Friday, 13th December 2024

ದಲಿತ ಚಳವಳಿ ದಿಕ್ಕು ತಪ್ಪಲು ಕಾರಣವಾದ ನಾಯಕರ ದ್ರೋಹ

ಅಭಿವ್ಯಕ್ತಿ

ಡಾ.ಚಿ.ನಾ.ರಾಮು

ಕರ್ನಾಟಕ ಎಂದರೆ ಚಳವಳಿಗಳ ತವರು. ಕಾಲಕಾಲಕ್ಕೆ ಅನೇಕ ಹೋರಾಟಗಳು ಈ ಮಣ್ಣಿನಲ್ಲಿ ಹುಟ್ಟಿವೆ. ಭಾಷಾ ಚಳವಳಿ ಯಿಂದ ಹಿಡಿದು ಸಾಮಾಜಿಕ ಚಳವಳಿಯವರೆಗೆ ವ್ಯವಸ್ಥೆಯ ವಿರುದ್ಧ ಸೆಟೆದುನಿಂತ ಅನೇಕ ಹೋರಾಟಗಳನ್ನು ನಾವು ಕಾಣ ಬಹುದಾಗಿದೆ.

ನಾಡಿನ ಯಾವುದಾದರೂ ಒಂದು ಭಾಗದಲ್ಲಿ ಹುಟ್ಟಿ ಇಡೀ ರಾಜ್ಯಕ್ಕೆ ಹರಡಿ ಜನ ಸಮುದಾಯಗಳನ್ನು ಈ ಚಳವಳಿಗಳು ಸೆಳೆದಿವೆ. ನಾಡಿನಲ್ಲಿ ಹುಟ್ಟಿದ ಪ್ರತಿ ಚಳವಳಿಯ ಹಿಂದೆಯೂ ರೋಚಕ ಇತಿಹಾಸವಿದೆ. ರೈತ ಚಳವಳಿ, ಸಮಾಜವಾದಿ ಚಳವಳಿ, ಸಾಹಿತ್ಯ ಚಳವಳಿ, ಭಾಷಾ ಚಳವಳಿ, ಮಹಿಳಾ ಚಳವಳಿ, ಮಾರ್ಕ್ಸ್‌ವಾದಿ ಚಳವಳಿ, ಪರಿಸರ, ಕಾರ್ಮಿಕ ಚಳವಳಿಗಳು ಕರು ನಾಡಿನ ಪ್ರಮುಖ ಸಾಮಾಜಿಕ ಚಳವಳಿಗಳೆಂದು ಗುರುತಿಸಲ್ಪಟ್ಟಿವೆ.

ಆದರೆ ದಲಿತ ಚಳವಳಿಯ ನಂತರ ಇಲ್ಲಿನ ಸಾಮಾಜಿಕ ಚಳವಳಿಗಳ ಸ್ವರೂಪಗಳೇ ಬದಲಾಗಿದ್ದನ್ನು ನಾವು ಗುರುತಿಸ ಬಹುದಾಗಿದೆ. ೭೦ರ ದಶಕ ನಾಡಿನ ಹಲವು ಹೋರಾಟಗಳ ಹುಟ್ಟಿಗೆ ಕಾರಣವಾದ ಕಾಲಘಟ್ಟ. ಇದೇ ಕಾಲಘಟ್ಟದಲ್ಲಿಯೇ ದಲಿತ ಚಳವಳಿಯ ಉಗಮವಾಯಿತು. ಅನಂತರ ಕಂಡುಬಂದ ಚಳವಳಿಗಳ ಮೇಲೆ ಗಾಢ ಪ್ರಭಾವ ಬೀರಿತು. ಇಂತಹ ದಲಿತ ಚಳವಳಿ ಏಕೆ ಮತ್ತು ಹೇಗೆ ದಿಕ್ಕು ತಪ್ಪಿತು? ಇದಕ್ಕೆ ಕಾರಣ ಯಾರು? ಈ ಪ್ರಶ್ನೆಗಳಿಗೆ ನಿರ್ಭಯವಾಗಿ ಉತ್ತರ ಕೊಡುವವರು ಕೆಲವೇ ಮಂದಿ. ಸತ್ಯ ನುಡಿಯುವವರು ಅಪರೂಪ. ಇಂಥ ಸತ್ಯವನ್ನು ಇಂದಿನ ಯುವಕರಿಗೆ ತಿಳಿಸಬೇಕಾದ ಬಾಧ್ಯತೆ ನಮ್ಮ ಮೇಲಿದೆ.

