ನಾಡಿಮಿಡಿತ
ವಸಂತ ನಾಡಿಗೇರ
ಈ ಬಾರಿಯ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಘೋಷಿಸಲಾಗಿದೆ. ಸ್ಟೆ ಲ್ಕಿಂಗ್, ತಲೈವಾ ಎಂದೆಲ್ಲ ಹತ್ತಾರು ಬಿರುದಾಂಕಿತಗಳಿವೆ. ಮೂಲತಃ ಬೆಂಗಳೂರಿನವರು ಎಂಬ ಕಾರಣಕ್ಕೆ ರಜನಿ ಬಗ್ಗೆ ನಮಗೆಲ್ಲ ವಿಶೇಷ
ಆದರಾಭಿಮಾನ.
ಅವರಿಗೆ ಯಶಸ್ಸು, ಶ್ರೆಯಸ್ಸು, ಪುರಸ್ಕಾರ ಬಂದಾಗಲೆಲ್ಲ ನಮಗೆ ಸಂತಸ ಒಂದು ತೂಕ ಹೆಚ್ಚಾಗುವುದು ಈ ಕಾರಣಕ್ಕೇ. ಇಂತಿಪ್ಪ ರಜನಿಕಾಂತ್ಗೆ ದಾದಾಸಾಹೇಬ್ ಫಾಲ್ಕೆ ಅವಾರ್ಡ್ ಪ್ರಕಟವಾದಾಗ ಸಂತಸ, ಅಭಿಮಾನದಷ್ಟೇ ಟೀಕೆ ಟಿಪ್ಪಣೆಗಳೂ
ಕೇಳಿಬಂದಿವೆ. ತಮಿಳುನಾಡಿನಲ್ಲಿ ಎಲೆಕ್ಷನ್ ನಡೆಯುತ್ತಿರುವ ಸಮಯದಲ್ಲಿ ಅವರಿಗೆ ಫಾಲ್ಕೆ ಪ್ರಶಸ್ತಿ ಘೋಷಿಸಿರುವುದರ ಹಿಂದೆ ರಾಜಕೀಯ ಲಾಭದ ವಾಸನೆ ಕಂಡವರೆಷ್ಟೋ. ಅದೇನೇ ಇರಲಿ. ಆದರೆ ಈ ನೆಪ ಮತ್ತು ಸಂದರ್ಭದಲ್ಲಿ ಸೂಪರ್ಸ್ಟಾರ್ ಅಪ್ಪನ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿಸುವುದು ಈ ಲೇಖನದ ಉದ್ದೇಶ.
ಏಕೆಂದರೆ ಇಲ್ಲಿ ಪ್ರಸ್ತಾಪಿಸಲಾಗಿರುವ ನಾಯಕ ಆ ಲೆಕ್ಕದಲ್ಲಿ ಸೂಪರ್ ಸ್ಟಾರ್ ಕೂಡ ಹೌದು; ರಜನಿಕಾಂತ್ ರ ಅಪ್ಪನೂ ಹೌದು. ಅರೆ ಎನ್ನದಿರಿ. ಅಪ್ಪ ಎಂದರೆ ದತ್ತಕ ತಂದೆ. ಹಾಗಾದರೆ ಯಾರು ಆ ಅಪ್ಪ ಎಂದಿರಾ? ಅವರೇ ಪಾಲನ್ ಕಲ್ಯಾಣಸುಂದರಂ. ಇದೇ ಕಲ್ಯಾಣಸುಂದರಂ ಅವರನ್ನು ರಜನಿಕಾಂತ್ ದತ್ತಕ ತಂದೆಯಾಗಿ ಘೋಷಿಸಿಕೊಂಡಿದ್ದಾರೆ.
