Friday, 13th December 2024

ಮರಳಿ ಮನಸಾಗಿ ನಿನ್ನ ಹುಡುಕಿದೆ

ಹರೀಶ್ ಪುತ್ತೂರು

ಪ್ರೀತಿಗಿರುವ ಶಕ್ತಿ ಈ ಭೂಮಿ ಮೇಲೆ ಬೇರೆ ಯಾವುದಕ್ಕೂ ಇರಲಿಕ್ಕಿಲ್ಲ. ಪ್ರಿಯೇ….ಈ ಜೀವ ನಿನಗಾಗಿ ಎಂದು ಅಪ್ಪಿಕೊಂಡ ಜೀವಗಳು ಒಬ್ಬರಿಗೊಬ್ಬರನ್ನು ಬಿಟ್ಟಿರಲು ಸಾಧ್ಯವೇ? ಇಲ್ಲ.

ಇದೊಂದು ವಿಶೇಷ ಪೇಮ ಕಥನ. ‘ಓ ಕನಕಾಂಬರಿ, ನೀನು ಬಾರದೆ ಪೂಜೆಗೆ ಹೂವಿಲ್ಲ…’ ಅನ್ನೋ ತರ ಇದೆ. ಈ ಸ್ಟೋರಿ ಕಥಾನಾಯಕನ ವಯಸ್ಸು ಈಗ 82 ವರ್ಷ. ಊರು ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಹೃದಯಭಾಗದಲ್ಲಿ ಕುಧ್ವಾರ ಎಂಬ
ಕುಗ್ರಾಮ. ದೇವಸ್ಥಾನದಲ್ಲಿ ದ್ವಾರಪಾಲಕನಾಗಿ ಕೆಲಸ ಮಾಡುತ್ತಿದ್ದ.

1970 ರ ಸಮಯ. ಆತನ ಜೀವನದಲ್ಲಿ ಬಹುತೇಕ ಜನರ ಜೀವನದಲ್ಲಿ ನಡೆಯುವಂತಹ ಘಟನೆಯೊಂದು ನಡೆಯಿತು. ಆಗ ಆತನಿಗೆ 30 ವರ್ಷ. ಆತ ಕೆಲಸ ಮಾಡುತ್ತಿದ್ದ ದೇಗುಲ ನೋಡಲು ಆಸ್ಟ್ರೇಲಿಯಾದ ಮರಿನಾ ಎಂಬಾಕೆ ಬಂದಿದ್ದಳು. ದ್ವಾರ ಪಾಲಕನಾಗಿದ್ದ ಆತ ಆಕೆಯನ್ನು ಒಂಟೆ ಸವಾರಿ ಮಾಡಲು ಕರೆದುಕೊಂಡು ಹೋಗಿದ್ದಾನೆ. ಐದು ದಿನಗಳ ಮಟ್ಟಿಗೆ ಪ್ರವಾಸಕ್ಕೆ ಬಂದಿದ್ದ ಮರೀನಾ, ಒಂಟೆ ಸವಾರಿ ಮಾಡುವಾಗ ಆತನನ್ನು ಕಂಡು ಇಷ್ಟಪಟ್ಟಿದ್ದಾಳೆ.