ದಲಿತ ಚಳವಳಿಯ ಉಗಮ: ದಲಿತ ಚಳವಳಿಗೆ ಭದ್ರ ಬುನಾದಿ ಹಾಕಿದ್ದು ‘ಬೂಸಾ ಚಳವಳಿ’. 1973ರಲ್ಲಿ ಜಾತಿ ವಿನಾಶ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು. ರಾಷ್ಟ್ರಕವಿ ಕುವೆಂಪು ಅವರು ಈ ಸಮ್ಮೇಳನ ಉದ್ಘಾಟಿಸಿ ಪುರೋಹಿತಶಾಹಿ ವ್ಯವಸ್ಥೆ ಯನ್ನು ಕಟುವಾಗಿ ಟೀಕಿಸಿದರು. ಸಮಾರೋಪ ಭಾಷಣ ಮಾಡಿದ ಅಂದಿನ ಪೌರಾಡಳಿತ ಸಚಿವ ಬಿ.ಬಸವಲಿಂಗಪ್ಪ ಅವರು ಇಡೀ ಕನ್ನಡ ಸಾಹಿತ್ಯವನ್ನು ‘ಬೂಸಾ ಸಾಹಿತ್ಯ’ ಎಂದು ಲೇವಡಿ ಮಾಡಿದರು.

ಕನ್ನಡ ಸಾಹಿತ್ಯವನ್ನಷ್ಟೆ ಅಧ್ಯಯನ ಮಾಡುವುದರಿಂದ ವಿಶಾಲ ತಳಹದಿಯ ಬೌದ್ಧಿಕತೆ ಸಾಧ್ಯವಿಲ್ಲ. ಇಂಗ್ಲಿಷ್ ಸಾಹಿತ್ಯ ಓದುವ
ಮೂಲಕ ದಲಿತ ಯುವಕರು ಜಾಗತಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು. ಜ್ಞಾನದ ಮೇರುಪರ್ವತವಾಗಿ ಅಂಬೇಡ್ಕರ್ ಬೆಳೆಯಲು ಇಂಗ್ಲಿಷ್ ಸಾಹಿತ್ಯವೇ ಕಾರಣ ಎಂಬ ಸಂದೇಶ ಬಸವಲಿಂಗಪ್ಪನವರ ಮಾತಿನಲ್ಲಿತ್ತೇನೋ; ಆದರೆ ಕೆಲ ಸಂಕುಚಿತ ಮನಸ್ಸುಗಳು ಅವರ ಮಾತಿಗೆ ಬೇರೆಯದೇ ಅರ್ಥ ಕಲ್ಪಿಸಿದವು.

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ಬಸವಲಿಂಗಪ್ಪ ಅವಮಾನಿಸಿದ್ದಾರೆ ಎಂದು ಬಿಂಬಿಸಲಾಯಿತು. ಅವರ ಹೇಳಿಕೆಯನ್ನು ರಾಜಕೀಯಗೊಳಿಸಲಾಯಿತು. ಬಸವಲಿಂಗಪ್ಪ ಅವರನ್ನು ರಾಜಕೀಯವಾಗಿ ಮಟ್ಟ ಹಾಕುವ ಸಂಚು ನಡೆಯಿತು. ಇದು ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಹೋರಾಟಕ್ಕೆ ಪ್ರೇರೇಪಿಸಿತು. ಈ ಹೋರಾಟ ಕನ್ನಡ ಸಾಹಿತ್ಯ ಚಳವಳಿಯ ಮೇಲೆ ಹಾಗೂ ಸಾಮಾಜಿಕ ಚಟುವಟಿಕೆಯ ಮೇಲೆ ಭಾರಿ ಪರಿಣಾಮ ಬೀರಿತು. ದಲಿತ – ದಲಿತೇತರರ ನಡುವಿನ ಘರ್ಷಣೆಗೂ ದಾರಿಯಾಯಿತು.