ಹಾಗೆಂದು ಫಾಲ್ಕೆ ಪುರಸ್ಕಾರ ಬಂದಿರುವ ಈ ಸಂದರ್ಭದಲ್ಲಲ್ಲ. ಒಂಬತ್ತು ವರ್ಷಗಳ ಹಿಂದೆಯೇ, ಅಂದರೆ ೨೦೧೪ ರಲ್ಲೇ. ಆದರೆ ಕಲ್ಯಾಣ ಸುಂದರಂ ಏನೂ ಅವರಿಗೆ ದುಂಬಾಲು ಬಿದ್ದು ಬಂದವರಲ್ಲ. ರಜನಿ ಸ್ವಯಂಪ್ರೇರಣೆಯಿಂದ ಈ ನಿರ್ಧಾರ ಕೈಗೊಂಡಿದ್ದು. ದತ್ತು ತಂದೆಯಾಗಿ ಸ್ವೀಕರಿಸಿದ ಮೇಲೆ ನಮ್ಮ ಮನೆಗೆ ಬಂದು ಇದ್ದುಬಿಡಿ ಎಂದು ಹೇಳಿದರೂ ಈ ಅಪ್ಪ ಅದಕ್ಕೆ ಜಪ್ಪಯ್ಯ ಅಂದಿಲ್ಲ. ಇಷ್ಟೆಲ್ಲ ಅದಮೇಲೆ ಯಾರೀ ಕಲ್ಯಾಣಸುಂದರಂ ಎಂಬ ಪ್ರಶ್ನೆ ಎದುರಾಗುವುದು ಸಹಜ.
ಅದಕ್ಕೆ ಇಲ್ಲಿದೆ, ಉತ್ತರ ರೂಪದ, ಬಡವರ ಕಲ್ಯಾಣಕ್ಕೆ ಜೀವ ಸವೆಸುತ್ತಿರುವ ಇವರ ಸುಂದರ ಬದುಕಿನ ಯಾತ್ರೆಯ ನೋಟ. ಬಡವರು, ದೀನರನ್ನು ಕಂಡರೆ ನಮ್ಮಲ್ಲಿ ಎಷ್ಟು ಜನರ ಮನ ಮಿಡಿಯುತ್ತದೆ? ಆ ಸಂದರ್ಭಲ್ಲಿ ಜೇಬಿಗೆ ಕೈಹಾಕಿ ಒಂದು ಹತ್ತು ರುಪಾಯಿ ನೀಡಲೂ ನಮ್ಮ ಮನಸ್ಸು ಹಿಂದೇಟು ಹಾಕುತ್ತದೆ. ಹಾಗೊಮ್ಮೆ ಕೊಟ್ಟರೂ ಏನೋ ದೊಡ್ಡ ಸಾಧನೆ ಮಾಡಿದವರಂತೆ ಬೀಗುತ್ತೇವೆ. ಈಗಂತೂ ಮಾಡಿದ ಉಪಕಾರವನ್ನು ಡಂಗುರ ಸಾರಲು ಫೇಸ್ಬುಕ್ಕು, ವಾಟ್ಸಾಪ್ಪು, ಇನ್ಸ್ಟಾ, ಟ್ವಿಟರುಗಳುಂಟು.
ಅದಕ್ಕೆ ಲೈಕುಗಳುಂಟು, ಕಾಮೆಂಟುಗಳ ಸಿಮೆಂಟು ಉಂಟು. ಹಾಗಾದರೆ ತನ್ನಿಡೀ ಜೀವನದಲ್ಲಿ ದುಡಿದಿದ್ದೆಲ್ಲವನ್ನು ಸಮಾಜಕ್ಕೆ ನೀಡಿದ, ೩೦ ಕೋಟಿ ರು. ಬಹುಮಾನ ಮೊತ್ತವನ್ನೂ ಸಮಾಜಕ್ಕೇ ಧಾರೆ ಎರೆದ ಕಲ್ಯಾಣಸಂದರಂ ಅವರಿಗೆ ಏನು ಹೇಳುವುದು? ಅವರ ಸಾಧನೆ, ಸಹಾಯಗುಣವನ್ನು ಏನೆಂದು ಬಣ್ಣಿಸುವುದು? ಇವತ್ತು ಅವರಿಗೆ ಹೆಸರು ಬಂದಿರಬಹುದು.
