Saturday, 14th December 2024

ಶ್ರೀರಾಮ ನವಮಿಯೂ, ಕವಿಯ ದರ್ಶನವೂ

ಅಭಿಮತ

ಗೊರೂರು ಶಿವೇಶ್

ಗೋಪಾಲಕೃಷ್ಣ ಅಡಿಗರು ಕನ್ನಡ ನವ್ಯ ಸಾಹಿತ್ಯದ ಪಿತಾಮಹ ಎಂದೇ ಹೆಸರಾದವರು. ಅವರ ಶ್ರೀರಾಮನವಮಿಯ ದಿವಸ ಅವರ ‘ಶೃಂಗ’ ಕವಿತೆಗಳಲ್ಲಿ ಒಂದೆಂದು ಹೆಸರಾಗಿದೆ. ರಾಮ ನವಮಿಯ ಸಹಜ ಸಂಭ್ರಮದ ಆಚರಣೆಯಿಂದ ಕವಿತೆ ಪ್ರಾರಂಭ ವಾಗುತ್ತದೆ.

ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ/ಪಾನಕ, ಪನಿವಾರ, ಕೋಸಂಬರಿ/ ಕರಬೂಜ ಸಿzಟುಗಳ ಹೋಳು, ಸೀಕರಣೆ/ ಇಷ್ಟೆಲ್ಲ ಸಡಗರದ ನಡುವೆ ರಾಮನ ಬರುವಿಕೆಗಾಗಿ ಕಾದು ಕುಳಿತ ಮಾನವ ಪ್ರಜ್ಞೆಯ ಕುರಿತಾಗಿ ವ್ಯಕ್ತ ಮಧ್ಯಕ್ಕೆ ಬಂದುರಿವ ಶಬರಿ’ ಎಂಬ ಪ್ರತಿಮೆಯಿಂದ ಕವಿತೆಯನ್ನು ಬೆಳೆಸುವ ಕವಿ ಸಾಮಾನ್ಯನೊಬ್ಬ ಅಸಾಮಾನ್ಯವಾಗಿ ಬೆಳೆಯುವ ಬಗೆಯನ್ನು
ಕಟ್ಟಿಕೊಡುತ್ತಾ ಹೋಗುತ್ತಾರೆ. ಇದಕ್ಕಾಗಿ ಯೋಗ, ವಿಜ್ಞಾನ ಮತ್ತು ಪುರಾಣದ ಪ್ರತಿಮೆಗಳ ಮೊರೆ ಹೋಗುತ್ತಾರೆ.

ಕಂದುಗಾರದ ಮಣ್ಣೊಡಲಿನೊಳಗಡೆಗೆ ಕಿಡಿ/ಕುಳಿತ ಮೂಲಾಧಾರ ಜೀವಧಾತು/ಮೋಡದ ಸಹಸ್ರಾರದಡೆಗೆ ತುಡಿಯುವ ತುರುಸು./ ಬೆನ್ನ ಹುರಿಯ ತುಟ್ಟ ತುದಿಯಲ್ಲಿರುವ ಕುಂಡಲಿನಿ ಶಕ್ತಿಯನ್ನು ಹಂತ ಹಂತವಾಗಿ ಮೇಲೆರಿಸುತ್ತಾ ನಡುನೆತ್ತಿಯಲ್ಲಿನ ಸಹಸ್ರಾರ ಚಕ್ರದಲ್ಲಿ ನೆಲೆಸುವಂತೆ ಮಾಡುವ ಶಕ್ತಿ ಚಕ್ರಗಳ ಅನುಸಂಧಾನದ ಕ್ರಿಯೆಯ ರೂಪಕದ ಬಳಕೆ, ಮಣ್ಣು ನೆಲದಿಂದ
ಬಂದವನೆ ಆದರೂ ಅವನ ಪ್ರಜ್ಞೆ ಎತ್ತರಕ್ಕೆ ತುಡಿಯುವ ಚೇತನದಿಂದ ಕೂಡಿದೆ. ನೆಲಕ್ಕಂಟಿ ಬಿದ್ದ ಆಕಾಶಯಾನದ ಕನಸು/ ಜೆಟ್ ವಿಮಾನವೇರಿ ಕೊಂಚದೂರ/ ತೇಲಿ, ಮಣ್ಣಿಗೆ ಮರಳಿ, ರಾಕೆಟ್ ಜಗಿದುಗುಳಿ/ ತಿಂಗಳಿಗೆ ಬಡಿವಾಧುನಿಕ? ಈ ವಿಕಾರ ತನ್ನ ಕವಚಗಳನ್ನು ಹಂತ ಹಂತವಾಗಿ ಕಳಚಿಕೊಳ್ಳುತ್ತಾ ಮೇಲೆರುತ್ತಾ ಸಾಗುವ ರಾಕೆಟ್‌ನ ಪ್ರತಿಮೆಯು ಊರ್ಧಗಾಮಿಯಾಗುತ್ತಾ
ಬೆಳೆಯುವ ‘ಪ್ರಜ್ಞಾ’ ಮನೋಭಾವವನ್ನು ಸಾಕ್ಷೀಕರಿಸುತ್ತದೆ. ಮತ್ಸ್ಯ ಕೂರ್ಮ ವರಾಹ ಮಟ್ಟಿಲುಗಳೇರುತ/ ಹುತ್ತಗಟ್ಟಿದ್ದ ಕೈ ಕಡೆದ ನೋಟ/ದಶಾವತಾರದ ಕಲ್ಪನೆಯ ಹಿಂದಿನ ವಿಕಾಸದ ಹಂತವನ್ನು ಮಹೋಗರಗಳು, ಪ್ರಾಣಿ ನಂತರ ಮಾನವ ಜೀವವಿಕಾಸ ಹೊಂದಿದ್ದನ್ನು ರಾಮಾವತಾರ ದಶವತಾರದ ಭಾಗವಾಗುತ್ತ ಪರಿಪೂರ್ಣವಾಗುತ್ತಾ ಹೋಗುವುದನ್ನು ತಿಳಿಸುತ್ತದೆ.