ಬಸವಲಿಂಗಪ್ಪನವರು ಅಂಬೇಡ್ಕರ್ ತತ್ತ್ವ, ಚಿಂತನೆಗಳನ್ನು ಹಾಗೂ ಪ್ರಗತಿಪರ ವಿಚಾರಧಾರೆಗಳನ್ನು ಕಟುವಾಗಿ ಪ್ರತಿಪಾದಿಸು ತ್ತಿದ್ದರು. ಸಚಿವರಾಗಿದ್ದರೂ ಯಾವುದೇ ಅಂಜಿಕೆ, ಅಳುಕಿಲ್ಲದೆ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಸಾಮಾಜಿಕ ವ್ಯವಸ್ಥೆ ಯಲ್ಲಿರುವ ಹುಳುಕುಗಳ ವಿರುದ್ಧ ಧ್ವನಿಯೆತ್ತುತ್ತಿದ್ದರು. ಅವರು ನಡೆಸುತ್ತಿದ್ದ ವೈಚಾರಿಕ ದಾಳಿಯನ್ನು ಅರಗಿಸಿಕೊಳ್ಳ ಲಾಗದ ಒಂದು ವರ್ಗ ಅವಕಾಶಕ್ಕಾಗಿ ಕಾದು ಕತ್ತಿ ಮಸೆಯುತ್ತಿತ್ತು. ಯಾವಾಗ ಅವರ ಬಾಯಿಂದ ‘ಬೂಸಾ’ ಸಾಹಿತ್ಯದ ಹೇಳಿಕೆ ಹೊರಬಿತ್ತೋ ಎಲ್ಲಾ ಶಕ್ತಿಗಳು ಒಂದಾಗಿ ಬಸವಲಿಂಗಪ್ಪ ಅವರನ್ನು ಮಟ್ಟಹಾಕಲು ಮುಂದಾದವು.

ಅವರ ರಾಜೀನಾಮೆಗೆ ಒತ್ತಾಯಿಸಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆದವು. ಬಸವಲಿಂಗಪ್ಪ ಪರ ದಲಿತ ನಾಯಕರು ಹೋರಾಟ ಆರಂಭಿಸಿದರು. ಪರ-ವಿರೋಧ ಪ್ರತಿಭಟನೆಗಳು ಬಿರುಸಾಗಿ ದಲಿತ-ದಲಿತೇತರರ ನಡುವಿನ ಕಾಳಗ ತಾರಕಕ್ಕೇರಿತು. ಸಾಕಷ್ಟು ಕಡೆ ದಲಿತ ಕೇರಿಗಳಿಗೆ ನುಗ್ಗಿ ದೌರ್ಜನ್ಯ, ಹ ನಡೆಸಲಾಯಿತು. ಪರಿಶಿಷ್ಟ ವಿದ್ಯಾರ್ಥಿಗಳ ಹಾಸ್ಟೆಲ್‌ಗಳ ಮೇಲೂ ದಾಳಿಗಳಾದವು. ಪರಿಸ್ಥಿತಿ ವಿಷಮಿಸಿದಾಗ ಬಸವಲಿಂಗಪ್ಪ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡುವಂತಾಯಿತು. ಕಣ್ಣ ಮುಂದೆಯೇ ಆದ ಅನ್ಯಾಯದ ವಿರುದ್ಧ ದಲಿತ ಶಕ್ತಿ ತಿರುಗಿಬಿತ್ತು.

ಭದ್ರಾವತಿಯ ಸರ್ ಎಂವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಪ್ರೊ.ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿದರು. ಅಸ್ಪೃಶ್ಯತೆ, ದೌರ್ಜನ್ಯ ಗಳ ವಿರುದ್ಧ ಹೋರಾಟ ಕೈಗೆತ್ತಿಕೊಂಡ ಡಿಎಸ್‌ಎಸ್ ಮುಂದೆ ದೊಡ್ಡದಾಗಿ ಬೆಳೆದು ಇಡೀ ರಾಜ್ಯಕ್ಕೆ ಹಬ್ಬಿತು. ಎಲ್ಲಾ ಜಿಲ್ಲೆಗಳಲ್ಲೂ ಶಾಖೆಗಳು ಆರಂಭವಾದವು.

1978ರಲ್ಲಿ ದಲಿತ ಲೇಖಕರ ಸಮಾವೇಶವೂ ನಡೆಯಿತು. ಕೋಲಾರ, ರಾಯಚೂರಿನಲ್ಲಿ ಸಂಘಟನೆ ಬಲಾಢ್ಯವಾಗಿ ಬೆಳೆಯಿತು.
ಆಂಧ್ರದ ಗದ್ದರ್, ವರವರರಾವ್ ಮತ್ತಿತರರ ಪ್ರಭಾವವಿರುವ ಗಡಿ ಭಾಗಗಳ ದಲಿತ ಯುವಕರಲ್ಲಿ ಹೋರಾಟದ ಕಿಚ್ಚು ಹೊತ್ತಿತು.
ಡಾ.ಸಿದ್ಧಲಿಂಗಯ್ಯ, ದೇವನೂರ ಮಹಾದೇವ, ಚಂದ್ರಪ್ರಸಾದ್, ಎಂ.ಡಿ.ಗಂಗಯ್ಯ, ಬೋಳಬಂಡಪ್ಪ, ದೇವಯ್ಯ ಹರವೆ ಸೇರಿದಂತೆ ದಲಿತ ನಾಯಕರ ದೊಡ್ಡ ಪಡೆಯೇ ತಯಾರಾಯಿತು.