ಪ್ರಶಸ್ತಿ ಪುರಸ್ಕಾರ, ಮಾನ್ಯತೆ ದೊರೆತಿರಬಹುದು. ಅವರ ಸೇವೆಯನ್ನು ಗುರುತಿಸಲೂಬಹುದು. ಅಥವಾ ಅದಕ್ಕೆ ಸಾಕಷ್ಟು ಪ್ರಚಾರವೂ ಸಿಕ್ಕಿರಬಹುದು. ಆದರೆ ಐದು ದಶಕಗಳಿಗೂ ಹೆಚ್ಚು ಕಾಲ ನಿಸ್ವಾರ್ಥ ಮನೋಭಾವದಿಂದ ಹಾಗೂ ಪ್ರಚಾರದ ಹಂಗು, ಹುಚ್ಚಿಲ್ಲದೆ ಜನಸೇವೆಯಲ್ಲಿ ತೊಡಗಿರುವುದು ಹುಡುಗಾಟವೇನಲ್ಲ. ಅದು ಖಂಡಿತ ಒಂದು ಹುಚ್ಚೇ ಇರಬೇಕು.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮೇಲಕರಿವೇಲಂಕುಲಂ ಎಂಬ, ಯಾರೂ ಕಂಡು ಕೇಳರಿಯದ ಕುಗ್ರಾಮವೊಂದರಲ್ಲಿ ಜನಿಸಿದ ೭೩ ವರ್ಷದ ಕಲ್ಯಾಣಸುಂದರಂ ಅವರಲ್ಲಿ ಸಹಾಯ ಮತ್ತು ಸೇವಾಗುಣ ಹುಟ್ಟುಗುಣವಾಗಿ ಬಂದಿದೆ.
ಇಂದಿಗೂ ಅದೇ ಅವರ ಜೀವನಮಾರ್ಗ. ಒಂದು ವರ್ಷದವರಿದ್ದಾಗಲೇ ತಂದೆಯನ್ನು ಕಳೆದುಕೊಂಡ ಅವರನ್ನು ತಾಯಿ ಬಹಳ ಕಷ್ಟದಿಂದ ಸಾಕಿ ಸಲಹಿದರು. ಬಡತನ, ಜೀವನದ ಕಷ್ಟಗಳ ಅರಿವಿದ್ದ ಅವರಿಗೆ ಬಡವರ ಕಷ್ಟಕ್ಕೆ ಸ್ಪಂದಿಸಬೇಕೆಂಬ ಪ್ರಬಲ ವಾದ ಆಸೆ ಆಕಾಂಕ್ಷೆ ಅಂದೇ ಮೊಳಕೆಯೊಡೆದಿತ್ತು. ಅದೀಗ ಬಲವಾಗಿ ಬೇರೂರಿ ಮ್ಮರವಾಗಿ ಬೆಳೆದಿದೆ. ‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬಂತೆ ಚಿಕ್ಕಂದಿನಿಂದಲೇ ಅವರ ಮನಸ್ಸು ಇತರ ಸಂಕಷ್ಟಕ್ಕೆ ಮಿಡಿಯುತ್ತಿತ್ತು, ಸ್ಪಂದಿಸುತ್ತಿತ್ತು.
ಆಗಿನಿಂದಲೇ ಅವರು ತಮ್ಮ ವಯೋಮಾನದ ಮಕ್ಕಳಿಗೆ ಬಟ್ಟೆಗಳನ್ನು ಕೊಡುತ್ತಿದ್ದರು. ಅವರ ಪಾಠ ಪ್ರವಚನಗಳಲ್ಲಿ ನೆರವಾಗುತ್ತಿದ್ದರು. ಇದನ್ನು ಕೇಳಿದರೆ, ‘ನಾನೇನೂ ಅವರಿಗೆ ದೊಡ್ಡ ಸಹಾಯ ಎಂದು ಹೀಗೆ ಮಾಡುತ್ತಿರಲಿಲ್ಲ. ಬದಲಾಗಿ ಇದರಲ್ಲಿ ನನ್ನ ಸ್ವಾರ್ಥವೂ ಅಡಗಿತ್ತು’ ಎಂದು ತಣ್ಣಗೆ ಹೇಳುತ್ತಾರೆ ಕಲ್ಯಾಣಸುಂದರಂ. ಆಗ ನನ್ನದು ಕುಗ್ರಾಮ. ರಸ್ತೆ
ಇರಲಿಲ್ಲ. ಬಸ್ಸು ಬರುತ್ತಿರಲಿಲ್ಲ. ವಿದ್ಯುತ್ ಇರಲಿಲ್ಲ.
