Saturday, 14th December 2024

ಪುಸ್ತಕ, ಮನಸ್ಸು ಮತ್ತು ಮನುಷ್ಯ

ತನ್ನಿಮಿತ್ತ

ಪ್ರೊ.ಸಿದ್ದು ಯಾಪಲಪರವಿ

ಒಂದು ಬರಹ/ಪುಸ್ತಕ ಇಡೀ ಬದುಕನ್ನು ಬರೀ ಬದಲಾಯಿಸುವುದಲ್ಲ ಪರಿವರ್ತಿಸಬಹುದು. ಅನೇಕ ಮಹನೀಯರ ಜೀವನ ಚರಿತ್ರೆ ಮತ್ತು ಸಾಧನೆ ಪುಸ್ತಕ ರೂಪದಲ್ಲಿ ಅಂಗೈ ಸೇರಿದಾಗ ಅದೇನೋ ರೋಮಾಂಚನ.

ಈಗ ಬಿಡಿ ಆ ಸ್ಥಾನವನ್ನು ಸೋಷಿಯಲ್ ಮೀಡಿಯಾ ಆಕ್ರಮಿಸಿಕೊಂಡಿದೆ. ಸಾಧಕರು ಈಗ ಅಕ್ಷರ ರೂಪದಲ್ಲಿ ಮಾತ್ರವಲ್ಲದೆ ಶ್ರವಣ ಮತ್ತು ದೃಶ್ಯಗಳ ಮೂಲಕ ಮುಖಾಮಖಿಯಾಗುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಕಾರಣದಿಂದ ಓದಿದ ನೂರಾರು ಪುಸ್ತಕಗಳು, ನಂತರ ಕಲಿಸುವ ಕಾರಣಕ್ಕಾಗಿ ಓದಿದ ಪುಸ್ತಕಗಳು, ಈಗಲೂ ಆಸಕ್ತಿಯಿಂದ ಓದಿಸಿಕೊಳ್ಳುವ ಪುಸ್ತಕಗಳು. ಹೀಗೆಯೇ ಪುಸ್ತಕಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಹಾಗಾದರೆ ಇದು ಕೇವಲ ಅಕ್ಷರಸ್ಥರ ದುನಿಯಾ ಅಂದುಕೊಳ್ಳಲಾಗದು.

ಓದದೇ ಇರುವವರು ನೋಡುವ ಮತ್ತು ಕೇಳುವ ಸಂಗತಿಗಳು ಕೂಡ ಪುಸ್ತಕ ಅಥವಾ ಬರಹದಿಂದ ಸಿದ್ಧಗೊಂಡಿರುತ್ತವೆ. ವಾಹಿನಿಯಲ್ಲಿ ಬರುವ ಧಾರಾವಾಹಿಗಳು, ಸಿನೆಮಾಗಳು ಇದೇ ಅಕ್ಷರ ಪ್ರೇರಣೆಯಿಂದ ತಯಾರಾಗಿರುತ್ತವೆ. ಅಕ್ಷರ, ಅಕ್ಷರಸ್ಥರಿಗೆ
ನೇರವಾಗಿ ತಲುಪಿದರೆ, ಅನಕ್ಷರಸ್ಥರಿಗೆ ಪರೋಕ್ಷವಾಗಿ ತಲುಪುತ್ತದೆ. ಇಂದು ನಾನು ಓದುವುದರ ಜತೆಗೆ ಬರೆಯುವುದನ್ನು ರೂಢಿಸಿಕೊಂಡು ಇತರರು ನನ್ನನ್ನು ಓದಲಿ ಎಂದು ಬಯಸುವ ಹಂತ ತಲುಪಲು ಈ ಅಕ್ಷರ ಸಂಸ್ಕೃತಿಯೇ ಕಾರಣ. ಓದು ನಮ್ಮ ಬದುಕು ಮತ್ತು ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ಹೇಳುತ್ತ ಬಂದವರು ನಮ್ಮ ಶಿಕ್ಷಕರು ಮತ್ತು ಅನೇಕ ಹಿರಿಯರು. ಆದರೂ ಓದಿನ ಬೆನ್ನು ಹತ್ತದೇ ಸಿನೆಮಾ ನೋಡುತ್ತಾ ಕಾಲ ಕಳೆಯುತ್ತಿದ್ದಾಗ, ಆಳವಾಗಿ ಓದಿ ತಮ್ಮ ಜ್ಞಾನದ ಹರಿವನ್ನು ವಿಸ್ತರಿಸಿಕೊಂಡಿದ್ದ ಜಗದ್ಗುರು ತೋಂಟದಾರ್ಯ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ನನ್ನ ಪಾಲಿನ ‘ಅಜ್ಜಾವ್ರು’ ಓದಿಗೊಂದು ಹೊಸ ಸಂಸ್ಕಾರ ನೀಡಿದರು.

