ಓದುಗರ ಒಡಲಾಳ
ಯಾವ ಕಾರಣಕ್ಕೆ ಸರಕಾರ ಇಂತಹ ಎಡವಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ?
ಮಿತೇಶ್ ಪಟ್ಟಣ ನ್ಯಾಯವಾದಿಗಳು
ಸರಕಾರ ಅದ್ಯಾವ ಕಾರಣಕ್ಕೆ ಇಂತಹ ಎಡವಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಕರೋನಾ
ಸಂದರ್ಭದಲ್ಲಿ ರಾಜ್ಯ ಸರಕಾರ ಇಂತಹ ನಿರ್ಧಾರ ತೆಗೆದುಕೊ ಳ್ಳುವುದಕ್ಕೇ ಬಲು ಪ್ರಸಿದ್ಧಿ ಪಡೆದಿದೆ ಎನ್ನಬಹುದು.
ಅದರ ಮುಂದುವರಿದ ಭಾಗವಾಗಿ ಸಿನಿಮಾ ಪ್ರದರ್ಶನಕ್ಕೆ ಶೆ.50ರಷ್ಟು ನಿರ್ಬಂಧವನ್ನು ದಿನಬೆಳಗಾಗುವುದರೊಳಗೆ ಬದಲಾಯಿಸಿದ್ದು ಅತ್ಯಂತ ಮಹತ್ವ ಪಡೆದಿದೆ. ದೇಶಾದ್ಯಂತ ಲಾಕ್‌ಡೌನ್ ಜಾರಿ ಮಾಡಿದಾಗ, ಊರಿಗೆ ಹೋಗೋರೆಲ್ಲ ಹೋಗಲಿ
ಎಂದು ಒಂದು ದಿನ ಅವಕಾಶ ನೀಡಿದ ರಾಜ್ಯ ಸರಕಾರ ಕರೋನಾವನ್ನು ಹಳ್ಳಿಹಳ್ಳಿಗೂ ಬಳುವಳಿಯಾಗಿ ನೀಡಿತು.
ಬೆಂಗಳೂರಿನಲ್ಲಿದ್ದ ಕರೋನಾ ವೈರಸ್‌ಗಳ ದಂಡು ಬಸ್, ಕಾರು, ಲಾರಿ, ಟೆಂಪೊಗಳನ್ನು ಹತ್ತಿಕೊಂಡು ಹಳ್ಳಿಗಳನ್ನು ಸೇರಿದವು. ನಗರದಲ್ಲಿ ಮಾತ್ರ ಬರುತ್ತಿದ್ದ ಕರೋನಾ ಪ್ರಕರಣ ಸಂಖ್ಯೆ ಳ್ಳಿಗಳಿಂದ ವರದಿಯಾಗುವುದಕ್ಕೆ ಶುರುವಾಯಿತು. ಮಾಸ್ಕ್ ಧರಿಸದಿರುವುದಕ್ಕೆ ವಿಧಿಸುವ ದಂಡದ ವಿಚಾರದಲ್ಲಿಯೂ ಹೀಗೆ ಎರಡೆರಡು ಬಾರಿ ಎಡವಟ್ಟು ನಿರ್ಧಾರ ತೆಗೆದುಕೊಂಡಿತು.
ನಿಬಂಧದ ವಿಚಾರ ಬಂದಾಗಲೆಲ್ಲ, ಯಾರಾದರೊಬ್ಬರು ಬಂದು ಮನವಿ ಮಾಡಿ ದಾಕ್ಷಣ ನಿರ್ಧಾರ ಬದಲಾಗುತ್ತದೆ.