ಒಂದು ಕಡ್ಡಿಪೆಟ್ಟಿಗೆ ಬೇಕೆಂದರೆ ಕೊಳ್ಳಲು ಒಂದು ಪೆಟ್ಟಿಗೆ ಅಂಗಡಿ ಕೂಡ ಇರುತ್ತಿರಲಿಲ್ಲ. ಶಾಲೆಗೆ ೧೦ ಕಿಮೀ. ದೂರ
ನಡೆದುಕೊಂಡು ಹೋಗಬೇಕಿತ್ತು. ಆ ನಿರ್ಜನ ಪ್ರದೇಶದಲ್ಲಿ, ಮಳೆಯಲ್ಲಿ ಬಿಸಿಲಲ್ಲಿ ಒಬ್ಬನೇ ನಡೆದುಕೊಂಡು ಹೋಗುವುದು ಸ್ವಲ್ಪ ಅಪಾಯಕಾರಿಯೂ, ಬೇಸರದಾಯಕವೂ ಆಗಿತ್ತು. ನನ್ನ ಜತೆ ಇನ್ನಷ್ಟು ಹುಡುಗರಿದ್ದರೆ ಬೇಸರ ಕಳೆಯಬಹುದು ಎಂಬ ಕಾರಣಕ್ಕೆ ನನ್ನ ಬುಡಕಟ್ಟು ಜನಾಂಗದ ನೆರೆಹೊರೆಯ ಹುಡುಗರನ್ನು ಶಾಲೆಗೆ ಬರುವಂತೆ ಪುಸಲಾಯಿಸುತ್ತಿದ್ದೆ.
ಆದರೆ ಬಹುತೇಕ ಮಕ್ಕಳ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು. ಅವರ ಬಳಿ ಹಾಕಿಕೊಳ್ಳಲು ಬಟ್ಟೆ ಇರುತ್ತಿರಲಿಲ್ಲ. ಇನ್ನು ಶಾಲೆಗೆ
ಸೇರುವುದು ಕನಸಿನ ಮಾತಾಗಿತ್ತು. ಆದರೆ ನಾನು ಪಟ್ಟು ಬಿಡದೆ ಪ್ರಯತ್ನಿಸಿದೆ. ಅವರಿಗೆ ಬಟ್ಟೆ ಕೊಡಿಸುತ್ತಿದ್ದೆ. ಪುಸ್ತಕ, ಪೆನ್ಸಿಲ್ ತಂದುಕೊಡುತ್ತಿದ್ದೆ. ಅಷ್ಟೇ ಏಕೆ, ಅವರ ೫ ರುಪಾಯಿ ಫೀಸನ್ನು ನಾನೇ ಕಟ್ಟುತ್ತಿದ್ದೆ. ಹೀಗಾಗಿ ಅದು ನನ್ನ ಸ್ವಾರ್ಥಕ್ಕಾಗಿ ಮಾಡಿದ ಕೆಲಸವಾಗಿತ್ತು. ಆದರೆ ಕ್ರಮೇಣ ಅದು ಹವ್ಯಾಸ, ಅಭ್ಯಾಸವಾಯಿತು.
ಜೀವನಕ್ರಮವಾಗಿ ಹೋಯಿತು’ ಎಂಬ ಸುದೀರ್ಘ ವಿವರಣೆ ಕೊಡುತ್ತಾರೆ. ಹಾಗೆಂದು ಅವರ ಜೀವನ ಹೂವಿನ ಹಾಸಿಗೆಯೇನೂ
ಆಗಿರಲಿಲ್ಲ. ಸ್ವತಃ ಅಂಥ ಸ್ಥಿತಿವಂತರೇನೂ ಅಲ್ಲ. ಜತೆಗೆ ಅದೆಂಥದೋ ನಾಚಿಕೆ, ಹಿಂಜರಿಕೆ, ಒಂಥರಾ ಕೀಳರಿಮೆ. ಸ್ವಲ್ಪ ಕೀರಲು ಧ್ವನಿ. ಏನು ಹೇಳುತ್ತಾರೆ ಎಂಬುದು ತಕ್ಷಣಕ್ಕೆ ಗೊತ್ತಾಗುತ್ತಿರಲಿಲ್ಲ. ಇದೇ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿ ಕೊಳ್ಳಲು ಕೂಡ ಅವರು ಮುಂದಾಗಿದ್ದುಂಟು. ನಮ್ಮ ದೌರ್ಬಲ್ಯ ಇತರರಿಗೆ ತಮಾಷೆಯ ವಸ್ತುವಾದಾಗ, ನಮ್ಮಲ್ಲಿ ಹತಾಶೆ
ಇಣುಕುತ್ತದೆ, ಮನೆಮಾಡುತ್ತದೆ. ಅದರ ಪರಿಣಾಮ ಏನು ಬೇಕಾದರೂ ಆಗಬಹುದು. ಆದರೆ ಈ ಪರಿಸ್ಥಿತಿಯನ್ನು ಅವರು ನಿಭಾಯಿಸಿದ್ದು ಹೇಗೆ ? ವ್ಯಕ್ತಿತ್ವ ವಿಕಸನದ ಬೋಧನೆ ಮಾಡುತ್ತಿದ್ದ, ಪುಸ್ತಕಗಳನ್ನು ಬರೆಯುತ್ತಿದ್ದ ತಮಿಳವಾನಮ್ ಎಂಬುವವರನ್ನು ಕಲ್ಯಾಣಸುಂದರಂ ಭೇಟಿ ಮಾಡಿ ಅವರು ನೀಡಿದ ಸಲಹೆಯನ್ನು ಕೇಳಿದಾಗ ಅವರ ಜೀವನ ಬೇರೆ ರೀತಿಯ
ಹೊರಳು ಕಂಡಿತು. ‘ನೀನು ಹೇಗೆ ಮಾತನಾಡುತ್ತೀಯಾ ಎಂಬುದನ್ನು ಮರೆತುಬಿಡು.
