ರೋಷ ಉಕ್ಕಿಹರಿದು ಗಲಭೆಗಳಾದವು ಎಂದು ವರದಿಯಾಗಿದೆ.
ಕೆಲಮಂದಿ ಆಸ್ಪತ್ರೆ ಸೇರಿದರು, ಶಾಸಕರ ಮಗನ ಮತ್ತು ಕಾರ್ಯಕರ್ತರ ಬಂಧನವಾಯಿತು. ಇದರ ಪರಿಣಾಮವಾಗಿ ವಿಧಾನ ಸಭೆಯಲ್ಲಿ ಶಾಸಕ ಜಮೀರ್‌ಅಹಮದ್ ಅವರ ಪವರ್ ಫುಲ್ ‘ಐಡಿಯಾ’ದಂತೆ ಭದ್ರಾವತಿ ಶಾಸಕ ಸಂಗಮೇಶ್ ಅಂಗಿಬಿಚ್ಚಿ ಅಮಾನತು ಆಗಿದ್ದು, ಇವೆಲ್ಲವೂ ರಾಜಕೀಯದ ಅನಿವಾರ್ಯ (?) ಬೆಳವಣಿಗೆಗಳೆಂದೇ ನೋಡಬಹುದು.

ಆದರೆ ಆ ನಂತರ ಕಾಂಗ್ರೆಸ್ ಪಕ್ಷದ ನಾಯಕರು ನಡೆದುಕೊಂಡ ರೀತಿ ತೋರಿದ ಕಾಳಜಿ ನಿಜಕ್ಕೂ ಶ್ಲಾಘನೀಯ. ತಮ್ಮ ಪಕ್ಷದ ಶಾಸಕನ ಮಗನ ಮತ್ತು ಕಾರ್ಯಕರ್ತರ ವಿರುದ್ಧ ಬಿಜೆಪಿ ಸರಕಾರ ತೆಗೆದುಕೊಂಡ ಕ್ರಮಗಳನ್ನು ಖಂಡಿಸಿ ‘ಜನಾಕ್ರೋಶ’ ಸಮಾ ವೇಶವನ್ನು ಆಯೋಜಿಸುತ್ತದೆ. ತಮ್ಮ ಪಕ್ಷದ ಶಾಸಕನಿಗೆ ಪುತ್ರನಿಗೆ ಮತ್ತು ಕಾರ್ಯಕರ್ತರ ಮೇಲಾದ ಕ್ರಮಗಳನ್ನು
ಸಹಿಸಿಕೊಳ್ಳಲಾಗದೆ ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಾರೆ. ಆ ಮೂಲಕ ಶಾಸಕ ಸಂಗಮೇಶರಿಗೆ ಎಲ್ಲಿಲ್ಲದ ನೈತಿಕ ಬೆಂಬಲ ನೀಡುವ ಮೂಲಕ ಪಕ್ಷದ ಎಲ್ಲಾ ಮುಖಂಡರೂ ಒಂದೆಡೆ ಸೇರಿ ‘ಜನಾಕ್ರೋಶ ಸಮಾವೇಶ’ ನಡೆಸಿ ಸರಕಾರವನ್ನು ತರಾಟೆಗೆ
ತೆಗೆದುಕೊಳ್ಳುತ್ತಾರೆ. ನಿಜಕ್ಕೂ ಇಂಥ ಸಮಾವೇಶವನ್ನು ಮೆಚ್ಚಿಕೊಳ್ಳಲೇಬೇಕು!

ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿಗೆ ಶಾಸಕರಿಗೆ ಎಷ್ಟು ಮಹತ್ವವಿದೆಯೆಂದರೆ ಮೊನ್ನೆ ಮೈಸೂರಿನಲ್ಲಿ ಮೇಯರ್ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ತಪ್ಪಿಗೆ ಆ ಕಾರ್ಯಕರ್ತರನ್ನೇ ಅಮಾನತು ಮಾಡಲಾಗಿರುವುದು ಹೆಮ್ಮೆಯ ವಿಚಾರ. ಹಿಗಾಗಿಯೇ ಕಳೆದವರ್ಷ ‘ಸಂಪತ್ತಿಗೆ’ ಸವಾಲ್ ಆದ ಡಿ.ಜೆ.ಹಳ್ಳಿ ಮತ್ತು ಕೆಜಿಹಳ್ಳಿಯ ಊರಿಗೇ ಕೊಳ್ಳಿಯಿಟ್ಟ ಗಲಭೆ ಇಡೀ ದೇಶದ ಗಮನ ಸೆಳೆದಿತ್ತು.