‘ಬೂಸಾ’ ಚಳವಳಿಯಿಂದ ಆರಂಭವಾದ ಹೋರಾಟ ದಲಿತ ಸಮುದಾಯವನ್ನು ಕಾಡುತ್ತಿದ್ದ ಸಾಮಾಜಿಕ ಅನಿಷ್ಟಗಳು, ಶೋಷಣೆಯ ವಿರುದ್ಧವೂ ಮುಂದುವರಿಯಿತು. ದೇವಲಾಪುರ ಹೋರಾಟ, ಚಂದಗೋಡು, ನಾಗಸಂದ್ರ ಭೂ ಹೋರಾಟ ಸೇರಿದಂತೆ ಅನೇಕ ಭೂ ಚಳವಳಿಗಳು ನಡೆದು ಸಾವಿರಾರು ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಲಾಯಿತು. ಹೆಂಡದ ವಿರುದ್ಧ ಜಾಗೃತಿ ಮೂಡಿಸಲಾಯಿತು.

1979ರಲ್ಲಿ ಕೋಲಾರ ಜಿ ಹುಣಸೀಕೋಟೆಯಲ್ಲಿ ನಡೆದ ಶೇಷಗಿರಿಯಪ್ಪನ ಕಗ್ಗೊಲೆ, ಅನಸೂಯಮ್ಮ ಮೇಲಿನ ಅತ್ಯಾಚಾರ
ಪ್ರಕರಣ ದಲಿತ ಚಳವಳಿಯನ್ನು ಕ್ರಾಂತಿಕಾರಿ ಹಾದಿಯತ್ತ ಹೊರಳಿಸಿತು. ಕೃಷ್ಣೇಗೌಡನೆಂಬ ಭೂಮಾಲೀಕ ಶೇಷಗಿರಿಯಪ್ಪನ
ಭೂಮಿ ಲಪಟಾಯಿಸುವ ಸಲುವಾಗಿ ಆತನನ್ನು ಹತ್ಯೆಗೈದು, ಆತನ ಮಗಳು ಅನಸೂಯಮ್ಮನ ಮೇಲೆ ಅತ್ಯಾಚಾರ ನಡೆಸಿದ್ದು ಕ್ರಾಂತಿಯ ಜ್ವಾಲಾಮುಖಿ ಸೋಟಿಸಲು ಕಾರಣವಾಯಿತು. ಡಿಎಸ್‌ಎಸ್ ರಾಜ್ಯಾದ್ಯಂತ ಬೃಹತ್ ಹೋರಾಟ ಸಂಘಟಿಸಿತು.

ಕೋಟಿ ಕೋಟಿ ಬಾಧೆಗಳಲ್ಲಿ.. ಲಕ್ಷಾಂತರ ನೋವುಗಳಲ್ಲಿ.. ನೀ ಹುಟ್ಟಿ ಬೆಳೆದೀಯಮ್ಮ ನನ್ನ ತಂಗಿ ಅನಸೂಯ ಎಂಬ ಹಾಡು ಕಟ್ಟಲಾಯಿತು. ದಲಿತ ಬರಹಗಾರರ ಕ್ರಾಂತಿ ಗೀತೆಗಳು ಹೋರಾಟಕ್ಕೆ ಶಕ್ತಿ ತುಂಬಿದವು. ಹುಣಸಿಕೋಟೆಯ ಶೇಷಗಿರಿಯಪ್ಪ ಸಮಾಧಿಯಿಂದ ವಿಧಾನಸೌಧ ದವರೆಗೆ ಮೂರು ದಿನಗಳ ಕಾಲ ನಡೆದುಬಂದ ಜಾಥಾ ಗುಂಡೂರಾವ್ ಸರಕಾರವನ್ನು ಅಕ್ಷರಶಃ ಅಲುಗಾಡಿಸಿತು. ಮುಂದೆ ದಲಿತ, ರೈತ ಚಳವಳಿಯ ಹೊಡೆತಕ್ಕೆ 1983ರಲ್ಲಿ ಕಾಂಗ್ರೆಸ್ ಸರಕಾರ ತರಗೆಲೆಯಂತೆ ಧೂಳೀಪಟ ವಾಯಿತು.

