ಲಹರಿ
ಗೀತಾ ಕುಂದಾಪುರ
ಹಿಂದೆ ಬಾಲವಾಡಿಗಳಿದ್ದವು. ಮಕ್ಕಳ ಮೊದಲ ಪಾಠಶಾಲೆ ಎನಿಸಿದ್ದ ಆ ಬಾಲವಾಡಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ಟೀಚರ್ ಗಳಿಗೆ ಎಷ್ಟು ತಾಳ್ಮೆ ಇದ್ದರೂ ಸಾಲದು. ತಂಟೆಕೋರ ಮಕ್ಕಳನ್ನು ಅವರು ಸುಧಾರಿಸುತ್ತಿದ್ದುದಾದರೂ ಹೇಗೆ!
ನನ್ನ ಪಕ್ಕದ ಮನೆಯಲ್ಲಿಇದ್ದ ಸುಶ್ಮಾ ಸಿಕ್ಕಿದವಳು ‘ಆಂಟೀ ಟೆನ್ಶನ್. ಮಗನನ್ನು ಕೌನ್ಸಲಿಂಗಿಗೆ ಕರೆದುಕೊಂಡು ಹೋಗಬೇಕು, ನನಗಂತೂ ತಲೆ ಕೆಟ್ಟ ಹಾಗಿದೆ’ ಎಂದು ಕಣ್ಣು ಕೆಂಪಗೆ ಮಾಡಿಕೊಂಡು ಏದುಸಿರು ಬಿಡುತ್ತಾ ಹೇಳಿದಳು.
‘ಏನಾಯಿತೇ? ಚೆನ್ನಾಗಿಯೇ ಇದ್ದ ಅಲ್ವಾ? ಈಗ ಏನಾಯಿತೇ?’ ಸುಶ್ಮಾಳ ಮಗ ಕಿಶನ್, ನಿಜಕ್ಕೂ ಕೃಷ್ಣ ಕನಯ್ಯನೇ, ಮುದ್ದು
ಮಗು, ತುಂಟ ಬೇರೆ, ಎರಡೂವರೆ ವರ್ಷ ಇರಬೇಕು. ಇತ್ತೀಚೆಗೆ ಅವನನ್ನು ಪ್ಲೇ ಸ್ಕೂಲಿಗೆ ಸೇರಿಸಿದ್ದಳು. ‘ಹಾಗಲ್ಲ ಆಂಟಿ, ಸ್ಕೂಲಿಗೆ ಸೇರಿಸಿ ಒಂದು ತಿಂಗಳಾಯಿತು ಇನ್ನೂ ಸ್ಕೂಲಿಗೆ ಅಡಜೆಸ್ಟ್ ಆಗಿಲ್ಲ’. ಗಾಬರಿಯಾಯಿತು ‘ಅಷ್ಟೇನಾ? ಅದೆಲ್ಲಾ ಸಾಮಾನ್ಯ ಕಣೇ, ಚಿಕ್ಕವನಲ್ವಾ’ ಎಂದೆ.
ಇದು ನಡೆದದ್ದು ಕರೋನಾ ವಿಧಿಸಿದ ದಿಗ್ಬಂಧನಕ್ಕಿಂತ ಮುಂಚೆ. ಈಗಷ್ಟೇ ತಾಯಿ ಹಾಲು ಬಿಟ್ಟು ಇನ್ನೂ ಸ್ವತಂತ್ರವಾಗಿ ಉಣ್ಣಲು ಕಲಿಯದ, ಓಡಲು ಬಂದರೂ ಸರಿಯಾಗಿ 10 ಹೆಜ್ಜೆ ಇಟ್ಟರೆ ಪಟ್ಟೆಂದು ಬೀಳುವ, ತೊದಲು ನುಡಿಯ ಪ್ಲೇ ಸ್ಕೂಲಿಗೆ
ಹೋಗುವ ಮಕ್ಕಳು ನಮ್ಮ ಅಕ್ಕಪಕ್ಕದ ಮನೆಯಲ್ಲಿದ್ದಾರೆ.
