ಬದುಕು ಭಾವ
ಪೂರ್ಣಿಮಾ ಕಮಲಶಿಲೆ
ಕತ್ತಲ ರಾತ್ರಿಯಲ್ಲಿ ಆ ಹುಡುಗ ನೊಡಿದ ಆ ಪಿಳಿ ಪಿಳಿ ಕಣ್ಣುಗಳು, ಪಟ ಪಟ ಬಡಿದ ಬಾಲ ಯಾರದ್ದು?
ಇದು, ಅಂದರೆ ಈ ಲೇಖನದ ತಲೆಬರಹ, ಒಂದು ಜನಪದ ಕಥೆಯಲ್ಲಿ ಬರುವ ಸಾಲುಗಳು. ಆ ಕಥೆಯಿಂದಲೇ ಬರಹದ ಆರಂಭ ಮಾಡೋಣ. ಕತ್ತಲು ಕವಿಯುವ ಹೊತ್ತು, ಸೋಮವಾರದ ಒಪ್ಪತ್ತು ಅಪ್ಪಯ್ಯನಿಗೆ. ಮನೆಯಲ್ಲಿ ಉಳಿದವರೆಲ್ಲ ರಾತ್ರಿ ಊಟ
ಮಾಡುತ್ತಾರೆ, ಅಪ್ಪ ಮಾತ್ರ ಉಪಹಾರ ಸೇವಿಸುತ್ತಾರೆ.
ಉಪಾಹಾರ ತಯಾರಿಸಲು ಅಮ್ಮ ಹೊರಟಿದ್ದಾಳೆ, ಗೋಧಿ ಹಿಟ್ಟಿನ ದೋಸೆಯನ್ನು. ಹಗಲಿಡೀ ದುಡಿದು ಬೆಂಡಾದ ಜೀವ ಅಪ್ಪ ನದು. ಅದಕ್ಕಾಗಿ ತುಪ್ಪ ಹಾಕಿ ದೋಸೆ ಹೊಯ್ದು, ಅವರನ್ನು ಉಪಚರಿಸುವ ಮನ ಅಮ್ಮನಿಗೆ. ಮನೆತುಂಬಾ ಮಕ್ಕಳು, ಅಪ್ಪ ಒಬ್ಬರು ದುಡಿದು ಇಡೀ ಮನೆಯ ಉಂಬುವ, ಉಡುವ, ಮತ್ತಿತರ ಜವಾಬ್ದಾರಿಯ ನಿರ್ವಹಣೆ ಮಾಡಬೇಕು. ತುಪ್ಪದ ದೋಸೆಯ ಘಮ ಮಕ್ಕಳ ಮೂಗಿಗೆ ಬಡಿದಿದೆ. ಸೊಂಟದಲ್ಲಿದ್ದ ಮಗು ಮೊಲೆ ಹಾಲಷ್ಟೇ ಕುಡಿಯುವ ವಯಸ್ಸಿನದು, ಮತ್ತೊಂದು ಆಗಷ್ಟೇ ನಡೆದಾಡಿ ತೊದಲು ನುಡಿಯಾಡಲು ಶುರು ಮಾಡಿದ್ದು, ಇನ್ನೊಂದು ಐದಾರು ವರ್ಷ ಪ್ರಾಯದ ಹುಡುಗ.
ಮಕ್ಕಳೆಲ್ಲ ಅವರ ಪಾಡಿಗೆ ಅವರು ಆಡಿಕೊಂಡಿದ್ದ ಗೋಧೂಳಿ ಸಂಜೆ. ಆ ಐದಾರು ವರ್ಷದ ಹುಡುಗನಿಗೆ ಅಪ್ಪನ ದೋಸೆಯಲ್ಲಿ ಒಂದಾದರೂ ಬೇಕೆಂಬ ಆಸೆ. ಆತ ಅಡುಗೆ ಮನೆಗೆ ಓಡಿ ಬಂದು ‘ಅಮ್ಮ ಒಂದು ದೋಸೆ ಕೊಡ್ತಿಯಾ?’ ಎನ್ನುತ್ತಾನೆ ಆಸೆಯಿಂದ. ತಾಯಿ ‘ನಿಮಗೆಲ್ಲ, ಅಪ್ಪನ ಫಲಾಹಾರ ಮುಗಿದ ಮೇಲೆ ಅರ್ಧ ಅರ್ಧ ದೋಸೆ ಕೊಡುವೆ, ಈಗ ಹೋಗಿ ಅವರೆಲ್ಲರ ಜೊತೆ ಆಟ ವಾಡು’ ಎಂದು ಹೇಳುತ್ತಾಳೆ. ಊಹು….ಹುಡುಗ ಕೇಳುವ ಮನಸ್ಥಿಯಲ್ಲೇ ಇಲ್ಲ.
