ಸಂಡೆ ಸಮಯ
ಸೌರಭ ರಾವ್
ಅಮೇರಿಕಾದ ಟೀವಿ ಶೋ ಒಂದರ ತುಣುಕನ್ನು ಗೆಳತಿಯೊಬ್ಬಳು ಇತ್ತೀಚಿಗೆ ಕಳುಹಿಸಿದ್ದಳು. ಹಿನ್ನೆಲೆ: 35ರ ಹರೆಯದ ಖ್ಯಾತ ಬರಹಗಾರ್ತಿ ತನ್ನ ಗೆಳತಿಯ ಮೂರನೇ ಮಗುವಿನ ಮೊದಲ ಹುಟ್ಟುಹಬ್ಬದ ಪಾರ್ಟಿಗೆ ಉಡುಗೊರೆಗಳ ದೊಡ್ಡ ಡಬ್ಬವೊಂದ ನ್ನು ಹೊತ್ತುಕೊಂಡು ಹೋದಾಗ, ಮುಂಬಾಗಿಲಲ್ಲೇ ಶೂಗಳನ್ನು ಬಿಟ್ಟು ಮನೆಯ ಒಳಗೆ ಹೋಗಬೇಕೆಂದು ಗೆಳತಿಯ ತಂಗಿ ಹೇಳುತ್ತಾಳೆ.
ಅಲ್ಲಿ ನಮ್ಮಂತೆ ಆ ವಾಡಿಕೆಯಿಲ್ಲವಲ್ಲ, ಹಾಗಾಗಿ ತನ್ನ ಇಷ್ಟದ ಬ್ರಾಂಡ್ನ ಹೊಸ ಶೂಗಳನ್ನು ಮೊದಲ ಬಾರಿಯೇ ಹೀಗೆ ಬಿಟ್ಟರೆ ಯಾರಾದರೂ ಕದ್ದುಕೊಂಡು ಹೋದರೆ ಎಂದು ಅಳುಕುತ್ತಲೇ ಬಿಟ್ಟು ಒಳಗೆಹೋಗುತ್ತಾಳೆ ಬರಹಗಾರ್ತಿ. ಅಂದು ಕೊಂಡಂತೆಯೇ ಪಾರ್ಟಿ ಮುಗಿದಮೇಲೆ ಹೊರಬಂದು ನೋಡಿದರೆ ಬ್ರಾಂಡೆಡ್ ಶೂಗಳು ನಾಪತ್ತೆ!
ಮದುವೆ, ಮಕ್ಕಳು ಎಂದು ಹೊಸಲೋಕದಲ್ಲಿ ಕಳೆದುಹೋಗುವ ಮುಂಚೆ ತನ್ನಂತೆಯೇ ಫ್ಯಾಷನ್ ಹುಚ್ಚು ಇದ್ದ ಗೆಳತಿಗೆ ತನ್ನ ನಿರಾಸೆ ಅರ್ಥವಾಗುತ್ತದೆ ಎಂದು ಮಾತನಾಡಲು ಹೋದಾಗ ಆ ಗೆಳತಿ, ಈಗ ನನಗೆ ನಿಜವಾದ ಬದುಕಿದೆ. ನಿನ್ನ ಹಾಗೆ ಶೂಗಳಿಗೆ ನೂರಾರು ಡಾಲರ್ ಚೆಲ್ಲುವ ಹಳೆಯ ಬುದ್ಧಿ ನನಗಿಲ್ಲ ಎಂದುಬಿಡುತ್ತಾಳೆ.