ಸಾವಿರಾರು ‘ಮತದಾರ’ ಗಲಭೆಕೋರರು ಸಾಕ್ಷಾತ್ ಶಾಸಕರ (ದಲಿತ ಶಾಸಕರು!) ಮನೆಗೇ ನುಗ್ಗಿ ಬೆಂಕಿಹಚ್ಚಿ ಬರುತ್ತಾರೆ. ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸುತ್ತಾರೆ. ಸಂತ್ರಸ್ತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕಣ್ಣೀರಿಟ್ಟು ತನಗಾದ ಅನ್ಯಾಯವನ್ನು ಸಾರ್ವಜನಿಕವಾಗಿ ಹೇಳಿಕೊಂಡು ತಪ್ಪಿತಸ್ಥರನ್ನು ಶಿಕ್ಷಿಸಲೇಬೇಕೆಂದು ಗೋಳಿಡುತ್ತಾರೆ. ತನಿಖೆ ನಡೆಯುತ್ತದೆ, ಪ್ರಮುಖ ಆರೋಪಿ ಸಂಪತ್‌ರಾಜ್ ನನ್ನು ವಾರಗಳ ಕಾಲ ಶೋಧಿಸಿ ಬಂಧಿಸುತ್ತಾರೆ.

ಆರೋಪಿಗಳಿಗೆ ಜಾಮೀನು ದೊರಕುತ್ತದೆ. ಈ ಪ್ರಕರಣದಲ್ಲೂ ಒಬ್ಬ ಶಾಸಕನಿಗೆ ಅನ್ಯಾಯವಾಗುತ್ತದೆ. ಇಲ್ಲೂ ಸಹ ಶಾಸಕನ ಸಂಬಂಧಿ ಈ ಗಲಭೆಗೆ ಒಂದು ನೆಪವಾಗಿ ಬಳಕೆಯಾಗುತ್ತಾನೆ. ಈ ಶಾಸಕರೂ ಕಾಂಗ್ರೆಸ್ ಪಕ್ಷದ ಶಾಸಕರೇ ಆಗಿರುತ್ತಾರೆ. ಅದೂ ಕಾಂಗ್ರೆಸ್ ಮೂಲ ವೋಟ್‌ಬ್ಯಾಂಕ್ ಎಂದು ಕರೆಸಿಕೊಂಡಿರುವ ದಲಿತ ಶಾಸಕರೂ ಆಗಿರುತ್ತಾರೆ. ಇಲ್ಲೂ ಶ್ರೀರಾಮನ
ಪರವಾದ ಘೊಷಣೆಯ ವಿಚಾರಗಳಿರುತ್ತವೆ. ಎರಡೂ ಪ್ರಕರಣಗಳನ್ನು ಎತ್ತಕಡೆಯಿಂದ ನೋಡಿದರೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರಿಗಾದ ಅನ್ಯಾಯವೇ ಹೆಚ್ಚು ಘೋರವಾಗಿ ಕಂಡುಬರುತ್ತದೆ.