ಆತನಿಗೂ ಆಕೆಯ ಮೇಲೆ ವ್ಯಾಮೋಹ ಹುಟ್ಟಿದೆ. ಅಲ್ಲಿಯೇ ಆಕೆ ‘ಐ ಲವ್ ಯೂ’ ಎಂದುಬಿಟ್ಟಿದ್ದಾಳೆ. ಒಂಟೆ ಸವಾರಿ ಮೂಲಕ ಶುರುವಾದ ಈ ಪ್ರೀತಿ ಅದ್ದೂರಿಯ ಜಾತ್ರೆಯಂತೆ ಐದು ದಿನಗಳವರೆಗೆ ಮುಂದುವರೆದಿದೆ. ನಂತರ ಮರೀನಾ ತನ್ನ ದೇಶಕ್ಕೆೆ ವಾಪಸಾದಳು. ವಾಪಸಾದ ಬಳಿಕ ಈ ದ್ವಾರಪಾಲಕನ ಪ್ರೀತಿಯನ್ನು ಆಕೆ ಮರೆಯಲಿಲ್ಲ. ಅಲ್ಲಿ ಹೋದ ಮೇಲೆಯೂ ಕುಶಲವೇ? ಕ್ಷೇಮವೇ? ಎಂಬ ಪ್ರೇಮ ಸಂಭಾಷಣೆ ಪತ್ರದ ಮೂಲಕ ಗೀಚಿ ಆತನಿಗೆ ತಲುಪಿಸುವುದರ ಮೂಲಕ ಆಕೆ ಅವನ ಮೇಲಿನ ಪ್ರೀತಿಯನ್ನು ಮುಂದುವರಿಸಿದ್ದಳು. ಮಾತ್ರವಲ್ಲದೇ, ಸಂದರ್ಭ ನೋಡಿಕೊಂಡು ತನ್ನ ಪ್ರಿಯಕರನನ್ನು ಆಸ್ಟ್ರೇಲಿಯಾಕ್ಕೆ ಬರಲು ಆಹ್ವಾನಿಸಿದಳು.

70ರ ದಶಕದಲ್ಲಿಯೇ ಈ ಯುವಕ ಹೇಗೇಗೋ ಮಾಡಿ 30,000 ರೂಪಾಯಿಗಳನ್ನ ಹೊಂದಿಸಿ, ಆಸ್ಟ್ರೇಲಿಯಾಕ್ಕೆ ಹೋಗಿ ಆಕೆಯ
ಜೊತೆಯಲ್ಲಿ ಮೂರು ತಿಂಗಳು ಕಾಲ ಕಳೆದ. ಇಬ್ಬರ ಸ್ನೇಹ ಸಂಬಂಧ ಗಾಢವಾಗಿದ್ದರೂ ಈ ಯುವಕನಿಗೆ ವಾಪಸ್ ತನ್ನೂರಿಗೆ ಬರಲೇಬೇಕಿತ್ತು. ‘ನಾನು ತಾಯ್ನಾಡನ್ನು ಬಿಟ್ಟು ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲಸಲು ಸಿದ್ಧನಿರಲಿಲ್ಲ. ಹೀಗಾಗಿ ನಾನಿದನ್ನು ಆಕೆಯ ಬಳಿ ಹೇಳಿದೆ. ಆಕೆ ಕಣ್ಣೀರಿಟ್ಟಿದ್ದಳು.’ ಹೀಗೆ ಆ ಯುವಕ ಪ್ರೀತಿಯಿಂದ ಕಳೆದ ದಿನಗಳನ್ನು ಈಗ ನೆನಪಿಸಿಕೊಳ್ಳುತ್ತಾರೆ.
ಅಜ್ಜಿಯ ಸಂದೇಶ ಕೆಲ ತಿಂಗಳುಗಳನ್ನು ಆಸ್ಟ್ರೇಲಿಯಾದಲ್ಲಿ ಕಳೆದು ಅಲ್ಲಿಂದ ಭಾರತಕ್ಕೆ ವಾಪಸ್ಸಾದ ಮೇಲೆ, ಪರಿಸ್ಥಿತಿ ಏನೇನೋ ಆಗಿ ಇಬ್ಬರ ನಿರಂತರ ಸಂಪರ್ಕ ನಿಂತುಹೋಗುತ್ತದೆ.

ಹೀಗೆ ದಿನ ಕಳೆದ ನಂತರದ ದಿನಗಳಲ್ಲಿ ಈ ಯುವಕನ ಮದುವೆಯಾಗಿ ಮಕ್ಕಳೂ ಆಗಿದ್ದಾರೆ. ಆ ಯುವಕನಿಗೆ ಈಗ 82 ವರ್ಷ ವಯಸ್ಸು. ಮಕ್ಕಳು, ಮೊಮ್ಮಕ್ಕಳನ್ನು ಬೆಳೆಸುತ್ತಾ, ತನ್ನ ಪ್ರೇಮಿಯನ್ನು ಬಹುಮಟ್ಟಿಗೆ ಮರೆತುಹೋಗಿದ್ದ. ಇದೀಗ ಆಸ್ಟ್ರೇಲಿಯಾದ ಆ ಯುವತಿ, ಈತನಿಗೆ ಒಂದು ಸಂದೇಶ ಕಳಿಸಿದ್ದಾಳೆ.