ಹೆಜ್ಜೆ ಊರಿದರೆ ಸಾಕು ಪೋಲಿಸ್ ವ್ಯಾನಿನಂತೆ ಪೊಂಯ್, ‘ಪೊಂಯ್’ ಸದ್ದು ಮಾಡಿ ಕೆಂಪು, ನೀಲಿ, ಹಸಿರು ಲೈಟ್ ಬರುವ ಶೂ, ಬೆನ್ನಿಗೆ ತಮಗಿಂತ ದೊಡ್ಡ ಬ್ಯಾಗು, ಅದರೊಳಗೆ ಒಂದೆರಡು ಪುಸ್ತಕ ಮತ್ತು ಬಣ್ಣದ ಪೆನ್ಸಿಲುಗಳು ಹಾಗೂ ಬಿಸ್ಕತ್ತು, ಹಣ್ಣಿನ ಚೂರುಗಳಿರುವ ತಿಂಡಿ ಡಬ್ಬಿ ಜೊತೆಗೆ ನೀರಿನ ಬಾಟಲ್ ಇಟ್ಟುಕೊಂಡು ಪ್ಲೇ ಸ್ಕೂಲಿಗೆ ಹೊರಡುತ್ತವೆ ಮಕ್ಕಳು. ಸದ್ಯಕ್ಕೆ ಯೂನಿಫಾರ್ಮ್ ಇಲ್ಲ.
ಸರಿಯಾಗಿ 9 ಗಂಟೆಗೆ ಮನೆಯ ಮುಂದೆ ನಿಲ್ಲುವ ಪ್ಲೇ ಸ್ಕೂಲಿನ ವ್ಯಾನ್ ಹತ್ತಲು ಮುಖ ಹಿಂಡಿದಂತೆ ಮಾಡುವ ಮಕ್ಕಳನ್ನು ‘ಗುಡ್ ಬಾಯ್’, ‘ಗುಡ್ ಗರ್ಲ್’, ‘ಗೀವ್ ಫ್ಲೈಯಿಂಗ್ ಕಿಸ್’ ಎನ್ನುತ್ತಾ ರಮಿಸಿ, ಪುಸಲಾಯಿಸಿ ವ್ಯಾನು ಹತ್ತಿಸಿ ಉಸ್ ಎನ್ನುವ ತಾಯಿ.
ಬಾಲವಾಡಿ ಅಂದರೇನು?
ಎಷ್ಟಾದರೂ ಪ್ಲೇ ಸ್ಕೂಲಿನ ಮಕ್ಕಳು ಸುಧಾರಿತ ಆವೃತ್ತಿ, ಈ ಮಕ್ಕಳನ್ನು ನಮ್ಮ ಕಾಲದ ‘ಬಾಲವಾಡಿ’ ಚುರುಕಾಗಿ ಹೇಳ ಬಹುದಾದ ‘ಬಾಲ್ವಾಡಿ’ ಯ ಮಕ್ಕಳಿಗೆ ಹೋಲಿಸಲಾದೀತೇ? ಹೋಲಿಕೆ ಯಾವತ್ತೂ ಸರಿಯಲ್ಲ. ಕಾಲನ ಚಕ್ರ ಉರುಳಿದಂತೆ ಬದಲಾವಣೆಗಳು ಸಾಮಾನ್ಯ, ಹಿಂದೆ ಇದ್ದಂತೆ ಈಗಿಲ್ಲ, ಇರಲೂ ಬಾರದು. ಈಗಿನ ಮಕ್ಕಳು ಬಾಲ್ವಾಡಿ ಅಂದರೇನು ಎಂದು ಕೇಳಿಯಾರು! ಆದರೂ…
ಮಂಗಗಳ ತಾಣ
ನಮ್ಮ ಸಮಯದ ಬಾಲ್ವಾಡಿ ಅಕ್ಷರಶಃ ಬಾಲವಿಲ್ಲದ ಮಂಗಗಳ ತಾಣ ಎನ್ನಬಹುದು. ಚಂಡಿ ಹಿಡಿದು ಸೂರು ಹಾರಿ ಹೋಗು ವಂತೆ ಕಿರುಚಾಡುವ ಮಕ್ಕಳು, ಸದಾ ಜಾರುತ್ತಿರುವ ಚಡ್ಡಿಯನ್ನು ಒಂದು ಕೈಯಿಂದ ಹಿಡಿದೆತ್ತಲು ಪ್ರಯತ್ನಿಸುವ ಮಕ್ಕಳು, ಧಾರಾಕಾರವಾಗಿ ಮೂಗಿನಿಂದ ಸುರಿಯುವ ಸಿಂಬಳ, ಅತ್ತೂ ಅತ್ತೂ ಸುರಿಯುತ್ತಿದ್ದ ಸಿಂಬಳವನ್ನೇ ಚೂರು ತಿಂದು ಮೂಲೆ ಯಲ್ಲಿ ನಿದ್ದೆ ಹೋಗುವ ಮಕ್ಕಳು. ಬೆಂಚಿನಿಂದ ಬೆಂಚಿಗೆ ಹಾರುತ್ತಿರುವ ಮಕ್ಕಳು.