1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂತು. ದಲಿತ ಚಳವಳಿ ಉಚ್ಛ್ರಾಯ ಸ್ಥಿತಿಗೆ ತಲುಪಿತು. ಪ್ರಬಲ ದಲಿತ ಚಳವಳಿ ಹೆಗಡೆ ಸರಕಾರದ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. 1985ರ ಹೊತ್ತಿಗೆ ದಲಿತ ಚಳವಳಿಯನ್ನು ಒಡೆಯಲು ರಾಮಕೃಷ್ಣ ಹೆಗಡೆ ಸಂಚು ರೂಪಿಸಿದರು. ಡಿಎಸ್‌ಎಸ್ ರಾಜ್ಯ ಸಂಚಾಲಕರಾಗಿದ್ದ ದೇವನೂರ ಮಹಾದೇವ, ಡಾ.ಸಿದ್ಧಲಿಂಗಯ್ಯ, ಸಿ.ಮುನಿಯಪ್ಪ ಮತ್ತಿತರ ನಾಯಕರಿಗೆ ಅಧಿಕಾರದ ರುಚಿ ಹತ್ತಿಸಿದರು.

1985ರಲ್ಲಿ ರಾಜ್ಯದ ಇತಿಹಾಸದ ಮೊದಲ ಬಾರಿಗೆ ವಿಧಾನಸೌಧ ಆವರಣದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಡಲಾಯಿತು. ‘ಸ್ವಾಭಿಮಾನಿ ದಿನ’ ಆಚರಣೆಗೆ ಒಂದು ಲಕ್ಷ ಜನ ಸೇರಿದ್ದರು. ಡಿಎಸ್‌ಎಸ್‌ನ ಬಾವುಟ, ಸಂಘದ ಚಿಹ್ನೆ ಬಿಡುಗಡೆ ಮಾಡಲಾಯಿತು. ಇದೇ ಕಾರ್ಯಕ್ರಮಕ್ಕೆ ಸರಕಾರ ನೀಡಿದ ಹಣದ ವಿಚಾರವಾಗಿ ಡಿಎಸ್‌ಎಸ್ ನಾಯಕರ ನಡುವೆ ಕಿತ್ತಾಟ ನಡೆದು ಸಂಘಟನೆಯ ವಿಘಟನೆಗೆ ದಾರಿಯಾಯಿತು.

ಈ ಹಂತದ ಸಿದ್ಧಲಿಂಗಯ್ಯ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ ರಾಮಕೃಷ್ಣ ಹೆಗಡೆ ದಲಿತ ಸಂಘಟನೆಗಳಿಗೆ
ಎರಡು ಲೋಕಸಭಾ ಕ್ಷೇತ್ರಗಳು, ಹತ್ತು ಮೀಸಲು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿಯೂ ಡಿಎಸ್‌ಎಸ್ ಜೊತೆ ಜನತಾ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿಯೂ ಹುಸಿ ಭರವಸೆ ನೀಡಿದರು. ದೇವನೂರ ಮಹಾದೇವ ಅವರ ಸಹೋದರ ಶಿವಮಲ್ಲು ಅವರಿಗೆ ವಯಸ್ಕರ ಶಿಕ್ಷಣ ಮಂಡಳಿ ಅಧ್ಯಕ್ಷ ಹುz ನೀಡುವ ಮೂಲಕ ಡಿಎಸ್‌ಎಸ್ ಒಡೆಯುವ ಗುತ್ತಿಗೆ ಯನ್ನು ದೇವನೂರರಿಗೆ  ನೀಡಲಾಯಿತು.

ನಂತರ ಸರಕಾರದ ವಿರುದ್ಧ ಡಿಎಸ್‌ಎಸ್ ಮೃದುಭಾವ ತಾಳಿದ್ದಲ್ಲದೆ ದಲಿತರ ಮೇಲಿನ ದಬ್ಬಾಳಿಕೆಗಳ ವಿರುದ್ಧ ಧ್ವನಿಯೆತ್ತದೆ ಮೌನಕ್ಕೆ ಜಾರಿತು. ದೌರ್ಜನ್ಯ, ಅನ್ಯಾಯಗಳ ಬಗ್ಗೆ ಕುರುಡಾಯಿತು. ಅಧಿಕಾರದ ರುಚಿ ಹತ್ತಿಸಿಕೊಂಡ ಸಿದ್ಧಲಿಂಗಯ್ಯ, ಸರಕಾರ
ನಡೆಸುವವರ ಆಸ್ಥಾನ ಕವಿಯಾದರು. ಅಽಕಾರಸ್ಥರ ಒಡ್ಡೋಲಗದ ರಾಜಾಶ್ರಯ ಅವರಿಗೆ ದೊರೆಯಿತು. ಮುಂದೆ ಕಾಲಕಾಲಕ್ಕೆ ಅಧಿಕಾರ ಪ್ರಾಪ್ತವಾಯಿತು. ರಾಮಕೃಷ್ಣ ಹೆಗಡೆಯವರಿಗೆ ದಲಿತ ಸಂಘರ್ಷ ಸಮಿತಿಯನ್ನು ಅಡವಿಟ್ಟ ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಮತ್ತಿತರರ ಧೋರಣೆಯಿಂದಲೇ ಸಂಘಟನೆ ಛಿದ್ರ ಛಿದ್ರವಾಯಿತು.