ಸೋಜಿಗ ಮತ್ತು ವಿಪರ್ಯಾಸವೆಂದರೆ ಅಂದು ಅಖಂಡ ಶ್ರೀನಿವಾಸ ಮೂರ್ತಿ ಪರವಾಗಿ ಯಾವ ಕಾಂಗ್ರೆಸ್ ಮುಖಂಡರು
ಕಾರ್ಯಕರ್ತರೂ ಗಲಭೆಕೋರರ ವಿರುದ್ಧ ಪ್ರತಿಭಟನೆ ನಡೆಸುವುದಿಲ್ಲ. ಇದಕ್ಕಿಂತ ಮಹದಾಶ್ಚರ್ಯವೆಂದರೆ ಅಂದು ಶಾಸಕರ ಪರವಾಗಿ ಪ್ರತಿಭಟಿಸಿದ್ದು ‘ಕೋಮುವಾದಿ’ಗಳೆಂಬ ಹಿಂದೂಪರ ಸಂಘಟನೆಗಳು. ಎಂಥ ಚಿತ್ರವಲ್ಲವೇ. ಆಯ್ತು, ಈಗ ಅಖಂಡ
ಶ್ರೀನಿವಾಸಮೂರ್ತಿ ಎಂಥ ಪರಿಸ್ಥಿತಿಯಲ್ಲಿದ್ದಾರೆಂದು ನೋಡಿದರೆ, ‘ಯಾವ ಕಾಂಗ್ರೆಸ್ ನಾಯಕರು ತನಗೆ ಬೆಂಬಲವಾಗಿ ನಿಂತಿಲ್ಲ, ನನಗಾದ ಅನ್ಯಾಯಕ್ಕೆ ಆರೋಪಿಗಳಿಗೆ ತಕ್ಕ ಶಾಸ್ತಿಯಾಗಿಲ್ಲ, ಸಂಪತ್‌ರಾಜ್ ವಿರುದ್ಧ ಪಕ್ಷ ಕಠಿಣ ಕ್ರಮ ಕೈಗೊಂಡಿಲ್ಲ, ಆತನ ವಿರುದ್ಧ ಪೊಲೀಸ್ ಸಾಕ್ಷ್ಯಗಳಿದ್ದರೂ ಅಮಾನತು ಮಾಡಿಲ್ಲ’.

ಹೀಗೆ ಬಹಿರಂಗವಾಗಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ನಿಲ್ಲಬೇಕಾದ ಗತಿಗೆ ತಲುಪಿ, ಈಗ ಅಖಂಡ ಶ್ರೀನಿವಾಸಮೂರ್ತಿಗೇ ನೋಟೀಸ್ ನೀಡಬೇಕಾದ ಸ್ಥಿತಿ ತಲೆದೋರಿದೆ. ಈ ಎರಡೂ ಪ್ರಕರಣಗಳನ್ನು ಪರಮರ್ಶಿಸಿದರೆ ಡಿಜೆ ಹಳ್ಳಿ ಪ್ರಕರಣದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಪರ ಅಂದು ನಿಜಕ್ಕೂ ಒಂದು ರಾಜ್ಯಮಟ್ಟದ ಸಮಾವೇಶವನ್ನು ಮಾಡಲೇಬೇಕಿತ್ತು. ಹೇಳಿಕೇಳಿ ಒಬ್ಬ
ದಲಿತ ಶಾಸಕರ ಮೇಲೆ ಈ ಪರಿಯ ದೌರ್ಜನ್ಯ ನಡೆದಿದೆಯೆಂದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಸಾಮಾನ್ಯ ವಿಷಯವೇ?. ಆದರೆ ಸಮಾವೇಶ ಅತ್ಲಾಗಿರಲಿ, ‘ಮೌನಾಕ್ರೋಶ’ ನಿರಶನವೂ ನಡೆಯಲಿಲ್ಲ.

ಕಾರಣ ಸ್ಪಷ್ಟ. ಅಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿಯ ಸಂಬಂಧಿ ನವೀನ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆಯ ಸಂಭ್ರಮವನ್ನು ಪಟಾಕಿ ಹೊಡೆದು ಆಚರಿಸಿ, ಬೀದಿಯಲ್ಲಿ ಸಿಹಿಹಂಚಿ ಸಂಭ್ರಮಿಸಿ ಜೈಶ್ರೀರಾಮ್ ಘೋಷಣೆಯ ಮೂಲಕ ‘ಪಕ್ಷದ್ರೋಹ’ ಎಸಗಿದ್ದ. ಇದು ಮುದ್ದಿನಗಿಣಿ ಸಂಪತ್ತಿಗೆ ಸವಾಲು ಹಾಕಲು ‘ಒಳ್ಳೆಯ’ ಮುಹೂರ್ತ
ದೊರಕಿಸಿಕೊಟ್ಟಿತು. ಇನ್ನು ಆ ಸಂದರ್ಭದಲ್ಲಿ ಗಲಭೆಕೋರರ ವಿರುದ್ಧ ಪ್ರತಿಭಟಿಸಲು ಯಾವ ನಾಯಕನೂ ಸಿದ್ಧವಿರಲಿಲ್ಲ. ಏಕೆಂದರೆ ಒಬ್ಬ ದಲಿತ ಶಾಸಕನಿಗಾಗಿ ಮುಸಲ್ಮಾನರ ಮತಗಳನ್ನು ಕಳೆದುಕೊಳ್ಳುವುದು ಬುದ್ಧಿವಂತರ ಲಕ್ಷಣವೇ? ನೆವರ್,
ಅದು ಕನಸಿನ ಮಾತು.