‘ಹೇಗಿದ್ದೀಯಾ ನನ್ನ ಗೆಳೆಯಾ!’ ಎಂಬ ಆಕೆ ಸಂದೇಶ ಕಂಡು, ಈತನಿಗೆ ಪ್ರೀತಿ ಉಮ್ಮಳಿಸಿ ಬಂದಿದೆ! ಹೃದಯದಲ್ಲಿ ಪ್ರೀತಿಯ ಸೆಲೆ ಉಕ್ಕಿದೆ. ವ್ಯತ್ಯಾಸವೆಂದರೆ, ಈಗ ಆಕೆ ಅಜ್ಜಿ, ಆತ ಅಜ್ಜ! ಆದರೆ ಪ್ರೀತಿ ವಯಸ್ಸನ್ನು ಕೇಳುವುದಿಲ್ಲವಲ್ಲ! 50 ವರ್ಷಗಳಾದರೂ ಈ ಪ್ರೇಮಿಯ ನೆನಪಿನಲ್ಲಿಯೇ ಕನಸು ಕಾಣುತ್ತಿದ್ದ ಯುವತಿ ಇನ್ನೂ ಮದುವೆಯಾಗಿಲ್ಲ. ಅಂದು ಪತ್ರ ಬರೆದಿರುವ ಆಕೆ ತನ್ನ ಪ್ರೀತಿ ಅಂಕುರಿಸಿದ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾಳಂತೆ. ಇದನ್ನು ನೋಡಿ 82 ವರ್ಷದ ಈ ಅಜ್ಜ ಪುಳಕಿತನಾಗಿದ್ದಾನೆ.

ಸದ್ಯದಲ್ಲೇ ತಾನು ಭಾರತಕ್ಕೆ ಬರುವುದಾಕೆ ಆಕೆ ಹೇಳಿದ್ದಾಳೆ. ‘ನನ್ನ ಮೊದಲ ಪ್ರೀತಿಯ ಪತ್ರ ನೋಡಿ ನಾನು 21 ವರ್ಷದವನಂತೆ ಉತ್ಸಾಹ ಭರಿತನಾಗಿದ್ದೇನೆ. ಆಕೆಯನ್ನು ನೋಡಲು ಕಾತರನಾಗಿದ್ದೇನೆ’ ಎಂದು ಪತ್ರವನ್ನು ತೋರಿಸುತ್ತಾ ಅಂದಿನ ಅವರಿಬ್ಬರ
ಪ್ರೀತಿಯನನ್ನು ವಿವರಿಸ ತೊಡಗಿದ್ದಾನೆ. ಇದೇ ಅಲ್ಲವೆ, ನಿಜವಾದ ಪ್ರೀತಿ ಅಂದ್ರೆ!

ಮನಸು- ಮನಸು ಒಪ್ಪಿಕೊಂಡು, ಹೃದಯಗಳೆರಡು ಒಂದಾದ ಮೇಲೆ ದೂರವಿದ್ದರೂ ಸರಿ, ಹತ್ತಿರವಿದ್ದರೂ ಸರಿ, ಪ್ರೀತಿಸಿದ ಆ ಹೃದಯಗಳು ಒಬ್ಬರೊನ್ನೊಬ್ಬರು ಬಿಟ್ಟಿರಲೂ ಸಾಧ್ಯವಿಲ್ಲ. ನಿಜವಾದ ಪ್ರೀತಿಗೆ ಸಾವಿಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ. ಪ್ರತಿಯೊಂದು ಪ್ರೇಮಿಗಳ ಜೀವನದಲ್ಲಿ ಇಂತಹ ಗಾಢವಾದ ಪ್ರೀತಿ ಮೂಡಲಿ, ನಿಜವಾದ ಪ್ರೀತಿ ನಿಮ್ಮದಾಗಿರಲಿ.