ಅಧಿಕಾರದ ರುಚಿ ಹತ್ತಿಸಿಕೊಂಡ ಸಿದ್ಧಲಿಂಗಯ್ಯ, ಸರಕಾರ ನಡೆಸುವವರ ಆಸ್ಥಾನ ಕವಿಯಾದರು. ಅಧಿಕಾರಸ್ಥರ ಒಡ್ಡೋಲಗದ
ರಾಜಾಶ್ರಯ ಅವರಿಗೆ ದೊರೆಯಿತು. ಮುಂದೆ ಕಾಲಕಾಲಕ್ಕೆ ಅಧಿಕಾರ ಪ್ರಾಪ್ತವಾಯಿತು. ದೇವನೂರ ಮಹಾದೇವ ಸಹೋದರನಿಗೆ ಅಧಿಕಾರ ಕೊಡಿಸಿ, ತಾವೂ ದೊಡ್ಡ ಹುzಗಳ ಕನಸು ಕಂಡರಾದರೂ ರಾಮಕೃಷ್ಣ ಹೆಗಡೆ ತಮ್ಮ ಕಾರ್ಯ ಸಾಧಿಸುತ್ತಲೇ ನೀಡಿದ ಭರವಸೆ ಮರೆತರು.

ಚಳವಳಿಯ ಅವಸಾನದ ಆರಂಭ: ರಾಮಕೃಷ್ಣ ಹೆಗಡೆ ಡಿಎಸ್ ಎಸ್ ಮೇಲೆ ಎಂಥ ನಿಯಂತ್ರಣ ಸಾಧಿಸಿದ್ದರೆಂದರೆ; ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಭಟನೆ, ಧರಣಿಗಳನ್ನು ರಾಜ್ಯ ಮಟ್ಟದ ನಾಯಕರೇ ಆದೇಶ ನೀಡಿ ನಿಲ್ಲಿಸುತ್ತಿದ್ದರು. ಆ ವೇಳೆ ವೇಮಗಲ್‌ನ ಪಕ್ಷೇತರ ಶಾಸಕರಾಗಿದ್ದ ಸಿ.ಬೈರೇಗೌಡ ಅವರ ಬಲಗೈ ಬಂಟನೊಬ್ಬ ಜಮೀನಿನ ಕೆಲಸಕ್ಕೆ ಬಂದಿದ್ದ ದಲಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯಿಂದ ಪ್ರತಿರೋಧ ವ್ಯಕ್ತವಾಗುತ್ತಲೇ ಡಬಲ್ ಬ್ಯಾರಲ್ ಗನ್‌ನಿಂದ ಸುಟ್ಟು ಕೊಂದ ಪ್ರಕರಣ ನಡೆಯಿತು. ಆ ಪ್ರಕರಣವನ್ನು ಆತ್ಮಹತ್ಯೆ ಪ್ರಕರಣವೆಂದು ಮುಚ್ಚಿಹಾಕಲಾಯಿತು.

‘ಪ್ರಜಾಮತ’ ಎಂಬ ಪತ್ರಿಕೆಯಲ್ಲಿ ಈ ಸಂಬಂಧ ತನಿಖಾ ವರದಿ ಪ್ರಕಟವಾಯಿತು. ದಲಿತ ಯುವಕರ ರಕ್ತ ಕುದಿಯಿತು. ಆದರೆ ಡಿಎಸ್‌ಎಸ್ ನಾಯಕರು ಹೋರಾಟವನ್ನು ಕೈಗೆತ್ತಿಕೊಳ್ಳಲು ಬಿಡಲಿಲ್ಲ. ಭೈರೇಗೌಡರಿಗಿದ್ದ ಹೆಗಡೆಯವರ ಕೃಪಾಕಟಾಕ್ಷವೇ ಇದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಧ್ವನಿಯೆತ್ತಿದ ಡಿಎಸ್‌ಎಸ್‌ನ ವಿದ್ಯಾರ್ಥಿ ನಾಯಕರನ್ನು ಸಂಘಟನೆಯಿಂದಲೇ ಹೊರ ಹಾಕುವ ಬೆದರಿಕೆ ಹಾಕಲಾಯಿತು.