ಮಕ್ಕಳು ಶಾಲೆ ಎಂಬ ಸಂಸ್ಕೃತಿಯ ಮೊದಲ ಮೆಟ್ಟಿಲಾದ ಬಾಲವಾಡಿಗೆ ಹೊಂದಿಕೊಳ್ಳುವಷ್ಟರಲ್ಲಿ ಆರು ತಿಂಗಳು ಕಳೆದಿರುತ್ತದೆ. ಮತ್ತೆ ಮೂರು ತಿಂಗಳಲ್ಲಿ ಕಾಗಕ್ಕ, ಗುಬ್ಬಕ್ಕನ ಕಥೆ, ಕಾಗೆ ಹೂಜಿಗೆ ಕಲ್ಲೆಸೆದು ನೀರು ಕುಡಿದ ಕಥೆ, ‘ಹತ್ತು, ಹತ್ತು ಇಪ್ಪತ್ತು ತೋಟಕೆ
ಹೋದನು ಸಂಪತ್ತು’ ಎನ್ನುವ ಹಾಡನ್ನು ಕಲಿಯುವುದರಲ್ಲಿ ಮಕ್ಕಳ ಬಾಲವಾಡಿ ದಿನಗಳು ಮುಗಿದಿರುತ್ತದೆ. ಮಕ್ಕಳ ವಯಸ್ಸು ಐದಾರು ದಾಟಿರುತ್ತದೆ. ಮುಂದೆ ಒಂದನೆಯ ಕ್ಲಾಸು ಸೇರುವ ದಿನಗಳು. ಇಷ್ಟೆಲ್ಲಾ ನಡೆದರೂ ಬಾಲ್ವಾಡಿಯ ಟೀಚರನ್ನು ಮಕ್ಕಳು ಎಷ್ಟು ದೊಡ್ಡವರಾದರೂ ಮರೆಯುವುದುಂಟೇ? ಬಾಲ್ವಾಡಿಗೆ ಇಂತಿಷ್ಟೇ ವಯಸ್ಸಿಗೇ ಮಕ್ಕಳನ್ನು ಸೇರಿಸಬೇಕು ಎಂಬ ನಿಯಮವಿರಲಿಲ್ಲ, ಆದರೂ ಸಾಮನ್ಯವಾಗಿ ನಾಲ್ಕು ವಯಸ್ಸಿನ ನಂತರವೇ ಮಕ್ಕಳನ್ನು ಸೇರಿಸುತ್ತಿದ್ದರು.
ಮಕ್ಕಳು ಸಾಕಷ್ಟು ದೊಡ್ಡವರಾಗುತ್ತಾರೆ, ಇಷ್ಟು ದಿನ ಮನೆ, ಅಂಗಳ, ಜಗಲಿ ತುಂಬಾ ಓಡಾಡಿ, ಮಾವಿನಮರ, ಗೇರುಮರ,
ಹುಣಸೆಮರ ಹತ್ತಿ ಇಳಿದು ಮಕ್ಕಳಿಗೆ ಬಾಲವಾಡಿ ಒಂದು ಜೈಲಾಗಿ ತೋರುವುದರಲ್ಲಿ ಆಶ್ಚರ್ಯವಿಲ್ಲ. ಕೆಲವು ಮಕ್ಕಳಂತೂ
ಒಂದೆರಡು ಬಾರಿ ಆಗಲೇ ಕೈ ಕಾಲನ್ನು ಮುರಿದುಕೊಂಡು, ಬ್ಯಾಂಡೇಜ್ ಹಾಕಿದ ಅನುಭವ ಇರುವವರು!