ಇದಿಷ್ಟೂ ಮತಬ್ಯಾಂಕಿನ ಲೆಕ್ಕಾಚಾರವಾದರೆ, ಗಲಭೆ ಸೃಷ್ಟಿಯಾಗಿ ಅದು ಸ್ಥಳೀಯ ರಾಜಕೀಯದ ಮೇಲೆ ಕೆಲ ನಾಯಕರ ಆಶಯದಂತೆ ಪರಿಣಾಮ ಬೀರಬೇಕಿತ್ತು. ಅದರಂತೆ ಈಗ ಎಲ್ಲವೂ ನಡೆಯುತ್ತಿದೆ. ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯರ ಆಪ್ತರಾದರೂ ರಾಜಕೀಯದಲ್ಲಿ ಅದೆಲ್ಲವೂ ಗೂಟಹೊಡೆದುಕೊಂಡು ಕೂರುವಂಥದ್ದಲ್ಲ. ಈಗ ಅಖಂಡ ಶ್ರೀನಿವಾಸಮೂರ್ತಿ
ಕಾಂಗ್ರೆಸ್‌ನಲ್ಲಿ ಪಕ್ಷವಿರೋಧಿ ಕಳಂಕಿತರಾಗುವ ಮಟ್ಟಕ್ಕೆ ಬೆಳೆಸಿಕೊಂಡು ಬರಲಾಗಿರುವುದರಿಂದ ಸಹಜವಾಗಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಅನುಮಾನವೆ.

ಅದಕ್ಕಿಂತ ಹೆಚ್ಚಾಗಿ ಈ ಕ್ಷೇತ್ರಕ್ಕೆ ಈಗಾಗಲೇ ವಲಸೆ ನಾಯಕರು ಕಣ್ಣಿಟ್ಟಿದ್ದಾರೆ. ಅದರಲ್ಲಿ ಸಿದ್ದರಾಮಯ್ಯರ ಆಪ್ತ ಹೆಚ್.ಸಿ.
ಮಹದೇವಪ್ಪ ಅವರೂ ಮುಂಚೂಣಿಯಲ್ಲಿರುವ ಸುದ್ದಿಯಿದೆ. ಹೀಗಾಗಿ ವಲಸಿಗ ಶಾಸಕ ಅಖಂಡ ಶ್ರೀನಿವಾಸಮೂರ್ತಿಗಾಗಿ ‘ಕೆಲಸಕ್ಕೆ ಬಾರದ’ ಆಕ್ರೋಶ ಸಮಾವೇಶಗಳನ್ನು ಮಾಡದೇ ಇದ್ದದ್ದು ಇಂದು ಕಾಂಗ್ರೆಸ್‌ಗೆ ಕ್ಷೇತ್ರ ಬಲಿಷ್ಠ ವೋಟ್‌ಬ್ಯಾಂಕ್
ಹಾಗೇ ಉಳಿದುಕೊಂಡಿದೆ. ಇದನ್ನೇ ಮೇಲಿನ ಕಥೆಯಲ್ಲಿನ ಮರಿಮೊಮ್ಮಗನ ಕಾಲದ ಬುದ್ಧಿವಂತ ಮಂಗಗಳಂಥ ಪ್ರಜೆಗಳು ‘ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ’ ಏಕೆ? ಎಂದು ಪ್ರಶ್ನಿಸುವಂತಾಗಿರುವುದು.