‘ನನಗೆ ಈಗ್ಲೇ ಒಂದಿಡೀ ದೋಸೆ ಬೇಕು..ಕೊಡಮ್ಮಾ’ ಎಂದು ದುಂಬಾಲು ಬಿದ್ದ. ಅಮ್ಮ ಎಷ್ಟೇ ಸಮಾಧಾನಿಸಿದರೂ ಆತ ಕೇಳುವು ದಿಲ್ಲ. ಕೊನೆಗೆ ‘ಅರ್ಧ ದೋಸೆ ಕೊಡುವೆ, ಉಳಿದವರಿಗೆ ಹಂಚುವಾಗ ನಿನಗೆ ಪಾಲಿಲ್ಲ’ ಎಂದು ಅರ್ಧ ದೋಸೆ ನೀಡಲು ಮುಂದಾ ದವಳು ಅಮ್ಮ. ಹುಡುಗನಿಗೆ ಪೂರ್ತಿ ಒಂದು ದೋಸೆಯೇ ಬೇಕಂಬ ಕೆಟ್ಟ ಹಠ, ಅರಚಾಟ. ಅಮ್ಮನ ತಾಳ್ಮೆಯ ಕಟ್ಟೆ ಒಡೆಯು ತ್ತದೆ. ಅಡುಗೆ ಮನೆಯ ಹಿಂಬದಿ ಬಾಗಿಲು ತೆರೆದು ಹುಡುಗನನ್ನು ಎತ್ತಿಕೊಂಡು ಹೋಗಿ ಅಲ್ಲಿನ ಕತ್ತಲಲ್ಲಿ ಬಿಡುತ್ತಾಳೆ. ಒಳ ಬಂದು ಬಾಗಿಲನ್ನು ಹಾಕಿಕೊಳ್ಳುತ್ತಾಳೆ.
ದೀಪವಿರದ ಕತ್ತಲ ಹಿಂಬದಿಯ ಜಗುಲಿ. ಆ ಹಳ್ಳಿಮನೆಯ ಸುತ್ತಲೂ ಕಾಡಿನ ಆವರಣ. ಮಗುವಿಗೆ ಹೇಳುತ್ತಾಳೆ ‘ನಿನ್ನ ಹಠ ನಿಂತ ಮೇಲೆ ಒಳಗೆ ಬರಬಹುದು’ ಎಂದು ಹೇಳಿ ಮತ್ತೆ ಅಡುಗೆ ಮನೆಗೆ ಬರುತ್ತಾಳೆ. ಕತ್ತಲ ರಾತ್ರಿಯಲ್ಲಿ ಬಂದದ್ದಾರು? ಅಪ್ಪನ ಉಪಹಾರ ಮುಗಿಯುತ್ತದೆ. ಮನೆಯ ಮಂದಿಯ ಊಟದ ಪಂಕ್ತಿಯ ಆರಂಭವಾಗುತ್ತದೆ. ಹೊರಗಿರುವ ಹುಡುಗ ಅತ್ತೂ ಅತ್ತೂ..ಅಧೀರನಾಗಿದ್ದಾನೆ. ‘ಕಣ್ ಪಿಳಿ ಪಿಳಿ, ಬಾಯ್ ಪಚ ಪಚ…ಅರ್ಧ ದೋಸೆ ಸಾಕಮ್ಮ..ಬಾಗಿಲು ತೆಗೆಯಮ್ಮ’ ಎಂದು ಆರ್ತನಾದದಲ್ಲಿ ಅಳುತ್ತಿದ್ದಾನೆ.
