Saturday, 14th December 2024

ಮಲೇರಿಯಾ ಮತ್ತು ಏಡ್ಸ್

ವೈದ್ಯಕೀಯ

ಡಾ.ಕರವೀರಪ್ರಭು ಕ್ಯಾಲಕೊಂಡ

ಚಳಿ ಜ್ವರ ಬಿಟ್ಟಾವು, ಒಳಜ್ವರ ಬಿಡಲಿಲ್ಲ ಎಂಬ ಆಡುಭಾಷೆಯ ಪಡೆನುಡಿ ಮೂಡಿರಬೇಕಾದರೆ. ಕಿಲುಬಿನಾ ಬಟ್ಟಲೊಳು ಹುಳಿ ಕಲಿಸಿ ಉಣಬಹುದೆ! ಚಳಿಜ್ವರಕ್ಕೆ ಚಂದನದ ಲೇಪತವೆ|| ಕನಕದಾಸರ ಕೀರ್ತನದಲ್ಲಿ ಕಾಣಿಸಿಕೊಳ್ಳಬೇಕಾದರೆ ಮಲೇರಿಯಾ ಒಡನಾಟ ಎಷ್ಟಿರಬಹುದೆಂಬುದು ಯಾರಿಗಾದರೂ ಸ್ಪಷ್ಟವಾಗುತ್ತದೆ.

ಮಲೇರಿಯಾ ಇಂದು ನಿನ್ನೆಯದಲ್ಲ. ಶತಶತಮಾನಗಳಿಂದ ಕಾಡುತ್ತ ಬಂದಿರುವ ಮಲೇರಿಯಾ ಪ್ರತಿಯೊಂದು ದೇಶದಲ್ಲೂ ವಸಾಹತು ಸ್ಥಾಪಿಸಿದೆ. ಜಗತ್ತಿನ ಹಲವಾರು ದೇಶಗಳಲ್ಲಿ ಮಲೇರಿಯಾ ನಡೆಸಿರುವ ದಾಂಧಲೆಗಳು ಯಾವುದೇ ಮಹಾಯುದ್ಧ ಗಳಿಗೆ ಕಡಿಮೆಯೆನಲ್ಲ. ಪ್ರತಿ ವರ್ಷ ಪ್ರಪಂಚದಲ್ಲಿ 30 ಕೋಟಿ ಜನರು ಮಲೇರಿಯಾದಿಂದ ಬಳಲುತ್ತಿದ್ದರೆ 30 ಲಕ್ಷ ಜನರು ಅಸು ನೀಗುತ್ತಾರೆ. ಎಲ್ಲರಿಗೂ ಆರೋಗ್ಯ ಎಂಬ ಘೋಷಣೆ ಕೂಗುವ ಕಂಪ್ಯೂಟರ್ ಯುಗವು ಕೋಟಿಗಟ್ಟಲೆ ಮಲೇರಿಯಾ ಪೀಡಿತರ ನಡುಗುವ ಧ್ವನಿಯನ್ನು ಒಳಗೊಂಡಿದೆ!

ಮಲೇರಿಯಾ ರೋಗಾಣು ಮನುಷ್ಯನ ರಕ್ತದಲ್ಲಿ ಜೀವವಿಷವನ್ನು ಬಿಡುಗಡೆ ಮಾಡುತ್ತದೆ. ಇದು ಜ್ವರಕಾರಕವು, ಕೆಂಪುರಕ್ತಕಣ ಲಯಕಾರಿಯೂ,ವಾಹಕ ಪ್ರಚೋದಕವೂ ಆಗಿದ್ದು ಈ ಗುಣಗಳಿಂದ ರೋಗಲಕ್ಷಣಗಳನ್ನು ಹೊರ ಹೊಮ್ಮಿಸುತ್ತದೆ. ಮಲೇರಿಯಾ ಪೀಡಿತ ರೋಗಿಯಲ್ಲಿ ಕೆಂಪುರಕ್ತಕಣಗಳು ನಾಶವಾಗುವುದರಿಂದ, ಅವುಗಳಲ್ಲಿಯ ಹೀಮೋಗ್ಲೋಬಿನ್ ವಿಭಜನೆ ಹೊಂದಿ ಕಬ್ಬಿಣಾಂಶದ ‘ಹೀಮ್’ ಮತು ಪ್ರೋಟೀನ್ ಅಂಶಗಳನ್ನೊಳಗೊಂಡ ‘ಗ್ಲೊಬ್ಯಲಿನ್’ ಪ್ರತ್ಯೇಕವಾಗುವುದರಿಂದ ದೇಹದಿಂದ ಸರ್ಜಿತಗೊಳ್ಳುವವು.