ಇನ್ನು ಬಾಲ್ವಾಡಿಗೆ ಹೋಗುವಾಗ ನಡೆಯುವ ಗೌಜು… ಮಕ್ಕಳು ಬಸ್ಸೋ, ವ್ಯಾನೋ, ಆಟೋದಲ್ಲಿ ಶಾಲೆಗೆ ಹೋಗುವ ದಿನ ಗಳಲ್ಲ ಅವು, ಹೆಚ್ಚೆಂದರೆ ಅಪರೂಪಕ್ಕೆ ಮನೆಯ ಹಿರಿಯರು ಸೈಕಲ್ಲಿನಲ್ಲಿ ಶಾಲೆಗೆ ಬಿಡುವುದುಂಟು. ಮಕ್ಕಳು ನಡೆದು ಕೊಂಡೇ ಅಥವಾ ನಡೆಸಿಕೊಂಡೇ ಬರುವ ಯಾತ್ರೆಯದು.
4-5 ವರ್ಷದ ರಚ್ಚೆ ಹಿಡಿದ ಮಕ್ಕಳನ್ನು ಎತ್ತಿಕೊಂಡರೆ ಹಾರಿ, ಉರಳಾಡುವ, ಕೈ ಹಿಡಿದು ನಡೆಸಿಕೊಂಡು ಹೊರಟರೆ ಪಟ್ಟು
ಹಿಡಿದು ಅಲ್ಲೇ ಕುಳಿತು ಬಿಡುವ ಮಕ್ಕಳನ್ನು ಬಾಲ್ವಾಡಿಯ ಮೆಟ್ಟಿಲು ಹತ್ತಿಸಬೇಕಾದರೆ ಪಟ್ಟ ಪಾಡು ಅನುಭವಿಸಿದವರಿಗೆ
ಮಾತ್ರ ಗೊತ್ತು.
ತಿರುಗಿ ಬಿದ್ದ ಹುಡುಗ
ನಮ್ಮ ಪಕ್ಕದಲ್ಲಿ ಮನೆಯಲ್ಲಿ ಒಬ್ಬ ಹುಡುಗನಿದ್ದ. ಶೇಖರ ಅವನ ಹೆಸರಿರಬೇಕು. ಅವನನ್ನು ಬಾಲ್ವಾಡಿಗೆ ಬಿಡುವ ಜವಾಬ್ದಾರಿ ಅವರ ಮನೆಯ ಕೆಲಸದ ಹುಡುಗಿಯದ್ದು. ಏನೆಂದರೂ ಬಾಲ್ವಡಿಗೆ ಹೋಗಲು ಕೇಳದ ಹುಡುಗ ನೆಲದ ಮೇಲೆ ಎದ್ದು, ಬಿದ್ದು ಹೊರಳಾಡುವ ಅವನನ್ನು ದರದರನೆ ಎಳೆದುಕೊಂಡು ಹೋಗುತ್ತಿದ್ದಳು.
ಕೆಲವೊಮ್ಮೆ ಸಿಟ್ಟಿನಲ್ಲಿ ಹುಡುಗನಿಗೆ ಎಲ್ಲಿಂದ ಶಕ್ತಿ ಬರುತ್ತಿತ್ತೋ ಗೊತ್ತಿಲ್ಲ, ಆ ಕೆಲಸದ ಹುಡುಗಿಯನ್ನೇ ದರದರನೆ ಎಳೆದು ಕೊಂಡು ಮತ್ತೊಂದು ದಿಕ್ಕಿನಲ್ಲಿ ಓಡುತ್ತಿದ್ದ! ಈ ಹಗ್ಗ ಜಗ್ಗಾಟದಲ್ಲಿ ಕೆಲಸದ ಹುಡುಗಿಗೆ ಗೆಲವು ಸಿಕ್ಕರೆ ಹುಡುಗ ಬಾಲ್ವಾಡಿ ಸೇರುತ್ತಿದ್ದ, ಇಲ್ಲದಿದ್ದರೆ ವಾಪಸು ಮನೆಗೆ. ಪಾಪ ಅವನನ್ನು ಹೇಗೆ ಸಂಭಾಳಿಸುತ್ತಿದ್ದರೋ ಆ ಟೀಚರ್, ಗೊತ್ತಿಲ್ಲ.