ಅಮ್ಮನ ಕರುಳು ಕರಗಿತು. ಮಗನ ಆರ್ತನಾದ ಕೇಳಿ ದಿಗಿಲುಗೊಂಡ ಅಮ್ಮ ಬಾಗಿಲು ತೆಗೆಯುತ್ತಾಳೆ. ಅಮ್ಮ ಮನೆಯ ಎಲ್ಲಾ ಮಕ್ಕಳಿಗೂ ಅರ್ಧ ಅರ್ಧ ದೋಸೆ ಹಾಕಿ, ಅನ್ನ ಬಡಿಸಿ, ಊಟದ ಶಾಸ್ತ್ರ ಮುಗಿಸುತ್ತಾರೆ. ಇದರೊಂದಿಗೆ ಆ ದಿನದ ಕೆಲಸವೇ ಮುಕ್ತಾಯ. ಇದು ಅಮ್ಮ ನನ್ನ ಬಾಲ್ಯದಲ್ಲಿ ಹೇಳಿದ ಕಥೆ. ನಾವು ಚಿಕ್ಕವರಿದ್ದಾಗ ಏನಾದರೂ ಬೇಕೆಂದು ಹಠ ಹಿಡಿದರೆ, ಅಮ್ಮ ಮತ್ತೆ ಮತ್ತೆ ನೆನಪಿಸಿ ಹೇಳುತ್ತಿದ್ದ ಸಾಲು…ಕಣ್ ಪಿಳಿ ಪಿಳಿ…ಬಾಯ್ ಪಚ ಪಚ..ಎಂದೊಡನೆ ನಮ್ಮ ಹಠಕ್ಕೆ ಬ್ರೇಕ್ ಬೀಳುತ್ತಿತ್ತು.
ಇಂದಿಗೂ ಈ ಸಾಲು ನನ್ನನ್ನು ಹಲವು ಬಾರಿ ಚಿಂತನೆಗೆ ಒಡ್ಡುತ್ತದೆ. ‘ಇತರರ ಪಾಲಿನ ಅರ್ಧ ದೋಸೆ ನೀ ತಿಂದರೆ, ಹೊರಗೆ
ಕತ್ತಲಲ್ಲಿರುವ ಹಸಿದ ಹುಲಿ ನಿನ್ನನ್ನೇ ತಿನ್ನಲು ತಯಾರಾಗಿದೆ’ ಎಂಬ ಒಳಾರ್ಥ. ನಮ್ಮಲ್ಲಿ ಆರೋಗ್ಯಕರ ಹಠ ಮಾತ್ರ ಇರಲಿ
ಎಂಬುದರ ಸೂಚ್ಯಾರ್ಥ. ಆಗಿನ ಮಕ್ಕಳಿಗೆ ಕಥೆ ಕೇಳುವಾಗ ಕುತೂಹಲ ಇತ್ತೇ ಹೊರತು, ಪ್ರಶ್ನಿಸುವ ಮನೋಭಾವ ಇರಲಿಲ್ಲ.
ಕಥೆಯ ಹಂದರವನ್ನು ಬೇರೆ ರೀತಿಯಲ್ಲಿ ಸಮರ್ಥಿಸುವ ಆಲೋಚನೆಗಳು ಇರಲಿಲ್ಲ. ಸರಿ, ಮತ್ತೆ ಅಮ್ಮನ ಕಥೆಯ ಸಾಲಿಗೆ ಬರೋಣ. ಓದುಗರಿಗೆ ಈ ಕಥೆ ಮೊದಲೇ ಗೊತ್ತಿದ್ದರೆ ಆ ಎಚ್ಚರಿಕೆಯ ಸಾಲುಗಳು ಅರ್ಥವಾಗಿರುತ್ತದೆ. ‘ಕಣ್ ಪಿಳಿ ಪಿಳಿ, ಬಾಲ ಪಟ
ಪಟ’(ಅಥವಾ ಬಾಯಿ ಪಚಪಚ) ಅಂದರೆ, ಕಗ್ಗತ್ತಲ ರಾತ್ರಿಯಲ್ಲಿ ಬೆಳಕಿರದ ಹಿಂದಿನ ಜಗುಲಿಯಲ್ಲಿದ್ದ ರಚ್ಚೆ ಹಿಡಿದ ಆ ಮಗು ವಿಗೆ, ಮನೆಯ ಹಿಂಬದಿಯ ಕಾಡಿನಲ್ಲಿ ಹುಲಿಯ ಹೆಜ್ಜೆಯ ಸಪ್ಪಳ ಕೇಳಿದೆ!