ಹೀಗಾಗಿ ಮಲೇರಿಯಾಕ್ಕೆ ತುತ್ತಾದ ವ್ಯಕ್ತಿ ರಕ್ತಹೀನತೆ ಮತ್ತು ಪ್ರೋಟೀನ್‌ಗಳ ಕೊರತೆಯಿಂದ ಸೊರಗುವನು. ಅಶಕ್ತಿಯ ಆಗರ ವಾಗುವನು. ರೋಗ ಪ್ರತಿರೋಧಕ ಶಕ್ತಿಯು ಕುಗ್ಗುವುದು. ಇದು ಸಾಮಾನ್ಯವಾಗಿ ಮಲೇರಿಯಾ ಪೀಡಿತರಲ್ಲಿ ನಡೆಯುವ ಪ್ರಕ್ರಿಯೆ.
ಎಚ್‌ಐವಿ/ ಏಡ್ಸ್ ರೋಗಿಗಳು ಮಲೇರಿಯಾಕ್ಕೆ ತುತ್ತಾದಾಗ, ಅವರಲ್ಲೂ ಈ ಪ್ರಕ್ರಿಯೆ ನಡೆಯುತ್ತದೆ. ಅವರು ಮೊದಲೇ ಅಶಕ್ತ ರಾಗಿರುತ್ತಾರೆ. ರೋಗನಿರೊಧಕ ಶಕ್ತಿಯು ಕುಗ್ಗಿರುತ್ತದೆ. ಹಸಿವು ಆಗಿರುವುದಿಲ್ಲ, ತಿನ್ನಲು ಉಣ್ಣಲು ಆಗುವುದಿಲ್ಲ. ಉಂಡದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹೀಗಾಗಿ ನೂನ್ಯಪೋಷಣೆಗೆ ಅವರು ತುತ್ತಾಗುವುದು ಸಹಜ. ಅವರು ಅನೇಕ ಸೋಂಕು ರೋಗಗಳಿಗೆ ಈಡಾಗುವರು. ಅವರ ದೇಹದಲ್ಲಿ ಸ್ರವಿಸುವ ಲೈಂಗಿಕ ಹಾರ್ಮೋನುಗಳು ಮಾತ್ರ ಯಥಾಸ್ಥಿತಿಯಲ್ಲಿ ಇರುತ್ತವೆ. ಪರಿಣಾಮವಾಗಿ ಅವರ ಪುರುಷತ್ವಕ್ಕೆ ಎಳ್ಳಷ್ಟೂ ದಕ್ಕೆ ಉಂಟಾಗುವುದಿಲ್ಲ. ಈ ಸೋಂಕಿತ ವ್ಯಕ್ತಿಗಳು ಮಲೇರಿಯಾಕ್ಕೆ ತುತ್ತಾದಲ್ಲಿ ಅವರ ದೇಹದ ಉಷ್ಣಾಂಶವು ಚಳಿಯ ಹಂತದಲ್ಲಿ ಕುಗ್ಗುವುದು. ಬಿಸಿಯ ಹಂತದಲ್ಲಿ ಹೆಚ್ಚುವುದು ಉಣ್ಣಾಂಶದ ಈ ಏರುಪೇರಿನಿಂದ ಜೀವಕೋಶಗಳಲ್ಲಿಯ ಎಚ್‌ಐವಿ ವೈರಸ್‌ಗಳು ಮುಂಬರುವ ವಿಪತ್ತನ್ನು ಎದುರಿಸುವ ಸಲುವಾಗಿ ಸಂಖ್ಯಾಭಿವೃದ್ಧಿಯನ್ನು ಮಾಡಿಕೊಳ್ಳುವವು.