ಬದಲಾಗಿ ನಿನ್ನ ಬಗ್ಗೆ ಇತರರು ಒಳ್ಳೆಯ ಮಾತನಾಡುವಂಥ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸು’ ಎಂಬ ಅವರ ಸಲಹೆ ಯನ್ನು ಅಳವಡಿಸಿಕೊಂಡರು. ಚಾಚೂ ತಪ್ಪದೆ ಪಾಲಿಸಿದರು. ‘ತಮಿಳವಾನ್ ಅವರ ಈ ಒಂದು ಮಾತನ್ನು ನಾನೆಂದೂ ಮರೆಯಲಾರೆ. ಇಂದಿಗೂ ಆ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೇನೆ’ ಎಂದು ಅವರು ಸ್ಮರಿಸುತ್ತಾರೆ.
ಜೀವನದ ಪ್ರತಿ ಘಟ್ಟದಲ್ಲೂ ಕಷ್ಟವನ್ನು ಅನುಭವಿಸಿದರೂ ಅವರು ಧೃತಿಗೆಡುತ್ತಿರಲಿಲ್ಲ. ಇತರರಿಗೆ ನೆರವಾಗಬೇಕೆಂಬ ಇಚ್ಛೆಗೆ ಚ್ಯುತಿ ಬರುತ್ತಿರಲಿಲ್ಲ. ಅದರಿಂದ ಅವರು ಒಂದು ಹೆಜ್ಜೆಯನ್ನೂ ಹಿಂದಿಡುತ್ತಿರಲಿಲ್ಲ. ತಮಿಳು ವಿಷಯದಲ್ಲಿ ಸ್ನಾತಕೋತ್ತರ
ಪದವಿ ಅಭ್ಯಸಿಸಲು ಅವರು ಬಯಸಿದ್ದರು. ಅವರೊಬ್ಬರೇ ವಿದ್ಯಾರ್ಥಿಯಾಗಿದ್ದರಿಂದ ಒಬ್ಬರಿಗಾಗಿ ಕೋರ್ಸ್ ನಡೆಸುವುದು ಸಾಧ್ಯವಿಲ್ಲ ಎಂದು ಎಂಟಿಟಿ ಕಾಲೇಜಿನ ಆಡಳಿತ ವರ್ಗ ತಿಳಿಸಿತು. ಆದರೆ ಛಲಬಿಡದ ತ್ರಿವಿಕ್ರಮನಂತೆ ಅವರು ಹಿಡಿದ ಪಟ್ಟು ಹಾಗೂ ಆಸಕ್ತಿಯನ್ನು ಗಮನಿಸಿದ ಸಂಸ್ಥಾಪಕರು, ಕಲ್ಯಾಣ ಸುಂದರಂಗೆ ಅವಕಾಶ ಕಲ್ಪಿಸಿದರು.
ಮಾತ್ರವಲ್ಲದೆ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಿದರು. ಮುಂದೆ ಇತಿಹಾಸದಲ್ಲಿ ಎಂಎ ಪದವಿಯನ್ನೂ ಪೂರೈಸಿದರು.
ಅನಂತರ ಗ್ರಂಥಾಲಯ ವಿಜ್ಞಾನದಲ್ಲಿ (ಲೈಬ್ರರಿ ಸೈನ್ಸ್) ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದರು. ಸಮಾಜ ಸೇವೆಯ ತುಡಿತ ಆರಂಭವಾಗಿದ್ದೇ ಅಲ್ಲಿಂದ. ಭಾರತ ಚೀನಾ ಯುದ್ಧದ ಸಮಯದಲ್ಲಿ ರಕ್ಷಣಾ ನಿಧಿಗೆ ಸಹಾಯ ಮಾಡುವಂತೆ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಮಾಡಿದ ಮನವಿಗೆ ಓಗೊಡುವುದರೊಂದಿಗೆ ಅವರ ಸಮಾಜ ಸೇವಾ ಕೈಂಕರ್ಯ ಶುರುವಾಯಿತು.
ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಕಾಮರಾಜ್ ಬಳಿ ತೆರಳಿ ಅವರಿಗೆ ತಮ್ಮ ಚಿನ್ನದ ಸರವನ್ನು ನೀಡಿಬಿಟ್ಟರು. ‘ವಿದ್ಯಾರ್ಥಿ ಯೊಬ್ಬ ಇಂಥ ಕಾರ್ಯಕ್ಕೆ ಮುಂದಾಗಿದ್ದು ಬಹುಶಃ ನಾನೊಬ್ಬನೇ ಇರಬೇಕು’ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ. ಕಲ್ಯಾಣ ಸುಂದರಂ ಅವರು ಬಳಿಕ ಶ್ರೀವೈಕುಂಠಮ್ ಎಂಬ ಊರಿನ ಕಾಲೇಜೊಂದರಲ್ಲಿ ಗ್ರಂಥಪಾಲಕರಾಗಿ ಕೆಲಸಕ್ಕೆ ಸೇರಿದರು. ೩೫ ವರ್ಷಗಳ ಕಾಲದ ಸುದೀರ್ಘ ಸೇವಾವಧಿಯ ಉದ್ದಕ್ಕೂ ತಮಗೆ ಬರುತ್ತಿದ್ದ ಸಂಬಳದ ಅಷ್ಟೂ ಹಣವನ್ನು ದಾನ ಧರ್ಮ, ಸಮಾಜ ಸೇವೆಗೆ ಬಳಸುತ್ತಿದ್ದರು. ಹಾಗಾದರೆ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಸಹಜ.
ಅದಕ್ಕಾಗಿ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರು! ನಂಬುವುದು ಕಷ್ಟ. ಆದರೆ ಇದು ಸತ್ಯ ಸಂಗತಿ. ಇದಲ್ಲದೆ ನಿವೃತ್ತಿಯ ಬಳಿಕ ಬಂದ ೧೦ ಲಕ್ಷ ರು.ಗಳ ಪಿಂಚಣಿ ಹಣವನ್ನೂ ಬಡಬಗ್ಗರ ಕಲ್ಯಾಣಕ್ಕೆ ನೀಡಿಬಿಟ್ಟರು. ಇಷ್ಟು ಮಾತ್ರವಲ್ಲದೆ ಬೇರೆ ಬೇರೆ
ಸಂದರ್ಭದಲ್ಲಿ ಪ್ರಶಸ್ತಿ, ಪುರಸ್ಕಾರವಾಗಿ ಬಂದಿರುವ ೩೦ ಕೋಟಿ ಹಣವನ್ನೂ ಸಮಾಜಸೇವೆಗೆ ವಿನಿಯೋಗಿಸಿದ್ದಾರೆ. ಇದಂತೂ ನಂಬಲಸದಳ. ಇರಿ ಇರಿ. ಇಷ್ಟಕ್ಕೇ ಮುಗಿಯುವುದಿಲ್ಲ.
ನಿವೃತ್ತಿಯ ಬಳಿಕ ಜೀವನ ಸಾಗಬೇಕಲ್ಲ? ಹಣವನ್ನಂತೂ ಉಳಿಸಿಕೊಂಡಿಲ್ಲ. ಎಲ್ಲವನ್ನು ಸಮಾಜಕ್ಕೆ ಅರ್ಪಿಸಿಯಾಗಿದೆ. ಅದಕ್ಕಾಗಿ ಹೋಟೆಲೊಂದರಲ್ಲಿ ವೇಟರ್ ಆಗಿ ಕೆಲಸ ಮಾಡಿದ್ದಾರೆ. ಇದರಿಂದ ಎರಡು ಹೊತ್ತಿನ ಊಟ ಸಿಗುತ್ತದೆ. ಜತೆಗೆ
ಮೇಲ್ಖರ್ಚಿಗೆ ಒಂದಷ್ಟು ಹಣ. ‘ಏನ್ರೀ ಇದು’ ಎಂದು ಕೇಳಿದರೆ, ‘ಏನೂ ಇಲ್ಲ. ಅದು ಹಾಗೆಯೇ’ ಎನ್ನುತ್ತಾರೆ. ತಮಗೆ ಎಳ್ಳಷ್ಟೂ ಹಣದ ಆಸೆ, ಆಕರ್ಷಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುವ ಕಲ್ಯಾಣಸುಂದರಂ, ಅತ್ಯಂತ ಸರಳ ಜೀವನ ಸಾಗಿಸುತ್ತಾರೆ. ಇಂದಿಗೂ
ಚೆನ್ನೆ ನ ಸೈದಾಪೇಟ್ನ ಸಣ್ಣ ಮನೆಯಲ್ಲಿ ವಾಸ.