ಅವರು ಕಟ್ಟು ನಿಟ್ಟಾಗಿ ಆದೇಶಿಸಿ, ಪ್ರೀತಿ, ವಿಶ್ವಾಸದಿಂದ ಹಕ್ಕೊತ್ತಾಯ ಮಾಡಿ ಕಾಲೇಜು ಸೇರಿಸಿದಾಗ ಓದು, ಬರಹ ಬದುಕಿನ ಅಂಗವಾಯಿತು. ಕಳೆದ ದಶಕದಿಂದ ಸಾಮಾಜಿಕ ಜಾಲತಾಣದ ಪ್ರಭಾವ ಇಮ್ಮಡಿಸಿದ ಮೇಲೆ ಓದು ಮತ್ತು ಬರಹ ನನ್ನ ವೃತ್ತಿ, ಪ್ರವೃತ್ತಿ ಮತ್ತು ಪ್ಯಾಶನ್ ಆಗಿ ಹೋಯಿತು. ‘ಆಲಿಸುವಂತೆ ಮಾತನಾಡುವ, ಓದುವಂತೆ ಬರೆಯುವ’ ಹೊಸ ಸಿದ್ಧಾಂತ ಅಂತರಂಗದ ಅರಿವಾಯಿತು.

ಬಸವಾದಿ ಶರಣರ ವಚನಗಳು, ಬುದ್ಧ-ಅಲ್ಲಮ-ಓಶೋ ಹೀಗೆ ಅನೇಕ ದಾರ್ಶನಿಕರ ಪ್ರಭಾವ ಓದಿಗೆ ಅಧ್ಯಾತ್ಮಿಕ ಹೊಳಹು ನೀಡಿದ್ದು ಸುದೈವ. ವಿಲಿಯಂ ಶೇಕ್ಸ್‌ಪಿಯರ್ ನಾಟಕದ ಸಂಭಾಷಣೆಗಳನ್ನು ಪ್ರಾಧ್ಯಾಪಕರು ವಿವರಿಸುವಾಗ ಶೇಕ್ಸ್‌ಪಿಯರ್ ನಮ್ಮ ಪಾಲಿನ ದೈವೀ ಪುರುಷನಂತೆ ಕಂಗೊಳಿಸಿದ್ದನ್ನು ಮರೆಯಲಾಗದು. ಕನ್ನಡದ ಪತ್ರಿಕೆಗಳು ಮತ್ತು ಕೆಲವು ಸಂಪಾದಕರು
ಓದಿಗೊಂದು ಹೊಸ ಆಯಾಮ ಒದಗಿಸಿದರು. ಪಾಟೀಲ ಪುಟ್ಟಪ್ಪನವರ ಪ್ರಪಂಚ, ಲಂಕೇಶರ ಲಂಕೇಶ್ ಪತ್ರಿಕೆ, ರವಿ ಬೆಳಗೆರೆಯ ಹಾಯ್ ಬೆಂಗಳೂರು ಕನ್ನಡದಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚಿಸಿದವು.