ಹಾಗಾದರೆ ರಾವಣ ಪರಿವಾರ ಕವಿಯ ಪಾಲಿಗೆ ಏನು? ಹತ್ತೇ ತಲೆ? ನೂರಾರೆ? ಅದು ಅಸಂಖ್ಯ/ ಕತ್ತರಿಸಿದರೆ ಬೆಳೆದ, ಬೆಳೆದು ಕತ್ತಿಗೆ ಬರುವ/ಅನಾದಿ; ಕೋದಂಡದಂಡವೂ ಹೀಗೆ ದಂಡ/ರಾವಣ ಇಲ್ಲಿ ಕತ್ತಲೆಯ ಇಲ್ಲವೆ ಅಜ್ಞಾನದ ಸಂಕೇತ. ರಾಮ ಇಲ್ಲಿ ಬೆಳಕಿನ ಸಂಕೇತ. ಅಜ್ಞಾನದ ಕತ್ತಲಿಗೆ ಹತ್ತೆ ತಲೆಗಳು, ನೂರಾರು. ಇದು ಕತ್ತರಿಸಿದೆಷ್ಟು ಬೆಳೆದು ಬರುತ್ತದೆ.

ಇದಕ್ಕೆ ಜ್ಞಾನದ ಕತ್ತಿಯನ್ನು ಮಸೆಯುತ್ತಲೆ ಇರಬೇಕಾಗುತ್ತದೆ. ಹೀಗೆ ಆತ್ಮಪರಿವೀಕ್ಷಣೆ ಮಾಡುತ್ತಾ ಮುಂದೆ ಸಾಗುವ ಕವಿ ಹಾಗದರೆ ಸಾಮಾನ್ಯ ಪುರುಷನನ್ನು ಪುರುಷೋತ್ತಮನಾಗಿ ಬೆಳೆಸಿದ ಋಷಿ ವಾಲ್ಮೀಕಿ ರಾಮಾಯಣವನ್ನು ತನ್ನ ಕೈಯಿಂದ ಕಡೆದ ಬಗೆಯನ್ನು ಹುತ್ತಗಟ್ಟಿದ ಕೈ ಕಡೆದ ನೋಟ ಎಂದು ತಿಳಿಸಿ ಅನುಭವ, ಸಂಕಲ್ಪ ಮನೋಭಾವವು ಮನದಲ್ಲಿ ನಿಧಾನವಾಗಿ ಹುತ್ತಗಟ್ಟುತ್ತಾ ಪುರುಷೋತ್ತಮನನ್ನು ಚಿತ್ರಿಸಿದೆ ಎನ್ನುತ್ತಾ ವಾಲ್ಮೀಕಿಯ ಸುತ್ತಲೂ ಬೆಳೆದ ಹುತ್ತ(ವಾಲ್ಮೀಕ)ವನ್ನು ರೂಪಕದ ದೃಷ್ಟಿಯಲ್ಲಿ ನೋಡುತ್ತಾರೆ. ಎಚ್.ಎಸ್. ವೆಂಕಟೇಶಮೂರ್ತಿಯವರ ‘ಶ್ರೀ ಸಂಸಾರಿ’ ಎಂಬ ಕವಿತೆ ಸರಳತೆ ಮತ್ತು ಸಮಾನತೆ ಯಿಂದಾಗಿ ಜನನಾಯಕನೊಬ್ಬ ಪುರುಷೋತ್ತಮನಾಗಿ ರೂಪುಗೊಳ್ಳುವ ಬಗೆಯನ್ನು ಸರಳವಾಗಿ ತಿಳಿಸುವ ಕವಿತೆ.

ಮುಖಂಡನಿಗೂ, ನಾಯಕನಿಗೂ ಇರುವ ವ್ಯತ್ಯಾಸವನ್ನು ಕವಿತೆ ತಿಳಿಹೇಳುತ್ತದೆ. ರಾಮಪೂಜೆ ಎಂದರೆ ಅದು ಕುಟುಂಬ
ಪೂಜೆ ಎನ್ನುವ ಕವಿ ರಾಮನ ಮಹತ್ವವನ್ನು ಜೀವನ ಸಾಕ್ಷಾತ್ಕಾರದ ವಿವಿಧ ಮಜಲುಗಳನ್ನು ಪರಿಚಯಿಸುವ ಕವಿಗಳ ಮನಕ್ಕೆ ನಮನ.