ಮುಂದೆ ತಮಗೆ ಯಾವ ಅನುಕೂಲವಾಗಲಿಲ್ಲವೆಂಬ ಕಾರಣಕ್ಕೆ ಎರಡು ವರ್ಷದ ನಂತರ ಭೈರೇಗೌಡರ ವಿರುದ್ಧ ಇದೇ ನಾಯಕರು ದೊಡ್ಡ ಮೆರವಣಿಗೆಯೊಂದನ್ನು ನಡೆಸಿದರು. ಚಳವಳಿ ಅಡ್ಡ ಹಾದಿಗೆ ಹೊರಳಿದ ಸ್ಪಷ್ಟ ಲಕ್ಷಣಗಳು ಬಹಿರಂಗ ವಾದವು. ಮತ್ತೊಂದು ಕಡೆ ಶೇಷಗಿರಿಯಪ್ಪ ಪ್ರಕರಣದ ಅನಸೂಯಮ್ಮ ದಲಿತ ನಾಯಕರ ಮುಖವಾಡಗಳನ್ನು ಸಂಪೂರ್ಣ ಕಳಚಿದರು. ಯಾವನೋ ಒಬ್ಬ ಕಾಮುಕ ನನ್ನನ್ನು ಒಂದು ದಿನ ಅತ್ಯಾಚಾರ ಮಾಡಿದ. ಆದರೆ ನೀವು ತಂಗಿ.. ತಂಗಿ ಎನ್ನುತ್ತಾ ಹಗಲೆ ಓಡಾಡಿ ರಾತ್ರಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿರಿ ಎಂದು ಗೋಳಿಟ್ಟಿದ್ದು ಡಿಎಸ್‌ಎಸ್ ನಾಯಕರ ಕಚ್ಚೆ ಹರುಕತನ ವನ್ನು ಎತ್ತಿ ತೋರಿಸಿತು. ಸಂಘಟನೆಯಲ್ಲಿದ್ದವರ ನಂಬಿಕೆಗಳನ್ನು ಛಿದ್ರಗೊಳಿಸಿತು.

ಮುಂದೆ ಇದೇ ದಲಿತ ನಾಯಕರು ಪಾಪ ಪ್ರಾಯಶ್ಚಿತ್ತಕ್ಕಾಗಿ ನಂದಿ ಬೆಟ್ಟದಲ್ಲಿ ಸಭೆ ಸೇರಿ ಬಾಡೂಟದೊಂದಿಗೆ ಪಾನಮತ್ತರಾಗಿ ತಮ್ಮ ಚಪ್ಪಲಿಗಳಿಂದ ತಮಗೇ ಹೊಡೆದುಕೊಂಡು ಗೋಳಿಟ್ಟ ಸುದ್ದಿ ಎಡೆ ಹಬ್ಬಿತ್ತು. ಅತ್ತ ಅನಸೂಯಮ್ಮ ಬೆಂಗಳೂರಿನ ಕೆ.ಆರ್.ಪುರ ಮಾರುಕಟ್ಟೆ ಬಳಿ ಹೂವು ಮಾರುತ್ತ ಬದುಕುತ್ತಿದ್ದವಳು ಕೊನೆಗೊಂದು ದಿನ ತನ್ನ ಜೀವನದ ಮೇಲೆ ಜಿಗುಪ್ಸೆ ಹುಟ್ಟಿ ರೈಲಿಗೆ ತಲೆಕೊಟ್ಟು ಸತ್ತಳು.

