ಲಕ್ಷ್ಮೀಕಾಂತ್ ಎಲ್.ವಿ
ಹೊಂಗೆ ತಂಪಾಗಿ ಚಿಗುರುವುದು ಅಂದ ಎಂಬ ಕವಿವಾಣಿಯು ಇಂದು ನಮ್ಮ ಮನೆ ಮುಂದೆ ಸಾಕಾರವಾಗಿದೆ. ಎಲ್ಲಡೆ ಹೊಂಗೆಯ ಚಿಗುರಿನ ಹಸಿರು ಕಣ್ಣಿಗೆ ತಂಪನೀಯುತ್ತಿದೆ, ಮನಕೆ ಉಲ್ಲಾಸ ತುಂಬುತ್ತಿದೆ.
ಇನ್ನೇನು ಯುಗಾದಿ ಆಗಮನ. ಎಲ್ಲೆಡೆ ಹೊಸ ಚಿಗುರಿನ ಸಂಭ್ರಮ. ವಸಂತ ಋತುವಿನಲ್ಲಿ ಚಿಗುರಿನ ಆಗಮನದ ಕಾಲಧರ್ಮದ ಜೊತೆ ಸಸ್ಯರಾಶಿಯ ಒಳಮರ್ಮ ನಿಸರ್ಗದ ಕಾಯಕದಲ್ಲಿ ತೊಡಗಿದೆ. ಅದರಲ್ಲಿಯೂ ಹೊಂಗೆ ಮರಗಳೆಲ್ಲಾ ತಮಗೇ ಭಾರ ಎನಿಸುವಷ್ಟು ಮೈತುಂಬಾ ಎಲೆ-ಹೂಗಳನ್ನು ಬಿಟ್ಟು ನಳನಳಿಸುತ್ತಿವೆ.
ಈಗ ಬಿಸಿಲಂತೂ ಹೆಚ್ಚಾಗಿದ್ದು, ಎಲೆಗಳ, ಎಳೆಯತನದ ಚುರುಕುತನ ರೆಂಬೆ ಕೊಂಬೆಗಳಲ್ಲಿ ಚಿಗುರನ್ನು ಹರಡಿಕೊಳ್ಳುವ ಹೊಂಗೆ ವಸಂತವಿರುವಷ್ಟೂ ಕಾಲ ಅದರ ನೆರಳ ಚೆಲುವೂ ತಂಪೂ ಇರಲಿವೆ. ಹೊಂಗೆಯು ತಾನು ಸುಡು ಬಿಸಿಲಲ್ಲಿ ನಿಂತು ಕೆಳಗೆ ತಂಪನೀವ ಮರ. ಹೊಂಗೆಯ ನೆರಳೆಂದರೆ ಸುಖ-ದುಃಖದ ಸಂಗಮ. ಅದರ ಚೆಲುವು ಅಪ್ರತಿಮ. ಹೊರಗೆ ಮೈದಾನದಲ್ಲೋ, ಜಮೀನಿನ ಅಂಚಲ್ಲೋ, ರಸೆಯ ಬದಿಯಲ್ಲೋ, ಪಾರ್ಕಿನಲ್ಲೋ ಅಡ್ಡಾಡುವಾಗ, ಬಿಸಿಲಿನ ಧಗೆ ತಡೆಯ ದಾದಾಗ ಹೊಂಗೆಯ ಮರದ ತಿಳಿ ಹಸಿರು ಮನಸ್ಸನ್ನು ಆಕರ್ಷಿಸುವುದು ಸಹಜ.