ಈ ಎರಡೂ ಪ್ರಕರಣಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಏನೇನು ಬೆಳವಣಿಗೆಗಳಾದವೋ ಲಾಭನಷ್ಟಗಳಾದವೋ ಅದು ಅವರ ಆಂತರಿಕ ವಿಚಾರ. ಆದರೆ ಸಾರ್ವಜನಿಕವಾಗಿ ಎರಡೂ ಪ್ರಕರಣಗಳಿಂದ ಹೊರಬಂದ ಸಂದೇಶ, ಕಾಮನ್ ಮ್ಯಾಟರ್ರು
ಏನೆಂಬುದು ಪ್ರಜ್ಞಾವಂತ ಪ್ರಜೆಗಳಿಗೆ, ಗುಲಾಮರಲ್ಲದ ಮತದಾರರಿಗೆ ಸ್ಪಷ್ಟವಾಗಿರುವ ವಿಷಯಗಳೆಂದರೆ, ಕಾಂಗ್ರೆಸ್ ಪಕ್ಷ ಶ್ರೀರಾಮನನ್ನು ಸ್ಮರಿಸುವುದು ಜೈಕಾರ ಕೂಗುವುದು ಜೈಭಾರತಮಾತೆ ವಂದೇಮಾತರಂ ಘೋಷಣೆ ಕೂಗುವುದನ್ನು ಸಹಿಸುವುದಿಲ್ಲ.

ನೇರವಾಗಿ ಹೇಳಬೇಕೆಂದರೆ ಹಿಂದೂಗಳ ಮೂಲ ಆಶಯಗಳಿಗೆ, ನೈಜ ಹಿಂದೂ ವಿಚಾರಗಳಿಗೆ ಸಂಸ್ಕಾರಗಳಿಗೆ ಹೊಂದಾಣಿಕೆ ಯಾಗುವುದಿಲ್ಲ. ದೇಶಾಭಿಮಾನ ತೋರುವುದು, ಭಯೋತ್ಪಾದಕರನ್ನು ವಿರೋಧಿಸುವುದು, ಅಲ್ಪಸಂಖ್ಯಾತರನ್ನು  ಪ್ರಶ್ನಿಸು ವುದು, ರಾಷ್ಟ್ರೀಯತೆ, ಸಮಾನತೆ ಕುರಿತು ಮಾತನಾಡುವುದು ಇವುಗಳು ಆ ಪಕ್ಷದಲ್ಲಿ ತರವಲ್ಲ. ಒಟ್ಟಾರೆ ಹಿಂದು ಗಳಿಗಿಂತ ಹಿಂದೂಗಳನ್ನು ನಿಂದಿಸುವವರು, ಹಿಂದೂಗಳ ವಿರುದ್ಧ ಮಾತನಾಡುವವರು, ಹಿಂದೂಗಳ ವಿರುದ್ಧ ಹೋರಾಟ ಮಾಡುವ ವರು, ಪುರಾಣದಿಂದ ಇಂದಿನವರೆಗೂ ಹಿಂದೂ ನಂಬಿಕೆಗಳನ್ನು ವ್ಯಂಗ್ಯ ಮಾಡುವವರು ಯಾರೇ ಆಗಲಿ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರಿಗೆ ಪ್ರಥಮ ಪ್ರಾಶಸ್ತ್ಯ.

ಇದನ್ನೇ ಮೊನ್ನೆ ಸಚಿವ ಈಶ್ವರಪ್ಪನವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ‘ಪಾಕಿಸ್ತಾನ ಜಿಂದಾಬಾದ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರೆ ಕಾಂಗ್ರೆಸ್‌ನವರಿಗೆ ಖುಷಿ ಆಗುತ್ತಿತ್ತಾ’ ಎಂದು ಇದ್ದದ್ದನ್ನು ಇದ್ದಹಾಗೇ ಪ್ರಶ್ನಿಸಿದ್ದಾರೆ. ಹಾಗೊಮ್ಮೆ ಎರಡೂ ಪ್ರಕರಣಗಳಲ್ಲಿ ಮೇಲಿನಂತೆ ಘೋಷಣೆ ಕೂಗಿದ್ದರೆ ಅದು ಗಂಭೀರ ವಿಚಾರವೇ ಆಗುತ್ತಿರಲಿಲ್ಲ.
ಆದರೆ ಹಾಗೆ ಕೂಗಿದವರನ್ನು ಬಂಧಿಸಿ ಏರೋಪ್ಲೇನ್ ಹತ್ತಿಸಿದ್ದರೆ ಮಾತ್ರ ಆಗ ಮತ್ತೊಂದು ‘ರಣಾಕ್ರೋಶ’ ಸಮಾವೇಶವನ್ನು ಪ್ರಜೆಗಳು ನಿರೀಕ್ಷಿಸುತ್ತಿದ್ದದ್ದು ಸುಳ್ಳಲ್ಲ.