‘ಕೋಡುಗನ ಕೋಳಿ ನುಂಗಿತ್ತ ನೋಡವ್ವ ತಂಗಿ’ ಎಂಬ ಶರೀ-ರ ಹಾಡಿನಂತೆ ಪುಸ್ತಕವನ್ನು ಡಿಜಿಟಲ್ ಮಾಧ್ಯಮ ನುಂಗಿದೆ ಯಾದರೂ ಸಂಪೂರ್ಣ ನಾಶ ಮಾಡಿಲ್ಲ, ಮಾಡಲು ಸಾಧ್ಯವೂ ಇಲ್ಲ. ಹಾಗೆ ನೋಡಿದರೆ ಡಿಜಿಟಲ್ ಮೀಡಿಯಾ ಬರೆಯುವವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದೆ. ಈಗ ಹುಟ್ಟಿಕೊಂಡಿರುವ ಪೋರ್ಟಲ್ ಗಳು ತಾಜಾ ಸುದ್ದಿಗಳನ್ನು ವೇಗವಾಗಿ ತಲುಪಿಸುವ ಮೂಲಕ ತಮ್ಮ ಆದಾಯದ ಮೂಲ ಹುಡುಕಿಕೊಂಡಿವೆ. ಲೇಖಕರು ಮತ್ತು ಪ್ರಕಾಶಕರಿಗೆ ಗ್ರಂಥಾಲಯ ಇಲಾಖೆ ಸ್ವಲ್ಪ ಮಟ್ಟಿಗೆ ಶ್ರೀರಕ್ಷೆಯಾಗಿ ನಿಂತಿದೆ. ಆದರೆ ಈ ಕ್ಷೇತ್ರದ ಒಳ ರಾಜಕಾರಣದ ಲಾಬಿಯಿಂದಾಗಿ ನಿಜವಾದ ನ್ಯಾಯ ದೊರಕುತ್ತಿಲ್ಲ ಎಂಬ ಆರೋಪದಲ್ಲಿ ಅರ್ಧ ಸತ್ಯವಿದೆ.

ಒಬ್ಬ ಬರಹಗಾರ ತನ್ನದೇ ಆದ ಓದುಗ ಪಡೆಯನ್ನು ಸೃಷ್ಟಿ ಮಾಡುವ ಎತ್ತರಕ್ಕೆ ಬೆಳೆಯಬೇಕು. ಆಸಕ್ತಿಯಿಂದ ಓದುವ ಲಕ್ಷಾಂತರ ಓದುಗರಿzರೆ ಆದರೆ ಅವರನ್ನು ಸಮರ್ಪಕವಾಗಿ ತಲುಪುವ ಹಾದಿ ಸೃಷ್ಟಿಯಾಗಬೇಕಾಗಿದೆ. ನಾಡಿನ ಪ್ರತಿಷ್ಠಿತ
ಪುಸ್ತಕ ಮಳಿಗೆಗಳಾದ ಸಪ್ನಾ ಬುಕ್ ಹೌಸ್, ನವಕರ್ನಾಟಕ, ಅಂಕಿತ, ಬಸೂನ ಲಡಾಯಿ, ಜಿ.ಎನ್.ಮೋಹನ್ ಅವರ ಬಹು ರೂಪಿ ಹಾಗೂ ಇತರ ಮಹತ್ವದ ಲೇಖಕರ ಖಾಸಗಿ ಪ್ರಕಾಶನಗಳು ಉದ್ಯಮವಾಗಿ ಬೆಳೆದಿವೆ.

ಕಲಬುರ್ಗಿಯ ‘ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ’ವನ್ನು ಸಹಕಾರ ತತ್ವದ ಆಧಾರದ ಮೇಲೆ ಸ್ಥಾಪಿಸಿದೆ. ಇದೇ ಪ್ರಭಾವ ಇತರ ಕಡೆಗೆ ವ್ಯಾಪಿಸಿದೆ.ಸಪ್ನಾ ಬುಕ್ ಹೌಸ್ ತನ್ನ ಮಾರುಕಟ್ಟೆಯ ಸ್ವರೂಪಕ್ಕೆ ಕಾರ್ಪೋರೇಟ್ ವಿಧಾನ ಬಳಸಿರು ವುದು ಯುವ ಓದುಗರ ಗಮನ ಸೆಳೆದಿದೆ. ಕಾಲೇಜು ವಿದ್ಯಾರ್ಥಿಗಳು ಓದಿಗೆ ಮುಖ ಮಾಡುವ ವಾತಾವರಣ ಸೃಷ್ಟಿ ಮಾಡಬೇಕಿದೆ.