ಚಕಿತಳಾದ ಬರಹಗಾರ್ತಿ, ನನ್ನ ಬದುಕೂ ನಿಜವಾದದ್ದೇ, ಯೋಗ್ಯವಾದದ್ದೇ ಎಂದು ಮೆಲ್ಲಗೆ ಹೇಳಿ ಇನ್ನು ವಾದ ಮಾಡಿ
ಪ್ರಯೋಜನವಿಲ್ಲವೆಂದು ಅಲ್ಲಿಂದ ಹೊರಟುಬಿಡುತ್ತಾಳೆ. ಗೆಳತಿಯ ನಿಶ್ಚಿತಾರ್ಥಕ್ಕೆ, ನಂತರ ಮದುವೆಗೆ, ನಂತರ ಹೊಸ ಮನೆಗೆ, ನಂತರ ಎರಡು ಮಕ್ಕಳು ಹುಟ್ಟಿದಾಗ… ಹೀಗೆ ಆಕೆ ಮಾಡಿದ ಜೀವನದ ಎಲ್ಲಾ ಆಯ್ಕೆೆಗಳನ್ನು ಕೇವಲ ಮಾತಿನಲ್ಲಿ ಅಲ್ಲ,
ಸಾವಿರಾರು ಡಾಲರ್ ಸುರಿದು ಉಡುಗೊರೆಗಳ ಸಮೇತ ಗೌರವಿಸಿದ ತನ್ನ ಒಂದು ಅಭಿರುಚಿಯನ್ನು ಹೀಯಾಳಿಸಿಬಿಟ್ಟಳಲ್ಲ
ಎಂದು ತನ್ನ ಇನ್ನೊಬ್ಬ ಗೆಳತಿಯ ಜೊತೆ ಹಂಚಿಕೊಳ್ಳುತ್ತಾಳೆ ಬರಹಗಾರ್ತಿ.
ಹಾಗಾದರೆ ಏಕಾಂತ ಬಯಸಿ ಬೇಕಂತಲೇ ಮದುವೆ, ಮಕ್ಕಳು ಮಾಡಿಕೊಳ್ಳದಿದ್ದರೆ ಜೀವನ ವ್ಯರ್ಥ ಎನ್ನುವ ಹಾಗೆ ಏಕೆ ನಡೆದು ಕೊಳ್ಳುತ್ತಾರೆ ಜನ ಎಂದು ಪ್ರಶ್ನಿಸುತ್ತಾಳೆ. ಅವರಿಗೆ ಅದೇ ಜೀವನದ ಪರಮಗುರಿಯಾದರೆ ಆಗಲಿ, ಅದನ್ನು ನಾನು ಗೌರವಿಸುವು ದಾದರೆ, ನನ್ನ ಮಟ್ಟಿಗೆ ನನಗೆ ಸಹಜ, ಸತ್ಯ ಎನಿಸುವಂತೆ ಬದುಕಲು ನಾನು ಮಾಡುವ ಆಯ್ಕೆಗಳು ಅವರಿಗೆ ಅರ್ಥವಾಗ ದಿದ್ದರೂ, ಗೌರವಿಸಬೇಕಲ್ಲವೇ ಎಂದು ಕೇಳುತ್ತಾಳೆ.
ವಿಚಿತ್ರ ಎನಿಸುತ್ತದೆ. ಎಲ್ಲ ಕಡೆ ಎಲ್ಲ ರೀತಿಯ ಜನರಿರುತ್ತಾರೆ. ನಮ್ಮಲ್ಲೂ, ಅದರಲ್ಲೂ ಹೆಣ್ಣುಮಕ್ಕಳು ಇನ್ನೂ ಮದುವೆಯಾಗದೇ ಮೂವತ್ತು ದಾಟಿಬಿಟ್ಟರೆ, ಜೀವನವೇ ವ್ಯರ್ಥ ಎನ್ನುವಂತೆ ನಮ್ಮ ಚಿಲ್ಲರೆ ಆಲೋಚನೆಗಳನ್ನು ಸ್ವಲ್ಪವೂ ಮುಜುಗರವಿಲ್ಲದೇ ಅಂದು ಆಡಿ ತೋರಿಸಿಕೊಂಡುಬಿಡುತ್ತೇವೆ. ವಿಷಯ ಏನೇ ಇರಲಿ, ಅದಕ್ಕೆ ನಾವು ಸ್ಪಂದಿಸುವ ರೀತಿ ನಮ್ಮ ಮನಸ್ಸಿನ ಅಗಾಧತೆ ಅಥವಾ ಸಂಕುಚಿತತೆ ತೋರಿಸುತ್ತದೆ ಎಂಬ ಸರಳ ಸತ್ಯಕ್ಕೆ ಅದೆಷ್ಟು ಕುರುಡರಾಗಿಬಿಡುತ್ತೇವೆ ಒಮ್ಮೊಮ್ಮೆ ಯೆಂದರೆ ವಿಷಾದವೆನಿಸುತ್ತದೆ.