ಮದುವೆಯಾದರೆ ಮಡದಿ, ಸಂಸಾರ ಎಂದು ಖರ್ಚು ಹೆಚ್ಚಾಗುತ್ತದೆ. ಆಗ ಬಡವರ ಸೇವೆ ಮಾಡುವುದು, ಅದಕ್ಕಾಗಿ ಹಣ ವಿನಿಯೋಗಿಸುವುದು ಸಾಧ್ಯವಾಗದು ಎಂಬ ಕಾರಣಕ್ಕೆ ಮದುವೆ ಕೂಡ ಆಗಲಿಲ್ಲ. ಹೆಚ್ಚು ಸಂಪಾದನೆ ಮಾಡಿದರೆ ಹೆಚ್ಚು ಆರಾಮವಾಗಿರಬಹುದು ಎಂಬುದು ನಮ್ಮ ನಿಮ್ಮೆಲ್ಲರ ಭಾವನೆ. ಆದರೆ ಹೆಚ್ಚು ಕೆಲಸ ಮಾಡಿದರೆ, ಅದರಿಂದ ಬರುವ ಹೆಚ್ಚುವರಿ
ಹಣವನ್ನೂ ದಾನ ಮಾಡಬಹುದು ಎಂಬುದು ಅವರ ತರ್ಕ. ಪರೋಪಕಾರಕ್ಕಾಗಿಯೇ ಈ ಶರೀರ ಎಂಬ ಸಿದ್ಧಾಂತವನ್ನು ಬಲವಾಗಿ ನಂಬಿರುವ ಅವರು, ಕೊಡುಗೈ ದೊರೆ. ತಮ್ಮ ಬಳಿ ಇಟ್ಟುಕೊಂಡರೆ ಕೊಡಲು ಅಷ್ಟು ಕಡಿಮೆ ಆಗುತ್ತದೆ ಎಂಬ ಮನೋಭಾವ ಅವರದು.
ಮಗುವಿವನಂಥ ಮನಸ್ಸು, ಅದೇ ತೆರನಾದ ಯೋಚನೆ. ಇಷ್ಟು ಮಾತ್ರವಲ್ಲದೆ ಜನರ ಕಷ್ಟ ಅರಿತಷ್ಟೂ ಅವರಿಗೆ ಸಹಾಯ ಮಾಡುವ ಅಭೀಪ್ಸೆ ಹೆಚ್ಚುತ್ತದೆ ಎಂಬ ನಂಬಿಕೆ. ಹೀಗಾಗಿ ಅವರು ಸುಖಾಸುಮ್ಮನೆ ಸ್ವತಃ ಕಷ್ಟಪಡುತ್ತಿದ್ದರು. ಅಂದರೆ ರೈಲ್ವೆ ಪ್ಲಾಟ್-ರ್ಮ್ನಲ್ಲಿ, ಫುಟ್ಪಾತ್ನಲ್ಲಿ ಮಲಗುತ್ತಿದ್ದರು. ಆ ಮೂಲಕ ಅವರ ಕಷ್ಟ ಅರಿಯಲು ಯತ್ನಿಸುತ್ತಿದ್ದರು.
ಕಲ್ಯಾಣ ಸಂದರಂ ಅವರು ಆತ್ಮತೃಪ್ತಿಗಾಗಿ ಇದನ್ನೆಲ್ಲ ಮಾಡಿದರೇ ಹೊರತು ಎಂದೂ ಪ್ರಚಾರ ಬಯಸಿದವರಲ್ಲ. ಆದರೆ ಅವರ ನಿಸ್ವಾರ್ಥ ಸೇವೆಯ ವರ್ತಮಾನ ದಿನಕಳೆದಂತೆ ಎಲ್ಲೆಡೆ ಪಸರಿಸಿತು. ಹಾಗೆಯೇ ಪ್ರಶಸ್ತಿ, ಪುರಸ್ಕಾರ, ಗೌರವಗಳು ಹುಡುಕಿಕೊಂಡು ಬಂದವು. ಕೇಂದ್ರ ಸರಕಾರವು ಅವರಿಗೆ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿ ನೀಡಿ ಗೌರವಿಸಿದೆ.