ರಕ್ತದಲ್ಲಿ ಅವುಗಳ ಪ್ರಮಾಣ ಗಮನಾರ್ಹವಾಗಿ ಏರುವುದು. ಇವರ ರಕ್ತದಲ್ಲಿ ವೈರಲ್ ಲೋಡ್ ಹೆಚ್ಚುವುದು. ಇದರ ಪ್ರಯುಕ್ತ ದೇಹದಲ್ಲಿ ವಸರುವ ಎಲ್ಲ ಸ್ರಕೆಗಳಲ್ಲಿ ವೈರಸ್‌ಗಳ ಸಂಖ್ಯೆ ಧಾರಾಳವಾಗಿ ಹೆಚ್ಚಾಗುವುದು. ರಕ್ತನತೆ, ಅಶಕ್ತಿ ಅಪ್ಪಿಕೊಂಡು ಹಿಂಡಿ ಹಿಪ್ಪೆ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಯಗ್ಗಿಲ್ಲದೆ ಕುಗ್ಗುವುದು ಎಚ್‌ಐವಿ ಸೋಂಕಿತ ವ್ಯಕ್ತಿಗಳು ಮಲೇರಿಯಾಕ್ಕೆ ತುತ್ತಾದಾಗ ಸುರತದಲ್ಲಿ ನಿರತರಾದಲ್ಲಿ ಅವರು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಲು ಶಕ್ತರಾಗಿರುತ್ತಾರೆ.

ಕಾರಣ ಎಚ್‌ಐವಿ ಸೋಂಕಿತ ವ್ಯಕ್ತಿಗಳು ಮಲೇರಿಯಾಕ್ಕೆ ತುತ್ತಾದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗದೇ ಇರುವುದು ಒಳ್ಳೆಯದು. ಇದು ಅವರಿಗೂ ಕ್ಷೇಮ, ಸಮಾಜಕ್ಕೂ ಕ್ಷೇಮ. ಅಷ್ಟೇ ಅಲ್ಲ ರೋಗ ನಿಯಂತ್ರಣಕ್ಕೆ ಸಹಕರಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಇಲ್ಲದೆ ಹೋದರೆ ‘ಸಮಾಜಘಾತಕ ಶಕ್ತಿ’ಗಳೆಂಬ ಕುಖ್ಯಾತಿ ತಪ್ಪಿದ್ದಲ್ಲ.

ಕಡಿವಾಣ ಹೇಗೆ?: ಮಲೇರಿಯಾ ರೋಗವನ್ನು ಗುಣಪಡಿಸಿ, ಸೊಳ್ಳೆಗಳು ರೋಗವಾಹಕಗಳಾಗದಂತೆ ತಡೆಯುವುದು ಮತ್ತು ಸೊಳ್ಳೆಗಳಿಂದ ರಕ್ಷಣೆ ಪಡೆಯುವ ವಿಧಾನ ಅನುಸರಿಸುವುದು ರೋಗಕ್ಕೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೂಕ್ತ ಶಕ್ತಿಶಾಲಿ ಕ್ರಿಮಿನಾಶಕಗಳನ್ನು ಸಕಾಲಕ್ಕೆ ಸಿಂಪಡಿಸುವುದು, ಮನೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಮಾಡಿ ಸೊಳ್ಳೆಗಳ ವಂಶಾಭಿವೃದ್ಧಿಗೆ ಅವಕಾಶ ಕೊಡದಿರುವುದು, ಮಲಗುವಾಗ ಸೊಳ್ಳೆ ಪರದೆ ಗಳನ್ನು ಉಪಯೋಗಿಸುವುದು, ಸೊಳ್ಳೆಗಳು ಮನೆಯೊಳಗೆ ನುಗ್ಗುವುದನ್ನು ತಡೆಯಲು ಕಿಟಕಿಗಳಿಗೆ ಜಾಳಿಗೆಗಳನ್ನು ಹಾಕಿಸು ವುದು, ಸೊಳ್ಳೆಗಳನ್ನು ಓಡಿಸಲು ಘಾಟು ಪದಾರ್ಥಗಳನ್ನು ಉಪಯೋಗಿಸುವುದು ಒಳಿತು.