ಡಿಎಸ್‌ಎಸ್ ನಾಯಕರ ಅಧಿಕಾರದ ದಾಹದಿಂದ ಸಂಘಟನೆ ಬಲಿಯಾದರೂ ಕೆಲವರು ಚಳವಳಿಗಳ ವಿಘಟನೆ ಸಹಜಕ್ರಿಯೆ ಎಂದು ಈಗಲೂ ಹಲುಬುತ್ತಾರೆ. ಮಾನ್ಯ ಸಿದ್ಧಲಿಂಗಯ್ಯನವರಂತೂ ಮನಬಂದಂತೆ ಮಿಥ್ಯ ನುಡಿಯುತ್ತಾರೆ. ಬಿ.ಬಸವಲಿಂಗಪ್ಪ ನವರು ‘ಬೂಸಾ ಸಾಹಿತ್ಯ’ ಹೇಳಿಕೆಯ ನಂತರ ತಮ್ಮನ್ನು ಖುದ್ದಾಗಿ ಕರೆದು, ನನ್ನ ಪರ ಮೆರವಣಿಗೆ – ಪ್ರತಿಭಟನೆ ಮಾಡಿ’ ಎಂದು ಕೇಳಿಕೊಂಡಿದ್ದರು. ಇದರಿಂದ ನಾವೆ ಒಂದಾಗಿ ಪ್ರತಿಭಟನೆಗೆ ಇಳಿದೆವು ಎಂದು ಹೇಳಿಕೊಂಡು ತಿರುಗುತ್ತಾರೆ. ಬಿ.ಬಸವಲಿಂಗಪ್ಪ ನವರ ಮೇರು ವ್ಯಕ್ತಿತ್ವ ಕಂಡವರಿಗೆ ಅವರ ಮಾತುಗಳು ಜೋಕ್ ಆಗಿ ಕಾಣಿಸುತ್ತವೆ.

ದಲಿತ ಸಂಘಟನೆಗಳು ಒಡೆದು ಚೂರು ಚೂರುಗಳಾಗಿ ನಾಯಕರ ಸ್ವಾರ್ಥ ಪರತೆಯಿಂದ ದಲಿತ ಹೋರಾಟವೇ ದಿಕ್ಕು
ತಪ್ಪಿರು ವುದು ನೋವು ತರಿಸುತ್ತದೆ. ದಲಿತರ ಹತ್ಯಾಕಾಂಡ, ಸಾಮೂಹಿಕ ಬಹಿಷ್ಕಾರ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಬಾಧೆ ತರಿಸುತ್ತವೆ.

ಹಳಿ ತಪ್ಪಿದ ಸ್ಥಿತಿ: ದಲಿತ ಹೋರಾಟ ಪ್ರಸ್ತುತ ದಿಕ್ಕು ತಪ್ಪಿದ ನೌಕೆಯಂತಾಗಿದೆ. ದಲಿತ ಸಂಘಟನೆಗಳ ಕೂಗು ಸರಕಾರದ ಕಿವಿಗೆ
ತಲುಪದಷ್ಟು ಕ್ಷೀಣವಾಗಿದೆ. ಕಂಬಾಲಪಲ್ಲಿ ಹತ್ಯಾಕಾಂಡದಂಥ ಪ್ರಕರಣ ನಡೆದಾಗ ದಲಿತ ನಾಯಕರೆನಿಸಿಕೊಂಡ ಮಲ್ಲಿಕಾ ರ್ಜುನ ಖರ್ಗೆ ಗೃಹ ಮಂತ್ರಿ ಸ್ಥಾನದಲ್ಲಿದ್ದರೂ ದಿಟ್ಟ ಕ್ರಮ ಕೈಗೊಳ್ಳದೆ ದಲಿತರ ಸ್ವಾಭಿಮಾನ, ಹಿತಾಸಕ್ತಿಯನ್ನು ಅಡವಿಟ್ಟು ಅಧಿಕಾರ ಅನುಭವಿಸುತ್ತಾರೆ.

ಮತ್ತೊಬ್ಬ ದಲಿತ ನಾಯಕ ಕೆ.ಎಚ್. ಮುನಿಯಪ್ಪ ಘಟನೆ ನಡೆದ ಸ್ಥಳಕ್ಕೆ ಹೋಗಿ ಸಂತ್ರಸ್ತರ ನೋವು ಆಲಿಸಿ ಸಾಂತ್ವನ
ಹೇಳದೆ ಚಿಂತಾಮಣಿ ಸರಕಾರಿ ಐಬಿಯಲ್ಲಿ ಬಿಸ್ಕೆಟ್‌ನೊಂದಿಗೆ ಚಹಾ ಹೀರಿ ವಾಪಸ್ ಬರುತ್ತಾರೆ. ಮೀಸಲು ಕ್ಷೇತ್ರಗಳಿಂದ ಆಯ್ಕೆ ಯಾದ ರಾಜಕೀಯ ನಾಯಕರ ಇಂತಹ ದಲಿತ ವಿರೋಧಿ ಮನೋಭಾವಕ್ಕೆ ದಲಿತ ಹೋರಾಟ ನಿರ್ವೀರ್ಯವಾಗಿರುವುದೇ ಕಾರಣ ಎಂಬುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ.