ಎಲ್.ಪಿ.ಕುಲಕರ್ಣಿ, ಬಾದಾಮಿ
ಜಿಮ್ನಾಸ್ಟಿಕ್ಸ್ ಕೌಶಲವನ್ನು ಕರಗತ ಮಾಡಿಕೊಂಡಿರುವ 96 ವರ್ಷ ವಯಸ್ಸಿನ ಈ ಕ್ರೀಡಾಪಟು ಈ ಕಾಲಮಾನದ ಒಂದು ವಿಸ್ಮಯ. ಅವಳ ಜೀವನವು ಎಲ್ಲರಿಗೂ ಸ್ಫೂರ್ತಿ ತುಂಬಬಲ್ಲದು.
ಇತ್ತೀಚೆಗೆ ಟಿವಿಯಲ್ಲಿ ಒಂದು ಜಾಹಿರಾರು ಬರುತ್ತಿದೆ. ಬಾಲಿವುಡ್ ನಟಿಯೊ ಬ್ಬಳು ಮನೆಯ ಡ್ರಾಯಿಂಗ್ ರೂಮ್‌ಗೆ ಬರುತ್ತಿರುತ್ತಾಳೆ. ಅವಳ ಸಹೋದರಿ, ಡ್ರಾಯಿಂಗ್ ರೂಮ್‌ನ್ನು ಒಪ್ಪವಾಗಿಡಲು, ಅಲ್ಲಿರುವ ಸೋಫಾವನ್ನು ಸರಿಸಲು ಹೋಗುತ್ತಾಳೆ.
ತಕ್ಷಣ ಬೆನ್ನು ನೋವು ಎಂದು ಹಿಂದೆ ಸರಿಯುತ್ತಾಳೆ. ಆಗ ನಟಿಯು, ತಾನೇ ಸೋಫಾವನ್ನು ಆ ಕಡೆ ಸರಿಸುತ್ತಾಳೆ. ಮತ್ತು ಒಂದು ಹೇಳಿಕೆ ನೀಡುತ್ತಾಳೆ! ಮೂವತ್ತು ವರ್ಷದ ನಂತರ ಮಹಿಳೆಯರ ಮೂಳೆಗಳಲ್ಲಿ ಕ್ಯಾಲ್ಸಿಯುನ ಪ್ರಮಾಣ ಕಡಿಮೆಯಾಗಿ, ಮೂಳೆಗಳ ಸಾಂದ್ರತೆ ಕಡಿಮೆಯಾಗಿ, ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ತಮ್ಮ ಕಂಪನಿಯ ಪುಡಿಯನ್ನು ಹಾಲಿನಲ್ಲಿ ಬೆರೆಸಿ ತೆಗೆದುಕೊಳ್ಳಿ. ಇಲ್ಲಿಗೆ ಜಾಹಿರಾತು ಮುಗಿಯಿತು.
ಕೇವಲ ಮೂವತ್ತು ವರ್ಷಕ್ಕೆ ಮಹಿಳೆಯರಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ, ಬೆನ್ನು ನೋವು ಬರಬಹುದು ಎಂದು ಸೂಚಿಸುವ ಈ ಜಾಹಿರಾತಿನ ಇಂದಿನ ದಿನಮಾನಗಳಲ್ಲಿ, ತೊಂಭತ್ತಾರು ವರ್ಷ ತುಂಬಿದ ಮಹಿಳೆಯೊಬ್ಬಳು ದೇಹವನ್ನು ಕಟುಮಸ್ತಾಗಿಟ್ಟುಕೊಂಡು ಜಿಮ್ನಾಸ್ಟಿಕ್ಸ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದು ಗಿನ್ನೀಸ್ ರಿಕಾರ್ಡ್ ಮಾಡುತ್ತಾಳೆಂದರೆ ಅದು ಸಾಮಾನ್ಯ ಮಾತಲ್ಲ. ಅವಳು ಬಹಳ ಗಟ್ಟಿಗಿತ್ತಿ. ಆ ಚಿರಯೌವ್ವನೆಯೇ 96 ವರ್ಷದ ಜೊಹನ್ನಾ ಖಾಸ್. ಇವಳು ಜರ್ಮನಿಯ ವಳು.
ಯುದ್ಧದ ಕಾರ್ಮೋಡ
1925ರಲ್ಲಿ ಪೂರ್ವ ಜರ್ಮನಿಯ ಸ್ಯಾಕ್ಸೋನಿ ಎಂಬಲ್ಲಿ ಜನಿಸಿದ ಜೊಹನ್ನಾ ಖಾಸ್‌ಗೆ ಚಿಕ್ಕಂದಿನಿಂದಲೂ ಕ್ರೀಡೆಗಳ ಮೇಲೆ ಆಸಕ್ತಿ. ಅದೂ, ವಿಶೇಷವಾಗಿ ಜಿಮ್ನಾಸ್ಟಿಕ್ಸ್ ಮೇಲೆ. ಜರ್ಮನಿ ಎಂದರೆ ಥಟ್ಟನೆ ನೆನಪಾಗುವುದು ಯುದ್ಧ ಪೀಪಾಸು, ಸರ್ವಾಡಳಿತಗಾರ ಅಡಾಲ್ಫ್ ಹಿಟ್ಲರ್. ಅದು ಎರಡನೇ ಮಹಾಯುದ್ಧದ ಕಾಲ. ಶತ್ರುಪಡೆಗಳನ್ನು ಹತ್ತಿಕ್ಕಲು ದೇಶದ
ಪ್ರತಿಯೊಬ್ಬ ನಾಗರಿಕನೂ ದೇಶ ರಕ್ಷಣೆಗಾಗಿ ಸೈನ್ಯ ಸೇರಬೇಕು ಎಂದು ಹೇಳಿದ ಹಿಟ್ಲರ್.
ದೇಶದಲ್ಲಿ ನಡೆಯುತ್ತಿದ್ದ ಕಲೋತ್ಸವ, ಕ್ರೀಡಾಕೂಟಗಳು ಎಲ್ಲವಕ್ಕೂ ಆ ವರ್ಷ ಬ್ರೇಕ್ ಬಿದ್ದಿತು. ಜೊಹನ್ನಾ ಕೂಡ ಸೇನೆ ಸೇರುವ ತವಕದಲ್ಲಿದ್ದಳು. ಸೇನೆಗೆ ಕರೆ ಬಂದೇಬಿಟ್ಟಿತು. ಕೆಲವು ವರ್ಷ ಸೇನೆಯಲ್ಲೂ ಸೇವೆ ಸಲ್ಲಿಸಿ ಹೊರಬಂದಳು ಜೊಹನ್ನಾ. ವಿಶ್ವದ ಎರಡನೇ ಮಹಾಯುದ್ಧ ಮುಕ್ತಾಯವಾದ ಮರು ವರ್ಷ, ಪೂರ್ವ ಜರ್ಮನಿಯಲ್ಲಿ ಅದೇಕೋ ಗೊತ್ತಿಲ್ಲ ಒಮ್ಮಿದೊಂಮ್ಮೆಲೆ ಜಿಮ್ನಾಸ್ಟಿಕ್ಸ್ ಕ್ರೀಡೆಯನ್ನು ಬ್ಯಾನ್ ಮಾಡಲಾಯಿತು. ಈ ಘಟನೆ ಜೊಹನ್ನಾಳಿಗೆ ಬಹಳ ಬೇಸರ ತಂದಿತು.
ಜೊಹನ್ನಾ, ಅನಿವಾರ್ಯವಾಗಿ ಜಿಮ್ನಾಸ್ಟಿಕ್ಸ್ ಬದಲಿಗೆ ಹ್ಯಾಂಡ್ ಬಾಲ್ ಕ್ರೀಡೆಗೆ ಸೇರಿಕೊಂಡಳು. ಅಲ್ಲಿಯೂ ಸಹ ಮಿಂಚಿದಳು. ಈ ನಡುವೆ ಜೊಹನ್ನಾಳ ವಿವಾಹವಾಗಿ ಎರಡು ಮಕ್ಕಳ ತಾಯಿಯಾದಳು. ಗಂಡ, ಮಕ್ಕಳು ಎಂಬ ಸಂಸಾರದ ಈ ಜಂಜಾಟ ದಲ್ಲೂ ಕ್ರೀಡೆಯ ಮೇಲಿನ ಆಸಕ್ತಿ ಕಡಿಮೆಯಾಗಿದ್ದಿಲ್ಲ. ಹೊಸ ಪೀಳಿಗೆಗೆ ಹ್ಯಾಂಡ್ ಬಾಲ್ ಹಾಗೂ ಜಿಮ್ನಾಸ್ಟಿಕ್ಸ್ ಎರಡೂ ಕ್ರೀಡೆಗಳನ್ನು ಕಲಿಸಿಕೊಡುವ ತರಬೇತು ದಾರಳಾಗಿ ನೇಮಕಗೊಂಡಳು.
ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಗೆದ್ದು ಪದಕಗಳನ್ನು ಸಹ ಪಡೆದಳು. 1982 ರ ಸಮಯ, ಜೊಹನ್ನಾಳಿಗೆ ಆಗ 57 ವರ್ಷ. ಜರ್ಮನಿಯಲ್ಲಿ ಜಿಮ್ನಾಸ್ಟಿಕ್ಸ್ ಗೆ ಅವಕಾಶಕೊಡಲಾಗಿತ್ತು. ಹುರುಪಿನಿಂದ ಜೊಹನ್ನಾ ಜಿಮ್ನಾಸ್ಟಿಕ್ಸ್ ಸ್ಪರ್ಧೆ ಗಳಲ್ಲಿ ಪಾಲ್ಗೊಳ್ಳಲು ಶುರುಮಾಡಿದಳು. ಇದೇ ಸಂದರ್ಭದಲ್ಲಿ ಜೊಹನ್ನಾಳಿಗೆ ಇಬ್ಬರು ಆತ್ಮೀಯ ಗೆಳೆಯರು ಜೊತೆಯಾದರು. ಅವರಿಬ್ಬರೂ
ಕೂಡ ಜಿಮ್ನಾಸ್ಟಿಕ್ಸ್ ಪಟುಗಳೆ. ಈ ಮೂವರೂ ಜಿಮ್ನಾಸ್ಟಿಕ್ಸ್ ನ ವಿಶೇಷ ತರಬೇತಿ ಪಡೆದು, ಹಿರಿಯರಿಗಾಗಿ ನಡೆಯುವ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಹಲವಾರು ಮೆಡಲ್ ಗಳನ್ನು ಗೆದ್ದುಕೊಂಡರು.
ಅವರಲ್ಲಿ ಜೊಹನ್ನಾ ಒಬ್ಬಳೇ 11 ಪದಕಗಳನ್ನು ಗೆದ್ದಳು. ನೆನಪಿರಲಿ, ಈ ಮೂವರೂ ಜಿಮ್ನಾಸ್ಟಿಕ್ಸ್ ಪಟುಗಳಲ್ಲಿ ಒಬ್ಬರು ಜೊಹನ್ನಾಳಿಗಿಂತ ವಯಸ್ಸಿನಲ್ಲಿ ಐದು (62ವರ್ಷ) ವರ್ಷ ಹಿರಿಯರಾಗಿದ್ದರೆ, ಇನ್ನೊಬ್ಬ ಜೊಹನ್ನಾಳಿಗಿಂತ ನಾಲ್ಕು (53 ವರ್ಷ) ವರ್ಷ ಕಿರಿಯರಾಗಿದ್ದರು.
ವಿಶ್ವ ದಾಖಲೆ
2012ರ ಏಪ್ರಿಲ್. ರೋಮ್‌ನಲ್ಲಿ ನಡೆದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಅತಿಹೆಚ್ಚು ಕೌಶಲ ತೋರಿದ ಜೊಹನ್ನಾ ಖಾಸ್, ಗಿನ್ನೀಸ್ ಬುಕ್ ಆಫ್ ವಲ್ಡರ್ ರಿಕಾರ್ಡ್‌ನಲ್ಲಿ ‘ಅತಿ ಹಿರಿಯ ವಯಸ್ಸಿನ ಜಿಮ್ನಾಸ್ಟಿಕ್ಸ್ ಪಟು’ ಎಂದು ದಾಖಲೆ ಮಾಡಿದರು. ಅಲ್ಲದೇ ‘ಇಂಟರ್ನ್ಯಾಷನಲ್ ಜಿಮ್ನಾಸ್ಟಿಕ್ಸ್ ಹಾಲ್ ಆಫ್ ಫೇಮ್’ ಗೌರವಕ್ಕೂ ಪಾತ್ರರಾದರು. ಆಗ ಅವಳ ವಯಸ್ಸು ಬರೋಬ್ಬರಿ 87 ವರ್ಷಗಳು. ನಂತರ ತನ್ನ 91 ನೇ ವಯಸ್ಸಿನಲ್ಲಿ ಬರ್ಲೀನ್ ನಲ್ಲಿ ನಡೆದ ಇನ್ನೊಂದು ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ, ಈ ಚಿರ ಯೌವ್ವನೆ 1.2 ಮೀ ಎತ್ತರದ ಎರಡು ಕಬ್ಬಿಣದ ಕಂಬಗಳ ಮೇಲೆ ಕೇವಲ ಎರಡು ಕೈಗಳಿಂದ ಬ್ಯಾಲನ್ಸ್ ಕಾಪಾಡಿಕೊಳ್ಳುತ್ತ ಬಹುವಿಧವಾದ ಕಸರತ್ತುಗಳನ್ನು ಮಾಡಿ ನೋಡುಗರಲ್ಲಿ ಸೂಜಿಗವನ್ನುಂಟು ಮಾಡಿಬಿಟ್ಟಳು.
My face is old but my heart is young ಎಂದು ಹೇಳುವ 96 ವರ್ಷದ ಜೊಹನ್ನಾ, ತಾನು ಬಹಳವೇ ಇಷ್ಟಪಡುವ ಜಿಮ್ನಾಸ್ಟಿಕ್ಸ್ ಬಗ್ಗೆ – May be the day I stop doing gymnastics is the day I die ಎಂದು ತಮ್ಮ ಅಂತರಾಳದ ಭಾವನೆಯನ್ನು ವ್ಯಕ್ತಪಡಿಸು ತ್ತಾರೆ. ಸದಾ ನಗು ಮುಖದ ಈ ಅಜ್ಜಿಯನ್ನು ಕಂಡರೆ ಏನೋ ಒಂದು ದಿವ್ಯ ಶಕ್ತಿ ಇವರಲ್ಲಿ ಅಡಗಿದೆ ಎಂದನಿಸುತ್ತದೆ.