ಮೇಲಿನ ಕಥೆಯಲ್ಲಿ ಬರುವ ಮರಿಮೊಮ್ಮಗನ ಕಾಲದ ಬುದ್ಧಿವಂತ ಮಂಗಗಳಂತೆ ಇಂದು ಪ್ರಜೆಗಳು ತೀಕ್ಷ್ಣ ಬುದ್ಧಿವಂತ ರಾಗಿದ್ದಾರೆ. ರಾಜಕೀಯ ಪಕ್ಷಗಳ ನಾಯಕರ ನಡೆ, ನುಡಿ, ವ್ಯಕ್ತಿತ್ವ, ಅವರ ತಿಕ್ಕಲು ಧೋರಣೆ, ಅವರ ಸಮಯಸಾಧಕತನ, ಪಲಾಯನವಾದ, ಹಳ್ಳಹಿಡಿದ ವೈಚಾರಿಕತೆ, ಬೆತ್ತಲಾದ ನೈತಿಕತೆ, ಗುಲಾಮಗಿರಿಯ ಮನಸ್ಥಿತಿ ಇವುಗಳನ್ನೆಲ್ಲಾ ಮಾಲ್‌ನ
ಎಸಿ ಥಿಯೇಟರ್‌ನಲ್ಲಿ ಕೂತು ಪಾಪ್‌ಕಾರ್ನ್ ತಿನ್ನುತ್ತಾ ಸಿನಿಮಾ ನೋಡುವಂತೆ ನೋಡಿ ಕೇಕೆ ಹಾಕುತ್ತಾರೆ.

ಅದಕ್ಕೆ ತಕ್ಕ ಫಲಿತಾಂಶವನ್ನು ಚುನಾವಣೆಯಲ್ಲಿ ನೀಡುತ್ತಿದ್ದಾರೆ. ಆದರೆ ಇದೆಲ್ಲಾ ಸಂವಿಧಾನದ ಆಶಯದ ವಿರುದ್ಧವೆಂದೂ, ಸಂವಿಧಾನ ಹೇಳುವ ಪ್ರಜಾಪ್ರಭುತ್ವದ ಸಮಾನತೆ, ಸಹಬಾಳ್ವೆ, ಸಹಿಷ್ಣುತೆ ಸಿದ್ಧಾಂತದ ವಿರೋಧಾಭಾಸವೆಂಬುದನ್ನು
ಮನಗಾಣದ ರಾಜಕಾರಣಿಗಳು ಮಾತ್ರ ಮೇಲೆ ಹೇಳಿದ ಹಾಗೆ ಇನ್ನೂ ಬಯಲುನಾಟಕದ ಪಾತ್ರಧಾರಿ ಗಳಾಗಿ ಬಣ್ಣ ಬಳಿದು ಕೊಂಡು ಮೂರ್ಖತನದ ನಡೆಗಳನ್ನು ತೋರುತ್ತಾ ತಮ್ಮ ಬಣ್ಣವನ್ನು ತಾವೇ ಬಯಲು ಮಾಡಿಕೊಳ್ಳುತ್ತಿದ್ದಾರೆ. ಮತ್ತು ಮುತ್ತಾತನ ಕಾಲದ ಮಂಗಗಳೇ ಇಂದಿಗೂ ಇರುವ ‘ಮತದಾರ’ರೆಂದು ಭಾವಿಸಿದ್ದಾರೆ.

ಆದರೆ ಇಂದಿನ ಅಂಥ ಮಂಗಗಳೇ ಶ್ರೀರಾಮನ ಅನುಭೂತಿ ಪಡೆದು ವಾನರಸೈನ್ಯಗಳಾಗಿ ನಾನಾ ಮುಖಗಳ ಅಯೋಗ್ಯ
ರಾವಣರೊಂದಿಗೆ ಸೆಣಸಿ, ಅಂಥವರನ್ನು ದೂರವಿಟ್ಟು ದೇಶವನ್ನು ಬಲಿಷ್ಠ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ಆದರೆ ಬೆಕ್ಕುಗಳು ಮಾತ್ರ ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿವೆ. ಅದರ ಸುತ್ತನಿಂತು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಕಾಲ ಇದಾಗಿದೆ.