ಬಹು ಪಾಲು ಗಿಡ ಮರಗಳೂ ಇದೇ ವಸಂತದಲ್ಲಿ ಚಿಗುರು ಹೂವನ್ನು ಅಣಿಮಾಡಿ ಕೊಂಡು ಕಾಯುತ್ತವಾದರೂ, ಹೊಂಗೆಯ ಚೆಲುವು ಹಾಗೂ ತಂಪು ಭಿನ್ನ. ಅದರ ಸುಖ ಹಾಗೂ ದುಃಖಗಳು ಜೈವಿಕ ಕಾರ್ಯಾಚರಣೆಯಲ್ಲಿ ಮುಳುಗಿಹೋಗಿವೆ. ಇದಕ್ಕಾಗಿ ಮರದ ತಯಾರಿ ಹಿಂದಿನ ವರ್ಷವೇ ಆರಂಭವಾಗಿರುತ್ತದೆ. ಎಲ್ಲ ಸಸ್ಯಗಳೂ ಸ್ವಾಭಾವಿಕವಾಗಿ ಹೀರುಗೊಳವೆಗಳ ಮೂಲಕ ನೀರನ್ನು ಹೀರಿ ತುದಿಯವರೆಗೂ ಸಾಗಿಸುತ್ತವೆ.
ಎಲೆಯ ಹರಹಿನಲ್ಲಿ ತಲುಪಿ ಅಲ್ಲಿನ ಪತ್ರರಂಧ್ರದ ಮೂಲಕ ಹೆಚ್ಚಿನ ನೀರನ್ನು ಬಾಷ್ಪವಿಸರ್ಜನೆ ಎಂದು ಕರೆಯುವ ಕ್ರಿಯೆ ಯಿಂದ ಹೊರಬಿಡುತ್ತವೆ. ಈ ಕೆಲಸವೆಲ್ಲಾ ಬರೀ ಹಗಲೇ ನಡೆಯುತ್ತದೆ. ವಿಶೇಷವಾಗಿ ನೀರನ್ನು ಹೊರ ಹಾಕಿ ಚಿಗುರೆಲೆಯ, ಜತೆಗೆ ಅವುಗಳ ತೊಟ್ಟಿನಲ್ಲೂ ತಂಪನ್ನಿಟ್ಟುಕೊಳ್ಳುವ ವಿಧಾನ. ಅದಕ್ಕೇ ವಿಶೇಷವಾದ ಹೊಂಗೆಯ ತಂಪನ್ನು ಅನುಭವಿಸು ತ್ತೇವೆ.
ಈಗಂತೂ ಎಲ್ಲೆಲ್ಲಿ ಹೊಂಗೆಯ ಮರಗಳಿದ್ದಾವೂ ಅವೆಲ್ಲವೂ ಹಸಿರುಟ್ಟು, ಹೂಮುಡಿದು ವಸಂತ ಆಗಮಿಸಿದ್ದನ್ನು ಸಾದರ
ಪಡಿಸುತ್ತಲೇ ಇವೆ. ಅರೆ ಕ್ಷಣ ಹೊಂಗೆಯ ನೆರಳಿಗೆ ನಿಂತರೂ ಸ್ವರ್ಗವೇ ಸಿಕ್ಕಷ್ಟು ಆನಂದವಾಗುತ್ತದೆ. ಬಳಲಿದ ದೇಹ ಮತ್ತು
ಮನಸ್ಸಿಗೆ ಉಲ್ಲಾಸ ಕೊಡುತ್ತದೆ.
ರೋಗಗಳಿಗೆ ರಾಮಬಾಣ
ತಾಯಿಯ ಮಡಿಲು ಹೊಂಗೆಯ ನೆರಳು ಎನ್ನುವ ಮಾತಿದೆ. ಅದರ ಅರ್ಥ ತಾಯಿಯ ಮಡಿಲಿನಂತೆಯೇ ಹೊಂಗೆಯ ಮರದ ನೆರಳು ನೆಮ್ಮದಿ ನೀಡುತ್ತದೆ ಎಂದು. ಅಂತಹ ಹೊಂಗೆ ಮರ ಕೇವಲ ಗಾದೆ ಮಾತಿಗೆ, ನೆರಳಿಗೆ ಮಾತ್ರವಲ್ಲದೆ ಎಷ್ಟೋ ರೋಗಗಳಿಗೆ ರಾಮಬಾಣ ಕೂಡಾ ಆಗಿದೆ. ಹೊಂಗೆ ಮರದ ಕಡ್ಡಿಯನ್ನ ಜಗಿದು ಹಲ್ಲು ಉಜ್ಜಿದರೆ ಆರೋಗ್ಯಕರ.
ಜತೆಗೆ ವಸಡಿನ ಆರೋಗ್ಯಕ್ಕೂ ಉತ್ತಮ. ಹೊಂ ಎಲೆಗಳನ್ನು ನಿಯಮಿತವಾಗಿ ಸೇವಿಸುವು ದರಿಂದ ಮಧುಮೇಹ ನಿಯಂತ್ರಣ ದಲ್ಲಿ ಇರುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಹೊಂಗೆ ಬೀಜವನ್ನು ನೀರಿನಲ್ಲಿ ತೇಯ್ದು ಕೂದಲು ಉದುರುವ ಜಾಗಕ್ಕೆ ಹಚ್ಚಿದರೆ ಅಲ್ಲಿರುವ ಕೀಟಾಣುಗಳು ಸತ್ತು ಕೂದಲು ಉದುರುವುದು ನಿಲ್ಲುತ್ತದೆ. ಹೊಂಗೆ ಬೀಜವನ್ನು ನೀರಿನಲ್ಲಿ ಅರೆದು, ಒಂದೆರಡು ಹನಿ ರಸವನ್ನು ಮೂಗಿಗೆ ಹಾಕುವುದರಿಂದ ಅರ್ಧ ತಲೆ ನೋವು ಮಾಯವಾಗುತ್ತದೆ.
ಜೇನು ಹುಳ ಅಥವಾ ಕಣಜದ ಹುಳ ಕಚ್ಚಿದಾಗ ಆ ಜಾಗಕ್ಕೆ ಹೊಂಗೆ ಎಣ್ಣೆಯನ್ನು ಹಚ್ಚುವುದರಿಂದ ನೋವು ಕಡಿಮೆ ಯಾಗುತ್ತದೆ. ಕೀಲುನೋವು ಇದ್ದರೆ ಅದಕ್ಕೂ ಸಹ ಹೊಂಗೆ ಎಣ್ಣೆ ಪರಿಹಾರ ನೀಡುತ್ತದೆ. ಮನೆಯಲ್ಲಿ ಹೊಂಗೆ ಎಣ್ಣೆಯ ದೀಪ ಹಚ್ಚುವುದರಿಂದ ಸೊಳ್ಳೆಗಳು ಮನೆಯ ಒಳಗೆ ಬರದಂತೆ ತಡೆಯಬಹುದು. ಇದನ್ನು ಬಳಕೆ ಮಾಡುವ ಮೊದಲು ಆಯುರ್ವೇದ ವೈದ್ಯರನ್ನು ಭೇಟಿ ಮಾಡುವುದು ಅಗತ್ಯ.
ಬಹೂಪಯೋಗಿ ಹೊಂಗೆ
ಇತ್ತೀಚೆಗೆ ಹೊಂಗೆಯನ್ನು ಜೈವಿಕ ಇಂಧನವಾಗಿ ಬಳಸುತ್ತಿದ್ದಾರೆ. ಲೆಗ್ಯೂಮ್ ಕುಲದ ಸಸ್ಯವಾದ ಹೊಂಗೆಯು ಫ್ಯಾಬೇಸಿಯೇ
ಸಸ್ಯಕುಟುಂಬಕ್ಕೆ ಸೇರಿದೆ. ಹೊಂಗೆ ಬೀಜಗಳ ಎಣ್ಣೆಯನ್ನು ಜೈವಿಕ ಇಂಧನವಾಗಿಸಿ, ಡೀಸೆಲ್ಲಿನ ಜತೆ ಬೆರೆಸಿ ಬಳಸಲಾಗುತ್ತಿದೆ.
ಈಗ ಎಲ್ಲೆಡೆ ಹೊಂಗೆ ಚಿಗುರಿದೆ. ಹೊಂಗೆ ಇರುವಲ್ಲೆಲ್ಲಾ ಹಸಿರಿನ ಸಿರಿ. ಹೊಂಗೆಯ ತಂಪಿನಲ್ಲಿ ಕುಳಿತು, ಬಿಸಿಲಿನ ಝಳವನ್ನು ಎದುರಿಸೋಣ, ಹೊಂಗೆ ತಂಪಾಗಿ ಚಿಗುರಿದ್ದನ್ನು ಕಣ್‌ತುಂಬಿಕೊಳ್ಳೋಣ.