ಹಾಗಾದರೆ ಹುಟ್ಟಿರುವುದೇ ಮದುವೆಯಾಗಿ, ಮಕ್ಕಳನ್ನು ಮಾಡಿಕೊಂಡು, ಒಂದು ಸ್ವಂತ ಮನೆ ಮಾಡಿಕೊಂಡು, ವರ್ಷದಿಂದ ವರ್ಷಕ್ಕೆ ಹೊಸ ಕಾರುಗಳನ್ನು ಕೊಳ್ಳುತ್ತಾ ಬದುಕುವುದು ಮಾತ್ರ ಸಾರ್ಥಕವಾದ ಬದುಕೇ? ಇದೇ ಚಕ್ರ ಸುತ್ತುವಂತೆ ನಮ್ಮ ಮಕ್ಕಳನ್ನೂ ಬೆಳೆಸುವುದಷ್ಟೇ ಜೀವನವಾ? ಇದನ್ನು ಬಿಟ್ಟು ಬೇರೆ ಏನು ಮಾಡಿದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹೀನಾಯ ಸಂಕುಚಿತ ಮನಸ್ಥಿತಿ ಎಷ್ಟರ ಮಟ್ಟಿಗೆ ವಿವೇಚನೆಯುಳ್ಳದ್ದು? ಇದರ ಬಗ್ಗೆ ಹೊಸ ಮಾತುಕತೆ, ಚರ್ಚೆಗಳೇ ನಡೆಯು ವುದಿಲ್ಲವಲ್ಲ.
ಯಾರೇ ಆಗಲಿ, ಬೇರೆಯವರಿಗೆ ತೊಂದರೆಯಾಗದಂತೆ ತಮ್ಮ ಪಾಡಿಗೆ ತಾವು ಸಹಜವಾಗಿ, ಮನಸಾರೆ ಮಾಡುವ ಜೀವನದ
ಆಯ್ಕೆಗಳು ಅವರವರಿಗೆ ಬಿಟ್ಟದ್ದು. ಬೇರೆಯವರ ಜೀವನದಲ್ಲಿ ಮೂಗುತೂರಿಸುವ ಕೆಟ್ಟ ಕುತೂಹಲ ನಮಗ್ಯಾಕೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದವರಂತೆ ಏಕೆ ನಡೆದುಕೊಳ್ಳುತ್ತೇವೆ? ಹಾಗಂತ ಮದುವೆ, ಮಕ್ಕಳು, ಮನೆ ಇವೆಲ್ಲಾ ಸಣ್ಣ ವಿಷಯ ಗಳಾಗಬೇಕು ಎಂದೂ ಹೇಳುತ್ತಿಲ್ಲ, ಅವೇ ಬೇಕು ಎಂದು ಅವುಗಳ ಹಿಂದೆ ಹೋಗುವುದು ಸಹಜವಾದರೆ, ಅವ್ಯಾವುವೂ ಬೇಡ ಎಂದು ತಮ್ಮ ತಮ್ಮ ಆಸಕ್ತಿ, ಅಭಿರುಚಿಗಳಲ್ಲೇ ಕಳೆದುಹೋಗುವವವರ ದಾರಿಗಳೂ, ಆಯ್ಕೆಗಳೂ ಸಹಜವೇ.
ಮಾನಸಿಕವಾಗಿ, ಬೌದ್ಧಿಕವಾಗಿ, ಕಡೆಗೆ ತಾರ್ಕಿಕವಾಗಿಯೂ ಇದು ಸಮಂಜಸ ಎನಿಸವುದಿಲ್ಲವಾ? ಇದರ ಬಗ್ಗೆ ಪದೇ ಪದೇ ಮಾತನಾಡಲೇಬೇಕಿದೆ. ನಮ್ಮಲ್ಲೇ ಎಷ್ಟು ಜನ ಬೇರೆಯವರು ಏನೆಂದುಕೊಳ್ಳುತ್ತಾರೋ ಅಂತಲೇ ಮದುವೆಯಾಗಿ, ಮಕ್ಕಳನ್ನು ಮಾಡಿಕೊಂಡು, ಸಾಲ ಮಾಡಿ ಮನೆಗಳನ್ನು ಕಟ್ಟಿ ಕಡೆಗೆ ಸ್ವಲ್ಪವೂ ನೆಮ್ಮದಿ ಇಲ್ಲದೇ ಒಳಗೊಳಗೇ ಸದ್ದಿಲ್ಲದೇ ನರಳುತ್ತಿದ್ದಾರೆ ಎಂದು ಸ್ವಲ್ಪ ಯೋಚಿಸೋಣವಾ? ಜೀವನ ಅದೆಷ್ಟು ವಿಸ್ತಾರವಾದದ್ದು, ಆಳವಾದದ್ದು.