ಕೇಂಬ್ರಿಜ್ನ ಇಂಟರ್ನ್ಯಾಷನಲ್ ಬಯೋಗ್ರಾಫಿಕಲ್ ಸೆಂಟರ್ ಸಂಸ್ಥೆಯು ‘ನೋಬಲೆಸ್ಟ್ ಆಫ್ ದಿ ವರ್ಲ್ಡ್’ ಎಂಬ ಗೌರವ ನೀಡಿದೆ. ಇನ್ನು ವಿಶ್ವಸಂಸ್ಥೆಯು ೨೦ನೇ ಶತಮಾನದ ಅತಿ ವಿಶಿಷ್ಟ ವ್ಯಕ್ತಿ ಎಂದು ಗುರುತಿಸಿ ಗೌರವಿಸಿದೆ. ರೋಟರಿ ಕ್ಲಬ್ ಪ್ರಶಸ್ತಿಯೂ ಅವರನ್ನು ಅರಸಿ ಬಂದಿದೆ. ಹೀಗೆ ನಾನಾ ಬಗೆಯ ಪ್ರಶಸ್ತಿಗಳ ಒಟ್ಟು ಮೊತ್ತ ೩೦ ಕೋಟಿ. ಅದನ್ನೆಲ್ಲ ಅವರು ಅನಾಥಾಲಯಗಳಿಗೆ ದಾನ ಮಾಡಿದ್ದಾರೆ.
ಹೀಗೆ ತಮ್ಮ ಇಡೀ ಬದುಕನ್ನು ಅಂದರೆ ಐವತ್ತು ವರ್ಷಗಳ ಕಾಲ ದೀನ ದುರ್ಬಲರ ಏಳಿಗೆಗಾಗಿ ಮೀಸಲಿಟ್ಟಿರುವ ಅವರು ಇಂದಿಗೂ ಅದರಿಂದ ವಿಮುಖರಾಗಿಲ್ಲ, ವಿರಮಿಸಿಲ್ಲ. ಪಾಲಂ ಎಂಬ ಸಂಸ್ಥೆಯನ್ನು ಆರಂಭಿಸಿದ್ದು ಅದರ ಮೂಲಕ ಈಗಲೂ
ಅನಾಥರಿಗೆ, ಬಡವರಿಗೆ ನೆರವು ನೀಡುವ ಕಾಯಕವನ್ನು ಮುಂದುವರಿಸಿದ್ದಾರೆ. ಅಡ್ಯಾರ್ನಲ್ಲಿರುವ ಈ ಸಂಸ್ಥೆಯ ಕಚೇರಿಗೆ ಬಂದು ಕೆಲಸ ಮಾಡುತ್ತಾರೆ.
ಕಲ್ಯಾಣಸಂದರಂ ಅವರಿಗೆ ಬಡವರ ಕಲ್ಯಾಣವೇ ಸುಂದರ. ಆದರೆ ಆದರೆ ಬೇರೆಯವರಿಗಾಗಿ ತಮ್ಮದನ್ನು ಮತ್ತು ತಮ್ಮದೆಲ್ಲ ವನ್ನೂ ಕೊಡುವ ಉದಾರಚರಿತರ ಸಂಖ್ಯೆ ವಿರಳಾತಿವಿರಳಿ. ಅಂಥ ವಿರಳರಲ್ಲಿ ಕಲ್ಯಾಣ ಸುಂದರಂ ಎದ್ದು ಕಾಣುತ್ತಾರೆ ಎಂಬುದೇ ವಿಶೇಷ.
ನಾಡಿಶಾಸ್ತ್ರ
ಬದುಕು ಸುಂದರವಾಗಲು ಬೇಕು ಹಣ
ಆದರೆ ಇತರರ ಕಲ್ಯಾಣವೇ ಇವರ ಪಣ
ಬಲು ಅಪರೂಪ ಇಂಥ ಜನರು ಕಾಣ
ಹೀಗೂ ತೀರಿಸುತ್ತಾರೆ ಸಮಾಜದ ಋಣ