ಬಾಲ್ವಾಡಿ ಕೆಲವೊಮ್ಮೆ ತಂಟೆಕೋರರ ತಾಣದಂತಾಗುವುದೂ ಇದೆ. ಸಿಟ್ಟಿನಲ್ಲಿ ಗೋಡೆ, ಬಾಗಿಲಿಗೆ ತಮ್ಮ ತಲೆಯನ್ನೇ ಗುದ್ದಿ,
ಗುದ್ದಿ ಗಾಯ ಮಾಡಿಕೊಳ್ಳುತ್ತಿರುವ ಹುಡುಗಿ ಒಂದು ಕಡೆಯಾದರೆ, ಬ್ಯಾಗಿನಲ್ಲಿದ್ದ ಸ್ಲೇಟಿನಿಂದ ಪಕ್ಕದಲ್ಲಿರುವ ಮಗುವಿನ ತಲೆಗೆ ಕುಟ್ಟಿ ಪುಡಿ ಮಾಡುತ್ತಿರುವ ಹುಡುಗ, ಪೆಟ್ಟು ತಿಂದು ತಲೆ, ಮೂಗಿನಿಂದ ರಕ್ತ ಒಸರುತ್ತಿರುವ ಮಗು ಇನ್ನೊಂದು ಕಡೆ.
ನೆಲದ ಮೇಲೆ ಬಿದ್ದು ಅಳುತ್ತಾ, ಉರುಳಾಡಿ, ಉರುಳು ಸೇವೆ ಮಾಡುವ ಹುಡುಗಿ ಮೂಲೆಯಲ್ಲಿ. ಪಕ್ಕದ ಮಗುವಿನ ಮುಖ, ಕೈ ಚಿವುಟುತ್ತಿರುವ ಮತ್ತೊಬ್ಬ ಹುಡುಗ. ಹೀಗೆ ಒಬ್ಬಬ್ಬರದ್ದು ಒಂದೊಂದು ವೆರೈಟಿ. ಇಂತಹ ಸನ್ನಿವೇಶದಲ್ಲಿ ಸಾಧಾರಣ ಗುಂಡಿಗೆ ಯವರು ಬಾಲ್ವಾಡಿಯ ಒಳ ಹೊಕ್ಕರೆ, ಸಣ್ಣಗೆ ಹೆದರಿ ನಡುಗುವುದು ಸುಳ್ಳಲ್ಲ. ಇಂತಹ ಮಕ್ಕಳನ್ನು ಟೀಚರ್ ಸಂಬಾಳಿಸುತ್ತಿದ್ದು ದಾದರೂ ಹೇಗೆ! ಅವರ ತಾಳ್ಮೆಗೆ ಯಾವ ಬಹುಮಾನ ಕೊಟ್ಟರೂ ಕಡಿಮೆಯೇ.
ಮಕ್ಕಳನ್ನು ಬಾಲ್ವಾಡಿಗೆ ಸೇರಿಸುವ ಉದ್ದೇಶವೂ ಮನೆಯಲ್ಲಿ ಮಕ್ಕಳ ರಗಳೆ ತಪ್ಪಿದರೆ ಸಾಕು ಎಂದೇ ಹೊರತು ಮತ್ತೇನಲ್ಲವಲ್ಲ!