ಕಲಿಯಲು, ಕಳೆದುಹೋಗಲು ಅವೆಷ್ಟು ವಿಷಯಗಳಿವೆ. ನಮ್ಮ ಚಿಲ್ಲರೆ ಬುದ್ಧಿ, ಆಲೋಚನೆಗಳನ್ನು ಮೀರಿದ ಜೀವನವಿದೆ. ಮನುಷ್ಯರನ್ನು ಮೀರಿದ ಸೃಷ್ಟಿ ಸಂಕುಲವಿದೆ. ಸ್ವಲ್ಪ ಕಣ್ಣು, ಕಿವಿ, ಬಾಯಿಯನ್ನು ಹೊಸ ವಿಷಯಗಳಿಗೆ ಬಳಸೋಣ ಅಲ್ಲವಾ?
ನಮಗೆ ಒಂದು ವಿಷಯ ಮುಖ್ಯವಾದ ಮಾತ್ರಕ್ಕೆ ಬೇರೆಯವರಿಗೂ ಅದೇ ಮುಖ್ಯವಾಗಬೇಕು ಎನ್ನುವ ಬಾಲಿಶ ಹಠ, ಸಂಕುಚಿತ ಮನೋಭಾವವೇಕೆ? ನಮ್ಮ ವಿಷಯಕ್ಕೆ ಮೂಗು ತೂರಿಸಿ ಯಾರಾದರೂ ಬಂದರೆ ಸುಮ್ಮನಿರುತ್ತೇವಾ? ಹಾಗಾದರೆ ಆ ಟೀವಿ ಷೋದ ಬರಹಗಾರ್ತಿಯಂತೆ ತಮ್ಮ ಪಾಡಿಗೆ ತಾವಿರುವ ಜನರನ್ನು (ಗಂಡಸರಾಗಲೀ, ಹೆಂಗಸರಾಗಲೀ), ಅವರ ಆಯ್ಕೆಗಳನ್ನು ನಾವೂ ಗೌರವಿಸಬೇಕಲ್ಲವಾ? ಮದುವೆ ಮಾಡಿಕೊಂಡವರ, ಮಕ್ಕಳನ್ನು ಮಾಡಿಕೊಂಡವರ, ಮನೆ ಕಟ್ಟಿದವರ ಬಳಿ ಹೋಗಿ ಯಾರೂ ಏಕೆ ಮದುವೆ ಮಾಡಿಕೊಂಡೆ, ಏಕೆ ಮಕ್ಕಳನ್ನು ಮಾಡಿಕೊಂಡೆ, ಅಥವಾ ಏಕೆ ಮನೆ ಕಟ್ಟಿದೆ ಎಂದು ಕೇಳುವುದಿಲ್ಲ.
ಆ ಪ್ರಶ್ನೆಗಳು ಎಷ್ಟು ಅಸಂಬದ್ಧ ಅನಿಸುತ್ತವೆ ಅಲ್ಲವಾ? ಹಾಗೆಯೇ ಅವ್ಯಾವುದೂ ಮಾಡಿಕೊಳ್ಳದವರನ್ನೂ ಇನ್ನೂ ಯಾಕೆ ಮಾಡಿಕೊಂಡಿಲ್ಲ ಎಂದು ಕೇಳುವುದೂ ಅಷ್ಟೇ ಅಸಂಬದ್ಧ ಎನ್ನುವ ಕಾಮನ್ ಸೆನ್ಸ್ ನಮ್ಮಲ್ಲಿ ಮತ್ತಷ್ಟು ಬಲಗೊಳ್ಳಲಿ.