ತದೇಕ ಚಿತ್ತದಿಂದ ನೋಡಿದರೆ, ಹುಲಿಯು ತನ್ನ ಕಂಗಳನ್ನು ಪಿಳಿ ಪಿಳಿ ಬಿಡುತ್ತಿದೆ. ಆ ಕಣ್ಣುಗಳು ಫಳ ಫಳ ಹೊಳೆಯುತ್ತಿವೆ! ನಸುಬೆಳಕಿನಲ್ಲಿ ಅದರ ಹೊರಹಾಕಿದ ನೀರೂರುವ ನಾಲಿಗೆಯು ಹುಡುಗನಿಗೆ ಕಾಣಿಸಿದೆ! ಅದು ಇವನತ್ತ ಹೊಂಚುಹಾಕುತ್ತಾ, ಬಾಯಿ ಪಚ ಪಚ ಎನ್ನುವ ಸದ್ದು ಕೇಳಿಸುತ್ತಿದೆ. ಹುಲಿಯು ಬಾಲವನ್ನು ಪಟ ಪಟನೆ ಬೀಸುತ್ತಾ ಹೊಂಚಿನ ಸದ್ದು ಮಾಡುತ್ತಿದೆ. ಇನ್ನೇನು ಹುಲಿ ನನ್ನ ತಿಂದೇ ಮುಗಿಸುವುದು! ಅದರ ಬಾಯಿಗೆ ಆಹಾರವಾಗಲಾರೆ, ಅರ್ಧ ದೋಸೆ ಸಾಕು. ಹಠ ಮಾಡಲಾರೆ ಎಂದು ಬೆದರಿದ ಆ ಪುಟ್ಟ ಹುಡುಗ ‘ಕಣ್ಣು ಪಿಳಿ ಪಿಳಿ, ಬಾಲ ಪಟ ಪಟ… ಅಮ್ಮಾ ಬಾಗಿಲು ತೆಗೆ’ ಎಂದು ದಯನೀಯವಾಗಿ ಕೇಳುವ ಮಾತು ಇದು.
ಇಷ್ಟು ಕಣ್ಣಿಗೆ ಕಟ್ಟುವಂತೆ ಕಥೆ ನಿರೂಪಿಸುತ್ತಿದ್ದ, ಸ್ವರಭಾರದಲ್ಲೇ ನಮ್ಮನ್ನು ಕಣ್ಬಾಯ್ ಬಿಟ್ಟು ಆಲಿಸುವಂತೆ ಮಾಡುತ್ತಿದ್ದ ಅಮ್ಮನಿಗೊಂದು ನಮನ. ಈ ಕಥೆ ಓದಿದರೆ, ಅಂದಿನ ವಿದ್ಯುತ್ ಕಾಣದ ಹಳ್ಳಿ ಮನೆಯ ಅವಿಭಕ್ತ ಕುಟುಂಬದ ವಾತಾವರಣದ ಕಲ್ಪನೆ ಇದ್ದರೆ.. ಎಂತಹ ಹಠವಾದಿಗಳೂ ಕರಗುತ್ತಾರೆ. ಎಂತಹ ಆಪ್ತಸಮಾಲೋಚನೆ ಇದೆಯಲ್ಲವೇ ಈ ಸಣ್ಣದೊಂದು ಕಥೆ ಯಲ್ಲಿ.