ಟೀಚರ್ ನೀಡಿದ ಚಾಕಲೇಟು ಕಮಲಾ ಟೀಚರ್ ಎಂಬುವವರು ನನ್ನ ತಮ್ಮನ ಬಾಲ್ವಾಡಿಯ ಟೀಚರ್. ಎಂಥಾ ವಿಪರೀತ ಪರಿಸ್ಥಿತಿಯಲ್ಲೂ ಅವರಿಗೆ ಸಿಟ್ಟು ಬಂದದ್ದನ್ನು ಕಂಡವರಿಲ್ಲ. ಮುಖದಲ್ಲಿ ಸದಾ ಮುಗುಳ್ನಗು, ಕೈಯಲ್ಲಿ ಮಕ್ಕಳಿಗೆ ಹೆದರಿಸ ಲೊಂದು ಸ್ಕೇಲು. ಆದರದು ನೆಪಕ್ಕೆ ಮಾತ್ರ. ಯಾವತ್ತೂ ಮಕ್ಕಳ ಮೇಲೆ ಪ್ರಯೋಗಿಸಿದವರಲ್ಲ.
ಎಷ್ಟೋ ಸಲ ಮಕ್ಕಳೇ ಅವರ ಕೈಯಲ್ಲಿರುವ ಸ್ಕೇಲನ್ನು ಕಿತ್ತುಕೊಂಡು ತುಂಡು ಮಾಡಿದ್ದೂ ಇದೆ! ಆಗಿನ್ನೂ ಅದು ಉಪ್ಪಿಟ್ಟಿನ ಯುಗ ಅಲ್ಲ, ಅಂದರೆ ಶಾಲೆಯಲ್ಲಿ ಉಪ್ಪಿಟ್ಟು ಕೊಡುವುದಿನ್ನೂ ಶುರು ಮಾಡಿರಲಿಲ್ಲ. ಟೀಚರೇ ದಿನಾ ಹಸಿರು ಕವರಿನ ಐದು ಪೈಸೆಯ ಪ್ಯಾರಿಸ್ ಚಾಕಲೇಟು ತಂದು ಮಕ್ಕಳಿಗೆ ಕೊಡುತ್ತಿದ್ದರು. ಚಾಕಲೇಟು ಕೊಡಲು ಹೊರಟಾಗಲೂ ಟೀಚರ್ ಕೈಯಲ್ಲಿರುವ ಚಾಕಲೇಟಿನ ಪ್ಯಾಕೆಟನ್ನೇ ಕಿತ್ತುಕೊಳ್ಳುವ ಮಕ್ಕಳೂ ಇದ್ದರು.
ಇಂತಹ ತಂಟೆಕೋರ ಮಕ್ಕಳನ್ನು ಶಾಂತ ರೂಪದ ಟೀಚರ್ ಹೇಗೆ ಸುಧಾರಿಸುತ್ತಿದ್ದರೋ ಗೊತ್ತಿಲ್ಲ. ‘ತಾಳಿದವನು ಬಾಳಿಯಾನು’ ಎನ್ನುವ ಗಾದೆಯೇ ಇದೆಯಲ್ಲ, ಹಾಗೆಯೇ ತಮ್ಮ 30 ವರ್ಷದ ಬಾಲ್ವಾಡಿ ಸರ್ವಿಸನ್ನು ಯಶಸ್ವಿಯಾಗಿ ಮುಗಿಸಿ ರಿಟೈರ್ ಆದರು. ಇಂತಹ ಎಷ್ಟು ಟೀಚರುಗಳು ಇದ್ದಿದ್ದರೋ.
ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ಗಾದೆ ಇರಬಹುದು. ಆದರೆ ಬಾಲ್ವಾಡಿಯಲ್ಲಿ ಮಕ್ಕಳು ಹೇಗಿರುತ್ತಾರೋ ಅದೇ ಗುಣ ಮುಂದೆಯೂ ಇರುತ್ತದೆ ಎಂದರೆ ತಪ್ಪು. ಶುದ್ಧ ಕಪಿಗಳಂತೆ ತಂಟೆ ಮಾಡಿದ ತುಂಟರು ಸಾಧು ಸ್ವಭಾವದವರಾಗಿ ಡಾಕ್ಟರ್, ಟೀಚರ್ ಆದರು. ಬಾಲವಾಡಿ ಮುಗಿಸಿ ಐದೂವರೆ-ಆರು ವರ್ಷಕ್ಕೆ ಒಂದನೆಯ ಕ್ಲಾಸಿಗೆ ಸೇರಿ, 5ನೆಯ ತರಗತಿಯಿಂದ ಇಂಗ್ಲೀಷ್ ಕಲಿಯಲು ಶುರು ಮಾಡಿದ ಕೆಲವರು ಈಗ ಅಮೆರಿಕ, ಕೆನಡಾ, ಇಂಗ್ಲೆಂಡ್ ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಹಾಗಾದರೆ ಮಕ್ಕಳ ಮೇಲೆ ‘ಎಲ್ ಕೇಜಿ’, ‘ಯೂ ಕೇಜೆ’, ಇಂಗ್ಲೀಷ್ ಮೀಡಿಯಂಗಳನ್ನು ನಾವು ಒತ್ತಾಯವಾಗಿ ಹೇರುತ್ತಿದ್ದೇವೆಯೇ? ಈ ಒಂದು ವಿಚಾರ ಯೋಚಿಸಿದರೆ ತುಸು ಗೊಂದಲವೇ ಸರಿ. ನಾನೂ ಕೇಜಿ ಸಂಸ್ಕೃತಿಗೆ ಮರುಳಾದವಳೇ. ಮಗನನ್ನು ‘ಯೂ ಕೇಜೆ’ಗೆ ಸೇರಿಸಿದ್ದೆ, ಅದಕ್ಕೂ ಮುಂಚೆ ‘ಎಲ್ ಕೇಜಿ’ಯ ಬದಲು ಬಾಲವಾಡಿಗೆ ಕಳುಹಿಸಿದ್ದೆ. ಮಕ್ಕಳು ಬರುತ್ತಾ ಸ್ವಾದು ಸ್ವಭಾವ ದವರಾದರೋ ಇಲ್ಲ ಚಿಕ್ಕ ಪ್ರಾಯದಲ್ಲೇ ಸ್ಕೂಲಿಗೆ ಹೋಗಲು ತೊಡಗಿದ್ದರಿಂದಲೋ ಸ್ವಲ್ಪ ದಿನ ಅತ್ತು ಕರೆದು ಹೊಸ ವಾತಾ ವರಣಕ್ಕೆ ಅಡ್ಜೆಸ್ಟ್ ಆಗುತ್ತಿದ್ದರು, ಹಿಂದಿನ ತರಹದ ಭಯಾನಕ ವಾತಾವರಣವನ್ನು ಸೃಷ್ಟಿಸುತ್ತಿರಲಿಲ್ಲ.
ಸುಧಾರಿತ ಮಕ್ಕಳ ಬಾಲವಾಡಿಯಲ್ಲಿ ಭಗವದ್ಗೀತೆಯ ಶ್ಲೋಕ, ಹಾಡು, ಡಾನ್ಸುಗಳನ್ನು ಹೇಳಿಕೊಡುತ್ತಿದ್ದರು. ಈಗ ಗ್ರಾಮೀಣ ಪ್ರದೇಶದಲ್ಲಿ ಬಾಲವಾಡಿಯ ಬದಲು ‘ಅಂಗನವಾಡಿ’ ಇದೆ, ಮಕ್ಕಳೀಗ ಸುಧಾರಿಸಿದ್ದಾರೆ. ಮೊದಲಿನ ಗೌಜಿಲ್ಲ. ಮಕ್ಕಳಿಗೆ ಉಪ್ಪಿಟ್ಟು ತಯಾರಿಸಿ ಕೊಡುವುದು ಸಹ ಟೀಚರ್ ಕೆಲಸ ಎನಿಸಿದೆ. ಕರೋನಾ ಯುಗದಲ್ಲಿ ಅಂಗನವಾಡಿಗೆ, ಪ್ಲೇ ಸ್ಕೂಲಿಗೆ, ಶಾಲೆಗೆ ಹೋಗುವ ಮಕ್ಕಳು ಮನೆಯಲ್ಲೇ ಇದ್ದು ಶಾಲೆ ಯಾವಾಗ ಶುರುವಾಗುತ್ತದಪ್ಪ, ಈ ಗೃಹ ಬಂಧನ ಸಾಕಾಯಿತು ಎಂದು ಆಕಾಶ ನೋಡುತ್ತಿದ್ದಾರೆ ತಾಯಂದಿರು.