ಇದು ಶಾಲೆಗಳನ್ನು ತೆರೆಯುವ ವಿಚಾರದಲ್ಲಿಯೂ ಆಗಿತ್ತು. ಇದಕ್ಕೆ ಅದ್ಯಾವ ಪ್ರಭಾವ ಕಾರಣ ಎನ್ನುವುದು ಮಾತ್ರ ಸಾಮಾನ್ಯ ಜನರಾದ ನಮ್ಮಂತಹವರಿಗೆ ತಿಳಿಯುವುದಿಲ್ಲ. ಒಟ್ಟಾರೆ, ಇಂದು ಇದ್ದ ನಿರ್ಬಂಧ ಬೆಳಗಾಗುವಷ್ಟರಲ್ಲಿ ಬದಲಾಗಿರುತ್ತದೆ. ಇದನ್ನು ಕೇಳುವವರು, ಹೇಳುವವರು ಯಾರೂ ಇಲ್ಲದಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಇದ್ದಕ್ಕಿದ್ದಂತೆ ಕರೋನಾ ಎರಡನೇ ಅಲೆ ಜೋರಾಗುತ್ತಿದೆ. ಇದನ್ನು ತಡೆಯಲು ಕೆಲ ನಿರ್ಬಂಧಗಳು ಅನಿವಾರ್ಯ ಎನ್ನುವುದು ಎಲ್ಲರಿಗೂ ಗೊತ್ತಿದೆ.
ಇದಕ್ಕಾಗಿಯೇ ನೇಮಕವಾಗಿರುವ ತಜ್ಞರ ಸಮಿತಿ ವರದಿ ಯನ್ನೂ ನೀಡಿದೆ. ಆದರೆ, ಖಜಾನೆ ಬರಿದಾಗಿದೆ ಎನ್ನುವ ನೆಪದಲ್ಲಿ ಅನೇಕ ನಿಯಮಗಳನ್ನು ಸರಕಾರವೇ ಮೀರುತ್ತಿದೆ. ಇನ್ನು ಉಪಚುನಾವಣೆ ಗುಂಗಲ್ಲಿ ಕರೋನಾ ಎನ್ನುವುದನ್ನೇ ಜನರು ಮತ್ತು ಜನನಾಯಕರು ಮರೆತಿದ್ದಾರೆ. ಸಿನಿಮಾ ಮಂದಿರಗಳು ಸೇರಿ ಕೆಲ ಸ್ಥಳಗಳಲ್ಲಿ ಶೇ.೫೦ರಷ್ಟು ಕಾರ್ಯಾಚರಣೆಗಷ್ಟೇ ಅವಕಾಶ ನೀಡಿ ಸರಕಾರ ಆದೇಶ ಹೊರಡಿಸಿದೆ.ಇದು ಜನಹಿತಕ್ಕಾಗಿ ಜಾರಿಗೆ ತಂದ ನಿಯಮ ಎಂದು ಸಚಿವರು ಕೊಚ್ಚಿಕೊಂಡರು. ಆದರೆ, ಬಹುನಿರೀಕ್ಷಿತ ಯುವರತ್ನ ಚಲನಚಿತ್ರ ಬಿಡುಗಡೆಗೆ ಇದರಿಂದ ಹೊಡೆತ ಬೀಳುತ್ತದೆ ಎಂದು ಬೊಬ್ಬೆ ಶುರುವಾಯಿತು.
ಅತ್ತ ಎಂದೂ ಒಂದಾಗದ ಚಿತ್ರರಂಗ ಇದ್ದಕ್ಕಿದ್ದಂತೆ ಒಗ್ಗಟ್ಟು ಪ್ರದರ್ಶನ ಮಾಡಿತು. ಸ್ವತಃ ಪುನೀತ್ ರಾಜಕುಮಾರ್ ಅವರು ಸಿಎಂ ಮುಂದೆ ಹೋಗಿ ತಮ್ಮ ವೈಯಕ್ತಿಕ ನಷ್ಟದ ಬಗ್ಗೆ ಗೋಳು ತೋಡಿಕೊಂಡರು. ಅದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ.
ಇಲ್ಲಿ ಸಿನಿಮಾದಿಂದ ನೂರಾರು ಕಾರ್ಮಿಕರು ನಷ್ಟ ಅನುಭವಿಸುತ್ತಾರೆ ಎಂಬ ವಾದವಿದೆ. ಸಿನಿಮಾ ಮಂದಿರಗಳಲ್ಲಿ ಕರೋನಾ ಹರಡಿ, ಅಷ್ಟೇ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡರೆ ಅದಕ್ಕೆ ಬೆಲೆ ಇಲ್ಲವೇ? ಈ ಲಾಭ, ನಷ್ಟ ಎಲ್ಲವೂ ಪ್ರಭಾವಿ ಸಿನಿಮಾ ಮಂದಿಗಷ್ಟೇ ಸೀಮಿತವೇ, ಉಳಿದ ಜನರಿಗೆ ಯಾಕೆ ಇದೆಲ್ಲ ಅನ್ವಯಿಸುವುದಿಲ್ಲ. ಲಾಕ್ ಡೌನ್‌ನಿಂದ ಅದೆಷ್ಟೋ ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಕೂಳು ಕಳೆದುಕೊಂಡರು, ಆಗ ಸರಕಾರ ಏಕೆ ಇಷ್ಟು ತ್ವರಿತಗತಿಯಲ್ಲಿ ಸ್ಪಂದಿಸಲಿಲ್ಲ?
ಎಂದು ಪ್ರತಿಯೊಬ್ಬ ಪ್ರಜೆಯನ್ನು ಕಾಡುವ ಪ್ರಶ್ನೆ.
ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡದಿರುವುದರಿಂದ ಕೆಲವರಿಗೆ ನಷ್ಟವಾಗುವುದು ಸತ್ಯವೇ ಆದ ರೂ, ಪ್ರದರ್ಶನದಲ್ಲಿ ಮೈಮರೆತು ವರ್ತಿಸುವ ಜನರಿಂದ ಅಷ್ಟೇ ಪ್ರಮಾಣದ ಕರೋನಾ ಸೋಂಕು ಹರಡುತ್ತದೆ ಎಂಬುದು ಸತ್ಯ. ಈ ನಾಲ್ಕು ದಿನಗಳಲ್ಲಿ ಸಿನಿಮಾ ಪ್ರದರ್ಶನದಿಂದ ಕೇವಲ ಐದಾರು ನೂರು ಮಂದಿಗೆ ಕರೋನಾ ಹರಡಿಸಿದರೆ ಸಾಕು, ಮುಂದಿನ ಒಂದು ತಿಂಗಳಲ್ಲಿ ಅದು ಸಾವಿರಾರು ಸಂಖ್ಯೆಯನ್ನು ದಾಟುತ್ತದೆ. ಇದು ದೊಡ್ಡವರ ಸಿನಿಮಾ ಎಂದೇನೂ ಕರೋನಾ ರೆಸ್ಟ್
ಕೊಡುವುದಿಲ್ಲ.
ಸರಕಾರದಂತೆ ರಿಯಾಯಿತಿ ಘೋಷಣೆ ಮಾಡುವುದಿಲ್ಲ. ರಾಜ್ಯಾದ್ಯಂತ ಪುನೀತ್ ಪ್ರವಾಸ ಮಾಡಿದಾಗಲೂ ಕರೋನಾ ಸೋಂಕು ಮೈಮರೆತು ಹಬ್ಬಿರುವುದು ಅಷ್ಟೇ ಸತ್ಯ. ಈಗ ಯಾರದೋ ಹೊಟ್ಟೆಯ ನೆಪ ಹೇಳಿ, ಮತ್ತಷ್ಟು ಮಂದಿಯ ಜೀವದ ಜತೆ ಆಟವಾಡುವುದು ಎಷ್ಟು ಸರಿ. ಅಷ್ಟಕ್ಕೂ ಕರೋನಾ ನಾಲ್ಕು ದಿನ ಏನು ಪಿಕ್‌ನಿಕ್ ಹೋಗುತ್ತಾ?